ಋಣಾನುಬಂಧ

ಚಿಕ್ಕ ಅಳಿಲು ನೋಡಿ ಶ್ರೀರಾಮನ ಕಣ್ಣಂಚಲ್ಲಿನಿಂದು ನೀರು ಬಂದಿತು. ಪ್ರೀತಿಯಿಂದ ಆ ಅಳಿಲನ್ನು ಕೈಯಿಂದ ಎತ್ತಿ ಅಂಗೈಯಲ್ಲಿ ಇರಿಸಿಕೊಂಡು, ಇನ್ನೊಂದು ಕೈಯ ಮೂರು ಬೆರಳಿಂದ ಆ ಪುಟ್ಟ ಅಳಿಲಿನ ಬೆನ್ನ ಮೇಲೆ ಸವರುತ್ತಾನೆ. ಮುಂದೇನಾಯಿತು ಶ್ರೀರಾಮನಿಗೂ ಮತ್ತು ಅಳಿಲಿಗೂ ಏನು ಋಣಾನುಬಂಧ ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಸುಮ್ಮನೆ ವಿಶಾಲ ಸಾಗರದಾಚೆ ಖಾಲಿತನದಿಂದ ನೋಡುತ್ತಾ ತನ್ನ ಸೀತೆ ಎಲ್ಲಿರುವಳೋ, ಅವಳ ಸ್ಥಿತಿ ಹೇಗಿದೆಯೋ ಎಂದು ಚಿಂತಿಸುತ್ತಿರುವ ಶ್ರೀರಾಮನ ಕಣ್ಣಂಚಲ್ಲಿ ನೀರಿತ್ತು. ಮೌನವಾಗಿ ಕುಳಿತು ಸೇತುವೆ ನಿರ್ಮಾಣದಲ್ಲಿ ತೊಡಗಿರುವ ವಾನರ ಸೈನ್ಯವನ್ನೊಮ್ಮೆ ನೋಡಿ ಭಾವೋದ್ವೇಗಕ್ಕೆ ಒಳಗಾಗಿ ಮನುಷ್ಯ ಮನುಷ್ಯನನ್ನು ಮೋಸ ಮಾಡುವ ಸಮಯದಲ್ಲಿ ಮನುಷ್ಯನಲ್ಲದ ಈ ಜೀವಗಳು ನನಗಾಗಿ ಅದೆಷ್ಟು ಮಿಡಿಯುತ್ತಿವೆ! ಇವರೆಲ್ಲ ಯಾರು! ಯಾವ ಋಣಾನುಬಂಧವಿದೆ ನನ್ನ ಮತ್ತು ಈ ಪ್ರಾಣಿಗಳಲ್ಲಿ! ಎಂದು ಭಾವುಕನಾದ.

ಅಷ್ಟರಲ್ಲಿ ಆ ನಿರ್ಮಾಣ ಹಂತದ ಸೇತುವೆಯ ಮೇಲೆ ಚಿಕ್ಕ ಅಳಿಲೊಂದು ನೀರಲ್ಲಿ ತನ್ನ ಮೈಯನ್ನು ತೊಯಿಸಿಕೊಂಡು ಮರಳಲ್ಲಿ ಹೊರಳಾಡಿ, ಮೈ ಗಂಟಿದ ಆ ಮರಳನ್ನು ಸೇತುವೆ ಮೇಲೆ ಬಂದು ಮೈದಡವಿ ಬೀಳಿಸುತ್ತಾ ಸೇತುವೆಯ ಮೇಲ್ಮೈಯ ದಾರಿಯನ್ನು ಮರಳಾಗಿಸುತ್ತಿತ್ತು. ಶ್ರೀರಾಮನ ಕಣ್ಣಂಚಲ್ಲಿಯ ನೀರು ಕೆನ್ನೆಗೆ ಬಂದಿತು. ಇದೆಂತಾ ಋಣಾನುಬಂಧ!

 

ಈ ಚಿಕ್ಕ ಪ್ರಾಣಿಯೂ ನನಗೆ ಸಹಾಯ ಮಾಡುತ್ತಿದೆಯಲ್ಲ ಎಂದು ಭಾವ ತೀವ್ರತೆಯಲ್ಲಿ, ಅಷ್ಟೇ ಪ್ರೀತಿಯಿಂದ ಆ ಅಳಿಲನ್ನು ಕೈಯಿಂದ ಎತ್ತಿ ಅಂಗೈಯಲ್ಲಿ ಇರಿಸಿಕೊಂಡು, ಇನ್ನೊಂದು ಕೈಯ ಮೂರು ಬೆರಳಿಂದ ಆ ಪುಟ್ಟ ಅಳಿಲಿನ ಬೆನ್ನ ಮೇಲೆ ಕೃತಜ್ಞತಾ ಭಾವದಿಂದ ಸವರುತ್ತಾನೆ. ಆ ಸವರುವಿಕೆಯ ಕುರುಹಾಗಿ ಇಂದಿಗೂ ನೀವು ಯಾವುದೇ ಅಳಿಲಿನ ಬೆನ್ನ ಮೇಲೆ ನೋಡಿ, ಬೆರಳಿನ ಮೂರು ಗೆರೆಗಳು ಇರುವುದನ್ನು ಕಾಣಬಹುದಾಗಿದೆ. ಇದು ಋಣಾನುಬಂಧದ ಚಿಹ್ನೆ ಎಂದು ಇಂದಿಗೂ ಪ್ರತೀತಿ ಇದೆ.

ಫೋಟೋ ಕೃಪೆ : google

ಹಾಗೆಯೇ ಸೀತೆಯನ್ನು ಹೊತ್ತೊಯ್ಯುವ ರಾವಣನನ್ನು ತಡೆಯಲು ಪ್ರಯತ್ನಿಸಿ ರೆಕ್ಕೆಯನ್ನು ಕತ್ತರಿಸಿಕೊಂಡು ನೆಲಕ್ಕೆ ಉರುಳಿ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದರೂ, ಸೀತೆಯ ಅಪಹರಣದ ಮಾಹಿತಿಯನ್ನು ಶ್ರೀರಾಮನಿಗೆ ತಲುಪಿಸಲೇ ಬೇಕೆಂದು ಶ್ರೀರಾಮ ಸ್ಥಳಕ್ಕೆ ಬರುವವರೆಗೆ ತನ್ನ ಜೀವ ಹಿಡಿದು ಬದುಕಿ, ಶ್ರೀರಾಮ ಬಂದ ಮೇಲೆ ವಿಷಯ ತಿಳಿಸಿ, ಆಮೇಲೆ ಪ್ರಾಣತ್ಯಾಗ ಮಾಡಿದ ‘ಜಟಾಯು’ ವನ್ನು ನೆನೆದು ಇದ್ಯಾವ ಋಣಾನುಬಂಧ ಎಂದು ತನ್ನನ್ನೇ ತಾನು ಪ್ರಶ್ನಿಸಿ ಕೊಳ್ಳುತ್ತಾ ಕಣ್ಣೀರು ಹಾಕುತ್ತಿದ್ದ ಶ್ರೀರಾಮ.

ಈ ಅಳಿಲು, ಜಟಾಯು ಪಕ್ಷಿ ಹಾಗೂ ವಾನರರು ಇವರೆಲ್ಲ ಮನುಷ್ಯರಲ್ಲದಿದ್ದರೂ ಶ್ರೀರಾಮನ ಸಹಾಯಕ್ಕೆ ನಿಂತದ್ದು, ಶ್ರೀರಾಮನ ಶಕ್ತಿಯಾಗಿ ಹೊರಹೊಮ್ಮಿದ್ದು ಈ ಋಣಾನುಬಂಧದಿಂದಲೇ ಎನಿಸುತ್ತದೆ ಅಲ್ಲವೇ!

ಋಣಾನುಬಂಧವಿದ್ದರೆ ನಮ್ಮ ಜೊತೆ ಹುಟ್ಟದಿದ್ದರೂ ನಮ್ಮ ಜೊತೆ ನಿಲ್ಲುತ್ತಾರೆ. ಅದೇ ಋಣಾನುಬಂಧವಿಲ್ಲದಿದ್ದರೆ ಕೈಕೆಯಂತೆ ನಮ್ಮಿಂದ ತಾವಾಗಿಯೇ ದೂರ ನಿಲ್ಲುತ್ತಾರೆ. ಇಷ್ಟೇ ಈ ಜೀವನದ ಮರ್ಮ.

ಈ ಜೀವನದಲ್ಲಿ ಋಣಾನುಬಂಧವಿದ್ದಷ್ಟೇ ದಕ್ಕುತ್ತದೆ ಎಂಬುದನ್ನು ಮರೆಯಬಾರದು. ಪ್ರಸಿದ್ಧ ಮಾತೊಂದಿದೆ “ಹಣೆಬರಹಕಿಂತ ಮುಂಚೆ, ಹಣೆಬರಹಕಿಂತ ಹೆಚ್ಚು, ಯಾರಿಗೂ ಯಾವುದೂ ದಕ್ಕಿಲ್ಲ” ವಂತೆ. ಹೀಗಾಗಿ ಹಣೆಬರಹದಲ್ಲಿ ಯಾವುದಾದರೂ ಇರಬೇಕೆಂದರೆ ಋಣಾನುಬಂಧವಿರಬೇಕು.

 

ನಾವು ನೀವು ಇಲ್ಲಿ ಸಂಧಿಸಿದ್ದೇವೆ ಎಂದರೆ ನಮ್ಮ ನಿಮ್ಮ ಮಧ್ಯ ಋಣಾನುಬಂಧವಿದೆ ಎಂದರ್ಥ. ಇನ್ನೂ ಉಸಿರಾಡುತ್ತಿದ್ದೇವೆ ಎಂದರೆ ಭೂಮಿಯ ಋಣಾನುಬಂಧವಿದೆ ಎಂದರ್ಥ.

ಜಠಿಲವಾದರೂ ಜಟಾಯುವಿನಂತೆ, ಅಲ್ಪವಾದರೂ ಅಳಿಲಂತೆ, ವಾಕ್ ಶಕ್ತಿ ಇಲ್ಲದಿದ್ದರೂ ವಾನರರಂತೆ ನಮ್ಮನ್ನು ನಂಬಿದವರ ಸಹಾಯಕ್ಕಾಗಿ ನಿಲ್ಲೋಣ. ಅದೇ ಋಣಾನುಬಂಧದ ಮಹತ್ವ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading