ಕಂಗ್ರಾಟ್ಸ್ ಇಸ್ರೋ.! – ಎ.ಎನ್.ರಮೇಶ್. ಗುಬ್ಬಿ

“ನಿನ್ನೆ ಸಂಜೆ ಕಣ್ಣಂಚಲಿ ಮೂಡಿದ ಆನಂದ ಭಾಷ್ಪ ಇನ್ನೂ ಹಾಗೇ ಇದೆ. ಹೃನ್ಮನಗಳಲಿ ಆ ಪುಳಕ, ಆ ರೋಮಾಂಚನ ಇನ್ನೂ ರಿಂಗಣಿಸುತ್ತಲೇ ಇದೆ. ಬೇರೇನೂ ಬರೆಯಲು ಮನಸ್ಸಾಗುತ್ತಿಲ್ಲ. ನಿನ್ನೆಯ ಆ ಅಮೂರ್ತ ಭಾವಗಳನ್ನೇ ಹನಿಗವಿತೆಗಳನ್ನಾಗಿಸಿ ನಿಮ್ಮ ಮುಂದಿಡುತ್ತಿದ್ದೇನೆ. ಈ ಆರು ಅಕ್ಷರಪ್ರಣತೆಗಳು ನಿನ್ನೆಯ ಆ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ನಿಮ್ಮ ಎದೆಯಂಗಳದ ಭಾವವೂ ಹೌದು, ಭಾಷ್ಯವೂ ಹೌದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

 

1. ಗುರಿ..!

ಕ್ರಮಿಸಾಯ್ತು ಚಂದಿರನೂರಿನ ದಾರಿ
ನಿಂತಾಯ್ತು ದಿಗ್ವಿಜಯದ ಕಾಲೂರಿ
ಶುಕ್ರನೂರಿನ ಗುರಿ, ಸೂರ್ಯ ಶಿಖಾರಿ
ಭವಿಷ್ಯ ಬಾಹ್ಯಾಕಾಶಯಾನದ ಗುರಿ
ವಿಶ್ವ ಮೂಕವಿಸ್ಮಿತವಾಗಿದೆ ಹೌಹಾರಿ.!

*********

2. ಅವಿಸ್ಮರಣೀಯ..!

ತಾರಕಕ್ಕೇರಿತ್ತು ಕೋಟಿ ಕೋಟಿ ಎದೆಬಡಿತ
ಉಸಿರು ಬಿಗಿಹಿಡಿದು ನೋಡುತಿತ್ತು ದಿಗ್ದಿಗಂತ
ಮೆಲ್ಲ ಮೆಲ್ಲನಿಳಿಯುತ್ತಿದ್ದ ವಿಕ್ರಮ ನಗುನಗುತ
ಮುಸ್ಸಂಜೆಯ ಆರು ಗಂಟೆ ನಾಲ್ಕು ನಿಮಿಶ
ಮೊಳಗಿತು ಬುವಿಯಿಂದ ಬಾನಿಗೆ ಜಯಘೋಷ
ಸಂಭ್ರಮೋತ್ಸಾಹದಿ ಕುಣಿದು ಕುಪ್ಪಳಿಸಿತು ದೇಶ
ಐತಿಹಾಸಿಕ ಕ್ಷಣಕೆ ಸಾಕ್ಷಿಯಾಯ್ತು ಬಾಹ್ಯಾಕಾಶ.!

********

3. ಕಂಗ್ರಾಟ್ಸ್ ಇಸ್ರೋ.!

ಇತಿಹಾಸ ಸೃಷ್ಟಿಸಿದ ಇಸ್ರೋಗೆ ಅಭಿನಂದನೆ
ಮಂದಹಾಸ ಮೂಡಿಸಿದ ನಿಮಗೀ ವಂದನೆ
ಸುವರ್ಣಾಕ್ಷರಗಳಲಿ ದಾಖಾಲಾಯ್ತು ಸಾಧನೆ
ನಿಮಗಿದೋ ಕೋಟಿ ಹೃದಯಗಳ ಆರಾಧನೆ.!
ಯಶಸ್ಸಾಗಲಿ ನಿಮ್ಮೆಲ್ಲ ಯೋಜನೆ ಸಂಶೋಧನೆ.!

*******

4. ಸಾಕಾರ.!

ಸಹಸ್ರಾರು ವಿಜ್ಞಾನಿಗಳ ಮಹಾಸಾಧನೆ
ವರ್ಷಗಳ ಅಹರ್ನಿಶಿ ಅವಿರತ ತಪನೆ
ಕೋಟ್ಯಾಂತರ ಹೃದಯಗಳ ಪ್ರಾರ್ಥನೆ
ಸಾಕಾರವಾದ ದಿವ್ಯ ಭವ್ಯ ಅನನ್ಯ ಕ್ಷಣ
ಶಶಿಯನೇರಿ ನಿಂತ ವಿಕ್ರಮನ ಚಾರಣ
ದಿಗ್ದಿಗಂತಗಳಲು ಹರ್ಶೋದ್ಘಾರ ರಿಂಗಣ

*******

5. ಪಾಠ.!

ಸೋಲೇ ಗೆಲುವಿನ ಸೋಪಾನ
ದೃಷ್ಟಾಂತ ನೆನ್ನೆಯ ಚಂದ್ರಯಾನ
ಸೋಲಲ್ಲಿಹುದು ಮಾರ್ಗದರ್ಶನ
ಸೋಲೇ ಗೆಲುವಿನ ಸಂಕೀರ್ತನ
ಯುವಜನತೆಗಿದೊಂದು ನಿದರ್ಶನ.!

*********

6. ಸಂಭ್ರಮ.!

ತಾಯಿ ವಸುಂಧರೆ ಕಳುಹಿಸಿದ ಬಾಗಿನ
ತಲುಪಿದೆ ದೂರದೂರಿನ ಚಂದಮಾಮನ.!
ಚಂದಿರನಂಗಳದೀಗ ವಿಕ್ರಮನ ನರ್ತನ
ಧರಣಿಯ ಕಣಕಣದಲ್ಲೂ ರೋಮಾಂಚನ
ವಿಶ್ವದೆಲ್ಲೆಡೆ ಭಾರತಾಂಬೆಯ ಸಂಕೀರ್ತನ.!


  • ಎ.ಎನ್.ರಮೇಶ್.ಗುಬ್ಬಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading