‘ಕ್ಷಮಿಸಿ ಬಿಡು ಇನ್ನು ಕನಸಲ್ಲಾದರು ಒಮ್ಮೆ, ಹೇಳದೆ ಮನವು ಮೌನವಾಯಿತೆ’….ಈ ಸುಂದರ ಸಾಲುಗಳು ಯುವ ಕವಿ ವಿಕಾಸ್. ಫ್. ಮಡಿವಾಳರ ಅವರ ಲೇಖನಿಯಲ್ಲಿ ಅರಳಿದ ಒಂದು ಕವನದಿಂದ ತಪ್ಪದೆ ಮುಂದೆ ಓದಿ…
ಬಾನ ತುದಿಯ ಮೇಲೆ ಬೀಗಿದಂತ ನಗುವೆ
ಮುಗಿಲ ಹಾಸಿಗೆಯಲ್ಲಿ ಮರೆಯಾಯಿತೆ
ಮಡಿಚಿಟ್ಟ ನೆನಪು ಮತ್ತೊಮ್ಮೆ ಕಾಡಲು
ಹೇಳದೆ ಮನವು ಮೌನವಾಯಿತೆ..1
ಎದುರಿಗೆ ನೀನಿದ್ದರು ಏನನ್ನು ಹೇಳದೆ
ತಲೆಬಾಗಿ ನಿನ್ನೆದುರು ಕಣ್ಮುಚ್ಚಿತೆ
ನೀ ಏನೆ ಕೇಳಿದರು ಸುಮ್ಮನೆ ನಿಂತಿರುವೆ
ಏನನ್ನು ಹೇಳದೆ ಮೌನವಾಯಿತೆ…2
ಎಲ್ಲವನು ಮರೆತು ದಿಂಬಿನಡಿಗೆ ಮಲಗಿರಲು..
ಮತ್ತೆ ಮತ್ತೆ ನಿನ್ನ ಮುಖವು ನೆನಪಾಯಿತೆ
ಕ್ಷಮಿಸಿಬಿಡು ಇನ್ನು ಕನಸಲ್ಲಾದರು ಒಮ್ಮೆ
ಹೇಳದೆ ಮನವು ಮೌನವಾಯಿತೆ..3
ಕನ್ನಡಿಯ ಮುಂದೆ ನನ್ನನೊಮ್ಮೆ ನೋಡಲು,
ನಿನ್ನ ಬಿಂಬವು ಏಕೆ ಸೆರೆಯಾಯಿತೆ
ಮೂಡಿದ ನಗುವೊಂದು ಮತ್ತೆ ಮರೆಯಾಯಿತು
ಏನನ್ನು ಹೇಳದೆ ಮರೆಯಾಯಿತೆ…4
ಹೋಗುವ ದಾರಿಯು ಕೂಡ ನನ್ನ ನೋಡಿ ಅಳಲು.
ಇಡುವ ಹೆಜ್ಜೆಯು ಕೂಡ ಭಾರವಾಯಿತೆ
ಕೊನೆಯಾದ ಪುಟಕೆ ಮುನ್ನುಡಿಯ ಬರೆಯುತ
ಕೊನೆಗೂ ಮನಸು ಮೌನವಾಯಿತೆ…5
- ವಿಕಾಸ್. ಫ್. ಮಡಿವಾಳರ – ಯುವ ಲೇಖಕ