ಕನಕದಾಸರ ವ್ಯಕ್ತಿತ್ವದ ವಿಕಾಸದ ಕುರಿತು ಹಿರಿಯ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ಬೆರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
ವಿಕಾಸದ ಭರವಸೆಯನ್ನಿತ್ತು ಹೊಸ ಸರಕಾರ ಅಧಿಕಾರಕ್ಕೆ ಬಂದು ಒಂದು ವರುಷವಾಯಿತು. ಅದು ಆರ್ಥಿಕಾಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದ್ದು. ಆದ್ದರಿಂದಲೇ ಇದು ತಲುಪದವರು ಈಗಲೂ ಹೊಸ ಮೀಸಲಾತಿಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಇದು ಎಲ್ಲರನ್ನೂ ಒಳಗೊಂಡು ಬೆಳೆಯದೇ ಹೋದ ಪಾರ್ಶ್ವಿಕ ದೃಷ್ಟಿಯ ಫಲ. ಆದ್ದರಿಂದ ನಿಜವಾದ ವಿಕಾಸವೆನ್ನುವುದು ಕೇವಲ ಆರ್ಥಿಕ ವಿಕಾಸಕ್ಕೆ ಸೀಮಿತವಾಗದೇ ಸಾಂಸ್ಕøತಿಕ ವಿಕಾಸವನ್ನು ಒಳಗೊಳ್ಳಬೇಕು. ಆಗ ಮಾತ್ರ ನಿಜವಾದ ವಿಕಾಸವೆನ್ನುವುದು ಸಾಧ್ಯವಾಗುತ್ತದೆ. ಇದಕ್ಕೆ ನಿದರ್ಶನವಾಗಿ ಕನಕದಾಸರ ಬದುಕನ್ನು ಕೇಂದ್ರವನ್ನಾಗಿಟ್ಟುಕೊಂಡು ಈ ಪರಿಶೀಲನೆಯನ್ನು ಕೈಗೊಳ್ಳಬಹುದಾಗಿದೆ. ಅವರ ವ್ಯಕ್ತಿತ್ವದ ವಿಕಾಸವನ್ನು ನಾಲ್ಕು ಹೆಜ್ಜೆಗಳಲ್ಲಿ ಗುರುತಿಸಬಹುದಾಗಿದೆ.
ಮೊದಲನೆಯ ಹೆಜ್ಜೆ:
ಅವರು ತಮ್ಮನ್ನು ಕುರುಬರೆಂದು ತಮ್ಮ ದೈವ ‘ಬೀರಯ್ಯ’ ನೆಂದು ಕರೆದುಕೊಳ್ಳುತ್ತಾರೆ. ಕುಲ ಕಸುಬು ಮತ್ತು ದೈವ ಯಾವುದೇ ಸಮಾಜದ ಮೂಲಘಟಕವಾಗಿರುತ್ತದೆ. ಆದ್ದರಿಂದಲೇ ಇಂದಿಗೂ ಕುಲದೈವದ ಮೂಲಕ ವ್ಯಕ್ತಿಗಳನ್ನು ಅವರ ಕುಟುಂಬವನ್ನೂ ಗುರುತಿಸುವ ಪರಿಪಾಠ ಉಳಿದುಕೊಂಡು ಬಂದಿದೆ. ಆದ್ದರಿಂದಲೇ ಕನಕದಾಸರು ತಮ್ಮ ಕುಲಕಸುಬನ್ನು ಹೇಳಿಕೊಳ್ಳುವುದರಲ್ಲಾಗಲೀ ಅಥವಾ ಕುಲದೈವದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವುದರಲ್ಲಾಗಲೀ ಯಾವ ಹೀನಾಯವನ್ನೂ ಅನುಭವಿಸುವುದಿಲ್ಲ. ಗೀತಾಚಾರ್ಯರ ಪ್ರಕಾರ ಮೂಲವನ್ನು ನಿರಾಕರಿಸುವುದೆಂದರೆ ಇತಿಹಾಸಕ್ಕೆ ಅಪಚಾರ ಬಗೆದಂತೆ. ಆದ್ದರಿಂದಲೇ ಅವರನ್ನು ಶ್ರೀವೈಷ್ಣವರೆಂದು ಗುರುತಿಸುವ ಮೊದಲೇ ಅವರ ಈ ಅಸ್ತಿತ್ವವನ್ನು ಒಪ್ಪಿಕೊಳ್ಳಬೇಕಾಗಿದೆ. ಆಗ ಮಾತ್ರ ಅವರ ಮುಂದಿನ ಹೆಜ್ಜೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
ಎರಡನೆಯ ಹೆಜ್ಜೆ:
ಇದು ಅವರು ದಂಡನಾಯಕರಾಗಿದ್ದ ,ಯುದ್ಧಗಳಲ್ಲಿ ತೊಡಗಿಸಿಕೊಂಡಿದ್ದ ಸ್ಥಿತಿ. ಆಗೊಮ್ಮೆ ಆದ ಆಘಾತವೇ ಅವರ ವ್ಯಕ್ತಿತ್ವಕ್ಕೆ ತಿರುವನ್ನು ತರುತ್ತದೆ. ತಿಮ್ಮಪ್ಪ ನಾಯಕರಾಗಿದ್ದವರು ಕನಕದಾಸರಾಗಿ ಹೆರಳುಕೊಳ್ಳುವಾಗಿನ ಹಂತವಾಗಿದೆ. ದಂಡನಾಯಕರಾಗಿದ್ದ ಅವರ ವ್ಯಕ್ತಿತ್ವದ ಅನುಭವವನ್ನು ಅವರ ‘ಮೋಹನತರಂಗಿಣಿ’ ಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ. ಅದನ್ನು ಕೃಷ್ಣದೇವರಾಯನ ವಿಜಯನಗರವೆಂದು ಬಹತೇಕ ವಿದ್ವಾಂಸರು ಒಪ್ಪಕೊಂಡಿದ್ದಾರೆ. ಅವರ ವ್ಯಕ್ತಿತ್ವದಲ್ಲಿದ್ದ ರಸಿಕತೆಯ ಭಾಗವನ್ನು ಇದು ಎತ್ತಿ ತೋರಿಸುತ್ತದೆ.
ಮೂರನೆಯ ಹೆಜ್ಜೆ :
ಅಶೋಕನಂತೆ , ಯುದ್ಧದಲ್ಲಿನ ಆಘಾತವೇ ಅವರ ವೈರಾಗ್ಯಕ್ಕೆ ಎಡೆ ಮಾಡಿಕೊಡುತ್ತದೆ. ಅದಕ್ಕೆ ಅವರು ಗುರುಗಳನ್ನು ಹುಡುಕಿಕೊಂಡು ಹೊರಡುತ್ತಾರೆ. ಆಗಲೇ ‘ದಾಸಕೂಟ’ದ ಸಂಪರ್ಕಕ್ಕೆ ಬರುತ್ತಾರೆ. ಆದರೆ ಅಲ್ಲಿಗೆ ಪ್ರವೇಶ ಸುಲಭವಾಗಿ ದೊರೆಯುವುದಿಲ್ಲ. ‘ಇವನಾರವ’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಉತ್ತರಿಸುವಲ್ಲಿ ಅವರ ವ್ಯಕ್ತಿತ್ವದ ನೈಜ ಆವರಣ ಬಯಲಾಗುತ್ತದೆ. ಅವರ ಹುಟ್ಟನ್ನು ತಿಳಿದವರು ಅವರನ್ನು ‘ಕೆಸರು’ ಎಂದು ಹೀಯಾಳಿಸಿರಬೇಕು. ಆಗ ಅವರು ಕೊಡುವ ಉತ್ತರ , ( ಕೆಸರೊಳು ತಾವರೆ ಹುಟ್ಟಲು ಅದ ತಂದು ಬಿಸಜನಾಭನಿಗೆ ಅರ್ಪಿಸಲಿಲ್ಲವೇ? ..ಒಗೆಯಿಂದ ನಾರಾಯಣ ಯಾವ ಕುಲದವ. ಅಗಜ ವಲ್ಲಭನು ಯಾತರ ಕುಲದವನು? ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ?.. ಆತ್ಮಾಂರಾತ್ಮ ನೆಲಯಾದಿ ಕೇಶವ ಆತನೊಲಿದ ಮೇಲೆ ಯಾತರ ಕುಲವಯ್ಯ?) ಕೆಸರಿನಲ್ಲೇ ಕಮಲ ಅರಳುವುದು ಆ ಕೆಸರಿನಲ್ಲಿ ಅರಳಿದ ಕಮಲವನ್ನೇ ಬಿಸಜನಾಭನಿಗೆ ಅರ್ಪಿಸುವುದು’ ಎಂದು ತಮ್ಮ ಹುಟ್ಟಿನ ಆಧಾರದ ಮೇಲೆ ತಮ್ಮ ವ್ಯಕ್ತಿತ್ವದ ಹನನ ಮಾಡಲು ಬಂದವರಿಗೆ ಚುರುಕು ಮುಟ್ಟಿಸುತ್ತಾರೆ. (ಕುವೆಂಪು ಇದನ್ನೇ ‘ಗೊಬ್ಬರ’ ವೆಂದು ಕರೆಯುತ್ತಾರೆ) ಮತ್ತು ‘ ‘ನೀವೆಲ್ಲಾ ಆರಾಧಿಸುವ ನಾರಾಯಣನ ಕುಲ ಯಾವುದು?’ ಎಂದು ಸವಾಲು ಎಸೆಯುತ್ತಾರೆ. ಇಂತಹ ಸಂದರ್ಭದಲ್ಲೇ ಬಾಳೆ ಹಣ್ಣು ಮತ್ತು ‘ನಾನು ಹೋದರೆ ಹೋದೇನು’ ಎಂಬ ಐತಿಹ್ಯಗಳು ಹುಟ್ಟಿಕೊಂಡಿರಬೇಕು. ವ್ಯಾಸರಿಂದ ಅವರಿಗೆ ದೊರೆಯುವ ಮನ್ನಣೆ ಉಳಿದವರ ಕಣ್ತೆರೆಸಿರಬೇಕು.
ಅಲ್ಲದೇ ತಮ್ಮ ಬದುಕಿನ ವಿಧಾನವನ್ನು ಪುನಾ ರಚಿಸಲು ಅವರು ಅನ್ಯೋಕ್ತಿಯನ್ನು ಆಧರಿಸಿ ‘ರಾಮಧಾನ್ಯ ಚರಿತೆ’ ಯನ್ನು ರಚಿಸುತ್ತಾರೆ. ಎಲ್ಲರೂ ಆರಾಧಿಸುವ ರಾಮನ ಮೂಲಕವೇ ತಮ್ಮ ಆಹಾರವಾದ ರಾಗಿಯೇ ಅಕ್ಕಿಗಿಂತ ಸತ್ವಯುತವೆಂದು ಸ್ಥಾಪಿಸಿ ಅದಕ್ಕೆ ‘ರಾಮಧಾನ್ಯ’ ಹೆಸರನ್ನು ದೊರಕಿಸಿಕೊಡುವಲ್ಲಿ ಸಫಲರಾಗುತ್ತಾರೆ.
ಡೊಳ್ಳಿನ ಮೇಲೆ ಕೈ ಭರಮಪ್ಪ ಹಾಕ್ಯಾನು
ತಾಳವ ಶಿವನಪ್ಪ ತಟ್ಯಾನ
ಒಳ್ಳೊಳ್ಳೆ ಪದಗಳ ಹನುಮಪ್ಪ
ಹಾಡ್ಯಾನು
ಚೆಲ್ವ ಕನಕಪ್ಪ ಕುಣಿದಾನ
ಬ್ರಹ್ಮನನ್ನು ‘ಭರಮಪ್ಪ’ ನೆಂದೂ, ಶಿವನನ್ನು ಶಿವನಪ್ಪ ನೆಂದೂ, ಹನುಮಂತನನ್ನು ‘ಹನುಮಪ್ಪ’ನೆಂದೂ ಕರೆಯುವುದರ ಮೂಲಕ ಅವರನ್ನು ತಮ್ಮ ಭಾಷಿಕ ನೆಲೆಗೆ ಸಂಸ್ಕøತಿಗೆ ಎಳೆದು ತರುತ್ತಾರೆ. ಇದು ಕುಮಾರವ್ಯಾಸನ ನಾರಯಣನನ್ನು ‘ನರಯಣ’ ಎಂದು ಕರೆದದ್ದರ ನೆನಪು ತರುತ್ತದೆ. ಹೀಗಾಗಿ ಸಂಸಕೃತೀಕರಣಗೊಂಡದ್ದನ್ನು ಮತ್ತೆ ಜನಪದ ನೆಲೆಗೆ ತರುವ ದೇಸೀ ಸಂಸಕೃತಿಯ ಪ್ರಯತ್ನವಿದು.
ಮೇಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ತಮ್ಮ ವ್ಯಕ್ತಿತ್ವದ ಗಟ್ಟಿತನವನ್ನು ಸಾಬೀತು ಪಡಿಸುವ ಅವರಿಗೆ ಮತ್ತೊಂದು ಸವಾಲು ಎದುರಾಗುತ್ತದೆ. ದೇವರು ತಮ್ಮ ಖಾಸಗಿ ಆಸ್ತಯೆಂದು ಪರಿಗಣಿಸಿದ್ದ ಜನಾಂಗಕ್ಕೆ ಬುದ್ಧಿ ಕಲಿಸುವ ಸವಾಲು. ಉಡುಪಿ ಕೃಷ್ಣನ್ನು ‘ಬಾಗಿಲು ತೆರೆ’ ಎಂದು ಕರೆಗೊಡುವುದರ ಮೂಲಕ ಬಾಗಿಲು ತೆಗೆಯದಿದ್ದವರಿಗೆ ಕಿಂಡಿಯನ್ನು ಕೊರೆಯುವುಸುವುದರ ಮೂಲಕ ಎಲ್ಲರಿಗೂ ದೇವರ ದರ್ಶನ ದೊರೆಯುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಇಲ್ಲಿ ಬಸವಣ್ಣನವರ ವಚನದ ಉಳ್ಳವರ ಶಿವಾಲಯವನ್ನು ನಿರಾಕರಿಸಿ ದೇಹವನ್ನೇ ದೇಗುಲವನ್ನಾಗಿ ಮಾರ್ಪಡಿಸಿಕೊಂಡು ಅಲ್ಲಿ ದೇವರ ದರ್ಶನ ಮಾಡಬೇಕೆಂಬ ಸಲಹೆ ನೆನಪಾಗುತ್ತದೆ. ವೈಯಕ್ತಿಕ ಸಾಧನೆಯೆನ್ನುವುದು ಅವರವರ ಸಾಮಥ್ರ್ಯಕ್ಕೆ ಸಂಬಂಧಪಟ್ಟದ್ದು ಆದರೆ ದೇವರು ಎಲ್ಲರಿಗೂ ಎಲ್ಲರಿಗೂ ಸೇರಿದವನಾದ್ದರಿಂದ ಅದನ್ನು ಖಾಸಗಿ ಆಸ್ತಿ ಮಾಡಿಕೊಳ್ಳುವುದರ ವಿರುದ್ಧ ಇಲ್ಲಿ ಧ್ವನಿ ಎತ್ತಿದ್ದಾರೆ. ಆಧುನಿಕ ಸಂದರ್ಭದಲ್ಲಿ ನಡೆದ ದೇವಾಲಯಗಳ ಪ್ರವೇಶಗಳ ಚಳವಳಿಯನ್ನು ಈ ಹಿನ್ನೆಲೆಯಲ್ಲೇ ಗ್ರಹಿಸಬೇಕಾಗಿದೆ ಮತ್ತು ಕನಕದಾಸರನ್ನು ಇದಕ್ಕೆ ಪ್ರೇರಣೆ ಒದಗಿಸಿದವೆರೆಂದು ಬೇಕಾದರೆ ಹೇಳಬಹುದು.
ಅಂದರೆ ಈ ಮೂರನೇ ಹಂತದಲ್ಲಿ ,ಒಳಗೊಳ್ಳುವುದಕ್ಕೆ ಇರುವ ಆತಂಕಗಳನ್ನು ಅವರು ನಿವಾರಿಸಿ, ಅವರು ಎಲ್ಲವನ್ನೂ , ಎಲ್ಲರನ್ನೂ ಒಳಗೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ ಅವರಿಗೆ ತಿರುಪತಿ ತಿಮ್ಮಪ್ಪನನ್ನು, ಬೇಲೂರು ಕೇಶವನನ್ನು ಮತ್ತು ಶಿವನನ್ನು ಏಕಕಾಲಕ್ಕೆ ಸಮಾನವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ. ಭಕ್ತ ಮತ್ತು ಭವಿ ಎಂದು ಕರೆದು ಸಮಾಜವನ್ನು ಛಿನ್ನವಾಗಿಸಿದ ವಚನ ಚಳವಳಿಗಿಂತ ಇದು ಭಿನ್ನವಾದ ನೆಲೆ. ಅಲ್ಲಿ ಶೂದ್ರಾದಿಗಳನ್ನು ಒಳಗೊಂಡರೂ ಅವರ ದೈವಗಳಾದ ‘ಮಡಕೆ, ಮೊರ. ಕಲ್ಲು ಇತ್ಯಾದಿಗಳನ್ನು ಕೀಳ್ಗಳೆದು ಬಸವಣ್ಣ ನಿರಾಕರಿಸುತ್ತಾರೆ. ದಾಸರೂ ಕೂಡ ಹರಿಯನ್ನು ಬಿಟ್ಟರೆ ಉಳಿದವುಗಳನ್ನು ‘ಖುಲ್ಲು ದೈವಗಳೆಂದು’ ಕರೆದು ನಿರಾಕರಿಸುತ್ತಾರೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಕನಕದಾಸರು ಇವರೆಲ್ಲರಿಗಿಂತ ಭಿನ್ನವಾಗಿ ನಿಂತು ಸರ್ವ ದೈವ ಸ್ವೀಕರಣದ ಮೂಲಕ ಬಹÅದೇವತಾರಾಧನೆಯನ್ನು ಪ್ರತಿಪಾದಿಸುತ್ತಾರೆ. ಅದು ಅವರ ವ್ಯಕ್ತಿತ್ವ ವಿಸ್ತಾರಗೊಂಡದ್ದರ ದ್ಯೋತಕವಾಗಿದೆ. ಆದರೆ ಅದು ಅಲ್ಲಿಗೇ ನಿಲ್ಲುವುದಿಲ್ಲ.
ನಾಲ್ಕನೆಯ ಹೆಜ್ಜೆ :
ದೇವಾಲಯದ ಬಾಗಿಲನ್ನು ತೆರೆಸಲು ಪ್ರಯತ್ನಿಸಿದ ಕನಕದಾಸರೇ ಕಡೆಗೆ “ಬಯಲು ಆಲಯದೊಳಗೋ ಆಲಯವು ಬಯಲೊಳಗೋ, ಬಯಲು ಆಳಯಗಳೆರೆಡೂ ನಿನ್ನ ನಯನದೊಳಗೋ” ಎನ್ನುವುಲ್ಲಿಗೆ ತಲಪುತ್ತಾರೆ. ಇಲ್ಲಿ ಬಯಲು ಮತ್ತು ಆಲಯಗಳೆರೆಡೂ ಇರುವುದು ನಯನದಲ್ಲಿ ಎಂದು ಸಾರುವುದರ ಮೂಲಕ ಅವುಗಳಿಗೆ ಕಟ್ಟು ಬಿದ್ದವರಿಗೆ ಅವುಗಳಿಂದ ಹೊರನಡೆಯುವಂತೆ ಸೂಚಿಸುತ್ತಾರೆ. ಅಂತಿಮವಾಗಿ ವ್ಯಕ್ತಿತ್ವಕ್ಕೆ ಯಾವ ಬಂಧನಗಳೂ ಇರದಾಗ ಮಾತ್ರ ಅವರಿಗೆ ಸಂಪೂರ್ಣ ಪ್ರಪತ್ತಿ ಎನ್ನುವುದು ಸಾಧ್ಯವಾಗುತ್ತದೆ. ವ್ಯಕ್ತಿತ್ವದ ಸ್ಥಾಪನೆಯೊಂದಿಗೆ ಪ್ರಾರಂಭವಾದ ಅವರ ಪಯಣ ಅದರ ನಿರಾಕರಣೆಯೊಂದಿಗೆ ಕೊನೆಯ ಹಂತವನ್ನು ತಲಪುತ್ತದೆ. ಎಲ್ಲವನ್ನೂ ನಿರಾಕರಿಸುವುದರ ಮೂಲಕವೇ ಎಲ್ಲವನ್ನೂ ಒಳಗೊಳ್ಳಲು ಸಾಧ್ಯವಾಗುತ್ತದೆ.
ಈ ಅರ್ಥದಲ್ಲಿ ಅವರು ರಾಮಾನುಜ ಪಂಥಕ್ಕೆ ಸೇರಿದವರು. ಅವರ ದರ್ಶನವಾದ ವಿಶಿಷ್ಟಾದ್ವೈತವನ್ನು ವಿಸ್ತರಿಸಿದವರು. ಗೀತಾಚಾರ್ಯರು ಅವರನ್ನು ಶ್ರೀವೈಷ್ಣವ ಪರಂಪರೆಯಲ್ಲಿ ಗುರುತಿಸಿರುವುದು ಸರಿಯಾಗಿಯೇ ಇದೆ. ಇಲ್ಲಿಯವರೆಗೆ ಇದ್ದ ಅವರು ದ್ವೈತರೆಂಬ ಭಾವನೆಯನ್ನು ತಿದ್ದಿಕೊಳ್ಳುವಲ್ಲಿ ಇದು ಸಹಕರಿಸುತ್ತದೆ.
ತುಳಸೀ ರಾಮದಾಸರು 19 ನೇ ಶತಮಾನದಲ್ಲಿ ಕನಕದಾಸರು ಅಂದು ಆರಂಭಿಸಿದ ಈ ಆಂದೋಲನವನ್ನು ಎಲ್ಲಾ ಜನಾಂಗಗಳನ್ನೂ – ಬಣಜಿಗ, ದಲಿತ, ಉಪ್ಪಾರ ರನ್ನೂ ಒಳಗೊಳ್ಳುವುದರ ಮೂಲಕ ಇನ್ನೊಂದು ಹರಿದಾಸ ಆಂದೋಲನಕ್ಕೆ ನಾಂದಿ ಹಾಡಿದರು ಎಂಬುದನ್ನು ಗೀತಾಚಾರ್ಯರು ತಮ್ಮ ಅನ್ವೇಷಣೆಯ ಮೂಲಕ ಸಿದ್ಧ ಪಡಿಸಿದ್ದಾರೆ. ಆದ್ದರಿಂದ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
- ರಘುನಾಥ್ ಕೃಷ್ಣಮಾಚಾರ್