ಚುಕ್ಕಿ…? ಹೆಸರಿನ ಪುಸ್ತಕದ ಕಥಾವಸ್ತು ಒಂದು ವಿಭಿನ್ನ ವಿಶಿಷ್ಟವಾದದ್ದು. ಇದನ್ನು ಓದಿ ಕಣ್ತುಂಬಿಕೊಳ್ಳದಿರಲು ಸಾಧ್ಯವಿಲ್ಲ. ಇಲ್ಲಿ ತಾಯಿಯೊಬ್ಬಳು ತನ್ನ ಮಗುವಿಗೆ ಬರೆದ ಪತ್ರಗಳ ಸಾರವಿದೆ. ಇಂಥ ಬರವಣಿಗೆ ಮತ್ತೊಂದಿದೆ ಎಂದು ನನಗೆ ಅನಿಸುವುದಿಲ್ಲ. ಗದ್ಯ ಮತ್ತು ಪದ್ಯಗಳ ಮಿಶ್ರಣ ಈ ಪುಸ್ತಕದ ವಿಶೇಷತೆಯಾಗಿದೆ. ಇದು ಭಾಗ-೧ ಆಗಿದ್ದು, ಭಾಗ-೨ ಮುಂದೆ ಬರಲಿದೆ.
ಪುಸ್ತಕದ : ಚುಕ್ಕಿ…?
ಲೇಖಕರು : ಶ್ರೀದೇವಿ.ಬಿ.ಹೂಗಾರ
ಪ್ರಕಾಶನ : ನಿವೇದಿತಾ ಹೂಗಾರ ಪ್ರಕಾಶನ
ಬೆಲೆ : 150 ರೂಪಾಯಿ
ಖರೀದಿಗಾಗಿ : 8073084423.
2016 ರಲ್ಲಿ ಪ್ರಾರಂಭವಾದ ಪ್ರಥಮ ಪತ್ರದಲ್ಲಿ

ನಗುವ ನಯನಗಳಲ್ಲಿ
ನೋವು ತುಂಬಿದ ಕಂಬನಿಯ ಭಾರ
ಹೊರ ಬರಲೆಂದು ಕಾತರಿಸುವ
ತಳಮಳ ಪ್ರತಿಕ್ಷಣವು!
ಎಂದು ಕೆಲವು ಪದ್ಯಗಳ ಸಾಲುಗಳ ನಂತರ ಗದ್ಯದಲ್ಲಿ , ‘ಅತ್ತಲಿತ್ತ ಸುಳಿದು ಮತ್ತೆ ಮತ್ತೆ ಕೂಗುವ ಧ್ವನಿ ಒಮ್ಮೆಲೇ ನಿಶ್ಯಬ್ದವಾಯಿತು ನಾನೊಂದು ಸ್ತಬ್ದ ಚಿತ್ರವಾದೆ….’ಎಂದು ಮುಂದುವರೆದಿದೆ.
ಈ ಪುಸ್ತಕದಲ್ಲಿನ ಬರವಣಿಗೆ ಎಲ್ಲೋ ಸಣ್ಣದಾಗಿ ಬೇಂದ್ರೆಯವರ ಬರವಣಿಗೆಯನ್ನು ನೆನಪಿಸಿ ಹೋಗುತ್ತದೆ ತಾಯಿಯ ಕರುಳಲ್ಲಿ ತನ್ನ ಮಗಳಿಗಾಗಿ ಇರುವ ತುಡಿತದ ಎಳೆಗಳು ಹೃದಯ ಮುಟ್ಟಿಹೋಗುತ್ತವೆ.
ಕರುಳ ಗುಡಿಯಲ್ಲಿ ಕರ್ಪೂರದ ಗೊಂಬೆ
ನೀನು ಹೊರ ಬಂದರೆ
ಕರಗುವೆ ಎಂಬುದು ತಿಳಿದಿದ್ದರೆ
ಜೀವನವಿಡೀ ಗರ್ಭದೊಳು ಸಂರಕ್ಷಿಸಿ ಇಡುತ್ತಿದ್ದೆ.
ಇಂಥ ಅನೇಕಾನೇಕ ಸಾಲುಗಳು ಮೇಲಿಂದ ಮೇಲೆ ಕರುಳು ಚಿವುಟಿದ ಅನುಭವ ನೀಡುತ್ತವೆ! ಹೌದು ವರ್ಷದ ಹಿಂದೆ ತಮ್ಮನ್ನು ಅಗಲಿ ಹೋದ ಮಗಳಿಗಾಗಿ ಬರೆದ ಪತ್ರಗಳು ಇವು! ಮಹಾಮಾರಿಯಾಗಿ ಕಾಡಿತ್ತು ಡೆಂಗ್ಯೂ ಇನ್ನೂ ಹನ್ನೊಂದು ವರ್ಷಗಳನ್ನೂ ಕಳೆದಿರದ ನಿವೇದಿತಾಳನ್ನು ಬಲಿ ತೆಗೆದುಕೊಂಡಿತ್ತು! ಚುಕ್ಕಿ ಬಾನಿನ ಚುಕ್ಕಿಯಾದಳು!

ಜುಲೈ07, 2016 ರಂದು ಬರೆದ ಪತ್ರದಲ್ಲಿ,”ಏನು ಚೆನ್ನಾಗಿದ್ದೀಯಾ? ಯಾವಾಗ್ಲೂ ನಾನು ಏಳುವ ಮುಂಚೆಯೇ ನೀನು ಎದ್ದು ಸ್ನಾನ ಮಾಡಿ ತಯಾರಾಗಿ ಶಾಲೆ ಬ್ಯಾಗ್ ರೆಡಿ ಮಾಡ್ತಿದ್ದೆ ಈಗೇನೂ ಬೇಗ ಏಳಬೇಡ ಆರಾಮಾಗಿ ಮಲಗು ಯಾರಿಗೂ ತೊಂದರೆ ಕೊಡದ ಅಪರೂಪದ ಅಪ್ರತಿಮ ದೇವತೆ ಅಂದರೆ ನೀನೇ ನನ್ನ ಕುಡಿ ಚುಕ್ಕಿ.” ಭೂಮಿಯ ಮೇಲೆಯೇ ಇಲ್ಲದ ಮಗಳಿಗೆ, ಈ ರೀತಿ ಹೇಳುವುದನ್ನು ಓದಿದಾಗ ಗಂಟಲುಬ್ಬಿ ಬರುತ್ತದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಲೇಖಕಿಯು, ತನ್ನ ಮಗಳು ಎಲ್ಲೋ ಹುಟ್ಟಿ ಬಂದಿದ್ದಾಳೆ ಅವಳು ಒಂದಲ್ಲ ಒಂದು ದಿನ ತನ್ನ ಮುಂದೆ ಬಂದು ನಿಲ್ಲುತ್ತಾಳೆ ಎಂದು ನಂಬಿದ್ದಾರೆ. ನಿನ್ನ ರೂಪ ಬೇರೆ ಆಗಿದ್ದರೂ ನನ್ನ ಕರುಳು ನಿನ್ನನ್ನು ಗುರುತಿಸುತ್ತದೆ. ನೀನು ಯಾವಾಗ್ಲೂ ಹೇಳುತ್ತಿದ್ದಿಯಲ್ಲ ನಾನು ಡಿ.ಸಿ ಆಗುತ್ತೇನೆ ಎಂದು ಅದಕ್ಕಾಗಿ ನೀನು ತುಂಬಾ ಪರಿಶ್ರಮ ಹಾಕು ಎಂದು ನೆನಪಿಸುತ್ತಾರೆ.

ಇಲ್ಲಿ ಲೇಖಕಿ ಮಗಳು ನಿವೇದಿತಾ ಅಂದರೆ ಚುಕ್ಕಿಯ ಮುಂದೆ, ಒಮ್ಮೆ ನೋವು ಸಂಕಟ ಹೇಳಿಕೊಳ್ಳುವ ಸಹೋದರಿಯಾಗುತ್ತಾರೆ, ಒಮ್ಮೆ ತಾಯಿಯ ಮುಂದೆ ಎದೆ ಬಿರಿಯುವಂತೆ ಅಳುವ ಮಗಳಾಗುತ್ತಾರೆ. ಒಮ್ಮೆ ಆಗು ಹೋಗುಗಳನ್ನು ಹೇಳಿಕೊಳ್ಳುವ ಸ್ನೇಹಿತೆಯಾಗುತ್ತಾರೆ. ಇಲ್ಲಿನ ಪತ್ರಗಳು ಕೇವಲ ಅಮ್ಮ ಮಗಳ ನಡುವಿನ ದುಃಖದ ಅಗಲಿಕೆಯ ಅಭಿವ್ಯಕ್ತಿಯಾಗಿರದೇ ಸಮಾಜದ ದೇಶದ ಸ್ಥಿತಿ ಗತಿಗಳನ್ನೂ ಮಗಳೊಂದಿಗೆ ಹಂಚಿಕೊಳ್ಳುವ ಮೂಲಕ ಬರಹಗಾರರಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಕಳಕಳಿಯನ್ನು ಮೆರೆದಿದ್ದಾರೆ. ಉದಾ: ‘ಯಾರಿಗೆ ಕೇಳೋದು ನ್ಯಾಯ..,?’ ಅನ್ನೋ ಶೀರ್ಷಿಕೆ ಅಡಿಯ ಕವನದಲ್ಲಿ,
ನನ್ನ ಇತಿಹಾಸ ಪುಟದಲ್ಲಿ ಹರಿವ ಗಂಗೆ
ಇಂದು ಹೊಲಸು ನೀರು ರೋಗಗಳ ಬೀಡು
ನನ್ನ ಕನ್ನಡತಿ ಕಾವೇರಿ ತಮಿಳಿನ ಹಿತೈಷಿ….
ಹೀಗೇ ಮುಂದುವರೆಯುತ್ತದೆ. ಒಟ್ಟಾರೆ ಇದು ಅಪರೂಪದ ಪುಸ್ತಕ.
- ಮಂಜುಳಾ (ಹರಿ ನೇತ್ರಾ)
