ಗಿರಿಜಾ ಶಾಸ್ತ್ರಿಯವರ ‘ಉರಿಯ ಉಯ್ಲು’ (ಶೋಕ ಕವಿತೆಗಳು) ಸಂಕಲನದಲ್ಲಿ ಕವಿತೆಯಲ್ಲಿನ ಆಳ ಓದುಗನ ಮನಸ್ಸಿಗೆ ಇಳಿಯದೆ ಬಿಡುವುದಿಲ್ಲ. ಕೃತಿಯ ಕುರಿತು ನನ್ನದೊಂದು ಪುಟ್ಟ ಮಾತು, ತಪ್ಪದೆ ಮುಂದೆ ಓದಿ…
ಪುಸ್ತಕ : ಉರಿಯ ಉಯ್ಲು
ಕವಿಯತ್ರಿ : ಗಿರಿಜಾ ಶಾಸ್ತ್ರಿ
ಪ್ರಕಾಶಕರು : ನಿಶಾಂತ ಪ್ರಕಾಶನ
ಬೆಲೆ : ೧೦೦.೦೦
ಖರೀದಿಗಾಗಿ : 8976541989
ಸಾಹಿತ್ಯ ಕಾರ್ಯಕ್ರಮ ಅಥವಾ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಂದ ನಾನು ಕೊಂಚ ದೂರವೇ. ಅದಕ್ಕೆ ಇಂತದ್ದೇ ಎನ್ನಲು ನಿರ್ದಿಷ್ಟ ಕಾರಣಗಳಿಲ್ಲ. ನನಗೆ ಬಾವಿಯೇ ಪ್ರಪಂಚ, ಅದರಿಂದ ಆಚೆ ನೋಡಲು ನಾನು ಇಷ್ಟಪಡುವುದಿಲ್ಲ. ಇಂತಹ ಮನಸ್ಥಿತಿ ಇರುವವಳಿಗೆ ಗಿರಿಜಾ ಶಾಸ್ತ್ರಿ ಹಾಗೂ ರಘುನಾಥ್ ಕೃಷ್ಣಮಾಚಾರ್ ಸರ್ ದಂಪತಿಗಳು ಪುಸ್ತಕ ಬಿಡುಗಡೆಗೆ ಪ್ರೀತಿಯಿಂದ ಆಹ್ವಾನ ಕೊಟ್ಟಾಗ ನನಗೆ ಆಗೋಲ್ಲ ಎನ್ನಲು ಬಾಯಿ ಬರಲೇ ಇಲ್ಲಾ, ಅದಕ್ಕೆ ಹಲವಾರು ಕಾರಣಗಳಿದ್ದವು. ಅವರು ನನಗೆ ಕೊಟ್ಟಂತಹ ಪ್ರೀತಿ, ಕಾರ್ಯಕ್ರಮಕ್ಕೆ ಅವರು ಆಯ್ದುಕೊಂಡಂತಹ ಸ್ಥಳ ಮತ್ತು ಅಂದಿನ ಕಾರ್ಯಕ್ರಮದ ವಿಶೇಷತೆ ತಕ್ಷಣ ಒಪ್ಪಿಕೊಳ್ಳುವಂತೆ ಮಾಡಿತು.
ಪುಸ್ತಕ ಕಾರ್ಯಕ್ರಮಕ್ಕೆ ಯಾವುದೇ ಆಮಂತ್ರಣ ಪತ್ರಿಕೆಯಾಗಲಿ, ದೊಡ್ಡ ಸಭಾಂಗಣವಾಗಲಿ, ಅತಿಥಿಗಳಾಗಲಿ, ಅಧ್ಯಕ್ಷರಾಗಲಿ ಯಾವುದು ಇರಲಿಲ್ಲ, ಸರಳವಾಗಿ ಗಿರಿಜಾ ಶಾಸ್ತ್ರಿಯವರ ಮನೆಯಲ್ಲಿ ಆಯೋಜಿಸಿದಂತಹ ಆತ್ಮೀಯ ಕಾರ್ಯಕ್ರಮ ಅದಾಗಿತ್ತು.


ಗಿರಿಜಾ ಶಾಸ್ತ್ರಿ ಹಾಗೂ ರಘುನಾಥ್ ಕೃಷ್ಣಮಾಚಾರ್
ಖ್ಯಾತ ವಿಮರ್ಶಕರಾದ ಡಾ.ವಿಜಯಮ್ಮ, ಪತ್ರಕರ್ತರಾದ ಹುಣಸವಾಡಿ ರಾಜನ್ (ಸಂಪಾದಕರು ಸಂಯುಕ್ತ ಕರ್ನಾಟಕ), ಡಾ. ಸುಬ್ಬಣ್ಣ ರೈ, ( ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವರು) ಡಾ. ಸರಸ್ವತಿ ಸುಬ್ಬಣ್ಣ ರೈ, ಶ್ರೀ ಗಿರಿಧರ ಕಾರ್ಕಳ (ಕವಿ ಕಲಾವಿದರು, ಮೈಸೂರು ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕರು), ಸಿ.ಎಚ್. ಭಾಗ್ಯ (ಕವಿ, ಅನುವಾದಕಿ) ಡಾ. ರೇಖಾ ಎನ್.ವಿ (ಅಂಕಣಕಾರ್ತಿ) ಅಮ್ಮ. ಉಭಯ ಭಾರತಿ (ಲೇಖಕಿ ), ವೈ.ಕೆ ಸಂಧ್ಯಾ ಶರ್ಮಾ (ಲೇಖಕಿ), ಸೇರಿದಂತೆ ಸಾಕಷ್ಟು ಜನ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಮಧ್ಯೆ ನಾನು, ನನ್ನ ಅಪ್ಪ ಹೂಲಿಶೇಖರ್ ಮತ್ತು ಅಮ್ಮ ಹೋಗಿ ಕೂತೆವು.

ಅಲ್ಲಿ ಯಾವುದೇ ವೇದಿಕೆಗಳಿರಲಿಲ್ಲ. ಎಲ್ಲರೂ ಸಮವಾಗಿಯೇ ಕೂತಿದ್ದರು. ಒಂದು ಮೂಲೆಯಲ್ಲಿ ಮಲ್ಲಿಗೆ ಹೂವಿನ ಹಾರದಲ್ಲಿ ನಿಶಾಂತ್ ನಸು ನಗುತ್ತಿದ್ದ. ಫೋಟೋದ ಮುಂದೆ ಬಿಡುಗಡೆಗೆ ಸಜ್ಜಾಗಿದ್ದ ಪುಸ್ತಕದ ಬಂಡಲ್ ಇತ್ತು. ನಿಶಾಂತ್ ಗಿರಿಜಾ ಶಾಸ್ತ್ರಿ ಹಾಗೂ ರಘುನಾಥ್ ಸರ್ ದಂಪತಿಯ ಹಿರಿಯ ಮಗ. ಕಳೆದ ವರ್ಷ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ತನ್ನ 37ನೆಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ದ. ಹೆತ್ತ ಕರಳು ಮಗನ ಸಾವು ಅರಗಿಸಿಕೊಳ್ಳಲಾಗದೆ ವಿಲವಿಲನೇ ಒದ್ದಾಡಿ ಹೋಯಿತು. ಛಲವಾದಿ ತಾಯಿ ಗಿರಿಜಮ್ಮ ತನ್ನೆಲ್ಲ ನೋವನ್ನೆಲ್ಲ ತನ್ನಲ್ಲಿಯೇ ನುಂಗಿಕೊಂಡು ಓದುಗರ ಕೈಗೆ ‘ಉರಿಯ ಉಯ್ಲು’ (ಶೋಕ ಕವಿತೆಗಳು) ಹೊರತಂದರು.
ಇದರಲ್ಲಿನ ಒಂದೊಂದು ಕವಿತೆಗಳು ತಾಯಿಯ ಕರಳನ್ನು ಹಿಂಡಿಬಿಡುವಷ್ಟು ನೋವು ಸಂಕಟಗಳಿವೆ. ಪುಸ್ತಕ ಓದುವಾಗ ಗಿರಿಜಮ್ಮನ ಒಡಲ ಬೆಂಕಿಯ ಧಗೆ ಓದುಗರಿಗೆ ತಟ್ಟದೇ ಬಿಡದು. ಡಾ ವಿಜಯಮ್ಮ ಅವರು ‘ಉರಿಯ ಉಯ್ಲು’ ಪ್ರತಿಗಳನ್ನು ಬಂದ ಅತಿಥಿಗಳಿಗೆ ನೀಡುವುದರ ಮೂಲಕ ಪುಸ್ತಕ ಬಿಡುಗಡೆ ಮಾಡಿದರು.

ಮಗ ನಿಶಾಂತ್ ನ ಜೊತೆಗಿನ ನೆನಪುಗಳ ಜೊತೆಗೆ ಕವಿಯತ್ರಿ ಗಿರಿಜಾ ಶಾಸ್ತ್ರಿ
ಮಗನ ಅಗಲಿಕೆಯಲ್ಲಿ ನೊಂದು ಬೆಂದು ಹೋಗಿದ್ದ ತಂದೆ ತಾಯಿಗೆ ಸಾoತ್ವನ ಹೇಳುವ ಕಾರ್ಯಕ್ರಮ ಅದಾಗಿರಲಿಲ್ಲ. ಗಿರಿಜಾ ಶಾಸ್ತ್ರಿಯವರ ‘ಉರಿಯ ಉಯ್ಲು’ ನ ಜೊತೆಗೆ ಬಂದ ಗಣ್ಯರು ತಮ್ಮ ಬದುಕಿನಲ್ಲಿ ಅನುಭವಿಸಿದ ಕಹಿ ಘಟನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಅವರ ಹೃದಯದಲ್ಲಿದ್ದ ಭಾರವನ್ನು ಇಳಿಸಿಕೊಂಡರು.
‘ನನ್ನ ಸಂಕಟವನ್ನು ಬಂಡವಾಳ ಮಾಡಿ ಕೊಳ್ಳುವ ಉದ್ದೇಶ ನನ್ನದಲ್ಲ, ಅದು ನನ್ನ ಒಡಲ ಬೆಂಕಿಯನ್ನು ತಣ್ಣಿಸಲು ನಾನು ಹುಡುಕಿಕೊಂಡ ದಾರಿಯಷ್ಟೇ ಎಂದು ತುಂಬಾ ಸಂಕೋಚದಿಂದ ಕವಿಯತ್ರಿ ಗಿರಿಜಮ್ಮ ಹೇಳಿಕೊಂಡರು. ಅಲ್ಲಿ ತಾಯಿ ಒಡಲಷ್ಟೇ ಬರಿದಾಗಿರಲಿಲ್ಲ, ತಂದೆಯ ಹೃದಯವು ಭಾರವಾಗಿತ್ತು. ಮಗನನ್ನು ಕಳೆದುಕೊಂಡಾಗ ರಘುನಾಥ್ ಸರ್ ಯಾರ ಮುಂದೆಯೂ ಹೇಳಿಕೊಳ್ಳಲಿಲ್ಲ. ಎಂದಿನಂತೆ ತಮ್ಮ ಬರಹದಲ್ಲಿ ತೊಡಗಿಸಿಕೊಂಡಿದ್ದರು. ನನ್ನ ನೋವು ನನಗಿರಲಿ… ಎನ್ನುವಂತೆ ದಂಪತಿಗಳ ಮೂಕವೇದನೆಯನ್ನು ಆಪ್ತವಾಗಿ ನೋಡಿದವರಿಗೆ ಮಾತ್ರ ಅರ್ಥವಾಗಿತ್ತು.

ಮಗ ನಿಶಾಂತ್ ನ ಜೊತೆಗಿನ ನೆನಪುಗಳ ಜೊತೆಗೆ ಕವಿಯತ್ರಿ ಗಿರಿಜಾ ಶಾಸ್ತ್ರಿ
ತಾಯಿಯ ಒಡಲಲ್ಲಿ ಹತ್ತಿಕೊಂಡ ಬೆಂಕಿ ಧಗ ಧಗನೇ ಉರಿಯುವಂತೆ ಕಾಣುವ ಪುಸ್ತಕ ಮುಖಪುಟವಿದ್ದು, ಗಿರಿಧರ ಕಾರ್ಕಳ ಅವರು ಮುಖಪುಟ ವಿನ್ಯಾಸ ಮಾಡಿದ್ದಾರೆ. ಬೆನ್ನುಡಿಯಲ್ಲಿ ಗಿರಿಧರ ಕಾರ್ಕಳ ಅವರು ಮಗನ ಸಾವಿನ ಸಂಕಟ, ಯಾತನೆ ತೀವ್ರವಾಗಿ ಕಾಡುವಂತೆ ಬರೆದ ಕವಿತೆಗಳನ್ನು ಬಿಡಿ ಬಿಡಿಯಾಗಿ ಓದುಗ ಓದಿರಬಹುದು, ಆದರೆ ಶೋಕ ಕವಿತೆಗಳ ಗೊಂಚಲು ಸಂಕಲನ ರೂಪದಲ್ಲಿ ಓದಿದ್ದು ಇದೇ ಮೊದಲು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘ಉರಿಯ ಉಯ್ಲು’ ಇದು ಕೇವಲ ಗಿರಿಜಾ ಜಾಸ್ತಿಯವರ ನೋವು, ದುಮ್ಮಾನಗಳಷ್ಟೇ ಅಲ್ಲ, ಪ್ರತಿಯೊಬ್ಬ ಓದುಗರ ಭಾವನೆಗಳ ಪ್ರತಿಬಿಂಬವಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಮಗನ ಹೆಸರಿನಲ್ಲಿ ಪ್ರತಿಭಾವಂತ ಐದು ಮಕ್ಕಳಿಗೆ ಪುಸ್ತಕ ಹಾಗೂ ಪ್ರೋತ್ಸಾಹ ಧನ ನೀಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.

ಗಿರಿಜಾ ಶಾಸ್ತ್ರಿಯವರ ‘ಉರಿಯ ಉಯ್ಲು’ ಶೋಕ ಕವಿತೆಯಿಂದ ಆಯ್ದ ಒಂದು ಕವಿತೆಯನ್ನು ಓದುಗರ ಮುಂದಿಡುತ್ತಾ, ಓದುಗರೇ..ನೀವು ಓದಲೇ ಬೇಕಾದ ಕೃತಿಯಿದು ಎಂದು ಹೇಳುತ್ತಾ ಗಿರಿಜಮ್ಮ ಹಾಗೂ ರಘು ಸರ್ ಗೆ ಅಪಾರ ಓದುಗ ಬಳಗವಿದೆ. ಅವರು ಯಾವುದಕ್ಕೂ ಧೃತಿಗೆಡದೆ ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆಯಲಿ ಎಂದು ಶುಭ ಹಾರೈಸುತ್ತೇನೆ.
ಸುಡುಗಾಡು ಭಯ
ಫೋಟೋದೊಳಗೆ
ಶಿಸ್ತಾಗಿ ಕುಳಿತು ನಗುತ್ತೀ
ನನ್ನ ಅಣಕಿಸಿ
ಹಬ್ಬಕ್ಕೆ ತಂದ ಹರಕೆಯ
ಕುರಿ ನಾನು
ಅಗಿದು ಜಗಿದು ತೋರಣ
ದವಡೆ ನೋಯುತ್ತಿದೆ
ಕೇಡಿಗನಾದರೆ ಅಷ್ಟು
ಕಾಡುವುದಿಲ್ಲ
ಕಾಡುವುದಿಲ್ಲ
ನನ್ನಲ್ಲಿ ಬೀಡುಬಿಟ್ಟಿದೆ.
ಈಗ ನನ್ನ ಹೊಟ್ಟೆ
ತಂಪಾಗಿದೆ.
ಲೋಕ ಮುಖಕ್ಕೆ
ಹೇಳಿಕೊಳ್ಳಲು
ಈಗ ಭಯವಾಗಿದೆ ಬಿಚ್ಚಿಡುವ
ಬಚ್ಚಿಡುವ ಭೀತಿ
ಸುಡುಗಾಡು ಭಯ
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಅಂತರ್ಜಾಲ ಪತ್ರಿಕೆಯ WWW.AAKRUTIKANNAD ಸಂಪಾದಕಿ, ಬೆಂಗಳೂರು.
