ಬದುಕಿನಲ್ಲಿ ಯಾರು ತಮ್ಮ ಅಂತರಾಳದ ಮಾತನ್ನು ಕೇಳಿದ್ದಾರೆಯೋ ಅವರೆಲ್ಲಾ ಎಚ್ಚರಗೊಂಡಿದ್ದಾರೆ. ಪರರ ಮಾತುಗಳನ್ನು ಕೇಳುತ್ತಿದ್ದವರು ಇನ್ನೂ ನಿದ್ರಿಸುತ್ತಿದ್ದಾರೆ.ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಬದುಕಲ್ಲಿ ನಾವು ಮಾಗಲು ಬೇಕು ಅಂತರಾಳದ ಮಾತುಗಳು. ಅಂತರಾಳದ ಮಾತಿಗಿಂತ ಶ್ರೇಷ್ಠವಾದ ಮಾತು ಇನ್ನೊಂದಿಲ್ಲ. ಯಾರು ಏನೇ ಹೇಳಲಿ ನಮ್ಮ ಅಂತರಾಳದ ಮಾತು ಮಾತ್ರ ಎಲ್ಲವನ್ನು ನಿರ್ಧರಿಸುತ್ತದೆ. ನಮ್ಮ ಮನವು ಬೇರೆಯವರ ಮಾತನ್ನು ಗಂಭೀರವಾಗಿ ಪರಿಗಣಿಸಿ ಆ ಬೇರೆಯವರ ಮಾತನ್ನು ಒಪ್ಪಿ ಅಪ್ಪಿಕೊಂಡಿತೋ ಆಗ ನಮ್ಮ ಬದುಕಿನ ಸ್ಥಿರತೆ ಅಸ್ಥಿರವಾಗುತ್ತಾ ಸಾಗುತ್ತದೆ. ಕೊನೆಗೆ ನಮ್ಮ ಮೇಲಿನ ನಂಬಿಕೆ ನಾವೇ ಕಳೆದುಕೊಂಡು ದುಃಖಕ್ಕಿಡಾಗುತ್ತೇವೆ. ಇಡೀ ಜಗತ್ತು ಏನೇ ಹೇಳಲಿ ನಮ್ಮ ಅಂತರಾಳದ ಮಾತು ನಾವು ಕೇಳಿದರೆ ಯಾರೂ ನಮ್ಮನ್ನು ಅಸ್ಥಿರಗೊಳಿಸಲಾರರು. ಬದುಕಲು ಅದ್ಭುತ ಸೂತ್ರವಿದೊಂದೆ.
ಯಾವುದೇ ಸಂತ-ಶರಣರು, ದಾಸ-ಮುನಿಗಳನ್ನೊಮ್ಮೆ ಅವಲೋಕಿಸಿದರೆ ಅವರೆಲ್ಲಾ ತಮ್ಮ ಅಂತರಾಳದ ಮಾತನ್ನೇ ಕೇಳಿದ್ದು ಸ್ಪಷ್ಟವಾಗುತ್ತದೆ.
ಬದುಕಿನಲ್ಲಿ ಯಾರು ತಮ್ಮ ಅಂತರಾಳದ ಮಾತನ್ನು ಕೇಳಿದ್ದಾರೆಯೋ ಅವರೆಲ್ಲಾ ಎಚ್ಚರಗೊಂಡಿದ್ದಾರೆ. ಪರರ ಮಾತುಗಳನ್ನು ಕೇಳುತ್ತಿದ್ದವರು ಇನ್ನೂ ನಿದ್ರಿಸುತ್ತಿದ್ದಾರೆ.
ನಾನು ಕೇಳಲ್ಪಟ್ಟ ಒಂದು ಪುಟ್ಟ ಕಥೆಯೊಂದಿಗೆ ಇದನ್ನು ಸಾದರಪಡಿಸುತ್ತೇನೆ.
ಒಮ್ಮೆ ಐದು ಮಕ್ಕಳು ಕೋರಿಕೆಗಳ (wish game) ಆಟವಾಡುತ್ತಿದ್ದರು. ಮೊದಲ ಮಗುವಿಗೆ ನಿನಗೆ ಒಂದು ಕೋರಿಕೆಯನು ಕೇಳಲು ಅವಕಾಶ ಕೊಟ್ಟರೆ ಏನು ಕೇಳುವೆ ಎಂದಾಗ ಆ ಮಗು ಹೇಳಿತು ನಾನೊಂದು ಐಸ್ ಕ್ರೀಮ್ ಕೇಳುತ್ತೇನೆ ಎಂದಿತು.
ಫೋಟೋ ಕೃಪೆ : google
ಅದೇ ಪ್ರಶ್ನೇ ಎರಡನೆ ಮಗುವಿಗೆ ಕೇಳಿದಾಗ ನಾನೊಂದು “ಐಸ್ ಕ್ರೀಮ್ ಫ್ಯಾಕ್ಟರಿ” ಬೇಕೆಂದು ಕೋರುವೆ. ಬೇಕಾದಾಗ ಬೇಕಾದಷ್ಟು ಐಸ್ ಕ್ರೀಮ್ ತಿನ್ನಬಹುದು ಎಂದಿತು.
ಅದೇ ಪ್ರಶ್ನೇ ಮೂರನೇ ಮಗುವಿಗೆ ಕೇಳಿದಾಗ ಬಿಲಿಯನ್ ಡಾಲರ್ಸ್ ಕೇಳುವೆ. ಬೇಕಾದಾಗ ಐಸ್ ಕ್ರೀಮ್ ಫ್ಯಾಕ್ಟರಿ, ಕೇಕ್ ಫ್ಯಾಕ್ಟರಿ ಜೊತೆಗೆ ಚಿಪ್ಸ್ ಶಾಪ್ ಖರೀದಿಸುವೆ, ಬೇಕಾದಾಗ ಎಲ್ಲವನ್ನು ತಿನ್ನಬಹುದು ಎಂದಿತು.
ಆಗ ಮೊದಲಿನ ಎರಡೂ ಮಕ್ಕಳು ಆಶ್ಚರ್ಯಗೊಂಡರು ಈ ವಿಚಾರ ನಮಗೇಕೆ ಹೊಳೆಯಲಿಲ್ಲವೆಂದುಕೊಂಡರು. ಬಿಲಿಯನ್ ಡಾಲರ್ಸ್ ಕೇಳಿದವನೇ ಜೀನಿಯಸ್ ಎನಿಸಿದ.
ಅದೇ ಪ್ರಶ್ನೇ ನಾಲ್ಕನೇ ಮಗುವಿಗೆ ಕೇಳಿದಾಗ ಆ ಮಗು ಹೇಳಿತು ನನಗೊಂದು ಕೋರಿಕೆಯ ಆಯ್ಕೆ ಇಟ್ಟರೆ ಆ ಕೋರಿಕೆಯಲ್ಲಿ ಮೂರು ಕೋರಿಕೆಗಳನ್ನು ಕೇಳುತ್ತೇನೆ. 1) ಐಸ್ ಕ್ರೀಮ್ ಫ್ಯಾಕ್ಟರಿ 2) ಬಿಲಿಯನ್ ಡಾಲರ್ಸ್ 3) ಮತ್ತೆ ಮೂರು ಹೊಸ ಕೋರಿಕೆಗಳು ಎಂದಿತು.
ಈ ಮೊದಲಿನ ಮೂರು ಮಕ್ಕಳು ಆಶ್ಚರ್ಯರಾದರು. ಅರೇ.. ಎಂಥಾ ಆಲೋಚನೆ! ನಮಗೆ ಇದು ಹೊಳೆಯಲಿಲ್ಲವಲ್ಲ ! ಇದಕ್ಕಿಂತ ಅದ್ಭುತ ಆಲೋಚನೆ ಮತ್ತೊಂದು ಖಂಡಿತ ಇರದು ಎಂದುಕೊಂಡರು.
ಅದೇ ಪ್ರಶ್ನೇ ಐದನೇ ಮಗುವಿಗೆ ಕೇಳಿದಾಗ ಆ ಮಗು ಹೇಳಿತು ನನಗೆ ಯಾವ ಕೋರಿಕೆಗಳೇ ಬೇಡ ಎಂದಿತು. ಕೋರಿಕೆಗಳೇ ಇಲ್ಲವಾದಾಗ ಬದುಕಿನ ದಾರಿಯಲ್ಲಿ ಸಿಕ್ಕ ಪ್ರತಿಯೊಂದರ ಜೊತೆ ಸಂತೋಷವಾಗಿರುತ್ತೇವೆ. ಹೀಗೆ ವರ್ತಮಾನದಲ್ಲಿ ಬದುಕುವಾಗ ಯಾವ ಕೋರಿಕೆಗಳ ಅಗತ್ಯವೇ ಇರುವುದಿಲ್ಲ ಎಂದಿತು. ಎಂಥಹ ಅದ್ಭುತ ಅಂತರಾಳದ ಮಾತದು..!
ಈ ಮೇಲಿನ ಐದು ಮಕ್ಕಳ ಐದು ಅಂತರಾಳದ ಮಾತುಗಳನ್ನು ಗಮನಿಸಿ ಅವರವರ ಅಂತರಾಳದ ಮಾತುಗಳ ಮೇಲೆ ಅವರವರ ಬದುಕಿನ ಸ್ಥಿರತೆ ನಮಗಿಲ್ಲಿ ತಿಳಿಯುತ್ತದೆ. ಹೀಗಾಗಿ ಅಂತರಾಳವು ಶುದ್ಧವಾಗಿ ಸಾತ್ವಿಕತೆಯಿಂದ ಕೂಡಿದ್ದರೆ ಬರುವ ಮಾತುಗಳು ಕೂಡ ಇನ್ನೊಬ್ಬರಿಗೆ ಪ್ರೇರಣೆಯಾಗಬಲ್ಲವು. ಏನೇ ಇರಲಿ ನಮ್ಮ ಸ್ವಚ್ಚ ಅಂತರಾಳದ ಮಾತುಗಳನ್ನೇ ಕೇಳೋಣ, ಹೇಳೋಣ ಕೂಡಾ.
‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ಡಾ. ರಾಜಶೇಖರ ನಾಗೂರ