ವಿಶ್ವನಾಥ್ ಬ್ಯಾಂಕ್ ಹೋದಾಗ ಕ್ಯಾಷಿಯರ್ ಕಣ್ಣುತಪ್ಪಿ ೧,೦೦ ,೦೦೦ ಬದಲು ೧,೨೦ ,೦೦೦ ನೀಡಿದ. ಅದನ್ನು ವಿಶ್ವನಾಥ್ ತನ್ನ ಬ್ಯಾಗ್ ನಲ್ಲಿ ಹಾಕಿಕೊಂಡ. ಕ್ಯಾಷಿಯರ್ ನ ಕತೆ ಏನಾಯಿತು?… ತಪ್ಪದೆ ಓದಿ ಸಂಪಿಗೆ ವಾಸು ಅವರ ಸಣ್ಣಕತೆ.
ವಿಶ್ವನಾಥ್ ಯಾರಿಗೋ ತುರ್ತಾಗಿ ದುಡ್ಡು ಕೊಡಬೇಕಾಗಿದ್ದುದರಿಂದ ಬ್ಯಾಂಕ್‌ನಿಂದ ಹಣ ತೆಗೆಯಲು ಬಂದರು. ತನಗೆ ಬೇಕಾಗಿದ್ದ 1,00,000 ಮೊತ್ತ ಬರೆದು ಸಹಿ ಮಾಡಿದ. ಅಂದು ಸೋಮವಾರವಾದ್ದರಿಂದ ಹೆಚ್ಚು ಗ್ರಾಹಕರು ಇದ್ದರು. ಸ್ವಲ್ಪ ಹೊತ್ತು ನಿಂತು ಕ್ಯಾಷಿಯರ್ ಕೊಟ್ಟ ಹಣವನ್ನು ಎಣಿಸಿದರೆ ಅದರಲ್ಲಿ 1,00,000 ರೂಪಾಯಿಗಳ ಬದಲಾಗಿ 1,20,000 ಇತ್ತು.
ವಿಶ್ವನಾಥ್ ಒಮ್ಮೆ ಕ್ಯಾಷಿಯರ್ ಮುಖ ನೋಡಿದ. ಇದಾವುದೂ ತಿಳಿಯದ ಅವನು ಉಳಿದ ಗ್ರಾಹಕರ ವ್ಯವಹಾರದಲ್ಲಿ ತೊಡಗಿದ್ದ. ವಿಶ್ವನಾಥ್ ಮೆಲ್ಲನೆ ಹಣವನ್ನು ಬ್ಯಾಗ್ ಗೆ ಹಾಕಿಕೊಂಡು ಹೊರಟ.
ಈ ರೀತಿ ಮಾಡಿದ್ದು ಸರಿಯೋ ತಪ್ಪೋ ಎಂಬ ಪ್ರಶ್ನೆ ಅವನ ಮನದಲ್ಲಿ ಕಾಡತೊಡಗಿತು. ‘ಈ ಹಣವನ್ನು ಹಿಂದಿರುಗಿಸಲೇಬೇಕು’ ಎಂದು ಮನಸ್ಸು ಒಮ್ಮೆ ಹೇಳಿದರೆ, ಮತ್ತೊಮ್ಮೆ ಹಣವನ್ನು ನಾನೇ ಬೇರೆಯವರಿಗೆ ಪೊರಪಾಟಿನಿಂದ ಹೆಚ್ಚುಕೊಟ್ಟಿದ್ದರೆ ಅವರು ವಾಪಸ್ ಕೊಡುಟ್ಟಿದ್ದರಾ?’ ಎಂಬ ಪ್ರಶ್ನೆ ಮೂಡಿತು. ಯಾರು ಕೊಡುತ್ತಾರೆ? ಯಾರೂ ಕೊಡುವುದಿಲ್ಲ ಎಂದು ಮನಸ್ಸು ಮತ್ತೆ ಹೇಳಿತು, ಹಾಗಾಗಿ ಕೊಡುವ ಅಗತ್ಯವಿಲ್ಲ ಎಂದು ವಿಶ್ವನಾಥ್ ನಿರ್ಧರಿಸಿದ.
ಸ್ವಲ್ಪ ಸಮಯದ ನಂತರ ಮತ್ತೆ ಹಣದ ಬಗ್ಗೆ ಯೋಚನೆ. ಕ್ಯಾಷಿಯರ್ ಈಗ ಈ ಹಣವನ್ನು ತನ್ನ ಕೈಯಿಂದ ಕಟ್ಟ ಬೇಕಾಗಬಹುದು, ಅವರ ಆರ್ಥಿಕ ಪರಿಸ್ಥಿತಿ ಹೇಗಿದೆಯೋ ಎಂಬ ಆಲೋಚನೆ ಮೂಡಿತು. ಇನ್ನೊಂದು ಕ್ಷಣದಲ್ಲಿ ಬ್ಯಾಂಕ್ ನವರಿಗೆ ಒಳ್ಳೆ ಸಂಬಳ ಬರುತ್ತೆ, ಅದೃಷ್ಟದ ರೂಪದಲ್ಲಿ ಅನಾಯಾಸವಾಗಿ ಬಂದ ಹಣವನ್ನು ಯಾಕೆ ವಾಪಾಸು ಕೊಡಬೇಕು ಎಂದಿತು ಮನಸ್ಸು.
ಬ್ಯಾಂಕ್ ನಲ್ಲಿ ದೊಡ್ಡ ಮೊತ್ತದ ಹಣ ಡ್ರಾ ಮಾಡುವವರು ಕಡಿಮೆ. ಹೀಗಾಗಿ ದೊಡ್ಡ ಮೊತ್ತದ ಹಣ ನನಗೇ ಬಂದಿರುವುದು ಗೊತ್ತಾಗಿ ಕೇಳಿದರೆ ಹೇಗೆ ಎಂಬ ಚಿಂತೆ ಶುರುವಾಯಿತು. ಆದರೂ ಹಣ ಕೈಗೆ ಬಂದ ಮೇಲೆ ಅದು ನನ್ನದೇ ತಾನೇ ಎಂದು ಮನಸ್ಸು ಇನ್ನೊಂದು ದಿಕ್ಕಿನತ್ತ ಯೋಚಿಸಿತು. ಇದು ಹಲವು ಬಾರಿ ನಡೆದು ಸಂಜೆ ನಾಲ್ಕು ಗಂಟೆ ಮೀರಿತ್ತು.
ಆಗ ವಿಶ್ವನಾಥ್ ಮತ್ತೊಮ್ಮೆ ಯೋಚಿಸಿದ. ಆಗ ಅವನ ಮನಸ್ಸು, ಪರರ ತಪ್ಪಿನಿಂದ ಲಾಭ ಪಡೆಯುವುದು ಸರಿಯಲ್ಲ. ಈ 20,000 ರೂಪಾಯಿ ನನ್ನ ಪ್ರಾಮಾಣಿಕತೆಯ ಪರೀಕ್ಷೆ. ಇದರಲ್ಲಿ ಗೆಲ್ಲುವುದೇ ಮುಖ್ಯ ಎಂದು ನಿರ್ಧರಿಸಿದ, ಒಂದು ಕ್ಷಣವೂ ಯೋಚಿಸದೆ ವಿಶ್ವನಾಥ್ ಬ್ಯಾಂಕಿಗೆ ಹೋದ. ಅಲ್ಲಿ ಕ್ಯಾಷಿಯರ್ ತಲೆ ಮೇಲೆ ಕೈಹೊತ್ತು ಕುಳಿತಿದ್ದ. ವಿಶ್ವನಾಥ್ ಕೌಂಟರ್ ನಲ್ಲಿ ತನಗೆ ಹೆಚ್ಚಿಗೆ ಬಂದಿದ್ದ ಹಣ ಇಟ್ಟು ವಿಷಯ ತಿಳಿಸಿದ. ಕ್ಯಾಷಿಯರ್ ಹಣವನ್ನು ತೆಗೆದುಕೊಳ್ಳುತ್ತಾ ನೀರು ತುಂಬಿದ ಕಣ್ಣುಗಳೊಡನೆ ಹೇಳಿದ ‘ನೀವು ಈ ಹಣವನ್ನು ವಾಪಸ್ ಕೊಡದೆ ಇದ್ದಿದ್ದರೆ ನಾನು ತುಂಬಾ ತೊಂದರೆ ಅನುಭವಿಸುತ್ತಿದ್ದೆ. ಇಂದು ದೊಡ್ಡ ಮೊತ್ತದ ಬಹಳ ಲೇವಾದೇವಿಗಳಾದುವು, ಹಾಗಾಗಿ ಯಾರಿಗೆ ಹೆಚ್ಚು ಮೊತ್ತ ಹೋಗಿದೆ ಎಂಬುದು ಗೊತ್ತಾಗಲಿಲ್ಲ. ನೀವು ಈ ಹಣವನ್ನು ತರದಿದ್ದರೆ ನನ್ನ ಸಂಬಳದಿಂದ ವಸೂಲಿ ಮಾಡುತ್ತಿದ್ದರು. ಮಕ್ಕಳ ಶಾಲಾ ಶುಲ್ಕಕ್ಕಾಗಿ ಈಗಾಗಲೇ ಸಾಲ ಮಾಡಿದ್ದೇನೆ. ಇಷ್ಟು ಮೊತ್ತವನ್ನು ಈಗ ಕೊಡಬೇಕಾದರೆ ತುಂಬಾ ತೊಂದರೆಯಾಗುತ್ತಿತ್ತು. ಧನ್ಯವಾದಗಳು ಸರ್. ಹತ್ತು ನಿಮಿಷದಲ್ಲಿ ಕೆಲಸ ಮುಗಿಸುತ್ತೇನೆ. ಒಟ್ಟಿಗೆ ಕಾಫಿ ಕುಡಿಯೋಣ’ ಎಂದು ಕ್ಯಾಷಿಯರ್ ಹೇಳಿದರು.
ಆಗ ವಿಶ್ವನಾಥ್, ಬೇಡ. ನಾನೇ ನಿನಗೆ ಪಾರ್ಟಿ ಕೊಡ್ತೇನೆ, ಆಶ್ಚರ್ಯಪಟ್ಟ ಕ್ಯಾಷಿಯರ್ ‘ನೀವೇಕೆ ಪಾರ್ಟಿ ಕೊಡಬೇಕು! ಪ್ರಾಮಾಣಿಕವಾಗಿ ಹಣವನ್ನು ವಾಪಾಸು ತಂದು ಕೊಟ್ಟಿದ್ದಕ್ಕಾಗಿ ನಾನೇ ಕೊಡಬೇಕಲ್ಲವೇ? ಅಂದನು ಆಗ ವಿಶ್ವನಾಥ್, ನೀವು 20,000 ಹೆಚ್ಚು ಕೊಟ್ಟಿದ್ದರಿಂದ ನಾನು ಎಷ್ಟು ದುರಾಸೆಯವನಾಗಿದ್ದೇನೆ ಎಂದು ನನಗೆ ಅರ್ಥವಾಯಿತು. ಕೊನೆಗೂ ಈ ದುರಾಸೆಯನ್ನು ಬಿಡಬಲ್ಲೆ ಎಂಬುದೂ ಸಾಬೀತಾಯಿತು. ನನ್ನಲ್ಲೇ ಮೂಡಿದ್ದ ಗೊಂದಲದಿಂದ ನಾನು ಗೆದ್ದೆ. ಇದು ಒಂದು ರೀತಿಯಲ್ಲಿ ನೀವೇ ಕಲ್ಪಿಸಿಕೊಟ್ಟ ಅವಕಾಶ, ಅದಕ್ಕಾಗಿ ನಿಮಗೆ ಎಸ್ಟು ಧನ್ಯವಾದಗಳ ತಿಳಿಸಿದರೂ ಕಡಿಮೆಯೇ, ಮತ್ತು ಅದಕ್ಕಾಗಿಯೇ ನಾನೇ ಪಾರ್ಟಿ ಕೊಡುವೆನೆಂದು ಹೇಳಿದ್ದು ಎಂದನು.
ಕ್ಯಾಷಿಯರ್ ತಬ್ಬಿಬ್ಬಾದ!!
- ಸಂಪಿಗೆ ವಾಸು