ಶಾಂತಿನಾಥ ದೇಸಾಯಿ: ರಘುನಾಥ್ ಕೃಷ್ಣಮಾಚಾರ್

ದೇಸಾಯಿಯವರ ಕಥಾ ಸಾಹಿತ್ಯ ದರ್ಶನ ಎನ್ನುವ ಲೇಖನವನ್ನು ಇದರಲ್ಲಿ ಬರೆದಿರುವುದಲ್ಲದೆ, ಈ ಪುಸ್ತಕವನ್ನು ನನ್ನ ಓದಿಗೆ ಒದಗಿಸಿಕೊಟ್ಟ ಗೆಳೆಯರಾದ ಸತ್ಯನಾರಾಯಣ ಅವರಿಗೆ ಧನ್ಯವಾದಗಳು – ರಘುನಾಥ್ ಕೃಷ್ಣಮಾಚಾರ್, ತಪ್ಪದೆ ಮುಂದೆ ಓದಿ …

ಪುಸ್ತಕ : ಶಾಂತಿನಾಥ ದೇಸಾಯಿ ಸಾಹಿತ್ಯ- ವ್ಯಕ್ತಿತ್ವ
ಪ್ರಕಾಶಕರು : ಪ್ರಸಾರಾಂಗ ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ ಶಂಕರಘಟ್ಟ
ಬೆಲೆ : ೨೫೦.೦೦

ನವ್ಯ ಸಾಹಿತ್ಯದ ಹರಿಕಾರರಲ್ಲಿ ಒಬ್ಬರಾದ ಶಾಂತಿನಾಥ ದೇಸಾಯಿ ತಮ್ಮ ವೈವಿಧ್ಯಮಯ ಸಾಹಿತ್ಯ ಸೃಷ್ಟಿಯಿಂದ ಪ್ರಸಿದ್ದರಾಗಿದ್ದಾರೆ. ಮೊದಲ ಬಾರಿಗೆ ಅವರ ಸಾಹಿತ್ಯ ಸೃಷ್ಟಿಯ ಮೌಲ್ಯಮಾಪನ ಈ ಕೃತಿಯಲ್ಲಿ ಕೈಗೂಡಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಈ ಕೃತಿಯಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ.

ಅವುಗಳು :

  • ಕಥಾ ಸಾಹಿತ್ಯದ ಕುರಿತು ಬರೆದ ಲೇಖನಗಳು.
  • ಅವರ ಕಾದಂಬರಿಗಳ ಕುರಿತ ಬರಹಗಳು.
  • ಅವರ ವಿಮರ್ಶಾ ಕೃತಿಗಳ ಮೌಲ್ಯ ವಿವೇಚನೆ.

ಇದಲ್ಲದೆ ಕೊನೆಯಲ್ಲಿ ಅವರ ಹತ್ತಿರದವರ ಬರಹಗಳು ಜತೆಗೆ ಸಂದರ್ಶನಗಳು. ಇಡಿ ಕೃತಿಯ ಬರಹಗಳ ಮೇಲೆ ಬೆಳಕು ಚೆಲ್ಲುವ ಬಸವರಾಜ ಕಲ್ಗುಡಿಯವರ ಮುನ್ನುಡಿ . ಮೊದಲ ಭಾಗದಲ್ಲಿ ಜಿ.ಎಸ್. ಆಮೂರ ಅವರ ಸಾಹಿತ್ಯದ ಸೂಕ್ಷ್ಮ ಅವಲೋಕನ ಮಾಡಿ ಅದರ ಸಾಧನೆ ಮತ್ತು ಮಿತಿಗಳನ್ನು ಸರಿಯಾಗಿಯೆ ಗುರುತಿಸಿದ್ದಾರೆ.” ಕೆಲವರನ್ನು ಹೊರತುಪಡಿಸಿ ದೇಸಾಯಿಯವರಿಂದ ದೊರೆತ ಸ್ಪಂದನ ಅನ್ಯರಿಂದ ದೊರೆಯಲಿಲ್ಲ” ಅವರಿಬ್ಬರ ನಡುವಣ ನಿಸ್ಪೃಹ ಬಾಂಧವ್ಯಕ್ಕೆ ಸಾಕ್ಷಿ ನುಡಿಯುತ್ತದೆ. ಪ್ರಸಿದ್ದ ಭಾಷಾವಿದರು ಅವರ ಶಿಷ್ಯರು ಆದ ಜಿ.ಎನ್ ದೇವಿ ಅವರು ಶಿವಾಜಿ ವಿ.ವಿ.ದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ವಿಭಾಗವನ್ನು ಏಕಾಂಗಿಯಾಗಿ ಕಟ್ಟಿ ಬೆಳೆಸಿದ ಅವರ ಸಾಹಸಗಾಥೆಯನ್ನು ಇಂಗ್ಲಿಷ್ ನಲ್ಲಿ ಸ್ಮರಿಸಿರುವುದು ತಕ್ಕ ಗುರಕಾಣಿಕೆಯಾಗಿದೆ. ಉಳಿದ ಬರಹಗಳಲ್ಲಿ ಬೀಜ ಕಾದಂಬರಿ ಕುರಿತು ಎಚ್.ಎಸ್.ಆರ್ ಮತ್ತು ಗೀತಾವಸಂತ ಬೇರುಗಳನ್ನು ಕಡಿದುಕೊಂಡ ನವ ಜನಾಂಗವೊಂದು ಮತ್ತೆ ಬೇರುಗಳನ್ನು ಹುಡುಕಿಕೊಂಡು ಹೊರಟು ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳುವ ಸಾಹಸಗಾಥೆಯ ಮೇಲೆ ಬೆಳಕುಚೆಲ್ಲುತ್ತವೆ.

ಎಚ್ ಎಸ್.ಆರ್. ಅವರ ವಸ್ತುನಿಷ್ಠ ವಿಮರ್ಶೆಗೆ ನಿದರ್ಶನ: ನನ್ನ ಮೇಷ್ಟು ಕೆ.ವಿ.ನಾರಾಯಣ ಅವರ ಬೀಜ ಕುರಿತ ವಿಶ್ಲೇಷಣೆಯ ಕುರಿತು ಕಾದಂಬರಿಯ ಉಲ್ಲೇಖಗಳನ್ನು ಪುರಾವೆಗಳನ್ನಾಗಿ ಮಂಡಿಸಿ ಅಲ್ಲಗಳೆದಿರುವುದು.

ಕಳೆದ ಆರು ವರ್ಷಗಳಿಂದ ಅಮೆರಿಕಾದಲ್ಲಿ ಇರುವ ನನ್ನ ಮಗನಿಗೆ ಅವನ ಪ್ರತಿ ಹುಟ್ಟುಹಬ್ಬದಂದು ” ದೊಡ್ಡ ಕನಸು ಕಾಣು, ಆದರೆ ಬೇರುಗಳನ್ನು ಮರೆಯಬೇಡ” ಎಂದು ಹಾರೈಸುವುದು, ನೆನಪಿಗೆ ಬಂದಿತು. ‘ಬೀಜ’ ಕಾದಂಬರಿ ಮರಳಿ ಮಣ್ಣಿನ ಜತೆ ಅವರು ಸಂಬಂಧ ಸ್ಥಾಪಿಸಲು ಪ್ರಯತ್ನದ ಪರಿಣಾಮವಾದರೆ, ಅವರ ನಂತರ ಪ್ರಕಟವಾದ ಅವರ ಓಂಣಮೋ ಕಾದಂಬರಿ, ಅವರ ಜೈನ ಧಾರ್ಮಿಕ ಪರಂಪರೆಯೊಂದಿಗೆ ಅವರು ನಡೆಸಿದ ಬಹುಮುಖಿ ಅನುಸಂಧಾನಕ್ಕೆ ಸಾಕ್ಷಿ ನುಡಿಯುತ್ತದೆ. ಕನ್ನಡದಲ್ಲಿ ನವ್ಯದ ಉದ್ಘಾಟನೆ ಮಾಡಿದ ಪ್ರಸಿದ್ದ ಕಾದಂಬರಿ ‘ ಮುಕ್ತಿ’ ಆ ಕಾಲದ ವಿದ್ಯಾವಂತ ನವಯುವಕರು ಎದುರಿಸಿದ ತಲ್ಲಣಗಳ ಸಮರ್ಥ ಅಭಿವ್ಯಕ್ತಿಯಾಗಿದೆ. ನಂತರದ ಸೃಷ್ಟಿ, ಸಂಬಂಧ, ಅಂತರಾಳ ಕಾದಂಬರಿಗಳು ಗಂಡು ಹೆಣ್ಣುಗಳ ಸಂಬಂಧಗಳ ಅನಂತ ಮುಖಗಳ ಅನಾವರಣವಾಗಿರುವುದನ್ನು ಇಲ್ಲಿನ ಅವುಗಳ ಕುರಿತ ಲೇಖನಗಳು ಬೆಳಕು ಚೆಲ್ಲುತ್ತವೆ. ಎರಡನೆ ಭಾಗದ ಲೇಖನಗಳು ಅವರ ಕಥಾ ಸಾಹಿತ್ಯದ ಸಮೀಕ್ಷೆಗೆ ಮೀಸಲಾಗಿವೆ. ಪ್ರಕ್ಷಬ್ದತೆಯಿಂದ ಮಾಗುವ ಕಡೆಗೆ ಎನ್ನುವ ಲೇಖನ ಅವರ ಕಥಾ ಸಾಹಿತ್ಯದಲ್ಲಿ ಬರುವ ಗಂಡು ಹೆಣ್ಣಿನ ಪಾತ್ರಗಳು ಹಲವು ತಲ್ಲಣಗಳ ಮೂಲಕ ಹಾದು ಬಂದು ಕ್ರಮೇಣ ವ್ಯಕ್ತಿತ್ವದ ಮಾಗುವಿಕೆಯನ್ನು ಸಮರ್ಥವಾಗಿ ಗುರುತಿಸುತ್ತದೆ. ಕ್ಷಿತಿಜದ ಮಂದಾಕಿನಿಯಿಂದ ಪ್ರಾರಂಭವಾಗುವ ಈ ಪಯಣ ಹಲವು ಪಾತ್ರಗಳ ಮೂಲಕ ಬೆಳೆದು ಪ್ರಬುದ್ದತೆಯನ್ನು ಪಡೆಯುವ ವಿಕಸನದ ಕಥೆಯಾಗಿದೆ.

Exif_JPEG_420

ಕ್ಷಿತಿಜದ ಮಂದಾಕಿನಿಯ ಪಾತ್ರದ ಮುಂದುವರೆದ ಭಾಗದಂತಿರುವ ನೇಮೀಚಂದ್ರ ಕತೆಯ ಅನಘ ಪಾತ್ರದ ಜತೆಗಿಟ್ಟು ನೋಡಿ ಬರೆದ ಲೇಖನ ಸ್ವಾರಸ್ಯಕರವಾಗಿದೆ. ಸತ್ಯನಾರಾಯಣ ಅವರ ಲೇಖನ ಅವರ ಕಥಾಸಾಹಿತ್ಯದ ಸಾಧನೆ ಮತ್ತು ಮಿತಿಗಳನ್ನು ಸಮರ್ಥವಾಗಿ ಗುರುತಿಸುತ್ತದೆ. ಅವರ ಗಂಡು ಹೆಣ್ಣುಗಳ ಸಂಬಂಧದ ವಿಶ್ಲೇಷಣೆಯಲ್ಲಿ ಲಾರೆನ್ಸ್ ನ ಪ್ರಭಾವವನ್ನು ಸರಿಯಾಗಿ ಗುರುತಿಸಲಾಗಿದೆ. ವಿವಿಧ ಲೇಖಕ/ ಲೇಖಕಿಯರು ಚ.ಸರ್ವಮಂಗಳ ಮುಂತಾದವರು ಅವರ ಸ್ತ್ರಿ ಪಾತ್ರಗಳ ಸಂಕೀರ್ಣ ವೈವಿಧ್ಯಮಯ ಪಾತ್ರಗಳ ಚಿತ್ರಣದ ಸಾಧನೆ ಮತ್ತು ಮಿತಿಗಳನ್ನು ಸರಿಯಾಗಿಯೆ ಗುರುತಿಸಿದ್ದಾರೆ. ಅವರು ಚಿತ್ರಿಸಿದ ಬಾಲಕನ ಪಾತ್ರ ‘ ಚಂದೂ’ ಅವರ ಸಮಕಾಲೀನರಾದ ಅನಂತಮೂರ್ತಿಯವರ ಘಟಶ್ರಾಧ್ದದ ಮೇಲೆ, ಮತ್ತು ನಂತರದ ಶ್ರೀಕೃಷ್ಣ ಆಲನಹಳ್ಳಿಯವರ ಕಾಡು ಕಾದಂಬರಿಯ ಮೂಲಕ ಮುಂದುವರಿದಿರುವುದನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಮೂರನೆಯ ಭಾಗದಲ್ಲಿ ರಾಜೇಂದ್ರ ಚೆನ್ನಿಯವರು ಇಂಗ್ಲಿಷ್ ನಲ್ಲಿ ಮತ್ತು ಎಂ.ಜಿ.ಹೆಗಡೆಯವರು‌ ಕನ್ನಡ ದಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಮರ್ಶಾ ಸಾಹಿತ್ಯಕ್ಕೆ ಶಾಂತಿನಾಥ ದೇಸಾಯಿ ಅವರು ಕೊಟ್ಟ ಕೊಡುಗೆಯನ್ನು ಸರಿಯಾಗಿಯೆ ಮೌಲ್ಯಮಾಪನಮಾಡಿದ್ದಾರೆ.

ನಾಲ್ಕನೆ ಭಾಗದಲ್ಲಿ ಅವರನ್ನು ಬಲ್ಲ ಆತ್ಮೀಯರು ಬರೆದ ವ್ಯಕ್ತಿಚಿತ್ರಣಗಳಿವೆ. ಅದರಲ್ಲಿ ಸಿದ್ದಲಿಂಗಪಟ್ಟಣ ಶೆಟ್ಟಿ, ಅವರ ಮೊದಲ ಪುಸ್ತಕಗಳನ್ನು ಪ್ರಕಟಿಸಿದ ಹೇಮಾ ಪಟ್ಟಣ ಶೆಟ್ಟಿ,‌ಮೀನಾ ಮೈಸೂರು, ಅವರ ಶ್ರೀಮತಿ ಸುಮಿತ್ರಾ ಮುಂತಾದವರ ಬರಹಗಳು ಇವೆ. ಇದರೊಂದಿಗೆ ಅವರ ಹೆಣ್ಣು ಮಕ್ಕಳ ಬರಹಗಳನ್ನು ಸೇರಿಸಬಹುದಿತ್ತು. ಸಂದರ್ಶನದ ಭಾಗದಲ್ಲಿ ನಮ್ಮ ಮೇಷ್ಟ್ರು ಕೆ.ವಿ.ನಾರಾಯಣ ಅವರ ಮಾರ್ಮಿಕ ಪ್ರಶ್ನೆಗಳಿಗೆ ಅಷ್ಟೆ ಮಾರ್ಮಿಕವಾದ ಉತ್ತರಗಳನ್ನು ದೇಸಾಯಿಯವರು ನೀಡಿದ್ದಾರೆ. ಪ್ರತಿಭಾನಂದ ಕುಮಾರ ಅವರ ಸಂದರ್ಶನದ ಒಂದು ಭಾಗ ಮಾತ್ರ ಇಲ್ಲಿದೆ. ನವ್ಯಸಾಹಿತ್ಯದ ಉಳಿದ ಲೇಖಕರು ಕನ್ನಡ ಪರಂಪರೆಯೊಂದಿಗೆ ಆಳವಾದ ಅನುಸಂಧಾನ ನಡೆಸಿದ್ದರೆ, ಶಾಂತಿನಾಥ ದೇಸಾಯಿ ಇಡಿಯಾಗಿ ಪಶ್ಚಿಮಾಭಿಮುಖಿಯಾದ ವೈಶಿಷ್ಟ್ಯವನ್ನು ಗುರುತಿಸಿರುವುದು ಇಲ್ಲಿನ ಹಿರಿಮೆಯಾಗಿದೆ. ಆ ದೃಷ್ಡಿಯಿಂದ ” ಇನ್ನಾದರೂ ಪೂರ್ವಮೀಮಾಂಸೆಯ ಬಗೆಯಬೇಕು” ಎನ್ನುವ ಅಡಿಗರ ನಿಲುವಿಗೆ ಇವರದು ತದ್ವಿರುದ್ದವಾದ ನಿಲುವು.

ಅವರ ಪ್ರಸಿದ್ದ ” ನಡೆದುಬಂದ ದಾರಿಯ ಕಡೆಗೆ ತಿರುಗಿನೋಡಬೇಡ” ಎಂಬುದನ್ನು ” ವಾಚ್ಯವಾಗಿ ತೆಗೆದುಕೊಂಡರು. ಆದ್ದರಿಂದ ಜೀವಪೋಷಕವಾದ ಯಾವುದೂ ಇವರಿಗೆ ನಮ್ಮ ಪರಂಪರೆಯಲ್ಲಿ ಕಾಣಿಸಲಿಲ್ಲವೆ ಎನ್ನುವ ಪ್ರಶ್ನೆ ಉಳಿದೆ ಉಳಿಯುತ್ತದೆ.ಜಯಂತ ಕಾಯ್ಕಿಣಿ ಸಂವೇದನಾಶೀಲ ಬೆನ್ನುಡಿ ಬರೆದಿದ್ದಾರೆ. ದೇಸಾಯಿಯವರ ಕಥಾಸಾಹಿತ್ಯದರ್ಶನ ಎನ್ನುವ ಲೇಖನವನ್ನು ಇದರಲ್ಲಿ ಬರೆದಿರುವುದಲ್ಲದೆ, ಈ ಪುಸ್ತಕವನ್ನು ನನ್ನ ಓದಿಗೆ ಒದಗಿಸಿಕೊಟ್ಟ ಗೆಳೆಯರಾದ ಸತ್ಯನಾರಾಯಣ ಅವರಿಗೆ ಧನ್ಯವಾದ. ಅಭಿನಂದನೆ. ಒಂದು ಪ್ರಧಾನ ಮಿತಿಯೆಂದರೆ ಶಾಂತಿನಾಥ ದೇಸಾಯಿ ಮತ್ತು ಗಿರೀಶ್ ಕಾರ್ನಾಡರ ನಡುವೆ ನಡೆದ ನವ್ಯಕಾವ್ಯ ಕುರಿತ ವಾಗ್ವಾದವನ್ನು ( ಸಂಕ್ರಮಣ) ಒಳಗೊಳ್ಳದೆ ಇರುವುದು.ಜಯಂತ‌ಕಾಯ್ಕಿಣಿ‌ ಕಾವ್ಯ ಕುರಿತು ಬರೆದ ಬರಹ ಕೂಡ ಇದರಲ್ಲಿ ಇಲ್ಲ.


  • ರಘುನಾಥ್ ಕೃಷ್ಣಮಾಚಾರ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW