ಈ ಮಾತುಕಥೆ ಅನ್ನೋದು ಎಷ್ಟೊಂದು ವಿಚಿತ್ರ ಕಥೆ ನೋಡಿ. ಅದರ ಆರಂಭ ಎಲ್ಲೋ ಆದರೆ ಅಂತ್ಯ ಇನ್ನೆಲ್ಲೋ ಆಗಿರುತ್ತದೆ. ಯಾವ ಸೀರಿಯಲ್ ಡೈರೆಕ್ಟರ್ ಸಹಾ ಊಹಿಸಲಾಗದಷ್ಟು ತಿರುವು ಇರೋದು ಈ ಮಾತೆಂಬ ಕಥೆಗೆ. – ಸುದರ್ಶನ್ ಪ್ರಸಾದ್, ತಪ್ಪದೆ ಮುಂದೆ ಓದಿ…
ಮಾತಿನ ಕಥೆ ಸಾಗುವಾಗ ಒಂದಷ್ಟು ವಿಚಾರಗಳು ಬಂದು ಹೋಗುತ್ತವೆ. ಇತ್ತೀಚೆಗೆ ಒಬ್ಬರ ಜೊತೆ ಹೀಗೇ ಮಾತನಾಡುವಾಗ ಬಂದ ಒಂದು ವಿಚಾರ ಮನಸ್ಸು ಮತ್ತು ಮನಸ್ಸನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳ ಬಗ್ಗೆ.
ಯಾವುದೇ ವ್ಯಕ್ತಿ ನೋವಿನಲ್ಲಿರಲಿ ಅಥವಾ ನಲಿವಿನಲ್ಲಿರಲಿ ಅದನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಬಯಸುತ್ತಾನೆ. ಅದಕ್ಕೆ ಕಾರಣ ಮನುಷ್ಯನ ಭಾವನೆಗಳಿಗೆ ಒಂಟಿತನ ಇಷ್ಟವಾಗುವುದಿಲ್ಲ. ಭಾವನೆಗಳು ಒಳಗಿದ್ದಷ್ಟೂ ಮತ್ತಷ್ಟು ಮಡುಗಟ್ಟುತ್ತವೆ ಹೊರತು ತಿಳಿಯಾಗುವುದಿಲ್ಲ. ಹಾಗಂತ ಯಾವುದೋ ಒಂದು ಮನಸ್ಸಿನೊಂದಿಗೆ ತನ್ನ ಭಾವನೆಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಮೊದಲು ಪರಸ್ಪರ ಮನಸ್ಸುಗಳು ಬೆರೆಯಬೇಕು.
ಫೋಟೋ ಕೃಪೆ : google
ಕೆಲವರಿಗೆ ತಮ್ಮ ಆತ್ಮೀಯರೊಡನೆ ಎಲ್ಲವನ್ನೂ ಹಂಚಿಕೊಳ್ಳಬೇಕೆಂಬ ಹಂಬಲ. ಹಾಗೆ ಹಂಚಿಕೊಂಡಾಗ ಮನಸ್ಸು ಹಗುರಾಗಿ ಅವರಲ್ಲಿ ನವೋಲ್ಲಾಸ ಮೂಡುತ್ತದೆ. ಆದರೆ ಇನ್ನು ಕೆಲವರು ಹಾಗಲ್ಲ, ಅವರಿಗೆ ಅಪರಿಚಿತ ಮನಸ್ಸುಗಳೇ ಸಂಗಾತಿ. ತನ್ನ ಬಗ್ಗೆ ತಿಳಿಯದ, ತನ್ನನ್ನು ಮುಖತಃ ಭೇಟಿಯಾಗಿರದ ವ್ಯಕ್ತಿಗಳೊಂದಿಗೆ ಅವರು ಎಲ್ಲವನ್ನೂ ಹೇಳಿಬಿಡುತ್ತಾರೆ. ಅವರಿಗೆ ಭಾವನೆಗಳನ್ನು ಹಂಚಿಕೊಳ್ಳಲು ತನ್ನೆದುರಿಗೆ ಇರುವ ಮನಸ್ಸಿನ ಹಿನ್ನೆಲೆ, ಮುನ್ನೆಲೆ ಏನೂ ಬೇಕಿರುವುದಿಲ್ಲ.
ಇವೆಲ್ಲವನ್ನೂ ಮೀರಿದ ಇನ್ನೊಂದಿಷ್ಟು ಮನಸ್ಸುಗಳಿವೆ. ಅವರು ಒಂದು ರೀತಿಯಲ್ಲಿ ಅಪರಿಚಿತ ಆತ್ಮೀಯರನ್ನು ಇಷ್ಟಪಡುವ ಮನಸ್ಸಿನವರು. ಉದಾಹರಣೆಗೆ ಹೆಣ್ಣೊಬ್ಬಳು ಇನ್ಯಾವುದೋ ಅಪರಿಚಿತ ಹೆಣ್ಣಿನೊಂದಿಗೆ ಸ್ನೇಹ ಬೆಳೆಸಿ ತನ್ನ ಮನಸ್ಸಿನಲ್ಲಿರುವುದೆಲ್ಲಾ ಹೇಳಿಕೊಳ್ಳಬಲ್ಲಳು, ಆದರೆ ಅಪರಿಚಿತ ಗಂಡಿನೊಂದಿಗೆ ಸ್ನೇಹ ಸಾಧ್ಯವಿಲ್ಲ ಅಥವಾ ಭಾವನೆಗಳು ಹೊರಬರುವುದಿಲ್ಲ. ಕೆಲವು ಪುರುಷರೂ ಹಾಗೇ, ಆದರೆ ಕೊಂಚ ವ್ಯತ್ಯಾಸವಷ್ಟೇ.
ಇಲ್ಲಿ ಮೇಲೆ ಹೇಳಿದ ಮಾತಿನ ವಿಚಾರ ಇದೇ ರೀತಿಯ ಮನಸ್ಸುಗಳನ್ನು ಅರ್ಥಮಾಡಿಕೊಳ್ಳುವ ಬಗ್ಗೆ. ಹೆಣ್ಣಿನ ಮನಸ್ಸನ್ನು ಹೆಣ್ಣು ಮತ್ತು ಗಂಡಿನ ಮನಸ್ಸನ್ನು ಗಂಡು ಮಾತ್ರವೇ ಅರ್ಥಮಾಡಿಕೊಳ್ಳಬಲ್ಲರು ಎಂಬುದು ಅವರ ವಾದ. ಆದರೆ ವಾಸ್ತವದಲ್ಲಿ ಅದೆಷ್ಟು ಸರಿ, ಹೆಣ್ಣನ್ನು ಅರಿತ ಗಂಡಸರಿಲ್ಲವೇ? ಹೆಣ್ಣನ್ನೇ ಅರಿಯದ ಹೆಂಗಸರಿಲ್ಲವೇ? ಇವು ನನ್ನ ಪ್ರಶ್ನೆಗಳು. ಮನಸ್ಸು ನಮ್ಮ ಆತ್ಮದ ಮುಖವಾಡ ಎಂದು ಎಲ್ಲರೂ ಹೇಳುತ್ತಾರೆ. ಆತ್ಮಕ್ಕೆ ಗಂಡು ಹೆಣ್ಣು ಎಂಬ ಭೇದವಿಲ್ಲ ಎಂದಮೇಲೆ ಮನಸ್ಸಿಗೂ ಇರಬಾರದು ಎಂಬುದು ನನ್ನ ವಾದ.
ದೈಹಿಕವಾಗಿ ಇದರ ಹಿನ್ನೆಲೆ ಕೆದಕಿದಾಗ ನಮಗೆ ಸಿಕ್ಕಿದ್ದು ಪುರುಷರ ಮತ್ತು ಮಹಿಳೆಯರ ಮೆದುಳಿನಲ್ಲಿರುವ ಚಿಕ್ಕ ವ್ಯತ್ಯಾಸ. ಅದೆಷ್ಟು ಚಿಕ್ಕ ವ್ಯತ್ಯಾಸ ಎಂದರೆ ಅದು ಬುದ್ದಿವಂತಿಕೆಯನ್ನಾಗಲಿ, ಮನಸ್ಸಿನ ಸೂಕ್ಷ್ಮತೆಯನ್ನಾಗಲಿ ಬದಲಾಯಿಸುವಷ್ಟೂ ಸಹಾ ಅಲ್ಲ. ಗಂಡಸರಲ್ಲಿ Inferior-Parietal Lobule ಎಂಬ ಭಾಗ ಕೊಂಚ ದೊಡ್ಡದಾಗಿದ್ದರೆ ಮಹಿಳೆಯರಲ್ಲಿ Grey matter ಎಂಬುದು ಸ್ವಲ್ಪ ಹೆಚ್ಚಾಗಿರುತ್ತದೆ ಅಷ್ಟೇ.
ಫೋಟೋ ಕೃಪೆ : google
ದೈಹಿಕ ಕಾರ್ಯಚಟುವಟಿಕೆಗಳಿಗೆ ಈ ವ್ಯತ್ಯಾಸಗಳು ಅಗತ್ಯವೇ ಹೊರತು ಮೇಲ್ನೋಟಕ್ಕೆ ಮಾನಸಿಕವಾಗಿ ಯಾವುದೇ ಭೇದವಿಲ್ಲ. ಆಳವಾಗಿ ಅವಲೋಕಿಸಿದರೆ ಹೆಣ್ಣನ್ನು ಸೂಕ್ಷ್ಮ ಮತಿ, ವಿಚಾರವಾದಿ ಎಂದು ಹೇಳಬಹುದು ಮತ್ತು ಗಂಡನ್ನು ಸೂಕ್ಷ್ಮಗ್ರಾಹಿ, ಅಚಲ, ಕ್ರಿಯಾಶೀಲ ಎನ್ನಬಹುದಷ್ಟೇ. ಮಹಿಳೆಯರ ಮನಸ್ಸು ಯಾವುದೇ ವಿಷಯವನ್ನು ಬೇಗ ಗ್ರಹಿಸಿದರೆ ಪುರುಷರ ಮನಸ್ಸು ಗ್ರಹಿಸಿದ ವಿಷಯಕ್ಕೆ ಬೇಗ ಪ್ರತಿಕ್ರಿಯಿಸುತ್ತದೆ. ಮಹಿಳೆಯರ ಮನಸ್ಸು ಒಮ್ಮೆಗೇ ನಾನಾ ವಿಷಯಗಳನ್ನು ಯೋಚಿಸಿದರೆ ಪುರುಷರಲ್ಲಿ ಏಕಾಗ್ರತೆ ಹೆಚ್ಚು ಎಂಬುದಷ್ಟೇ ಮುಖ್ಯ ವ್ಯತ್ಯಾಸಗಳು. ಆದರೆ ಪರಸ್ಪರ ಮನಸ್ಸುಗಳನ್ನು ಅರ್ಥಮಾಡಿಕೊಳ್ಳಲು ಈ ವ್ಯತ್ಯಾಸಗಳೇನು ಅಡ್ಡಿ? ಮೇಲೆ ಹೇಳಿದ ಯಾವ ವ್ಯತ್ಯಾಸವೂ ಮನಸ್ಸು ಮನಸ್ಸುಗಳ ನಡುವೆ ಸಂಬಂಧ ಬೆಸೆಯುವುದಕ್ಕೆ ಅಡ್ಡಿಪಡಿಸುವುದೇ ಇಲ್ಲ. ಮನಸ್ಸು ಸಂಬಂಧ ಬೆಸೆಯಲು ಗಂಡು, ಹೆಣ್ಣು, ಬಡವ, ಬಲ್ಲಿದ, ವಿದ್ಯಾವಂತ, ಅನಕ್ಷರಸ್ಥ ಎಂದು ನೋಡುವುದಿಲ್ಲ. ಮನಸ್ಸಿಗೆ ಬೇಕಿರುವುದು ತನ್ನನ್ನು ಅರ್ಥಮಾಡಿಕೊಳ್ಳುವ ಇನ್ನೊಂದು ಮನಸ್ಸು… ಏನಂತೀರಿ?
- ಸುದರ್ಶನ್ ಪ್ರಸಾದ್