ನಾನಿಲ್ಲದ ಮನೆಯದು ಕಸದ ಕೂಪ…ನಾನಿದ್ದರೆ ಕಳೆ ತುಂಬುವುದು ನಂದಾದೀಪ…ನಾನು ಶಕ್ತಳು…ಮಂಜುಳಾ (ಹರಿ ನೇತ್ರಾ) ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಾನು ಸಶಕ್ತಳು..ನೀನಿಲ್ಲದೇ ನಾ ಬಾಳಬಲ್ಲೆ
ನಾ ಮಾಡುವುದನ್ನು
ನೀನೆಂದೂ ಮಾಡಲಾರೆ;
ಆದರೂ ಕಾಣೇ ಆ ಒಣಜಂಭವೇಕೋ…
ನಾನು ಸೃಷ್ಟಿ ನಾನು ಶಕ್ತಿ
ನಾನು ಕ್ಷಮೆ ನಾನು ಭೂಮಿ
ನಾನು ಮಿಂಚು ನಾನು ಬೆಳಕು
ನಾನಿದ್ದರೇ ಉದ್ಧಾರ ನಿನ್ನ ಬದುಕು
ಆದರೇನೂ ಕಡಿಮೆಯಿಲ್ಲ ನಿನ್ನ ಕುಹಕ..!
ಲಾಲನೆಗೆ ನನ್ನ ಮಡಿಲು
ಪಾಲನೆಗೆ ನನ್ನ ಒಡಲು
ಪಾಠಕ್ಕೆ ಬೇಕೇ ಬೇಕು ತಾಯಿ
ಆಟಕ್ಕೂ ನಾನು ಸೈ ಸೈಯಿ
ಮಗುವ ರಮಿಸುವ ಜಂಜಡವನೊಲ್ಲದ
ನಿನಗೇಕೋ ನನ್ನೆಡೆಗೆ ಕಡೆಗಣ್ಣು…?!
ನಾನಿಲ್ಲದ ಮನೆಯದು ಕಸದ ಕೂಪ
ನಾನಿದ್ದರೆ ಕಳೆ ತುಂಬುವುದು ನಂದಾದೀಪ
ನನ್ನಿಂದಲೇ ನಿನಗೊಂದು ಗತ್ತು ಗಮ್ಮತ್ತು
ಅದಕ್ಕೂ ತಕರಾರು ನೂರೆಂಟು ನನಗೆ ಗೊತ್ತು
ಏಕೆಂದರೆ ನಾನು, ನಾನು “ಕೇವಲ” ಹೆಣ್ಣು ..,
ನಿನ್ನ ‘ಅಹಂ’ ಗೆ “ಒಗರಾದ”… ಹಣ್ಣು…!!
- ಮಂಜುಳಾ (ಹರಿ ನೇತ್ರಾ)
