‘ಚೌಚೌ ಬಾತ್’ ಅಂಕಣ (ಭಾಗ – ೫೦)

ಕೆಂಪಣ್ಣ ಮತ್ತು ಮಲ್ಲಿಕಾ ಊರಿನ ಕ್ವಾಟ್ರಸ್ ನಲ್ಲಿ ಜೊತೆಗಿದ್ದರು, ಅವರ ಪ್ರೇಮದ ಕತೆ ಕೆಂಪಣ್ಣನ ಅಕ್ಕಳಿಗೆ ತಿಳಿಯಿತು, ತನ್ನ ಮಗಳನ್ನು ಕೆಂಪಣ್ಣನಿಗೆ ಕೊಡಬೇಕು ಅಂದುಕೊಂಡವಳಿಗೆ ನಿರಾಸೆ ಕಾದಿತ್ತು, ಅದನ್ನು ನೋಡುತ್ತಾ ಸುಮ್ಮನಿರದ ಕೆಂಪಣ್ಣನ ಅಕ್ಕ ಮುಂದೇನುಮಾಡಿದಳು, ತಪ್ಪದೆ ಓದಿ ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದ ಕೊನೆಯ ಭಾಗ ‘ಕೆಂಪಣ್ಣನ ಪ್ರೇಮ ಪ್ರಸಂಗ’…

ನಮ್ಮ ಹಳ್ಳಿ ಮನೆ ಸರ್ಕಾರಿ ಆಸ್ಪತ್ರೆಗೆ ಹೊಂದಿಕೊಂಡಂತೆಯೇ ಇತ್ತು. ಸ್ವಲ್ಪ ಹಿಂಭಾಗದಲ್ಲಿ ಆಸ್ಪತ್ರೆಯ ಕ್ವಾಟ್ರಸ್ ಗಳಿದ್ದವು. ಅವುಗಳಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ವರ್ಗದವರು ವಾಸವಾಗಿದ್ದರು. ನಮ್ಮ ಮನೆಯಲ್ಲಿ ನಲ್ಲಿ ಹಾಕಿಸಿದ್ದರೂ ಬೇಸಿಗೆ ಕಾಲದಲ್ಲಿ ನೀರು ಸಾಕಾಗುತ್ತಿರಲಿಲ್ಲ. ಏಕೆಂದರೆ ನಮ್ಮ ಮನೆಯಲ್ಲಿ ಎಂಟು ಹತ್ತು ಜನರಿದ್ದರು. ಅನಿವಾರ್ಯವಾಗಿ ನಾವು ಬಿಂದಿಗೆ ಹಿಡಿದು ನೀರಿಗೆಂದು ಹೋಗುತ್ತಿದ್ದೆವು. ಅಲ್ಲಿ ಕೊಳಾಯಿಯ ಮುಂದೆ ಜನರು ನೀರಿಗಾಗಿ ಸಾಲುಗಟ್ಟಿ ನಿಂತಿರುತ್ತಿದ್ದರು. ನಮ್ಮ ಸರತಿ ಬರುವವರೆಗೂ ಸುಮ್ಮನೆ ನಿಂತು ಕಾಯಬೇಕಿತ್ತು. ಹೀಗೆ ಕಾಯುವಾಗಲೆಲ್ಲ ಅಲ್ಲೇ ಸಮೀಪದಲ್ಲಿ ಇದ್ದ ಒಂದು ಕ್ವಾಟ್ರಸ್ ನಮಗೆಲ್ಲ ಕುತೂಹಲದ ಕೇಂದ್ರವಾಗಿತ್ತು. ಏಕೆಂದರೆ ಆ ಕ್ವಾಟ್ರಸ್ ನಲ್ಲಿ ಮದುವೆಯಾಗದ ಒಂದು ಗಂಡು ಒಂದು ಹೆಣ್ಣು ವಾಸವಾಗಿದ್ದರು. ಎಲ್ಲಾ ಕ್ವಾಟ್ರಸ್ಗಳಲ್ಲೂ ವಿವಾಹಿತ ಗಂಡ ಹೆಂಡತಿ ಅವರ ಮಕ್ಕಳು ವಾಸವಾಗಿದ್ದರು. ಆದರೆ ಅದೊಂದು ಕ್ವಾಟ್ರಸ್ ಮಾತ್ರ ವಿಭಿನ್ನ.

ಕೆಂಪಣ್ಣ ಆ ಊರಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ. ಯಾವ ಕೆಲಸವೆಂದು ಸರಿಯಾಗಿ ನೆನಪಿಲ್ಲ. ಅವಿವಾಹಿತನಾದ ಕೆಂಪಣ್ಣ ನಮ್ಮ ಊರಿನ ಸಮೀಪವೇ ಇದ್ದ ಯಾವುದೋ ಹಳ್ಳಿಯವನು. ಆಸ್ಪತ್ರೆಯಲ್ಲಿ ಕೆಲಸದಲ್ಲಿ ಇದ್ದುದರಿಂದ ಅವನಿಗೂ ಕ್ವಾಟ್ರಸ್ ದೊರಕಿತ್ತು. ಅದೇ ಕ್ವಾಟ್ರಸ್ನಲ್ಲಿ ಒಬ್ಬ ಸುಂದರ ತರುಣಿ ಕೂಡ ಇದ್ದಳು. ಅವಳು ಕೂಡ ಅವಿವಾಹಿತೆಯಾಗಿದ್ದು ಪಕ್ಕದಲ್ಲಿ ಯಾವುದೋ ಹಳ್ಳಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಮುಂದಿನ ರೂಮಿನಲ್ಲಿ ಕೆಂಪಣ್ಣ ಮತ್ತು ಹಿಂದಿನ ರೂಮಿನಲ್ಲಿ ಆ ಶಿಕ್ಷಕಿ ವಾಸವಾಗಿದ್ದರು. ಅವಳ ಹೆಸರು ಮಲ್ಲಿಕಾ ಇರಬಹುದು ಎಂಬ ನೆನಪು. ಅವಳು ಅದೆಷ್ಟು ಸುಂದರವಾಗಿದ್ದಳೆಂದರೆ ನಾವೆಲ್ಲಾ ಚಿಕ್ಕ ಮಕ್ಕಳು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆವು. ಮಲ್ಲಿಕಾ ಹೆಸರಿಗೆ ತಕ್ಕಂತೆ ಮಲ್ಲಿಗೆ ಹೂವಿನಂತಹದ್ದೇ ಸೊಗಸು, ಬಣ್ಣ.

ಅವಳು ಒಪ್ಪವಾಗಿ ಸೀರೆ ಉಟ್ಟು, ಕತ್ತರಿಸಿದ ತುಂಡು ಕೂದಲಿಗೆ ಒಂದು ಚೆಂದನೆಯ ಕ್ಲಿಪ್ ಹಾಕಿ, ಹಾರಾಡುವ ಚಿಕ್ಕ ತೋಳಿನ ಬ್ಲೌಸ್ ಧರಿಸಿ ಶಾಲೆಗೆ ಹೋಗಲು ಬೀದಿಗೆ ಬಂದರೆ ಎಲ್ಲರೂ ಅವಳನ್ನೇ ಎವೆ ಇಕ್ಕದೆ ನೋಡುತ್ತಿದ್ದರು. ಹಳೆ ಕಾಲದ ಸಿನಿಮಾಗಳಲ್ಲಿ ನಟಿ ಲಕ್ಷ್ಮಿ ಧರಿಸುತ್ತಿದ್ದಂತಹ ಡಿಸೈನ್ ಬ್ಲೌಸ್ ಗಳನ್ನು ಧರಿಸುತ್ತಿದ್ದಳು. ಬಹುಶಃ ಅದು ಆಗಿನ ಕಾಲದ ಟ್ರೆಂಡ್ ಇರಬಹುದು. ಆಕೆ ಸೀರೆಯನ್ನು ಅದೆಷ್ಟು ಮಾದಕವಾಗಿ ಉಡುತ್ತಿದ್ದಳೆಂದರೆ ರಸ್ತೆಯಲ್ಲಿ ಒಮ್ಮೆ ಆಕೆ ಹಾದು ಹೋದರೆ ಎಲ್ಲರೂ ಹಿಂತಿರುಗಿ ಮತ್ತೊಮ್ಮೆ ನೋಡುತ್ತಿದ್ದರು. ಅಂತಹ ಮೈಮಾಟದ, ಸೊಗಸಾದ ಚೆಲುವು ಅವಳದ್ದು. ಇಂತಹ ಸೊಗಸುಗಾರ್ತಿಗೆ ನಮ್ಮ ಊರಿನಲ್ಲಿ ಬೇರೆ ಎಲ್ಲೂ ಬಾಡಿಗೆ ಮನೆ ದೊರಕಿರಲಿಲ್ಲವೇನೋ. ಕೆಂಪಣ್ಣನ ಕ್ವಾಟ್ರಸ್ ನಲ್ಲಿ ಸೇರಿಕೊಂಡು ಕೊನೆಗೆ ಅವನನ್ನೇ ಕಟ್ಟಿಕೊಂಡಳು.

ಆ ಕಾಲದಲ್ಲಿ ಬಾಡಿಗೆ ಮನೆಗಳ ಕಲ್ಪನೆ ಕಡಿಮೆಯೇ. ಯಾಕೆಂದರೆ ಹಳ್ಳಿಗಳಲ್ಲಿ ಎಲ್ಲರಿಗೂ ಅವರದ್ದೇ ಆದ ಸ್ವಂತ ಮನೆ ಇರುತ್ತದೆ. ಅವರವರ ಯೋಗ್ಯತೆಗೆ ತಕ್ಕಂತೆ ಮನೆ ಕಟ್ಟಿಕೊಂಡಿರುತ್ತಾರೆ.ಇನ್ನು ಬಾಡಿಗೆ ಮನೆ ಕಟ್ಟಿ ಬಾಡಿಗೆ ಕೊಡಲು ಯಾರು ಬಂದು ಇರುತ್ತಾರೆ, ನಗರಗಳಲ್ಲಿ ಆದರೆ ಕೆಲಸಕ್ಕೆ ಹೋಗಲು ದೂರದ ಊರುಗಳಿಂದ ವಲಸೆ ಬಂದಿರುವ ಜನರಿಗಾಗಿ ಬಾಡಿಗೆ ಮನೆ ಕಟ್ಟಿರುತ್ತಾರೆ. ಹಳ್ಳಿಯಲ್ಲಿ ಎಲ್ಲರೂ ರೈತರೇ ಎಲ್ಲರಿಗೂ ಸ್ವಂತ ಮನೆಗಳು ಇರುತ್ತವೆ. ಇನ್ನು ಸರ್ಕಾರಿ ಕಟ್ಟಡಗಳೆಂದರೆ ಆಸ್ಪತ್ರೆ, ಶಾಲೆ, ಅಂಚೆ ಕಚೇರಿ ಮಾತ್ರ. ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ಸರ್ಕಾರಿ ಕ್ವಾಟ್ರಸ್ ಇದ್ದವು. ಹಾಗಾಗಿ ಮಲ್ಲಿಕಾ ಮೇಡಂಗೆ ಊರಿನಲ್ಲಿ ಎಲ್ಲೂ ಬಾಡಿಗೆ ಮನೆ ದೊರೆಯದ ಕಾರಣ ಕೆಂಪಣ್ಣನ ಕ್ವಾಟ್ರಸ್ ನಲ್ಲಿ ನೆಲೆ ಕಂಡುಕೊಂಡಿದ್ದಳು.

ಹೀಗೆ ಸ್ವಲ್ಪ ದಿನಗಳು ಉರುಳಿದವು. ತಿಂಗಳುಗಳು ಕಳೆದು ವರ್ಷವಾಯಿತು. ಮೊದಮೊದಲು ಅವರಿಂದ ಏನೂ ತಕರಾರು ಬರುತ್ತಿರಲಿಲ್ಲ. ಬರಬರುತ್ತ, ಇಬ್ಬರ ನಡುವೆ ಜಗಳದ ದನಿ ತಾರಕಕ್ಕೇರಿ ಪಾತ್ರೆಗಳು ಮಾತಾಡುತ್ತಿದ್ದವು. ಅವರು ಯಾವ ವಿಚಾರಕ್ಕಾಗಿ ಜಗಳವಾಡುತ್ತಿದ್ದರೋ ಏನೋ ಅಂತೂ ಜಗಳ ಇರುತ್ತಿತ್ತು. ಪ್ರತಿ ಸಂಜೆ ನೀರಿಗಾಗಿ ಸರದಿ ಸಾಲಿನಲ್ಲಿ ನಿಂತ ನಮಗೆಲ್ಲರಿಗೂ ಒಳ್ಳೆಯ ಮನೋರಂಜನೆ. ಅವರ ಏರುದನಿ ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಜನರೆಲ್ಲ ಮಿಕ ಮಿಕನೇ ಕಣ್ಣು ಬಿಡುತ್ತಾ, ಇವರ್ಯಾಕೆ ಹೀಗೆ ಜಗಳವಾಡುತ್ತಿದ್ದಾರೆ ಎಂದುಕೊಳ್ಳುತ್ತಿದ್ದರು. “ಮಲ್ಲಿಕಾ ಮಲ್ಲಿಗೆಯಷ್ಟೇ ನಾಜೂಕಿನ ಹುಡುಗಿ, ಹೋಗಿ ಹೋಗಿ ಗೊಲ್ಲರಹಟ್ಟಿಯ ಕೆಂಪನಿಗೆ ಸಿಕ್ಕಿಹಾಕಿಕೊಂಡವಳೇ, ಕೆಂಪ ಗೊಲ್ಲರ ಗಮಾರ, ಅವನಿಗೆ ಏನು ಗೊತ್ತು ಕಸ್ತೂರಿ ಪರಿಮಳ ಪಾಪ ಅವಳು ಎಷ್ಟು ಚಂದದ ಹುಡುಗಿ, ಅವಳ ಜೊತೆಗೂ ಜಗಳ ಆಡ್ತಾನಲ್ಲ ಅವನ ಬಾಯಿಗೆ ಮಣ್ಣಾಕ” ಎಂದು ಅಲ್ಲಿ ನೀರಿಗಾಗಿ ಸೇರಿದ್ದ ನೀರೆಯರು ಮಾತನಾಡಿಕೊಳ್ಳುತ್ತಿದ್ದರು.

ಆಮೇಲೆ ಜಗಳ ಸ್ವಲ್ಪ ದಿನಕ್ಕೆಲ್ಲ ಕಡಿಮೆಯಾಗಿ ಮಾಮೂಲಿನಂತೆ ಆಯಿತು. ಹದಿಹರೆಯದವರು ಮೊದಮೊದಲು ಹೊಂದಾಣಿಕೆ ಕಷ್ಟವಾಗಿ ಅಸಹನೆಯಿಂದ ಜಗಳವಾಗುತ್ತಿದ್ದರೋ ಏನೋ. ಒಬ್ಬರು ಇನ್ನೊಬ್ಬರ ಮೇಲೆ ಅಧಿಕಾರ ಚಲಾಯಿಸಲು ಗಂಡ ಹೆಂಡತಿಯರಲ್ಲ. ಇಬ್ಬರೂ ಸ್ವತಂತ್ರ ಹಕ್ಕಿಗಳೆ. ಒಬ್ಬರು ಇನ್ನೊಬ್ಬರ ಅಧೀನದಲ್ಲಿ ಅವರಿಚ್ಛೆಯಂತೆ ನಡೆಯಲು ಮದುವೆಯ ಬಂಧನವಿರಲಿಲ್ಲ. ಅವರವರಿಗೆ ಇಷ್ಟ ಬಂದಂತೆ ಅವರಿದ್ದರು. ಹೀಗೆ ಸಣ್ಣ ಪುಟ್ಟ ವಿಚಾರಗಳಿಗೆ ಮಾತು ಬೆಳೆದು ಮನಸ್ತಾಪವಾಗುತ್ತಿತ್ತೇನೋ .ಮೊದಲೆಲ್ಲ ಎರಡು ಕಡೆ ಅಡಿಗೆ ತಯಾರಾಗುತ್ತಿತ್ತು. ನಂತರ ಒಂದೇ ಒಲೆ ಉರಿಯುತ್ತಿತ್ತು ( ಸೀಮೆ ಎಣ್ಣೆ ಸ್ಟೌ ) ಹಾಗೆ ಎರಡು ಹೃದಯಗಳು ಒಂದಾಗಿ ಒಂದೇ ಜೀವವಾಗಿ ಮಿಡಿಯತೊಡಗಿದವು. ಕೆಂಪ ಹಳ್ಳಿಯವನಾದರೂ ಅಷ್ಟೇನು ಅಮಾಯಕನಾಗಿರಲಿಲ್ಲ. ತಕ್ಕಮಟ್ಟಿಗೆ ಪಿಯುಸಿ ವರೆಗೂ ಓದಿಕೊಂಡಿದ್ದ. ಶಿಕ್ಷಣ ಅವನನ್ನು ಸಭ್ಯ ನಾಗರೀಕನನ್ನಾಗಿ ಮಾಡಿತ್ತು. ಕೆಂಪ ನೋಡಲು ಕೆಂಪಗೆ ದುಂಡಾಗಿದ್ದ. ಕಟ್ಟುಮಸ್ತಾದ ಆಳು, ಪೊಗದಸ್ತಾದ ಮೀಸೆ, ದುಂಡು ಮುಖ, ಬಲಿಷ್ಠ ಬಾಹುಗಳು ಅವನ ವ್ಯಕ್ತಿತ್ವಕ್ಕೆ ಮೆರುಗು ತಂದು ಕೊಟ್ಟಿದ್ದವು. ಇನ್ನು ಮಲ್ಲಿಕಾ ತೆಳ್ಳಗೆ ಬೆಳ್ಳಗೆ ತಿದ್ದಿ ತೀಡಿದ ಗೊಂಬೆಯಂತಿದ್ದಳು. ಆ ಕಾಲಕ್ಕೆ ಒಬ್ಬ ಅವಿವಾಹಿತನೊಂದಿಗೆ ಒಬ್ಬ ಅವಿವಾಹಿತ ಮಹಿಳೆ ಜೊತೆಯಲ್ಲಿ ವಾಸವಿದ್ದುದು ಒಂದು ರೀತಿಯ ಸೋಜಿಗವೇ ಆಗಿತ್ತು. ಹರೆಯದ ಆಕರ್ಷಣೆಗೆ ಅವರಿಬ್ಬರೂ ಒಳಗಾಗಿದ್ದರು. ಏಕಾಂತವು ಅವರಿಬ್ಬರ ಪ್ರೀತಿ ಚಿಗುರಲು ಸಹಕರಿಸಿತ್ತು.

ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಹಿಂದೆಯೇ ಲೀವಿನ್ ರಿಲೇಶನ್ ಶಿಪ್ ಚಾಲ್ತಿಯಲ್ಲಿತ್ತು ಎಂದಾಯಿತು. ಅಂದರೆ ಮದುವೆಯ ಬಂಧನವಿಲ್ಲದೆ ಜೊತೆಯಲ್ಲಿ ವಾಸವಿದ್ದು, ಸಹಜೀವನ ನಡೆಸುವ ಪರಿಕಲ್ಪನೆ.ಆ ಕಾಲಕ್ಕೇ ಇಂಥ ಸಂಬಂಧಗಳು ಇದ್ದುವೆಂದ ಮೇಲೆ ಇನ್ನು ಈಗಿರುವುದು ದೊಡ್ಡ ವಿಷಯವೇನಲ್ಲ ಎನಿಸುತ್ತದೆ. ಒಂದು ದಿನ ಇದ್ದಕ್ಕಿದ್ದಂತೆಯೇ ಮಲ್ಲಿಕಾಳ ಕೊರಳಿನಲ್ಲಿ ತಾಳಿ ಚೈನು ಕಾಣಿಸಿಕೊಂಡಿತ್ತು. ಜನರೆಲ್ಲ ಗುಸು ಗುಸು ಮಾತನಾಡಿಕೊಳ್ಳುತ್ತಿದ್ದರು. ಕೆಂಪಣ್ಣ ಮಲ್ಲಿಕಾ ಗುಟ್ಟಾಗಿ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದರು. ಈ ವಿಷಯ ಊರಿನಲ್ಲಿ ಸಂಚಲನ ಮೂಡಿಸಿತ್ತು. ಕೆಂಪಣ್ಣನ ಊರು ಪಕ್ಕದ ಗೊಲ್ಲರಹಟ್ಟಿಗೂ ಸುದ್ದಿ ಮುಟ್ಟಿತ್ತು. ಮಲ್ಲಿಕಾಳ ಊರು ಶಿರಾಗೂ ವಿಷಯ ರವಾನೆ ಆಗಿತ್ತು. ಬೆಂಕಿ ಮುಂದೆ ಬೆಣ್ಣೆ ಕರಗದಂಗೆ ಇರ್ತೈತಾ ಲಚ್ಮು ಎಂದಿದ್ದಳು ಪಕ್ಕದ ಮನೆಯ ಲಿಂಗಮ್ಮಜ್ಜಿ. ನಮ್ಮ ಅಮ್ಮ ಲಕ್ಷ್ಮಮ್ಮ ಲಚ್ಮು ಆಗಿದ್ದಳು ಅವಳ ಬಾಯಲ್ಲಿ. ನಮಗೆ ಬೆಂಕಿ ಬೆಣ್ಣೆಯ ಕಲ್ಪನೆ ಗೊತ್ತಿರಲಿಲ್ಲವಾದ್ದರಿಂದ ನಾವು ಸುಮ್ಮನೆ ನೋಡುತ್ತಿದ್ದೆವು. ಆದರೆ ಏನೋ ಒಂದು ರೀತಿಯ ಕುತೂಹಲ. ಎಷ್ಟು ದಿನ ತಾನೇ ಹಾಗೆ ಸುಮ್ಮನೆ ಜೊತೆಯಾಗಿರಲು ಸಾಧ್ಯ,ಮದುವೆ ಅಂತ ಆದರೆ ನಮ್ಮ ಬದುಕಿಗೂ ಭದ್ರತೆ ಇರುತ್ತದೆ ಅಂತ ಅನಿಸಿ, ಕೆಂಪಣ್ಣ ಮಲ್ಲಿಕಾ ವಿವಾಹ ಬಂಧನಕ್ಕೆ ಒಳಗಾಗಿದ್ದರು.

ಆದರೆ ಈ ವಿಷಯ ಕೆಂಪಣ್ಣನ ಮನೆಯಲ್ಲಿ ತಿಳಿದು ದೊಡ್ಡ ರಾದ್ದಾಂತವಾಯಿತು. ಕೆಂಪಣ್ಣನ ಅಕ್ಕ ತನ್ನ ಮಗಳನ್ನು ಕೆಂಪನಿಗೆ ಕೊಡಲು ತುದಿ ಗಾಲಲ್ಲಿ ನಿಂತಿದ್ದಳು. ಒಂದು ಗೌರ್ನಮೆಂಟ್ ಕೆಲಸ ಅಂತ ಆದ್ರೆ ಅವನಿಗೆ ತನ್ನ ಮಗಳನ್ನು ಕೊಟ್ಟು ತವರಿನ ಬಂಧವನ್ನು ಮುಂದುವರಿಸಬೇಕೆಂದಿದ್ದಳು. ಇದಕ್ಕೆ ಕೆಂಪಣ್ಣನ ಅಪ್ಪ ಅಮ್ಮನಿಗೂ ಸಹಮತವಿತ್ತು. ಆದರೆ ಬಣ್ಣದ ಬೆಡಗಿ ಮಲ್ಲಿಕಾಳನ್ನು ನೋಡಿ ಕೆಂಪಣ್ಣ ಕರಗಿ ನೀರಾಗಿದ್ದ. ತಾನೇ ತಾನಾಗಿ ಒಲಿದು ಬಂದಿರುವ ಸೌಂದರ್ಯ ದೇವತೆಯನ್ನು ಬುದ್ಧಿ ಇರುವ ಯಾರಾದರೂ ನಿರಾಕರಿಸುತ್ತಾರೆಯೇ. ಕೆಂಪನ ಅಕ್ಕ ರಾಮಕ್ಕ ಗೊಲ್ಲರಹಟ್ಟಿಯಿಂದ ದಂಡು ಕಟ್ಟಿಕೊಂಡು ಬಂದಳು. ಕೆಂಪಣ್ಣನನ್ನು ಕೊರಳ ಪಟ್ಟಿ ಹಿಡಿದು ಎಳೆದಾಡಿ ಹಿಗ್ಗಾಮುಗ್ಗ ಥಳಿಸಿಬಿಟ್ಟರು. ತಲೆಗೂ, ಮೂಗಿಗೂ ತುಂಬಾ ಪೆಟ್ಟಾಗಿ ಬಹಳ ದಿನಗಳವರೆಗೂ ಬ್ಯಾಂಡೇಸ್ ಹಾಕಿಕೊಂಡೆ ಓಡಾಡುತ್ತಿದ್ದ. ಕೊನೆಗೆ ಅಕ್ಕನ ಮಗಳು ರತ್ನಮ್ಮನನ್ನು ವಿವಾಹವಾಗಲು ಒಪ್ಪಿಕೊಂಡಿದ್ದ. ಹಾಗೇನಾದರೂ ಒಂದುವೇಳೆ ಮದುವೆಗೆ ಒಪ್ಪಿಕೊಳ್ಳದಿದ್ದರೆ ಕೆಂಪಣ್ಣನಿಗೆ ಮತ್ತೆ ಗೂಸ ಬೀಳುತ್ತಿದ್ದವು. ಹೇಗಿದ್ದರೂ ಮಲ್ಲಿಕಾಳನ್ನು ಅನಧಿಕೃತವಾಗಿ ಮದುವೆಯಾಗಿದ್ದರಿಂದ ಅವಳನ್ನು ಒಪ್ಪಿಸಿ ರತ್ನಮ್ಮನ ಕೊರಳಿಗೆ ತಾಳಿ ಕಟ್ಟಿದ.

ಫೋಟೋ ಕೃಪೆ : google

ಮಲ್ಲಿಕಾ ಮತ್ತು ಕೆಂಪಣ್ಣನ ಮದುವೆಗೆ ಮಲ್ಲಿಕಾಳ ಮನೆ ಕಡೆಯಿಂದ ಏನು ತಕರಾರು ಬಂದಿರಲಿಲ್ಲ.ಅದಕ್ಕೆಂತಲೇ ಮಲ್ಲಿಕಾ ಶಾಲೆ ಮುಗಿದ ಮೇಲೆ ಬೇಸಿಗೆ ರಜೆಯಲ್ಲಿ ತನ್ನ ತಂಗಿ ತಮ್ಮಂದಿರನ್ನು ಕರೆಸಿಕೊಂಡಿದ್ದಳು. ಎಲ್ಲಾದರೂ ಇರಲಿ ಮಲ್ಲಿಕಾ ಸುಖವಾಗಿರಲಿ ಎಂಬುದು ಅವಳ ಅಪ್ಪ ಅಮ್ಮನ ಅಭಿಮತ. ಆ ಕಾಲಕ್ಕೇ ಎಷ್ಟೊಂದು ಪ್ರಬುದ್ಧ ಚಿಂತನೆ. ಕೆಂಪಣ್ಣ ರತ್ನಮ್ಮನನ್ನು ಮದುವೆಯಾದ ಮೇಲೆ ಗೊಲ್ಲರಹಟ್ಟಿಗೆ ವಾರದಲ್ಲಿ ಮೂರು ದಿನ ಹೋಗಿ ಬರುವಂತೆ ಆಯ್ತು. ಮಲ್ಲಿಕಾಳೂ ನಿರೀಕ್ಷಿತ ಬದಲಾವಣೆಗೆ ಹೊಂದಿಕೊಂಡಿದ್ದಳು. ಅವನು ಗೊಲ್ಲರಹಟ್ಟಿಗೆ ಹೋಗಿ ಬರಲು ಅವಳದ್ದೇನೂ ತಕರಾರಿರಲಿಲ್ಲ. ಮದುವೆಯಾಗಿ ಒಂದು ವರ್ಷ ತುಂಬುವುದರೊಳಗೆ ಮಲ್ಲಿಕಾ ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಳು. ಆದರೆ ಗೊಲ್ಲರ ಹಟ್ಟಿಯಲ್ಲಿ ತೊಟ್ಟಿಲು ತೂಗಲಿಲ್ಲ. ಕೆಂಪಣ್ಣನಿಗೆ ಉಭಯ ಸಂಕಟವಾಯಿತು. ಮಲ್ಲಿಕಾಳಿಗೆ ಗಂಡು ಮಗುವಾಗಿದ್ದಕ್ಕೆ ಖುಷಿ ಪಡಬೇಕೋ, ರತ್ನಮ್ಮನಿಗೆ ಮಗು ಆಗದಿದ್ದಕ್ಕೆ ದುಃಖ ಪಡಬೇಕೋ ಒಂದೂ ತಿಳಿಯದಾಯಿತು ಅವನಿಗೆ.

ಹೀಗೆ ನಾಲ್ಕೈದು ವರ್ಷ ಕಳೆಯಿತು. ಮಲ್ಲಿಕಾಳ ಮಗ ಶಾಲೆಗೆ ಹೋಗುವಷ್ಟು ದೊಡ್ಡವನಾದ. ಆದರೂ ರತ್ನಮ್ಮನ ಗರ್ಭದ ಕುಡಿ ಚಿಗುರೊಡೆಯಲಿಲ್ಲ.ರತ್ನಮ್ಮ ಆಗೀಗ ಕ್ವಾಟ್ರಸ್ ಗೂ ಬರತೊಡಗಿದಳು. ಮಲ್ಲಿಕಾಳ ಮಗನ ಮುದ್ದು ಮುದ್ದು ಮಾತುಗಳಿಗೆ ಮನಸೋತಿದ್ದಳು. ಮಕ್ಕಳಿಲ್ಲದ ರತ್ನಮ್ಮನಿಗೆ ಮಕ್ಕಳೆಂದರೆ ಪಂಚಪ್ರಾಣ. ಮಲ್ಲಿಕಾಳ ಮಗನ ಮೇಲಿನ ಪ್ರೀತಿಯ ಸೆಳೆತದಿಂದ ರತ್ನಮ್ಮ ಯಾವಾಗಲೂ ಅಲ್ಲೇ ಇರ ತೊಡಗಿದಳು. ಅವನ ಊಟ, ತಿಂಡಿ,ಸ್ನಾನ ,ಆಟ, ಪಾಠ ಎಲ್ಲವನ್ನು ಅವಳೇ ನೋಡಿಕೊಳ್ಳುತ್ತಿದ್ದಳು. ಕೊನೆಗೆ ಗೊಲ್ಲರಹಟ್ಟಿಯ ಕಡೆಗೆ ಹೋಗದಾದಳು. ಈ ನಡುವೆ ಕೆಂಪಣ್ಣನಿಗೆ ಪ್ರಮೋಷನ್ ಆಗಿದ್ದರಿಂದ ಆತ ಮುಂದಿನ ಊರಿಗೆ ಸಂಸಾರ ಸಮೇತ ಶಿಫ್ಟ್ ಆಗುತ್ತಾನೆ ರತ್ನಮ್ಮ ಮತ್ತು ಮಲ್ಲಿಕಾ ಸಮೇತ. ಹೀಗೆ ಮಲ್ಲಿಕಾಳ ಮಗನ ದೆಸೆಯಿಂದ ಎರಡು ಕುಟುಂಬಗಳು ಒಂದಾಗುತ್ತವೆ. ಪೂಜಿಸಿದರೆ ದೇವರು ಭಾವಿಸಿದರೆ ಮಕ್ಕಳು ಎಂಬಂತೆ ಮಲ್ಲಿಕಾಳ ಮಗು ರತ್ನಮ್ಮನನ್ನು ಹೆಚ್ಚಾಗಿ ಹಚ್ಚಿಕೊಂಡು ಬೆಳೆಯುತ್ತದೆ. ರತ್ನಮ್ಮನಿಗೂ ತಾಯಿಯ ಅನುಭೂತಿಯನ್ನು ನೀಡುತ್ತದೆ. ಒಟ್ಟಿನಲ್ಲಿ ಕೆಂಪಣ್ಣನ ಪ್ರೇಮ ಪ್ರಸಂಗ ಸುಖಾಂತ್ಯ ಕಾಣುತ್ತದೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಂ – ಶಿಕ್ಷಕಿ ಗೌರಿಬಿದನೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW