ಅಡಿಗೆ ಮತ್ತು ಅಡಿಗೆಮನೆ – ವಸಂತ ಗಣೇಶ್



ಅಡುಗೆ ಎನ್ನುವ ಈ ಮೂರಕ್ಷರದ ಹಿಂದೆ ಎಷ್ಟೊಂದು ವಿಷಯಗಳು ಅಡಗಿದೆ. ಅಡಿಗೆ ಮತ್ತು ಅಡಿಗೆಮನೆ ಕುರಿತು ವಸಂತ ಗಣೇಶ್ ಅವರು ಪ್ರಬಂಧವನ್ನು ಮಂಡಿಸಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

#ಅಡಿಗೆ” ದಿನವೂ ಮನೆಯಲ್ಲಿ ಗೃಹಿಣಿಯರು ಮಾಡುವ ಒಂದು ಯಜ್ಞವಾದರೆ, “ಅಡಿಗೆಮನೆ” ಮನುಷ್ಯರ ದೇಹದಲ್ಲಿ ಹಸಿವಿನ ರೂಪದಲ್ಲಿ ಇರುವ ಅಗ್ನಿದೇವನಿಗೆ ಸಮರ್ಪಿಸುವ ಹಸಿವನ್ನು ತಯಾರಿಸುವ ಮನೆಯ ಮುಖ್ಯ ಭಾಗ.

ಮನೆಯಲ್ಲಿ ದಿನವೂ ತಯಾರಾಗುವ ಅಡಿಗೆಯ ಮೂಲಕವೇ ದೇಹದ ನರನಾಡಿಗಳಿಗೆ ಜೀವ, ಜೀವನ. ಪ್ರತೀ ಮಾನವನ ಬೆಳವಣಿಗೆಗೆ ಶಕ್ತಿ ನೀಡುವ ಶಕ್ತಿಕೇಂದ್ರವೆ ಅಡಿಗೆಮನೆ.

ಉಪ್ಪು, ಹುಳಿ, ಸಿಹಿ, ಖಾರ, ಕಹಿ, ಒಗರು ಇವು ಆರು ಷಡ್ರಸಗಳು, ಇವುಗಳಿಂದ ಕೂಡಿ, ಹದವಾಗಿ ಬೇಯಿಸಿದ ತಿನ್ನಲು ಯೋಗ್ಯವಾದ ಆಹಾರವೇ ಅಡಿಗೆ. ಈ ಆರು ರಸಗಳನ್ನು ಅಳತೆಗೆ ತಕ್ಕಂತೆ ಹಾಕಿ ಜೊತೆಗೆ ತನ್ನ ಪ್ರೀತಿಯನ್ನೂ ಸೇರಿಸಿ ಪ್ರತೀ ಮನೆಯ ಗೃಹಿಣಿ ತಯಾರಿಸಿ ಉಣಿಸುವ ಅಡಿಗೆ ಅಮೃತಕ್ಕೆ ಸಮಾನ.

ಅಡಿಗೆ ಮಾಡೋದು ಎನು ಮಹಾ ಕೆಲಸ, ಅನ್ನೋ ಮಾತು ಆಗಾಗ ಕೇಳಿಬಂದರೂ , ಅದನ್ನು ಮಾಡುವಾಗ ಮಾತ್ರವೇ ಅದರ ಕಷ್ಟ ಅರಿವಾಗುವುದು. ಅಡಿಗೆ ಮಾಡುವ ಜಾಗದ ಸ್ವಚ್ಛತೆ, ಬೇಕಾಗುವ ಪ್ರತಿಯೊಂದು ಪದಾರ್ಥಗಳು ಅದಕ್ಕೆ ತಕ್ಕ ಪಾತ್ರೆ, ಶುದ್ಧವಾದ ನೀರು ಎಲ್ಲವನ್ನೂ ಜೋಡಿಸಿಕೊಂಡು ಬೇಕಾದ್ದನ್ನು ಬೇಕಾದಷ್ಟೇ ಹಾಕಿ ಏಕಾಗ್ರತೆಯಿಂದ ಮಾಡಿದಾಗಲೇ ಅದಕ್ಕೊಂದು ರುಚಿ. ಇದೆಲ್ಲದರ ಜೊತೆ ಮಾಡುವ ಮನಸ್ಸಿದ್ದರೆ ಮಾತ್ರ ಅಡಿಗೆ ರುಚಿಯಾಗಲು ಸಾಧ್ಯ, ಇಲ್ಲವಾದರೆ ಏನೆಲ್ಲ ಪದಾರ್ಥಗಳನ್ನು ಹಾಕಿ ಮಾಡಿದ ಅಡಿಗೆ ಕೂಡಾ ತಿನ್ನಲು ಅಸಾದ್ಯ.

ಮಾನವರ ಆಹಾರ ಪದ್ಧತಿಯಲ್ಲಿ ಮುಖ್ಯವಾಗಿ ಎರಡು ವಿಧಗಳು, ಒಂದು ಸಸ್ಯಾಹಾರ ಆದರೆ ಮತ್ತೊಂದು ಮಾಂಸಾಹಾರ. ಸಸ್ಯಾಹಾರಿಗಳು ಗಿಡ ಮರ ಸಸ್ಯಗಳಲ್ಲಿ ಬೆಳೆದದ್ದು, ಗೆಡ್ಡೆ ಗೆಣಸುಗಳನ್ನು ತಿಂದರೆ, ಮಾಂಸಾಹಾರಿಗಳು ಹಿಂದೆ ಕೆಲವೇ ಕೆಲವು ಪ್ರಾಣಿಗಳನ್ನು ತಿನ್ನುತ್ತಿದ್ದರು. ಆದರೆ ಈಗೀಗ ಸಿಕ್ಕಿದ ಪ್ರಾಣಿ ಪಕ್ಷಿಗಳನ್ನು ತಿನ್ನಲು ಆರಂಭಿಸಿದ್ದಾರಂತೆ ನಮ್ಮ ನೆರೆ ರಾಷ್ಟ್ರಗಳ ಜನರು, ಅದರಿಂದ ಆಗಿರುವ ತೊಂದರೆಗಳೂ ಅಪಾರ.

ಒಂದೆರಡು ತಲೆಮಾರುಗಳ ಹಿಂದೆ ಹೆಚ್ಚಿನ ಮನೆಗಳಲ್ಲಿ ಅಡಿಗೆ ಮನೆ ಎಂದರೆ, ಅದೊಂದು ಹೊಗೆಯಿಂದ ತುಂಬಿದ ಗೋಡೆಗಳು ಕಪ್ಪಾದ ಕೋಣೆ. ಕೆಲ ಮನೆಗಳಲ್ಲಿ ಹೊಗೆ ಗೂಡು ಇರ್ತಾ ಇತ್ತು, ಹೊಗೆ ಅದರ ಮುಖಾಂತರ ಮೇಲಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿರುತ್ತಿದ್ದರು. ಇದರ ರೂಪಾಂತರವೆ ಈಗಿನ ಚಿಮಣಿ. ಅಡಿಗೆ ಮನೆಯ ಹೆಂಚಿನ ನಡುವೆ ಒಂದು ಅಥವಾ ಎರಡು ಬೆಳಕಿನ ಹಂಚುಗಳು ಹಾಕುತ್ತಿದ್ದರು, ಬೆಳಕಿಗಾಗಿ.(ಸಾಮಾನ್ಯವಾಗಿ ಗಾಜಿನದು )

ಗೊಡೆಯಲ್ಲಿಯೆ ಮಣ್ಣಿನಿಂದ ಮಾಡಿದ ಗೂಡುಗಳಲ್ಲಿ ದಿನಸಿ ಪದಾರ್ಥಗಳನ್ನ ಡಬ್ಬಿಗಳಲ್ಲಿ ಜೋಡಿಸಿ ಇಡುತ್ತಿದ್ದರು. ಒಂದು ಮೂಲೆಯಲ್ಲಿ ಮಣ್ಣಿನಲ್ಲಿ ಮಾಡಿದ ಒಲೆಗಳು ಅದರಲ್ಲಿ ಒಂದು ಒಲೆ ಎರಡು ಕಡೆ ಪಾತ್ರೆ ಇಟ್ಟು ಅಡಿಗೆ ಮಾಡುವಂತೆ ಇದ್ದರೆ (ಕೂಡು ಓಲೆ) ಮತ್ತೊಂದು ಒಂಟಿ ಓಲೆ. ಇದರ ಮುಂದೆ ಕಣ್ಣಿಗೆ ಕಾಣ್ತಾ ಇದ್ದದ್ದು ಹಸಿ ಸೌದೆ ಉರಿಯದಾದಾಗ ಅಥವಾ ಉರಿಯುತ್ತಿದ್ದ ಓಲೆ ಶಾಂತವಾಗಿ ಕೆಂಡ ಮಾತ್ರ ಉಳಿದಾಗ ಉಫ್ ಉಫ್ ಎಂದು ಊದಿ ಒಲೆ ಉರಿಸಲು ಸಹಾಯ ಮಾಡುತ್ತಿದ್ದ ಊದುಗೊಳವೆ. ಹಿಂದೆಲ್ಲ ಮದುವೆಗೆ ಹೆಣ್ಣು ನೋಡುವಾಗ ಹುಡುಗಿಗೆ ಒಲೆ ಊದಲು ಎರಡು ತುಟಿ ಇದ್ದರೆ ಸಾಕು ಆಕೆಯ ರೂಪ, ಬಣ್ಣ ಯಾವುದೂ ಮುಖ್ಯವಲ್ಲ ಎಂದು ಹೇಳ್ತಾ ಇದ್ದರು ಅನ್ನೋದು ಕೇಳುವಾಗ ಒಲೆ ಉದುವುದರ ಮಹತ್ವ ಎಷ್ಟಿತ್ತು ಎಂದು ಅರ್ಥವಾಗುತ್ತದೆ.



ಆಗ ಕೆಲವೇ ಕೆಲವು ಅಡಿಗೆ ಮನೆಯ ಒಂದು ಮೂಲೆಯಲ್ಲಿ ಜಾಗ ಪಡೆದಿದ್ದ ಕೈಬಚ್ಚಲಿನ ಮುಂದುವರೆದ ರೂಪವೇ ಈಗಿನ ವಿಧ ವಿಧವಾದ ಸಿಂಕ್ಗಳು.

ಇವೆಲ್ಲ ನಿರ್ಜೀವ ವಸ್ತುಗಳು ಆದರೆ, ಅಡಿಗೆ ಮನೆಯ ಕೇಂದ್ರ ಬಿಂದು, ಇವೆಲ್ಲಕ್ಕೂ ಚಲನೆ ನೀಡಿ ಶುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಕೂಡು ಕುಟುಂಬದ ವಯಸ್ಸಾದ ಒಬ್ಬ ತಾಯಿ ಅಥವಾ ಮಡಿ ಅಜ್ಜಿ. ಸಹಾಯಕ್ಕೆ ಅಮ್ಮನೋ, ಆತ್ತೆಯೋ, ಚಿಕ್ಕಮ್ಮನೋ ಹೀಗೆ ಮತ್ತೊಬ್ಬ ಹೆಂಗಸು. ಅದು ಅವರದೇ ಸಾಮ್ರಾಜ್ಯ, ಅಡಿಗೆ ಮನೆಯ ಪ್ರವೇಶಕ್ಕೂ ಒಮ್ಮೆಮ್ಮೆ ಅವರ ಅಪ್ಪಣೆ ಬೇಕಿತ್ತು.

ಇವುಗಳದ್ದು ಒಂದು ಲೆಕ್ಕವಾದರೇ ಉರುವಲಿಗೆ ಉಪಯೋಗಿಸುವ ಸೌದೆಗಳದ್ದು ಮತ್ತೊಂದು ಕಥೆ. ತೆಂಗು ಅಡಿಕೆ ತೋಟ ಇದ್ದ ಮನೆಯವರು ಅದರಿಂದ ಬರುವ ಗರಿ, ಸಿಪ್ಪೆ, ತೆಂಗಿನ ಗರಿಯ ಹಿಂದಿನ ದಪ್ಪ ಭಾಗ, ಕುರುಂಬಾಳೆ, ತೆಂಗಿನ ಕರಟ, ಇಂತಹುಗಳನ್ನು ಉಪಯೋಗಿಸಿದರೆ, ತೋಟ ಇಲ್ಲದ ಜನ ಒಣಗಿದ ಮರ ಗಿಡಗಳ ಕಡ್ಡಿಯನ್ನು ಆರಿಸಿ ತಂದು ಉಪಯೋಗಿಸುತ್ತಿದ್ದರು ಇಲ್ಲ ಕೊಂಡುಕೊಳ್ಳುತ್ತಿದ್ದರು ಮತ್ತು ಸಂಗ್ರಹಿಸಿ ಇಟ್ಟುಕೊಳ್ಳಬೇಕಿತ್ತು ಮಳೆಗಾಲಕ್ಕೆ. ಇಲ್ಲದಿದ್ದರೆ ಹಸಿ ಸೌದೆಯಲ್ಲಿ ಅಡಿಗೆ ಮಾಡುವುದು ತುಂಬಾ ಕಷ್ಟ . ನಗರಗಳಲ್ಲಿ “ಮಣ” ದ ಲೆಕ್ಕದಲ್ಲಿ ಸೌದೆ ಕೊಂಡು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. (ಕುರುಂಬಾಳೆ ಎಂದರೆ ತೆಂಗಿನ ಕಾಯಿಯನ್ನು ಮರದಲ್ಲಿ ಹಿಡಿದಿಟ್ಟು ಕೊಳ್ಳುವ ಕಸಬರಿಗೆ ರೀತಿಯ ಭಾಗ ಮತ್ತು ಅದರ ಹೊದಿಕೆಯ ಭಾಗ. ಇದು ಚೆನ್ನಾಗಿ ಉರಿಯುತ್ತದೆ ಆದರೆ ಬೇಗ ಉರಿದು ಹೋಗುತ್ತದೆ, ರೊಟ್ಟಿ ಚಪಾತಿ ಇಂತಹುದನ್ನು ಮಾಡುವಾಗ ಒಂದೇ ಸಮಕ್ಕೆ ಉರಿಯುವುದರಿಂದ ಒಂದು ಹದವಾಗಿ ಬೇಯಿಸಲು ಸಹಕಾರಿ)

ರಾತ್ರೆ ಮಲಗುವ ಮೊದಲು ಅಥವಾ ಬೆಳಗ್ಗೆ ಎದ್ದ ಕೂಡಲೆ ಗೃಹಿಣಿ ಒಲೆಯನ್ನು ಸಗಣಿಯಿಂದ ಸಾರಿಸಿ ಚೆಂದದ ರಂಗೋಲಿ ಹಾಕುತ್ತಿದ್ದರು. ಒಲೆಯ ಮೇಲಿನ ಗೋಡೆಯಲ್ಲಿ ಸಹ ಚೆಂದದ ಕಲಾತ್ಮಕ ರಂಗೋಲಿಗಳನ್ನು ಕಾಣಬಹುದಿತ್ತು. ಬೆಳಗಿನ ಸ್ನಾನದ ನಂತರ ಅಗ್ನಿ ದೇವರನ್ನು ನೆನೆದು ಅಂದಿನ ಅಡಿಗೆ ಆರಂಭಿಸುತ್ತಿದ್ದರು. ಆಗೆಲ್ಲ ಮನೆ ತುಂಬಾ ಜನ ಇರ್ತಾ ಇದ್ದದ್ದರಿಂದ ಬೆಳಗ್ಗೆ ಹಚ್ಚಿದ ಒಲೆ ರಾತ್ರೆಯ ವೇಳೆಗೇ ತಣ್ಣಗೆ ಆಗ್ತಾ ಇದ್ದದ್ದು. ಒಲೆಗಳು ಹಾಳಾದಾಗ ಮಣ್ಣು ಕಲೆಸಿ ಒಲೆಗಳನ್ನು ಹಾಕುತ್ತಿದ್ದುದರ ಸೊಗಸೇ ಬೇರೆ.

ಅಡಿಗೆ ಮಾಡಿ ತಳಭಾಗಕ್ಕೆ ಮಸಿ ಹತ್ತಿ ಕಪ್ಪಾದ ಪಾತ್ರೆಗಳು. ಪಕ್ಕದಲ್ಲೇ ಒಂದು ಒರಳು ಕಲ್ಲು, ಒಂದು ಮೂಲೆಯಲ್ಲಿ ಸೌದೆ, ಮತ್ತೊಂದೆಡೆ ಮಕ್ಕಳ ಕೈಗೆ ಸಿಗದಂತೆ ಸ್ವಲ್ಪ ಎತ್ತರದಲ್ಲಿ ಇಟ್ಟ ತರಕಾರಿ ಹೆಚ್ಚುವ, ಕಾಯಿ ತುರಿಯುವ ತುರೀಮಣೆ/ ಇಳಿಗೇಮಣೆ /ಕತ್ತಿ(ಎರಡೂ ಕೆಲಸಕ್ಕೆ ಒಂದನ್ನೇ ಬಳಸುವಂತೆಯೂ ಇರುತ್ತಿತ್ತು, ಬೇರೆ ಬೇರೆಯಾಗಿ ಬಳಸುವಂತೆಯೂ ಇರುತ್ತಿತ್ತು). ಮತ್ತೊಂದು ಮೂಲೆಯಲ್ಲಿ ಮೊಸರು ಕಡೆಯಲು ಎರಡು ಹಗ್ಗಗಳನ್ನು ಕಟ್ಟಿರುವ ಕಂಬ, ಒಂದು ಉದ್ದನೆಯ ಕಡಗೋಲು. ಮೇಲೆ ತೊಲೆಗೆ ಹಗ್ಗದಿಂದ ಕಟ್ಟಿರುವ “ನೆಲು, ಅಥವಾ ನೆಲ್ಲು”. ಇದರಲ್ಲಿ ಕಡೆದ ಬೆಣ್ಣೆ, ಕೆಲವೊಮ್ಮೆ ಹಾಲು ಮೊಸರುಗಳನ್ನು ಇಟ್ಟಿರುತ್ತಿದ್ದರು, ಕೃಷ್ಣನಂತ ತುಂಟ ಮಕ್ಕಳಿಂದ ಹಾಗೂ ಬೆಕ್ಕಿನಿಂದ ರಕ್ಷಿಸಲು.

ಬಾವಿಯಿಂದ ನೀರು ಸೇದಿ ತರುವ ದೊಡ್ಡ ತಾಮ್ರ ಇಲ್ಲ ಹಿತ್ತಾಳೆಯ ಕೊಡ (ಬಿಂದಿಗೆ) ಗಳು. ಸೇದಿ ತಂದ ನೀರನ್ನು ಶೇಖರಿಸಿ ಇಡಲು ದೊಡ್ಡ ದೊಡ್ಡ ಹಿತ್ತಾಳೆ ಪಾತ್ರೆಗಳು. ಬಡವರಾದರೆ ಮಣ್ಣಿನ ಮಡಕೆಗಳು ಅದಕ್ಕೊಂದು ಮುಚ್ಚಳ. ಇದನ್ನೆಲ್ಲ ನಮ್ಮಲ್ಲಿ ಕೆಲವರು ನೋಡಿದ್ದರೆ ಇನ್ನು ಕೆಲವರು ಸಿನೆಮಾಗಳಲ್ಲಿ ಮಾತ್ರ ನೋಡಿರಬಹುದು.

ಇಂತಹ ಅಡಿಗೆ ಮನೆಯಲ್ಲಿ ತಯಾರಾಗುತ್ತಿದ್ದ ಅಡಿಗೆಯ ರುಚಿ ಈಗಿನ ಯಾವುದೇ ದೊಡ್ಡ ದೊಡ್ಡ ಹೋಟೆಲ್ ಗಳ ಅಡಿಗೆಯ ರುಚಿಗಿಂತ ಮಿಗಿಲಾಗಿ ಇರುತ್ತಿತ್ತು ಎಂದರೆ ಅದೇನು ಉತ್ಪ್ರೇಕ್ಷೆ ಖಂಡಿತಾ ಅಲ್ಲ. ಆಗ ಕೊಟ್ಟಿಗೆ ಗೊಬ್ಬರ ಉಪಯೋಗಿಸಿ ಬೆಳೆಯುತ್ತಿದ್ದ ದಿನಸಿ ಸಾಮಾನು, ಸೌದೆ ಒಲೆ, ಬೀಸುವಕಲ್ಲಿನಿಂದ ಬೀಸಿ, ಒರಳುಕಲ್ಲಿನಿಂದ ರುಬ್ಬುತ್ತಿದ್ದುದು, ಫ್ರೆಶ್ ಆಗಿ ಕಿತ್ತು ತಂದ ಸೊಪ್ಪು ತರಕಾರಿಗಳು ಅಡಿಗೆ ಮಾಡುವ ಗೃಹಣಿಯ ಶಾಂತ ಮನಸ್ಥಿತಿ ಎಲ್ಲವೂ ಕಾರಣ ಆಗಿರುತ್ತಿತ್ತು. ಕೆಲವೊಮ್ಮೆ ಅನ್ನ, ರೊಟ್ಟಿ ಮುದ್ದೆ, ಅಂತದುಹು ಏನೂ ಇಲ್ಲದೆ ಹಿತ್ತಲಿನಲ್ಲಿ ಬೆಳೆದ ಕೀರೆ, ದಂಟು, ಅಣ್ಣೇಸೊಪ್ಪುಗಳನ್ನು ತಂದು ಬೇಯಿಸಿ ಉಪ್ಪು ಹಾಕಿ ತಿನ್ನುತ್ತಿದ್ದೆವು, ಅದೂ ತುಂಬಾ ರುಚಿಯಾಗಿ ಇರುತ್ತಿತ್ತು ಎಂದು ಹಿಂದಿನವರು ಹೇಳುವುದನ್ನು ಕೇಳಿದ್ದೇವೆ. ಈಗ ಏನೆಲ್ಲ ಹಾಕಿದರೂ ಆ ರುಚಿ ಇರೋಲ್ಲ ಎನ್ನುವುದು ಹಿರಿಯರ ಅಂಬೋಣ. ಅದಕ್ಕೆ ಕಾರಣ ರಾಸಾಯನಿಕ ಗೊಬ್ಬರಗಳ ಬಳಕೆ, ಸಾಮಗ್ರಿಗಳ ಗುಣ ಮಟ್ಟ, ಮಾಡುವವರ ಮನಸ್ಥಿತಿ, ಕೈ ಗುಣವೋ ಇಲ್ಲ ತಿನ್ನುವವರ ಮನಸ್ಥಿತಿಯೊ ತಿಳಿಯದು.



ಕೆಲ ಮನೆಗಳಲ್ಲಿ ಇದ್ದಿಲು ಒಲೆಗಳೂ ಮಾಮೂಲಿ ಒಲೆಗಳ ಜೊತೆ ಇರುತ್ತಿದ್ದವು. ಗಟ್ಟಿ ಸೌದೆ ಉರಿದು ಕೆಂಡವಾಗಿದ್ದನ್ನು ತೆಗೆದು ಇದ್ದಿಲಿನ ಜೊತೆಗೆ ಹಾಕಿ ಅದರ ಮೇಲೆಯೂ ಅಡಿಗೆ ಮಾಡುತ್ತಾ ಇದ್ದರು. ಇಲ್ಲ ನೀರು, ಹಾಲು ಕಾಯಿಸಲು ಉಪಯೋಗಿಸುತ್ತಾ ಇದ್ದರು. ಇದ್ದಿಲು ಒಲೆಯಲ್ಲಿ ಕಾದ ಹಾಲಿನ ಮೇಲೆ ಅಂಗೈ ದಪ್ಪದ ಹೊಂಬಣ್ಣದ ಕೆನೆಗಟ್ಟಿರುತ್ತಿತ್ತು, ಹಾಗೂ ಆ ಹಾಲಿಗೆ ಒಂದು ವಿಶೇಷ ಸುವಾಸನೆ, ರುಚಿ ಇರುತ್ತಿದ್ದುದು ಸುಳ್ಳಲ್ಲ.

ಹಬ್ಬ ಹುಣ್ಣಿಮೆ, ಮಡಿಯಲ್ಲಿ ಅಡಿಗೆ ಮಾಡುವ ದಿನಗಳಲ್ಲಿ ಮನೆಯ ಚಿಕ್ಕ ಮಕ್ಕಳಿಗೆ ಕೆಂಡದ ರೊಟ್ಟಿ ತಟ್ಟಿ ಕೊಡುತ್ತಿದ್ದುದು, ಅದನ್ನು ತಿಂದದ್ದು ಕೆಲವರಿಗಾದರೂ ನೆನಪಿರಬಹುದು. ಅದರ ರುಚಿ ಈಗಿನ ಪೀಜ್ಜಾದಲ್ಲಿ ಸಿಗಲು ಸಾಧ್ಯವೇ ಇಲ್ಲ. ( ಕೆಂಡದ ರೊಟ್ಟಿ ಎಂದರೆ ಆಗ ಎಲ್ಲರ ಮನೆಯಲ್ಲೂ ಇರುತ್ತಿದ್ದ ಮುತ್ತುಗದ ಎರಡು ಎಲೆಗಳ ನಡುವೆ, ರಾಗಿಹಿಟ್ಟು/ಅಕ್ಕಿಹಿಟ್ಟು/ಜೋಳದ ಹಿಟ್ಟನ್ನು ಕಲೆಸಿ ತಟ್ಟಿ ಇದ್ದಿಲು ಒಲೆ ಅಥವಾ ಬಚ್ಚಲು ಮನೆಯ ಒಲೆಯಲ್ಲಿ ಹದವಾಗಿ ಬೇಯಿಸಿ, ನಂತರ ಎಲೆಯನ್ನು ಬೇರ್ಪಡಿಸಿ ತುಪ್ಪ ಸವರಿ ಕೊಡುತ್ತಿದ್ದರು)

ವರ್ಷಕ್ಕೆ ಬೇಕಾದಷ್ಟು ಹಪ್ಪಳ ಸಂಡಿಗೆ ಇಂತಹುಗಳನ್ನು ದೊಡ್ಡ ದೊಡ್ಡ ಡಬ್ಬಗಳಲ್ಲಿ ಅಥ್ವಾ ಮಣ್ಣಿನಿಂದಲೆ ಮಾಡಿದ ಗುಡಾಣ ದಲ್ಲಿ(ಸುಮಾರು ನಾಲ್ಕು ಅಡಿಯಷ್ಟು ಎತ್ತರದಿಂದ ಸಿಗುತ್ತಿದ್ದ ಇದರ ಹೊಟ್ಟೆಯ ಭಾಗ ದಪ್ಪವಿದ್ದು ಮೇಲ್ಭಾಗ ಮತ್ತು ಕೆಳಭಾಗ ಚಿಕ್ಕದಿರುತ್ತದೆ. ಇದನ್ನು ನೋಡಿಯೇ ದಪ್ಪ ಹೊಟ್ಟೆಗೆ ಗುಡಾಣ ಎನ್ನುವ ಹೆಸರು ಬಂದಿರಬಹುದು) ಸಂಗ್ರಹಿಸಿ ಇಡುತ್ತಿದ್ದರು. ಇನ್ನೊಂದು ಕಲ್ಲುಸೋರೆ/ ಕಲಮರಿಗೆ, ಉಪ್ಪಿನಕಾಯಿಯನ್ನು ಶೇಖರಿಸಿ ಇಡುತ್ತಿದ್ದ ಬಳಪದ ಕಲ್ಲಿನಿಂದ ಮಾಡಿದ ಪಾತ್ರೆ ಇವೆರಡೂ ಸಹ ಈಗ ಕಣ್ಮರೆ ಆಗಿವೆ. ಕಲಮರಿಗೆ ಜಾಗವನ್ನು ಪಿಂಗಾಣಿ ಜಾಡಿಗಳು ಅವರಿಸಿದ್ದವು ಕೆಲ ದಿನ. ಈಗ ಎಲ್ಲವೂ ಟಪ್ಪರ್ವೇರ್ ಮಯ.

ಫೋಟೋ ಕೃಪೆ : swathichatrapathy

ರೊಟ್ಟಿ ದೋಸೆ, ಒಬ್ಬಟ್ಟುಗಳನ್ನ ಮಾಡಲು ಉಪಯೋಗಿಸುತ್ತಿದ್ದ ದಪ್ಪ ಕಬ್ಬಿಣದ ಕಾವಲಿಯ ಜಾಗಕ್ಕೆ ನಾನ್ಸ್ಟಿಕ್ ತವಾಗಳು ಬಂದಿವೆ, ಎಣ್ಣೆ ಹಾಕದೆ ಮಾಡಬಹುದು ಎನ್ನುವ ಕಾರಣಕ್ಕೆ. ಆದರೆ ಅವಕ್ಕೆ ಹಾಕಿರುವ ಟೆಫ್ಲಾನ್ ‌ಕೋಟಿಂಗ್ನಿಂದ ಉದ್ಭವವಾಗುವ ಆರೋಗ್ಯ ಸಮಸ್ಯೆಗಳು ಸಾಕಷ್ಟು.

ಕಾಲಾನಂತರದಲ್ಲಿ ಮಣ್ಣಿನ ಒಲೆಯ ಜಾಗವನ್ನು ಸೀಮೆ ಎಣ್ಣೆಯಿಂದ ಉರಿಯುವ ಬತ್ತಿ ಸ್ಟೋವ್ ಗಳು ಹಾಗೂ ಪಂಪ್ ಸ್ಟೌವ್ ಗಳು, ವಿದ್ಯುತ್ ಒಲೆಗಳು ಕೆಲವು ಮನೆಗಳಲ್ಲಿ ಬಂದರೂ ಬಡವರ ಮನೆಯಲ್ಲಿ, ಹಳ್ಳಿಗಳಲ್ಲಿ ಹೆಚ್ಚಾಗಿ ಸೌದೇ ಒಲೆಯೆ ಹಸಿದ ಹೊಟ್ಟೆಗೆ ಅನ್ನ ಬೇಯಿಸುವ ಕಾರ್ಯದಲ್ಲಿ ಮಂಚೂಣಿಯಲ್ಲಿ ಇದ್ದವು. ಕೆಲ ವರ್ಷಗಳ ಕಾಲ ದನದ ಸಗಣಿಯಿಂದ ಉತ್ಪತ್ತಿ ಆಗುವ ಗ್ಯಾಸ್ ಉಪಯೋಗಿಸು ತ್ತಿದ್ದುದೂ ಇದೆ ದನಕರುಗಳು ಇದ್ದ ಮನೆಗಳಲ್ಲಿ. (ಗೋಬರ್ ಗ್ಯಾಸ್)

ಹಿತ್ತಾಳೆ, ತಾಮ್ರ ಮತ್ತು ಮಣ್ಣಿನ ಪಾತ್ರೆಗಳ ಜಾಗವನ್ನು ನಿಧಾನವಾಗಿ ಆದರೆ ಭದ್ರವಾಗಿ ಆಕ್ರಮಿಸಿದ್ದು ಬೆಳ್ಳಿಯ ಬಣ್ಣದ ಇಂಡಾಲಿಯಂ ಅಥವಾ ಅಲ್ಯುಮಿನಿಯಂ ಪಾತ್ರೆಗಳು. ಅಡಿಗೆ ಮಾಡುವ ಪಾತ್ರೆಗಳು, ಕುಡಿಯುವ ಲೋಟ, ಊಟದ ತಟ್ಟೆ ಎಲ್ಲ ಬಂದವು. ಆ ಕಾಲಕ್ಕೆ ತುಂಬಾ ಶ್ರೀಮಂತರ ಮನೆಯಲ್ಲಿ ಮಾತ್ರ ಕಾಣ ಬರುತ್ತಿದ್ದ ಸ್ಟೀಲ್ ಪಾತ್ರೆಗಳು ಇಂದು ಎಲ್ಲರ ಅಡಿಗೆ ಮನೆಯಲ್ಲೂ ರಾರಾಜಿಸುತ್ತಿವೆ.



ಈಗ ಸೌದೇ ಒಲೆ, ಸೀಮೆ ಎಣ್ಣೆ ಸ್ಟೌವ್ ಗಳ ಜಾಗಕ್ಕೆ ಗ್ಯಾಸ್ ಒಲೆಗಳು, ಕರೆಂಟ್ ನಿಂದ ಅಡಿಗೆ ಮಾಡೋ ಇಂಡಕ್ಷನ್ ಸ್ಟೌವ್ ಗಳು ಬಂದಿವೆ. ಹಾಗೆ ಅವುಗಳ ಮೇಲೆ ಇಡುವ ಪಾತ್ರೆಗಳು ಹೆಚ್ಚಾಗಿ ಸ್ಟೀಲ್ ಆದರೂ ಕುಕ್ಕರ್ಗಳು , ದೊಡ್ಡ ದೊಡ್ಡ ಸಮಾರಂಭದಲ್ಲಿ ಅಡಿಗೆ ಮಾಡುವ ಪಾತ್ರೆಗಳು ಮಾತ್ರ ಇಂಡಾಲಿಯಂನವು ಚಾಲ್ತಿಯಲ್ಲಿವೆ.

ಒರಳು ಕಲ್ಲಿನ ಜಾಗಕ್ಕೆ ಮಿಕ್ಸಿ ಗ್ರೈಂಡರ್ ಗಳು ಬಂದು, ಗಂಟೆಗಟ್ಟಲೆ ಕುಳಿತು ರುಬ್ಬಿ ಮಾಡಲು ಕಷ್ಟವಾಗಿ ಅಪರೂಪಕ್ಕೆ ತಯಾರಾಗುತ್ತಿದ್ದ ದೋಸೆ, ಇಡ್ಲಿ, ವಡೆ ಕಡುಬುಗಳು ದಿನ ನಿತ್ಯದ ಅಹಾರಗಳಾಗಿವೆ. ದೋಸೆ ಇಡ್ಲಿಗಳನ್ನು ಮಿಕ್ಸಿಯಲ್ಲಿ ರುಬ್ಬಿ ಮಾಡಿದರೆ ಸುಮ್ಮನೆ ತಿನ್ನುವ ಅದೆಷ್ಟೋ ಜನರು ಇಂದಿಗೂ ಗೊಣಗೊದು ಮಾತ್ರ ಇವೆಲ್ಲದರ ಜೊತೆಗೆ ತಿನ್ನುವ ಚಟ್ನಿಯ ವಿಷಯಕ್ಕೆ. ರುಬ್ಬೋ ಕಲ್ಲಿನಲ್ಲಿ ಮಾಡುತ್ತಿದ್ದ ಚಟ್ನಿಯ ರುಚಿ ಇದಕ್ಕಿಲ್ಲ ಎಂದು. ಆದರೆ ಈಗಿನ ಚಿಕ್ಕ ಚಿಕ್ಕ ಅಡಿಗೆ ಮನೆಯಲ್ಲಿ ಒರಳು ಕಲ್ಲಿಗೆ ಜಾಗವಿಲ್ಲ‌, ಇದ್ದರೂ ದಿನವೂ ಇದನ್ನು ಉಪಯೋಗಿಸಲು ಸಮಯಾಭಾವ, ಎಲ್ಲಕ್ಕಿಂತ ಹೆಚ್ಚಾಗಿ ರುಬ್ಬುವ ಮನಸ್ಸುಗಳೂ ಈಗಿಲ್ಲ.

ಅಡಿಗೆ ಮಾಡುವ ಪಾತ್ರೆ ,ಒಲೆಗಳು ಬದಲಾದಂತೆ ಅಡಿಗೆ ಮಾಡುವ ಸಮಯ ಗಣನೀಯವಾಗಿ ಕಡಿಮೆ ಆಗಿದೆ. ಹಿಂದೆಲ್ಲ ಒಲೆ ಉರಿ ಆಗಾಗ ನೋಡುತ್ತಾ, ಅಕ್ಕಿ ಬೇಳೆ ತರಕಾರಿ ಬೇಯಲು ಹಾಕಿದರೆ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಇಂದು ಪೂರ್ಣ ಅಡಿಗೆಯೇ ಮುಗಿದು ಹೋಗಿರುತ್ತದೆ ಕುಕ್ಕರ್ ಎನ್ನುವ ಮಾಯಾ ಪಾತ್ರೆ, ಮಿಕ್ಸಿ ಗ್ಯಾಸ್ಗಳ ಸಹಾಯದಿಂದ.

ಫೋಟೋ ಕೃಪೆ : Shutterstock

ಈಗ ಅಡಿಗೆ ಮನೆ ಎಂದರೆ ಗ್ರಾನೈಟ್ ಕಟ್ಟೆಯ ಮೇಲೆ ಕಾಣೋದು ಗ್ಯಾಸ್ ಸ್ಟೌವ್ ಅದರ ಮೇಲೊಂದು ಚಿಮಣಿ, ಕುಕ್ಕರ್, ಮಿಕ್ಸರ್, ಓವನ್ ಕಾಫೀ ಮೇಕರ್ ಜೊತೆಗೊಂದು ಫ್ರಿಡ್ಜ್. ಮಿಕ್ಕೆಲ್ಲವೂ ಮುಚ್ಚಿದ ಬಾಗಿಲಿನ ಒಳಗೇ ಸೇರಿದ್ದು, ಸಮಯಕ್ಕೆ ಮಾತ್ರ ಹೊರಗೆ ಬರುತ್ತವೆ.

ಕೆಲವು ಮನೆಗಳಲ್ಲಿ ಅಡಿಗೆ ಮನೆ ನೆಪ ಮಾತ್ರಕ್ಕೆ ಇರುತ್ತದೇನೋ ಅನ್ನೋ ಅನುಮಾನ ಮೂಡುತ್ತದೆ. ಮಾಡುವ ಮನಸ್ಸುಗಳೇ ಇರೋದಿಲ್ಲ. ಕೆಲವರು ಅಪರೂಪಕ್ಕೆ ಹೋಟೆಲ್ಗೆ ಹೋಗಿ ತಿಂದು ಬಂದರೆ ಇನ್ನೂ ಕೆಲವು ಮನೆಗಳಲ್ಲಿ ಅಪರೂಪಕ್ಕೆ ಅಡಿಗೆ ಮಾಡುತ್ತಾರೆನೋ ಅನಿಸುವಂತೆ ಹೋಟೆಲ್ಗೆ ಭೇಟಿನೀಡುತ್ತಾರೆ. ಈಗೀಗ ಹೋಟೆಲ್ಗೆ ಹೋಗಬೇಕು ಅಂತೇನೂ ಇಲ್ಲ, ಒಂದು ಫೋನ್ ಮಾಡಿದರೆ ಸಾಕು, ಬಯಸಿದ್ದೆಲ್ಲ ಕಣ್ಣ ಮುಂದೆ ಹಾಜರ್, ಅಲ್ಲ ಉದ್ ದಿನ್ ನ ಅದ್ಭುತ ದೀಪದ ಕಥೆಯಂತೆ. ಎಣಿಸಲು ಹಣ ಒಂದು ಇದ್ದರೆ ಸಾಕು. ಇನ್ನು ಕೆಲವು ಮನೆಗಳಲ್ಲಿ “ರೆಡಿ ಟು ಈಟ್ ” ಪ್ಯಾಕೆಟ್ ಗಳನ್ನು ತಂದು ಇಟ್ಟಿರುತ್ತಾರೆ. ಅವುಗಳನ್ನು ಬಿಸಿ ನೀರಿಗೆ ಹಾಕಿದರೆ ಸಾಕು, ಸಾರು ಗೊಜ್ಜು , ಪಲ್ಯ,ಪಾಯಸ ಎಲ್ಲ ರೆಡಿ. ಹಲವಾರು ವಿಧದ ರೈಸ್ ಬಾತ್ ಗಳ ಪ್ಯಾಕೆಟ್ ಸಿಗುತ್ತವೆ ಅವನ್ನು ತಂದು ಅನ್ನ ಒಂದು ಮಾಡಿ ಹಾಕಿ ಕಲೆಸಿದರೆ ನಿಮಿಷಗಳಲ್ಲೇ ಧಿಡೀರ್ ಅಡಿಗೆ ತಯಾರ್. ಉಪ್ಪಿಟ್ಟು, ಇಡ್ಲಿ, ದೋಸೆ, ಚಿತ್ರಾನ್ನ, ಪುಳಿಯೋಗರೆ, ಟಮೋಟೋ ಬಾತ್ , ವಡೆ, ಸೂಪ್ ಇನ್ನೂ ಏನುಬೇಕೋ ಎಲ್ಲವೂ ಕ್ಷಣಾರ್ಧದಲ್ಲೇ ತಯಾರಾಗುತ್ತವೆ, ಕೇಳಿದ್ದೆಲ್ಲ ನೀಡುತ್ತಿತ್ತು ಎಂದು ಹೇಳಲಾಗುವ ಕಾಮಧೇನುವಿನ ರೀತಿ ಈ ರೆಡಿ ಟು ಈಟ್ ಪ್ಯಾಕ್ಗಳು.

ಫೋಟೋ ಕೃಪೆ : Inc2

ಇನ್ನು ಮೂರು ನಿಮಿಷದಲ್ಲಿ ತಯಾರಾಗುವ ಮ್ಯಾಗಿ ನೂಡಲ್ಸ್ ಎನ್ನುವ ಯುವ ಜನತೆಯ ನೆಚ್ಚಿನ ಆಹಾರ ನಮ್ಮ ಹಳೆಯ ಕಾಲದ ಶಾವಿಗೆಯ ಹೊಸ ರೂಪವಾದರೆ, ತಾಲಿಪಿಟ್ಟಿನ ಹೊಸರೂಪ ಪಿಜ್ಜಾ. ಚಕ್ಕುಲಿ ಕೋಡುಬಳೆ, ನಿಪ್ಪಟ್ಟಿನ ಜಾಗದಲ್ಲಿ ಚಿಪ್ಸ್, ಲೇಸ್, ಕುರ್ಕುರೆಗಳು. ಕರಿದದ್ದು ತಿಂದರೆ ಆರೋಗ್ಯ ಹಾಳು ಎನ್ನುವ ವಿದ್ಯಾವಂತ ಮಂದಿಯೇ ಸಂಸ್ಕರಿಸಿದ, ಮೈದಾ ಹಿಟ್ಟಿನಿಂದ ಮಾಡಿದ್ದನ್ನು ಚಪ್ಪರಿಸಿ ತಿನ್ನುವುದು ಅಲ್ಲದೆ ಮಕ್ಕಳಿಗೂ ತಿನಿಸುತ್ತಾರೆ.

ಸರಿ ರಾತ್ರಿ ಮನೆಗೆ ನೆಂಟರು ಬಂದರೂ ಒಲೆ ಉರಿಸಿ, ಕುಟ್ಟಿ ,ತಿರುವಿ ಅಡಿಗೆ ಮಾಡಿ ಬಡಿಸುತ್ತಿದ್ದ ಗೃಹಿಣಿಯರು ಇದ್ದ ನಮ್ಮದೇ ನೆಲದಲ್ಲಿ ಇಂದು ಫೋನ್ ಮಾಡಿ ಬಂದರೂ ವಿಶೇಷ ಅಡಿಗೆ ಇರಲಿ, ಮಾಮೂಲಿ ಅನ್ನ ಸಾರು ಮಾಡಿ ಹಾಕುವುದೇ ಕಷ್ಟವಾಗಿದೆ ಎಲ್ಲ ಸಲಕರಣೆಗಳು ಇದ್ದರೂ. ಹಿಂದೆ ಹೋಟೆಲ್ ಇಟ್ಟವರನ್ನು ಅನ್ನ ಮಾರಿ ಜೀವನ ಮಾಡುತ್ತಾರೆ ಎಂದು ಕೀಳಾಗಿ ಕಾಣುತ್ತಿದ್ದಂತೆ, ಅದೇ ಈಗ ಹೋಟೆಲ್ ಉದ್ಯಮ ಕಂಡಷ್ಟು ಯಶಸ್ಸು ಬೇರಾವುದೂ ಕಂಡಿಲ್ಲ ಎನ್ನುವಂತಾಗಿದೆ. ರಸ್ತೆಗೆ ಮೂರ್ನಾಲ್ಕು ಹೋಟೆಲ್, ದರ್ಶಿನಿ ಕಾಫಿ ಶಾಪ್ಗಳು, ಎಲ್ಲದರ ತುಂಬಾ ನೊಣದಂತೆ ಮುತ್ತಿಕೊಂಡ ಜನಗಳೇ ಇದಕ್ಕೆ ಸಾಕ್ಷಿ.

ಹಿಂದೆಲ್ಲ ಮಾಡಿದ ಅಡಿಗೆಯನ್ನು ಸಣ್ಣ ಪಾತ್ರೆಯಲ್ಲಿ ತಂದು ಬಡಿಸುವ ಪರಿಪಾಠ ಇತ್ತು. ಈಗ ಮಾಡಿದ ಅಡಿಗೆಯನ್ನು ಸುಂದರ ಗಾಜಿನ ಪಾತ್ರೆಗಳಲ್ಲಿ ಹಾಕಿ, ಅಲಂಕರಿಸಿ #ಡೈನಿಂಗ್_ಟೇಬಲ್ ಮೇಲೆ ಜೋಡಿಸಿ ಫೋಟೋ ತೆಗೆದು ಸೋಷಿಯಲ್ ಮೀಡಿಯಾ ಗಳಲ್ಲಿ ಹಾಕುವುದು ಮಾಮೂಲು. ಶುಭ್ರವಾಗಿ ಕೈ ತೊಳೆದು ನೆಲದ ಮೇಲೆ ಚಾಪೆ ಹಾಸಿ ಕಾಲು ಮಾಡಿಸಿ ಕುಳಿತು ಊಟ ಮಾಡುವ ಕಾಲ ಎಂದೋ ಮುಗಿದು ಹೋಗಿದೆ. ಕಲೆಸಿಟ್ಟಿದ್ದನ್ನು ಏನು ಎಂದೂ ನೋಡದೇ ಟಿವಿ, ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಮುಳುಗಿ ಚಮಚೆಯಿಂದ ತಿನ್ನುವುದೇ ಈಗಿನ ಹೈ ಸೊಸೈಟಿಯಲ್ಲಿ ಪ್ರತಿಷ್ಠೆಯ ಸಂಕೇತ.

ಫೋಟೋ ಕೃಪೆ : verywellfit

ಕೈತುತ್ತು, ಬೆಳದಿಂಗಳ ಊಟ, ತೋಟದಲ್ಲಿ ಊಟ ಇವೆಲ್ಲ ನಾವುಗಳು ಮಾಡಿದ್ದು ಇದೇ ಜನ್ಮದಲ್ಲೋ ಕಳೆದ ಜನ್ಮದಲ್ಲೋ ಅನಿಸುವಂತೆ ಆಗಿದೆ. ಮಾಡಿದ ಅಡಿಗೆಯನ್ನು ಮನೆಯ ಹಿರಿಯರಲ್ಲಿ ಯಾರಾದ್ರೂ ಒಬ್ಬರು ಕಲೆಸಿ ಸುತ್ತಾ ಮಕ್ಕಳನ್ನು ಕೂರಿಸಿಕೊಂಡು ಕೈ ತುತ್ತು ಹಾಕುತ್ತಿದ್ದರೆ, ಮಾಡಿದ ಅಡಿಗೆಯೆಲ್ಲ ಖಾಲಿಯಾಗುತ್ತ ಇದ್ದದ್ದು ಗೊತ್ತೇ ಆಗುತ್ತಿರಲಿಲ್ಲ. ಬೆಳದಿಂಗಳ ರಾತ್ರಿಯಲ್ಲಿ ಮಾಡಿದ ಅಡಿಗೆಯನ್ನು ತಂದು ಟೆರೆಸ್ ಮೇಲೋ, ಮನೆಯ ಮುಂದಿನ ವಿಶಾಲ ಅಂಗಳದಲ್ಲಿಯೊ ಇಟ್ಟುಕೊಂಡು ಎಲ್ಲರೂ ಸೇರಿ ಊಟ ಮಾಡುತ್ತಿದ್ದ ಬೆಳದಿಂಗಳ ಊಟ ಈಗ ಕನಸಾಗಿದೆ. ತೋಟದಲ್ಲಿ ಊಟ ಅನ್ನುವುದು ಒಂದು ಮಾತ್ರ ಈಗ ಪಿಕ್ನಿಕ್ ಹೆಸರಿನಲ್ಲಿ ಚಾಲ್ತಿಯಲ್ಲಿದೆ ಅನ್ನಬಹುದು ಅದೂ ಮನೆಯ ಗೃಹಿಣಿಗೆ ಅಡಿಗೆ ತಯಾರಿಯಲ್ಲಿ ಅಭಿರುಚಿ ಇದ್ದರೆ, ಇಲ್ಲದಿದ್ದರೆ ಆಗಲೂ ಹೋಟೆಲ್ ಊಟವೇ ಗತಿ.

ಈಗ ಮಾಡುವ ಅಡಿಗೆಗಳೂ ಬದಲಾಗುತ್ತಾ ಬಂದಿವೆ, ಹಿಂದೆಲ್ಲ ಆರೋಗ್ಯಕ್ಕೆ ಒತ್ತು ಕೊಟ್ಟು ಬೇಳೆ ಕಾಳುಗಳು, ಸಮೃದ್ಧವಾಗಿ ತರಕಾರಿ, ಮನೆಯಲ್ಲೇ ಮಾಡಿದ ತುಪ್ಪವನ್ನು ಬಳಸಿ, ಉಪ್ಪು ಹುಳಿ ಖಾರ ಎಲ್ಲವನ್ನೂ ಹದವಾಗಿ ಬೆರೆಸಿ ಮಾಡುತ್ತಿದ್ದ ರುಚಿಕರ ಅಡಿಗೆಯ ಜಾಗದಲ್ಲಿ ಎಲ್ಲವನ್ನೂ ಮಿತವಾಗಿ ಹಾಕಿ ಡಯಟ್ ಫುಡ್ ಎನ್ನುವ ಹೆಸರಿನಲ್ಲಿ ಉಪ್ಪು ಹುಳಿ ಖಾರ ಎಲ್ಲದಕ್ಕೂ ಕಡಿವಾಣ ಹಾಕಿಕೊಂಡು ತಿನ್ನುವಹಾಗಾಗಿದೆ. ತುಪ್ಪದ ಜಾಗದಲ್ಲಿ ಟಿವಿ ಯಲ್ಲಿ ಬರುವ ನೂರಾರು ಕಂಪನಿಗಳ ಹೃದಯಕ್ಕೆ ಒಳ್ಳೆಯದು, ಕೊಲೆಸ್ಟ್ರಾಲ್ ಇಲ್ಲದ್ದು, ಆರೋಗ್ಯಕ್ಕೆ ಪೂರಕ ಎಂದೆಲ್ಲ ಹೇಳುವ ಅಡಿಗೆ ಎಣ್ಣೆಗಳು ಬಂದಿವೆ, ಜೊತೆಗೆ ಕೀಲು ನೋವು ಉಚಿತವಾಗಿ ಸಿಕ್ಕಿದೆ.

ಇಷ್ಟೆಲ್ಲ ಆದರೂ ಹಿಂದೆ ಉಪ್ಪು ಖಾರ ಹುಳಿ , ಕರಿದ ಪದಾರ್ಥಗಳು, ಎಣ್ಣೆ ತುಪ್ಪ ಎಲ್ಲವನ್ನೂ ಹೆಚ್ಚಾಗಿಯೇ ತಿನ್ನುತ್ತಿದ್ದ ಜನರು ಇದ್ದಷ್ಟು ಆರೋಗ್ಯವಾಗಿ ನಾವಿಲ್ಲ, ಅವರು ಬದುಕುತ್ತಿದ್ದಷ್ಟು ದಿನ ಬದುಕುವುದೂ ಕಷ್ಟವಾಗಿದೆ. ಉಪ್ಪು ತಿಂದರೆ ಬಿಪಿ, ಖಾರ ತಿಂದರೆ #ಗ್ಯಾಸ್ಟ್ರಿಕ್/ಅಲ್ಸರ್, ಹುಳಿ ತಿಂದರೆ ಅಲರ್ಜಿ ಎನ್ನುವಂತಾಗಿದೆ.

ಫೋಟೋ ಕೃಪೆ : Aldi

ತರಕಾರಿಗಳ ವಿಷಯಕ್ಕೆ ಬಂದರೆ ಈಗ ಎಲ್ಲೆಡೆ ರಸಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿ ಬೆಳೆದದ್ದೇ ಹೆಚ್ಚು. ತಿಂದರೆ ಅರೋಗ್ಯ ವೃದ್ಧಿಯಾಗುವುದರ ಬದಲು ಆರೋಗ್ಯ ಹಾಳಾಗುವುದೇ ಹೆಚ್ಚು. ಜೊತೆಗೆ ಸಮಯಾಭಾವ ಎಂದು ವಾರಕ್ಕೊ ಹತ್ತು ದಿನಕ್ಕೂ ಒಮ್ಮೆ ತಂದು ತಂಗಳು ಪೆಟ್ಟಿಗೆ (ಫ್ರಿಡ್ಜ್)ಯಲ್ಲಿಟ್ಟರೆ‌, ಅವನ್ನು ಬಳಸುವ ವೇಳೆಗೆ ಅದರಲ್ಲಿ ಇದ್ದ ಅಲ್ಪ ಸ್ವಲ್ಪ ಸತ್ವಗಳೂ ಕಾಣೆಯಾಗಿರುತ್ತವೆ.

ಸಿಹಿಯ ವಿಷಯಕ್ಕೆ ಬಂದರೆ ನಮ್ಮ ಪೂರ್ವಿಕರು ಬೆಲ್ಲ ಕೊಟ್ಟರೂ ತಂಬಿಟ್ಟಿಗೆ ಇನ್ನೂ ಸ್ವಲ್ಪ ಬೆಲ್ಲ ಬೇಕಿತ್ತು ಎನ್ನುತ್ತಿದ್ದರಂತೆ. ಒಬ್ಬರು ಏಳೆಂಟು ಒಬ್ಬಟ್ಟನ್ನು ತುಪ್ಪ, ಹಾಲು, ಮಾವಿನ ರಸಾಯನ ಅಥವಾ ಪಾಯಸದ ಜೊತೆ ಜೊತೆಗೆ ತಿನ್ನುತ್ತಿದ್ದರೆ ಈಗ ಅದೇ ಎಂಟು ಒಬ್ಬಟ್ಟು ಇಡೀ ಮನೆಯ ಜನಕ್ಕೆ ಆಗಿ ಉಳಿಯುತ್ತದೆ. ಸಮಾರಂಭಗಳಲ್ಲಿ ಪಂಥ ಕಟ್ಟಿ ಸಿಹಿ ತಿನ್ನುವವರೂ ಇದ್ದರು. ಹಾಗಿದ್ದರೂ ಆಗ ಬಾರದ ಸಕ್ಕರೆ ಖಾಯಿಲೆ ಈಗ ಮನೆಗೊಬ್ಬರಿಗಾದರೂ ಇದ್ದೆ ಇರುತ್ತೆ ಅನ್ನೋದು ಅಷ್ಟೇ ಸತ್ಯ.

ಹಿಂದೆ ಒರಳಿನಲ್ಲಿ ಕುಟ್ಟಿ, ಬೀಸಿ, ತಿರುವಿ ಅಡಿಗೆ ಮಾಡುವಾಗ ಕುಳಿತು ಎದ್ದು, ನೀರು ಸೇದಿ ಸಾಕಷ್ಟು ವ್ಯಾಯಾಮ ಆಗುತ್ತಿತ್ತು ಮಹಿಳೆಯರಿಗೆ, ಈಗ ಅದಾವುದೂ ಇಲ್ಲದೇ ಸುಲಭದಲ್ಲಿ ಆಗುವುದರಿಂದ ದೇಹಕ್ಕೆ ವ್ಯಾಯಾಮವೆ ಇಲ್ಲದಂತೆ ಆಗಿದೆ, ವ್ಯಾಯಾಮಕ್ಕೆ ಅಂತ ಹಣ ಕೊಟ್ಟು ಜಿಮ್ ಗೆ ಹೋದರೂ ಅಂದಿನವರ ಗಟ್ಟಿ ದೇಹದಂತೆ ಈಗ ಇಲ್ಲ ಎನ್ನುವುದು ಮಾತ್ರ ಸತ್ಯ.

ಅಡಿಗೆ, ಊಟದ ಕುರಿತಾಗಿ ಸಾಕಷ್ಟು ನಾಣ್ಣುಡಿಗಳು, ಗಾದೆಗಳು ಇವೆ. ಎಂಜಲು ಕೈಯಲ್ಲಿ ಕಾಗೆ ಓಡಿಸದವನು ಹಾಗೂ ದಾಸರ ಪದ “ಇಕ್ಕಲಾರೆ ಕೈ ಎಂಜಲು” ಇವು ಜಿಪುಣತನ ಸಾರಿದರೆ, “ಉಂಡ ಮನೆಗೆ ಎರಡು ಬಗೆಯಬೇಡ” “ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು ” ಇದರಲ್ಲಿ ಮೊದಲನೆಯದು ಅನ್ನ ನೀಡಿದವರಿಗೆ ಕೊನೆತನಕ ಕೃತಜ್ಞನಾಗಿರು ಎಂದರೆ,ಎರಡನೆಯದು ಅನ್ನ ಇಕ್ಕಿದರೆ ಕೈಲಾಸ ದೊರೆಯುವುದು ಎಂದೂ ಹೇಳುತ್ತದೆ. ದೊಡ್ಡೋರ ಮನೆ ನೋಟ ಚೆನ್ನ ಬಡವರ ಮನೆ ಊಟ ಚೆನ್ನ ಅಂತಾನೂ ಹೇಳ್ತಾರೆ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎನ್ನುವುದು ಊಟದಲ್ಲಿ ಉಪ್ಪಿಗೆ ಇರುವ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.

ಯಾರಾದರೂ ಊಟ ಮಾಡುವಾಗ ಸಮುದ್ರಕ್ಕೆ ಹತ್ತಿರವೇ ನಿಮ್ಮ ಮನೆ ಅಂದರೆ ಉಪ್ಪು ಹೆಚ್ಚಾಗಿದೆ ಎಂದೂ ಅದೇ ನಿಮ್ಮನೆ ಊಟ ಮಾಡಿದ ಮೇಲೆ ನನಗೆ ನವರಂದ್ರಗಳು ಇರೋದು ತಿಳೀತು ಅಂದ್ರೆ ಖಾರ ಹೆಚ್ಚಾಗಿದೆ ಅಂತಲೂ ಅರ್ಥ

‘ಇಂಗು ತೆಂಗು ಇದ್ದರೆ ಮಂಗನೂ ಅಡಿಗೆ ಮಾಡುತ್ತೆ’ ಅನ್ನೋದು ಹಳೆ ಗಾದೆ, ಇಂಗು ತೆಂಗು ಇಲ್ಲದೇನೂ ರುಚಿಕಟ್ಟಾದ ಅಡುಗೆ ಮಾಡಬಹುದು ಅನ್ನುತ್ತೆ ಈಗಿನ ಜನಾಂಗ.

ಸರ್ವಜ್ಞರ ವಚನಗಳಲ್ಲಿ ಅಡಿಗೆ ಊಟದ ಕುರಿತಾಗಿ ಕೂಡಾ ಹೇಳಿದ್ದಾರೆ.”ಹಸಿಯದಲೆ ಉಣಬೇಡ, ಹಸಿದು ಮತ್ತಿರಬೇಡ, ಬಿಸಿಬೇಡ , ತಂಗಳುಣಬೇಡ, ವೈದ್ಯನ ಸಂಗವೇ ಬೇಡ ಸರ್ವಜ್ಞ” ಎಂದು ಒಂದೆಡೆ ಹೇಳಿದರೆ, “ಉಂಡು ನೂರಡಿ ತಿರುಗಿ, ಕೆಂಡದಲಿ ಕೈ ಕಾಸಿ, ಬಲದಂಡ ಮೇಲಾಗಿ ಮಲಗಿದರೆ ವೈದ್ಯನ ಸಂಗವೇ ಬೇಡ ಸರ್ವಜ್ಞ” ಎಂದಿದ್ದಾರೆ.

ಫೋಟೋ ಕೃಪೆ : vegrecipesofindia

ಅಡಿಗೆಯಲ್ಲಿ ಮುಖ್ಯ ಪಾತ್ರ ವಹಿಸುವ ಮಸಾಲೆ ಪುಡಿ ಗಳನ್ನು ಹಿಂದೆ ಹೆಂಗಸರು ಮನೆಯಲ್ಲೇ ಹುರಿದು ಒರಳಿನಲ್ಲಿ ಕುಟ್ಟಿ ಮಾಡಿಟ್ಟು ಕೊಳ್ಳುತ್ತಿದ್ದರು. ನಂತರ ಹುರಿದು ಮಿಷನ್ ಗಳಿಗೆ ಹಾಕಿಸಿ ಪುಡಿ ಮಾಡಿಸಿಕೊಳ್ತ ಇದ್ದರು. ಈಗ ಇದಾವುದರ ಅವಶ್ಯಕತೆಯೇ ಇಲ್ಲ, ಅದೆಷ್ಟೋ ಬ್ರಾಂಡ್ಗಳ ಎಲ್ಲ ರೀತಿಯ ಪುಡಿಗಳೂ ಲಭ್ಯವಿದೆ. ಅಷ್ಟೇ ಅಲ್ಲ ಕೆಲವು ಮನೆಗಳ ಜನರ ಜೀವನಕ್ಕೆ ದಾರಿ ಆಗಿರುವುದು ಇದೆ ಪುಡಿಗಳನ್ನು ಮಾಡಿ ಮಾರಾಟ ಮಾಡಿ ಬರುವ ಹಣ. ಆದರೂ ಆಗಷ್ಟೇ ಹುರಿದು ಪುಡಿ ಮಾಡಿ ಹಾಕಿ ಮಾಡಿದ ಅಡಿಗೆಯ ರುಚಿಯ ಮುಂದೆ ಕೊಂಡು ತಂದ ಪುಡಿಗಳನ್ನು ಹಾಕಿ ಮಾಡಿದ ಅಡಿಗೆ ಸಪ್ಪೆ ಅನ್ನೋದು ನಿರ್ವಿವಾದ.

ನಮ್ಮ ದೇಶದಲ್ಲಿ ಬೆಳೆಯುವ ಮಸಾಲೆ ಪದಾರ್ಥಗಳು ರುಚಿಯ ಜೊತೆಗೆ ಆರೋಗ್ಯವನ್ನು ನೀಡುತ್ತವೆ. ಶುಂಠಿ, ಮೆಣಸು, ಲವಂಗ, ಏಲಕ್ಕಿ, ಜೀರಿಗೆ, ಕೊತ್ತಂಬರಿ, ಅರಿಶಿನ, ಮೆಂತ್ಯ ಇವುಗಳನ್ನು ನಿಯಮಿತವಾಗಿ ಬಳಸಿದರೆ ಹಲವಾರು ಖಾಯಿಲೆಗಳು ಹತ್ತಿರವೂ ಸುಳಿಯವುದಿಲ್ಲ. ಉಪಯೋಗಿಸುವ ವಿಧಾನ ತಿಳಿದಿರಬೇಕು ಅಷ್ಟೆ.

ಅಡಿಗೆ ಮತ್ತೆ ಅದರ ರುಚಿ ಎರಡೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಬದಲಾಗುತ್ತಾ ಹೋಗುತ್ತದೆ ಆಡು ಭಾಷೆಯಂತೆ. ಒಂದೆಡೆ ರಾಗಿ ಮುಖ್ಯ ಅಹಾರವಾದರೆ, ಇನ್ನೊಂದೆಡೆ ಜೋಳ, ಮತ್ತೊಂದೆಡೆ ಗೋದಿ, ಕೆಲವೆಡೆ ಭತ್ತ ಹೀಗೆ. ಹಾಗೆಯೇ ರುಚಿಯಲ್ಲಿ ಕೂಡಾ ವ್ಯತ್ಯಾಸ. ಕೆಲವೆಡೆ ಸಿಹಿ ಪ್ರಧಾನವಾದರೆ ಮತ್ತೆ ಕೆಲವು ಕಡೆ ಖಾರಕ್ಕೇ ಪ್ರಾಶಸ್ತ್ಯ. ಕೆಲವರಿಗೆ ತೆಂಗು ಇಲ್ಲದೆ ಅಡಿಗೆ ಆಗೋದೇ ಇಲ್ಲವಾದರೆ ಇನ್ನೂ ಕೆಲವರಿಗೆ ಈರುಳ್ಳಿ, ಟಮೋಟೋ ಬೇಕೇ ಬೇಕು.

ಫೋಟೋ ಕೃಪೆ : sailusfood

ಅಡಿಗೆ, ಅಡಿಗೆಮನೆ ಹೆಂಗಸರದೇ ಸಾಮ್ರಾಜ್ಯ ಎಂದರೂ ಮದುವೆ, ಮುಂಜಿ ಮುಂತಾದ ಭಾರಿ ಸಮಾರಂಭಗಳಲ್ಲಿ, ಹೋಟೆಲ್ಗಳಲ್ಲಿ ಅಡಿಗೆ ಮಾಡುವವರು ಹೆಚ್ಚಾಗಿ ಗಂಡಸರೇ. ಇನ್ನು ಅತೀ ರುಚಿಯಾದ ಅಡಿಗೆ ಊಟ ಮಾಡಿದರೆ ಜನ ಹೇಳೋದು “ಅಹಾ ಅದೆಂತಾ ನಳಪಾಕ ಅಂತೀರಾ” ಅಂತಾನೇ ಹೊರತು, ದಮಯಂತಿ ಪಾಕ ಎಂದಲ್ಲ. ನಳನಂತೆಯೇ‌ ರುಚಿಯಾದ ಅಡಿಗೆಗೆ ಹೆಸರಾದವನು ನಮ್ಮ ಮಹಾಭಾರತದ ಭೀಮಸೇನ.

ಕಾಲ ಯಾವುದೇ ಇರಲಿ, ಅಡಿಗೆ ಮಾಡುವ ಜಾಗ, ರೀತಿಗಳು, ಬಳಸುವ ಸಾಮಗ್ರಿಗಳು, ಪರಿಕರಗಳು, ತಿನ್ನುವ ರೀತಿ ಏನೇ ಬದಲಾದರೂ “ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ” ಎಂಬುದನ್ನು ಸರಿಯಾಗಿ ಅರ್ಥೈಸಿಕೊಂಡು, ಆಹಾರವೆ ಔಷಧಿ ಎಂದರಿತು ಅದರಂತೆ ನಡೆದರೆ ಅದೇ ಆರೋಗ್ಯಕ್ಕೆ ರಹದಾರಿ. ಅಡಿಗೆ ರುಚಿಯಾಗಿದೆ ಎಂದೋ, ಬಹಳ ಇಷ್ಟ ಎಂದೋ ಮಿತಿ ಮೀರಿ ಏನನ್ನೇ ತಿಂದರೂ ಅದು ಆರೋಗ್ಯ ಸಂಹಾರಿ ಆಗುವುದರಲ್ಲಿ ಸಂಶಯವಿಲ್ಲ. ಆಹಾರ ಔಷಧಿ ಆಗದಿದ್ದರೆ ಔಷಧಿಯೇ ಅಹಾರ ಆಗುವ ಸಾಧ್ಯತೆ ಹೆಚ್ಚು.


  • ವಸಂತ ಗಣೇಶ್ (ಸಾಹಿತಿಗಳು, ಲೇಖಕರು,ಚಿಂತಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading