ಬದುಕು ನಾವು ಅಂದುಕೊಂಡಂತೆ ನಡೆದಿದ್ದರೆ ಸ್ವರ್ಗವಾಗಿರುತ್ತಿತ್ತು. ಆದರೆ ಅದು ಆಗಬೇಕಲ್ಲ, ದೇವರು ಒಮ್ಮೊಮ್ಮೆ ನರಕದ ದರ್ಶನವನ್ನು ಮಾಡಿಸಿ ಬಿಡುತ್ತಾನೆ. ಅಂತಹ ಅನುಭವವನ್ನು ಕಂಡ ಲೇಖಕಿ ಪಾರ್ವತಿ ಜಗದೀಶ ಅವರ ಜೀವನದ ನೋವು ಹಾಗೂ ಸ್ಪೂರ್ತಿಯ ಕತೆ ಇದು, ತಪ್ಪದೆ ಓದಿ…
ಬೆಂಗಳೂರು ಮಾಯನಗರಿ ಅಂತ ಎಲ್ರು ಹೇಳ್ತಿದ್ರು. ರಾಜಕಾರಣಿಗಳಿಗೆ ವಿಧಾನಸೌಧ, ಪ್ರೇಮಿಗಳಿಗಾಗಿ ಕಬ್ಬನ್ ಪಾರ್ಕ್, ಪ್ರಕೃತಿ ಪ್ರಿಯರಿಗೆ ಲಾಲ್ ಬಾಗ್, ಮೋಜು ಮಸ್ತಿಗಾಗಿ ಎಂಜಿ ರಸ್ತೆ, ಭಕ್ತಿಗೆ ಇಸ್ಕಾನ್ ಟೆಂಪಲ್, ಬನಶಂಕರಿ ಟೆಂಪಲ್ ಹೀಗೆ ಎಲ್ಲರ ಇಚ್ಛೆ, ಅನುಕೂಲಕ್ಕೆ ತಕ್ಕಂತೆ ಬೆಂಗಳೂರು ಎಲ್ಲವನ್ನು ಒದಗಿಸಿತ್ತು. ದುಡಿಮೆಗಾಗಿ ದೂರ ದೂರದಿಂದ ಬಂದವರು ಬೆಂಗಳೂರಿಗೆ ಮರಳಾಗಿ ಅಲ್ಲೇ ನೆಲೆ ಹೂಡಿದ್ದರು. ಬೆಂಗಳೂರು ಮಹಿಮೆಯೇ ಹಾಗಿದೆ ಅಂತ ನೋಡಿ ಬಂದವರೆಲ್ಲ ಹೇಳುತ್ತಿದ್ದರು .
ನಾನು ಬೆಂಗಳೂರು ನೋಡಿಲ್ಲವೆಂದರೆ ‘ಎಂತ ಹುಚ್ಚಿ ಇದ್ದಿ… ನಿಮ್ಮ ಅಣ್ಣ ಬೆಂಗಳೂರಲ್ಲೇ ಇದ್ಕೊಂಡು, ಇನ್ನೂ ಬೆಂಗಳೂರು ನೋಡಿಲ್ಲ ಅಂತೆ, ಎಂತ ಜನ್ಮ ನಿಂದು, ಹೋಗಿ ನೋಡ್ಕೊಂಡು ಬಾ’ ಅಂತ ಹೇಳುವವರೇ ಊರಿನ ತುಂಬಾ ಇದ್ರು. ನಂಗೂ ಆ ಮಾಯಾವಿ ನಗರವನ್ನು ನೋಡಬೇಕು ಅನ್ನೋ ಆಸೆ ಮನಸ್ಸಲ್ಲಿ ಬೆಟ್ಟದಷ್ಟಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲ, ಆ ಕಾಲಕ್ಕಾಗಿ ನಾನು ಕಾಯುತ್ತ ಕೂತಿದ್ದೆ .
ಅದೊಂದು ದಿನ ಬೆಂಗಳೂರಿನಲ್ಲಿದ್ದ ಅಣ್ಣನ ಪತ್ರ ಬಂತು “ಅವ್ವ, ನೀನು ಮತ್ತು ಪಾಪು ಮೂರು ಜನ ಬೆಂಗಳೂರು ನೋಡಕ ಬರಿ. ಅವ್ವನಿಗೂ ವಯಸ್ಸಾಯ್ತು, ಆಕೀ ಬೇರೆ ಎಲ್ಲೂ ಹೋಗೇ ಇಲ್ಲಾ. ಬರಿ ನಮ್ಮಗಳನ್ನ ಜ್ವಾಕಿ ಮಾಡೋದ್ರಲ್ಲೇ ಅವಳ ಜೀವನ ತೇಯಿದ್ಲು. ಹೆಂಗೂ ನಾನು ಬೆಂಗಳೂರಿನಲ್ಲಿದ್ದೀನಿ…. ಸ್ವಲ್ಪ ದಿನ ಇಲ್ಲೇ ಇದ್ದು ಬೆಂಗಳೂರು ನೋಡಿರಂತೆ ಬರಿ” ಅಂತ ಅಣ್ಣ ಪತ್ರದಲ್ಲಿ ಬರೆದಿದ್ದ.

ಪಾರ್ವತಿ ಜಗದೀಶ್ ಅವರ ಅವ್ವ
ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ…ಅನ್ನೋ ತರ ನಮಗೂ ಬೆಂಗಳೂರು ನೋಡ್ಬೇಕು ಅನ್ನುವ ತವಕವಿತ್ತು. ತಡಮಾಡಲಿಲ್ಲ ನಾನು, ಅವ್ವ ಮತ್ತು ನನ್ನ ಏಳು ವರ್ಷದ ಮಗ ಆ ಮಾಯಾನಗರಿ ಬೆಂಗಳೂರನ್ನು ನೋಡುವುದಕ್ಕಾಗಿ ಗಂಟು ಮೂಟೆ ಕಟ್ಟಕೊಂಡು ಹಾವೇರಿಯಿಂದ ರೈಲು ಹತ್ತೇ ಬಿಟ್ವಿ. ಅವ್ವನಿಗೆ ವಯಸ್ಸು ೭೨ ರ ಆಸು ಪಾಸು. ವಯಸ್ಸಿಗೆ ತಕ್ಕಂತೆ ಮಂಡಿ ನೋವು ಬೇರೆ ಇತ್ತು. ಅವ್ವನಿಗೆ ಮಂಡಿ ನೋವಂತ ಅಣ್ಣ ಮೊದಲೇ ಕೆಳಗಿನ ಸೀಟ್ ಬುಕ್ ಮಾಡಿದ್ದ. ನನಗೆ ಅವ್ವನ ಸೀಟಿನ ಮೇಲೆ ಅಂದರೆ ಮಧ್ಯದ ಸೀಟು, ಪಾಪುಗೆ ಮೇಲಿನ ಸೀಟು ಬುಕ್ ಆಗಿತ್ತು. ರಾತ್ರಿ ಊಟಕ್ಕoತ ಮನಿಯಿಂದಲೇ ಕಟಕ ರೊಟ್ಟಿ, ಚಪಾತಿ, ಪಲ್ಯ ಕಟ್ಟಕೊಂಡು ಬಂದಿದ್ದೆ. ಅವ್ವನಿಗೆ ಹಲ್ಲುಗಳೆಲ್ಲ ಅಲ್ಲಾಡ್ತಿದ್ದರಿಂದ ಅವ್ವ ‘ನಂಗ. ಮೆತ್ತನ ಚಪಾತಿ, ಸ್ವಲ್ಪ ಪಲ್ಯ ಹಚ್ಚಿ ಬಿಡು, ನಂದ್ ಊಟ ಮುಗಿಸಿ ಬಿಡ್ತೀನಿ’ ಅಂದ್ಲು. ಪಾಪುಗೇ, ಅವ್ವನಿಗೆ ಮೆತ್ತನೆ ಚಪಾತಿ ಪಲ್ಯ ಹಾಕಿ ಕೊಟ್ಟೆ. ಇಬ್ಬರು ಪಸಂದ್ ಆಗಿ ಊಟ ಮಾಡಿದ್ರು. ನನಗ ಮಾತ್ರ ಯಾಕೋ… ಹಸಿವೆನೂ ಇರಲಿಲ್ಲ , ಮಲಗಿದ್ರೆ ನಿದ್ದೆನೂ ಬರಲಿಲ್ಲ. ಇದಕ್ಕೆ ಕಾರಣ ಬೆಂಗಳೂರು ನಗರಿ ಆಗಿತ್ತು.
ರಾತ್ರಿ ಇಡೀ ಮಾಯನಗರಿಯ ನೂರಾರು ಕಲ್ಪನೆಗಳು ಶುರುವಾಗಿತ್ತು. ಅಲ್ಲಿಗೆ ಹೋದವರೆಲ್ಲ ಕೈತುಂಬ ದುಡೀತಾರೆ. ಬಣ್ಣ ಬಣ್ಣದ ಬಟ್ಟೆ, ರುಚಿ ರುಚಿಯಾದ ಹೋಟೆಲ್ ತಿಂಡಿಗಳು ಏನ ಬೇಕೋ ಎಲ್ಲ ಸಿಗ್ತಾವೆ ಅಂತ ಕೇಳಿದ್ದೆ. ನಾನು ಅಲ್ಲಿ ಹೋದ್ಮೇಲೆ ಚಂದದ ಎರಡು ಚೂಡಿದಾರ್ , ಅವ್ವನಿಗೆ ಒಳ್ಳೆ ಎರಡು ಸೀರೆ, ಪಾಪುವಿಗೆ ಒಳ್ಳೆ ಬಟ್ಟೆ ತಗೋಬೇಕು. ಮನಸ್ಸಲ್ಲಿ ಬೆಂಗಳೂರಿನ ಈ ಮೂಲೆ ನೋಡಿಲ್ಲ ಅಂತ ಬೇಜಾರಾಗಬಾರದು ಗಲ್ಲಿ ಗಲ್ಲಿನೂ ಬಿಡಬಾರದು ಹಾಗೆ ಸುತ್ತಾಡಿ ಬರಬೇಕು ಎನ್ನುವ ಬೆಂಗಳೂರು ಹುಚ್ಚು ಹಿಡಿದಿತ್ತು. ಆ ಸಂತೋಷಕ್ಕೆ ಎಷ್ಟೇ ಹೊರಳಾಡಿದರೂ ನಿದ್ದೆ ಹತ್ತಲಿಲ್ಲ. ಜೊತೆಗೆ ರೈಲ್ ನಲ್ಲಿ ಒಬ್ಬರಿಂತ ಒಬ್ಬರು ಸ್ಪರ್ಧೆಗೆ ಇಳಿದವರಂತೆ ಗೊರಕೆ ಶಬ್ದ, ಇನ್ನೂ ಕೆಲವರು ತಿಂದಿದ್ದು ಜಾಸ್ತಿ ಆಗಿ ಮಲಗಿದಲ್ಲೇ ಪರ್ರ… ರ್…. ಅಂತ ವಾಸನೆ ಬಿಡುತ್ತಿದ್ದರು. ಇಂತಹ ಜನರ ಮಧ್ಯೆ ನಿದ್ದೆಗೆ ಆಸ್ಪದವೇಲ್ಲಿ?. ಈ ಕಿರಿ ಕಿರಿಯ ನಡುವೆ ನನ್ನ ಸಂತೋಷ ಭಗ್ನವಾಗಬಾರದು ಅನ್ನುವ ಕಾರಣಕ್ಕೆ ಕಿವಿಗೆ head phone ಹಾಕೊಂಡು ಮೊಬೈಲ್ ನಲ್ಲಿ ಹಾಡು ಪ್ಲೇ ಮಾಡಿದೆ. ಆ ನಿಶಬ್ದ, ನನ್ನ ಕನಸ್ಸಿನ ಸಂಭ್ರಮಕ್ಕೆ ಹಾಡು ಸಾಥ್ ನೀಡಿತು, ನಿದ್ದೆ ಯಾವಾಗ ಹತ್ತಿತ್ತೋ ಕಾಣೆ… ಕಣ್ಣು ಮುಚ್ಚಿಬಿಟ್ಟಿತು.

ಕಣ್ಣು ತೆರೆದಾಗ ಕೆಳಗೆ ಮಲಗಿದ್ದ ಅವ್ವ ಇರಲಿಲ್ಲ. ಗಾಬರಿಯಿಂದ ಗಡಬಡಿಸಿ ಎದ್ದು ಕೆಳಗೆ ಬಂದು ಹುಡುಕಾಡಲು ಶುರು ಮಾಡಿದೆ. ಅಣ್ಣ ಬೇರೆ ಹೇಳಿದ್ದ ಕಳ್ಳರು, ಢಕ್ಕಾಯಿತಿ ಜನ ಟ್ರೈನ್ ನಲ್ಲಿ, ಬೆಂಗಳೂರಿನಲ್ಲಿ ಜಾಸ್ತಿ ಇರ್ತಾರೆ. ಹೆಣ್ಮಕ್ಳು ಅಷ್ಟೇ ಬರಕ್ಕತ್ತೀರಿ ಹುಷಾರಾಗಿನೀವು, ಬ್ಯಾಗ್ ಜೋಪಾನ… ಅಂದಿದ್ದು ಥಟ್ ಅಂತ ನೆನಪಾಯಿತು. ಅವ್ವ ಬೇರೆ ನಂಗ ಹೇಳದೆ ಎಲ್ಲಿ ಹೋದ್ಲು…ಛೇ, ತಲಿನೇ ಓಡವಲ್ದು ಅಂತ ಗಾಬರಿಯಲ್ಲಿ ಅಕ್ಕ ಪಕ್ಕದವರಿಗೆ ಅವ್ವನ್ನ ನೋಡಿದ್ರೇನು? ಅಂತ ವಿಚಾರಸೋಕೆ ಶುರು ಮಾಡಿದೆ. ಇನ್ನೇನು ಮೈಯಿಂದ ಬೆವರು ಕಿತ್ತು ಬರೋವುದಿತ್ತು, ಅಷ್ಟೋತ್ತಿಗೆ ಅವ್ವ ಬಂದ್ಲು.
‘ಏನ್ ಬೇ ನೀನು… ಹೇಳ್ದೆ ಕೇಳ್ದೆ ಎಲ್ಲಿ ಹೋಗಿದ್ದಿ?… ಅಣ್ಣ ಏನ್ ಹೇಳ್ಯಾನು ಗೊತ್ತಿಲ್ಲ ನಿಂಗ… ಅಂಜಿಕಿನ ಆಗಿತ್ತು’… ಅಂತ ಅವ್ವನಿಗೆ ಬಯ್ಯುತ್ತಾ ನನ್ನ ಭಯವನ್ನು ಹೊರಕ್ಕೆ ಹಾಕಿದೆ. ಅವ್ವ ನಗುತ್ತಾ ನಿಮ್ಮವ್ವನಿಗೆ 72 ವರ್ಷ, ನನ್ನ ಯಾರ್ ಹೊತ್ಕೊಂಡು ಹೋಗ್ತಿದ್ದಾರ ನಮ್ಮವ್ವ…ಇಲ್ಲೇ ಇದಕ್ಕ್ ಹೋಗಿ ಬಂದೆ’… ಅಂತ ಅವ್ವ ತನ್ನ ಕಿರು ಬೆರಳನ್ನು ತೋರಸಿದಳು. ನಾನು ಸಮಾಧಾನವಾದೆ. ಪಾಪು ಇನ್ನೂ ನಿದ್ದೆ ಮಾಡುತ್ತಿದ್ದ. ‘ಪಾಪು ಎದ್ದೇಳು …ಬೆಂಗಳೂರಿಗೆ ಇನ್ನೇನು ಒಂದು ತಾಸಿನಾಗ್ ಮುಟ್ಟತೇವಿ. ಎದ್ದು ಕೂಡು’… ಅಂತ ಪಾಪುಗೆ ಎಚ್ಚರ ಮಾಡಿಸಿ ಕೂಡಿಸಿದೆ.

ಅಣ್ಣ ಹೇಳಿದ್ದ ಯಶವಂತಪುರದಲ್ಲಿ ರೈಲು ಹದಿನೈದು ನಿಮಿಷ ಮಾತ್ರ ತರಬತೈತಿ, ಅಷ್ಟರಲ್ಲಿ ಎಲ್ಲರೂ ಇಳಿಬೇಕು, ಇಲ್ಲದೆ ಹೋದ್ರ ಗಾಡಿ ಮುಂದ ಹೋಗತೈತಿ’… ಅಂದಿದ್ದ. ವಯಸ್ಸಾದ ಅವ್ವ ಒಂದು ಕಡೆ, ಏಳು ವರ್ಷದ ಸಣ್ಣ ಮಗ ಒಂದು ಕಡೆ, ಜೊತೆಗೆ ಒಂದಿಷ್ಟು ಲಗೇಜ್ ಗಳು ಎಲ್ಲದರ ಜವಾಬ್ದಾರಿ ನನ್ನ ಮೇಲೆ ಇತ್ತು. ಒಬ್ಬಾಕೆನೇ ಏನೆಲ್ಲಾ ನೋಡ್ಲಿ ಅನ್ನೋ ಭಯ, ಆತಂಕ ಇತ್ತು. ಆ ಭಯದಲ್ಲಿ ಪಕ್ಕದಲ್ಲಿ ಕೂತವರಿಗೆ ‘ ಅಣ್ಣಾರ…ಯಶವಂತಪುರ ಬರೋ ಹಿಂದಿನ ಸ್ಟಾಪ್ ಹೇಳ್ರಿ, ನಾವು ಇಳಿಯೋಕ ಸಜ್ಜಾಗಬೇಕು’ ಅಂತ ಹೇಳಿದೆ. ಅವರು ಆಯಿತ ವಾ.. ಅಂದಿದ್ದರು. ಆದರೂ ಭಯ, ರೈಲು ಇಳಿಬೇಕಾದ್ರೆ ಎಲ್ಲ ಜವಾಬ್ದಾರಿಯಿಂದ ಇಳಿಸ್ಕೊಬೇಕು , ಏನಾದ್ರು ಮರೆತು ಬಿಟ್ರೆ ಹೋಯ್ತು.. ಅಂತ ಎಲ್ಲ ಸಾಮಾನನ್ನು ಒಂದು ಕಡೆ ಗುಡ್ಡೆ ಹಾಕಿದೆ.
ರೈಲು ಬೆಂಗಳೂರು ಪ್ರವೇಶಿಸಿತು. ಪಕ್ಕದಲ್ಲಿ ಕೂತಿದ್ದ ಅಣ್ಣ ‘ನೋಡವ್ವ… ಮುಂದಿನ ಸ್ಟೇಷನ್ ಯಶವಂತಪುರ, ಇಳಿಯೋಕ್ ಸಜ್ಜಾಗ್ರಿ ‘ ಅಂದ್ರು. ನಾನು ಬ್ಯಾಗ್ ಮುಂದೆ ಇಡ್ಕೊಂಡು ಪಾಪು, ಅವ್ವನಿಗೆ ನಿಧಾನಕ್ಕ ಇಳೀರಿ… ಅಂತ ಬಾಗಿಲ ಮುಂದ ಹೋಗಿ ನಿಂತೇ. ರೈಲು ನಿಧಾನಕ ಸ್ಟೇಷನ್ ತರುಬಿತು. ನಾನು ಸಾಮಾನನ್ನು ಒಂದೊಂದೇ ಇಳಿಸುತ್ತಾ, ಪಾಪುವಿಗೂ ಇಳಿಸಿಕೊಂಡೆ. ಅವ್ವನಿಗೆ ನಿಧಾನಕ್ಕ ಇಳಿವ್ವಾ… ಅಂದಿದ್ದಷ್ಟೇ. ರೈಲಿನ ಗಾಡಿ ಮತ್ತೆ ಶುರುವಾಯಿತು. ಅವ್ವನ ಒಂದು ಕಾಲು ಸ್ಟೇಷನ್ ಪ್ಲಾಟ್ ಫಾರಂ ನಲ್ಲಿತ್ತು, ಇನ್ನೊಂದು ರೈಲಿನ ಮೆಟ್ಟಿಲ್ ಮೇಲೆ. ಅವ್ವಳಿಗೆ ಜೋಲಿ ಹೋಯಿತು. ನನ್ನ ಕಣ್ಮುಂದೆ ನೋಡು ನೋಡುತ್ತಿದ್ದಂತೆ ರೈಲಿನ ಸಂದಿಯಿಂದ ಹಾದು ಅವ್ವ ಹಳಿಯ ಮೇಲೆ ಬಿದ್ದಳು. ರೈಲಿನ ರಬ್ಬಸಕ್ಕೆ ಅವ್ವ ಅವ್ವ … ಅನ್ನೋಷ್ಟರಲ್ಲೇ ರೈಲಿನ ವೇಗದಷ್ಟೇ ಅವ್ವನ ಪ್ರಾಣ ಪಕ್ಷಿ ಹಾರಿ ಹೋಯಿತು.

ಹಳಿಯ ಮೇಲೆ ಬಿದ್ದಿದ್ದ ಅವ್ವನನ್ನು ಇನ್ನೊಂದು ರೈಲಿನ ಗಾಡಿ ಎಲ್ಲಿ ಹತ್ತಿಸಿಕೊಂಡು ಹೋಗುವುದೋ… ಅವ್ವನ ದೇಹ ಎಲ್ಲಿ ನಜ್ಜು ಗುಜ್ಜಾಗುವುದೋ … ಅನ್ನೋ ಭಯಕ್ಕೆ ನಾನೇ ಹಳಿಗೆ ಇಳಿದು ಅವ್ವನನ್ನು ಎತ್ತಿ ಪ್ಲಾಟ್ ಫಾರಂ ಮೇಲೆ ಹಾಕಿದೆ. ಅಲ್ಲಿದ್ದ ಜನರೆಲ್ಲಾ ನನ್ನನ್ನೇ ನೋಡುತ್ತಿದ್ದರು. ರಾತ್ರಿ ಚಳಿಗಂತ ಅವ್ವ ತಂದಿದ್ದ ರಗ್ಗನ್ನು ಅವ್ವಳ ದೇಹದ ಮೇಲೆ ಹೊದಿಸಿದೆ, ಜೋರಾಗಿ ಅಳುತ್ತ ನಿಂತಿದ್ದ ಪಾಪುವನ್ನು ಗಟ್ಟಿಯಾಗಿ ತಬ್ಬಿಕೊಂಡು ಅವ್ವನನ್ನು ಸಾಯಿ ಹೊಡೆಯಕ ಅಲ್ಲಿಂದ ಇಲ್ಲಿಗೆ ನಾನೆ ಕರೆದುಕೊಂಡು ಬಂದೆ ಅನ್ನೋ ಪಾಪ ಪ್ರಜ್ಞೆಗೆ ಬಿಕ್ಕಿ ಬಿಕ್ಕಿ ಅಳತೊಡಗಿದೆ. ಅಲ್ಲಿ ನನಗೆ ಸಮಾಧಾನ ಮಾಡುವ, ಧೈರ್ಯ ತುಂಬುವ ಕೈಗಳು ಯಾರು ಇಲ್ಲದೆ ಒಂಟಿಯಾಗಿದ್ದೆ. ಅತ್ತು ಅತ್ತು ಕಣ್ಣುಗಳೆಲ್ಲ ಊದಿಕೊಂಡಿದ್ದವು, ಸಂಕಟಕ್ಕೆ ಎದೆ ಬಡಿದುಕೊಂಡು ಜೋರಾಗಿ ಅತ್ತೆ, ಆದರೆ ಏನೇ ಮಾಡಿದ್ರೂ ಅವ್ವ ಮಾತ್ರ ‘ಹೇ…ಹುಚ್ಚು ಹುಡುಗಿ.. ಅಳೋದು ನಿಲ್ಸು… ನಾನು ಇಲ್ಲೇ ಇದ್ದೀನಿ’… ಅಂತ ಒಂದು ಮಾತು ಹೇಳಲಿಲ್ಲ.

ಕತೆಯ ನಾಯಕಿ ‘ಪಾರ್ವತಿ ಜಗದೀಶ್’
ರೈಲ್ವೆ ಸ್ಟೇಷನ್ ಲ್ಲಿ ಅವ್ವನ ದೇಹದ ಮುಂದೆ ಕೂತು ‘ಬೆಂಗಳೂರನ್ನ ಮಾಯಾನಗರಿ ಅಂದಿದ್ದು ಸುಳ್ಳಲ್ಲ…ಬೇ… ಈ ಮಾಯಾನಗರಿ ನಿನ್ನನ್ನು ಬಿಡಲಿಲ್ಲ ಅವ್ವ’…ಅಂತ ಗಟ್ಟಿಯಾಗಿ ಚೀರಿದೆ, ನೋಡಿದವರೆಲ್ಲ ತಾಯಿ ಕಳೆದುಕೊಂಡ ಸಂಕಟದಲ್ಲಿ ಹುಚ್ಚಿಯಾಗಿದ್ದಾಳೆ ಅಂದುಕೊಂಡರು. ಕಣ್ಣುಗಳೆಲ್ಲ ಮಂಜಾಗಿ ಪ್ರಜ್ಞೆ ತಪ್ಪಿ ಬಿದ್ದೆ. ಪ್ರಜ್ಞೆ ಬಂದಾಗ ಅಣ್ಣ, ಸುತ್ತಲೂ ಸಂಬಂಧಿಕರೆಲ್ಲ ಅವ್ವನ ಕೊನೆಯ ಯಾತ್ರೆಯ ಸಿದ್ಧತೆ ನಡೆಸಿದ್ದರು.
- ಶಾಲಿನಿ ಹೂಲಿ ಪ್ರದೀಪ್
