ಶ್ರೀ ಶರಭೇಶ್ವರ ದೇವಾಲಯ

ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಭುವನಂ ಗ್ರಾಮದಲ್ಲಿರುವ ಕಂಪಾಹರೇಶ್ವರ ದೇವಾಲಯ ಎಂದೂ ಕರೆಯಲ್ಪಡುವ “ಶರಭೇಶ್ವರನ ದೇವಸ್ಥಾನ” ಅತ್ಯಂತ ಪ್ರಸಿದ್ಧವಾಗಿದೆ. ಈ ದೇವಾಲಯದ ಸ್ಥಾಪನೆಯ ಹಿಂದೆಯೂ ಒಂದು ರೋಚಕವಾದ ಕಥೆ ಇದ್ದು, ಕತೆಯ ಕುರಿತು ಸೌಮ್ಯ ಸನತ್ ಅವರು ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದಲ್ಲಿ ಹೇಳಿದ್ದಾರೆ, ತಪ್ಪದೆ ಮುಂದೆ ಓದಿ…

“ಸ್ಯಾತ್ ಪರಮೇಶ್ವರಸ್ಯಾಪಿ ಇಚ್ಛಾವಶಾತ್ ಮಾಯಾಮಯಂ ರೂಪಂ ಸಾಧಕಾನುಗ್ರಹಾರ್ಥ”‘ ಅಂದರೆ ಸಾಧಕರಿಗೆ ಅನುಗ್ರಹ ಮಾಡುವುದಕ್ಕೆ ಭಗವಂತ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟನಾಗುತ್ತಾನೆ ಎನ್ನುತ್ತಾರೆ ಆದಿ ಗುರು ಆದಿ ಶಂಕರರು. ಒಂದೇ ಬಾರಿಗೆ ಬೇರೆ ಬೇರೆ ರೂಪದಲ್ಲಿ ಆವಿರ್ಭವಸಬಲ್ಲ ಭಗವಂತನ ಈ ತತ್ವಕ್ಕೆ ಇರುವ ಉತ್ತಮ ಉದಾಹರಣೆಯೇ ನೃಸಿಂಹ-ಶರಭೇಶ್ವರ ಅವತಾರಗಳು.

ಅಭೂತ ಪೂರ್ವವಾದ ವರವನ್ನು ಪಡೆದ ಹಿರಣ್ಯಕಶಿಪು ತಾನು ಚಿರಂಜೀವಿ ತನಗೆ ಸಾವೇ ಇಲ್ಲ ಎಂಬ ಭ್ರಮೆಯಲ್ಲಿ ವಿಶ್ವದ ಮೇಲೆ ತನ್ನ ಅಧಿಪತ್ಯವನ್ನು ಸಾರಲು ಹೊರಟು ಇಡೀ ಭೂಮಿಯಲ್ಲಿ ದೇವರಿಲ್ಲ. ಇಲ್ಲಿ ನಾನೇ ದೇವರು. ಇನ್ನು ಮುಂದೆ ಎಲ್ಲರೂ ತನ್ನನ್ನೇ ದೇವರು ಎಂದು ಪೂಜಿಸಬೇಕು ಹಾಗೆ ಪೂಜಿಸದವರಿಗೆ ಕಠಿಣ ರೀತಿಯಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿರುವಾಗ ಅವನ ಮಗ ವಿಷ್ಣುವಿನ ಪರಮ ಭಕ್ತ ಪ್ರಹ್ಲಾದನೊಂದಿಗಿನ ವಾಗ್ವಾದದಲ್ಲಿ ನಿನ್ನ ಹರಿ ಎಲ್ಲಿರುವನು? ಎಂದು ಅಲ್ಲಿದ್ದ ಕಂಬವೊಂದಕ್ಕೆ ಕೋಪೋದ್ರಿತನಾಗಿ ತನ್ನ ಗಧೆಯಿಂದ ಹೊಡೆದಾಗ ಆ ಸೀಳಿದ ಕಂಬದಿಂದ ಅರ್ಧ ನರ, ಮತ್ತರ್ಧ ಸಿಂಹದ ರೂಪದ ನರಸಿಂಹ ಉಗ್ರ ಸ್ವರೂಪನಾಗಿ ಹೊರಬಂದು ಹಿರಣ್ಯಷಿಪುವಿನೊಂದಿಗೆ ಹೋರಾಡಿ, ಅವನನ್ನು ಎಳೆದು ಕೊಂಡು ಅತ್ತ ಹಗಲೂ ಅಲ್ಲದ ಇರುಳೂ ಅಲ್ಲದ ಗೋಧೂಳೀ ಸಮಯದಲ್ಲಿ ಮನೆಯ ಹೊರಗೂ ಅಲ್ಲದ, ಒಳಗೂ ಅಲ್ಲದ ಹೊಸಿಲಿನ ಮೇಲೆ ನಿಂತು, ಆಕಾಶವೂ ಅಲ್ಲದ, ಭೂಮಿಯೂ ಅಲ್ಲದೆ ಮಧ್ಯದಲ್ಲಿ ತನ್ನ ತೊಡೆಯ ಮೇಲೆ ಹಿರಣ್ಯಕಶಿಪು ವನನ್ನು ಮಲಗಿಸಿಕೊಂಡು ಯಾವುದೇ ಆಯುಧವಿಲ್ಲದೇ ತನ್ನ ಉಗುರುಗಳಿಂದಲೇ ಆತನ ಹೊಟ್ಟೆಯನ್ನು ಬಗೆದು ಹಿರಣ್ಯ ಕಶುಪುವನ್ನು ಸಂಹರಿಸಿದ ಕಥೆಯು ನಮಗೆಲ್ಲ ತಿಳಿದದ್ದೇ.

ಹಾಗೆ ಕೋಪೋದ್ರಿಕ್ತನಾಗಿಯೇ ಹಿರಣ್ಯಕಶ ಪುವಿನ ಸಿಂಹಾಸನದಲ್ಲಿಯೇ ಆಸೀನನಾಗಿದ್ದ ಉಗ್ರ ನರಸಿಂಹನ ಕೋಪವನ್ನು ಶಮನಗೊಳಿಸಲು ಅವನ ತೊಡೆಯ ಮೇಲೆ ಆತನ ಧರ್ಮ ಪತ್ನಿ ಲಕ್ಷ್ಮಿಯನ್ನು ಕೂರಿಸಿ ಉಗ್ರ ನರಸಿಂಹನ ಕೋಪವನ್ನು ತಣಿಸಲು ದೇವಾನುದೇವತೆಗಳೆಲ್ಲಾ ಪ್ರಯತ್ನಿಸುತ್ತಾರಾದರೂ, ನಾರಸಿಂಹನ ಅವತಾರದ ಉಗ್ರತ್ವ ಕಡಿಮೆಯಾಗುವುದಿಲ್ಲ. ಇದರಿಂದ ಆತಂಕಗೊಂಡ ದೇವತೆಗಳು ನೃಸಿಂಹನ ಉಗ್ರತ್ವವನ್ನು ಕಡಿಮೆ ಮಾಡಿ ವಿಷ್ಣುವಿನ ಶಾಂತತೆಯನ್ನು ಮರಳಿಸಲು ಸಮುದ್ರಮಂಥನದ ಸಮಯದಲ್ಲಿ ಹಾಲಾಹಲವನ್ನು ಕುಡಿದು ಲೋಕವನ್ನೇ ರಕ್ಷಿಸಿದ್ದ ಶಿವನನ್ನು ಪ್ರಾರ್ಥಿಸುತ್ತಾರೆ. ಶಿವ ಲಯಕಾರಕ ಆದಿ ಇದ್ದ ಮೇಲೆ ಅಂತ್ಯವೂ ಇರಲೇ ಬೇಕೆಂಬ ನಿಯಮದಂತೆ ನರಸಿಂಹನ ಉಗ್ರತೆಯನ್ನು ಅಂತ್ಯಗೊಳಿಸಲು ಶರಭೇಶ್ವರನಾಗಿ ಅವತರಿಸುತ್ತಾನೆ.

“ಶರಭವೆಂಬುದು” ಹಿಂದೂ ಪುರಾಣಗಳಲ್ಲಿ ಕಂಡು ಬರುವ ಅರ್ಧ ಸಿಂಹ ಮತ್ತು ಅರ್ಧ ಹಕ್ಕಿಯ ದೇಹ ಹೊಂದಿರುವ, ಎಂಟು ಕಾಲುಗಳಿರುವ ಪ್ರಾಣಿ. ಒಂದೆ ಜಿಗಿತದಲ್ಲಿ ಕಣಿವೆಗಳನ್ನು ಹಾರಬಲ್ಲ ಈ ಪ್ರಾಣಿ ಸಿಂಹ ಮತ್ತು ಆನೆಗಿಂತ ಭೀಕರ ಮತ್ತು ಸಿಂಹವನ್ನೇ ಕೊಲ್ಲಬಲ್ಲಂತಹ ಶಕ್ತಿಶಾಲಿ.

ಹಿರಣ್ಯಕಶಿಪುವನ್ನು ವಧಿಸಿದ ನಂತರ ಆ ರಾಕ್ಷಸನ ರಕ್ತವು ನರಸಿಂಹನ ಮೈಮೇಲೆಲ್ಲ ಹರಡಿತ್ತಲ್ಲದೇ, ಆ ರಕ್ತದ ಹನಿಗಳು ಭೂಮಿಗೆ ಬಿದ್ದರೆ ಅವಿನಾಶಿ ರಾಕ್ಷಸರು ಜನ್ಮ ತಳೆಯಬಹುದಾದ ಪರಿಸ್ಥಿತಿ ಇದ್ದ ಕಾರಣ, ಶರಭ ರೂಪದ ಮಹಾಶಿವ, ನರಸಿಂಹನನ್ನು ಗುರುತ್ವ ಕೇಂದ್ರದಿಂದ ಮೇಲೆ ಕರೆದೊಯ್ದು ಅವನ ಮೈಮೇಲಿರುವ ಎಲ್ಲ ರಕ್ತದ ಹನಿಗಳು ಆವಿಯಾಗುವಂತೆ ಮಾಡಿ, ನರಸಿಂಹನ ಕೋಪವನ್ನೆಲ್ಲಾ ತಣಿಸಿ ಆತನನ್ನು ಪ್ರಸನ್ನಚಿತ್ತನಾಗಿಸುತ್ತಾನೆ ಇದರಿಂದ ಸಂತೃಷ್ಟರಾದ ಸಕಲ ದೇವಾನುದೇವತೆಗಳು ಮತ್ತು ವಿಷ್ಣು ಆದಿಯಾಗಿ ಎಲ್ಲರೂ ಆ ಪರಶಿವನಿಗೆ ಅತ್ಯಂತ ಶ್ರದ್ಥಾಭಕ್ತಿಗಳಿಂದ ಗೌರವಾದರಗಳನ್ನು ಸಲ್ಲಿಸುತ್ತಾರೆ.

ನರಸಿಂಹ ಅವತಾರದಲ್ಲಿ ವಿಷ್ಣು ಅರ್ಧ ನರ ಮತ್ತು ಮತ್ತರ್ಧ ಪ್ರಾಣಿಯ ರೂಪವಾದ ಸಿಂಹಾವತಾರಿಯಾಗಿ ಭೀಕರವಾಗಿ ಕಾಣಿಸಿಕೊಂಡರೆ, ಅದಕ್ಕಿಂತಲೂ ಭೀಕರವಾಗಿ ಮನುಷ್ಯ, ಪ್ರಾಣಿ, ಗರುಡ ಇವೆಲ್ಲವೂ ಸಮ್ಮಿಳಿತವಾದ ಶರಭೇಶ್ವರ ಅವತಾರದಲ್ಲಿ ಶಿವ ಪ್ರತ್ಯಕ್ಷನಾಗುವ ಮೂಲಕ ನರಸಿಂಹನ ಆರ್ಭಟವನ್ನು ತಗ್ಗಿಸುತ್ತಾನೆ ಎನ್ನುವ ಕಥೆ ನಮ್ಮ ಪುರಾಣದಲ್ಲಿ ಕಂಡು ಬರುತ್ತದೆ.

This slideshow requires JavaScript.

ದೇಶಾದ್ಯಂತ ಸಾವಿರಾರು ನರಸಿಂಹ ದೇವರ ದೇವಾಲಯಗಳನ್ನು ಕಾಣಬಹುದಾದರೂ ಶರಭೇಶ್ವರ ದೇವಸ್ಥಾನಗಳ ಸಂಖ್ಯೆ ಅತ್ಯಂತ ವಿರಳವಾಗಿದೆ. ಅಂತಹದ್ದರಲ್ಲಿ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಭುವನಂ ಗ್ರಾಮದಲ್ಲಿರುವ ಕಂಪಾಹರೇಶ್ವರ ದೇವಾಲಯ ಎಂದೂ ಕರೆಯಲ್ಪಡುವ “ಶರಭೇಶ್ವರನ ದೇವಸ್ಥಾನ” ಅತ್ಯಂತ ಪ್ರಸಿದ್ಧವಾಗಿದೆ.

ಈ ದೇವಾಲಯದ ಸ್ಥಾಪನೆಯ ಹಿಂದೆಯೂ ಒಂದು ರೋಚಕವಾದ ಕಥೆ ಇದ್ದು, ಅದೊಮ್ಮೆ ಸ್ಥಳೀಯ ವರಗುಣ ಪಾಂಡಿಯನ್ ಎಂಬ ರಾಜ ತನ್ನ ಶತ್ರುಗಳನ್ನು ಸದೆ ಬಡಿಯಲೆಂದು ವೇಗವಾಗಿ ಮತ್ತು ಅಷ್ಟೇ ವ್ಯಾಘ್ರನಾಗಿ ತನ್ನ ಕುದುರೆಯ ಮೇಲೆ ತೆರಳುತ್ತಿದ್ದ ಸಮಯದಲ್ಲಿ ಅಕಸ್ಮಾತಾಗಿ ಅವನ ಹಾದಿಗೆ ಅಡ್ಡಬಂದ ಬ್ರಾಹ್ಮಣನೊಬ್ಬನೊಂದಿಗೆ ಅಪಘಾತ ಸಂಭವಿಸಿ ಬ್ರಾಹ್ಮಣ ಸ್ಥಳದಲ್ಲಿಯೇ ತೀರಿಕೊಂಡಾಗ ಆ ರಾಜನಿಗೆ ಬ್ರಾಹ್ಮಣ ಹತ್ಯಾ ದೋಷ ತಗುಲಿತು.

ಈ ರೀತಿಯಾಗಿ ಬ್ರಾಹ್ಮಣ ಹತ್ಯಾ ದೋಷದಿಂದಾಗಿ ರಾಜನ ಕೈ ಕಾಲುಗಳು ಕಂಪಿಸತೊಡಗುತ್ತದೆ. ಈ ರೋಗದಿಂದ ಮುಕ್ತವಾಗಲೂ ನಾನಾ ರೀತಿಯ ಔಷಧೋಪಚಾರಗಳಿಂದ ವಾಸಿಯಾಗದೆ ಚಿಂತಿತನಾದ ರಾಜ, ಅಂತಿಮವಾಗಿ ಮಹಾಶಿವನ ಮೊರೆ ಹೊಕ್ಕು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆರಾಧಿಸಿದ ಕಾರಣ, ಆ ಶಿವನನ ಕೃಪಾಶೀರ್ವಾದದಿಂದ ಕೆಲವೇ ದಿನಗಳಲ್ಲಿ ರಾಜನ ನಡುಕ ಸಂಪೂರ್ಣವಾಗಿ ನಿಂತು ಹೋಗುತ್ತದೆ.

ಹಾಗೆ ಈ ರೋಗವನ್ನು ನಾಶಪಡಿಸಿದ ನೆನಪಿನಾರ್ಥ ರಾಜನು ಅಲ್ಲೊಂದು ಭವ್ಯವಾದ ದೇವಾಲಯವನ್ನು ನಿರ್ಮಿಸಿ ಅದಕ್ಕೆ “ಕಂಪಾಹರೇಶ್ವರ ದೇವಾಲಯ” ಎಂದು ಹೆಸರಿಡುತ್ತಾನೆ.ಯಾರು ಮಾನಸಿಕವಾಗಿ ಭಯದಿಂದ ಇಲ್ಲವೇ ತೊಳಲಾಟಗಳಿಂದ ಬಳಲುತ್ತಾರೋ ಅಂತಹವರು ಈ ಶಿವನ ದೇವಾಲಯಕ್ಕೆ ಭಕ್ತಿಯಿಂದ ಪೂಜಿಸಿದರೆ ಅವರ ಎಲ್ಲ ಭಯ ನಿವಾರಣೆಯಾಗುತ್ತದೆಂದು ಇಲ್ಲಿನ ಸಕಲ ಭಕ್ತರ ನಂಬಿಕೆಯಾಗಿದೆ. ಇದೇ ದೇವಾಲಯದಲ್ಲಿ ಕಂಪಾಹರೇಶ್ವರನ ಜೊತೆಯಲ್ಲಿಯೇ ಶರಭೇಶ್ವರನ ಸನ್ನಿಧಿಯೂ ಇದ್ದು ಸುಮಾರು ಏಳು ಅಡಿಗಳಷ್ಟು ಎತ್ತರದ ವಿಗ್ರಹ ಹೊಂದಿರುವ ಈ ಶರಭೇಶ್ವರನನ್ನು ಪೂಜಿಸಿದರೆ ಶಿವ, ವಿಷ್ಣು, ಪ್ರತ್ಯಂಗಿರಾ ದೇವಿ ಹಾಗೂ ದುರ್ಗೆ ಈ ನಾಲ್ಕು ಶಕ್ತಿಗಳನ್ನು ಪೂಜಿಸುವಷ್ಟರ ಫಲ ಪ್ರಾಪ್ತಿಯಾಗುತ್ತದೆ ಎನ್ನುವ ಕಾರಣ ಸಾವಿರಾರು ಭಕ್ತಾದಿಗಳು ಈ ದೇವಾಲಯಕ್ಕೆ ಬಂದು “ಕಂಪಾಹರೇಶ್ವರನ” ಜೊತೆಗೆ “ಶರಭೇಶ್ವರನ” ದರ್ಶನವನ್ನು ಪಡೆದು ಕೃಪಾರ್ಥರಾಗುತ್ತಾರೆ.

ಹಿರಣ್ಯಕಶಿಪು ಪರಮ ಶಿವ ಭಕ್ತನಾಗಿದ್ದರೂ, ತನ್ನ ಅಹಂಕಾರದಿಂದ, ತನ್ನ ರಾಕ್ಷಸೀ ಗುಣಗಳಿಂದ ಪ್ರಜಾಪೀಡಕನಾಗಿ, ದೈವ ನಿಂದಕನಾಗಿದ್ದ ಕಾರಣ ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆ ಎಂಬ ತತ್ವದಡಿಯಲ್ಲಿ ಯಾವುದೇ ತಾರತಮ್ಯ ತೋರದೆ ಶಿಕ್ಷೆಗೆ ಗುರಿಪಡಿಸಿದ್ದು ಸದಾಕಾಲವೂ ತಮ್ಮವರ ಪರವಹಿಸಿಕೊಂಡು ಅವರು ಮಾಡುವ ತಪ್ಪುಗಳನ್ನು ಮುಚ್ಚಿಹಾಕಲು ಪ್ರಯತ್ನಿಸುವ ಇಂದಿನವರಿಗೆ ಮಾದರಿ ಆಗಬಹುದಲ್ಲವೇ? ಅದೇ ರೀತಿ ತಾನೇ ಹೆಚ್ಚು ತನ್ನನ್ನು ಬಿಟ್ಟರೆ ಮತ್ತೊಬ್ಬರಿಲ್ಲಾ ಎಂದು ಅಹಂಕಾರದಿಂದ ಮೆರೆಯುವರಿಗೆ ಸದಾಕಾಲವೂ ನಮಗಿಂತಲೂ ದೊಡ್ಡ ಮತ್ತೊಂದು ಶಕ್ತಿ ಇದ್ದೇ ಇರುತ್ತದೆ ಎಂಬುದಕ್ಕೆ ಈ ಪುರಾಣ ಕಥೆಯೇ ಜ್ವಲಂತ ಸಾಕ್ಷಿಯಾಗಿದೆ.

‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದ ಹಿಂದಿನ ಸಂಚಿಕೆಗಳು :


  • ಸೌಮ್ಯ ಸನತ್

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW