ಪಾಲಕರ ವ್ಯಸನದ ಬಿಸಿಗೆ ಬಾಡದಿರಲಿ ಮೊಗ್ಗು!

ಮಾದಕ ವ್ಯಸನಿಯ ಮಕ್ಕಳ ದುಃಸ್ಥಿತಿಯ ಬಗ್ಗೆ ಸಮಾಜದಲ್ಲಿ ಸೂಕ್ಷ್ಮ ದೃಷ್ಟಿಕೋನ ಮೂಡಿಸಿ ಸಂವೇದನಾಶೀಲತೆ ಬೆಳೆಸುವ ಉದ್ಧೇಶದಿಂದ ‘ಮಾದಕ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹ’ (COA Week) ವನ್ನು ಪ್ರತೀ ವರ್ಷ ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುತ್ತಿದೆ. ಇನ್ನಷ್ಟು ವಿಷಯಗಳನ್ನು ಲೇಖಕ ಸಂದೇಶ್ ಎಚ್ ನಾಯ್ಕ್ ಅವರು ತಮ್ಮ ಲೇಖನದ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….

ಪದೆ ಪದೆ ಶಾಲೆ ತಪ್ಪಿಸುತ್ತಿದ್ದ ಆ ಹುಡುಗನ ಬಗ್ಗೆ ಶಿಕ್ಷಕರಿಗೆ ಒಂಥರಾ ಅಸಮಾಧಾನ. ನಿತ್ಯ ಹಾಜರಿ ಕರೆಯುವಾಗ, ಆತ ಗೈರಾಗಿದ್ದಾನೆ ಎಂದು ತಿಳಿದಾಕ್ಷಣ, “ಇವನ್ಯಾಕಪ್ಪಾ ಈ ಪರಿ ಆ್ಯಬ್ಸೆಂಟ್ ಆಗ್ತಿದಾನೆ?” ಎಂದು ವಿಚಾರಣೆಯ ದನಿಯಲ್ಲಿ ಕೇಳುತ್ತಿದ್ದರು. ನಾಲ್ಕು ದಿನ ಶಾಲೆಗೆ ಬರದ ಹುಡುಗ ಐದನೇ ದಿನ ಬಂದಾಗ ಶಿಕ್ಷಕರು ತುಸು ಗರಂ ಆದರು. ಆತನೋ ತಡವರಿಸುತ್ತಾ ‘ಸರ್, ಸ್ವಲ್ಪ ಪ್ರಾಬ್ಲೆಮ್ ಇತ್ತು. ಮತ್ತೆ ಹೊರಗೆ ನೀವೊಬ್ಬರೇ ಇರುವಾಗ ಹೇಳಲಾ?’ ಎಂದು ಕ್ಷೀಣ ಧ್ವನಿಯಲ್ಲಿ ಉಸುರಿದ. ಬಿಡುವಿನ ವೇಳೆಯಲ್ಲಿ ಎದುರಾದ‌. ಆತನ ಸಮಸ್ಯೆಯ ಅರಿವಿರದ ಶಿಕ್ಷಕರು ಅದೂ ಒಂದು ಕುಂಟು ನೆಪವಿರಬೇಕೆಂದುಕೊಂಡು ತುಸು ಲಘುವಾಗಿ “ಅದೇನಪ್ಪ ಅಂಥ ಸೀಕ್ರೆಟ್ ಕಾರಣ?” ಎಂದು ಕಿಚಾಯಿಸುವ ದನಿಯಲ್ಲಿ ಕೇಳಿದರು.


ಫೋಟೋ ಕೃಪೆ : google

ಒಮ್ಮಿಂದೊಮ್ಮೆಗೆ ಕಣ್ಣೀರಾದ ಆತ – ತನ್ನ ಮನೆಯಲ್ಲಿ ಆಗಾಗ ನಡೆಯುವ ಜಗಳ, ಹೊಡೆತ ತಿಂದು ಜರ್ಝರಿತಳಾಗುವ ಅಮ್ಮನ ದುಗುಡ, ಆಘಾತಕ್ಕೊಳಗಾದ ತಂಗಿಯ ಬಿಕ್ಕಳಿಕೆ, ಅದನ್ನು ನಿಯಂತ್ರಿಸಲಾಗದ ಪುಟ್ಟ ಹುಡುಗನ ಅಸಹಾಯಕತೆ, ದಿಕ್ಕೆಟ್ಟ ಮನೆಯ ಪರಿಸ್ಥಿತಿಗಳೆಲ್ಲವನ್ನೂ ಶಿಕ್ಷಕರ ಮುಂದೆ ಬಿಚ್ಚಿಟ್ಟು ಅವಮಾನದ ಮುದ್ದೆಯಾದ. ಆ ಶಿಕ್ಷಕರು ಸೂಕ್ಷ್ಮವಾಗಿ ಸ್ಪಂದಿಸಿ ಎಲ್ಲವನ್ನೂ ಮಾತಿನಲ್ಲೇ ತಿಳಿಗೊಳಿಸಿ, ಆತನನ್ನು ಮರಳಿ ತರಗತಿಗೆ ಕಳಿಸಿದರು.

ತುಸು ಎಚ್ಚರಿಕೆಯಿಂದ ಗಮನಿಸಿದರೆ ನಮ್ಮ ಸುತ್ತಮುತ್ತ ಇಂಥ ಹಲವು ಉದಾಹರಣೆಗಳು ಸಿಗುತ್ತವೆ. ಮನೆಯ ಹಿರಿಯರು ಅಂಟಿಸಿಕೊಂಡ ಮಾದಕ ವ್ಯಸನದ ಗೀಳು, ಬಾಳಿ ಬದುಕಬೇಕಾದ ಕಿರಿಯರ ಬಾಳನ್ನು ಗೋಳಾಗಿಸುತ್ತಿದೆ. ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಹೇಳುವಾಗೆಲ್ಲ ಬಹುಪಾಲು ಅವು ಆ ವ್ಯಸನಿಯ ಕೇಂದ್ರಿತವಾಗಿಯೇ ಇರುತ್ತವೆ‌. ಆದರೆ ಅದೆಲ್ಲವನ್ನೂ ಮೀರಿಸುವಂಥದ್ದು ಆ ವ್ಯಸನ ಮಕ್ಕಳ ಮೇಲೆ ಬೀರುತ್ತಿರುವ ಪ್ರತಿಕೂಲ ಪರಿಣಾಮ ಹಾಗೂ ಅದರಿಂದ ಉಂಟಾಗುತ್ತಿರುವ ಗಂಭೀರ ಹಾನಿ. ಈ ಕುರಿತಂತೆ ಸಮಾಜ ಹೆಚ್ಚು ಜಾಗೃತವಾಗುವ ಅಗತ್ಯವಿದೆ.

ಬಾಡದಿರಲಿ ಮೊಗ್ಗು :

ಆ ಮಕ್ಕಳಿಗೆ ಅಚ್ಚುಮೆಚ್ಚಿನ ತಾಣವಾಗಬೇಕಿದ್ದ ಮನೆ ಕಂಗೆಡಿಸುತ್ತದೆ, ರಾತ್ರಿಗಳು ದುಃಸ್ವಪ್ನದಂತೆ ಕಾಡುತ್ತವೆ, ಪ್ರೀತಿ-ವಾತ್ಸಲ್ಯ ಧಾರೆಯೆರೆಯಬೇಕಾದ ಪೋಷಕರು ಭೀತಿಗೆ ಕಾರಣರಾದರೆ ನಗು, ಪ್ರೀತಿ, ಕಾಳಜಿ, ಅಕ್ಕರೆ ಅರಳಬೇಕಾದಲ್ಲಿ ಬೇಸರ, ವಿಷಾದ, ಅಸಹಾಯಕತೆ ಹಾಗೂ ತಪ್ಪಿತಸ್ಥ ಭಾವಗಳು ಸರಿದಾಡುತ್ತವೆ. ತನ್ಮೂಲಕ ಮಕ್ಕಳು ತಮ್ಮ ಬದುಕಿಗೆ ಅವಶ್ಯಕವಾದ ಸೂಕ್ತ ಮಾದರಿಗಳೇ ಇಲ್ಲದೆ ಒದ್ದಾಡುತ್ತವೆ. ಆ ಚಿಕ್ಕ ಪ್ರಾಯದಲ್ಲಿ, ಹಾಗೆ ನಡೆಯುತ್ತಿರುವುದೆಲ್ಲ ಸಹಜವೋ, ಅಸಹಜವೋ ಎನ್ನುವುದನ್ನೂ ನಿರ್ಧರಿಸಲಾಗದೆ ಗೊಂದಲಕ್ಕೆ ಬೀಳುತ್ತವೆ‌. ತನ್ನ ಪೂರ್ವಾನುಭವದಂತೆ ನಂಬಿಕೆ, ವಿಶ್ವಾಸಗಳು ಈಡೇರಲಾರವು ಎಂಬ ನಿಲುವಿಗೆ ಅಂಟಿಕೊಳ್ಳುತ್ತವೆ. ಇನ್ನು ಯಾರದೋ ತಪ್ಪಿಗೆ ಇವರು ದೂಷಣೆಗೆ ಗುರಿಯಾಗಬೇಕಾಗುತ್ತದೆ. ಅದೇ ಕಾರಣಕ್ಕೆ ಅವಮಾನ, ಹೀಗಳಿಕೆ ಎದುರಿಸುವುದೂ ತಪ್ಪವುದಿಲ್ಲ. ಕೊನೆಗೆ ‘ತಾನು ಯಾವುದಕ್ಕೂ ಲಾಯಕ್ಕಿಲ್ಲ’ ಎಂಬ ಕೀಳರಿಮೆಯ ಭಾವವೊಂದು ಅವರ ಮನಸ್ಸಲ್ಲಿ ಚಿಗಿತಿಕೊಳ್ಳುತ್ತದೆ. ಅಲ್ಲಿಗೆ ಅರಳಿ ನಳನಳಿಸಬೇಕಾದ ಹೂವೊಂದು, ಪೋಷಕರ ವ್ಯಸನದ ಬಿಸಿಯ ಬೇಗೆಗೆ ಮೊಗ್ಗಿನಲ್ಲೇ ಬಾಡಲಾರಂಭಿಸುತ್ತದೆ.
ಬಾಲ್ಯದ ಈ ಸಮಸ್ಯೆ ಮುಂದೆ ಅವರ ವ್ಯಕ್ತಿತ್ವದ ಮೇಲೆಯೂ ಗುಣಪಡಿಸಲಾಗದ ಗಾಯ ಮಾಡಿಟ್ಟಿರುತ್ತದೆ. ದೊಡ್ಡವರಾದಂತೆ ತಮ್ಮ ಜೀವನದ ಬಗ್ಗೆ ಪ್ರೀತಿ ಮಾಯವಾಗಿ, ಉದ್ಯೋಗ, ವಿವಾಹ, ಸಾಧನೆ ಇತ್ಯಾದಿಗಳ ಬಗ್ಗೆ ನಿರಾಸಕ್ತಿ ತಳೆಯುತ್ತಾರೆ. ಇದೇ ನೆಲೆಯಲ್ಲಿ ಹೆಚ್ಚೆಚ್ಚು ಪ್ರಚೋದನಕಾರಿ ವರ್ತನೆ ಬೆಳೆಸಿಕೊಂಡು ಕಂಟಕರಾಗಿ ಪರಿಣಮಿಸುತ್ತಾರೆ. ಯಾವ ವ್ಯಸನ ಅವರನ್ನು ಬಾಲ್ಯದಲ್ಲಿ ಕಂಗೆಡಿಸಿತ್ತೋ ಅದರ ಬಗ್ಗೆ ಕೆಲವರು ತಿರಸ್ಕಾರ ಭಾವ ತಳೆದು ದೂರ ಉಳಿದರೆ ಇನ್ನು ಕೆಲವರು ತಮಗೇ ಅರಿವಿಲ್ಲದಂತೆ ಆ ವ್ಯಸನಗಳಿಗೇ ಶರಣಾಗುತ್ತಾರೆ.

ಫೋಟೋ ಕೃಪೆ : google

ಅಸಹನೀಯ ಒಂಟಿತನ :

ಒಂದು ಅಂದಾಜಿನ ಪ್ರಕಾರ ಸರಾಸರಿ ಪ್ರತೀ ನಾಲ್ಕರಲ್ಲಿ ಒಂದು ಮಗು ಮಾದಕ ವ್ಯಸನಿ ಪೋಷಕರನ್ನು ಹೊಂದಿದೆಯಂತೆ. ಆ ಪೈಕಿ ಪ್ರತಿಶತ 46 ರಷ್ಟು ಮಕ್ಕಳು ಅದನ್ನು ಅನ್ಯರಲ್ಲಿ ತಪ್ಪಿಯೂ ಹಂಚಿಕೊಳ್ಳಲು ಇಚ್ಛಿಸುವುದಿಲ್ಲ. ಆತಂಕಕ್ಕೆ ನೂಕುವ ಸಂಗತಿಯೆಂದರೆ ಶೇ.25ರಷ್ಟು ಮಕ್ಕಳು ಅದನ್ನು ಖುದ್ದು ತಮ್ಮ ಕುಟುಂಬದ ಹತ್ತಿರದ ಬಂಧುಗಳಲ್ಲೂ ಹೇಳಿಕೊಳ್ಳದಿರುವುದು. ಅಂದರೆ ಆ ಎಲ್ಲಾ ನೋವು, ದುಗುಡ, ದುಮ್ಮಾನಗಳನ್ನು ನುಂಗಿಕೊಂಡು ಮೌನವಾಗಿಯೇ ಈ ನಿತ್ಯ ಸಂಕಷ್ಟದ ಸುಳಿಯೊಳಗೆ ಸಿಲುಕಿ ನಲುಗುತ್ತಾರೆ. ಎಲ್ಲರೂ ಇದ್ದಾಗ್ಯೂ ಕೂಡಾ ಅವರ ಮನಸ್ಸು ಅಸಹನೀಯ ‘ಒಂಟಿತನ’ಕ್ಕೆ ಸಿಕ್ಕು ಒದ್ದಾಡುತ್ತಿರುತ್ತದೆ.

ಸಪ್ತಾಹ ಪರ್ವ :

ಮಾದಕ ವ್ಯಸನಿಯ ಮಕ್ಕಳ ದುಃಸ್ಥಿತಿಯ ಬಗ್ಗೆ ಸಮಾಜದಲ್ಲಿ ಸೂಕ್ಷ್ಮ ದೃಷ್ಟಿಕೋನ ಮೂಡಿಸಿ ಸಂವೇದನಾಶೀಲತೆ ಬೆಳೆಸುವ ಉದ್ಧೇಶದಿಂದ ‘ಮಾದಕ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹ’ (COA Week) ವನ್ನು ಪ್ರತೀ ವರ್ಷ ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುತ್ತಿದೆ. ಈ ವರ್ಷ ಫೆಬ್ರವರಿ 12 ರಿಂದ 18 ರವರೆಗೆ ನಡೆಯಿತು. ಈ ಸಪ್ತಾಹದ ಮೂಲಕ ಅರಿವು ಮೂಡಿಸುವ ಉಪನ್ಯಾಸ, ತರಬೇತಿ, ಬೀದಿ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆ, ಜಾಥಾ ಇತ್ಯಾದಿಗಳನ್ನು ನಡೆಸಲಾಗುತ್ತದೆ.

ಸಪ್ತ ಸೂತ್ರ :

ಮಾದಕ ವ್ಯಸನಿಯ ಮಕ್ಕಳು ಆ ಸಮಸ್ಯೆಯಿಂದ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಪ್ತ ಸೂತ್ರಗಳು ನೆರವಾಗುತ್ತವೆ. ನಿನ್ನ ಹೆತ್ತವರ ಮದ್ಯವ್ಯಸನ ಒಂದು ಕಾಯಿಲೆಯೇ ಸರಿ.

1 – ನೀನಿದಕ್ಕೆ ಕಾರಣೀಕರ್ತನಲ್ಲ
2 – ನಿನ್ನಿಂದ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ
3 – ನೀನಿದನ್ನು ಗುಣಪಡಿಸಲೂ ಸಾಧ್ಯವಿಲ್ಲ
ಆದರೆ
4 – ನಿನ್ನ ಭಾವನೆಗಳ ಅಭಿವ್ಯಕ್ತಿಯೊಂದಿಗೆ
5 – ಉತ್ತಮ ಆಯ್ಕೆಗಳೊಂದಿಗೆ
6 – ನಿನ್ನನ್ನು ನೀನು ಸಂಭ್ರಮಿಸುವುದರೊಂದಿಗೆ
7 – ನಿನ್ನ ಕಾಳಜಿ ನೀನು ಮಾಡಬಲ್ಲೆಯಾದರೆ ನಿನಗೆ ನೀನೇ ಗೆಳೆಯ – ಡಾ. ವಿರೂಪಾಕ್ಷ ದೇವರಮನೆ ಮನೋವೈದ್ಯರು, ಡಾ. ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ (ಇವರ ‘ನಿನಗೆ ನೀನೇ ಗೆಳೆಯ’ ಎಂಬ ಮದ್ಯವ್ಯಸನಿಗಳ ಮಕ್ಕಳ ಸ್ವ-ಸಹಾಯಕ್ಕಾಗಿ ಮಾರ್ಗದರ್ಶಿ ಕೈಪಿಡಿಯಂಥ ಕಿರು ಪುಸ್ತಕವೊಂದನ್ನು ಈ ಸಪ್ತಾಹದ ಸಂದರ್ಭದಲ್ಲಿ ಹೊರತಂದಿದ್ದಾರೆ. ಆಸಕ್ತರು ಪುಸ್ತಕಕ್ಕಾಗಿ, ಅನಿಲ್ – ಮೊ.ಸಂ 9482759354 ಸಂಪರ್ಕಿಸಬಹುದು.)


‘ಮಾದಕ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹ’ ಕಾರ್ಯಕ್ರಮದಲ್ಲಿ ಡಾ. ವಿರೂಪಾಕ್ಷ ದೇವರಮನೆ, ಮನೋವೈದ್ಯರು

ನಾವೇನು ಮಾಡಬಹುದು? :

● ಈ ಮಕ್ಕಳಿಗೆ ಬೇಕಾಗಿರುವುದು ಕನಿಕರ ಅಥವಾ ಸಹಾನುಭೂತಿಯಲ್ಲ.ಅಸಲಿಗೆ ಅವು ಅವರನ್ನು ಇನ್ನಷ್ಟು ಕುಗ್ಗಿಸುತ್ತವೆ. ಅಗತ್ಯವಿರುವುದು ಆತ್ಮಸ್ಥೈರ್ಯ ಮೂಡಿಸುವ ಮಾತು, ವರ್ತನೆ ಹಾಗೂ ಪ್ರೋತ್ಸಾಹಗಳಂಥ ಹಿತವಾದ ಬೆಂಬಲ.
● ಲವಲವಿಕೆಯಿಂದ ಬೆರೆಯಲು ಪೂರಕವಾಗಿ ಗೆಳೆಯರು, ಸಂದರ್ಭ, ಚಟುವಟಿಕೆ ಹಾಗೂ ಸನ್ನಿವೇಶಗಳ ಅವಕಾಶ ಒದಗಿಸುವುದು ಆದ್ಯತೆಯಾಗಬೇಕು.
● ಮಾದಕ ವ್ಯಸನದ ಕೌಟುಂಬಿಕ ಹಿನ್ನೆಲೆ ಉಳ್ಳವರು ಎಂಬ ಕಾರಣಕ್ಕೆ ನಿರ್ಧಾರ, ಆಯ್ಕೆ ಹಾಗೂ ಆದ್ಯತೆಗಳಂಥ ವಿಷಯಗಳಲ್ಲಿ ತಾರತಮ್ಯ ಮಾಡದಿರುವುದು.
● ಮನೆಯವರ ವ್ಯಸನವನ್ನು ಗುರಿಯಾಗಿಸಿ ಮಕ್ಕಳನ್ನು ವೈಯಕ್ತಿಕ ಅವಮಾನ, ಹೀಗಳಿಕೆ, ನಿರ್ಲಕ್ಷ್ಯ ಹಾಗೂ ದೂಷಣೆಗೆ ಗುರಿಯಾಗಿಸದಿರುವುದು.
● ಆ ಮಕ್ಕಳಿಗೆ ಮಾಡಬಹುದಾದ ಅತ್ಯಂತ ಮಹತ್ವದ ಸಹಾಯವೆಂದರೆ, ಮಾದಕ ವ್ಯಸನಕ್ಕೆ ತುತ್ತಾಗಿರುವ ಅವರ ಪೋಷಕರನ್ನು ವ್ಯಸನ ಮುಕ್ತರನ್ನಾಗಿಸಲು ಪ್ರಯತ್ನಿಸುವುದು.


  • ಸಂದೇಶ್ ಎಚ್ ನಾಯ್ಕ್, ಕುಂದಾಪುರ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW