ಮನುಷ್ಯನಾದವನಿಗೆ ಕಷ್ಟ-ನಷ್ಟಗಳು ಬಂದೇ ಬರುತ್ತವೆ. ಅವುಗಳಿಂದ ಹೊರಬರುವ ಪ್ರಯತ್ನವಿರಬೇಕೆ ಹೊರತು ಅವುಗಳಲ್ಲಿ ಸಂಪೂರ್ಣ ಮುಳುಗಿ ನಿನ್ನ ನೀನು ಮರೆಯುವಷ್ಟು ಮಂದವಾಗಬಾರದು. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಈ ನಿಸರ್ಗದ ರಹಸ್ಯಗಳಲ್ಲಿ ನೀನು ಕೂಡ ಒಂದು ವಿಸ್ಮಯ. ನೀನು ಇಲ್ಲಿ ಯಃಕಶ್ಚಿತವಲ್ಲ. ಯಾರಿಂದಲೂ ಮರು ಸೃಷ್ಟಿಸಲಾಗದ, ಎಲ್ಲರಿಗಿಂತ ವಿಭಿನ್ನವಾದ ಬೆರಳಿನ ಗುರುತನ್ನು ನಿನಗೆಂದೇ ನಿಸರ್ಗ ಕೊಟ್ಟಿದೆ. ನಿನಗೆ ಹೋಲಿಕೆಯಾಗುವ ಇನ್ನೊಬ್ಬ ವ್ಯಕ್ತಿ ಈ ಪ್ರಪಂಚದಲ್ಲಿ ಹುಟ್ಟಿಲ್ಲ. ವಂಶವಾಹಿನಿಯಲ್ಲೂ ನೀನೇ ಪ್ರತ್ಯೇಕವಾಗಿ ನಿಲ್ಲುತ್ತೀಯ.
ಇನ್ನೊಂದು ಮುಖ್ಯವಾದ ವಿಷಯ ನೆನಪಿಡು. ಈ ಪ್ರಕೃತಿ ತನ್ನೊಡಲ ಪ್ರತೀ ಜೀವಿಗೂ ಒಂದೇ ತೆರನಾದ ಅವಕಾಶಗಳನ್ನು ಕೊಟ್ಟಿದೆ. ಈ ನಿಸರ್ಗ ಒಂದು ಆನೆಯನ್ನು ರಚಿಸಲು ತೆಗೆದುಕೊಂಡ ಶ್ರಮವನ್ನು ಒಂದು ಇರುವೆಯ ಸೃಷ್ಟಿಗೂ ತೆಗೆದುಕೊಂಡಿರುತ್ತದೆ. ನಿಸರ್ಗದ ಅಡಿಯಲ್ಲಿ ಸೃಷ್ಟಿಯಾದ ಪ್ರತೀ ಜೀವಿಗೂ ಅದರದೇ ಆದ ಮಹತ್ವವಿದೆ. ಇಲ್ಲಿ ಯಾವುದೂ ಕನಿಷ್ಠವಲ್ಲ. ಯಾವುದೂ ಶ್ರೇಷ್ಠವಲ್ಲ. ಎಲ್ಲವೂ ಸರಿಸಮಾನ. ಹಾಗೊಂದು ವೇಳೆ ತಾರತಮ್ಯಗಳಿದ್ದರೆ ಅದು ಮನುಷ್ಯನ ಮತಿಯಲ್ಲಿ ಮಾತ್ರ. ಎಲ್ಲವನ್ನೂ ತನ್ನಿಚ್ಚೆಯಂತೆ ಶ್ರೇಷ್ಠ-ಕನಿಷ್ಠ ಎಂದು ವಿಭಜಿಸಿ ನೋಡುವ ಕನಿಷ್ಠತೆ ಮನುಷ್ಯನಲ್ಲಿ ಮಾತ್ರ ಕಾಣುತ್ತೇವೆ.
ಹೀಗಾಗಿ ಭೂಮಿ ಮೇಲೆ ನೀನು ಹುಟ್ಟಿ ಬಂದಿರುವೆ ಎಂದ ಮೇಲೆ ಈ ನಿಸರ್ಗವು ನಿನ್ನನ್ನು ಆಯ್ಕೆಮಾಡಿ ತಂದಿರಿಸಿದೆ ಎಂದರ್ಥ. ನೀನೇ ನಿಸರ್ಗದ ಆಯ್ಕೆಯಾಗಿರುವೆ ಎಂದಮೇಲೆ ನಿನಗೆ ನಿನ್ನದೇ ಆದ ಮಹತ್ವವಿದೆ ಎನಿಸಲಾರದೇ?

ಇಲ್ಲಿ ದೇಹ ನಿನ್ನದಲ್ಲ ನಿಜ. ಆತ್ಮವೂ ನಿನ್ನದಲ್ಲ. ಅದು ಪರಮಾತ್ಮನದು. ಪ್ರತೀ ಸಂಬಂಧಗಳು ಸಾಯುವವರೆಗೆ ಮಾತ್ರ ಇರುವಂತಹವು. ಹಾಗಾದರೆ ನಿನ್ನದು ಯಾವುದು?
ಈ ಸಧ್ಯದ ಪ್ರತಿ ಕ್ಷಣಗಳು ನಿನ್ನವು. ಪ್ರತಿದಿನ 86,400 ಸೆಕೆಂಡುಗಳನ್ನು ಪುಕ್ಕಟೆಯಾಗಿ ದೇವರು ನಿನ್ನ ಜೀವನದ ಖಾತೆಗೆ ಜಮೆ ಮಾಡುತ್ತಾನೆ. ಈ ಕ್ಷಣಗಳನ್ನು ದೇವರು ಸಮನಾಗಿ ಎಲ್ಲರಿಗೂ ಅನ್ಯಾಯವಾಗದಂತೆ ವಹಿಸಿಕೊಟ್ಟಿದ್ದಾನೆ. ನೀನು ಆ ಸತ್ಯವನ್ನು ಅರಿಯದೆ ಮರಳಿ ಬಾರದ ಅಮೂಲ್ಯ ಕ್ಷಣಗಳನ್ನು ಸದ್ವಿನಿಯೋಗಿಸಿಕೊಳ್ಳದೆ ಇತರರನ್ನು ನೋಡುತ್ತಾ, ಕರುಬುತ್ತಾ ನಾನು ನಿರುಪಯೋಗಿ ಎಂದು ನಿರಾಸೆಯಲ್ಲಿ ನಿನ್ನನ್ನು ನೀನು ಮರೆಯುತ್ತಿ. ಇದು ತರವೇ?.
ಕಷ್ಟ-ನಷ್ಟಗಳು ಮನುಷ್ಯನಾದ ನಿನಗೆ ಬಂದೇ ಬರುತ್ತವೆ. ಅವುಗಳಿಂದ ಹೊರಬರುವ ಪ್ರಯತ್ನವಿರಬೇಕೆ ಹೊರತು ಅವುಗಳಲ್ಲಿ ಸಂಪೂರ್ಣ ಮುಳುಗಿ ನಿನ್ನ ನೀನು ಮರೆಯುವಷ್ಟು ಮಂದವಾಗಬಾರದು. ಪ್ರಕೃತಿಯಲ್ಲಿ ಪ್ರತ್ಯೇಕವಾಗಿ ನಿನಗೆ ನಿಲುವಿದೆ ಎಂದಾದ ಮೇಲೆ ನೀನು ನೀನಾಗಿ ನಿಲ್ಲಬೇಕು. ನಿನ್ನ ಆಗಮನದ ಉದ್ದೇಶವೊಂದನ್ನು ವಹಿಸಿಕೊಟ್ಟ ಈ ಪ್ರಕೃತಿಗೆ ಪೂರಕವಾಗಿ ನಿಲ್ಲಬೇಕಲ್ಲವೇ! ಒಂದು ಎರೆಹುಳುವಿಗೆ ಒಂದು ಕರ್ತವ್ಯವಿದ್ದರೆ, ಉಳುವ ಎತ್ತಿಗೊಂದು ಕರ್ತವ್ಯ. ಹಾಲು ಕೊಡುವ ಹಸುವಿಗೊಂದು ಉದ್ದೇಶವಿದೆ.
ಹೀಗೆಯೇ ನೀನು ಇವೆಲ್ಲವುಗಳಿಗಿಂತ ಪ್ರಬುದ್ಧನಾಗಿರುವೆ. ಯೋಚನಾ ಸಾಮರ್ಥ್ಯವಿದೆ. ಮನಸೊಳಗಿನ ಬೇಗುದಿಯ ಅಭಿವ್ಯಕ್ತಿಸಲು ಭಾಷೆಯನ್ನು ಹೊಂದಿರುವೆ. ಇಷ್ಟೆಲ್ಲ ಇರುವಾಗ ಜೀವನದ ಕಷ್ಟ ಕಾರ್ಪಣ್ಯಗಳಿಗೆ ಹೆದರಿ ನಿನ್ನ ನೀನು ಮರೆತರೆನು ಸುಖವಿದೆ!
ಹೀಗೆ ನಿನ್ನ ನೀನು ಮರೆತು ನರಳುವಾಗ ಎಲ್ಲವನ್ನೂ ನಿನಗೆ ಒದಗಿಸಿದ ಮೇಲಿನ ಸೃಷ್ಟಿಕರ್ತ “ನಿನ್ನ ನೀನು ಮರೆತರೇನು ಸುಖವಿದೆ? ನಿನ್ನ ನೀನು ಅರಿತರೇನೆ ಬಲವಿದೆ!” ಎನ್ನುತ್ತಿರಬಹುದೇ!!
‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ಡಾ. ರಾಜಶೇಖರ ನಾಗೂರ