ಭಾರತದ ಸಂವಿಧಾನದ ಮೌಲ್ಯಗಳು

ಭಾರತದ ಸಂವಿಧಾನದ ಮೌಲ್ಯಗಳು ಹಾಗೂ ದಿನನಿತ್ಯದ ಬದುಕಿನಲ್ಲಿ ಅದರ ಆಚರಣೆಯ ಸ್ವರೂಪದ ಕುರಿತು ಡಾ ಮುರಳಿ ಮೋಹನ್ ಕಾಟಿ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಭಾರತದ ಸಂವಿಧಾನವು ಕೇವಲ ಕಾನೂನುಗಳ ಸಂಗ್ರಹವಲ್ಲ; ಅದು ಭಾರತದ ಸಮಾಜದ ನೈತಿಕ ದಿಕ್ಕು, ಮಾನವೀಯ ಕನಸು ಮತ್ತು ಪ್ರಜಾಪ್ರಭುತ್ವದ ಆತ್ಮವನ್ನು ಪ್ರತಿಬಿಂಬಿಸುವ ಅಲೋಚನೆ. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಬಂದುತ್ವ ಮತ್ತು ಜಾತ್ಯಾತೀತತೆ( ಸೆಕ್ಯೂಲರ್/ ಬಹುತ್ವ) ಎಂಬ ಮೂಲಭೂತ ಮೌಲ್ಯಗಳ ಮೇಲೆ ನಿಂತಿರುವ ಈ ಸಂವಿಧಾನವು, ದಿನನಿತ್ಯದ ಬದುಕಿನಲ್ಲಿ ನಾವು ಹೇಗೆ ಬದುಕಬೇಕು, ನಮ್ಮ ಮೌಲ್ಯಗಳು ಏನಾಗಿರಬೇಕು ಎಂಬುದಕ್ಕೂ ದಿಕ್ಕು ನೀಡುತ್ತದೆ.

  • ಸ್ವಾತಂತ್ರ್ಯ (Liberty)

    ಸಂವಿಧಾನವು ವ್ಯಕ್ತಿಯ ಅಭಿವ್ಯಕ್ತಿ, ನಂಬಿಕೆ, ಆಲೋಚನೆ ಮತ್ತು ಜೀವನ ಶೈಲಿಯ ಸ್ವಾತಂತ್ರ್ಯವನ್ನು ಒತ್ತಿಹೇಳುತ್ತದೆ. ದಿನನಿತ್ಯದ ಆಚರಣೆಯಲ್ಲಿ ಬೇರೆ ಅಭಿಪ್ರಾಯಗಳನ್ನೂ ಗೌರವದಿಂದ ಕೇಳುವುದು, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷವಲ್ಲ, ಜವಾಬ್ದಾರಿಯುತ ಮಾತುಗಳನ್ನು ಬಳಸುವುದು, ಮಹಿಳೆಯರು, ಯುವಜನರು, ಧಾರ್ಮಿಕ ಹಾಗು ಲೈಂಗಿಕ ಅಲ್ಪಸಂಖ್ಯಾತರು, ಮುಂತಾದವರ ಸ್ವತಂತ್ರ ಆಯ್ಕೆಗಳಿಗೆ ಗೌರವ ನೀಡುವುದ. ಹೀಗೆ ಇದನ್ನು ವಿವರವಾಗಿ ನೋಡುವುದಾದರೆ ದಿನನಿತ್ಯದ ಬದುಕಿನಲ್ಲಿ ಸ್ವಾತಂತ್ರ್ಯ ನಡವಳಿಕೆಯಲ್ಲಿ ಹೇಗೆ ವ್ಯಕ್ತವಾಗುತ್ತದೆ ಎಂಬುದನ್ನು ಕೆಲವು ಸರಳ ಆದರೆ ಸ್ಪಷ್ಟ ಉದಾಹರಣೆಗಳ ಮೂಲಕ ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ, ಕಚೇರಿ ಸಭೆ ಅಥವಾ ಕಾಲೇಜು ತರಗತಿಯಲ್ಲಿ ಯಾರಾದರೂ ನಮ್ಮ ಅಭಿಪ್ರಾಯಕ್ಕೆ ವಿರುದ್ಧವಾದ ವಿಚಾರವನ್ನು ಮುಂದಿಟ್ಟಾಗ, ಅವರನ್ನು ಮಧ್ಯೆ ತಡೆದು ಮಾತನಾಡದಿರುವುದು, “ನೀವು ತಪ್ಪು” ಎಂದು ಕಟುವಾಗಿ ಹೇಳುವುದಕ್ಕಿಂತ “ನಿಮ್ಮ ದೃಷ್ಟಿಕೋನ ಬೇರೆ ಇದೆ, ನಾನು ನನ್ನದನ್ನು ಹಂಚಿಕೊಳ್ಳುತ್ತೇನೆ” ಎಂದು ಪ್ರತಿಕ್ರಿಯಿಸುವುದು ಸ್ವಾತಂತ್ರ್ಯದ ಗೌರವ. ಸಾರ್ವಜನಿಕ ಚರ್ಚೆಗಳಲ್ಲಿ ಅಥವಾ ಗ್ರಾಮಸಭೆಗಳಲ್ಲಿ ಮಹಿಳೆ, ದಲಿತ ಅಥವಾ ಅಲ್ಪಸಂಖ್ಯಾತ ವ್ಯಕ್ತಿ ಮಾತನಾಡುವಾಗ ಅವರ ಧ್ವನಿಯನ್ನು ಕಡೆಗಣಿಸದೇ ಗಮನದಿಂದ ಕೇಳುವುದು ಕೂಡ “ಒಪ್ಪದೆ ಇರಬಹುದು, ಆದರೆ ಕೇಳುತ್ತೇನೆ” ಎಂಬ ಸಂವಿಧಾನಾತ್ಮಕ ಮನಸ್ಥಿತಿಯ ಉದಾಹರಣೆ.

    ಕುಟುಂಬದ ಮಟ್ಟದಲ್ಲೂ ಸ್ವಾತಂತ್ರ್ಯದ ಆಚರಣೆ ಬಹಳ ಮುಖ್ಯ. ಉದಾಹರಣೆಗೆ, ಮಗುವೊಂದು ವಿಜ್ಞಾನಕ್ಕಿಂತ ಕಲೆ ಅಥವಾ ಕ್ರೀಡೆಗೆ ಆಸಕ್ತಿ ತೋರಿಸಿದಾಗ “ಇದರಿಂದ ಜೀವನ ನಡೆಯುವುದಿಲ್ಲ” ಎಂದು ತಕ್ಷಣ ತಿರಸ್ಕರಿಸುವ ಬದಲು, ಆ ಆಸಕ್ತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಸ್ವಾತಂತ್ರ್ಯದ ಅಭ್ಯಾಸ. ಹೆಣ್ಣುಮಗು ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಊರಿನಿಂದ ಹೊರಗೆ ಹೋಗಲು ಬಯಸಿದರೆ, ಭಯ ಅಥವಾ ಸಂಪ್ರದಾಯದ ಹೆಸರಿನಲ್ಲಿ ತಡೆಯದೇ, ಅವಳ ನಿರ್ಧಾರವನ್ನು ಗೌರವಿಸುವುದು ಕೂಡ ಅದೇ ಮೌಲ್ಯದ ಭಾಗ. ಮಕ್ಕಳ ಮಾತನ್ನು “ನೀನು ಇನ್ನೂ ಚಿಕ್ಕವನು” ಎಂದು ನಿರ್ಲಕ್ಷಿಸದೇ, ಅವರ ಅಭಿಪ್ರಾಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಮನೋಭಾವವೇ ಸ್ವಾತಂತ್ರ್ಯವನ್ನು ಮನೆಮಾತಾಗಿಸುತ್ತದೆ.

    ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಾತಂತ್ರ್ಯ ಜವಾಬ್ದಾರಿಯೊಂದಿಗೆ ಜೋಡಿಸಬೇಕು. ಉದಾಹರಣೆಗೆ, ರಾಜಕೀಯ ಅಥವಾ ಧಾರ್ಮಿಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವಾಗ ವ್ಯಕ್ತಿಯ ಜಾತಿ, ಲಿಂಗ ಅಥವಾ ಹಿನ್ನೆಲೆಯನ್ನು ಗುರಿಯಾಗಿಸಿ ಅವಮಾನಿಸುವ ಬದಲು, ಆ ವಿಚಾರದ ತರ್ಕದ ಮೇಲೆ ಚರ್ಚೆ ನಡೆಸುವುದು ಪ್ರೌಢ ಸ್ವಾತಂತ್ರ್ಯದ ಲಕ್ಷಣ. ವಾಟ್ಸಾಪ್ ಅಥವಾ ಫೇಸ್‌ಬುಕ್‌ನಲ್ಲಿ ಬಂದ ಸಂದೇಶವನ್ನು ಪರಿಶೀಲಿಸದೇ ಹಂಚಿಕೊಳ್ಳುವುದು ದ್ವೇಷ ಅಥವಾ ಭಯವನ್ನು ಹರಡಬಹುದು; ಅದನ್ನು ತಡೆಯುವುದು ಕೂಡ ಸ್ವಾತಂತ್ರ್ಯದ ಜವಾಬ್ದಾರಿ. ಈ ರೀತಿಯಾಗಿ ನಿತ್ಯದ ಮಾತು, ನಡೆ ಮತ್ತು ಆಯ್ಕೆಗಳಲ್ಲಿ ಪರಸ್ಪರ ಗೌರವವನ್ನು ಕಾಪಾಡಿಕೊಳ್ಳುವುದರಲ್ಲೇ ಸ್ವಾತಂತ್ರ್ಯ ಕಾನೂನಿನ ತತ್ವವಲ್ಲದೆ, ಬದುಕಿನ ಜೀವಂತ ಮೌಲ್ಯವಾಗಿ ರೂಪುಗೊಳ್ಳುತ್ತದೆ.

    ಮಹಿಳೆಯೊಬ್ಬರು ತಮ್ಮ ಇಷ್ಟದ ಉಡುಗೆ ಧರಿಸಿದಾಗ ಅಥವಾ ರಾತ್ರಿ ಕೆಲಸ ಮಾಡುವ ಉದ್ಯೋಗ ಆಯ್ಕೆ ಮಾಡಿಕೊಂಡಾಗ, “ಇದು ಸರಿಯಲ್ಲ” ಎಂದು ಸಮಾಜ ಪ್ರಶ್ನಿಸುವ ಬದಲು ಅದು ಅವರ ವೈಯಕ್ತಿಕ ನಿರ್ಧಾರ ಎಂದು ಒಪ್ಪಿಕೊಳ್ಳುವುದು ಸ್ವಾತಂತ್ರ್ಯದ ಗೌರವ. ಅದೇ ರೀತಿ, ಮಹಿಳೆಯೊಬ್ಬರು ವಿವಾಹವಾಗದೇ ಬದುಕಲು ಅಥವಾ ಅಂತರಜಾತಿ/ಅಂತರಧರ್ಮ ವಿವಾಹ ಆಯ್ಕೆ ಮಾಡಿಕೊಂಡಾಗ, ಕುಟುಂಬ ಮತ್ತು ಸಮಾಜವು ಅನುಮಾನ, ಗಾಳಿ ಮಾತು ಅಥವಾ ಒತ್ತಡ ತರುವುದನ್ನು ಬಿಟ್ಟು ಅವರ ಆಯ್ಕೆಯನ್ನು ಮಾನ್ಯಗೊಳಿಸುವುದು ಸಂವಿಧಾನಾತ್ಮಕ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿದಂತಾಗುತ್ತದೆ.

ಯುವಜನರ ವಿಚಾರದಲ್ಲೂ ಸ್ವಾತಂತ್ರ್ಯ ಕೇಳುವ ಮತ್ತು ಅವಕಾಶ ನೀಡುವ ಮನಸ್ಥಿತಿಯಲ್ಲಿ ಕಾಣಬೇಕು. ಕಾಲೇಜು ವಿದ್ಯಾರ್ಥಿಗಳು ಶಿಕ್ಷಣ ನೀತಿ, ಉದ್ಯೋಗ ಕೊರತೆ ಅಥವಾ ಸಾಮಾಜಿಕ ಅನ್ಯಾಯಗಳ ಬಗ್ಗೆ ಮಾತನಾಡುವಾಗ “ನಿಮಗೆ ಇನ್ನೂ ಅನುಭವವಿಲ್ಲ” ಎಂದು ಸುಮ್ಮನಾಗಿಸುವ ಬದಲು, ಅವರ ಅಭಿಪ್ರಾಯವನ್ನು ಕೇಳಿ ಸಂವಾದಕ್ಕೆ ಅವಕಾಶ ನೀಡುವುದು ಅಗತ್ಯ. ಪ್ರತಿಭಟನೆ, ಬರವಣಿಗೆ ಅಥವಾ ಕಲೆಯ ಮೂಲಕ ಯುವಜನರು ತಮ್ಮ ನಿಲುವು ವ್ಯಕ್ತಪಡಿಸಿದಾಗ ಅದನ್ನು ಅಪಾಯ ಅಥವಾ ಅಶಿಸ್ತು ಎಂದು ತಕ್ಷಣ ನಿಲುವು ತೆಗೆದುಕೊಳ್ಳವುದಕ್ಕಿಂತ, ಅದು ಅವರ ನಾಗರಿಕ ಹಕ್ಕು ಎಂಬುದನ್ನು ಗುರುತಿಸುವುದು ಸ್ವಾತಂತ್ರ್ಯದ ಪ್ರಾಯೋಗಿಕ ರೂಪವಾಗಿದೆ. ಈ ರೀತಿಯ ಗೌರವದಿಂದಲೇ ಹೊಸ ಆಲೋಚನೆಗಳು ಮತ್ತು ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ.

ಅದೇ ರೀತಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಸ್ವಾತಂತ್ರ್ಯವನ್ನು ಸಹಜವಾಗಿ ಒಪ್ಪಿಕೊಳ್ಳುವುದು ಅತ್ಯಂತ ಮುಖ್ಯ. ಉದಾಹರಣೆಗೆ, ಅವರು ತಮ್ಮ ಭಾಷೆಯಲ್ಲಿ ಮಾತನಾಡುವುದು, ಧಾರ್ಮಿಕ ಗುರುತುಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದು ಇವರ ಹಕ್ಕುಗಳೇ ಹೊರತು ಅನುಗ್ರಹವಲ್ಲ. ಇವುಗಳನ್ನು “ಮುಖ್ಯವಾಹಿನಿಗೆ ಹೊಂದಿಕೆಯಾಗಬೇಕು” ಎಂಬ ಹೆಸರಿನಲ್ಲಿ ತಡೆಯುವುದು ಸ್ವಾತಂತ್ರ್ಯಕ್ಕೆ ವಿರುದ್ಧ. ಇಂತಹ ಸಣ್ಣ–ಸಣ್ಣ ದಿನನಿತ್ಯದ ಆಚರಣೆಗಳ ಮೂಲಕವೇ ಸ್ವಾತಂತ್ರ್ಯ ಕೇವಲ ಸಂವಿಧಾನದ ಪುಟಗಳಲ್ಲಿ ಸೀಮಿತವಾಗದೇ, ಮಾನವೀಯ ಸಂಬಂಧಗಳಲ್ಲಿ ಜೀವಂತ ಮೌಲ್ಯವಾಗಿ ರೂಪಾಂತರಗೊಳ್ಳುತ್ತದೆ.

ಇದೇ ಚೌಕಟ್ಟಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ (LGBTQIA+) ಸಂವಿಧಾನಾತ್ಮಕ ಸ್ವಾತಂತ್ರ್ಯವನ್ನು ಸೇರಿಸಿದಾಗ ಸ್ವಾತಂತ್ರ್ಯದ ಅರ್ಥ ಇನ್ನಷ್ಟು ಸಮಗ್ರವಾಗುತ್ತದೆ. ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರು ತಮ್ಮ ಲೈಂಗಿಕ ಗುರುತು ಅಥವಾ ಲಿಂಗ ಗುರುತನ್ನು ಬಹಿರಂಗವಾಗಿ ವ್ಯಕ್ತಪಡಿಸಿದಾಗ, ಅದನ್ನು “ಅಸ್ವಾಭಾವಿಕ” ಅಥವಾ “ಫ್ಯಾಷನ್” ಎಂದು ತಳ್ಳಿಹಾಕದೇ, ಅದು ಅವರ ಅಸ್ತಿತ್ವದ ಭಾಗ ಎಂದು ಗೌರವಿಸುವುದು ಸಂವಿಧಾನಾತ್ಮಕ ಸ್ವಾತಂತ್ರ್ಯದ ಪ್ರಮುಖ ಉದಾಹರಣೆ. ಉದಾಹರಣೆಗೆ, ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ತಮ್ಮ ಆಯ್ಕೆಯ ಹೆಸರು, ಉಡುಗೆ ಅಥವಾ ಶೌಚಾಲಯ ಬಳಕೆಯನ್ನು ಅನುಸರಿಸಿದಾಗ ಅವರನ್ನು ಹಾಸ್ಯ, ಅವಮಾನ ಅಥವಾ ಹಿಂಸೆಗೆ ಒಳಪಡಿಸದೇ, ಸಹಜವಾಗಿ ಒಪ್ಪಿಕೊಳ್ಳುವುದು ಸ್ವಾತಂತ್ರ್ಯ ಬದುಕಿನಲ್ಲಿ ಕಾರ್ಯರೂಪಕ್ಕೆ ಬಂದ ಕ್ಷಣವಾಗುತ್ತದೆ.

ಅದೇ ರೀತಿಯಲ್ಲಿ ಉದ್ಯೋಗ, ಶಿಕ್ಷಣ ಮತ್ತು ಸಾರ್ವಜನಿಕ ಜೀವನದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಕಲ್ಪಿಸುವುದು ಕೂಡ ಸ್ವಾತಂತ್ರ್ಯದ ಅಭ್ಯಾಸವೇ. ಉದಾಹರಣೆಗೆ, ಕಚೇರಿ ಅಥವಾ ಕಾಲೇಜಿನಲ್ಲಿ ಪ್ರೀತಿಯ ಕುರಿತು ಮಾತನಾಡುವವರನ್ನು “ಇದನ್ನು ಸಾರ್ವಜನಿಕವಾಗಿ ಹೇಳಬೇಡಿ” ಎಂದು ಮೌನಗೊಳಿಸುವುದು ಸ್ವಾತಂತ್ರ್ಯಕ್ಕೆ ವಿರುದ್ಧ. ಕುಟುಂಬದೊಳಗೆ ಮಗ ಅಥವಾ ಮಗಳು ತಮ್ಮ ಲೈಂಗಿಕ ಗುರುತನ್ನು ಹಂಚಿಕೊಂಡಾಗ, ಅದನ್ನು “ನಮ್ಮ ಕುಟುಂಬಕ್ಕೆ ಅವಮಾನ” ಎಂದು ಕಾಣದೇ, ಕೇಳುವ ಮತ್ತು ಅರ್ಥಮಾಡಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳುವುದು ಸಂವಿಧಾನದ ಆತ್ಮಕ್ಕೆ ಹೊಂದಿಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಮೌನವಾಗಿ ಬೆಂಬಲಿಸುವುದೇ ಕೆಲವೊಮ್ಮೆ ಅತ್ಯಂತ ಶಕ್ತಿಶಾಲಿ ಸ್ವಾತಂತ್ರ್ಯದ ಆಚರಣೆ ಆಗುತ್ತದೆ.

ಈ ರೀತಿಯಾಗಿ ಮಹಿಳೆಯರು, ಯುವಕರು, ಅಲ್ಪಸಂಖ್ಯಾತರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ತಮ್ಮದೇ ಆದ ಬದುಕಿನ ಆಯ್ಕೆಗಳನ್ನು ಭಯವಿಲ್ಲದೆ ಮಾಡುವ ಅವಕಾಶ ದೊರಕಿದಾಗಲೇ ಸಂವಿಧಾನಾತ್ಮಕ ಸ್ವಾತಂತ್ರ್ಯ ಕಾಗದದ ಹಕ್ಕಾಗಿರದೆ, ದಿನನಿತ್ಯದ ಮಾನವೀಯ ಸಂಬಂಧಗಳಲ್ಲಿ ಜೀವಂತ ಮೌಲ್ಯವಾಗಿ ರೂಪುಗೊಳ್ಳುತ್ತದೆ. ಪರಸ್ಪರ ಗೌರವ, ಕೇಳುವ ಮನಸ್ಸು ಮತ್ತು ಭಿನ್ನತೆಯನ್ನು ಸಹಜವಾಗಿ ಒಪ್ಪಿಕೊಳ್ಳುವ ನಡವಳಿಕೆಯಲ್ಲೇ ಸ್ವಾತಂತ್ರ್ಯದ ನಿಜವಾದ ಅರ್ಥ ಅಡಗಿದೆ.


  • ಡಾ ಮುರಳಿ ಮೋಹನ್ ಕಾಟಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW