ಎತ್ತುಗಳಲ್ಲಿ ಕೊಂಬಿನ ಕ್ಯಾನ್ಸರ್ – ಡಾ.ಎನ್.ಬಿ.ಶ್ರೀಧರ



ಕ್ಯಾನ್ಸರ್ ಎಂದರೆ ಗುಣವಾಗದ ಕಾಯಿಲೆ ಎನ್ನುವ ಭಯವಿದೆ. ಅನೇಕ ರೈತರು ಜಾನುವಾರುಗಳಲ್ಲಿ ಕ್ಯಾನ್ಸರ್ ಎಂದರೆ ಉದ್ಘಾರ ತೆಗೆಯುತ್ತಾರೆ. ಜಾನುವಾರುಗಳಲ್ಲಿ ಹಲವಾರು ಬಗೆಯ ಕ್ಯಾನ್ಸರ್‌ ಗಳಿವೆ. ಅವುಗಳಲ್ಲಿ ಕೊಂಬಿನ ಕ್ಯಾನ್ಸರ್ ಒಂದು. ಇದರ ಬಗ್ಗೆ ಮಾಹಿತಿ ನೀಡಿದ್ದಾರೆ ಡಾ.ಎನ್.ಬಿ.ಶ್ರೀಧರ ಅವರು. ಓದಿ ತಿಳಿದುಕೊಳ್ಳೋಣ…

ಎತ್ತುಗಳಲ್ಲಿ ಅಂದವಾದ ಕೊಂಬಿದ್ದರೆ ಅದಕ್ಕೆ ಒಂದು ತರಹದ ಶೋಭೆ. ಆದರೆ ಈ ಕೊಂಬುಗಳಿಗೇ ಕ್ಯಾನ್ಸರ್ ಬಂದು ಬಿಟ್ಟರೆ ? ರೈತರ ಗತಿ ಹರೋ ಹರ. ಉಳುಮೆಗೆ ಉಪಯೋಗಿಸುವ ಎತ್ತುಗಳ ತಳಿಗಳಾದ ಹಳ್ಳಿಕಾರ್, ಕಿಲಾರ್, ಅಮೃತ್ ಮಹಲ್, ದೇವಣಿ ಇತ್ಯಾದಿ ಉತ್ತಮ ಹಾಗೂ ದುಬಾರಿ ಎತ್ತುಗಳನ್ನು ಭಾಧಿಸುವ ಈ ಕಾಯಿಲೆ ಅಂಕಿ ಅಂಶಗಳ ಪ್ರಕಾರ ಶೇ ೧ ರಷ್ಟು ಜಾನುವಾರುಗಳಲ್ಲಿ ಅದರಲ್ಲೂ ಎತ್ತುಗಳಲ್ಲಿ ಬರುತ್ತದೆ ಎಂಬುದು ಅತಂಕಕಾರಿ ವಿಷಯ. ಕೊಂಬಿನ ಕ್ಯಾನ್ಸರ್ ಬಂದ ಎತ್ತುಗಳ ಚಿಕಿತ್ಸೆ ಕಷ್ಟಕರವಾದ ವಿಷಯವಾಗಿರುವುದರಿಂದ ರೈತರಿಗೆ ಈ ಕಾಯಿಲೆ ತುಂಬಾ ಆರ್ಥಿಕ ಸಂಕಷ್ಟ ತಂದೊಡ್ಡುತ್ತದೆ. ಅವರಿಗೆ ಮಾಹಿತಿ ನೀಡುವುದೇ ಈ ಲೇಖನದ ಉದ್ದೇಶ.

ಕಾರಣಗಳು:

ಮುಖ್ಯವಾದ ವಿಷಯವೆಂದರೆ ಇಲ್ಲಿಯವರೆಗೂ ಸಹ ಕೊಂಬಿನ ಕ್ಯಾನ್ಸರ್ ಹೇಗೆ ಮತ್ತು ಯಾಕೆ ಬರುತ್ತದೆ ಎಂಬುದು ಪ್ರಶ್ನಾರ್ಹವಾಗಿಯೇ ಉಳಿದಿದೆ. ಇದು ಅನುವಂಶೀಯವಾಗಿ ಕೆಲವು ತಳಿಯ ಎತ್ತುಗಳಲ್ಲಿ ಬರುತ್ತದೆ. ಅದರಲ್ಲೂ ದೇಶೀ ತಳಿಗಳು ಇದಕ್ಕೆ ಜಾಸ್ತಿ ತುತ್ತಾಗುತ್ತವೆ. ದಪ್ಪ ಕೋಡು ಹೊಂದಿದ ಕಾಂಕ್ರೇಜ್, ದೇವಣಿ ಮತ್ತು ಗಿರ್ ತಳಿಯಲ್ಲಿ ಇದು ಬಹಳ ಸಾಮಾನ್ಯ. ಉತ್ತರ ಕರ್ನಾಟಕದಲ್ಲಿ ಉಳುಮೆಗೆ ಉಪಯೋಗಿಸುವ ಎತ್ತುಗಳ ತಳಿಗಳಾದ ಹಳ್ಳಿಕಾರ್, ಕಿಲಾರ್, ಅಮೃತ್ ಮಹಲ್ ಇತ್ಯಾದಿಗಳಲ್ಲಿ ಇದರ ಸಂಭವ ಜಾಸ್ತಿ. ಕೋಣಗಳಲ್ಲೂ ಸಹ ಈ ಕಾಯಿಲೆ ಬರಬಹುದು. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎತ್ತುಗಳಲ್ಲಿ ಇದು ಕಡಿಮೆ.

ಮತ್ತೊಂದು ಮುಖ್ಯವಾದ ವಿಷಯವನ್ನು ರೈತರು ಗಮನಿಸಬೇಕಾದ್ದೆಂದರೆ, ಉಳುಮೆಗೆ ಉಪಯೋಗಿಸುವ ಎತ್ತುಗಳಲ್ಲಿ ಈ ಸಮಸ್ಯೆ ಜಾಸ್ತಿ. ಏಕೆಂದರೆ ಎತ್ತನ್ನು ಗಾಡಿಗೆ ಕಟ್ಟಿದಾಗ ಅಥವಾ ಉಳುಮೆಗೆ ಬಳಸುವಾಗ ನೊಗ ಪದೇ ಪದೆ ಕೊಂಬಿನ ಬುಡಕ್ಕೆ ಉಜ್ಜುತ್ತಿದ್ದಲ್ಲಿ ಅದರಿಂದ ಈ ಕಾಯಿಲೆಯ ಸಂಭವ ಹೆಚ್ಚು. ಕೆಲವು ರೈತರು ಎತ್ತಿನ ಕೊಂಬು ಸುಂದರವಾಗಿ ಕಾಣಿಸಲೆಂದು, ಅದನ್ನು ಮೇಲಿಂದ ಮೇಲೆ ಕೆತ್ತುತ್ತಾರೆ. ಅಲ್ಲದೇ ವಿವಿಧ ಬಗೆಯ ಬಣ್ಣಗಳನ್ನೂ ಸಹ ಹಚ್ಚುತ್ತಾರೆ. ಇದರಿಂದ ಕೊಂಬಿನ ಕ್ಯಾನ್ಸರಿನ ಸಾಧ್ಯತೆ ಜಾಸ್ತಿ. ಇದಲ್ಲದೇ ಹಲವಾರು ಪತ್ತೆಯಾಗದ ಕಾರಣಗಳಿಂದಲೂ ಸಹ ಈ ಪಿಡುಗು ಎತ್ತುಗಳನ್ನು ಬಾಧಿಸಬಹುದು.

ಲಕ್ಷಣಗಳು:

ಈ ಕಾಯಿಲೆ ಉದ್ದ ಕೊಂಬಿನ ಎತ್ತುಗಳಲ್ಲಿ ಸಾಮಾನ್ಯವಾಗಿ ಬರುತ್ತದೆ. ಪ್ರಾರಂಭಿಕ ಹಂತದಲ್ಲಿ ಕೋಡಿನ ಬುಡದಲ್ಲಿ ಮೇಣದಂತಹ ವಾಸನಾಯುಕ್ತ ಸ್ರಾವ ಶುರುವಾಗುತ್ತದೆ. ಕೆಲವೊಮ್ಮೆ ಮೂಗಿನಿಂದ ಸಣ್ಣದಾಗಿ ರಕ್ತ ಸ್ರಾವವೂ ಸಹ ಪ್ರಾರಂಭವಾಗಬಹುದು.

ಕೊಂಬಿನ ಬುಡದ ಒಳಗಿನಿಂದ ಗಡ್ಡೆಯು ಬೆಳೆಯಲು ಪ್ರಾರಂಭಿಸುತ್ತಿದ್ದ0ತೆ, ಎತ್ತು ನೋವಿನಿಂದ ಪದೇ ಪದೇ ಕೊಂಬುಗಳನ್ನು ಗೋಡೆಗೆ ಉಜ್ಜಲು ಪ್ರಾರಂಭಿಸುತ್ತದೆ. ತಲೆಯನ್ನು ಪದೇ ಪದೇ ಅಡ್ಡಡ್ಡ ಅಲುಗಾಡಿಸುತ್ತಾ ಗೋಡೆ ಇತ್ಯಾದಿಗಳಿಗೆ ಡಿಕ್ಕಿ ಹೊಡೆಯಲು ಪ್ರಾರಂಭಿಸುತ್ತದೆ. ಅಲ್ಲದೇ ಎತ್ತುಗಳು ತಲೇಯನ್ನು ಯಾವಾಗಲೂ ಕೆಳಗೆ ಹಾಕಿಕೊಂಡು ನಿಲ್ಲಬಹುದು. ನಂತರ ಕ್ರಮೇಣವಾಗಿ ಕೊಂಬು ಬಾಗಲು ಪ್ರಾರಂಭಿಸುತ್ತದೆ. ಕೊಂಬಿನ ಬುಡ ಚರ್ಮಕ್ಕೆ ಅಂಟಿದ ಸ್ಥಳದಲ್ಲಿ ಸಣ್ಣದಾಗಿ ಪ್ರಾರಂಭವಾಗುವ ಗಾಯ, ಕ್ರಮೇಣ ದೊಡ್ಡದಾಗುತ್ತಾ ಹೋಗುತ್ತದೆ. ಸೂಕ್ತ ಸಮಯದಲ್ಲಿ ಉತ್ತಮವಾದ ಚಿಕಿತ್ಸೆ ದೊರೆಯದೇ ಹೋದಲ್ಲಿ, ಕೊಂಬಿನ ಸುತ್ತ ವೃತ್ತಾಕಾರವಾದ ಗಾಯವಾಗಿ, ವೃಣವಾಗಿ, ಕೊಂಬು ಬಿದ್ದು ಹೋಗಬಹುದು. ಅಲ್ಲದೇ ತೀವೃವಾದ ರಕ್ತ ಸ್ರಾವವಾಗುವುದರಿಂದ ಜಾನುವಾರು ರಕ್ತ ಹೀನತೆಯಿಂದ ಬಳಲುತ್ತದೆ. ನಂತರ ಎತ್ತು ನಿಶ್ಯಕ್ತಗೊಂಡು ಮರಣವನ್ನಪ್ಪಬಹುದು.

ಪತ್ತೆ ಹಚ್ಚುವಿಕೆ ವಿಧಾನ:

ಈ ಕಾಯಿಲೆಯನ್ನು ಪತ್ತೆಹಚ್ಚುವುದು ಪ್ರಾರಂಭಿಕ ಹಂತದಲ್ಲಿ ಕಷ್ಟಕರ. ಕ್ಯಾನ್ಸರ್ ಗಡ್ಡೆಯು ಬೆಳೆಯುತ್ತಿದ್ದಂತೆ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಬಹುದು. ರೋಗ ಲಕ್ಷಣವನ್ನು ಅವಲಂಬಿಸಿ ಕಾಯಿಲೆಯನ್ನು ಪತ್ತೆ ಹಚ್ಚುವ ಸುಲಭಕ್ಕೆ ಲಭ್ಯವಿರುವ ವಿಧಾನವೆಂದರೆ ಕ್ಷಕಿರಣ ವಿಧಾನ. ಆದರೆ ಎಲ್ಲ ಕಡೆ ಈ ಸೌಲಭ್ಯ ಲಭ್ಯವಿಲ್ಲ. ಬಾಧೆಗೊಳಗಾಗಿರುವ ಕೊಂಬಿನ ಬುಡದ ಅಂಗಾಶದ ಬಯಾಪ್ಸಿಯನ್ನು ಪರೀಶೀಲಿಸಿದರೂ ಸಹ ರೋಗ ಪತ್ತೆಯಾದೀತು.

ಚಿಕಿತ್ಸೆ:

ಕ್ಯಾನ್ಸರ್ ಎಂದರೆ ಮನುಷ್ಯರಲ್ಲಿಯೇ ಉತ್ತಮವಾದ ಚಿಕಿತ್ಸೆ ಇಲ್ಲ. ಅದರಲ್ಲೂ ಪತ್ತೆ ಹಚ್ಚಲು ಕಷ್ಟಕರವಾದ ಈ ಪಿಡುಗಿನ ಚಿಕಿತ್ಸೆ ಕಷ್ಟಕರವೇ ನಿಜ. ಆದರೆ ರೋಗದ ಪ್ರಾರಂಭಿಕ ಹಂತದಲ್ಲಿ ಇಡೀ ಕೋಡನ್ನು ಬುಡ ಸಮೇತ ತಜ್ಞ ನುರಿತ ಶಸ್ತಚಿಕಿತ್ಸಾ ತಜ್ಞ ಪಶುವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು ಹಾಕಿದಲ್ಲಿ ಎತ್ತಿನ ಜೀವವನ್ನು ಕಾಪಾಡಬಹುದು. ಇದಕ್ಕೆ ರೈತರ ಇದಕ್ಕೆ ರೈತರ ಸಹಕಾರ ಬಹಳ ಮುಖ್ಯ ಬಹಳಷ್ಟು ರೈತರು ಎತ್ತಿನ ಕೊಂಬನ್ನು ತೆಗೆದರೆ ಅದರ ಅಂದಗೆಟ್ಟು ಅದರ ಬೆಲೆ ಹೊರಟು ಹೋಗುತ್ತದೆಂದು ಶಸ್ತ್ರ ಚಿಕಿತ್ಸೆಗೆ ಹಿಂಜರಿಯುತ್ತಾರೆ. ಎತ್ತಿನ ಜೀವಕ್ಕಿಂತ ಅದರ ಅಂದ ಮುಖ್ಯವಲ್ಲ ಎಂಬುದು ತಿಳಿದಿರಲಿ. ಇದು ಔಷಧಗಳಿಂದ ಗುಣಪಡಿಸಲು ಅಸಾಧ್ಯವೆಂದು ಹೇಳಬಹುದಾದ ಒಂದು ಕಾಯಿಲೆ.

ತಡೆಗಟ್ಟುವಿಕೆ:
ರೈತರು ಅವರ ಎತ್ತುಗಳ ಕೊಂಬನ್ನು ನಿಯಮಿತವಾಗಿ ಗಮನಿಸುತ್ತಾ ಇರಬೇಕು. ಯಾವುದೇ ಕಾರಣಕ್ಕೂ ಅಂದ ಅಥವಾ ಬೆಲೆ ಹೆಚ್ಚಿಸಲು ಕೊಂಬನ್ನು ಕೆತ್ತುವುದು, ಬಣ್ಣ ಹಚ್ಚುವುದು ಇತ್ಯಾದಿ ಕಾರ್ಯಗಳನ್ನು ಮಾಡಬಾರದು. ಎತ್ತುಗಳನ್ನು ಉಳುಮೆಗೆ ಅಥವಾ ಗಾಡಿಗೆ ಕಟ್ಟುವಾಗ ನೊಗ ಕೊಂಬಿನ ಬುಡಕ್ಕೆ ಉಜ್ಜದಂತೆ ಎಚ್ಚರ ವಹಿಸುವುದು ಒಳಿತು. ಪ್ರಾರಂಭಿಕ ಹಂತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದರೆ ಉತ್ತಮ ಪರಿಣಾಮ ಸಿಗಬಹುದು. ಚಿಕಿತ್ಸೆ ತಡವಾದಷ್ಟೂ ಗುಣವಾಗುವ ಸಾಧ್ಯತೆ ಕ್ಷೀಣಿಸುವುದು. ಕೊಂಬಿನ ಬುಡದಿಂದ ಸ್ರಾವವಾಗುತ್ತಿದ್ದಲ್ಲಿ ಮನೆಮದ್ದಿನ ಸಹವಾಸಕ್ಕೆ ಮತ್ತು ನಾಟಿ ವೈದ್ಯರ ಸಹವಾಸಕ್ಕೆ ಹೋಗದೇ ತಜ್ಞ ಪಶುವೈದ್ಯರನ್ನು ಶೀಘ್ರವೇ ಸಂಪರ್ಕಿಸಬೇಕು.

  • ಡಾ.ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW