ಸೋಲಿಲ್ಲದ ಸರದಾರ

ಗೆಲುವೆಂದರೆ ಹಣವಲ್ಲ, ಗೆಲುವೆಂದರೆ ಹೆಸರಲ್ಲ, ಗೆಲುವೆಂದರೆ ಇನ್ನೊಬ್ಬರನ್ನು ಅಹಂಕಾರದಿಂದ ತನ್ನ ನಿಯಂತ್ರಣದಲ್ಲಿರಿಸಿಕೊಳ್ಳುವುದಲ್ಲ, ಗೆಲುವೆಂದರೆ ಯಾರನ್ನೋ ನೋಯಿಸುವುದಲ್ಲ, ಗೆಲುವೆಂದರೆ ಗುಲ್ಲೆಬ್ಬಿಸುವುದಲ್ಲ, ಗೆಲುವೆಂದರೆ ಇನ್ನೊಬ್ಬರ ಕಣ್ಣೀರು ಹಾಕಿಸುವುದಲ್ಲ. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಓದಿ…

ಸೋಲು ಗೆಲುವು ಎನ್ನುವ ಮಾನದಂಡಗಳು ಮನುಷ್ಯ ಪ್ರಪಂಚದಲ್ಲಿ ಮಾತ್ರ ಇರುವಂತಹವು. ಸೋಲಲು ಒಪ್ಪದ ಮನುಷ್ಯ ಸದಾ ಗೆಲುವು ತನ್ನದೇ ಆಗಿರಬೇಕು ಎನ್ನುತ್ತಾನೆ. ಕೊನೆಯ ಪಕ್ಷ ತಾನು ಗೆಲ್ಲದಿದ್ದರೂ ತನಗಾಗದವರು ಸೋಲಬೇಕು ಎನ್ನುವ ಹೀನ ಮನಸ್ಥಿತಿ ಈ ಮನುಷ್ಯ ಹೊಂದಿದ್ದಾನೆ.

ಏನೇ ಇರಲಿ, ಯಾವುದೇ ಕ್ಷೇತ್ರವಿರಲಿ ಉದಾಹರಣೆಗೆ ಚಲನಚಿತ್ರ, ಬರಹ ಲೋಕ, ರಾಜಕೀಯ ಹೀಗೆ ಪ್ರತಿ ಕ್ಷೇತ್ರದಲ್ಲಿ ಮನುಷ್ಯ ಸೋಲಿಲ್ಲದ ಸರದಾರನಾಗಬೇಕೆಂದು ಬಯಸುತ್ತಾನೆ ಆದರೆ ಪ್ರಪಂಚದ ಯಾವುದೇ ಮೂಲೆಯನ್ನು ಹುಡುಕಿ, ಯಾವುದೇ ಕ್ಷೇತ್ರವನ್ನು ಅವಲೋಕಿಸಿ ನೋಡಿ, ಎಲ್ಲಾ ಸಮಯದಲ್ಲಿ ಎಲ್ಲರ ನಡುವೆ ಸೋಲದೆ, ಸದಾ ಗೆಲುವು ಸಾಧಿಸಿ ಸರದಾರನಾಗಿ ಉಳಿದ ಯಾವ ವ್ಯಕ್ತಿಯ ಉಲ್ಲೇಖ ನಮಗೆ ಸಿಗಲಾರದು.

ಹೀಗಾಗಿ ನನ್ನ ವೈಯಕ್ತಿಕ ನೆಲೆಯಲ್ಲಿ, ನನ್ನ ವ್ಯಕ್ತಿಗತ ಅನುಭವದಲ್ಲಿ ನಾನು ನಂಬಿರುವುದೇನೆಂದರೆ ‘ನಾನು ನನ್ನ ಬದುಕಿನಲ್ಲಿ, ಸೋಲಿಲ್ಲದ ಸರದಾರನಾಗಿರಬೇಕೇ ಹೊರತು ಇನ್ನೊಬ್ಬರ ಬದುಕಿನಲ್ಲಲ್ಲ’ ಅಂದರೆ ನಮ್ಮ ವೈಯಕ್ತಿಕ ಬದುಕಲ್ಲಿ ನಮ್ಮನ್ನು ಸೋಲಿಸಲು ಬರುವ ಸಂಕಷ್ಟಗಳನ್ನು ಎದುರಿಸಿ ಎದ್ದು ನಿಂತು ಬದುಕು ಮಾಡುವುದೇ ನಮ್ಮ ಗೆಲುವು. ಆಗ ಮಾತ್ರ ನಾವು ನಮ್ಮ ಬದುಕಿನ ಸೋಲಿಲ್ಲದ ಸರದಾರರಾಗುತ್ತೇವೆ.

ಫೋಟೋ ಕೃಪೆ : google

ಬದುಕಿನ ದಾರಿಯಲ್ಲಿ ಹಣದ ಸಮಸ್ಯೆ ಬರಬಹುದು, ಆರೋಗ್ಯ ಸಮಸ್ಯೆ ಬರಬಹುದು, ಆಸ್ತಿ ಅಂತಸ್ತಿನ ಸಮಸ್ಯೆ ಎದುರಾಗಬಹುದು, ಯಾರೋ ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡಬಹುದು ಹೀಗೆ ಏನೇ ಸವಾಲುಗಳು ಬಂದರೂ ನಮ್ಮೊಳಗೆ ನಾವು ಸೋಲಬಾರದು.

ನೆನಪಿಡಿ, ನಡೆಯುವಾಗ ಬಿದ್ದರೆ ಎದ್ದೇಳಬಹುದು, ಬೆಟ್ಟದ ಮೇಲಿಂದ ಬಿದ್ದರೆ ಎದ್ದೇಳಬಹುದು ಆದರೆ ಯಾವ ಮನುಷ್ಯ ತನ್ನ ದೃಷ್ಟಿಯಲ್ಲಿ ತಾನೇ ಬೀಳುವನೋ ಅವನನ್ನು ಯಾವ ಕಾಲಕ್ಕೂ ಯಾರೂ ಎಬ್ಬಿಸಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಆಂತರಿಕ ಪ್ರಪಂಚದಲ್ಲಿ ಬೀಳಬಾರದು ಎಂಬ ದೃಢತೆ ಬಂದಾಗ ಮಾತ್ರ ನಾವು ನಮ್ಮ ಬದುಕಲ್ಲಿ ಸೋಲಿಲ್ಲದ ಸರದಾರರಾಗುತ್ತೇವೆ.

ಗೆಲುವೆಂದರೆ ಹಣವಲ್ಲ, ಗೆಲುವೆಂದರೆ ಹೆಸರಲ್ಲ, ಗೆಲುವೆಂದರೆ ಇನ್ನೊಬ್ಬರನ್ನು ಅಹಂಕಾರದಿಂದ ತನ್ನ ನಿಯಂತ್ರಣದಲ್ಲಿರಿಸಿಕೊಳ್ಳುವುದಲ್ಲ, ಗೆಲುವೆಂದರೆ ಯಾರನ್ನೋ ನೋಯಿಸುವುದಲ್ಲ, ಗೆಲುವೆಂದರೆ ಗುಲ್ಲೆಬ್ಬಿಸುವುದಲ್ಲ, ಗೆಲುವೆಂದರೆ ಇನ್ನೊಬ್ಬರ ಕಣ್ಣೀರು ಹಾಕಿಸುವುದಲ್ಲ.

ಗೆಲುವೆಂದರೆ ಸ್ವಾಭಿಮಾನದ ಬದುಕು ನಡೆಸುವುದು, ಗೆಲುವೆಂದರೆ ನಿರ್ಭಿಡೆಯಿಂದ ಇರುವುದು, ಗೆಲುವೆಂದರೆ ನಿರ್ಭಯದಿಂದ ಬದುಕುವುದು, ಗೆಲುವೆಂದರೆ ನಯ ವಿನಯದಿಂದ ನಡೆದುಕೊಳ್ಳುವುದು, ಗೆಲುವೆಂದರೆ ಇನ್ನೊಬ್ಬರನ್ನು ಗೌರವಿಸುವುದು, ಗೆಲುವೆಂದರೆ ಇನ್ನೊಬ್ಬರನ್ನು ನಗಿಸುವುದು, ಗೆಲುವೆಂದರೆ ಮತ್ತೊಬ್ಬರನ್ನು ಪ್ರೋತ್ಸಾಹಿಸುವುದು.

ಹೀಗಾಗಿ ಇಷ್ಟು ವರ್ಷಗಳ ನನ್ನ ಬದುಕಿನಲ್ಲಿ, ನಾನು ಓದಿದ ಅಕ್ಷರಗಳಲ್ಲಿ, ಸಾಹಿತ್ಯದಲ್ಲಿ, ನಾನು ಕಂಡ ಇಷ್ಟು ಜನರಲ್ಲಿ ಒಬ್ಬನೇ ಒಬ್ಬ ಸೋತ ವ್ಯಕ್ತಿ ಇದ್ದಾನೆ ಎಂದೆನಿಸಿಲ್ಲ ಏಕೆಂದರೆ ನನ್ನ ದೃಷ್ಟಿಯಲ್ಲಿ ಯಾರೋ ಒಬ್ಬ ಸೋತವ ಎನಿಸಬಹುದು, ನನ್ನ ಮಾನದಂಡದಲ್ಲಿ ಮತ್ತೊಬ್ಬ ಸೋತ ಹಾಗೆ ಕಾಣಬಹುದು ಆದರೆ ಅವರವರ ವೈಯಕ್ತಿಕ ಜೀವನದಲ್ಲಿ ಪ್ರತಿಯೊಬ್ಬರೂ ಅವರ ವೈಯಕ್ತಿಕ ಸವಾಲುಗಳ ಮುಂದೆ ಗೆದ್ದು ಜೀವನ ನಡೆಸುತ್ತಿರುತ್ತಾರೆ ಎಂದರೆ ಅವರೆಲ್ಲ ಅವರವರ ಬದುಕಿನ ಸೋಲಿಲ್ಲದ ಸರದಾರರು ಎಂಬುದು ನನ್ನ ಭಾವನೆ.

ಹಾಗಾದರೆ ಸೋಲಿಲ್ಲದ ಸರದಾರ ಎಂಬುವವರು ಯಾರೂ ಇಲ್ಲವೇ?!

ಉದಾಹರಣೆಯ ಸಹಿತ ಹೇಳುವುದಾದರೆ:

ನನ್ನ ತಿಳುವಳಿಕೆಯ ಕ್ಷಿತಿಜದಲ್ಲಿ ನಾನು ಕಂಡಂತೆ ರಾಮಾಯಣದ ಹನುಮ ಮಾತ್ರ ಸೋಲಿಲ್ಲದ ಸರದಾರ ಎಂದೆನಿಸಿದ್ದು ಸುಳ್ಳಲ್ಲ. ರಾಮ, ಲಕ್ಷಣ, ರಾವಣ, ಸೀತೆ, ಭರತ ಪ್ರತಿಯೊಬ್ಬರೂ ಒಂದಿಲ್ಲ ಒಂದು ಸಮಯದಲ್ಲಿ ದುಃಖಿಯಾಗಿ ಸೋತ ಹಾಗೆ ಕಾಣುತ್ತಾರೆ. ಆದರೆ ಹನುಮ ಮಾತ್ರ ಎಲ್ಲಾ ಸಮಯದಲ್ಲೂ ಸ್ಥಿತಪ್ರಜ್ಞೆ ಹೊಂದಿ ಸದಾ ಹಸನ್ಮುಖಿಯಾಗಿದ್ದು ಸಮ ಸ್ಥಿತಿಯಲ್ಲಿರುವ ಪಾತ್ರವಾಗಿದ್ದಾನೆ.

ದಾಸನಿಂದ ದೇವನಾದ ಏಕ ಮಾತ್ರ ಪಾತ್ರ ಹನುಮನದು. ಇಡೀ ರಾಮಾಯಣದ ಪಾತ್ರಗಳಲ್ಲಿ ಪ್ರತ್ಯೇಕ ಮಂದಿರ ಹೊಂದಿದ ಕೆಲವೇ ಕೆಲವು ಪಾತ್ರಗಳಲ್ಲಿ ಹನುಮನು ಕೂಡ ಒಬ್ಬ. ಸೀತೆಗೆ ಲಕ್ಷ್ಮಣನಿಗೆ ಪ್ರತ್ಯೇಕ ಮಂದಿರವಿಲ್ಲ. ಆದರೆ ಹನುಮನಿಗೆ ಪ್ರತಿ ಹಳ್ಳಿ, ನಗರಗಳಲ್ಲಿ, ಗಲ್ಲಿ ಗಳ್ಳಿಯಲ್ಲಿ ಪ್ರತ್ಯೇಕ ಮಂದಿರ ಸಿಗುತ್ತದೆ.

ಈ ಸೋಲಿಲ್ಲದ ಸರದಾರನ ಮುಖ್ಯ ಗುಣ ಲಕ್ಷಣಗಳನ್ನು ತಿಳಿದರೆ ನಾವು ಕೂಡ ಸೋಲಿಲ್ಲದ ಸರದಾರರಾಗಬಹುದು.

ಫೋಟೋ ಕೃಪೆ : google

1) ಹೊಂದಿಕೊಳ್ಳುವ ಗುಣ (Flexible):

ಪ್ರತಿ ಸಂದರ್ಭಕ್ಕೆ ತಕ್ಕಂತೆ ಬಾಗುವ, ಹೊಂದಿಕೊಳ್ಳುವ ಗುಣ ಹನುಮನಲ್ಲಿತ್ತು. ಸೊಳ್ಳೆಯಂತೆ ಸಣ್ಣವನಾಗುವುದು ಗೊತ್ತು, ನೋಡಲಾಗದಷ್ಟು ಬೃಹತ್ ದೈತ್ಯಕಾರವಾಗಿ ಬೆಳೆದು ನಿಲ್ಲುವುದು ಹನುಮನಿಗೆ ತಿಳಿದಿದೆ.

ಸಾಗರೋಲ್ಲಂಘನ ಮಾಡುವಾಗ ಸಾಗರದ ಮಧ್ಯ ದುತ್ತೆಂದು ದೈತ್ಯಕಾರವಾಗಿ ಅಡ್ಡಲಾಗಿ ಬಾಯಿ ತೆರೆದು ನಿಂತ ಸುರಸಾಳ ಮುಂದೆ 32 ಯೋಜನೆಯಷ್ಟು ಎತ್ತರವಾಗಿ ಬೆಳೆದು ನಿಲ್ಲುತ್ತಾನೆ (1ಯೋಜನಾ = 13km). ಅಂದರೆ ಅಂದಾಜು 416 km ಎತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಅರ್ಧಕ್ಕಿಂತ ಹೆಚ್ಚಿನ ಕರ್ನಾಟಕದಷ್ಟು ಎತ್ತರ.

ಸೀತಾ ಮಾತೆಯ ಹತ್ತಿರ ಬಂದಾಗ ಸಣ್ಣ ಸಣಕಲು ವಾನರನಾಗಿ ಕಾಲ ಬಳಿ ವಿನಯತೆಯಿಂದ ನಿಂತಿರುತ್ತಾನೆ. ಇವನ ಸಣಕಲು ಆಕಾರ ನೋಡಿ ಇಂತಹ ಸಣಕಲು ವಾನರ ಸೈನ್ಯದಿಂದ ರಾಮ ಈ ರಾವಣನನ್ನು ಗೆಲ್ಲುತಾನೆಯೇ ಎಂದು ಸಂಶಯ ವ್ಯಕ್ತಪಡಿಸಿದಾಗ ಹನುಮ ಆಕಾಶದೆತ್ತರ ಬೆಳೆದು ನಿಲ್ಲುತ್ತಾನೆ. ಯಾರ ಮುಂದೆ, ಯಾವ ಸಮಯದಲ್ಲಿ ತಮ್ಮ ತಾಕತ್ತನ್ನು ತೋರಿಸಬೇಕು ಅಲ್ಲಿಯೇ ತೋರಿಸಬೇಕು.

ಯಾರಿಗೆ ಈ ಸ್ಥಿತಿಸ್ಥಾಪಕತ್ವ (elasticity) ಗುಣವಿದೆಯೋ ಅವರು ಮಾತ್ರ ಜೀವನದಲ್ಲಿ ಗೆಲ್ಲುತ್ತಾರೆ.

ರಾವಣ ಕಠಿಣ (Rigid) ವ್ಯಕ್ತಿತ್ವ ಹೊಂದಿದ್ದ ಏಕೆಂದರೆ ಅವನಲ್ಲಿ ತನಗಿಂತ ಶ್ರೇಷ್ಠ ಯಾರೂ ಇಲ್ಲಾ ಎನ್ನುವ ಘಮಂಡ್ ಇತ್ತು. ಹತನಾದ. ಹೀಗೆ ರಿಜಿಡ್ ಇರುವವರು ಗೆಲ್ಲಲು ಸಾಧ್ಯವೇ ಇಲ್ಲಾ.

2)ಸಮಯ ಪ್ರಜ್ಞೆ :

ವಾಲಿಯ ವಧೆಯ ನಂತರ ಸುಗ್ರೀವ ರಾಜನಾದ. ರಾಮನಿಗೆ ಮಾತು ಕೊಟ್ಟಂತೆ ಸೀತೆಯ ಹುಡುಕಲು ಸಹಾಯ ಮಾಡುವ ಮಾತನ್ನು ಮರೆತು ವಿಲಾಸಿ ಹವ್ಯಾಸದಲ್ಲಿ ಮುಳುಗಿಬಿಟ್ಟ. ಶಾಂತ ಸ್ವರೂಪ ರಾಮನು ಕೂಡ ಕ್ರೋಧಿತನಾಗಿ ಲಕ್ಷ್ಮಣನಿಗೆ ಹೀಗೆ ಆಜ್ಞೆ ಇತ್ತ “ಯಾವ ಬಾಣದಿಂದ ನಾನು ವಾಲಿಯನ್ನು ಕೊಂದೆನೋ ಅದೇ ಬಾಣದಿಂದ ಸುಗ್ರೀವನನ್ನು ಕೊಂದು ಬಾ” ಎಂದು. ಮೊದಲೇ ಕೋಪಿಷ್ಠ ಲಕ್ಷಣ, ಅಣ್ಣನ ಮಾತುಗಳಿಂದ ಬಿಲ್ಲು ಬಾಣ ಹೊತ್ತು ಸುಗ್ರೀವನನ್ನು ಹುಡುಕಲು ಪ್ರಾರಂಭಿಸಿದ. ಕ್ರೋಧಿತ ಲಕ್ಷ್ಮಣನನ್ನು ತಡೆಯುವ ತಾಕತ್ತು ಯಾರಲ್ಲಿಯೂ ಇರಲಿಲ್ಲ.

ಆಗ ಹನುಮ ಅಲ್ಲಿಗೆ ಬಂದವನೇ ರಾಮನ ಸ್ತುತಿ ಮಾಡಲು ಪ್ರಾರಂಭಿಸಿದ. ರಾಮನ ಸ್ತುತಿ ಮುಗಿಯುವವರೆಗೆ ಲಕ್ಷಣ ಅಲ್ಲಿಂದ ಕದಲಲಾರ ಎಂಬುದು ಹನುಮನಿಗೆ ತಿಳಿದಿತ್ತು. ರಾಮನ ಸ್ತುತಿ ಮುಗಿಯುವುದರೊಳಗೆ ಲಕ್ಷ್ಮಣನ ಕೋಪ ಕಡಿಮೆಯಾಗಿತ್ತು. ಆಗ ಹನುಮ ಅಲ್ಲಿಯ ಪರಿಸ್ಥಿತಿಯನ್ನು ತನ್ನ ಸಮಯ ಪ್ರಜ್ಞೆಯಿಂದ ತಿಳಿಗೊಳಿಸಿದ.

3) ನಿರ್ಭಯತೆ:

ರಾವಣನೆಂದರೆ ದೇವಾನು ದೇವತೆಗಳು ಹೆದರಿ ನಡುಗುತ್ತಿರುವಾಗ ಬಂಧಿಸಿ ಕರೆತಂದ ಹನುಮನು ರಾವಣನ ಮುಂದೆ ನಿರ್ಭಯವಾಗಿ ಹಾವುಗಳ ರಾಶಿಯ ಮಧ್ಯ ದೃಢವಾಗಿ ತಲೆ ಎತ್ತಿ ನಿಂತ ಗರುಡನಂತೆ ನಿರ್ಭಯವಾಗಿ ನಿಂತಿರುತ್ತಾನೆ.

ರಾವಣನ ಮುಂದೆ ತಂದು ನಿಲ್ಲಿಸಿದಾಗ ರಾವಣ ಹೇಳುತ್ತಾನೆ “ನೀನು ನ್ಯಾಯಾಧೀಶ ಎಂದುಕೊಂಡಿರುವೆಯಾ? ತುಚ್ಚ ವಾನರನೇ.. ನಿನ್ನನ್ನು ಇರುವೆಯಂತೆ ಹೊಸೆದು ಹಾಕಬಲ್ಲೆ” ಎನ್ನುತ್ತಾನೆ. ತಕ್ಷಣ ಮರುತ್ತರವಾಗಿ ಹನುಮ ರಾವಣನಿಗೆ ಹೀಗೆ ಉತ್ತರಿಸುತ್ತಾನೆ “ರಾವಣನೇ.. ಅದೇ ಸಣ್ಣ ಇರುವೆ ಆನೆಯ ಕಿವಿಯೊಳಗೆ ಹೋದರೆ ಬೃಹದಾಕಾರದ ಆನೆ ನೃತ್ಯ ಮಾಡಲು ಶುರು ಮಾಡುತ್ತದೆ ಮರೆಯದಿರು”. ಎಂದು.

ರಾವಣನ ಎದುರು ಮಾತನಾಡಿದ ವ್ಯಕ್ತಿ ಉಳಿದ ನಿದರ್ಶನವಿರಲಿಲ್ಲ. ಈ ಮಾತಿನಿಂದ ಕೋಪಗೊಂಡ ರಾವಣನು ಕಾಲಭೈರವನ ಮೃತ್ಯುವನ್ನು ಹನುಮನ ಪಕ್ಕಕ್ಕೆ ತಂದು ನಿಲ್ಲಿಸಿಬಿಟ್ಟ. ಆ ಮೃತ್ಯುದೇವತೆಯನ್ನು ನೋಡಿ ಹನುಮ ನಕ್ಕ. ಇದನ್ನು ನೋಡಿ ಇನ್ನಷ್ಟು ಕ್ರೋಧೀತನಾದ ರಾವಣ “ಹೇ ವಾನರನೇ.. ನಿನ್ನ ಪಕ್ಕಕ್ಕೆ ಮೃತ್ಯು ನಿಂತಿದೆ. ನಿನಗೆ ಹೆದರಿಕೆಯಾಗಿಲ್ಲವೇ ಎಂದು..”

ನಗುತ್ತಾ ಹನುಮ ಹೀಗೆ ಹೇಳಿದ “ರಾವಣನೇ.. ‘ಮೃತ್ಯು’ ನನ್ನ ಪಕ್ಕಕ್ಕೆ ನಿಂತಿದೆ ನಿಜಾ ಆದರೆ ಅದು ನಿನ್ನನ್ನೇ ನೋಡುತ್ತಿದೆ” ಎಂದು ಗಹಗಹಿಸಿ ಮತ್ತೆ ನಗುತ್ತಾನೆ. ಈ ನಿರ್ಭಯತೆ ಇದ್ದಾಗ ಗೆಲುವು ಖಚಿತ.

-ಹಾಗೆಯೇ ನೀಲ್ ಆರ್ಮ್ ಸ್ಟ್ರಾಂಗ್ ಹೆದರದೆ ಚಂದ್ರನ ಮೇಲೆ ಮೊದಲ ಬಾರಿ ನಿರ್ಭಯವಾಗಿ ಕಾಲಿಟ್ಟ ಎಂದು ಇತಿಹಾಸದಲ್ಲಿ ಅಮರನಾದ.

-ನ್ಯೂಜಿಲ್ಯಾಂಡ್ ನ ಸರ್ ಎಡ್ಮಂಡ್ ಹಿಲರಿ ನಿರ್ಭಯವಾಗಿದ್ದ ಎಂಬ ಕಾರಣಕ್ಕೆ ಮೌಂಟ್ ಎವರೆಸ್ಟ್ ಏರಿದ ಮೊದಲಿಗ ಎನಿಸಿಕೊಂಡ.

-ಯಾರು ತಮ್ಮನ್ನು ತಾವು ಗೆಲ್ಲುತ್ತಾರೆ ಅವರು ಮಾತ್ರ ಈ ಭಯವನ್ನು ಗೆದ್ದಿರುತ್ತಾರೆ.

-ಈ ನಿರ್ಭಯತೆ ಇದ್ದಾಗ ಯಾವುದೇ ವ್ಯಕ್ತಿ ಸೋಲಿಲ್ಲದ ಸರದಾರನಾಗಬಹುದು. ಹೇಡಿಯಂತೆ ಹೆದರುವ ಜನರು ಬಕೆಟ್ ಹಿಡಿಯುವ ನಡೆಯನ್ನು ನಾವು ಎಲ್ಲೆಲ್ಲಿಯೂ ನೋಡಿರುತ್ತೇವೆ. ಇಂತಹ ಹೇಡಿತನದವರು ಎಂದೆಂದೂ ಇನ್ನೊಬ್ಬರ ಮಾತಿನ ಜೀವನವನ್ನೇ ಜೀವಿಸುತ್ತಾರೆಯೇ ಹೊರತು ಸ್ವಂತದ ಬದುಕಿದೆ ಎಂಬುದನ್ನೇ ಅರಿಯರು.

 

4) ಶಾಂತತೆ ಮತ್ತು ಪ್ರಸನ್ನತೆ:

ಶ್ರೀ ತುಳಸಿ ದಾಸರ ರಾಮಚರಿತ ಮಾನಸದ ಆರಂಭದಿಂದ ಅಂತ್ಯದವರೆಗೆ ಶಾಂತ ಚಿತ್ತದಿಂದ, ಪ್ರಸನ್ನತೆಯಿಂದ ಇರುವ ಏಕ ಮಾತ್ರ ಪಾತ್ರ ಅದು ಹನುಮನದು.

ಹೀಗೆ ಬದುಕಿನ ಸಣ್ಣ ಪುಟ್ಟ ಸಂದರ್ಭಗಳಿಗೆ ಕ್ಷುಲ್ಲಕ ಕಾರಣಗಳಿಗೆ ವಿಚಲಿತನಾಗದೆ ಶಾಂತವಾಗಿದ್ದು ಪ್ರಸನ್ನವಾಗಿದ್ದರೆ ಮಾತ್ರ ಬದುಕನ್ನು ಗೆಲ್ಲುತ್ತೆವೆ. ನಮ್ಮ ಬದುಕಿನ ಸೋಲಿಲ್ಲದ ಸರದಾರರು ನಾವಾಗುತ್ತೇವೆ.

ಈ ಮೇಲಿನ ಗುಣಗಳನ್ನು ಮೈಗೂಡಿಸಿಕೊಂಡು ಸೋಲನ್ನು ಸೋಲಿಸೋಣ. ಒಳಿತನ್ನೇ ಬಯಸೋಣ. ಬೀಳಿಸಲು ನರಿ ನಾಯಿಗಳಿದ್ದರೆ ಮೇಲೆತ್ತಲು ದೇವರಿದ್ದಾನೆ ಎಂಬ ನಂಬಿಕೆ ನಮ್ಮಲ್ಲಿದ್ದಾಗ ನಾವು ನಿಲ್ಲುತ್ತೇವೆ, ಗೆಲ್ಲುತ್ತೇವೆ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading