ಕನ್ನಡದ ಹೊಸ ಚಿತ್ರ “ಕಾಲೇಜ್ ಕಲಾವಿದ ” ಅದರ ನಾಯಕ ನಟ ಆರವ್ ಸೂರ್ಯ. ಅವನ ಚಿತ್ರ ಬದುಕಿನಲ್ಲಿ ಒಂದು ಒಳ್ಳೆಯ ತಿರುವು ಕೊಟ್ಟು ಕನ್ನಡ ಚಿತ್ರರಂಗದಲ್ಲಿ ಈ ಯುವ ಕಲಾವಿದ ಭದ್ರವಾಗಿ ನೆಲೆಯೂರುವಂತಾಗಲಿ ಎಂದು ಹಾರೈಸುತ್ತಾ ಶುಭ ಕೋರುತ್ತೇವೆ.
ಈ ಹುಡುಗನ ಚಿತ್ರರಂಗದಲ್ಲಿನ ಹೆಸರು ಆರವ್ ಸೂರ್ಯ. ಕನ್ನಡದಲ್ಲಿ ಇಂದು ಬಿಡುಗಡೆಯಾಗುತ್ತಿರುವ ಹೊಸ ಚಿತ್ರ “ಕಾಲೇಜ್ ಕಲಾವಿದ ” ಇವನ ಮೂರನೆಯ ಸಿನಿಮಾ. ಕಾಲೇಜು ಮೆಟ್ಟಿಲು ಹತ್ತಿದ ತರುವಾಯ ಆರವ್ ಸೂರ್ಯನಿಗೆ ಅದೆಲ್ಲಿಂದ ಸಿನಿಮಾಗಳಲ್ಲಿ ಅಭಿನಯಿಸಬೇಕೆಂಬ ಗೀಳು ಶುರುವಾಯ್ತೋ ಗೊತ್ತಿಲ್ಲ. ಅದು ಹರೆಯದಲ್ಲಿ ಸುಮ್ಮನೇ ಹೀಗೆ ಬಂದು ಹಾಗೆ ಬಿಟ್ಟುಬಿಡುವ ಕನಸಿನಂತಲ್ಲ. ಆ ಕನಸನ್ನೇ ಬಿಗಿಯಾಗಿ ತಬ್ಬಿ ಅದರ ಸಾಕಾರಕ್ಕಾಗಿ ಇವನು ಸತತ ಶ್ರಮ ಹಾಕಿದ. ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವ ಮಧ್ಯೆಯೇ ಅಭಿನಯದ ಪಟ್ಟುಗಳನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡುತ್ತಲೇ ಹೋದ. ಅವನೊಳಗಿನ ನಟನಾಗುವ ತೀವ್ರ ಹಂಬಲದ ತುಡಿತಕ್ಕೆ ಸ್ವಯಂ ಉತ್ಸಾಹದ ಕಿಡಿ ಅಂಟಿಸಿ ಒಂದು ಕೈ ನೋಡೇ ಬಿಡುವ ಎನ್ನುವ ಜಿದ್ದಿಗೆ ಬಿದ್ದ.

ಆದರೆ ಅಷ್ಟಕ್ಕೇ ಸಾಕಾಗದೇ ಬೆಂಗಳೂರಿನಲ್ಲಿ ಚಾಮರಾಜ ಮಾಸ್ಟರ್ ಎನ್ನುವರ ಬಳಿ ನೃತ್ಯ ತರಬೇತಿ ಹಾಗೂ ಹೈದರಾಬಾದಿನ ಸತ್ಯಾನಂದ ಮಾಸ್ಟರ್ ಎಂಬುವರ ಬಳಿ ಅಭಿನಯ ತರಬೇತಿ ಪಡೆದ. ( ಇವರು ತೆಲುಗಿನ ಪವನ್ ಕಲ್ಯಾಣ್, ಮಹೇಶ್ ಬಾಬು, ಪ್ರಭಾಸ್ ರವಿತೇಜ ಇನ್ನು ತುಂಬಾ ಹೀರೋಗಳಿಗೆ ಆಕ್ಟಿಂಗ್ ಕ್ಲಾಸ್ ನಡೆಸಿರುವ ಖ್ಯಾತರು). ನಿಧಾನಕ್ಕೆ ಸಿನಿಮಾ ಅಭಿನಯದ ಒಂದೊಂದೇ ಪಟ್ಟುಗಳನ್ನು ಗಂಭೀರವಾಗಿ ಕಲಿಯಲಾರಂಭಿಸಿದ ಎಲ್ಲಾ ಭಾಷೆಯ ಹಿರಿಯ ನಟರ ಕಲಾವಿದರ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಲೇ ನಟನಾಗುವ ತನ್ನ ಕನಸಿನ ರೆಕ್ಕೆಗಳಿಗೆ ನಿಧಾನಕ್ಕೆ ಪುಷ್ಠಿ ಕೊಡುತ್ತಲೇ ಬಂದ. ಅದಕ್ಕೆ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಅಡೆತಡೆಗಳಿದ್ದರೂ ಅವನ ತಂದೆ ತಾಯಿಯರ ಪೂರ್ಣ ಪ್ರೋತ್ಸಾಹವೂ ಸಿಕ್ಕಿದ ನಂತರ ಇವನು ತೆರೆಯ ಮೇಲೆ ಹೀರೋ ಆಗಿ ಕಾಣಿಸಿಕೊಳ್ಳುವ ಅವಕಾಶವೂ ಬಂತು. ಅದರಂತೆ ತನ್ನ ಮೊದಲ ಚಿತ್ರ “ಶ್ರೀಚಕ್ರಂ ” ನಲ್ಲಿಯೇ ಸ್ವಲ್ಪಮಟ್ಟಿಗೆ ಭರವಸೆ ಮೂಡಿಸಿದ. ಆನಂತರ ಎರಡನೆಯ ಸಿನಿಮಾ ” ಹಳ್ಳಿ ಸೊಗಡು ” ಮಾಡಿದ. ಆದರೆ ಆ ಎರಡೂ ಚಿತ್ರಗಳು ಹೆಚ್ಚು ಸದ್ದು ಮಾಡದೇ ತೆರೆಮರೆಗೆ ಸರಿದರೂ ಆರವ್ ಧೃತಿಗೆಡಲಿಲ್ಲ. ಆ ಮೊದಲೆರಡು ಚಿತ್ರಗಳಲ್ಲಿನ ಪಾತ್ರಗಳು ಆರವ್ ಸೂರ್ಯನಲ್ಲಿದ್ದ ಪ್ರತಿಭೆಗೆ ಸವಾಲಾಗುವ ಪಾತ್ರಗಳಾಗಿರದೇ ಹೋದದ್ದೂ ಇವನ ಆರಂಭದ ಹೆಜ್ಜೆಗಳಿಗೆ ಬಿದ್ದ ಪೆಟ್ಟಾಗಿತ್ತು. ಆದರೆ, ಪಟ್ಟುಬಿಡದೇ ಹಲವು ಹಿರಿಯರ ಸಲಹೆಯಂತೆ ಹೆಚ್ಚಿನ ಅನುಭವ ಹಾಗೂ ಐಡೆಂಟಿಟಿಗಾಗಿ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಲು ಶುರು ಮಾಡಿ ಸುಮಾರು ಆರೇಳು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಇದೀಗ ಕನ್ನಡ ಧಾರಾವಾಹಿ ವೀಕ್ಷಕರಿಗೆ ಮನೆ ಮಾತಾಗಿ ಹೋಗಿದ್ದಾನೆ. ಇವನು ನಟಿಸಿರುವ ಕೆಲವು ಧಾರಾವಾಹಿಗಳು.

ಇವಳೇ ವೀಣಾ ಪಾಣಿ (ಕಲರ್ ಸೂಪರ್)
ಮರಳಿ ಬಂದಳು ಸೀತೆ (ಸ್ಟಾರ್ ಸುವರ್ಣ)
ನಂದಿನಿ ( ಉದಯ ಟಿವಿ)
ಯಾರಿವಳು (ಉದಯ ಟಿವಿ)
ಜೇನುಗೂಡು (ಸ್ಟಾರ್ ಸುವರ್ಣ )
ಶಾಂತಿ ನಿವಾಸ. (ಉದಯ ಟಿವಿ )
ಇದಲ್ಲದೇ “ಅಂಡರ್ ಕವರ್” ಎಂಬ ವೆಬ್ ಸೀರೀಸ್ ನಲ್ಲೂ ಅಭಿನಯಿಸಿದ್ದಾನೆ.
ಈ ಎಲ್ಲಾ ಅನುಭವದ ಹಿನ್ನೆಲೆಯಲ್ಲಿ ಆರವ್ ಸೂರ್ಯ ನಾಯಕನಾಗಿ ನಟಿಸಿರುವ ಮೂರನೇ ಸಿನಿಮಾ ” ಕಾಲೇಜ್ ಕಲಾವಿದ ” ಇಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ. ಈ ಚಿತ್ರದ ಒಂದೆರಡು ಹಾಡುಗಳನ್ನು ಈ ಹಿಂದೆ ನೋಡಿದಾಗ ಆರವ್ ತುಂಬಾ ಪಳಗಿದ್ದಾನೆ ಹಾಗೂ ಮತ್ತಷ್ಟು ನಿರೀಕ್ಷೆ ಮೂಡಿಸಿದ್ದಾನೆ ಎನಿಸಿದೆ.
ಅಂದಹಾಗೆ ಇಷ್ಟು ಹೊತ್ತು ಪರಿಚಯಿಸಿದ ನಾಯಕನಟ ಆರವ್ ಸೂರ್ಯ, ಬಳ್ಳಾರಿಯಲ್ಲಿರುವ ನನ್ನ ಅಕ್ಕನ ಮಗ. ಮನೆಯಲ್ಲಿ ಕರೆಯುವುದು ನಿಖಿಲ್ ಎಂದು. ಚಿಕ್ಕಂದಿನಿಂದಲೂ ಅಭಿನಯ ನೃತ್ಯಗಳ ಬಗ್ಗೆ ಒಲವು ಮೂಡಿಸಿಕೊಂಡೇ ಬಂದಿರುವ ಭರವಸೆಯ ನಟ. ಧಾರಾವಾಹಿಗಳಲ್ಲಿ ನಟಿಸಿದ ನಂತರ ಸಂಭಾಷಣೆ ಹೇಳುವುದರಲ್ಲಿ, ಹಾಗೂ ಚುರುಕಿನ ಸಹಜ ಅಭಿನಯದಲ್ಲಿ ಮಾಗುವತ್ತ ಸಾಗಿದ್ದಾನೆ ಎನಿಸಿತು.
ಇನ್ನು ಇವನ ವೈಯಕ್ತಿಕವಾಗಿ ಹೇಳುವುದಾದರೆ ತಂದೆತಾಯಿಯರ ಮಾರ್ಗದರ್ಶನದಲ್ಲಿ ವೃತ್ತಿಜೀವನ ರೂಪಿಸಿಕೊಂಡು ಮುಂದುವರೆಯುತ್ತಿರುವ ಸಂಭಾವಿತ ಹುಡುಗ. ಇಚ್ಛೆಯರಿತ ಪತ್ನಿ ಹಾಗೂ ಮುದ್ದಾದ ಮಗುವಿನ ತಂದೆಯಾಗಿರುವ ಆರವ್ ಸೂರ್ಯ ನ ನಟನೆಯ ” ಕಾಲೇಜ್ ಕಲಾವಿದ ” ಅವನ ಚಿತ್ರ ಬದುಕಿನಲ್ಲಿ ಒಂದು ಒಳ್ಳೆಯ ತಿರುವು ಕೊಟ್ಟು ಕನ್ನಡ ಚಿತ್ರರಂಗದಲ್ಲಿ ಈ ಯುವ ಕಲಾವಿದ ಭದ್ರವಾಗಿ ನೆಲೆಯೂರುವಂತಾಗಲಿ ಎಂದು ಹಾರೈಸುತ್ತಾ ಶುಭ ಕೋರುತ್ತೇನೆ.
ಗುಡ್ ಲಕ್ ನಿಖಿಲ್…

* ಮರೆಯುವ ಮುನ್ನ *
ಚಿತ್ರರಂಗದಲ್ಲಿ ಕೆಲವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ ಆದರೆ ಅದೃಷ್ಟ ಇರೋದಿಲ್ಲ. ಮತ್ತೇ ಕೆಲವರಿಗೆ ಅವಕಾಶಗಳು ಕಡಿಮೆಯಾದರೂ ಅದೃಷ್ಟ ಕೈಹಿಡಿದರೆ ಅವರು ಎಲ್ಲೋಹೋಗಿ ಮುಟ್ಟುತ್ತಾರೆ. ಆದರೆ ಮತ್ತೇ ಹಲವರಿಗೆ ಕಲೆ , ಪ್ರತಿಭೆ, ಸಾಧಿಸುವ ಛಲ ಎಲ್ಲವೂ ಇದ್ದರೂ ಅವಕಾಶಗಳ ಬಾಗಿಲು ಅಷ್ಟು ಸರಾಗವಾಗಿ ತೆರೆಯದು.
ಕನ್ನಡದ ಬಹುತೇಕ ಪ್ರತಿಭೆಗಳು ಅವಕಾಶ ಮತ್ತು ಅದೃಷ್ಟ ಇವೆರಡರಿಂದಲೂ ವಂಚಿತರಾಗಬಾರದು. ಹಾಗಾದಲ್ಲಿ ಅದು ಕನ್ನಡ ಚಿತ್ರರಂಗದ ಉಜ್ವಲ ಭವಿಷ್ಯದ ಮೇಲೆ ಅಡ್ಡ ಪರಿಣಾಮ ಬೀರಲೂಬಹುದು. ಇಂದು ಸೂಪರ್ ಸ್ಟಾರ್ ಗಳಾಗಿರುವ ಅನೇಕರಿಗೆ ಅಂದು ಸಿಕ್ಕ ಅವಕಾಶ ಮತ್ತು ಅದೃಷ್ಟ ಸಾಥ್ ನೀಡಿದ್ದೇ ಕಾರಣ. ಅಂತಹ ಒಂದು ಸುಂದರ ಅವಕಾಶ , ಏನಾದರೂ ವಿಭಿನ್ನವಾಗಿ ಸಾಧಿಸುವ ಸ್ಥೈರ್ಯ ಹಾಗೂ ಅದಕ್ಕೆ ಕನ್ನಡಿಗರ ನಿರಂತರ ಪ್ರೋತ್ಸಾಹ ಆರವ್ ಸೂರ್ಯನಿಗೆ ಸಿಗಲಿ ಎಂದು ಮನದುಂಬಿ ಹಾರೈಸುತ್ತೇನೆ.
ನೆನಪಿರಲಿ…. ಗುಣಮಟ್ಟವಿರುವ ಯಾವುದೇ ಕಲೆಯನ್ನು, ಕಲಾಪ್ರಕಾರವನ್ನು ಕನ್ನಡಿಗರು ಕೈಬಿಟ್ಟ ಉದಾಹರಣೆ ಕನ್ನಡನಾಡಿನ ಸಂಸ್ಕೃತಿಯಲ್ಲೇ ಇಲ್ಲ.
“ಕಾಲೇಜ್ ಕಲಾವಿದ” ಚಿತ್ರದ ಯಶಸ್ಸಿಗೆ, ಇಡೀ ತಂಡಕ್ಕೆ ಹಾಗೂ ನಾಯಕನಟ ಆರವ್ ಸೂರ್ಯನಿಗೆ ಶುಭಹಾರೈಕೆಗಳು.
ಪ್ರೀತಿಯಿಂದ…..
- ಹಿರಿಯೂರು ಪ್ರಕಾಶ್
