ನದಿಯ ದಡದಲ್ಲಿ “ರಾಮಕೃಷ್ಣ ಕುಟಿ” ಎಂಬ ಚಿಕ್ಕ ಆಶ್ರಮವಿತ್ತು. ಅಲ್ಲಿ ನಂದಿಯನ್ನು ನೆರಳಿಗೆ ನಿಲ್ಲಿಸಿ ಹೋಗಲು ಕುಟಿಯೆಡೆಗೆ ನಡೆದೆ. ಕುಟಿಯೊಳಗಿಂದ ಹೊರಗೆ ಬಂದ ಸನ್ಯಾಸಿಗೆ ಬಾಗಿ ನಮಸ್ಕರಿಸಿ, ಸೈಕಲ್ ನಿಲ್ಲುಸುವುದಾಗಿ ಹೇಳಿದೆ. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ಮಾಂಡು ನಗರ ವೀಕ್ಷಿಸಿ ಮತ್ತು ರೇವಾ ಕುಂಡ ಪೂಜಿಸಿ ಬೆಟ್ಟ ಇಳಿಯುವ ಸರದಿ ಇವಾಗ. ವಿಂಧ್ಯಾಚಲ ಶ್ರೇಣಿಯ ಒಂದು ಬೆಟ್ಟ “ಮಾಂಡು ನಗರ”ವನ್ನು ನೆತ್ತಿಯ ಮೇಲೆ ಹೊತ್ತಿದೆ. ಅದು ಸಮುದ್ರ ಮಟ್ಟದಿಂದ 2076 feet ಎತ್ತರದಲ್ಲಿ. ಬೆಟ್ಟವನ್ನು ಏರಿದ್ದು ಒಂದು ಕಠಿಣ ಸಾಹಸವಾದರೆ ಇನ್ನೂ ಇಳಿಯುವುದು ಅದಕ್ಕಿಂತ ದುರ್ಗಮದ ಹಾದಿ.
ನಾವು ನರ್ಮದಾ ಪರಿಕ್ರಮ ಮಾಡುವಾಗ ಒಮ್ಮೆ ಬಳಸಿದ ರಸ್ತೆಯಲ್ಲಿ ವಾಪಸ್ಸು ಬರುವಂತಿಲ್ಲ, ಅದಕ್ಕಾಗಿ ಬೆಟ್ಟದ ಇನ್ನೊಂದು ಭಾಗದಿಂದ ಕೆಳಗೆ ಇಳಿಯಬೇಕಾಯಿತು. ಇದು ಕಚ್ಚಾ ದಾರಿ. ಕಲ್ಲು, ಮಣ್ಣು, ಸಣ್ಣ ಕಲ್ಲಿನ ಹರಳುಗಳನ್ನು ಏಥೇಚ್ಚವಾಗಿ ಹೊದಿಸಿಕೊಂಡು ಮಲಗಿದ ಕಾಲುದಾರಿಯಿದು. ಇಳಿಜಾರು ಮಾತ್ರ ಯಮ ಭಯಂಕರ, ಸ್ವಲ್ಪವೇ ಆಯತಪ್ಪಿದರೂ ಪ್ರಪಾತಕ್ಕೆ ಉರುಳಿ ಹೋಗುವುದು ನಿಶ್ಚಿತ. ನಾನು ಇಳಿಯುವದಲ್ಲದೇ “ನಂದಿ’ಯನ್ನು ಇಳಿಸಬೇಕು. ಏರುವಾಗ ನಂದಿಯನ್ನು ನೂಕಬೇಕಿತ್ತು, ಆದರೆ ಇವಾಗ ಜಾರಿ ಓಡಿ ಹೋಗದಂತೆ ನಂದಿಯ ಓಟಕ್ಕೆ ಅಡ್ಡಗಾಲು ಹಾಕಿ ಇಳಿಸಬೇಕಿತ್ತು. ಇದು ದುಸ್ತರ ಹಾದಿ.

ಇಲ್ಲಿ ಇಳಿಯುವಾಗಲೇ ಜನರು ಜಾರಿ ಕುಸಿಯುವುದು ಸಾಮಾನ್ಯ. ಆದರೆ ನಾನು ನಿಧಾನಕ್ಕೆ ಒಂದೊಂದೇ ಹೆಜ್ಜೆ ಇಳಿಯತೊಡಗಿದೆ. ಹ್ಯಾಂಡಲ್’ನ್ನು ಬಿಗಿಯಾಗಿ ಹಿಡಿದು, ಎರಡೂ ಚಕ್ರದ ಬ್ರೇಕ್ ಒತ್ತಿ ಹಿಡಿದು ನಂದಿಯನ್ನು ಇಳಿಸತೊಡಗಿದೆ. ಸುಮಾರು 3 ಕಿ.ಮೀ ಉದ್ದದ ಘಾಟು ಪ್ರದೇಶವಿದು. ಒಮ್ಮೊಮ್ಮೆ ಕಾಲು ಜಾರುತ್ತಿದ್ದವು. ಹೆಜ್ಜೆಯ ಮೇಲೆ ಹೆಜ್ಜೆ ಇಡುವ ಪ್ರದೇಶವಿದು.
ಸುತ್ತಲೂ ಬೆಟ್ಟಗಳು, ಸುಳಿದಾಡುವ ತಂಪುಗಾಳಿ. ಉರಿ ಬಿಸಿಲಿದ್ದರೂ ತಂಪು ಎನಿಸುತಿತ್ತು. ಮುಂದಿನ ಕಾಲುದಾರಿ ಕಿರಿದಾಗುತ್ತಾ ಸಾಗುತ್ತಿತ್ತು.
ಬೆಟ್ಟದ ಕೆಳಗಿನ ಊರುಗಳು, ಹೊಲ ಗದ್ದೆಗಳು ಹಸಿರು ಹೊದ್ದು ಕಂಗೊಳಿಸಿತ್ತಿದ್ದವು. ಆಕಾಶದೆತ್ತರದ ಬೆಟ್ಟಗಳು, ಇವುಗಳನ್ನು ಇಳಿಯುವಾಗ ಕೆಳಗೆ ಬಗ್ಗಿ ನೋಡಿದರೆ.. ಚಿಕ್ಕ ಚಿಕ್ಕ ಬೆಟ್ಟಗಳ ಸಂಧುಗಳು ಪ್ರಪಾತವಾಗಿ ಕಾಣುತ್ತಿದ್ದವು. ಎದೆಯಲ್ಲಿ ಢವ… ಢವ… ಬಡಿತ ಜೋರಾಗುತ್ತಿತ್ತು. ಸ್ವಲ್ಪ ಸಮತಟ್ಟಾದ ಜಾಗ ಸಿಕ್ಕರೂ ಅಲ್ಲಿ ಒಂದಿಷ್ಟು ಹೊತ್ತು ನಿಂತು ಧಣಿವಾರಿಸಿಕೊಂಡು ನಡೆಯುತ್ತಿದ್ದೆ.

ಅಂತೂ ಇಂತೂ 2 ತಾಸಿನ ನಂತರ ಯಾವುದೇ ಅಪಾಯಗಳಿಲ್ಲದೆ ಮೈ ಬೆವರಿಳಿಸಿಕೊಂಡು, ನಡುಗುವ ತೊಡೆ, ಭುಜದ ನೋವಿನೊಂದಿಗೆ ನಿಧಾನಕ್ಕೆ ಬೆಟ್ಟವನ್ನು ಇಳಿದೆ.
ಬೆಟ್ಟದ ತೊಪ್ಪಲು ಪ್ರದೇಶದ ‘ಬುಡಕಟ್ಟು” ಜನರ ಮನೆಯಲ್ಲಿ ನೀರು ಕುಡಿದು, ವಿಶ್ರಾಂತಿ ತೆಗೆದುಕೊಂಡು.. ಒಂದೈದು ಕಿ. ಮೀ ನಂದಿಯನ್ನು ಓಡಿಸತೊಡಗಿದೆ. ಆವಾಗ ಬೃಹತ್ ಹೈವೇ ರೋಡು ಸಿಕ್ಕಿತು.
ತಡಮಾಡದೆ ಹೈವೇ ಮೂಲಕ ಮಧ್ಯಪ್ರದೇಶದ ಧಾರ್ ಜಿಲ್ಲೆಯ “ಧಾಮನೋದ” ಊರು ತಲುಪಿದೆ. ಮುಂದೇ ಐತಿಹಾಸಿಕ ನಗರಿ “ಮಹೇಶ್ವರ”ಕ್ಕೆ ಹೊರಟೆ, ಆದರೆ ದಾರಿ ಮಧ್ಯೆಯಲ್ಲಿ “ರೇವಾ ಆಶ್ರಮದ” ಗುರುಗಳು ಮುಂದೇ ಬಿಡದೆ… ಸಂಜೆಯಾಗಿದೆ ಇಲ್ಲಿಯೇ ಉಳಿದುಕೊಳ್ಳಿ ಎಂದು ಒತ್ತಾಯಿಸಿದರು. ಅವರ ಮಾತಿಗೆ ಬಾಗಿ, ಧಾಮನೋದ ಊರಿನಿಂದ ಮಹೇಶ್ವರ ತಲುಪುವ ಮಾರ್ಗ ಮಧ್ಯದ “ಧಹಿವಾರ್” ಹಳ್ಳಿಯ ಸ್ವ. ಸುಗನದೇವಿ ಆಶ್ರಮದಲ್ಲಿ ತಂಗಿರುವೆ. ಮಾಂಡುವಿನ ಬೆಟ್ಟ ಇಳಿದಿದ್ದು ಕಾಲುಗಳು ಕಥೆ ಹೇಳುತ್ತಿವೆ. ಅಲ್ಲಿನ ನಿಸರ್ಗ ಸೌಂದರ್ಯ ಕಣ್ಣಿಗೆ ಕಟ್ಟಿದಂತಿದೆ.

ಸ್ವ.ಸುಗನದೇವಿ ಆಶ್ರಮ ಧಹಿವಾರ್’ದಿಂದ ಹೊರಡಬೇಕೆಂದು ಅಣಿಯಾದಾಗ ಸಮಯ ಬೆಳಿಗ್ಗೆ 8 ಗಂಟೆ ಆದರೂ ಸೂರ್ಯನ ಪತ್ತೆ ಇಲ್ಲ. ಇಬ್ಬನಿ ದಟ್ಟವಾಗಿ ಆವರಿಸಿಕೊಂಡಿದೆ. ತಣ್ಣನೆಯ ಗಾಳಿಯು ಅವಸರಕ್ಕೆ ಬಿದ್ದು ಬೀಸುತ್ತಿತ್ತು. ಸರಿ.. ಒಂಭತ್ತು ಗಂಟೆಗೆ ಹೊರಡಲು “ನಂದಿ”ಯನ್ನು ನೂಕಿಕೊಂಡು ರಸ್ತೆಗೆ ಬಂದೆ.. “ನಂದಿ” ಕುಂಟುತ್ತಾ ನಿಧಾನಕ್ಕೆ ಸಾಗಿದ್ದ, ಸಂಶಯ ಬಂದು ಮುಂದಿನ ಚಕ್ರದತ್ತ ನೋಡಿದರೆ ಒಂದಿಷ್ಟೂ ಗಾಳಿಯಿಲ್ಲದೆ ಟೈರ್ ನೆಲಕಚ್ಚಿತ್ತು.
“ಅರ್ರೇ..!! ಮಾಯಿ ನರ್ಮದಾ.. ಸೈಕಲ್ ಪಂಕ್ಚರ್ ಆಗಿದೆ” ಎಂದು ಮನಸಲ್ಲಿ ಗೊಣಗಿಕೊಂಡು, ಎಲ್ಲವೂ ಮಾಂಡುದ ಬೆಟ್ಟ ಇಳಿದುಬಂದ ದಾರಿಯ ಪರಿಣಾಮ. ಪಂಕ್ಚರ್ ತೆಗೆಯುವ ಸೈಕಲ್ ಅಂಗಡಿ ಹುಡುಕುತ್ತಾ ಹೊರಟೆ. ಅಲ್ಲಿಯೇ ಬೈಕ್ ರಿಪೇರಿ ಮಾಡುತ್ತಿದ್ದವನಿಗೆ ಕೇಳಿದೆ, ಆತ ಇಲ್ಲಿಂದ 8 ಕಿ. ಮೀ ದೂರ ಹೋದರೆ ಅಂಗಡಿ ಸಿಗುತ್ತೆ ಅಲ್ಲಿ ಸರಿಯಾಗುತ್ತೆ ಹೋಗಿ ಎಂದು ಕಳಿಸಿದ. ಇನ್ನೇನು ಮಾಡುವುದು.. ತಾಯಿ ನರ್ಮದೆ ನೆನೆಯುತ್ತಾ ಹೊರಟೆ.. ಮತ್ತೊಂದು ಬೈಕ್ ರಿಪೇರಿ ಅಂಗಡಿ ಸಿಕ್ಕರೂ ಏನೂ ವಿಚಾರಿಸದೆ.. ಸುಮ್ಮನೇ ಹೊರಟೆ… ಸ್ವಲ್ಪ ದೂರಕ್ಕೆ ಹೋಗುತ್ತಿದ್ದೆ, ಆ ಅಂಗಡಿಯವ “ಪ್ರಭು..!! ಬನ್ನಿ ಇಲ್ಲಿ” ಎಂದ.

ನಂದಿಯನ್ನು ಅಲ್ಲಿಯೇ ನಿಲ್ಲಿಸಿ, ವಾಪಸ್ಸು ಹೋದೆ, ನನ್ನ ಸಮಸ್ಯೆ ಕೇಳಿದವನೆ.. “ಮಹಾರಾಜ್! ನಾನು ಬೈಕ್ ಅಷ್ಟೇ ಪಂಕ್ಚರ್ ತೆಗೆಯೋದು, ನಿಮಗೆ ಇಲ್ಲ ಅನ್ನೋಕೆ ಆಗ್ತಿಲ್ಲ. ಬನ್ನಿ ನಿಮ್ಮ ಸೈಕಲ್ ನಾ ಸರಿ ಮಾಡ್ತೀನಿ..!!” ಎಂದ.
ನಂದಿಯನ್ನ ತಾನೇ ತನ್ನ ಅಂಗಡಿಗೆ ತಂದು, ಪಂಕ್ಚರ್ ತೆಗೆದು.. ನನ್ನ ಲಗೇಜ್ ಎಲ್ಲಾ ಕಟ್ಟಿ.. ಚಹಾ ಕುಡಿಸಿ ಕಳಿಸಿದ. ಒಂದೇ ಒಂದು ರೂಪಾಯಿ ತೆಗೆದುಕೊಳ್ಳದೆ. “ಇದು ನರ್ಮದಾ ತಾಯಿಯ ಸೇವೆ, ದಯವಿಟ್ಟು ದುಡ್ಡು ಬೇಡ” ಎಂದ.
ವಿನಮ್ರತೆಯಿಂದ ಬಾಗಿ ಕೈ ಮುಗಿಯುವುದ ಹೊರತು ಇನ್ನೇನೂ ಕೊಡಲು ಆಗಲಿಲ್ಲ. ನರ್ಮದೇ.. ಹರ್!! ಎಂದು ಮುಂದೆ…ಹೊರಟೆ. ನಂದಿ ಕುದುರೆಯಂತೆ ಓಡಿಕೊಂಡು ಹೊರಟ…. ಒಂದೇರಡು ತಾಸಿನಲ್ಲಿ “ಮಹೇಶ್ವರ” ಊರಿನ ಸಮೀಪ ತಲುಪಿದೆ.
“ಸಹಸ್ರಧಾರ” ಕ್ಕೆ ಹೋಗುವ ಮಾರ್ಗದ ಬೋರ್ಡನ್ನು ನೋಡಿದವನೆ, “ಸಹಸ್ರಧಾರ” ತೀರ್ಥ ಕ್ಷೇತ್ರ ನೋಡಲು “ನಂದಿ”ಯನ್ನು ತಿರುವಿಕೊಂಡು ಹೊರಟೆ. ಸಹಸ್ರಧಾರಾ ಇರುವುದು.. “ಜಲಕೋಟಿ” ಎಂಬಲ್ಲಿ… “ಮಹೇಶ್ವರ” ಊರಿನಿಂದ ಕೇವಲ 6 ಕಿ.ಮೀ ಅಂತರದಲ್ಲಿ. ಜಲಕೋಟಿಯಲ್ಲಿ “ದತ್ತ ಧಾಮ” ಮಂದಿರದ ದರ್ಶನ ಮಾಡಿದೆ. ಶ್ರೀಪಾದ ವಲ್ಲಭರು ಒಟ್ಟು ನಾಲ್ಕು ದತ್ತ ಧಾಮಗಳನ್ನು ಭಾರತದಲ್ಲಿ ಸ್ಥಾಪಿಸಿದ್ದಾರೆ, ಅದರಲ್ಲಿ ಇದು ಒಂದು.

ವಿಶಾಲವಾದ ಪ್ರಾಂಗಣ.. ಸುತ್ತಲೂ ಕೋಟೆಯಂತೆ ಕಟ್ಟಿದ ಗೋಡೆಗಳು, ನಟ್ಟ ನಡುವೆ ಮಂದಿರ ಮತ್ತು ಗೋಪುರ. ಮಂದಿರದಲ್ಲಿ ಏಕಮುಖಿ ದತ್ತ ಭಗವಾನ್ ಮೂರ್ತಿಯಿದೆ. ನಳನಳಿಸುವ ಮುಖ ಚಹರೆ ಒಮ್ಮೆಲೇ ಮನಸೆಳೆಯುತ್ತೆ. ಮೂರ್ತಿಯನ್ನು ಗಕ್ಕನೆ ತಿರುಗಿ ನೋಡಿದರೆ.. ಅದ್ಯಾರೋ..ನಿಂತಂತೆ ಭಾಸವಾಗುತ್ತದೆ. ಮಂದಿರದ ಪಕ್ಕ. ನರ್ಮದಾ ದೇವಿಯ ದೇವಸ್ಥಾನವಿದೆ. ಔದುಂಬರ ವೃಕ್ಷಗಳಿವೆ.. ಗಣೇಶ ಮಂದಿರ ಮತ್ತು ಗೋ ಮಾತೆಯ ಬೃಹತ್ ಮೂರ್ತಿಯಿದೆ.
ಎಲ್ಲವನ್ನೂ ವೀಕ್ಷಿಸಿ.. ಕೂತೆದ್ದು.. 500 ಮೀಟರ್ ಅಂತರದಲ್ಲಿ ಕಲರವದೊಂದಿಗೆ ಸಾಗುತ್ತಿದ್ದ ನರ್ಮದಾ ಮಾತೆಯ ತಟದೆಡೆಗೆ ಹೊರಟೆ. ನರ್ಮದಾ ನದಿ ಹರಿದು ಹೋಗುವ.. ಬಿರುಸು ಬಳೆಯ ಸಪ್ಪಳದಂತೆ ನೀರು ಪುಟಿದು ಹರಿಯುತ್ತಿದ್ದ.. ಧ್ವನಿ ಮಾರ್ಧನಿಸುತ್ತತ್ತು.
ನದಿಯ ದಡದಲ್ಲಿ “ರಾಮಕೃಷ್ಣ ಕುಟಿ” ಎಂಬ ಚಿಕ್ಕ ಆಶ್ರಮವಿತ್ತು. ಅಲ್ಲಿ ನಂದಿಯನ್ನು ನೆರಳಿಗೆ ನಿಲ್ಲಿಸಿ ಹೋಗಲು ಕುಟಿಯೆಡೆಗೆ ನಡೆದೆ. ಕುಟಿಯೊಳಗಿಂದ ಹೊರಗೆ ಬಂದ ಸನ್ಯಾಸಿಗೆ ಬಾಗಿ ನಮಸ್ಕರಿಸಿ, ಸೈಕಲ್ ನಿಲ್ಲುಸುವುದಾಗಿ ಹೇಳಿದೆ. ಆಶ್ರಮದ ಸಂತ ಮಹಾತ್ಮರು ನನ್ನ ಬಗ್ಗೆ ವಿಚಾರಿಸಿ, ಮಧ್ಯಾಹ್ನದ ಭೋಜನಕ್ಕೆ ಕರೆದರು.. ನಾನು ನರ್ಮದಾ ತಾಯಿ ತಟಕ್ಕೆ ಹೋಗಿ ಬರುವೆ ಎಂದರು ಬಿಡಲಿಲ್ಲ. ಸರಿ.. ಅವರೊಂದಿಗೆ ಭೋಜನ ಮಾಡಿದೆ.
ನರ್ಮದಾ ನದಿಯ ತಟಕ್ಕೆ ಹೋಗಿ…. ಮೋಕ್ಷದಾಯಿನಿಯನ್ನು ಕಣ್ತುಂಬಿಕೊಳ್ಳಲು ಕುಳಿತುಕೊಂಡೆ. ಇಲ್ಲಿ ನದಿಯ ಪಾತ್ರ ತುಂಬಾ ವಿಶಾಲವಾಗಿದೆ. ನದಿಯ ಮಧ್ಯದ ಬಂಡೆಗಳು ಗಾತ್ರದಲ್ಲಿ ವಿಶಾಲವಾಗಿದೆ ಆದ್ದರಿಂದ ನದಿ ಎಲ್ಲಾ ಬಂಡೆಗಳ ಸಂದುಗಳಲ್ಲಿ… ಬಂಡೆಯ ಮೈ ಜಿಗಿದು..ಒಮ್ಮೊಮ್ಮೆ ಬಂಡೆಯ ನೆತ್ತಿಯ ಮೇಲಿಂದ ಜಾರಿ ಧಾರೆಯಾಗಿ ಹರಿದು ಬಂದು.. ಮುಂದೆ ಮತ್ತೆ ಒಂದಾಗಿ ಹರಿದು ಹೋಗುತ್ತದೆ.

ಬಂಡೆಗಳಿಗೆ ತಾಗಿ.. ಬಾಗಿ.. ಮೈ ದಡವಾಡಿಸಿ ಹರಿಯುವ ಜಲ.. ಹಲವು ಧಾರೆಗಳಾಗಿ ತನ್ನ ಹರಿವನ್ನು ಮುಂದುವರೆಸುತ್ತದೆ. ಆದ್ದರಿಂದಲೇ “ಸಹಸ್ರಧಾರಾ” ಎಂಬ ಹೆಸರು ಬಂದಿದೆ. ಇದೊಂದು ತೀರ್ಥಕ್ಷೇತ್ರವು ಹೌದು.
ಸಹಸ್ರಧಾರಾ ತೀರ್ಥಕ್ಷೇತ್ರದಲ್ಲಿ ಇರುವ “ರಾಮಕೃಷ್ಣ ಕುಟಿ”ಗೆ ವಾಪಸ್ಸು ಹೋದಾಗ ಅಲ್ಲಿನ ಸಂತರು.. ನನ್ನ ಅಲ್ಲಿಯೇ ಉಳಿದುಕೊಳ್ಳುವಂತೆ ಆದೇಶಿಸಿದರು. ಒಮ್ಮೆ ನರ್ಮದಾ ನದಿ ತಟದ ಸನ್ಯಾಸಿಗಳು ಹೇಳಿದರೆ.. ಅಡ್ಡ ಗೆರೆ ಹಾಕಿದಂತೆ. ಅವರ ಮಾತಿಗೆ ಮರುಮಾತಾಡದೇ ಒಪ್ಪಿಕೊಂಡೆ. ರಾಮಕೃಷ್ಣ ಕುಟಿ ಆಶ್ರಮ ಚಿಕ್ಕದಾದರೂ.. ಚಂದನೆಯ 4 ರೂಮುಗಳನ್ನು, ಸುಸಜ್ಜಿತ ಶೌಚಾಲಯ, ನೀರಿನ ವ್ಯವಸ್ಥೆ ಹೊಂದಿದೆ. ಧ್ಯಾನ ಮತ್ತು ಪೂಜೆಗೆ ಒಂದು ಕೋಣೆ ಸಂಪೂರ್ಣ ಮೀಸಲು. ಅಲ್ಲಿಯೇ ಉಳಿದುಕೊಂಡೆ.
ದಿನಕ್ಕೆ ಎರಡು ಬಾರಿ ಚಹಾ.., ಎರಡು ಸಾರೆ ಊಟ, ಮಧ್ಯ ಹಸಿವು ಎನಿಸಿದರೆ ಹಣ್ಣುಗಳು, ದಿನಕ್ಕೆರಡು ಬಾರಿ “ಸಹಸ್ರಧಾರೆಯಲ್ಲಿ ಸ್ನಾನ ಮತ್ತು ಪೂಜೆ. ಇವು ಆಶ್ರಮದ ವ್ಯವಸ್ಥೆ.
ಆಶ್ರಮದಿಂದ ನದಿ ಕೇವಲ 200 ಮೀಟರ್ ಅಂತರದಲ್ಲಿದೆ. ಆಶ್ರಮದ ಹೊರಗೆ ಕೂತರೆ.. ನದಿ ಸಲೀಸಾಗಿ.. ಭಾರಿ ಕಲರವದ ಸ್ಪರದೊಂದಿಗೆ ಹರಿಯುವ ದೃಶ್ಯವನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಸಂಕ್ರಮಣ ಮಾರನೆಯ ದಿನ ಇದ್ದುದರಿಂದ.. ಸಂತ ಮಹಾತ್ಮರು.. ಸಹಸ್ರಧಾರಾ ತೀರ್ಥಕ್ಷೇತ್ರದಲ್ಲಿ ಆಚರಿಸಲು ಹೇಳಿದರು.
ನನ್ನ 27 ದಿನದ ವಿಶ್ರಾಂತಿ, ಮತ್ತು.. 28 ನೇಯ ದಿನದ “ಮಕರ ಸಂಕ್ರಾಂತಿ” ದಿನವು “ಆಶ್ರಮದಲ್ಲಿಯೇ ಉಳಿದುಕೊಂಡೆ. ನದಿ ಸ್ನಾನ, ಧ್ಯಾನ, ಪೂಜೆಯೊಂದಿಗೆ ಇಂದಿನ ಸಂಕ್ರಾಂತಿಯನ್ನು ವಿಶೇಷವಾಗಿ ಸಂತರೊಂದಿಗೆ ಆಚರಿಸಿದೆ. ಇದು ಸೌಭಾಗ್ಯವು ಹೌದು.
ಇವಾಗ ಆಶ್ರಮದಲ್ಲಿ ಮಲಗಿರುವೆ.. ಕಲ..ಕಲ.. ಶಬ್ಧದೊಂದಿಗೆ.. ದೊಪ್ಪನೆ ಬೀಳುವ ನೀರಿನ ಝರಿಗಳನ್ನು ಬಳಸಿಕೊಂಡು ಹರಿದು ಹೋಗುತ್ತಿದ್ದಾಳೆ ತಾಯಿ ನರ್ಮದೆ. ನಾಳೆ.. ಮಹೇಶ್ವರದತ್ತ ಪ್ರಯಾಣ ಬೆಳೆಸುವೆ.
ನರ್ಮದೆ ಹರ್
ಮುಂದುವರೆಯುವುದು……….
ಹಿಂದಿನ ಸಂಚಿಕೆಗಳು :
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೮)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೯)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೦)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೪)
- ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.
