ಗಣೇಶ ಕಾಸರಗೋಡು ಅವರು ಮೊದಲು ಕೆಲಸ ಆರಂಭಿಸಿದ್ದು ಚಿತ್ರದೀಪ ಎನ್ನುವ ಪತ್ರಿಕೆಯಲ್ಲಿ, ಸಂಪಾದಕರಾಗಿದ್ದ ಆರ್.ನರಸಿಂಹ ಅವರು ಹೇಳಿಕೊಟ್ಟ ಮೂರೂ ಕಿವಿಮಾತನ್ನು ಈಗಲೂ ಗಣೇಶ ಅವರು ಪಾಲಿಸುತ್ತಾರಂತೆ. ಅವು ಯಾವವು ಮುಂದೆ ಓದಿ…
ನಾನು ಬೆಂಗಳೂರಿಗೆ ಬಂದು ಉದ್ಯೋಗ ಆರಂಭಿಸಿದ ಮೊಟ್ಟ ಮೊದಲ ಸಿನಿಮಾ ಪತ್ರಿಕೆ : #ಚಿತ್ರದೀಪ. ಆಗ ಸಂಪಾದಕರಾಗಿದ್ದ ಆರ್.ನರಸಿಂಹ ಹೇಳಿದ ಮೂರು ಪಾಯಿಂಟ್’ಗಳ ಕಿವಿಮಾತೆಂದರೆ :
- ನಿಮ್ಮ ಬರವಣಿಗೆ ಸರಳವಾಗಿರಲಿ.
- ನಿಮ್ಮ ಶಂಖವನ್ನು ನೀವೇ ಊದಿಕೊಳ್ಳಬೇಕು.
- ನೀವು ಸತ್ಯವಂತರಾಗಿದ್ದರೆ ಯಾವ ಅಂಜಿಕೆಯೂ ಬೇಡ…

ನನ್ನ ನೆತ್ತಿಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ ಹೇಳುತ್ತಿದ್ದೇನೆ – 40 ವರ್ಷಗಳ ಹಿಂದೆ ಆರ್.ನರಸಿಂಹ ಎಂಬ ಹೆಸರಿನ ನನ್ನ ಗುರು ಹೇಳಿದ ಈ ಕಿವಿಮಾತನ್ನು ನಾನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿದ್ದೇನೆ. ನಿಮಗೆ ಚೋದ್ಯವೆನಿಸಬಹುದು ಆದರೆ ಇದು ನಿಜ! ಈ ಮೂರು ಕಿವಿಮಾತುಗಳ ವಿವರಣೆಯನ್ನು ನಾನು ಹೀಗೆ ಕೊಡುತ್ತಿದ್ದೇನೆ :
- ಆಗಷ್ಟೇ ನಾನು ಎಂ. ಎ.ಮುಗಿಸಿ ಬಂದಿದ್ದೆ. ಸ್ನಾತಕೋತ್ತರ ಪದವೀಧರ ಎನ್ನುವ ಹಮ್ಮು – ಬಿಮ್ಮು ನನ್ನೊಳಗಿತ್ತೇನೋ. ಗೋಪಾಲಕೃಷ್ಣ ಅಡಿಗರು ಮತ್ತು ಕೆ.ವಿ. ತಿರುಮಲೇಶ್ವರಂಥವರ ಬರಹ ನನ್ನ ಮೇಲೆ ಗಾಢ ಪರಿಣಾಮ ಬೀರಿದ್ದರಿಂದಲೋ ಏನೋ ನನ್ನ ಬರವಣಿಗೆ ಕ್ಲಿಷ್ಟಕರವಾದ ಪದಪುಂಜಗಳಿಂದ ತುಂಬಿರುತ್ತಿತ್ತು. ‘ಈ ಶೈಲಿಯಲ್ಲಿ ಬರೆದರೆ ಓದಲು ಅವರೇ ಬರಬೇಕು. ನೀವು ಬರೆಯಬೇಕಾಗಿರುವುದು ಸಾಮಾನ್ಯನಾದ ಸಿನಿಮಾ ಓದುಗನಿಗೆ. ಅವನಿಗೆ ನಿಮ್ಮ ಪದಾಡಂಬರ ಬೇಕಾಗಿಲ್ಲ. ಸರಳವಾಗಿ ಬರೆಯಿರಿ. ಓದುಗ ಮಹಾಪ್ರಭು ನಿಮ್ಮ ಆಳವಾದ ಜ್ಞಾನವನ್ನು ಬಯಸುವುದಿಲ್ಲ. ನೀವು ಹೇಳಿದ್ದು ಅವರಿಗೆ ಅರ್ಥವಾದರೆ ಸಾಕು, ಅಷ್ಟು ಮಾಡಿ…’

- ‘ನಿಮ್ಮ ಶಂಖವನ್ನು ಇನ್ನೊಬ್ಬರು ಊದಲು ಬರುವುದಿಲ್ಲ. ಅರ್ಥಾತ್, ನಿಮ್ಮ ಒಳ್ಳೆಯ ಕೆಲಸಗಳನ್ನು ಹೊಗಳಲು ಮತ್ತೊಬ್ಬರು ಬರುವುದಿಲ್ಲ. ನೀವು ಎಷ್ಟೇ ಒಳ್ಳೆಯವರಾಗಿದ್ದರೂ ಇನ್ನೊಬ್ಬರು ನಿಮ್ಮ ಒಳ್ಳೆಯತನವನ್ನು ಗುರುತಿಸಿ ನಾಲ್ಕು ಸಾಲು ಬರೆಯುವುದಿಲ್ಲ. ಹೀಗಾಗಿ ಯಾವ ಮುಜುಗರವೂ ಇಲ್ಲದೇ ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಿ. ಇನ್’ಫ್ಯಾಕ್ಟ್ ನಿಮಗೆ ಸಂದಾಯವಾದ ಪ್ರಶಸ್ತಿಯ ವಿವರವನ್ನು ಮತ್ತು ಫೋಟೋವನ್ನು ಮತ್ತೊಂದು ಪತ್ರಿಕೆ ಪ್ರಕಟಿಸುವುದಿಲ್ಲ! (ಆ ಕಾಲದಲ್ಲಿ ಹಾಗಿತ್ತು) ಆದ್ದರಿಂದ ಅವನ್ನು ನಿಮ್ಮ ನಿಮ್ಮ ಪತ್ರಿಕೆಗಳಲ್ಲೇ ಪ್ರಕಟಿಸಿ ಸುದ್ದಿ ಮಾಡಿ…’ – ಇದು ಎರಡನೇ ಕಿವಿಮಾತು…

- ‘ನೀವು ಸತ್ಯವಂತರು, ಮತ್ತು ನೀವು ಬರೆಯುವುದೆಲ್ಲವೂ ಸತ್ಯದ್ದೇ ಎನ್ನುವ ನಂಬಿಕೆ ನಿಮಗಿದ್ದರೆ ಯಾವ ಅಂಜಿಕೆಯು ಬೇಡ ಬರೆಯುತ್ತಾ ಹೋಗಿ, ನಿಮ್ಮನ್ನು ಯಾರೂ ಟಚ್ ಮಾಡಲು ಸಾಧ್ಯವಿಲ್ಲ. ಸುಳ್ಳು ಬರೆದಿರಿ ಎಂದಿಟ್ಟುಕೊಳ್ಳಿ, ನಿಮ್ಮನ್ನು ರಕ್ಷಿಸಲು ಯಾವ ದೇವರೂ ಬರುವುದಿಲ್ಲ. ನಿಮ್ಮ ಪೆನ್ನು ನಿಮ್ಮ ಆಯುಧ. ಅದಕ್ಕೆ ತುಕ್ಕು ಹಿಡಿಯಲು ಬಿಡಬೇಡಿ…’ – ಆರ್. ನರಸಿಂಹ ಅವರ ಮೂರನೇ ಕಿವಿಮಾತು…

ಗಣೇಶ ಕಾಸರಗೋಡು ಹಳೆಯ ಚಿತ್ರ
ಈಗ ಹೇಳಿ, ಈಗಲೂ ನಾನು ಈ ಮೂರೂ ಕಿವಿಮಾತುಗಳನ್ನು ಪರಿಪಾಲಿಸಿಕೊಂಡು ಬರುತ್ತಿದ್ದೇನಾ?
- ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
