‘ನೆನಪಿನ ಡಬ್ಬಿ’ ಪುಸ್ತಕ ವಿಮರ್ಶೆ – ಎನ್.ಆರ್.ವೇಣುಗೋಪಾಲ್



ಸಭ್ಯ ಪರಂಪರೆ ಮರೆಯಾಗಬಾರದೆಂಬ ಸಂದೇಶ ಸಾರುವ ಅಪ್ಪ ಮಗನ ಬಾಂಧವ್ಯದ ಕೃತಿಯೇ ನೆನಪಿನ ಡಬ್ಬಿ. ಈ ಪುಸ್ತಕದ ಕುರಿತು ಎನ್.ಆರ್.ವೇಣುಗೋಪಾಲ್ ಅವರು ಬರೆದಿರುವ ಪುಸ್ತಕ ವಿಮರ್ಶೆ, ಮುಂದೆ ಓದಿ …

ತೇಜಸ್ವಿಯವರ ‘ಅಣ್ಣನ ನೆನಪ’ನ್ನು ನೆನಪಿಸಿದ ‘ನೆನಪಿನ ಡಬ್ಬಿ’ ಪ್ರಿಯ ಮಿತ್ರ ಮಹೇಶ ಅರಬಳ್ಳಿಯವರ ‘ನೆನಪಿನ ಡಬ್ಬಿ’ ಅವರ ಚೊಚ್ಚಲ ಕೊಡುಗೆ. ‘ನೆನಪಿನ ಡಬ್ಬಿ’ ಬಿಡುಗಡೆಯ ಕುರಿತಾದ ಜಾಲತಾಣಗಳಲ್ಲಿನ ಜಾಹೀರಾತು ನೋಡಿದಾಗ ಶೀರ್ಷಿಕೆ ಗಮನ ಸೆಳೆಯಿತು. ಮಹೇಶರವರು ಬಿಡುಗಡೆ ಸಮಾರಂಭಕ್ಕೆ ಆಹ್ವಾನವಿತ್ತಾಗ ಬರುವ ಪ್ರಯತ್ನ ಮಾಡುತ್ತೇನೆಂದು ಹೇಳಿದೆನಾದರೂ ಹಾಜರಾಗಲಾಗಲಿಲ್ಲ. ಬಿಡುಗಡೆ ಆದ ಮೇಲೆ ಕೃತಿಯ ಕುರಿತಾದ ಗವಿಸ್ವಾಮಿಯವರ ವಿಮರ್ಶೆ ಓದಿದಾಗ ಮಹೇಶರವರಿಗೆ ಸಂದೇಶ ಕೊಡುತ್ತ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಾಗದ್ದಕ್ಕೆ ಕ್ಷಮೆ ಇರಲಿ. ಮಿತ್ರ ಡಾ. ಗವಿಸ್ವಾಮಿಯವರ ‘ನೆನಪಿನ ಡಬ್ಬಿ’ ಕೃತಿಯ ಅಭಿಪ್ರಾಯ ಓದಿದೆ. ಒಂದೇ ಬೀಸಿನಲ್ಲಿ ಓದಿ ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದರೆ ಪ್ರತಿ ಕಳಿಸಿ ಕೊಡಿ ಎಂದಾಗ ವಿಳಾಸ ಪಡೆದು ಕೂಡಲೇ ಕೃತಿಯನ್ನು ಅಂಚೆ ಮೂಲಕ ಮಹೇಶ ತಲುಪಿಸಿದರು.

(ನೆನಪಿನ ಡಬ್ಬಿ ಮುಖಪುಟ)

ಕೃತಿಯನ್ನು ತೆರೆದು ಕೈಯಿಂದ ಕೃತಿಯ ಮೈದಡವಿ ಅದರ ಅಂದವನ್ನು ಕಣ್ತುಂಬಿಕೊಂಡೆ. ಮುದ್ದಾದ ಮಗ ಅಪ್ಪನನ್ನು ವಾತ್ಸಲ್ಯದಿಂದ ಅಪ್ಪಿಕೊಂಡಿರುವ ಪುಸ್ತಕದ ಹೊದಿಕೆಯ ಚಿತ್ರ ತಂದೆ ಮಕ್ಕಳ ವಾತ್ಸಲ್ಯದ ಅರ್ಥಪೂರ್ಣ ಅಳವಡಿಕೆ.

ಕೃತಿಯನ್ನು ಆ ದಿನ ಓದಲಾಗಲಿಲ್ಲ. ಮರುದಿನ ಓದಲು ಕೈಗೆತ್ತಿಕೊಂಡು ಓದಲು ಶುರು ಮಾಡಿದೆ. ಮಹೇಶರವರ ನೆನಪಿನ ಡಬ್ಬಿಯಲ್ಲಿ ಅಪ್ಪನ ಕುರಿತಾದ ಅಮೂಲ್ಯ ಸಂಗತಿಗಳನ್ನು ನೋಡಿ ಕುತೂಹಲ ಕೆರಳುತ್ತಾ ಓದಿಸಿಕೊಂಡು ಓಡುತ್ತಿತ್ತು. ಕರ್ತವ್ಯದ ಅವಸರಕ್ಕೆ ಅರ್ಧಗಂಟೆಯಲ್ಲಿ ೪೦ ಪುಟಗಳಷ್ಟು ಓದಲಾಯಿತು. ಕೆಳ ಮಧ್ಯಮ ವರ್ಗದ ಜನರ ಆಶಯ, ಅಭಿಲಾಷೆ, ಜೀವನ ವಿಧಾನ, ನಡೆಯ ಆದರ್ಶಗಳನ್ನು ಅಪ್ಪನ ಜೀವನಯಾನದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಮಹೇಶ ಅರಬಳ್ಳಿ.

‘ನೆನಪಿನ ಡಬ್ಬಿ’ ಕೃತಿ ಲೇಖಕ ಮಹೇಶ ಅರಬಳ್ಳಿ

ಮಗಳ ಅಭಿನಯಕ್ಕೆ ಉಡುಗೊರೆಯಾಗಿ ಅಪ್ಪ ರಹಸ್ಯವಾಗಿ ಚಂಪಕಾಲಿ ಕೊಡಿಸಿದ್ದು ಅದನ್ನು ಅಷ್ಟೇ ಜತನದಿಂದ ಕಾಯ್ದಿರಿಸ್ಕೊಂಡ ರೋಹಿಣಿಯ ಪ್ರಾಮಾಣಿಕತೆ ಮಧ್ಯಮ ವರ್ಗದವರ ಬದುಕಿನ ಬಿಕ್ಕಟ್ಟನ್ನು ಕಟ್ಟಿಕೊಡುತ್ತದೆ ಚಂಪಾಕಲಿಯ ರಹಸ್ಯ.

ನೆನಪಿನ ಡಬ್ಬಿಯನ್ನು ಓದುತ್ತಾ ಹೋದಂತೆ ಲೇಖಕರು ಕಟ್ಟಿಕೊಡುವ ಚಿತ್ರಣ ಆಪ್ಯಾಯಮಾನವಾಗಿದೆ. ಆ ಘಟನೆಗಳಲ್ಲಿ ನಾವೂ ಯಾವುದೋ ಒಂದು ಸನ್ನಿವೇಶದಲ್ಲೋ, ಘಟನೆಯಲ್ಲೋ, ಪಾತ್ರದಲ್ಲೋ ನಾವೂ ಒಬ್ಬರಾಗಿಬಿಡುತ್ತೇವೆ. ಮಹೇಶ ಅರಬಳ್ಳಿಯವರ ನಿರೂಪಣಾ ರೀತಿಯೇ ಹಾಗಿದೆ. ಸಾರ್ವಕಾಲಿಕ ಸತ್ಯಗಳ, ಮೌಲ್ಯಗಳ ಕಡೆಗೆ ಅಪ್ಪನ ತುಡಿತ ಇರುವುದನ್ನು ಗ್ರಹಿಸಿದ್ದಾರೆ, ದಾಖಲಿಸಿದ್ದಾರೆ. ಹಾಗಾಗಿ ಕೃತಿ ಓದುಗರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

ಲೇಖಕರು ಅಪ್ಪನ ಆಸಕ್ತಿಯ ಕ್ಷೇತ್ರಗಳನ್ನು ನೆನಪಿಸಿಕೊಂಡು ಡಬ್ಬಿಯಲ್ಲಿ ಶೇಖರಿಸಿದ್ದಾರೆ. ಓದುತ್ತಿದ್ದ ಪುಸ್ತಕಗಳು, ಸೇರುತ್ತಿದ್ದ ಜನ, ನೋಡುತ್ತಿದ್ದ ಸಿನಿಮಾಗಳು ಹಾಗೂ ಚಲಿಸುತ್ತಿದ್ದ ಮಾರ್ಗಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಲೇಖಕರು ಅಲ್ಲಲ್ಲಿ ಕವಿಯಾಗುವ ಪ್ರಯತ್ನವನ್ನೂ, ಭಾಷಾಂತರಕಾರನ ಕೆಲಸವನ್ನೂ ತಕ್ಕ ಮಟ್ಟಿಗೆ ಮಾಡಿದ್ದಾರೆ.

ಹಿಟ್ಟಿನ ಗಿರಣಿಯ ನೆನಪಿನಲ್ಲಿ ಲೇಖಕರು ಜೀವನಕ್ಕೆ ಅರ್ಥ ಕಂಡುಕೊಂಡ ಬಗೆ ಮೆಚ್ಚುವಂಥಾದ್ದು. ರೂಫ್ ಹ್ಯಾಂಗರ್ ಅಂಕಣದಲ್ಲಿ ಲೇಖಕರು ಒಂದು ವಿಷಯವನ್ನು ಸೂಕ್ತ ಪ್ರಸ್ತಾವನೆಯೊಂದಿಗೆ ಹೇಗೆ ಆರಂಭಿಸಿ ಮುಕ್ತಾಯಗೊಳಿಸಬೇಕೆಂಬ ನಿರೂಪಣಾ ಶೈಲಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅದೃಷ್ಟವಶದಿಂದ ಮಹಾ ದುರಂತದಿಂದ ಪಾರಾದ ಸನ್ನಿವೇಶದಲ್ಲಿ ಇಂಗ್ಲಿಷ್ ಸಿನಿಮಾದ ‘ಕ್ಲಿಫ್ ಹ್ಯಾಂಗರ್’ ನೆನಪಿಸಿಕೊಂಡು ಕಣ್ತುಂಬಿಕೊಳ್ಳುತ್ತಾರೆ.

ಮನೆ ಮಂದಿಯೆಲ್ಲ ಕುಳಿತು ಜಾಗರಣೆ ಮಾಡುತ್ತಾ ಜೀವನದ ಅಂದವನ್ನು ಅನುಭವಿಸಿದ ಸನ್ನಿವೇಶವನ್ನು ಅಲ್ಲಿ ಅವರ ಅಪ್ಪನ ಪಾತ್ರವನ್ನು, ಇಸ್ಪೀಟಲ್ಲಿ ಅಪ್ಪ ತೋರುತ್ತಿದ್ದ ಜಾಣ್ಮೆಯನ್ನು ಸರಳ ಮಾತುಗಳಲ್ಲಿ ಕಟ್ಟಿಕೊಟ್ಟಿದ್ದಾರೆ.



ಲೇಖಕರ ತಂದೆ ಮಕ್ಕಳು ಮೊಮ್ಮಕ್ಕಳೊಂದಿಗೆ ಮಿಳಿತವಾಗಿ, ಆನಂದಿಸುತ್ತಿದ್ದ ಸಣ್ಣ ಸಣ್ಣ ಸಂಗತಿಗಳು ಎಷ್ಟು ಆನಂದ ನೀಡುತ್ತಿದ್ದವು ಎಂಬುದನ್ನು ಮೊಮ್ಮಕ್ಕಳೊಂದಿಗೆ ಹಾಸ್ಯ ಮಾಡುತ್ತಾ ಆನಂದಿಸುತ್ತಿದ್ದುದನ್ನು ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಸೇರಿದಾಗ ಮೊಗೆದು ಕುಡಿಯುತ್ತಿದ್ದ ಆನಂದದ ಸೊಬಗನ್ನು ಚೆನ್ನಾಗಿ ಚಿತ್ರಿಸಿದ್ದಾರೆ.

ಲೇಖಕ ಮಹೇಶರವರು ಅಪ್ಪನ ಸರಳತೆ, ನೈಜತೆಗಾಗಿ ಹಂಬಲಿಸುವ ರೀತಿಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಕೊನೆಯ ಭಾಗದ ಅಂಕಣಗಳಲ್ಲಿ ಚಿಂತನ, ಮಂಥನ ನಡೆದಿದೆ. ಕೆಲವು ಸಾರ್ವಕಾಲಿಕ ಸತ್ಯಗಳನ್ನು ಅಪ್ಪ ಹೇಗೆ ಅಪ್ಪಿಕೊಂಡಿದ್ದರು. ಮಕ್ಕಳು, ಮಡದಿ, ಮೊಮ್ಮಕ್ಕಳ ಬಾಂಧವ್ಯಗಳನ್ನು ಕಣ್ಣಿಗೆ ಕಟ್ಟುವಂತೆ ನೆನಪಿಸಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ‘ಅಣ್ಣನ ನೆನಪಿನ’ ರೂಪದ ಮತ್ತೊಂದು ಕೃತಿ ನೀಡಿ ಸಭ್ಯ ಪರಂಪರೆ ಮರೆಯಾಗಬಾರದೆಂಬ ಸಂದೇಶ ನೀಡಿದ್ದಾರೆ ಶ್ರೀ ಮಹೇಶ ಅರಬಳ್ಳಿಯವರು.


  • ಎನ್.ಆರ್.ವೇಣುಗೋಪಾಲ್ (ಮಂಡ್ಯ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳು, ವಿಮರ್ಶಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW