ಒಂದು ಬಾರಿ ಸೋತರೆ ಅದು ಸೋಲಲ್ಲ. ಆ ಸೋಲಿನಿಂದ ಪಾಠ ಕಲಿಯದಿದ್ದರೆ ಅದು ನಿಜವಾದ ಸೋಲು. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಕತ್ತಲಿದ್ದಾಗಲೇ ಬೆಳಕಿನ ಮಹತ್ವ ಗೊತ್ತಾಗುವುದು. ಕೆಳಗೆ ಬಿದ್ದಾಗಲೇ ಮೇಲೇಳಲು ಛಲ ಬರುವುದು. ಸೋತಾಗಲೇ ಗೆಲುವಿನ ಮಹತ್ವದರಿವಾಗುವುದು.
ಈ ಬದುಕಿನಲ್ಲಿ ಯಾವುದೇ ಕೆಲಸವನ್ನು ತೆಗೆದುಕೊಳ್ಳಿ ಮೊದಲನೇ ಪ್ರಯತ್ನದಲ್ಲಿಯೇ ಆ ಕೆಲಸ ಆಗಿಯೇ ತೀರುತ್ತದೆ ಎಂದು ಯಾರು ಎದೆತಟ್ಟಿ ಹೇಳುವಂತಿಲ್ಲ. ಇದರ ಅರ್ಥ ಇಷ್ಟೇ. ಸಫಲತೆಗೆ ಬಹುಮುಖಿ ಪ್ರಯತ್ನ ಬಹುಮುಖ್ಯ. ಹೀಗಾಗಿ ಒಂದು ಬಾರಿ ಸೋತರೆ ಅದು ಸೋಲಲ್ಲ. ಆ ಸೋಲಿನಿಂದ ಪಾಠ ಕಲಿಯದಿದ್ದರೆ ಅದು ನಿಜವಾದ ಸೋಲು. ಹೀಗಾಗಿ ಪ್ರತಿ ಸೋಲಿನಲ್ಲಿಯು ಗೆಲುವಿನ ಸಂಜ್ಞೆ ಇದ್ದೇ ಇರುತ್ತದೆ. ಆ ಸೋಲಿನಲ್ಲಿ ನಮ್ಮ ಯೋಚನಾ ಲಹರಿ ಹೇಗಿದೆ ಎಂಬುದರ ಆಧಾರದ ಮೇಲೆ ಅದು ಗೆಲುವುವಾಗಿ ಮಾರ್ಪಡುತ್ತದೆ.

ಫೋಟೋ ಕೃಪೆ : google
ಎಲ್ಲರಿಗೂ ಚಿರಪರಿಚಿತವಾದಂತಹ ‘ಥಾಮಸ್ ಎಡಿಸನ್’ ‘ವಿದ್ಯುತ್ ಬಲ್ಬ್’ ಅನ್ನು ಆವಿಷ್ಕಾರ ಮಾಡಿದ. ಈ ಆವಿಷ್ಕಾರಕ್ಕಾಗಿ ಹತ್ತು ಸಾವಿರ ಬಾರಿ ಪ್ರಯೋಗ ಮಾಡಿ ಸೋತು, ಹತ್ತುಸಾವಿರನೇ ಬಾರಿ, ನಮಗೆಲ್ಲ ಬೆಳಕನ್ನು ಕೊಡುವ ‘ವಿದ್ಯುತ್ ಬಲ್ಬ್’ ನ್ನು ಆವಿಷ್ಕರಿಸಿದ. ಆಗಿನಕಾಲದಲ್ಲಿ ಕಂಪ್ಯೂಟರ್ ಇರಲಿಲ್ಲ ಎಲ್ಲವನ್ನೂ ಕೈಯಿಂದಲೇ ಬರೆದು ದಾಖಲೆ ಮಾಡಿಕೊಳ್ಳಬೇಕಾಗಿತ್ತು. ಹೀಗಾಗಿ 9000 ಬಾರಿ ಮಾಡಿದ ಎಲ್ಲ ಪ್ರಯೋಗಗಳ ರಾಶಿ ರಾಶಿ ದಾಖಲೆಗಳನ್ನು ತನ್ನ ಪ್ರಯೋಗ ಮಾಡುವ, ಪ್ರಯೋಗ ಶಾಲೆಯಲ್ಲಿ ಇಟ್ಟಿದ್ದ. ಅವನ ಪ್ರಯೋಗ-ಶಾಲೆಗೆ ಒಂದು ದಿನ ಬೆಂಕಿ ಬಿದ್ದಿತು. ಎಲ್ಲರೂ ಓಡಿ ಬಂದು ಅಯ್ಯೋ ನಿನ್ನ ಎಲ್ಲ ಪ್ರಯೋಗಗಳು ಹಾಳಾಗಿ ಹೋದವು. ನಿನ್ನ ಮನಸ್ಥಿತಿ ಏನೆಂದು ನಮಗೆ ಅರಿವಾಗುತ್ತದೆ ಎಂದು ಅನುಕಂಪವನ್ನು ತೋರಿಸಲು ಪ್ರಾರಂಭಿಸಿದರು. ಆಗ ಥಾಮಸ್ ಎಡಿಸನ್ ನಗಲು ಪ್ರಾರಂಭಿಸಿದ. ಎಲ್ಲರೂ ಆಶ್ಚರ್ಯಚಕಿತರಾಗಿ ಇವನನ್ನು ನೋಡುತ್ತಾ ಇವನು ಹುಚ್ಚನಾಗಿರಬೇಕು ಎಂದುಕೊಂಡರು. ಆಗ ಥಾಮಸ್ ಎಡಿಸನ್ ಹೇಳುತ್ತಾನೆ “ಭಸ್ಮವಾಗಿದ್ದು ನಾನು ಮಾಡಿದ 9000 ತಪ್ಪುಗಳು. ಈಗ ಹೊಸದಾಗಿ ಮತ್ತೆ ಪ್ರಯೋಗವನ್ನು ಪ್ರಾರಂಭ ಮಾಡುವೆ” ಎನ್ನುತ್ತಾನೆ. ಆ ಸೋಲಿನಲ್ಲಿಯೂ ಅದೆಂತಹ ಅದ್ಭುತ ಆಲೋಚನಾಲಹರಿ? ಅಂದುಕೊಂಡಂತೆ ಅವನು, ಮುಂದೆ ಈ ‘ವಿದ್ಯುತ್ತ್ ಬಲ್ಬ’ ನ್ನು ಆವಿಷ್ಕರಿಸಿಯೇ ಬಿಟ್ಟ. ನಮಗೆಲ್ಲ ಬೆಳಗಾದ. ಅವನ ಅಂದಿನ ಸೋಲು, ಇಂದು ನಮ್ಮನ್ನು ಬೆಳಗಿದ ಗೆಲುವಿನ ಸೋಪಾನವಲ್ಲವೇ!
ಎಡಿಸನ್ ನ ಜಾಗದಲ್ಲಿ ನಾವ್ಯಾರೋ ಇದ್ದು, ನಾಲ್ಕಾರು ಬಾರಿ ಪ್ರಯತ್ನಿಸಿ ಸೋತಿದ್ದರೆ “ಅಯ್ಯೋ ಈ ಜೀವನನಶ್ವರ. ಎಲ್ಲಾ ಕಷ್ಟಗಳನ್ನು ದೇವರು ನನಗೇ ಕೊಟ್ಟಿದ್ದಾನೆ” ಎಂದು ಜಿಗುಪ್ಸೆ ತಾಳಿ ಮಠ ಮಾನ್ಯಗಳ ಭಜನಾ ಮಂಡಳಿಗೆ ಸದಸ್ಯರಾಗಿರುತ್ತಿದ್ದೆವು. ಅಲ್ಲವೇ!
ಇಂದು ಯಾವನೋ/ ಯಾವಳೋ ಒಬ್ಬ ಕೈ ಬಿಟ್ಟು ಹೋದನೆಂದೋ/ಹೋದಳೆಂದೋ ನೇಣುಹಾಕಿಕೊಳ್ಳುವ ಮಹಾಧೀರರು ನಮ್ಮಲ್ಲಿದ್ದಾರೆ. ಜೀವನದ ಅಗಾಧ ಗೆಲುವನ್ನು, ಒಂದು ಚಿಕ್ಕ ಲಘುವಾದ ಸೋಲಿನಲ್ಲಿ ಕೊನೆಗೊಳಿಸಿಕೊಳ್ಳುವ ಮೂರ್ಖರು ಇವರು. “ನನ್ನನ್ನು ಮತ್ತೆ ನೀನು ಹಿಂದುರುಗಿ ನೋಡಬೇಕು ಹಾಗೆ ಜೀವಿಸಿ ತೋರಿಸುತ್ತೇನೆ” ಎಂಬ ಛಲ ಇಂಥವರಲ್ಲಿ ಯಾಕೆ ಮೂಡಬಾರದು! ಇಂಥವರು ಎಂದೆಂದೂ ಬದುಕಲ್ಲಿ ಗೆಲ್ಲಲು ಸಾಧ್ಯವಿಲ್ಲ. ಸೋಲನ್ನೂ ಗೆಲುವಿನ ರೂವಾರಿಯಂತೆ ಭಾವಿಸದ ಹೊರತು ಬದುಕನ್ನು ಗೆಲ್ಲಲು ಹೇಗೆ ಸಾಧ್ಯ?
ಶಿವಾಜಿಗೆ ತನ್ನ ಕನಸಿನ ಬಹುದೊಡ್ಡ ಸಾಮ್ರಾಜ್ಯವನ್ನು ಕಟ್ಟಲು ಪ್ರಯತ್ನಿಸಿ ಸಾಕಾಗಿ ಹೋಗಿತ್ತು. ಅದು ಕೈಗೂಡಿರಲಿಲ್ಲ. ಹತಾಶನಾಗಿದ್ದ. ಮಾರುವೇಷದಲ್ಲಿ ಜನರ ಮನಸ್ಥಿತಿಯನ್ನು ಅರಿಯಲು ಕಾಡು-ಮೇಡುಗಳನ್ನು ಅಲೆದು, ಬೆಟ್ಟ-ಗುಡ್ಡಗಳನ್ನು ಹತ್ತಿ ಇಳಿಯುತ್ತಿದ್ದ. ಆಗ ಸಂಜೆಯಾಯಿತು. ಹೊಟ್ಟೆ ಹಸಿದಿತ್ತು. ಸುತ್ತಲೂ ಯಾವ ಒಂದು ನರಪಿಳ್ಳೆಯೂ ಕಾಣಿಸುತ್ತಿರಲಿಲ್ಲ. ಒಂದು ಮನೆಯೂ ಇರಲಿಲ್ಲ. ಚಿಂತಾಕ್ರಾಂತನಾಗಿ ಸುತ್ತಲೂ ಬೆಟ್ಟದಿಂದ ಕೆಳಗೆ ನೋಡುತ್ತಿರುವಾಗ ಅಲ್ಲೊಂದು ಚಿಕ್ಕ ದೀಪ ಉರಿಯುವುದು ಕಾಣುತ್ತಿತ್ತು. ಅಲ್ಲಿಗೆ ನಡೆದು ಬಂದಾಗ ಶಿವಾಜಿಗೆ ಕಂಡಿದ್ದು ಒಂದು ಚಿಕ್ಕ ಗುಡಿಸಲಿನಲ್ಲಿ ಒಂದು ಹಣ್ಣು ಮುದುಕಿ. ಅವಳಿಗೆ ಇವನಾರು ಎಂಬುದೇ ಗೊತ್ತಿರಲಿಲ್ಲ. ಶಿವಾಜಿ ಅವಳ ಹತ್ತಿರ ಹೋಗಿ ಅಮ್ಮ ನಾನು ದಾರಿತಪ್ಪಿ ಬಂದಿರುವೆ. ನನಗೆ ಹಸಿವಾಗುತ್ತಿದೆ. ಏನಾದರೂ ಕೊಡು ಎಂದು ಹೇಳುತ್ತಾನೆ. ಆಗ ಆ ಮುದಿಕಿ ಅವನನ್ನು ಕುಳ್ಳಿರಿಸಿ ಬಿಸಿಯಾದ ಅನ್ನವನ್ನು ತಟ್ಟೆಯಲ್ಲಿ ಅನ್ನದ ಸಣ್ಣ ರಾಶಿಯನ್ನು ಹಾಕಿ ಅದರಲ್ಲಿ ಬಿಸಿ-ಬಿಸಿಯಾದ ಸಾರನ್ನು ಹಾಕುತ್ತಾಳೆ. ಹಸಿವಿನಿಂದ ಕಂಗೆಟ್ಟ ಶಿವಾಜಿಯು ತಟ್ಟನೆ ಅನ್ನದ ರಾಶಿಯ ಮಧ್ಯೆ ಕೈ ಹಾಕುತ್ತಾನೆ. ಅನ್ನ ಮತ್ತು ಸಾರು ಎರಡು ಬಿಸಿಯಾಗಿರುವುದರಿಂದ ಈತನ ಕೈ ಸುಡುತ್ತದೆ. ಗಬಕ್ಕನೆ ತನ್ನ ಕೈಯನ್ನು ಹಿಂತೆಗೆದುಕೊಳ್ಳುತ್ತಾನೆ.
ಅದನ್ನು ಗಮನಿಸಿದ ಅಜ್ಜಿಯು “ಅರೆ.. ಮಗ, ನೀನು ಕೂಡ ನಮ್ಮ ಶಿವಾಜಿ ಮಹಾರಾಜನಂತೆಯೇ! ಎಲ್ಲವೂ ಅತಿಶೀಘ್ರದಲ್ಲಿಯೇ ಆಗಬೇಕೆನ್ನುವ ಆತುರ. ನಮ್ಮ ಶಿವಾಜಿ ಮಹಾರಾಜ ಬಹುದೊಡ್ಡ ಸಾಮ್ರಾಜ್ಯ ಕಟ್ಟುವ ಕನಸು ಕಾಣುತ್ತಿರುವನೇನೋ ನಿಜ ಆದರೆ ಆ ದೊಡ್ಡ ಸಾಮ್ರಾಜ್ಯವನ್ನು ಕಟ್ಟಲು ಮೊದಲು ಸಣ್ಣ ಸಣ್ಣ ಪ್ರಾಂತ್ಯಗಳನ್ನು ಗೆಲ್ಲಬೇಕು. ಅವುಗಳನ್ನು ಒಗ್ಗೂಡಿಸಿಕೊಂಡು ಆಮೇಲೆ ದೊಡ್ಡ ಸಾಮ್ರಾಜ್ಯ ಕಟ್ಟಬೇಕು. ಅಲ್ಲವೇ?
ಹಾಗೆಯೇ ನೀನು ಕೂಡ ಸುರಿದ ಅನ್ನವನ್ನು ಒಮ್ಮೆಲೆ ತಿನ್ನಲು ಬಿಸಿಯಾದ ಮಧ್ಯದ ಭಾಗಕ್ಕೆ ಕೈ ಹಾಕಿದರೆ ಅದು ಸುಡಲಾರದೇ!ಮೊದಲು ಆ ತಟ್ಟೆಯಲ್ಲಿರುವ ಅನ್ನದ ಮಧ್ಯ ಭಾಗವನ್ನು ಬಿಟ್ಟು ಸುತ್ತಮುತ್ತಲಿನ ಸಣ್ಣ ಸಣ್ಣ ತುತ್ತುಗಳನ್ನು ತಿನ್ನುತ್ತಾ ಹೋದಂತೆ, ಸುತ್ತಲಿನಿಂದ ಮಧ್ಯದವರೆಗಿನ ಅನ್ನದ ರಾಶಿಯನ್ನು ಆರಾಮಾಗಿ ನೀನು ತಿನ್ನಬಲ್ಲೆ ಅಲ್ಲವೇ” ಎನ್ನುತ್ತಾಳೆ.
ಈ ವಿಚಾರ ಶಿವಾಜಿಗೆ ಪ್ರೇರಣೆಯಾಗುತ್ತದೆ. ಉತ್ತರ ಭಾರತದ ಆಡಳಿತದ ದಬ್ಬಾಳಿಕೆಯ ವಿರುದ್ಧ ತನಗೆ ಸೋಲು ಎಂದುಕೊಂಡಿದ್ದವ ಈ ವೃದ್ಧೆಯ ಪ್ರೇರಣಾತ್ಮಕ ನುಡಿಗಳಿಂದ ಮುಂದೆ ಸಣ್ಣ ಪುಟ್ಟ ಪ್ರಾಂತ್ಯಗಳ ಜನರನ್ನು ಒಗ್ಗೂಡಿಸಿಕೊಂಡು ದೊಡ್ಡ ಸಾಮ್ರಾಜ್ಯ ಕಟ್ಟಿ ಗೆಲುವನ್ನು ತನ್ನದಾಗಿಸಿಕೊಂಡ.
ಹೀಗೆ ಗೆಲುವು ಸೋಲಿನಲ್ಲಿಯೇ ಇದೆ. ಸೋಲೇ ಆ ಗೆಲುವಿನ ಸೋಪಾನ. ಹೀಗಾಗಿ ಎಂತದ್ದೇ ಪರಿಸ್ಥಿತಿ ಬರಲಿ, ಸೋಲೆಂದು ಮನಸಲ್ಲಿ ಅಂದುಕೊಳ್ಳದೇ ‘ಎಡಿಸನ್’ ನ ಹತ್ತು ಸಾವಿರ ಬಾರಿ ಪ್ರಯತ್ನಿಸಿದ ಆ ಗೆಲುವನ್ನು ಜ್ಞಾಪಕ ಮಾಡಿಕೊಳ್ಳೋಣ. ಸೋಲಿನಲ್ಲಿ ಅವಂನೆಂತ ಭಂಡ ಎಂಬುದು ನಮಗೆ ಪ್ರೇರಣೆಯಾಗಲಿ. ಸೋಲೇ ಗೆಲುವಿನ ಸೋಪಾನವಾಗಲಿ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ಡಾ. ರಾಜಶೇಖರ ನಾಗೂರ
