‘ಚೌಚೌ ಬಾತ್’ ಅಂಕಣ (ಭಾಗ – ೪೯)

ರಂಗಾಚಾರಿಗೆ ಗೊತ್ತಿದ್ದುದು ಕೇವಲ ದಾಸಪ್ಪನ ವೃತ್ತಿ ಅಷ್ಟೇ ಅಲ್ಲ. ಆತ ಬಹುಮುಖ ಪ್ರತಿಭೆವುಳ್ಳವನಾಗಿದ್ದ. ಊಟವಾದ ನಂತರ ಮನೆಯ ಮುಂದಿನ ಹಜಾರದಲ್ಲಿ ಎಲ್ಲರೂ ಕುಳಿತು ಮಾತನಾಡುತ್ತಿರುವಾಗ ರಂಗಚಾರಿ ಜಾನಪದ ಗೀತೆಗಳನ್ನು ಹೇಳಲು ಶುರು ಮಾಡುತ್ತಿದ್ದ..ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ರಂಗಾಚಾರಿಯ ನೆನಪು’. ತಪ್ಪದೆ ಮುಂದೆ ಓದಿ…

ಅಪ್ಪನಿಗೆ ದುಡ್ಡಿನಾಟ ಆಡುವುದು ಒಂದು ಮೋಜಿನ ಚಟವಾಗಿತ್ತು. ಯುಗಾದಿ ಹಬ್ಬದ ದಿನ ಸ್ವಂತ ಊರಿಗೆ ಬಂದು ದುಡ್ಡಿನ ಆಟ ಆಡಿ ತನ್ನ ಬಂಧು ಬಾಂಧವರನ್ನೆಲ್ಲ ನೋಡಿ ಮಾತನಾಡಿಸಿ ಅವರಿಗೆ ಅಷ್ಟೋ ಇಷ್ಟೋ ಹಣ ಕೊಟ್ಟು ಹೋದರೇನೇ ಸಮಾಧಾನ. ಇವರೊಬ್ಬರೇ ಅಲ್ಲ ಊರಿನ ಹಿರಿಯರು, ಮುಖಂಡರು ಎಲ್ಲರೂ ಆಟದ ಮೋಡಿಗೆ ಒಳಗಾಗಿದ್ದರು. ದುಡ್ಡಿನಾಟದಲ್ಲಿ ಗೆಲುವು ಯಾವಾಗಲೂ ಅಪ್ಪನಿಗೇ ಹೆಚ್ಚಾಗಿ ಒಲಿಯುತ್ತಿತ್ತು. ಚಿಕ್ಕ ಮಕ್ಕಳಾದ ನಾವು ಆಟ ಹೇಗಿರಬಹುದು ಎಂಬುದನ್ನು ದೂರದಿಂದಲೇ ನಿಂತು ನೋಡುತ್ತಿದ್ದೆವು. ಒಂದು ಮಡಿಕೆ ಚೂರಿನಲ್ಲಿ (ಬೋಕಿ) ಎರಡು ನಾಣ್ಯಗಳನ್ನು ಇಟ್ಟು ಮೇಲಕ್ಕೆ ಚಿಮ್ಮುತ್ತಿದ್ದರು. ಚಿಮ್ಮಿದ ನಾಣ್ಯ ಮೇಲಕ್ಕೆ ಹೋಗಿ ಕೆಳಕ್ಕೆ ಬೀಳುವಷ್ಟರಲ್ಲಿ ಹೆಡ್ ಅಥವಾ ಟೈಲ್ ಹೇಳಬೇಕು. ಪ್ರತಿಸ್ಪರ್ಧಿ ಹೇಳಿದಂತೆ ಎರಡು ನಾಣ್ಯಗಳು ಹೆಡ್ ಬಿದ್ದರೆ ಅವನು ಗೆದ್ದಂತೆ. ಸ್ಪರ್ಧೆಗೆ ಎಷ್ಟು ಹಣ ನಿಗದಿ ಮಾಡಿರುತ್ತಾರೋ ಅಷ್ಟು ದುಡ್ಡನ್ನು ಪಕ್ಕದಲ್ಲಿ ಇಟ್ಟಿರುತ್ತಿದ್ದರು. ಈ ರೀತಿ ದುಡ್ಡಿನ ಆಟ ಆಡುತ್ತಿದ್ದರು. ಕೆಲವೊಮ್ಮೆ ಸೋತವರು ಬೇಸರದಿಂದ ಎದ್ದು ಹೋಗಿ ಹೆಂಡ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ಇನ್ನೂ ಕೆಲವರು ಆಟದಲ್ಲಿ ಗೆದ್ದ ಖುಷಿಗಾಗಿ ಕುಡಿಯುತ್ತಿದ್ದರು. ಆದರೆ ನಮ್ಮ ಅಪ್ಪ ಯಾವತ್ತೂ ಕುಡಿಯುತ್ತಿರಲಿಲ್ಲ. ನನಗೆ ನೆನಪಿರುವಂತೆ ಅಪ್ಪ ಕುಡಿದು ಬಂದು ಯಾವತ್ತೂ ಗಲಾಟೆ ಮಾಡಿದವರಲ್ಲ.

ಹೀಗೇ ಒಮ್ಮೆ ಅಪ್ಪ ಹಳ್ಳಿಯಲ್ಲಿ ದುಡ್ಡಿನಾಟದಲ್ಲಿ ಗೆದ್ದು ಬಂದು ಮನೆಯಲ್ಲಿ ಇರುವವರಿಗೆಲ್ಲ ಹಣ ಹಂಚುತ್ತಿದ್ದರು. ಮನೆ ಮಕ್ಕಳಿಗಷ್ಟೇ ಅಲ್ಲದೆ ಸುತ್ತಮುತ್ತಲಿನ ಮನೆಯವರಿಗೂ ಐದು ಪೈಸೆ 10 ಪೈಸೆ ಕೆಲವೊಮ್ಮೆ ನಾಲ್ಕಾಣೆ ಎಂಟು ಆಣೆ ಹೀಗೆ ಕೈಗೆ ಸಿಕ್ಕಷ್ಟು ದುಡ್ಡು ಜೇಬಿನಲ್ಲಿ ಖಾಲಿಯಾಗುವವರೆಗೂ ಹಂಚುತ್ತಿದ್ದರು. ಆಗಿನ ಕಾಲದಲ್ಲಿ 10 ಪೈಸೆ ಎಂದರೆ ನಮಗದು ಬಾರಿ ಹಣ. ಹತ್ತು ಪೈಸೆಗೆ ಒಂದು ಐಸ್ ಕ್ಯಾಂಡಿ ಬರುತ್ತಿತ್ತು.

ಇದೇ ಸಮಯಕ್ಕೆ ಸರಿಯಾಗಿ ಅಲ್ಲಿಗೆ ರಂಗಚಾರಿ ಬಂದ. ಬಂದವನು “ಏನ್ ನಂಜುಂಡಣ್ಣ ಚಂದಕ್ಕಿದಿಯ” ಎಂದ. ಹು ಕಣೋ ರಂಗಾಚಾರಿ ನೀನೆಂಗಿದೀಯ, ಏನ್ ಕೆಲ್ಸ ಮಾಡ್ತಿದೀಯ ” ಎಂದು ಅಪ್ಪ ಕೇಳಿದರು. ಏನೂ ಇಲ್ಲಣ್ಣೋ ಅಪ್ಪ ಅಮ್ಮ ಇಬ್ರೂ ಹೋಗ್ಬಿಟ್ರು, ನಾನೊಬ್ನೇ ಈಗ, ಅಪ್ಪನ ಕೆಲಸಾನೇ ಮುಂದುವರೆಸಿದೀನಿ, ಊರೂರು ತಿರುಗಿ ದಾಸಪ್ಪನ ಕೆಲಸ ಮಾಡ್ತಾ ಇದೀನಿ ” ಅಂದ.

ಮಧುಗಿರಿ ಕಡೆ ಬಂದ್ರೆ ಅಲ್ಲೇ ಮುಂದಕ್ಕೆ ಹೊಸಕೆರೆ ಕಡೆ ಬಾರ ರಂಗಚಾರಿ ಎಂದು ಅಪ್ಪ ಕರೆದಾಗ ಆಗಲಿ ಎಂಬಂತೆ ರಂಗಚಾರಿ ತಲೆ ಆಡಿಸಿದ್ದ. ಅವನ ಕೈಗೆ ಒಂದೆರಡು ರೂಪಾಯಿಯ ನೋಟುಗಳನ್ನು ಕೊಟ್ಟು ಅಪ್ಪ ಹೊರಟಿದ್ದ. ರಂಗಚಾರಿ ಮುಂದಿನ ವಾರವೇ ನಮ್ಮ ಹೊಸಕೆರೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ. ಒಂದು ಬಟ್ಟೆ ಗಂಟು, ಶಂಖ, ಜಾಗಟೆ, ಕಬ್ಬಿಣದ ದೀಪ ಸ್ತಂಭ, ಭವನಾಸಿ, ಇವಿಷ್ಟೇ ಅವನ ಲಗೇಜ್, ಹಣೆಯಲ್ಲಿ ಉದ್ದದ ನಾಮ ಧರಿಸಿ ಮೇಲೊಂದು ಹಳೇ ಕೋಟು ಹಾಕಿಕೊಂಡು ಉಬ್ಬು ಹಲ್ಲಿನ ರಂಗಾಚಾರಿ ವೈಯಾರದಿಂದ ಬಂದಿದ್ದ. ಊರಿಗೆ ಹೊಸಬರಾದ್ದರಿಂದ ಅವನನ್ನು ನಾಯಿಗಳು ಬೆನ್ನಟ್ಟಿ ಬಂದಿದ್ದವು. ನಾಯಿಗಳ ಕೂಗಾಟ, ಬೊಗಳುವ ಶಬ್ದ ಕೇಳಿ ನಾವೆಲ್ಲರೂ ಈಚೆಗೆ ಬಂದು ನೋಡಿದೆವು. ರಂಗಾಚಾರಿಯನ್ನು ಕಂಡು ಅಪ್ಪ ನಾಯಿಗಳನ್ನು ಓಡಿಸಿ ಬಂದರು. ಮನೆ ಮುಂದಿನ ವರಾಂಡದ ಮೂಲೆಯೊಂದರಲ್ಲಿ ರಂಗಚಾರಿಗೆ ಜಾಗ ಮಾಡಿಕೊಟ್ಟರು. ನಾವೆಲ್ಲ ಮಕ್ಕಳು ಕುತೂಹಲದಿಂದ ಅವನನ್ನೇ ನೋಡುತ್ತಿದ್ದೆವು. ಅಜ್ಜಿ ಊರಿನಲ್ಲಿ ಆತನನ್ನು ನೋಡಿದ್ದೆವಾದರೂ ಅಷ್ಟೊಂದು ಪರಿಚಯ ಇರಲಿಲ್ಲ.

ಬೆಳಿಗ್ಗೆ ಆರು ಗಂಟೆಗೆ ಎದ್ದು ಕೈ ಕಾಲು ಮುಖ ತೊಳೆದುಕೊಂಡು ನಾಮ, ಕೋಟು ಧರಿಸಿ ಕಚ್ಚೆ ಪಂಚೆ ಹಾಕಿಕೊಂಡು ಜಾಗಟೆ, ಶಂಖ, ಭವನಾಸಿಯೊಂದಿಗೆ ತೆರಳುತ್ತಿದ್ದ. ಕೆಲವರು ಐದು ಪೈಸೆಯನ್ನು ಹತ್ತು ಪೈಸೆಯನ್ನು ಹಾಕುತ್ತಿದ್ದರು. ರಾಗಿ ಹಿಟ್ಟನ್ನೆಲ್ಲಾ ಭವನಾಸಿಯಲ್ಲಿ ಶೇಖರಿಸಿ ಇಟ್ಟುಕೊಂಡು ಮನೆಗೆ ಬಂದು ಒಂದು ದೊಡ್ಡ ಚೀಲಕ್ಕೆ ತುಂಬಿಸುತ್ತಿದ್ದ. ಸುಮಾರು ಹತ್ತು ಹನ್ನೆರಡು ಮನೆಗಳನ್ನು ಸುತ್ತಿ ಸುಸ್ತಾಗಿ ಬಂದು ಬಿಡುತ್ತಿದ್ದ. ಹಾಗೆ ಸುತ್ತಾಡಿ ಬಂದಾಗ ಅಮ್ಮ ಊಟ ಬಡಿಸುತ್ತಿದ್ದಳು. ರಂಗಾಚಾರಿ ಊರಿಂದ ತನ್ನದೇ ಆದ ತಟ್ಟೆ ಲೋಟವನ್ನು ತಂದಿದ್ದ. ಪ್ರತಿದಿನ ಬೆಳಿಗ್ಗೆ ರಾತ್ರಿ ಊಟ ನಮ್ಮ ಮನೆಯಲ್ಲಿ ನಡೆಯುತ್ತಿತ್ತು. ನಾವೆಲ್ಲ ಮಕ್ಕಳು ಇವನ್ಯಾರು ಭಿಕ್ಷುಕ ನಮ್ಮ ಮನೆಗೆ ಬಂದಿದ್ದಾನೆ, ಎಂದು ಬೇಜಾರು ಮಾಡಿಕೊಳ್ಳುತ್ತಿದ್ದೆವು.

ಇಂಥವರಿಗೆಲ್ಲ ಯಾಕಾದರೂ ಜಾಗ ಕೊಡುತ್ತಾರೋ ಎಂದು ಅಪ್ಪನನ್ನು ಬೈದುಕೊಳ್ಳುತ್ತಿದ್ದೆವು. ಅಮ್ಮನಿಗೆ ಹೇಳಿದರೆ ಪಾಪ ಹೋಗಲಿ ಬಿಡ್ರಿ ಒಂದೆರಡು ದಿನ ಇದ್ದು ಹೋಗುತ್ತಾನೆ. ಅವನ ಹೊಟ್ಟೆ ಪಾಡು ಅವನದ್ದು ಅವನೇನು ನಿಮಗೆ ತೊಂದರೆ ಕೊಡುತ್ತಿದ್ದಾನೆ. ಆಚೆ ವರಾಂಡದ ಮೂಲೆಯಲ್ಲಿ ಇರುತ್ತಾನೆ ಎಂದಳು. ಅವನು ನಮ್ಮ ಮನೆಯ ವರಾಂಡದಲ್ಲಿ ಇದ್ದುದಕ್ಕೆ ನಮಗೇನು ಬೇಸರವಿರಲಿಲ್ಲ. ಆದರೆ ಆತ ದಾಸಪ್ಪ, ಭಿಕ್ಷುಕ ಆಗಿದ್ದ. ನಮ್ಮ ಸಹಪಾಠಿಗಳೆಲ್ಲರೂ ಯಾರೋ ಭಿಕ್ಷುಕ ನಿಮ್ಮ ಮನೆಯಲ್ಲಿದ್ದಾನೆ, ಅವನು ನಿಮ್ಮ ನೆಂಟರವನ ಎಂದು ಕೇಳುತ್ತಿದ್ದರು. ನಮಗಂತೂ ಏನು ಹೇಳಬೇಕೆಂದು ತೋಚುತ್ತಿರಲಿಲ್ಲ. ಸಿಕ್ಕಸಿಕ್ಕವರಿಗೆಲ್ಲ ಆಶ್ರಯ ಕೊಟ್ಟು ಅಪ್ಪ ನಮ್ಮನ್ನು ಮುಜುಗರಕ್ಕೆ ಈಡು ಮಾಡುತ್ತಿದ್ದ. ಆಗ ನಾವು ನಮ್ಮ ಗೆಳತಿಯರಿಗೆ ಏನೋ ಒಂದು ಹಾರಿಕೆಯ ಉತ್ತರ ಕೊಟ್ಟು ಅವರಿಂದ ತಪ್ಪಿಸಿಕೊಳ್ಳುತ್ತಿದ್ದೆವು.

ಬೆಳಗ್ಗೆಯಿಂದ ಸಂಜೆಯವರೆಗೂ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಸಂಗ್ರಹಿಸಿದ ರಾಗಿ ಹಿಟ್ಟನ್ನು ಹತ್ತು ಹದಿನೈದು ಕೆಜಿ ಆದಮೇಲೆ ಶೆಟ್ಟರ ಅಂಗಡಿಗೆ ಮಾರಿ ಸ್ವಲ್ಪ ದುಡ್ಡು ಮಾಡಿಕೊಳ್ಳುತ್ತಿದ್ದ. ಇನ್ನು ಊಟ ತಿಂಡಿ ನಮ್ಮ ಮನೆಯಲ್ಲಿ ನಡೆದು ಹೋಗುತ್ತಿತ್ತು. ನಮ್ಮ ಮನೆಯಲ್ಲಿ ಇಂತಹ ನಾಲ್ಕೈದು ಜನ ಪ್ರತಿದಿನ ಊಟ ಮಾಡುತ್ತಿದ್ದರು. ಸೌದೆ ಒಡೆಯುವ ತಿಮ್ಮ, ವರ್ಕ್ ಶಾಪ್ ನಲ್ಲಿ ಕೆಲಸ ಮಾಡುವ ಇಬ್ಬರು ಮೂವರು ಆಳುಗಳು, ಹೀಗೆ ನಾಲ್ಕಾರು ಮಂದಿ ಊಟ ಮಾಡುತ್ತಿದ್ದರು. ಅಡುಗೆ ಮಾಡಿ ಬಡಿಸಲು ಅಮ್ಮ ಸಿದ್ದವಾಗಿರುತ್ತಿದ್ದಳು.

ರಂಗಾಚಾರಿಗೆ ಗೊತ್ತಿದ್ದುದು ಕೇವಲ ದಾಸಪ್ಪನ ವೃತ್ತಿ ಅಷ್ಟೇ ಅಲ್ಲ. ಆತ ಬಹುಮುಖ ಪ್ರತಿಭೆವುಳ್ಳವನಾಗಿದ್ದ. ಊಟವಾದ ನಂತರ ಮನೆಯ ಮುಂದಿನ ಹಜಾರದಲ್ಲಿ ಎಲ್ಲರೂ ಕುಳಿತು ಮಾತನಾಡುತ್ತಿರುವಾಗ ರಂಗಚಾರಿ ಜಾನಪದ ಗೀತೆಗಳನ್ನು ಹೇಳಲು ಶುರು ಮಾಡುತ್ತಿದ್ದ. ಹಾಡಿನ ಜೊತೆಗೆ ಖಂಜೀರ ಬಡಿಯುತ್ತಾ, ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಕುಣಿಯುತ್ತಿದ್ದ. ಹೆಂಗಸರೂ ನಾಚಬೇಕು ಅವನ ನೃತ್ಯ ನೋಡಿ ಹಾಗೆ ನರ್ತಿಸುತ್ತಿದ್ದ. ಮತ್ತೆ ಗೀಗಿ ಪದ, ತತ್ವ ಪದಗಳನ್ನೂ ಹಾಡುತ್ತಿದ್ದ. ಯಾವುದೇ ಹಾಡಾದರೂ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುತ್ತಿದ್ದ. ನಾವೆಲ್ಲ ಮಕ್ಕಳು ಖುಷಿಯಿಂದ ನೋಡುತ್ತಿದ್ದೆವು. ನಮ್ಮ ಅಕ್ಕ ಪಕ್ಕದ ಮನೆಯವರು, ಮಕ್ಕಳು ಮರಿಗಳು ಎಲ್ಲರೂ ಬಂದು ನೋಡುತ್ತಿದ್ದರು. ಕರೆಂಟ್ ಇದ್ದಾಗ ಟಿವಿ ನೋಡುತ್ತಿದ್ದೆವು. ಕರೆಂಟ್ ಕೈ ಕೊಟ್ಟಾಗ ರಂಗಾಚಾರಿಯದ್ದೆ ಕಾರ್ಯಕ್ರಮ. ಹಾಡುಗಾರಿಕೆ, ನೃತ್ಯ, ತತ್ವಪದ ಎಲ್ಲವೂ ಅವನಲ್ಲಿ ಮೇಳೈಸಿದ್ದವು. ಸರಿಯಾದ ವೇದಿಕೆ ಸಿಗದೇ ಅವನ ಪ್ರತಿಭೆ ಮೂಲೆಗುಂಪಾಗಿತ್ತು. ಅವನು ಇದ್ದಷ್ಟು ದಿನವೂ ಪ್ರತಿದಿನ ರಾತ್ರಿ ಮನರಂಜಿಸುತ್ತಿದ್ದ. ಹೀಗೆ ಅವನ ಪ್ರತಿಭೆ ಅನಾವರಣಗೊಂಡಿತ್ತು. ಒಂದೆರಡು ತಿಂಗಳಾದ ಬಳಿಕ ಗಂಟು ಮೂಟೆ ಕಟ್ಟಿಕೊಂಡು ಬೇರೊಂದು ಊರಿಗೆ ಹೋಗಲು ಹೊರಟಿದ್ದ. ಆಗ ನಮಗೆ ನಿಜವಾಗಿಯೂ ಬೇಸರವಾಗಿತ್ತು. ಇನ್ನು ಸ್ವಲ್ಪ ದಿನ ರಂಗಾಚಾರಿ ಇರಬಾರದಿತ್ತೆ ಎನಿಸಿತ್ತು ಉಬ್ಬಲ್ಲು ಬಿಟ್ಟುಕೊಂಡು ಸದಾ ನಗು ಮುಖದಿಂದ ಇರುತ್ತಿದ್ದ ರಂಗಾಚಾರಿ ನಿರುಪದ್ರವಿಯಾಗಿದ್ದ. ಇತರರನ್ನು ನಗಿಸುತ್ತಾ ತನ್ನ ಸುಖವನ್ನು ಅಲ್ಲೇ ಕಾಣುತ್ತಿದ್ದನು. ಈತ ಈಗ ಇಲ್ಲವಾದರೂ ಇವನ ನೆನಪು ಸದಾ ಅಮರ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಂ – ಶಿಕ್ಷಕಿ, ಗೌರಿಬಿದನೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW