ಸಂಕಷ್ಟದಲ್ಲಿ ಇರುವವರನ್ನು ದೇವರು ಸಲಹುವನು. ನಿಮ್ಮ ಪಕ್ಕದಲ್ಲೇ ಇದ್ದು ಸಕಾಲದಲ್ಲಿ ಒದಗುವನು ಎಂದು ಧೈರ್ಯ ತುಂಬುವ ನೀತಿಕಥೆಯಿದು. ಕೊರೋನಾ ಕುರಿತು ಸಾಮಾಜಿಕ ಜಾಲತಾಣ, ಟಿವಿಗಳಲ್ಲಿ ಹಾಳು ಮೂಳು ಓದಿ, ಕೇಳಿ ಧೈರ್ಯಗುಂದಿದವರಿಗೆ ರಮಾನಾಥ ಶಾನುಭಾಗ್ ಅವರ ಈ ಕಥೆ ಸಾಂತ್ವನ ನೀಡಬಲ್ಲದು.
(ಮುದ್ದಿನ ಹೆಸರು ಪಿಲ್ಟೂ) ಇರುವುದು ಬೆಂಗಳೂರಿನಲ್ಲಿ. ಅಪ್ಪ ಅಮ್ಮ ಇಬ್ಬರೂ ಉದ್ಯೋಗಿಗಳು. ಅಜ್ಜ ಅಜ್ಜಿ ತಿಪಟೂರಿನಲ್ಲಿ. ಪ್ರತಿ ಮೂರು ತಿಂಗಳಿಗೊಮ್ಮೆ ನಾಲ್ಕು ದಿನ ರಜೆ ಹಾಕಿ ತಿಪಟೂರಿಗೆ ರೈಲಿನಲ್ಲಿ ಹೋಗಿ ಇದ್ದು ಮರಳಿ ಬರುವುದು ಪಿಲ್ಟೂ ಕುಟುಂಬ ಮಾಡಿಕೊಂಡ ರೂಢಿ.
ಅಜ್ಜ, ಅಜ್ಜಿ ಮನೆ ಅವಿಭಕ್ತ ಕುಟುಂಬ. ಅಲ್ಲಿ ಎಲ್ಲರೂ ಪಿಲ್ಟೂವನ್ನು ಮುದ್ದಿಸುವವರೇ. ಹಾಗಾಗಿ ಅಜ್ಜಿ ಮನೆ ಪಿಲ್ಟೂವಿಗೆ ಸ್ವರ್ಗವೆನಿಸುತ್ತಿತ್ತು. ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಅಪ್ಪ ಅಮ್ಮನ ಜತೆ ಹಲವು ಬಾರಿ ರೈಲಿನಲ್ಲಿ ಓಡಾಟ ನಡೆಸಿ ಅಜ್ಜಿ ಊರಿನ ದಾರಿ ಬಲು ಪರಿಚಿತವೆನಿಸಿತ್ತು ಪಿಲ್ಟೂಗೆ! ಈ ನಡುವೆ, ಒಮ್ಮೊಮ್ಮೆ ಬೇಸರವಾಗಿ ಪಿಲ್ಟೂಗೆ ಅಜ್ಜಿ ಮನೆಗೆ ಹೋಗಬೇಕೆನಿಸುತ್ತಿತ್ತು. ಆತ ಹಟ ಮಾಡಿದರೆ ಅಪ್ಪನೋ ಅಮ್ಮನೋ ಯಾರಾದರೊಬ್ಬರು ಅವನನ್ನು ತಿಪಟೂರಿಗೆ ಕರೆದುಕೊಂಡು ಹೋಗಿ ಒಂದೆರಡು ದಿನ ಇದ್ದು ಮರಳಿ ಕರೆ ತರುತ್ತಿದ್ದರು.
ಒಂದು ದಿನ ಪಿಲ್ಟೂಗೆ ಇದ್ದಕ್ಕಿದ್ದಂತೆ ಒಂದು ಆಲೋಚನೆ ಬಂದಿತು. ತಾನೀಗ ದೊಡ್ಡವನಾಗಿದ್ದೇನೆ (ಅವನಿಗೆ ಆರು ವರ್ಷ. ಮೊದಲನೇ ತರಗತಿಗೆ ಸೇರಿಸಿದ್ದರಷ್ಟೇ). ಅಜ್ಜಿ ಮನೆಗೆ ಪ್ರತಿ ಸಲ ಹೋಗುವಾಗಲೂ ಅಪ್ಪ- ಅಮ್ಮ ಜತೆಗಿರುವುದು ಏತಕ್ಕೆ? ಜತೆಗೆ ಬರುವುದು ಏತಕ್ಕೆ? ನಾನೇನು ಸಣ್ಣ ಮಗುವೇ?! ಹೋಗಿ ಬರುವ ದಾರಿಯಂತೂ ಬಹಳ ಚೆನ್ನಾಗಿ ಗೊತ್ತಿದೆ. ಇನ್ನು ತಾನೊಬ್ಬನೇ ಅಜ್ಜಿ ಊರಿಗೆ ಹೋಗಿ ಬರಬೇಕು ಎಂದು ನಿರ್ಧರಿಸಿದ.
ಅವನ ನಿರ್ಧಾರ ಕೇಳಿ ಅಪ್ಪ ಅಮ್ಮ ಹೌಹಾರಿದರು! ಬೇಡ ಮರಿ, ನೀನಿನ್ನೂ ಚಿಕ್ಕವನು. ನಿನಗೆ ಏನಾದರೂ ಅಪಾಯವಾದರೆ, ನಿನ್ನನ್ನು ಯಾರಾದರೂ ಎತ್ಕೊಂಡು ಹೋದರೆ?!! ಇನ್ನೂ ಸ್ವಲ್ಪ ನೀನು ದೊಡ್ಡವನಾದ ಮೇಲೆ ಒಬ್ಬನೇ ಹೋಗುವೆಯಂತೆ. ಈಗ ಬೇಡ ಅಂತ ಸಾಕಷ್ಟು ಬುದ್ಧಿವಾದ ಹೇಳಿದರು. ಆದರೆ ಪಿಲ್ಟೂ ಹಿಡಿದ ಹಟ ಬಿಡಲಿಲ್ಲ!
ಆದದ್ದಾಗಲಿ ಅಂತ ಪಿಲ್ಟೂವನ್ನು ಒಬ್ಬಂಟಿಯಾಗಿ ಊರಿಗೆ ಕಳಿಸಲು ಅಪ್ಪ ಅಮ್ಮ ತಯಾರಿ ನಡೆಸಿದರು. ಪಿಲ್ಟೂ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅಲ್ಲಿಂದ ಮನೆಗೆ ಕರೆದೊಯ್ಯುವಂತೆ ಅಜ್ಜಿ ಮನೆಯವರಿಗೂ ತಿಳಿಸಲಾಯಿತು.
ನಿಗದಿತ ದಿನದಂದು ಪಿಲ್ಟೂವನ್ನು ಅಪ್ಪ ಅಮ್ಮ ರೈಲಿನಲ್ಲಿ ಕೂರಿಸಿದರು. ಪ್ರೀತಿಯ ಮಾತನಾಡುತ್ತ ಹಾಗೆ ಮಾಡಬೇಡ, ಹೀಗೆ ಮಾಡಬೇಡ ಎಂದು ಅವನಿಗೆ ಸಲಹೆ ನೀಡಿದರು. ಕೊನೆಗೆ ಅಪ್ಪ ಅವನ ಕೆನ್ನೆ ಸವರಿ ಒಂದು ಚೀಟಿಯನ್ನು ಕೈಗಿತ್ತು – “ಈ ಚೀಟಿಯನ್ನು ಅಂಗಿ ಕಿಸೆಯಲ್ಲಿಟ್ಟುಕೋ. ನಿನಗೆ ಅಪಾಯ ಸ್ಥಿತಿ ಎದುರಾದಾಗ, ಪೂರ್ಣ ಧೈರ್ಯಗುಂದಿದಾಗ ಈ ಚೀಟಿಯನ್ನು ಹೊರ ತೆಗೆದು ಓದು” ಎಂದರು. ರೈಲು ಚಲಿಸಲಾರಂಭಿಸಿತು. ಅಪ್ಪ ಅಮ್ಮ ಟಾಟಾ ಹೇಳಿದರು.
ಪಿಲ್ಟೂಗೆ ಒಂಟಿ ಪ್ರಯಾಣದ ಹೊಸ ಅನುಭವ. ಖುಷಿ ಖುಷಿಯಾಯಿತು. ಕಿಟಕಿಯಾಚೆ ನೋಡಿದ. ವೇಗದಿಂದ ಓಡಿ ಮರೆಯಾಗುತ್ತಿರುವ ಗಿಡ ಮರಗಳನ್ನು ನೋಡಿ ಅಚ್ಚರಿಗೊಂಡ. ಪ್ಯಾಂಟ್ ಕಿಸೆಯಲ್ಲಿದ್ದ ಚಾಕಲೇಟ್ ತಿಂದ. ಮುಂದಿನ ನಿಲ್ದಾಣಗಳಲ್ಲಿ ರೈಲು ನಿಂತು ಬೋಗಿಗೆ ಹೊಸ ಹೊಸ ಜನರು ಬರಲಾರಂಭಿಸಿದರು. ಪಿಲ್ಟೂಗೆ ಇದುವರೆಗೆ ಮರೆತಿದ್ದ ಅಪ್ಪ ಅಮ್ಮ ನೆನಪಿಗೆ ಬಂದರು. ಆರಂಭದಲ್ಲಿದ್ದ ಸಹ ಪ್ರಯಾಣಿಕರು ಕಾಣಲಿಲ್ಲ. ಹೊಸ ಮುಖಗಳು. ಕೆಲವರು ಗಡ್ಡಧಾರಿಗಳು. ಕೆಲವರು ವಿಚಿತ್ರ ವೇಷದವರು. ಬೀಡಿ, ಸಿಗರೆಟ್ ಎಳೆಯುತ್ತಿದ್ದ ಕೆಲವರು. ಪಿಲ್ಟೂಗೆ ಭಯ ಕಾಡಲಾರಂಭಿಸಿತು. ಕೆಲವರು ತನ್ನನ್ನೇ ದುರುಗುಟ್ಟಿ ನೋಡುತ್ತಿರುವರೆಂದು ಭಾಸವಾಯಿತು. .ಅಯ್ಯೋ… ಅಪ್ಪ ಅಮ್ಮನ ಜತೆ ಬರದೆ ತಾನೆಂಥ ಕೆಲಸ ಮಾಡಿದೆ! ತನ್ನನ್ನು ಯಾರಾದೂ ಅಪಹರಿಸಿದರೇ ಎಂಬಿತ್ಯಾದಿ ಆಲೋಚನೆಗಳು ಕಾಡಿದವು. ತಡೆದುಕೊಳ್ಳಲಾಗಲಿಲ್ಲ. ಪಿಲ್ಟೂಗೆ ಅಳುವೇ ಬಂದಿತು. ಜೋರಾಗಿ ಅತ್ತುಬಿಟ್ಟ! ಅಳುವಿನ ನಡುವೆಯೇ ಅಪ್ಪ ಕೊಟ್ಟ ಚೀಟಿ ಜ್ಞಾಪಕಕ್ಕೆ ಬಂದಿತು. ಚೀಟಿ ಹೊರ ತೆಗೆದು ಬಿಡಿಸಿ ಓದಿದ. ಅದರಲ್ಲಿ ಬರೆದಿತ್ತು – “ಹೆದರಬೇಡ. ನಿನ್ನ ಮುಂದಿನ ಬೋಗಿಯಲ್ಲಿ ನಾವು ಅಪ್ಪ, ಅಮ್ಮ ಕುಳಿತ್ತಿದ್ದೇವೆ. ನಿನ್ನನ್ನು ಗಮನಿಸುತ್ತಿದ್ದೇವೆ”
- ರಮಾನಾಥ ಶಾನುಭಾಗ್
