ಜೀವನದಲ್ಲಿ ನಮಗಿಂತ ಇನ್ನೊಬ್ಬರೇ ಚನ್ನಾಗಿದ್ದಾರೆ ಎಂದೆನಿಸುತ್ತದೆ. ಇನ್ನೊಬ್ಬರಿಗೆ ಹೋಲಿಸಿದಾಗ ನನ್ನ ಜೀವನ ತೃಪ್ತಿದಾಯಕವಾಗಿಲ್ಲ ಎನ್ನುವ ಕೊರಗಲ್ಲೆ ಅನೇಕರು ನಾವು ಜೀವನವನ್ನು ಮುಗಿಸುತ್ತೇವೆ. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಓದಿ…
ಜೀವನದಲ್ಲಿ ನಮಗಿಂತ ಇನ್ನೊಬ್ಬರೇ ಚನ್ನಾಗಿದ್ದಾರೆ ಎಂದೆನಿಸುತ್ತದೆ. ಇನ್ನೊಬ್ಬರಿಗೆ ಹೋಲಿಸಿದಾಗ ನನ್ನ ಜೀವನ ತೃಪ್ತಿದಾಯಕವಾಗಿಲ್ಲ ಎನ್ನುವ ಕೊರಗಲ್ಲೆ ಅನೇಕರು ನಾವು ಜೀವನವನ್ನು ಮುಗಿಸುತ್ತೇವೆ. ದೇವರು ನನಗೆ ಮಾತ್ರ ಕೊರತೆ ಮಾಡಿದ್ದಾನೆ ಎಂದು ನೊಂದುಕೊಳ್ಳುತ್ತೇವೆ. ಇಂತಹ ಮನಸ್ಥಿತಿಯಿಂದ ಹೊರಬರಲು ಈ ಕೆಳಗಿನ ಉದಾಹರಣೆಯನ್ನೊಮ್ಮೆ ನೋಡಿ. ಒಂದಿನ ಒಂದು ಕಾಗೆ ಅಳ್ತಾ ಇತ್ತು. ಅಲ್ಲೊಬ್ಬ ಸಾಧು ಅದನ್ನು ನೋಡಿ ಯಾಕಪ್ಪ ಏನಾಯ್ತು ಎಂದು ಕೇಳಿದ.
ಕಾಗೆ : “ಬಣ್ಣ ಗುರುವೇ ಬಣ್ಣ . ನನ್ನ ಈ ಕರಿ ಬಣ್ಣ. ಇದೂ ಒಂದು ಬಣ್ಣವೇ! ಯಾರಾದರೂ ನನ್ನನ್ನು ಸಾಕುವುದು ನೋಡಿದಿರಾ? ಮನೆ ಮೇಲೆ ಕುಳಿತು ಕಾ ಎಂದರೆ ಸಾಕು ಓಡಿಸಿಬಿಡುತ್ತಾರೆ. ಪಿಂಡದ ತುಂಡು ತಿನ್ನಲು ಮಾತ್ರ ನನ್ನ ಕರೆಯುತ್ತಾರೆ”.
ಸಾಧು: ಹೌದಾ! ಹಾಗಾದರೆ ನಿನ್ನ ಅರ್ಥದಲ್ಲಿ ಯಾವ ಬಣ್ಣ ಚಂದ, ಯಾರು ಚಂದ? ನೀನು ಏನಾಗಬಯಸುವೆ?
ಕಾಗೆ : “ಹಂಸ ಗುರುವೇ. ಅದೆಂತ ಶುಭ್ರ ಬಣ್ಣ. ಬೆಳ್ಳಗೆ ಆಹಾ! ಶಾಂತಿ ಸಾರುವ ಬಿಳಿ ಬಣ್ಣ. ಎಲ್ಲರೂ ಹಂಸವನ್ನು ಇಷ್ಟ ಪಡುತ್ತಾರೆ. ನನ್ನನ್ನು ಹಂಸವಾಗಿಸು ಗುರುವೇ!
ಸಾಧು: ಖಂಡಿತ ನಿನ್ನನ್ನು ಹಂಸವಾಗಿ ಪರಿವರ್ತಿಸುವೆ. ಅದಕ್ಕಿಂತ ಮೊದಲು, ಹೋಗಿ ಒಮ್ಮೆ ಹಂಸವನ್ನು ಭೇಟಿಮಾಡಿ ಅದರ ಅನಿಸಿಕೆಯನ್ನು ಕೇಳಿ ಬಾ! ಕಾಗೆ ಹಾರಿಕೊಂಡು ನೀರಲ್ಲಿ ತೇಲುತ್ತಿರುವ ಹಂಸದ ಹತ್ತಿರ ಬಂದಿತು.
ಕಾಗೆ: ಹಂಸವೇ ನೀನೆಷ್ಟು ಚಂದ! ಎಂತ ಅದ್ಭುತ ಜೀವನ ನಿನ್ನದು.
ಹಂಸ: ಅಯ್ಯೋ ಮಾರಾಯ.. ನನ್ನದೂ ಒಂದು ಮೈಬಣ್ಣವೇ! ಸತ್ತ ನಂತರ ಜನ ಉಡುವ ಬಟ್ಟೆಯಂತೆ ಇರುವೆ . ನೀರಲ್ಲಿ ನಾ ಈಜುವಾಗ ಯಾರಾದರೂ ಫೋಟೋ ತೆಗೆದರೆ ನಾನು ಮತ್ತು ನೀರು ಒಂದೇ ಎನಿಸುತ್ತೇವೆ. ನಾನು ಕಾಣುವುದೇ ಇಲ್ಲ. ನೀನೇ ಉತ್ತಮ. ಎಲ್ಲಿದ್ದರೂ ನೀನು ಕಾಣುವೆ.
ಕಾಗೆ: ಹಾಗಾದರೆ ನಿನ್ನ ಮೈ ಬಣ್ಣದ ಬಗೆಗೆ ಸಂತೃಪ್ತಿ ನಿನಗಿಲ್ಲವೇ!? ಹಾಗಾದರೆ ನಿನ್ನ ಪ್ರಕಾರ ಯಾರು ಚಂದ?
ಹಂಸ: ಇಲ್ಲ. ಖಂಡಿತ ತೃಪ್ತಿಯಿಲ್ಲ. ಆ ಗಿಳಿಯನ್ನು ನೋಡು. ಆ ಹಸಿರು ಮೈಬಣ್ಣ ಆಹಾ! ಅದೆಂತಹ ಚಂದದ ಕೆಂಪಾದ ಮೂಗು.. ಇದ್ದರೆ ಹಾಗಿರಬೇಕು.
ಕಾಗೆ : ಹಾಗಾದರೆ ನೀನೂ ನಿನ್ನ ಬಗ್ಗೆ ತೃಪ್ತಿ ಹೊಂದಿಲ್ಲವೇ!
ಹಂಸ : ಇಲ್ಲ ತಂದೆ ! ಕಾಗೆ ಮತ್ತು ಹಂಸ ಹಾರುತ್ತಾ ಗಿಳಿಯ ಹುಡುಕುತ್ತಾ ಹೊರಟವು . ಅಲ್ಲಿ ಎಲ್ಲಿ ನೋಡಿದರೂ ಹಚ್ಚ ಹಸಿರು. ಆಹಾ ಎಷ್ಟು ಚಂದ ಈ ಪ್ರದೇಶ ಎಂದುಕೊಳ್ಳುತ್ತಾ ಕಾಗೆ ಮತ್ತು ಹಂಸ ನಾಲ್ಕಾರು ಸುತ್ತು ಸುತ್ತಿದ ಮೇಲೆ ಗಿಳಿ ಸಿಕ್ಕಿತು.
ಕಾಗೆ: ಅರೇ ಗಿಳಿಯೇ! ನೀನು ಅದೆಷ್ಟು ಚಂದ. ನೋಡಲು ಎರಡು ಕಣ್ಣು ಸಾಲದು. ನನ್ನ ಮೈ ಬಣ್ಣ ನೋಡು ಯಾರೂ ಇಷ್ಟ ಪಡಲ್ಲ ಎಂದಿತು.
ಗಿಳಿ: ನನ್ನ ಹುಡುಕಲು ಎಷ್ಟು ಸುತ್ತು ತಿರುಗಿದೆ ಹೇಳು?
ಕಾಗೆ: ನಾಲ್ಕಾರು ಸುತ್ತು.
ಗಿಳಿ: ನೋಡು! ಈ ಹಸಿರಿನ ನಡುವೆ ನಾನು ಇದ್ದರೂ ಯಾರಿಗೂ ಕಾಣುವುದಿಲ್ಲ. ಹೀಗಾಗಿ ಇಂತಹ ಬಣ್ಣ ಬೇಕೇ. ಖಂಡಿತ ಬೇಡಾ. ಆ ನವಿಲನ್ನ ನೋಡು. ರಾಷ್ಟ್ರೀಯ ಪಕ್ಷಿ. ಆಹಾ ಅದೆಷ್ಟು ಚಂದ. ಮೈ ಗೆದರಿ ನಿಂತರೆ ನೋಡಲು ಜನ ಸಾಯುವರು. ವಾಹ್! ಅದೆಂತ ಸೌಂದರ್ಯ. ಇದ್ದರೆ ಹಾಗಿರಬೇಕು.
ಕಾಗೆ : ಹಾಗಾದರೆ ನೀನೂ ಕೂಡ ಖುಷಿ ಇಲ್ವಾ?
ಗಿಳಿ: ಇಲ್ಲ ಮಾರಾಯಾ.
ಕಾಗೆ, ಗಿಳಿ ಮತ್ತು ಹಂಸ ಹಾರುತ್ತಾ ನವಿಲಿನ ಕಡೆ ಬಂದವು.
***************
ಕಾಗೆ : ನವಿಲೇ! ನೀನು ಅದೆಷ್ಟು ಸುಂದರ. ನಿನ್ನ ಹಾಗೆ ನಾ ಏಕಿಲ್ಲ! ನೀನೇ ಅದೃಷ್ಟವಂತ.
ನವಿಲು: ಹೇ.. ಕಾಗೆಯೇ.. ಶ್.. ಶ್.. ಶ್.. ಮಾತಾಡಬೇಡ. ಸುಮ್ಮನಿರು. ಅಲ್ಲಿ ದಕ್ ದಕ್ ಸದ್ದು ಕೇಳಿಸ್ತಿದೆಯಾ? (ಕಾಗೆಯ ಕಿವಿಯ ಹತ್ತಿರ ಬಂದು ಪಿಸುಗುಟ್ಟಿತು.)
ಕಾಗೆ: ಹಾ ಕೇಳ್ತಿದೆ. ಯಾರದು?
ನವಿಲು : ಬೇಟೆಗಾರ ಕಣಯ್ಯಾ. ನೋಡು! ಒಂದೇ ಒಂದು ಬುಲೆಟ್ ಸಾಕು. ನನ್ನ ಸಾಯಿಸಿ ನನ್ನ ರೆಕ್ಕೆಗಳನ್ನು ಕಿತ್ತಿ, ಗರಿಗಳನ್ನು ಒಂದೊಂದಾಗಿ ಹೊರ ತೆಗೆದು ಇಡೀ ಪ್ರಪಂಚಕ್ಕೆ ಮಾರುತ್ತಾನೆ. ಇಷ್ಟೇ ನನ್ನ ಸೌಂದರ್ಯದ ಬೆಲೆ.
ಕಾಗೆ: ಹಾಗಾದರೆ ನೀನು ಕೂಡ ತೃಪ್ತಿಯಿಂದ ಇಲ್ಲವೇ?
ನವಿಲು: ಖಂಡಿತ ಇಲ್ಲಪ್ಪ.
ಕಾಗೆ : ಹಾಗಾದರೆ ನಿನ್ನ ಪ್ರಕಾರ ಯಾರೂ ಸುಖಿ?
ನವಿಲು : ನೀನೇ ಕಣಪ್ಪಾ.. ಕಾಗೆರಾಯ..
ಕಾಗೆ: ಅಯ್ಯೋ ಮಾರಾಯಾ! ನಾನಾ? ಹೇಗೆ?
ನವಿಲು : ಯಾರಾದರೂ ನಿನ್ನನ್ನು ಸೆರೆ ಹಿಡಿದು ಮನೆಯಲ್ಲಿ ಇಟ್ಟುಕೊಳ್ಳುವರೇ?
ಕಾಗೆ: ಇಲ್ಲ
ನವಿಲು: ನನ್ನನ್ನು ಕೊಲ್ಲುವಂತೆ, ಯಾರಾದರೂ ನಿನ್ನ ಕೊಲ್ಲಲು ಪ್ರಯತ್ನಿಸುತ್ತಾರೆಯೇ?
ಕಾಗೆ: ಇಲ್ಲ
ನವಿಲು: ಯಾರಿಂದಾದರೂ ನಿನಗೆ ತೊಂದರೆಯೇ
ಕಾಗೆ: ಇಲ್ಲ
ನವಿಲು: ನಿನ್ನಿಂದ ಯಾರಿಗಾದರೂ ತೊಂದರೆಯೇ?
ಕಾಗೆ : ಇಲ್ಲ.
ನವಿಲು: ನಿನ್ನನ್ನು ಮುಟ್ಟಲು ಯಾರಾದರೂ ಪ್ರಯತ್ನಿಸುತ್ತಾರೆಯೇ?
ಕಾಗೆ: ಖಂಡಿತ ಇಲ್ಲ.
ನವಿಲು: ಬಿರಿಯಾನಿ ಶಾಪ್ ಮುಂದೆ ಹೋಗಿ ಆಯ್ದು ಆಯ್ದು ತಿಂದು ಬರ್ತೀಯ ತಾನೇ
ಕಾಗೆ: ಹೌದು
ನವಿಲು: ನಾನು ಬಿರಿಯಾನಿ ಶಾಪ್ ಮುಂದೆ ಹೋಗೋಕೆ ಸಾಧ್ಯವಾ?
ಕಾಗೆ: (ನಗುತ್ತಾ) ಖಂಡಿತ ಇಲ್ಲ.
ನವಿಲು : ಚನ್ನಾಗಿ ಬಿರಿಯಾನಿ ತಿಂತೀಯಾ, ಪಿಂಡದ ಊಟ ಮಾಡಿ ಬರ್ತೀಯ. ಯಾರೂ ನಿನ್ನ ಮುಟ್ಟೋದು ಇಲ್ಲ, ನಿನ್ನ ಸಮೀಪ ಕೂಡ ಬರಲ್ಲ, ನಿನ್ನ ಕೊಲ್ಲೋ ಯೋಚನೆ ಕೂಡ ಜನ ಮಾಡಲ್ಲ, ನಿನ್ನ ಸುದ್ದಿಗೆ ಬರಲ್ಲ. ಎಲ್ಲೆಂದರಲ್ಲಿ ಆಯ್ದು ಕೊಂಡು ತಿಂದು ಆರಾಮಾಗಿ ಜೀವ ಭಯ ಇಲ್ದೆ ಗುಂಡರ್ಗೋವಿ ತರ ಬದುಕ್ತಿಯ.
ನನ್ನ ನೋಡು, ನಿನ್ನ ತರ ಹೋಗಿ ಬಿರಿಯಾನಿ ತಿಂತಿನಾ! ಪಿಂಡದ ಊಟಕ್ಕ ಹೋಗ್ತೀನಾ! ನನ್ನ ಕಂಡ್ರೆ ಸಾಕು, ಕೊಂದು ನನ್ನ ಮಾರಾಟ ಮಾಡೋಣ ಅಂತಾರೆ! ನೋಡಿದರೆ ಕಟ್ಟಿ ಹಾಕೋಣ ಅಂತಾರೆ!
ನಿಜವಾಗಿಯೂ ಇಷ್ಟೆಲ್ಲ ಸುಖಿಯಾಗಿರೋದು ನೀನು ಮಾತ್ರ. ಇಷ್ಟೆಲ್ಲ ಇದ್ದೂ ಜೀವನದಲ್ಲಿ ತೃಪ್ತಿ ಇಲ್ಲ ಅಂತಿಯಲ್ಲ..!
ಕಾಗೆ : (ಈ ಕಡೆ ನಗೋಕು ಆಗದೆ, ಅಳೋಕು ಆಗದೆ, ಪೆಚ್ಚು ಮುಖ ಮಾಡಿಕೊಂಡು ನವಿಲು ಹೇಳಿದ್ದು ಸರಿ ಇದೆಯಲ್ಲ, ಎಲ್ಲರಿಗಿಂತ ನಾನೇ ಸುಖಿ, ಆದರೂ ನನಗೆ ತೃಪ್ತಿ ಇಲ್ಲ ಎಂದು ಅರ್ಥ ಮಾಡಿಕೊಂಡು) ಕೋಪ ಮಾಡ್ಕೋಬೇಡ ನವಿಲೇ, ಅರ್ಥವಾಯ್ತು. ನಾ ಬರ್ತೇನೆ. (ಅಲ್ಲಿಂದ ಸಾಧುವಿನ ಹತ್ತಿರ ಹಾರಿ ಬಂದಿತು.)
ಸಾಧು: ಕಾಗೆರಾಯ, ಹೇಳು ನಿನ್ನನ್ನು ಈಗ ಹಂಸವಾಗಿಸಲೇ?
ಕಾಗೆ : ತಂದೆ, ನಾನು ಎಲ್ಲಿರುವೇನೋ, ಹೇಗಿರುವೇನೋ, ನಾನು ನಾನಾಗಿರುವುದೇ ಸುಖಿ. ದೇವರಿಟ್ಟಂತೆ ಇದ್ದು, ಇನ್ನೊಬ್ಬರೆಡೆ ನೋಡದೆ ಬದುಕುವುದೇ ತೃಪ್ತಿದಾಯಕ ಬದುಕು. ನನಗೆ ಬದುಕಿನ ಮರ್ಮ ಅರ್ಥ ಮಾಡಿಸಿದ ನಿನಗೆ ಸಾವಿರ ನಮಸ್ಕಾರ. ನಾನೇ ಸುಖಿಯಾಗಿರುವೆ (ಎಂದು ಅಲ್ಲಿಂದ ಹಾರಿ ಹೋಯಿತು.)

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ರತನ್ ಮತ್ತು ಟೀಟು
- ನಿಗರ್ವಿ ಹನುಮ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ಡಾ. ರಾಜಶೇಖರ ನಾಗೂರ
