ಹಾಸ್ಟೆಲ್ ರೂಮ್ನಲ್ಲಿ ನಾನು ಮಲಗಿದ್ದೆ, ಹಾಸ್ಟೆಲ್ ಹುಡುಗಿರೆಲ್ಲಾ ‘ಕ್ಯಾಂಡಲ್ ಫೋಟೋ’ ಗಾಗಿ ಸೀರೆಯನ್ನುಟ್ಟು ಚಂದ ಚಂದವಾಗಿ ರೆಡಿಯಾಗಿದ್ದರು. ನನಗೆ ಕ್ಯಾಂಡಲ್ ಫೋಟೋ ಅಂದರೆ ತಿಳಿದಿರಲಿಲ್ಲ. ಆಗ ಕ್ಯಾಂಡಲ್ ಫೋಟೋದ ಬಗ್ಗೆ ಗೆಳತಿಯೊಬ್ಬಳು ತಿಳಿಸಿದಳು. ಸರ್ವ ಮಂಗಳ ಜಯರಾಮ್ ಅವರು ‘ಚೌಚೌ ಬಾತ್’ ಅಂಕಣದಲ್ಲಿ ‘ಕ್ಯಾಂಡಲ್ ಫೋಟೋ ಹವಾ’, ತಪ್ಪದೆ ಮುಂದೆ ಓದಿ…
ನಾನಾಗ ತುಮಕೂರಿನ ಸಿದ್ದಗಂಗಾ ವುಮೆನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದೆ. ತುಮಕೂರು ನಮ್ಮ ಹೊಸಕೆರೆ ಗ್ರಾಮದಿಂದ ತುಂಬಾ ದೂರ ಇದ್ದಿದ್ದರಿಂದ ಕಾಲೇಜಿಗೆ ಹೋಗಿ ಬರಲು ಕಷ್ಟವಾಗುತ್ತಿತ್ತು. ಅದಕ್ಕೆಂದೆ ಬಿ. ಸಿ.ಎಂ. ಹಾಸ್ಟೆಲ್ ನಲ್ಲಿ ಇದ್ದುಕೊಂಡು ಪಿಯುಸಿ ಮುಗಿಸಿದೆ. ನಮ್ಮ ಹಾಸ್ಟೆಲ್ ನಲ್ಲಿ ಸುಮಾರು ಹತ್ತು ಹನ್ನೆರಡು ರೂಮ್ ಗಳಿದ್ದವು. ಒಂದೊಂದು ರೂಮ್ನಲ್ಲಿ ಐದಾರು ಜನ ಹುಡುಗಿಯರು ಇದ್ದೆವು. ಸೋಮವಾರದಿಂದ ಶನಿವಾರದ ವರೆಗೂ ಕಾಲೇಜು ಇರುತ್ತಿತ್ತು. ಎಂದಿನಂತೆ ಭಾನುವಾರ ರಜಾ ದಿನ. ಅವತ್ತು ನಮ್ಮ ಬಟ್ಟೆ ಬರೆಗಳನ್ನೆಲ್ಲ ಒಗೆದು ಶುಭ್ರಗೊಳಿಸಿಕೊಳ್ಳುತ್ತಿದ್ದೆವು. ವಾರ ವಾರವೂ ಊರಿಗೆ ಹೋಗುತ್ತಿರಲಿಲ್ಲ. ಕೆಲವರು ಹತ್ತಿರ ಇದ್ದವರು ಮಾತ್ರ ಹೋಗಿ ಬರುತ್ತಿದ್ದರು. ಭಾನುವಾರ ಬಂತೆಂದರೆ ಹಾಸ್ಟೆಲ್ ಮುಂದಿನ ಆವರಣದಲ್ಲೆಲ್ಲ ಒಗೆದ ಬಟ್ಟೆಗಳ ತೋರಣ ರಾರಾಜಿಸುತ್ತಿತ್ತು. ಸುಮಾರು ಮೂವತ್ತು ನಲವತ್ತು ಜನ ಹೆಣ್ಣು ಮಕ್ಕಳ ಬಟ್ಟೆಗಳು ಕಡಿಮೆ ಏನಿರಲಿಲ್ಲ. ಹಾಗಾಗಿ ಭಾನುವಾರ ಬಂತೆಂದರೆ ನಮ್ಮ ಹಾಸ್ಟೆಲ್ ಅಕ್ಷರಶಃ ಧೋಬಿ ಘಾಟ್ ನಂತಾಗುತ್ತಿತ್ತು.
ಹಾಗೇ ಒಂದು ಭಾನುವಾರ ನಾನು ಬಟ್ಟೆಗಳನ್ನೆಲ್ಲ ಒಗೆದು ಜಾಲಿಸಿ ಒಣಗಲು ಹಾಕಿದ್ದೆ. ಸ್ವಲ್ಪ ರೆಸ್ಟ್ ಮಾಡೋಣವೆಂದು ರೂಮ್ನಲ್ಲಿ ಮಲಗಿದ್ದೆ. ಒಂದು ಹತ್ತು ಹದಿನೈದು ನಿಮಿಷ ಮಲಗಿದ್ದೆ. ಆಗ ತಾನೇ ನಿದ್ದೆ ಜೊಂಪು ಹತ್ತಿತ್ತು. ಇದ್ದಕ್ಕಿದ್ದಂತೆ ನಮ್ಮ ರೂಮ್ನಲ್ಲಿ ಇದ್ದ ಹುಡುಗಿಯರ ಕಲರವ ಸದ್ದು ಗದ್ದಲ ನನ್ನನ್ನು ಎಚ್ಚರಿಸಿತು. ಏನಾಯಿತು ಎಂದು ನಾನು ಕಣ್ಣು ತೆರೆದು ನೋಡಿದೆ. ಎಲ್ಲಾ ಹುಡುಗಿಯರು ಬಣ್ಣ ಬಣ್ಣದ ಸೀರೆ ಉಟ್ಟುಕೊಂಡು ವಿವಿಧ ಶೈಲಿಯ ಕೇಶವಿನ್ಯಾಸಗಳಿಂದ ಅಲಂಕರಿಸಿ ಕೊಳ್ಳುತ್ತಿದ್ದರು. ನನಗೆ ಆಶ್ಚರ್ಯವಾಗಿ ಮೇಲಕ್ಕೆದ್ದೆ. ಇದೇನೆ ಇದು ಹಿಂಗ್ ರೆಡಿ ಆಗ್ತಾ ಇದ್ದೀರಾ, ಯಾವುದಾದರೂ ಫಂಕ್ಷನ್ ಇದೆಯಾ ಎಂದು ಕೇಳಿದೆ. ಫಂಕ್ಷನ್ನು ಇಲ್ಲ ಎಂತದು ಇಲ್ಲ. ನಾವೆಲ್ಲ ಕ್ಯಾಂಡಲ್ ಫೋಟೋ ತೆಗೆಸಿಕೊಳ್ಳೋಕೆ ಹೋಗ್ತಾಯಿದ್ದೀವಿ ಅಂದಳು ಒಬ್ಬಳು.

ಏನ್ ಕ್ಯಾಂಡಲ್ ಫೋಟೋನೇ ಅದು ಹೇಳಿ ಅಂದೆ. ಅದಕ್ಕೆ ಅವಳು “ನಿನ್ಗೆ ಗೊತ್ತಿಲ್ವಾ ಕ್ಯಾಂಡಲ್ ಫೋಟೋ…. ಎಂಜಿ ರೋಡಲ್ಲಿ ಅಮರ್ ಸ್ಟುಡಿಯೋದಲ್ಲಿ ತೆಗಿತಾರೆ. ಎಷ್ಟು ಚಂದ ಬರುತ್ತೆ ಗೊತ್ತಾ ಫೋಟೋ. ಒಳ್ಳೆ ಹೀರೋಯಿನ್ ತರ ಕಾಣ್ತೀವಿ ಒಂದು ನಿಮಿಷ ಇರು ತೋರಿಸ್ತೀನಿ” ಅಂದಳು. ನಾನು ಕಕ್ಕಾಬಿಕ್ಕಿಯಾಗಿ ಯಾವ ಕ್ಯಾಂಡಲ್ ಫೋಟೋನಪ್ಪ ಇದು, ಇದುವರೆಗೂ ನಾನು ಕೇಳಿಲ್ಲ, ನೋಡಿಲ್ಲ , ಅಂದುಕೊಳ್ಳುತ್ತಿರುವಾಗಲೇ ಪಕ್ಕದ ರೂಮಿನಿಂದ ಮುಂಚೆ ತೆಗೆಸಿದ್ದ ಒಬ್ಬ ಹುಡುಗಿಯ ಕ್ಯಾಂಡಲ್ ಫೋಟೋ ತಂದು ನನಗೆ ತೋರಿಸಿದಳು. ಏನಾಶ್ಚರ್ಯ ಬಹಳ ಸುಂದರವಾಗಿತ್ತು ಆ ಫೋಟೋ. ಆ ಫೋಟೋದಲ್ಲಿದ್ದ ಹುಡುಗಿ ಪಕ್ಕದ ರೂಮಿನವಳು. ನೇರವಾಗಿ ಮುಖಾಮುಖಿ ನೋಡಲು ಸುಮಾರಾಗಿ ಕಾಣುತ್ತಿದ್ದಳು. ಅಷ್ಟೇನು ಸುಂದರವಾಗಿರಲಿಲ್ಲ. ಕೆನ್ನೆಯ ಮೇಲೆಲ್ಲ ಕಪ್ಪು ಸಿಬ್ಬು ಇತ್ತು. ಆದರೆ ಆ ಫೋಟೋದಲ್ಲಿ ಮಾತ್ರ ಕಪ್ಪು ಕಲೆಗಳು ಕಾಣಿಸುತ್ತಲೇ ಇರಲಿಲ್ಲ. ಬಹಳ ಸುಂದರವಾದ ಹುಡುಗಿಯ ಫೋಟೋದಂತೆ ಕಾಣುತ್ತಿತ್ತು .ನಾನು ಇರುವುದರಲ್ಲಿ ಪರವಾಗಿಲ್ಲ ಎಂಬಂತೆ ಸುಮಾರಾಗಿ ಸುಂದರವಾಗಿಯೇ ಇದ್ದೆ .ಎಲ್ಲಾ ಟೀನೇಜ್ ಮಹಿಮೆ ಇರಬಹುದು. ಆ ಹುಡುಗಿಯ ಕ್ಯಾಂಡಲ್ ಫೋಟೋ ನೋಡಿ ನನಗೂ ಫೋಟೋ ತೆಗೆಸಿಕೊಳ್ಳುವ ಮನಸಾಯ್ತು.ಆದರೆ ಹೇಗೆ ಇದ್ದಕ್ಕಿದ್ದಂತೆ ಹೋಗಿ ಫೋಟೋ ತೆಗೆಸಿಕೊಳ್ಳುವುದು. ನನ್ನ ಬಳಿ ಹಣವು ಕಡಿಮೆ ಇತ್ತು ಅಲ್ಲದೆ ಫೋಟೋಗೆ ಬೇಕಾದ ಚಂದದ ಸೀರೆ ಬ್ಲೌಸ್ ಸರ,ಓಲೆ ಯಾವುದು ಆಗ ನನ್ನ ಬಳಿ ಇರಲಿಲ್ಲ. ನಾನು ಇನ್ನೊಮ್ಮೆ ತೆಗೆಸಿಕೊಳ್ಳುತ್ತೇನೆ ಅಂದೆ. ನನ್ನ ಗೆಳತಿಯರು ಬಿಡಲಿಲ್ಲ. ಪರವಾಗಿಲ್ಲ ಈಗ ಬಾ ಸಿಂಪಲ್ಲಾಗಿ ಒಂದು ಫೋಟೋ ತೆಗೆಸಿಕೊ, ಆಮೇಲೆ ಮುಂದೆ ನಿನಗೆ ಇಷ್ಟ ಆದರೆ ಕ್ಯಾಂಡಲ್ ಫೋಟೋ ತೆಗೆಸಿಕೊ ಎಂದು ಹೇಳಿ ಕರೆದೊಯ್ದರು.ಇಡೀ ಹಾಸ್ಟೆಲ್ ಗೆ ಹಾಸ್ಟೆಲ್ಲೆ ಆಟೋದಲ್ಲಿ ಎಂ.ಜಿ.ರೋಡ್ ಕಡೆಗೆ ಪಯಣ ಬೆಳಿಸಿತ್ತು.

ಆಟೋ ಅಮರ್ ಸ್ಟುಡಿಯೋ ಮುಂದೆ ನಿಂತಿತು. ಅಲ್ಲಿ ಅಷ್ಟೊತ್ತಿಗಾಗಲೇ ಹುಡುಗಿಯರ ದಂಡೇ ನೆರೆದಿತ್ತು. ಭಾನುವಾರ ಬೇರೆ ಕಾಲೇಜಿಗೆ ರಜೆ. ಇಡೀ ಸಿದ್ಧಗಂಗಾ ವುಮೆನ್ಸ್ ಕಾಲೇಜೇ ಅಲ್ಲಿತ್ತು. ಕ್ಯಾಂಡಲ್ ಫೋಟೋ ಹವಾ ತುಮಕೂರಿನಲ್ಲಿ ಎಲ್ಲ ಕಡೆ ಚೆನ್ನಾಗಿ ಹಬ್ಬಿತ್ತು.
ನಮ್ಮ ಹುಡುಗಿಯರ ಜೊತೆ ನಾನು ಸರತಿ ಸಾಲಿನಲ್ಲಿ ನಿಂತುಕೊಂಡೆ. ನಿಂತುಕೊಂಡೆವು ಎನ್ನುವುದಕ್ಕಿಂತ ಕುಳಿತುಕೊಂಡೆವು ಆರಾಮವಾಗಿ ಅಂತ ಹೇಳಬಹುದು. ಯಾಕೆಂದರೆ ಅಲ್ಲಿ ಸರತಿ ಸಾಲಿನಲ್ಲಿ ಕಾಯುವ ಲಲನಾಮಣಿಯರಿಗೆ ಸುಸ್ತಾಗಬಾರದೆಂದು ಅಮರ್ ಸ್ಟುಡಿಯೋದವರು ಆಸನದ ವ್ಯವಸ್ಥೆ ಮಾಡಿದ್ದರು.ಹಾಗಾಗಿ ನಮ್ಮ ಸರತಿ ಬರುವವರೆಗೂ ಕುಳಿತುಕೊಂಡೆವು. ಕೊನೆಗೆ ನಮ್ಮ ಸರತಿ ಬಂತು. ಸ್ಟುಡಿಯೋದ ಒಳಕ್ಕೆ ಹೋದರೆ ಯಾವುದೋ ಇಂದ್ರ ಲೋಕಕ್ಕೆ ಪ್ರವೇಶಿಸಿದೆವು ಎಂಬಂತೆ ಭ್ರಮೆ ಮೂಡುತ್ತಿತ್ತು. ಅಲ್ಲಿದ್ದ ಲೈಟಿಂಗ್ ಅರೇಂಜ್ಮೆಂಟ್ಸ್ ಕಣ್ಣು ಕುಕ್ಕುತ್ತಿತ್ತು. ಆ ಕಾಲಕ್ಕೇ ಏನೇನೋ ಲೈಟಿಂಗ್ಸ್ ಮಿಕ್ಸಿಂಗ್ ಮಾಡಿ ಒಂದೊಳ್ಳೆ ಚಂದದ ಕ್ಯಾಂಡಲ್ ಫೋಟೋ ತೆಗೆದುಕೊಡುತ್ತಿದ್ದರು. ಒಂದು ಕ್ಯಾಂಡಲ್ ಹತ್ತಿಸಿ ಆ ಒಂದು ಬೆಳಕಿಗೆ ಹಿನ್ನಲೆಯಾಗಿ ಪ್ರಕಾಶಮಾನವಾದ ಫೋಟೋ ಬರುವಂತೆ ಅತ್ಯಾಕರ್ಷಕ ಫೋಟೋ ತೆಗೆದುಕೊಡುತ್ತಿದ್ದರು. ನಾನು ಅಂದು ಕೇವಲ ಸಿಂಪಲ್ ಆಗಿರೋ ಒಂದು ಚೂಡಿದಾರ್ ಹಾಕಿಕೊಂಡು ಹೋಗಿದ್ದೆ. ಫೋಟೋ ಬಂದ ಮೇಲೆ ನೋಡಿದರೆ ಮುದ್ದು ದೇವತೆಯಂತೆ ಕಾಣುತ್ತಿದ್ದೆ.

ಮುಂದಿನ ವಾರವೇ ಊರಿಗೆ ಹೋಗಿ ಅಪ್ಪನಿಂದ ಸಾಕಷ್ಟು ಹಣ ಪಡೆದುಕೊಂಡೆ. ಅಕ್ಕನ ಒಂದೆರಡು ರೇಷ್ಮೆ ಸೀರೆಗಳನ್ನು ಬ್ಲೌಸ್ ಗಳನ್ನು ಅದಕ್ಕೆ ಒಪ್ಪುವ ಓಲೆ ಸರ ಬಳೆಗಳನ್ನು ತೆಗೆದುಕೊಂಡು ಬಂದೆ. ಮುಂದೆ ಅದೇ ಒಂದು ಹುಚ್ಚಾಯ್ತು. ಕ್ಯಾಂಡಲ್ ಫೋಟೋ…… ಕ್ಯಾಂಡಲ್ ಫೋಟೋ ಅದೇ ಕನಸು. ಬಿಡುವಾದಾಗಲೆಲ್ಲ ಅಮರ್ ಸ್ಟುಡಿಯೋಗೆ ಹೋಗಿ ಫೋಟೋ ತೆಗೆಸಿಕೊಳ್ಳುವುದು….. ಖುಷಿ ಪಡುವುದು. ಬರೀ ಇದೇ ಆಯ್ತು. ಹೀಗೇ ಸುಮಾರು ನಾಲ್ಕೈದು ಬಾರಿ ಹೋಗಿ ಫೋಟೋ ತೆಗೆಸಿಕೊಂಡಿದ್ದೆವು. ಮುಂದೆ ಎಕ್ಸಾಮ್ ಹತ್ತಿರ ಬಂದಂತೆ ಆ ಫೋಟೋ ಗೀಳು ಕಡಿಮೆ ಆಯ್ತು. ಆಮೇಲಾಮೇಲೆ ಸ್ಟುಡಿಯೋಗೆ ಹೋಗುವುದನ್ನು ಬಿಟ್ಟು ಓದಿನಲ್ಲಿ ತಲ್ಲೀನಳಾದೆ. ಆಗ ತೆಗೆಸಿದ್ದ ಕ್ಯಾಂಡಲ್ ಫೋಟೋ ವನ್ನು ನಮ್ಮ ಮನೆಯ ಷೋಕೇಸಿನಲ್ಲಿ ಇಟ್ಟಿದ್ದೆ. ನಿಶ್ಚಿತಾರ್ಥ ಆದಮೇಲೆ ಒಮ್ಮೆ ನಮ್ಮವರು ನಮ್ಮ ಮನೆಗೆ ಬಂದಿದ್ದರು. ಅವರು ಬಂದು ಹೋದ ಮೇಲೆ ಶೋಕೇಸ್ ನಲ್ಲಿ ಆ ಫೋಟೋ ಕಾಣೆಯಾಗಿತ್ತು. ಮನೆಯೆಲ್ಲ ಹುಡುಕಿದೆ ಎಲ್ಲೂ ಸಿಗಲಿಲ್ಲ. ಮದುವೆಯಾದ ಮೇಲೆ ಆ ಫೋಟೋ ಸಿಕ್ಕಿತು ನಮ್ಮವರ ಮನೆಯ ಶೋಕೇಸ್ ನಲ್ಲಿ ಅರ್ಥಾತ್ ನನ್ನ ಗಂಡನ ಮನೆಯಲ್ಲಿ.

ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ಸರ್ವಮಂಗಳ ಜಯರಾಂ
