ಮನುಷ್ಯರು ಸಣ್ಣ ಕೆಲಸ ಮಾಡಿದರೇ ‘ನಾನು ಮಾಡಿದೆ. ನಾನು ಮಾಡಿದೆ’ ಎಂದು ಹೇಳಿಕೊಳ್ಳುತ್ತಾರೆ. ಇಂದಿನ ಸಮಾಜದಲ್ಲಿ ಎಲ್ಲವೂ ನನ್ನಿಂದಲೇ ಎನ್ನುವ ಕೆಲವು ಅಧಿಕಾರಿಗಳು, ರಾಜಕೀಯ ಧುರಿಣರನ್ನು ಕಾಣುವುದು ಸರ್ವೇ ಸಾಮಾನ್ಯವಾಗಿದೆ. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಓದಿ…
ಸೀತೆಯ ಸುಳಿವನ್ನು ಹುಡುಕಿಕೊಂಡು ಬರುವ ಜವಾಬ್ದಾರಿಯನ್ನು ಹನುಮನಿಗೆ ವಹಿಸಿಕೊಟ್ಟ ಮೇಲೆ ಆಗಾಧವಾದ ಸಾಗರವನ್ನು ನೆಗೆಯುವುದು ಹನುಮನಿಗೆ ಸುಲಭದ ಮಾತಾಗಿರಲಿಲ್ಲ. ಸಾಗರೋಲ್ಲಂಘನಗೈವೆ ಎಂಬ ನಂಬಿಕೆ ಸ್ವತಃ ಹನುಮನಿಗೆ ಇರಲಿಲ್ಲ.
ಧೈರ್ಯ ಮಾಡಿ ಸಾಗರವನ್ನೇನೋ ಉಲ್ಲಂಘಿಸಿದ ಆದರೆ ‘ಸುರಸ’ ರಾಕ್ಷಸ ರೂಪದಿ ಬಂದು ನಿನ್ನ ನುಂಗುವೆನು ಎಂದಾಗ ಅವಳನ್ನು ದಾಟಿಕೊಂಡು ಮುಂದೆ ಸಾಗುವುದು ಸವಾಲೇ ಆಗಿತ್ತು.
ಅದನ್ನೂ ದಾಟಿ ಬಂದ ಹನುಮನಿಗೆ ಲಂಕೆ ತಲುಪಿದ ಮೇಲೆ ಅದೆಷ್ಟು ಸವಾಲುಗಳು ಎದುರಾದವು. ತನಗೆ ಗೊತ್ತಿರದ, ಪರಿಚಯವೇ ಇಲ್ಲದ ರಾಕ್ಷಸ ನಾಡು ಅದಾಗಿತ್ತು. ತನ್ನ ಬಾಲಕ್ಕೂ ಬೆಂಕಿ ಬಿತ್ತು. ರಾವಣನ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬದುಕಿ ಬರುವುದು ಸುಲಭದ ಮಾತಾಗಿರಲಿಲ್ಲ.
ಇವೆಲ್ಲಾ ಸವಾಲುಗಳನ್ನು ಏಕಾಂಗಿಯಾಗಿ ಎದುರಿಸಿ ಸೀತಾ ಮಾತೆಯನ್ನು ಭೇಟಿಯಾಗಿ, ಸೀತೆಯ ಇರುವಿಕೆಯ ಮಾಹಿತಿಯನ್ನು ತೆಗೆದುಕೊಂಡು ಶ್ರೀರಾಮನ ಬಳಿ ಬಂದು ಹನುಮನು ನಿಲ್ಲುತ್ತಾನೆ.
ಆಗ ಜಾಂಬುವಂತನು ರಾಮನಿಗೆ “ಪ್ರಭು.. ಕೊಟ್ಟ ಕೆಲಸವನ್ನು ದಿಟ್ಟತನದಿ ಮಾಡಿ ಮುಗಿಸಿ ಮರಳಿ ಬಂದಿದ್ದಾನೆ ಈ ಹನುಮ” ಎನ್ನುತ್ತಾನೆ. ಇದನ್ನು ಕೇಳಿದ ರಾಮನು ಹನುಮನ ಕಡೆ ಹಸನ್ಮುಖಿಯಾಗಿ ನೋಡುತ್ತಾನೆ.

ಫೋಟೋ ಕೃಪೆ : google
ಆಗ ಹನುಮ: “ಪ್ರಭು ರಾಘವನೇ.. ಈ ಕೆಲಸವನ್ನು ನಾನು ಮಾಡಲಿಲ್ಲ”
ಶ್ರೀರಾಮ ಮತ್ತೆ ಜಾಂಬುವಂತನ ಕಡೆ ನೋಡುತ್ತಾನೆ. ಆಗ ಜಾಂಬುವಂತನು ” ಪ್ರಭು.. ಇಲ್ಲಾ ಇಲ್ಲಾ.. ಈ ಕೆಲಸ ಹನುಮನೇ ಮಾಡಿದ್ದಾನೆ”
ಮತ್ತೆ ಶ್ರೀರಾಮನು ಹನುಮನ ಕಡೆ ನೋಡುತ್ತಾನೆ. ಆಗ ಹನುಮ ಅದೇ ವಿನಮ್ರತೆಯಿಂದ ” ಪ್ರಭು.. ಈ ಕೆಲಸವನ್ನು ನಾನು ಮಾಡಲಿಲ್ಲ” ಎನ್ನುತ್ತಾನೆ.
ಶ್ರೀ ರಾಮನು ಮತ್ತೆ ಜಾಂಬುವಂತನ ಕಡೆ ನೋಡುತ್ತಾನೆ. ಆಗ ಜಾಂಬುವಂತನು ” ಹೇ.. ಪ್ರಭು.. ಈ ಕೆಲಸವನ್ನು ಹನುಮನೇ ಮಾಡಿದ್ದಾನೆ” ಎಂದು ಮತ್ತೆ ಮತ್ತೆ ಹೇಳುತ್ತಾನೆ.
ಮತ್ತೆ ಶ್ರೀ ರಾಮ ಹನುಮನ ಕಡೆ ನೋಡುತ್ತಾನೆ. ಆಗ ಹನುಮ “ಹೇ ಪ್ರಭು.. ಇಲ್ಲಾ ಇಲ್ಲಾ ನಾನು ಮಾಡಿಲ್ಲ” ಎನ್ನುತ್ತಾನೆ.
ಈ ಬಾರಿ ಶ್ರೀ ರಾಮನಿಗೆ ಜಾಂಬುವಂತ ಮತ್ತು ಹನುಮ ಇವರಿಬ್ಬರ ಮಾತುಗಳಿಂದ ಕೋಪ ಬರುತ್ತದೆ. ಕೋಪದಿಂದ ಶ್ರೀ ರಾಮನು ಹನುಮನ ಕಡೆ ನೋಡಿ ” ಈ ಕೆಲಸ ನೀ ಮಾಡದಿದ್ದರೆ ನಾನು ಮಾಡಿದೆನೇ..? ” ಎನ್ನುತ್ತಾನೆ.
ಆಗ ಹನುಮ” ಪ್ರಭು .. ನಾನೂ ಅದನ್ನೇ ಹೇಳಲು ಬಯಸಿದೆ. ಈ ಕಾರ್ಯವನ್ನು ನಾನು ಮಾಡಿಲ್ಲ. ನೀವೇ ಮಾಡಿದಿರಿ. ನಾವೆಲ್ಲಾ ನೆಪ ಅಷ್ಟೇ” ಎಂದು ಕೈ ಮುಗಿದು ಅದೇ ವಿನಮ್ರತೆಯಿಂದ ನುಡಿಯುತ್ತಾನೆ.
ಆಗ ಶ್ರೀರಾಮನು ಹನುಮನ ನಿರ್ಗರ್ವದ ಆ ನುಡಿಗಳಿಗೆ ಮತ್ತು ಸ್ವಾಮಿ ನಿಷ್ಠೆಗೆ ಮನಸೋಲುತ್ತಾನೆ.

ಫೋಟೋ ಕೃಪೆ : google
ತಾತ್ಪರ್ಯ:
ಒಂದು ಸಣ್ಣ ಕೆಲಸ ಮಾಡಿದರೂ, ನಾವು ಮನುಷ್ಯರು ‘ನಾನು ಮಾಡಿದೆ. ನಾನು ಮಾಡಿದೆ’ ಎಂದು ಕೊಚ್ಚಿಕೊಳ್ಳುತ್ತೇವೆ.
ಹನುಮಂತನ ಜಾಗದಲ್ಲಿ ನಾವು, ನೀವು ಇದ್ದಿದ್ದರೆ “ಅರೇ.. ಪ್ರಭು.. ಲಂಕಾಗೆ ಹೋಗುವುದು ಸುಲಭದ ಮಾತಾಗಿತ್ತೇ. ಅಬ್ಬಬ್ಬಾ !..ಅದೆಂತಾ ಅಗಾಧ ಸಾಗರವದು? ನಾನೇ ಒಂದೇ ಬಾರಿಗೆ ನೆಗೆದು ಹೋದೆ ಗೊತ್ತಾ! ನನ್ನ ಜಾಗದಲ್ಲಿ ಇನ್ನೊಬ್ಬ ನಿದ್ದಿದ್ದರೆ ಈ ಕೆಲಸ ಸಾಧ್ಯವೇ ಇರುತ್ತಿರಲಿಲ್ಲ. ನಾನೇ, ನಾನೇ.. ಸೀತೆಯನ್ನು ಹುಡುಕಿ ಬಂದದ್ದು’ ಎಂದೆಲ್ಲ ಕೊಚ್ಚಿಕೊಳ್ಳುತ್ತಿದ್ದೆವು.
ಇಂದಿನ ಸಮಾಜದಲ್ಲಿ ಎಲ್ಲವೂ ನನ್ನಿಂದಲೇ ಎನ್ನುವ ಕೆಲವು ಅಧಿಕಾರಿಗಳು, ರಾಜಕೀಯ ಧುರಿಣರನ್ನು ಕಾಣುವುದು ಸರ್ವೇ ಸಾಮಾನ್ಯವಾಗಿದೆ.
ಕೌಟುಂಬಿಕ ಹಂತದಲ್ಲಿಯೂ ಕೆಲವು ಸದಸ್ಯರು ಎಲ್ಲವೂ ನನ್ನಿಂದಲೇ ಆಗಿದ್ದು ಎನ್ನುವುದು ಕರಗತವಾಗಿಬಿಟ್ಟಿದೆ.
ಎಲ್ಲವೂ ತನ್ನಿಂದಲೇ ಎನ್ನುವ ಇಂತಹ ಗರ್ವಿಗಳಿಗೆ ಈ ಹನುಮನು ಮಾದರಿಯಲ್ಲವೇ..!

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ರತನ್ ಮತ್ತು ಟೀಟು
- ಡಾ. ರಾಜಶೇಖರ ನಾಗೂರ
