ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು ರಥಸಪ್ತಮಿ ಎಂದು ಕರೆಯುತ್ತಾರೆ ಕಶ್ಯಪ ಋಷಿ ಹಾಗೂ ಅದಿತಿ ದೇವಿ ದಂಪತಿಗಳಿಗೆ ಜನಿಸಿದ ಮಗುವೇ ಸೂರ್ಯದೇವ. ಈ ದಿನವನ್ನು ಆರೋಗ್ಯ ಸಪ್ತಮಿ ಅಚಲ ಸಪ್ತಮಿ ಎಂದು ಕರೆಯಲಾಗುತ್ತದೆ. – ಚೇತನ ಭಾರ್ಗವ, ತಪ್ಪದೆ ಮುಂದೆ ಓದಿ…
ಈ ಜಗತ್ತು ಕತ್ತಲಲ್ಲಿ ಮುಳುಗಿದ ಸಂದರ್ಭದಲ್ಲಿ ಪರಶಿವನು ಸೂರ್ಯನನ್ನು ಸೃಷ್ಟಿಸಿದನಂತೆ. ಮಹ ವಿಷ್ಣುವಿನ ಶಕ್ತಿಗಳ ಸಂಜಚಯ ರೂಪವೇ ಸೂರ್ಯದೇವ. ಜಗತ್ತು ಉದಯವಾಗಿದ್ದು ಸೂರ್ಯನ ಬೆಳಕಿನಿಂದ. ಸೂರ್ಯನು ಉದಯಿಸದೆ ಹೋದರೆ ಜಗತ್ತೇ ಕತ್ತಲಿನ ಕೂಪದಲ್ಲಿ ಮುಳಗಿ ಹೋಗುತ್ತದೆ. ಸಕಲ ಚರಾಚರ ಜೀವಿಗಳ ಆರೋಗ್ಯವನ್ನು ಸೂರ್ಯದೇವನೇ ಕಾಪಾಡುತ್ತಾನೆ. ಅವನಿಗೆ ಗ್ರಹಣ ಹಿಡಿದರೆ ಜಗತ್ತೇ ರೋಗದ ಭೀತಿಯಿಂದ ತತ್ತರಿಸಿ ಹೋಗುತ್ತದೆ.
ಚಳಿಗಾಲದಲ್ಲಿ ಮುದುಡಿ ಹೋಗಿದ್ದ ಶರೀರ ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದ ನವ ಚೈತನ್ಯ ತುಂಬಿಕೊಳ್ಳುತ್ತದೆ. “ಆರೋಗ್ಯ ಭಾಸ್ಕರಾದಿಚ್ಛೇತ್”ಎಂದರೆ ಸೂರ್ಯ ಆರೋಗ್ಯದಾಯಿ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹುಟ್ಟಿದ ಎಳೆ ಮಕ್ಕಳ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಆ ಮಗುವನ್ನು ಪ್ರತಿದಿನ ಎಳೆ ಬಿಸಿಲಿಗೆ ಹಿಡಿಯುವಂತೆ ವೈದ್ಯರು ಸಲಹೆಯನ್ನು ನೀಡುತ್ತಾರೆ. ಸೂರ್ಯನ ಕಿರಣದಲ್ಲಿ ವಿಟಮಿನ್ “ಡಿ” ಹೇರಳವಾಗಿರುತ್ತದೆ.
ಸೂರ್ಯನ ಕಿರಣಗಳಿಗೆ ರೋಗವನ್ನು ನಿವಾರಣೆ ಮಾಡುವ, ಆರೋಗ್ಯವನ್ನು ವೃದ್ಧಿಸುವ, ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಇದೆ. ಬೆಳಗಿನ ಹಾಗೂ ಸಂಜೆಯ ಸೂರ್ಯನ
ಕಿರಣಗಳು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಆದ್ದರಿಂದ ಸೂರ್ಯನಿಗೆ ವಿಶೇಷವಾದ ಪೂಜೆಯನ್ನು ಮಾಡಲಾಗುತ್ತದೆ.
ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ ಹಾಗೂ ಹಲವು ದೇವಸ್ಥಾನಗಳಲ್ಲಿ ಇಂದು ರಥೋತ್ಸವಗಳು ನಡೆಯುತ್ತದೆ. ಆದ್ದರಿಂದ ಈ ದಿನವನ್ನು ರಥಸಪ್ತಮಿ ಎಂದು ಹೇಳಲಾಗುತ್ತದೆ. ಈ ದಿನ ಸೂರ್ಯದೇವನನ್ನು ಪೂಜಿಸಿದರೆ ಆರೋಗ್ಯ, ಆಯಸ್ಸು, ಸಂಪತ್ತು ಸಂತೋಷ ಹಾಗೂ ಜ್ಞಾನ ಶಕ್ತಿಗಳು ವೃತ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಸಪ್ತ ಕುದುರೆಗಳ ರಥವನ್ನೇರಿ ಸೂರ್ಯ ತನ್ನ ಪಥವನ್ನು ಉತ್ತರ ಗೋಳಾರ್ಧ ತಿರುಗುವ ಮೂಲಕ ಈಶಾನ್ಯ ಮಾರ್ಗದಲ್ಲಿ ಚಲಿಸುವ ಪರ್ವವೇ ರಥಸಪ್ತಮಿಯ ವಿಶೇಷ. ಇಂದಿನ ಹಗಲು ಹೆಚ್ಚಾಗಿರುತ್ತದೆ. ಸೂರ್ಯನು ಏಳು ಕುದುರೆಗಳ 12 ಚಕ್ರವುಳ್ಳ ರಥದಲ್ಲಿ ಚಲಿಸುತ್ತಿರುತ್ತಾನೆ. ಅವನಿಗೆ ಅರುಣನು ಸಾರಥಿ ಆಗಿರುತ್ತಾನೆ. ಈ 12 ಚಕ್ರಗಳು ರಾಶಿಯನ್ನು ಸೂಚಿಸಿದರೆ ಏಳು ಕುದುರೆಗಳು ಏಳು ದಿನಗಳನ್ನು ಪ್ರತಿನಿಧಿಸುತ್ತದೆ.

ಫೋಟೋ ಕೃಪೆ : google
ಈ ದಿನವೂ ಸೂರ್ಯನು ತನ್ನ ಹಳೆಯ ರಥವನ್ನು ಬಿಟ್ಟು ಹೊಸ ರಥವನ್ನು ಹತ್ತುವ ಮೂಲಕ ಜೀವಿಗಳಿಗೆ ಹೊಸ ಚೈತನ್ಯವನ್ನು ನೀಡುತ್ತಾನೆ ಹಾಗಾಗಿ ಈ ದಿನದಂದು ಅವನಿಗೆ ಗೌರವ ಸಲ್ಲಿಸುವ ಸಲುವಾಗಿ ದೇಶಾದ್ಯಂತ ರಥಸಪ್ತಮಿಯನ್ನು ಆಚರಿಸಲಾಗುತ್ತದೆ.
ಪುರಾಣದ ಪ್ರಕಾರ ದ್ವಾಪರ ಯುಗದಲ್ಲಿ ಪಾಂಡವರ ಅಜ್ಞಾತವಾಸದ ಸಮಯದಲ್ಲಿ ಶ್ರೀ ಕೃಷ್ಣನು ಅವರಿಗೆ ರಥಸಪ್ತಮಿ ಬಗ್ಗೆ ತಿಳಿಸಿ ದ್ರೌಪದಿಯು ರಥಯಂದು ಶ್ರದ್ಧಾಭಕ್ತಿಯಿಂದ ಸೂರ್ಯರಾಧನೆ ಮಾಡಿದ ಪರಿಣಾಮವಾಗಿಯೇ ಸೂರ್ಯನಿಂದ ಅಕ್ಷಯಪಾತ್ರೆಯನ್ನು ಪಡೆದು ದಟ್ಟಾರಣ್ಯದಲ್ಲೂ ಮೃಷ್ಟಾನ್ನ ಭೋಜನವನ್ನು ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಅದೇ ರೀತಿ ಯಶೋವರ್ಮನೆಂಬ ರಾಜನಿಗೆ ಜನಿಸಿದ ಮಗುವು ಹುಟ್ಟಿನಿಂದಲೇ ಕಾಯಿಲೆಗೆ ತುತ್ತಾಗಿತ್ತು. ಕುಲ ಪುರೋಹಿತರ ಬಳಿ ಇದಕ್ಕೆ ಪರಿಹಾರ ಕೇಳಿದಾಗ ರಥಸಪ್ತಮಿ ವ್ರತವನ್ನು ಆಚರಿಸಿದರೆ ಈ ರೋಗವು ಪರಿಹಾರವಾಗುತ್ತದೆ ಎಂದು ಸೂಚಿಸಿದರು. ಅದರ ಪ್ರಕಾರವಾಗಿ ರಥಸಪ್ತಮಿ ಎಂದು ಸೂರ್ಯರಾದನೆ ಮಾಡಿದ ನಂತರ ಮಗು ಆರೋಗ್ಯವಂತನಾದನು ಎಂಬ ದೃಷ್ಟಾಂತ ಕಥೆ ಇದೆ.
ರಾಮ ರಾವಣರ ಯುದ್ಧದ ಸಂದರ್ಭದಲ್ಲಿ ಅಗಸ್ತ್ಯ ಮಹರ್ಷಿಗಳ ಉಪದೇಶದಂತೆ ಶ್ರೀರಾಮಚಂದ್ರನೂ ಕೂಡ ಆದಿತ್ಯ ಹೃದಯದ ಮೂಲಕ ಸೂರ್ಯದೇವನನ್ನು ಉಪಾಸನೆ ಮಾಡಿದ್ದಾನೆ ಎಂದು ರಾಮಾಯಣದಲ್ಲಿ ಉಲ್ಲೇಖವಿದೆ. ಸೂರ್ಯರಾಧನೆ ಮಾಡಿ ಚಿನ್ನ ನೀಡುವ ಶಮಂತಕಮಣಿಯನ್ನು ಸತ್ರಜಿತ್ ಪಡೆದ ಎಂಬ ಕಥೆಯನ್ನು ಹರಿವಂಶದಲ್ಲಿ ಹೇಳಲಾಗುತ್ತದೆ.
ಶ್ರೀರಾಮ ಸೂರ್ಯವಂಶದವನಾದರೆ ಕರ್ಣ ಸುಗ್ರೀವ ಶನಿ ಹಾಗೂ ಯಮ ಸೂರ್ಯನ ಪುತ್ರರು.
ಈ ದಿನದ ಸೂರ್ಯೋದಯಕ್ಕೆ ಸರಿಯಾಗಿ ನದಿಗಳಲ್ಲಿ ಸಮುದ್ರದಲ್ಲಿ ಸರೋವರಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ಸೂರ್ಯನ ಕಿರಣಗಳ ಸತ್ವವನ್ನು ಹೀರಿ ಕೊಂಡಿರುವ ಎಕ್ಕದ ಎಲೆಯನ್ನು ದೇಹದ ವಿವಿಧ ಭಾಗಗಳಲ್ಲಿ ಇರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷ ಆಚರಣೆ. ಎಕ್ಕದ ಎಲೆಯು ಔಷಧೀಯ ಅಂಶಗಳನ್ನು ಒಳಗೊಂಡಿರುತ್ತದೆ. ಈ ದಿನದಂದು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವ ಮೂಲಕ ಸೂರ್ಯದೇವನನ್ನು ಆರಾಧಿಸಲಾಗುತ್ತದೆ.
ಜಯತು ಜಯತು ಸೂರ್ಯ ಸಪ್ತಲೋಕೈಕ ದೀಪಂ
ಕಿರಣ ಶಮಿತಾ ಪಾಪಂ ಕ್ಲೇಶ ದುಃಖಸ್ಯ ನಾಶಮ್!
ಅರುಣ ನಿಗಮಗಮ್ಯ ಚಾದಿಮಾದಿತ್ಯ ಮೂರ್ತಿಂ
ಸಕಲ ಭುವನ ಮಧ್ಯಂ ಭಾಸ್ಕರಂ ತಂ ನಮಾಮಿ!!
- ಚೇತನ ಭಾರ್ಗವ
