ಕೆಲಸದವಳು ಹೊಸದಾಗಿ ಸೇರಿಕೊಂಡಿದ್ದಳು. ಮನೆಯೊಡತಿಗೆ ಇನ್ನೂ ಆಕೆಯ ಮೇಲೆ ನಂಬಿಕೆ ಬಂದಿರಲಿಲ್ಲ. ಹಾಗಾಗಿ ಆಕೆಯನ್ನು ಬಗೆ ಬಗೆಯಿಂದ ಪರೀಕ್ಷಿಸಲು ಆಕೆ ಮುಂದಾದಳು. ಎರಡು ದಿನ ಕಳೆದ ಮೇಲೆ ಸೋಫಾ ಮೇಲೆ ಬಿದ್ದಿದ್ದ ಹತ್ತರ ನೋಟನ್ನು ಕೆಲಸದಾಕೆ ಜೋಪಾನವಾಗಿ ಮನೆಯೊಡತಿಗೆ ತಂದುಕೊಟ್ಟಳು. ಮರು ದಿನ ಮಗನ ಕೋಣೆಯಲ್ಲಿ ಬಿದ್ದಿದ್ದ ಎೖವತ್ತರ ನೋಟನ್ನೂ ಆಕೆ ಅಷ್ಟೇ ಜೋಪಾನವಾಗಿ ಅಮ್ಮನವರ ಕೈಗೆ ತಂದು ಕೊಟ್ಟಳು.
ಮರು ದಿನ ಬಿಸಿಬೇಳೆ ಬಾತ್ ತುಂಬಿಕೊಟ್ಟಿದ್ದ ಸ್ಟೀಲ್ ಪಾತ್ರೆಯೂ ಯಾವ ತೊಂದರೆಯೂ ಇಲ್ಲದೆ ಮನೆಗೆ ವಾಪಸು ಬಂದಿತು. ಮತ್ತೆರಡು ದಿನಕ್ಕೆ ಅಂಗಡಿಯಿಂದ ಸೋಪಿನ ಪುಡಿ ತರಲು ಕೊಟ್ಟಿದ್ದ ಹಣದ ಚಿಲ್ಲರೆಯೂ ಜೋಪಾನವಾಗಿ ಹಿಂದಿರುಗಿ ಬಂದಿತು.
ಒಂದು ವಾರ ಕಳೆಯಿತು. ಇನ್ನೊಂದೆ ಕಡೆಯ ಪರೀಕ್ಷೆ ಅಂದುಕೊಂಡ ಮನೆಯೊಡತಿ ತನ್ನ ರೂಮಿನ ಮಂಚದ ಮೇಲೆ ಒಂದು ನಕಲೀ ಚಿನ್ನದ ಸರವನ್ನು ಬಿಸಾಕಿ ಹೊರಗೆ ಬಂದು ಹಾಲ್‌ನ ಸೋಫಾ ಮೇಲೆ ಕೂತು ಕೆಲಸದಾಕೆ ರೂಮಿ ನಿಂದ ಹೊರಬರುವುದನ್ನೇ ಕಾಯುತ್ತ ಕೂತಳು ಮೇಡಮ್ಮು.
ಆದರೆ ಮರುಕ್ಷಣಾನೇ ಹೊರಬಂದ ಕೆಲಸದಾಕೆ ಸೊಂಟದ ಮೇಲೆ ಕೈಯಿಟ್ಟು ನಿಂತು ಮನೆಯೊಡತಿಯನ್ನು ದಭಾಯಿಸಿದಳು.
‘ ಏನ್ರವ್ವ?… ಏನ್ ಅನ್ಕೊಂಡಿಬಿಟ್ಟೀದೀರಿ ನನ್ನ? ಆಂ…?’
‘ ಏನಾಯ್ತು ರತ್ನಮ್ಮ?’ – ಮನೆಯೊಡತಿ ಗಾಬರಿಯಿಂದ ಕೇಳಿದಳು.
‘ ಏನ್ರಮ್ಮಾ… ಆಂ? ನೀವು ಬಿಸಾಕೋ ಜುಜುಬೀ ಹತ್ತು ರೂಪಾಯ್ಗೆ, ಐವತ್ತು ರೂಪಾಯ್ಗೆ, ಜುಜುಬೀ ಡೂಪ್ಲಿಕೇಟು ಸರಕ್ಕೆ ಬಾಯಿ ಬಿಟ್ಕೊಂಡು ಕೂತ್ಕೊಳ್ಳೋ ಚೀಪೇನ್ರಮ್ಮಾ ನಾನು? ನನ್ನ ಅಷ್ಟು ಚೀಪಾಗಿ ಕಾಣ್ಬೇಡಿ ಕಣವ್ವ. ಬಿಸಾಕೋ ತಾಕತ್ತಿದ್ರೆ ಜಯಾಲುಕ್ಸು ಇಲ್ಲಾ ಮಲಬಾರ್ ಗೋಲ್ಡು ನೆಕ್ಲೇಸು ಬಿಸಾಕಿ. ಹಾಂ! ಮಗಳ ಮದ್ವೆಗೆ ಲಕ್ಷ ಲಕ್ಷ ಚಿನ್ನ ಹಾಕ್ದೋಳು ನಾನು. ನಿಮ್ಮನೆ ಚಿಲ್ರೆ ಕೆಲ್ಸಾನೂ ಬೇಡ. ನೀವು ಕೊಡೋ ಜುಜುಬಿ ಚಿಲ್ರೆ ಸಂಬಳಾನೂ ಬೇಡ’.
ಎಂದು ಪೊರಕೆ ಅಲ್ಲೇ ಬಿಸಾಕಿ, ಹೊರಗಿದ್ದ ಹೈ ಹೀಲ್ಡ ಚಪ್ಪಲಿ ಮೆಟ್ಟಿ ಹೊರಟೇ ಹೋದಳು ಕೆಲಸದಾಕೆ.
‘ಚೀಪು.. ಚೀಪು’ ಅಂತ ಎರೆಡೆರಡು ಸಲ ಒತ್ತಿ ಹೇಳಿದ ಆಕೆಯ ಮಾತುಗಳು ಮನೆಯೊಡತಿಯ ನೆತ್ತಿಯನ್ನು ಕುಟ್ಟಿದಂತಾಯಿತು.
– ಸವಿತಾ ಪ್ರಭಾಕರ