ಯೋಗ್ಯತೆ ಏನೆಂದು ನಿರ್ಧರಿಸುವ ಯೋಗ್ಯತೆ ಯಾರಿಗೂ ಇಲ್ಲ.ಅವರವರ ಯೋಗ್ಯತೆಯ ನಿರ್ಧಾರ ಅವರ ಕೈಯಲ್ಲೇ ಇದೆ.ಹೀಯಾಳಿಸುವ ಮನಸ್ಸು ಬೇಡ. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಒಂದು ದಿನ ನದಿಯು ಬಾವಿಗೆ ಕೀಳು ದೃಷ್ಟಿಯಲ್ಲಿ ಹೀಗೆ ಹೇಳಿತು “ಅದೆಷ್ಟೋ ಹೊಸ ಹೊಸ ಸ್ಥಳಗಳ ಮೂಲಕ ನೂರಾರು ಕಿ.ಮೀ ಹರಿದು ಬರುವ ನನ್ನ ವೈಶಾಲ್ಯತೆ ಎಲ್ಲಿ! ಇದ್ದಲ್ಲೇ ಒಂದೇ ಸ್ಥಳದಲ್ಲಿ ಜೀವನವಿಡಿ ಇರುವ ನೀನೆಲ್ಲಿ? ಈಗಲಾದರೂ ನಿನ್ನ ಯೋಗ್ಯತೆ ಏನೆಂದು ನಿನಗೆ ಗೊತ್ತಾಯಿತೇ? ”
ಆಗ ಬಾವಿಯು ಶಾಂತ ಮನಸಿನಿಂದಲೇ ಹೀಗೆ ಉತ್ತರಿಸಿತು. “ಅಕ್ಕಾ! ನನ್ನ ಯೋಗ್ಯತೆ ಏನೆಂದು ಖಂಡಿತ ನನಗೆ ತಿಳಿದಿದೆ. ನೀನು ಮೇಲಿನಿಂದ ಕೆಳಗೆ ಹರಿದುಬಂದು ಉಪ್ಪಾಗುವೆ (ಸಮುದ್ರ ಸೇರಿ). ನಾನು ಕೆಳಗಿನಿಂದ ಮೇಲೆ ಹರಿದು ಬಂದು ಸಿಹಿಯಾಗುವೆ” ನದಿಯು ತನ್ನ ಯೋಗ್ಯತೆಗೆ ಬಾಯಿ ಮುಚ್ಚಿಕೊಂಡಿತು.
ಯಾರ ಯೋಗ್ಯತೆ ಏನೆಂದು ನಿರ್ಧರಿಸುವ ಯೋಗ್ಯತೆ ಯಾರಿಗೂ ಇಲ್ಲ. ಅವರವರ ಯೋಗ್ಯತೆಯ ನಿರ್ಧಾರ ಅವರ ಕೈಯಲ್ಲೇ ಇದೆ. ಅವರಾಡುವ ಮಾತುಗಳು, ನಡವಳಿಕೆ, ಸಹ ಜೀವಿಗಳನ್ನು ಕಾಣುವ ರೀತಿ, ಇನ್ನೊಬ್ಬರಿಗೆ ಗೌರವಿಸುವ ಗುಣಗಳಲ್ಲಿ ಅದು ತಾನಾಗಿಯೇ ಜಗತ್ತಿಗೆ ಎದ್ದು ಕಾಣುತ್ತದೆ. ಹೀಗಾಗಿ ಯಾರ ಬಗೆಗೆ ಕೀಳಾಗಿ ಮಾತನಾಡಿ ಯೋಗ್ಯತೆಯಿಲ್ಲದಂತಾಗಬೇಡಿ.
ದುಡ್ಡು ಹೆಚ್ಚಿದೆ ಎಂದು ಬಡವನನ್ನು ನಿಂದಿಸಬೇಡ. ಆ ದುಡ್ಡನ್ನು ಅನುಭವಿಸಲು ನಿಮ್ಮಲ್ಲಿ ಆಯಸ್ಸು ಇರಲಿಕ್ಕಿಲ್ಲ ಅಥವಾ ಆ ಬಡವನು ಮುಂದೆ ನಿಮಗಿಂತ ಹೆಚ್ಚು ಗಳಿಸಬಹುದು. ಆಗ ನಿನ್ನ ಯೋಗ್ಯತೆ ಏನಾಗಿರುತ್ತದೆ!

ಅಧಿಕಾರವಿದೆಯೆಂದು ಅಧಿಕಾರವಿಲ್ಲದವರನ್ನು ಕಾಡಬೇಡ. ಅಧಿಕಾರ ಶಾಶ್ವತವಲ್ಲ ಎನ್ನುವ ಅರಿವು ನಿನಗೆ ನಾಳೆ ಮೂಡಬಹುದು ಅಥವಾ ಇಂದು ಅಧಿಕಾರವಿಲ್ಲದವನು ನಾಳೆ ಅಧಿಕಾರವನ್ನು ಹೊಂದಬಹುದು. ಆಗ ನಿನ್ನ ಯೋಗ್ಯತೆ ಏನಾಗಿರುತ್ತದೆ!
ಒಬ್ಬರ ಅಂತರಂಗದ ರಹಸ್ಯಗಳನ್ನು ನಿನ್ನಲ್ಲಿ ನಂಬಿಕೆಯಿಂದ ಹೇಳಿಕೊಂಡಿದ್ದಾರೆಂಬ ಮಾತ್ರಕ್ಕೆ ಅವರ ಆ ಅನಿವಾರ್ಯತೆಯನ್ನು ಹೆದರಿಸಲು ಬೆದರಿಸಲು ಯೋಚಿಸಬೇಡ. ರಾವಣ ದುರ್ಯೋಧನನಂತವರು ಮಣ್ಣಾಗಿದ್ದಾರೆ ಎನ್ನುವುದು ನಿನಗೆ ತಡವಾಗಿ ತಿಳಿಯಬಹುದು ಅಥವಾ ದೌರ್ಜನ್ಯಕ್ಕೊಳಗಾದವರೇ ನಿನ್ನ ಹತ ಮಾಡಬಹುದು. ಆಗ ನಿನ್ನ ಯೋಗ್ಯತೆ ಏನಾಗಿರುತ್ತದೆ!
ನಾಲ್ಕು ಅರೆಬೆಂದ ಹಿಂಬಾಲಕರಿದ್ದ ಮಾತ್ರಕ್ಕೆ ಇನ್ನೊಬ್ಬರ ಬುಡಕ್ಕೆ ಬೆಂಕಿ ಇಡುವ ಕೆಲಸ ನೀ ಮಾಡಬೇಡ. ನಿನಗೂ ಒಂದು ಬುಡವಿದೆ ಎಂಬುದು ಬೇರೆಯವರು ನಿನ್ನ ಬುಡಕ್ಕೆ ಅದೇ ಬೆಂಕಿಯನ್ನು ಇಟ್ಟಾಗ ಅರಿವಾಗಬಹುದು ಅಥವಾ ಅರಿವಾಗುವುದೊರಳಗೆ ನಿನ್ನ ಬುಡವೆ ಇಲ್ಲದಂತಾಗಬಹುದು ಅಥವಾ ಅದೇ ನಿನ್ನ ಅಯೋಗ್ಯ ಹಿಂಬಾಲಕರು ಪಕ್ಷ ಬದಲಿಸಿ ನಿನ್ನದೇ ಬುಡಕ್ಕೆ ಬರಬಹುದು. ಆಗ ನಿನ್ನ ಯೋಗ್ಯತೆ ಏನಾಗಿರುತ್ತದೆ!
ಜೀವನವು ಸ್ಪರ್ಧೆಯ ಮೈದಾನವಲ್ಲ, ಸಹಜೀವನಕ್ಕೊಂದು ದೇವರಿತ್ತ ಭಿಕ್ಷೆ. ಇತರರನ್ನು ಗೌರವಿಸೋಣ ಆಗದಿದ್ದ ಪಕ್ಷದಲ್ಲಿ ಹೀಯಾಳಿಸದಿರೋಣ. ಹೀಯಾಳಿಸಿ ನಮ್ಮ ಯೋಗ್ಯತೆ ತೋರದಿರೋಣ. ಆಗ ಮಾತ್ರ ನಾವು ಮನುಷ್ಯರಾಗಲು ಯೋಗ್ಯರಾಗುತ್ತೇವೆ.
‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಡಾ. ರಾಜಶೇಖರ ನಾಗೂರ