ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದಾಗ ಸ್ಥಳಿಯ ಕೆಲಸಗಾರರು ಶೌಚಾಲಯ ಸ್ವಚ್ಚತೆ ಮಾಡಲು ನಿರಾಕರಿಸಿದರು, ಆಗ ಮನೆಯವರೇ ನಿಂತು ಶೌಚಾಲಯ ಸ್ವಚ್ಚತೆ ಮಾಡಲು ಪ್ರಾರಂಭಿಸಿದೆವು. ಇದು ನಮಗೆ ಒಳ್ಳೆಯ ಹೆಸರೇ ತಂದಿತು. ಮುಂದೇನಾಯಿತು ಉದ್ಯಮಿ ಅರುಣ ಪ್ರಸಾದ್ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಶೌಚಾಲಯ ನಿಮಾ೯ಣಕ್ಕಿಂತ ನಿರ್ವಹಣೆ ಅತಿ ಮುಖ್ಯ. ಹದಿನೆಂಟು ವರ್ಷದಲ್ಲಿ ನನ್ನ ಪ್ರಯೋಗ ಅನುಭವ. ಶೌಚಾಲಯ ಅವೈಜ್ಞಾನಿಕವಾಗಿ ಬಳಸುವವರಿಂದಲೂ ಸಮಸ್ಯೆ. ಶೌಚಾಲಯ ಸ್ಟಚ್ಚತೆ ಕೂಡ ಒಂದು ಕಲೆ. ಇತ್ತೀಚೆಗೆ ನಾನು ಕುಂದಾಪುರಕ್ಕೆ ಬೆಳಿಗ್ಗೆ ಬೇಗನೆ ಹೊರಟಾಗ ತುಂಬಾ ಮಳೆ ಇತ್ತು, ಮಾರ್ಗ ಮಧ್ಯ ಉಪಹಾರಕ್ಕೆ ನಿಂತೆವು ಸ್ವಾಭಾವಿಕವಾಗಿ ಇದೇ ವ್ಯವಹಾರದವರು ಆದ್ದರಿಂದ ಎಲ್ಲವನ್ನು ಗಮನಿಸುವುದು ಅಭ್ಯಾಸ.
ಅದೊಂದು ಪ್ರವಾಸಿ ತಾಣದ ಹೋಟೆಲ್ ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಉಪಹಾರ ಕೂಡ ಚೆನ್ನಾಗಿದೆ 10 ಅಂಕದಲ್ಲಿ 9 ಅಂಕ ನೀಡಿದೆ, ನಂತರ ಮೂತ್ರ ವಿಸರ್ಜನೆಗೆ ಅಲ್ಲಿನ ಟಾಯ್ಲೆಟ್ ಗೆ ಹೋದವನು. ವಾಪಾಸು ಬಂದೆ ಅದರ ಪೋಟೋ ನೀವೇ ನೋಡಿ ಅಂಕ ನೀಡಿ. ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡಿದರೆ ನಮ್ಮ ವ್ಯವಹಾರ ಕೂಡ ಹೆಚ್ಚಾಗುವುದರಲ್ಲಿ ಅನುಮಾನ ಬೇಡ ಒಮ್ಮೆ ಬಂದ ಅತಿಥಿ ಇನ್ನೊಮ್ಮೆ ಅವರೇ ನಮ್ಮ ರೆಸ್ಟೋರೆಂಟ್ ಗೆ ಹುಡುಕಿಕೊಂಡು ಬರುತ್ತಾರೆ. ಇದನ್ನು ಎಲ್ಲಾ ರೆಸ್ಟೋರೆಂಟ್ ನಡೆಸುವ ಮಾಲಿಕರು ಪಾಲನೆ ಮಾಡಬೇಕು ಈ ವಿಚಾರದಲ್ಲಿ ನನ್ನ ಅನುಭವ ನೋಡಿ.
ಸಾರ್ವಜನಿಕ ಶೌಚಾಲಯ ನಿರ್ವಹಣೆ ಸವಾಲೂ ಹೌದು, ಶೌಚಾಲಯ ಬಳಸುವವರು ಬಳಸುವ ಮೊದಲು ಮತ್ತು ಬಳಸಿದ ನಂತರವೂ ನೀರನ್ನು ಪ್ಲಶ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು, ಬಳಸಿ ಬಿಸಾಡುವ ಯಾವುದೇ ವಸ್ತು ಶೌಚಾಲಯದ ಒಳಗೆ ಬಿಸಾಡದೆ ಶೌಚಾಲಯದಲ್ಲಿಡುವ ಡಸ್ಟ್ ಬಿನ್ ಒಳಗೆ ಹಾಕಬೇಕು ಅದರಿಂದ ನಂತರ ಬರುವ ಬಳಕೆದಾರನಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. 1989 ರಲ್ಲಿ ನಮ್ಮ ಹಳೆಯ ವಾಸದ ಮನೆ ನವೀಕರಣ ಮಾಡಿದಾಗ ಅಟ್ಯಾಚ್ಡ್ ಟಾಯಿಲೆಟ್ ಕಟ್ಟಿಸಿದ್ದೆವು ಆಗ ಅನೇಕರು ವಿರೋದ ವ್ಯಕ್ತಪಡಿಸಿದ್ದರು ಆದರೂ ನಿರ್ಮಿಸಿ ಸರಿಯಾಗಿ ನಿವ೯ಹಿಸಿದೆವು.
ನಂತರ ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದಾಗ ಸ್ಥಳಿಯ ಕೆಲಸಗಾರರು ಶೌಚಾಲಯ ಸ್ವಚ್ಚತೆ ಮಾಡುವ ಕೆಲಸ ಮಾತ್ರ ತಾವು ಮಾಡುವುದಿಲ್ಲ ಎಂಬ ಖಡಾಖಂಡಿತ ಮಾತುಗಳಿಂದ ನಾವೇ ಕುಟುಂಬದವರೇ ಸೇರಿ ಶೌಚಾಲಯ ಸ್ವಚ್ಚತೆ ಮಾಡಲು ಪ್ರಾರಂಭಿಸಿದೆವು. ಇದು ನಮಗೆ ಒಳ್ಳೆಯ ಹೆಸರೇ ತಂದಿತು. ಒಂದು ಮದುವೆಗೆ ಭಾಗವಹಿಸಲು ಬಂದ ಹೊರನಾಡು ಭೀಮೇಶ್ವರ ಜೋಶಿಯವರು ಮೊದಲು ಶೌಚಾಲಯಗಳನ್ನು ನೋಡಲು ಹೋದರಂತೆ (ಕಲ್ಯಾಣ ಮಂಟಪದ ನಿರ್ವಹಣೆಯ ಗುಣ ಮಟ್ಟ ಪರೀಕ್ಷಿಸಲು) ಅದನ್ನೆಲ್ಲ ನೋಡಿದ ನಂತರ ನಮ್ಮ ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ ಶಭಾಷ್ ಹೇಳಿದ್ದರು.

ಫೋಟೋ ಕೃಪೆ : google
ನಂತರ ಲಾಡ್ಜ್ ಪ್ರಾರಂಭಿಸಿದೆ. ಆಗ ನಮ್ಮ ಸಿಬ್ಬಂಧಿಗಳು ಸಂಸ್ಥೆಯ ಮಾಲೀಕರೇ ಶೌಚಾಲಯ ಸ್ಟಚ್ಚ ಮಾಡುತ್ತಾರೆಂದರೆ… ಅಂತ ಯೋಚಿಸಿ ಅವರೆಲ್ಲ ಶೌಚಾಲಯ ಸ್ವಚ್ಚ ಮಾಡಲು ಮುಂದೆ ಬಂದರು. ಆಗ ಅವರಿಗೆಲ್ಲ ಸೂಕ್ತ ತರಬೇತಿ ನೀಡಿದ್ದರಿಂದ ಮತ್ತು ಅವರು ಸ್ವಚ್ಚಗೊಳಿಸಿದ್ದನ್ನು ಪುನಃ ಇನ್ನೊಂದು ತಂಡ ಪರಿಶೀಲಿಸಿ Ok ಮಾಡಿದ ಮೇಲೆ ಅತಿಥಿಗಳಿಗೆ ನೀಡುವುದರಿಂದ ನಮ್ಮ ಲಾಡ್ಜ್ ಹೈಜನಿಕ್ ಆಗಿರುತ್ತದೆಂಬ ಹೆಸರು ಬಂತು, ವಿದೇಶಿ ಪ್ರವಾಸಿಗಳೂ ಪ್ರಶಂಸಿದ್ದಾರೆ. ನಂತರ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ನ ಶೌಚಾಲಯ ನಿರ್ವಹಣೆಗೆ ತುಂಬಾ ಕಷ್ಟ ಪಡಬೇಕಾಯಿತು, ಹೋಟೆಲ್ ಗೆ ಬರುವ ಹೆಚ್ಚು ಗ್ರಾಹಕರು ಶೌಚಾಲಯ ಬಳಸುವುದರಿಂದ ಸ್ಟಚ್ಚತೆಗೆ ಹೆಚ್ಚು ಶ್ರಮ ಪಡಬೇಕಾಯಿತು. ಅದರಲ್ಲೂ ಪುರುಷರ ಶೌಚಾಲಯ ಹೆಚ್ಚು ಸಮಸ್ಯೆ ತರುತ್ತದೆ,ಅಲ್ಲಿ ಮೂತ್ರ ಮಾಡಿದ ನಂತರ ಪುರುಷರು ನೀರು ಪ್ಲಶ್ ಮಾಡಲು ಮರೆಯುತ್ತಾರೆ, ಗುಟಕಾ ಪಾನ್ ಅದರಲ್ಲೇ ಉಗುಳುವುದು, ಅದರ ಖಾಲಿ ಪ್ಯಾಕೆಟ್ ಅಲ್ಲೇ ಹಾಕುವುದು, ಗುಟ್ಟಾಗಿ ಮದ್ಯ ಸೇವನೆ ಮಾಡಿ ಶೌಚಾಲಯದಲ್ಲೆ ಹಾಕುವುದು ಮಾಡುತ್ತಾರೆ.
ನಾವು ರೆಸ್ಟೋರೆಂಟ್ ಶೌಚಾಲಯಗಳ ಶುಚಿ ಈ ರೀತಿ ಮಾಡುತ್ತೇವೆ, ಬೆಳಿಗ್ಗೆ 7ಕ್ಕೆ ಒಮ್ಮೆ ಶೌಚಾಲಯ ಸೋಪು ನೀರಿಂದ ತೊಳೆದು ನಂತರ ಬ್ಲೀಚಿಂಗ್ ಪೌಡರ್ ಹಾಕಿ ಬ್ರಷ್ ಮಾಡಿ 20 ನಿಮಿಷ ಬಿಟ್ಟು ಪುನಃ ತೊಳೆದು, ವೈಪರ್ ನಿಂದ ವೈಪ್ ಮಾಡಿ ನೀರು ತೆಗೆಯುವುದು, ನಂತರ ಪಿನಾಯಿಲ್ ಹಾಕುವುದು, ಡೆಟಾಲ್ ಸಿಂಪಡನೆ ನಂತರ ಏರ್ ಪ್ರೆಶನರ್ ಹಾಕುತ್ತೇವೆ, ಕೈ ತೊಳೆಯುವ ಸಿಂಕ್ ಮೇಲೆ ಹ್ಯಾ೦ಡ್ ವಾಷ್ ತುಂಬಿಸಿಡಬೇಕು, ಡಸ್ಟ್ ಬಿನ್ನಿನ ತುಂಬಿದ ಗಾರ್ಬೇಜ್ ತೆಗೆದು ಡಸ್ಟ್ ಬಿನ್ ತೊಳೆದು ಅದಕ್ಕೆ ಹೊಸ ಗಾರ್ಬೇಜ್ ಬ್ಯಾಗ್ ಹಾಕುತ್ತೇವೆ. ದಿನಕ್ಕೆ 5- 6 ಸಾರಿ ಈ ರೀತಿ ಸ್ವಚ್ಚ ಮಾಡಬೇಕು, ರಾತ್ರಿ ರೆಸ್ಟೋರೆಂಟ್ ಬಾಗಿಲು ಹಾಕುವಾಗ ಅಂತಿಮವಾಗಿ ಒಂದು ಬಾರಿ ಸ್ವಚ್ಚ ಮಾಡಬೇಕು. 15 ದಿನಕ್ಕೊಮ್ಮೆ ಪ್ಲಶ್ ಮೇಟ್, ಟಾಯಿಲೆಟ್ ಪ್ರೆಶನರ್, ನ್ಯಾಪ್ತಾ ಬಾಲ್ ಬದಲಿಸುತ್ತೇನೆ, ಯುರಿನಲ್ ಗಳಿಗೆ ಯುರಿನಲ್ ಕೇಕ್ ಕೂಡ 15 ದಿನಕ್ಕೆ ಒಮ್ಮೆ ಹಾಕಬೇಕು.
ಪುರುಷರ ಮೂತ್ರಾಲಯದಲ್ಲಿ ದುಭಾರಿ ಬೆಲೆಯ ಸೆನ್ಸಾರ್ ಮೂತ್ರಿ ಅಳವಡಿಸಿದ್ದೇನೆ. ಅದು ಮೂತ್ರ ಮಾಡಿದ ನಂತರ ಸ್ವಯಂಚಾಲಿತವಾಗಿ ನೀರು ಹರಿಸುವುದರಿಂದ ಶೌಚಾಲಯ ಯಾವಾಗಲೂ ಸ್ವಚ್ಚವಾಗಿಡುತ್ತದೆ. ಈಗ ನಮ್ಮ ಕಾಟೇಜ್ ಗಳು, ಹೊಸ ಲಾಡ್ಜ್ ಗಳ ನಿರ್ಮಾಣದಿಂದ ಈಗಿರುವ ಒಟ್ಟು ಶೌಚಾಲಯಗಳ ಸಂಖ್ಯೆ 57 ಮತ್ತು ಮೂತ್ರಿಗಳು 7 ಇದೆ ಇವುಗಳಿಗೆ ಪ್ರತಿ ತಿಂಗಳು ನಾವು ಖರೀದಿಸುವ ಪಿನಾಲ್, ಬ್ಲಿಚಿಂಗ್, ಡೆಟಾಲ್, ಟಾಯಲೆಟ್ ಪ್ರೆಶನರ್, ಪ್ಲಶ್ ಮೇಟ್, ರೂಂ ಪ್ರೆಶನರ್, ಹ್ಯಾಂಡ್ ವಾಷ್, ಡಸ್ಟಬಿನ್ ಗಾರ್ಬೇಜ್ ಬ್ಯಾಗ್ ಗಳಿಗೆ ಸುಮಾರು 15 ಸಾವಿರ ವೆಚ್ಚವಾಗುತ್ತದೆ, ಶೌಚಾಲಯದಲ್ಲಿ ಏನೇ ಹಾಳಾದರೂ ತಕ್ಷಣ ಪ್ಲಂಬರ್ ಕರೆಸಿ ಬದಲಿಸುತ್ತೇವೆ ಇದರ ಮೈ೦ಟನೆನ್ಸ್ ವೆಚ್ಚ ಮತ್ತು ನಿತ್ಯ ನಿರ್ವಹಣೆ ಮಾಡುವ ಸಿಬ್ಬಂದಿ ವೇತನ ಪ್ರತ್ಯೇಕ ಆದ್ದರಿಂದ ನಮ್ಮ ಸಂಸ್ಥೆಯ ಶೌಚಾಲಯ ಅಷ್ಟು ಹೈಜನಿಕ್ ಆಗಿರುತ್ತದೆ.

ಫೋಟೋ ಕೃಪೆ : google
ಹತ್ತು ವರ್ಷದಲ್ಲಿ 3 ಬಾರಿ ರೆಸ್ಟೋರೆಂಟ್ ಶೌಚಾಲಯ ನವೀಕರಣ ಮಾಡಿದ್ದೇವೆ. ಹೀಗೆ ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡಿದರೆ ನಮ್ಮ ವ್ಯವಹಾರ ಕೂಡ ಹೆಚ್ಚಾಗುವುದರಲ್ಲಿ ಅನುಮಾನ ಬೇಡ ಒಮ್ಮೆ ಬಂದ ಅತಿಥಿ ಇನ್ನೊಮ್ಮೆ ಅವರೇ ನಮ್ಮ ರೆಸ್ಟೋರೆಂಟ್ ಗೆ ಹುಡುಕಿಕೊಂಡು ಬರುತ್ತಾರೆ. ನನ್ನ ಲಾಡ್ಜ್ ಕಛೇರಿ ಪಕ್ಕದಲ್ಲೇ ರೆಸ್ಟೋರೆಂಟ್ ನ ಪುರುಷ ಮತ್ತು ಮಹಿಳಾ ಶೌಚಾಲಯ ಇದೆ ಅಂತ ಗೊತ್ತೇ ಆಗದಂತೆ ಅಷ್ಟು ಶುಚಿಯಾಗಿ ನಮ್ಮ ಸಿಬ್ಬಂದಿಗಳು ನಿರ್ವಹಿಸುತ್ತಿದ್ದಾರೆ.
ಸಾರ್ವಜನಿಕ ನಿಲ್ದಾಣಗಳ ಶೌಚಾಲಯಗಳು, ಸರ್ಕಾರಿ ಕಛೇರಿ, ಶಾಲಾ ಶೌಚಾಲಯಗಳಂತು ಯಾರೂ ಒಳ ಹೋಗದಂತೆ ಅವ್ಯವಸ್ಥೆಯಲ್ಲಿರುವುದು ನಿತ್ಯ ನೋಡುತ್ತೇವೆ, ಸರ್ಕಾರವನ್ನು ದೂರುತ್ತೇವೆ. ಆದರೆ ಸ್ಥಳಿಯರೆ ಸೇರಿ ಅದನ್ನು ಸುಲಭವಾಗಿ ಸ್ವಚ್ಚಗೊಳಿಸುವ ಸದಾ ಶುಚಿಯಾಗಿಡುವ ಪ್ರಯತ್ನ ಮಾತ್ರ ನಾವ್ಯಾರು ಮಾಡಲು ಮುಂದಾಗದಿರುವುದು ಮಾತ್ರ ವಿಷಾದನೀಯ.
2013ರಲ್ಲಿ ನಾನು ಮತ್ತು ಗೆಳೆಯರು ಸೇರಿ ಸಾಗರದ ಬಸ್ ನಿಲ್ದಾಣ ತೊಳೆದು ಶುಚಿ ಮಾಡಿದೆವು, 2014 ರ ನಂತರ ಪ್ರದಾನಿ ಮೋದಿಯವರ ಕನಸಿನ ಸ್ವಚ್ಚ ಭಾರತ ಹೆಚ್ಚು ಕಡಿಮೆ ಎಲ್ಲರೂ ಮರೆತಿದ್ದಾರೆ, ಈಗ ಅದರ ಆಚರಣೆ ಸಾಂಕೇತಿಕ ಮಾತ್ರ ಆಗಿದೆ. ಸರಿಯಾಗಿ ನಾವೇ ಕಲಿತು ನಂತರ ನಮ್ಮ ಸಿಬ್ಬಂದಿಗಳಿಗೆ ತರಬೇತಿ ನೀಡಿ ನಮ್ಮ ನಮ್ಮ ಸಂಸ್ಥೆಗಳ ಶೌಚಾಲಯ ಸುಲಭವಾಗಿ ನಿರ್ವಹಣೆ ಮಾಡಬಹುದು ಅದೇ ರೀತಿ ನಮ್ಮ ನಮ್ಮ ಮನೆಗಳ ಶೌಚಾಲಯ ಕೂಡ ಪರಿಶುದ್ಧವಾಗಿಟ್ಟು ಕೊಳ್ಳಬೇಕು ಇದರಿಂದ ಹೊರ ಹೋದಾಗ ಸಾರ್ವಜನಿಕ ಶೌಚಾಲಯ ಆರೋಗ್ಯಕರವಾಗಿ ಬಳಸುವ ಅಭ್ಯಾಸವೂ ಆಗುತ್ತದೆ.
- ಅರುಣ್ ಪ್ರಸಾದ್
