ಕುಂತ್ರೆ ನಿಂತ್ರೆ ಬೇಂದ್ರೆ ಜ್ಞಾನ : ಬಾಣಾವರ ಶಿವಕುಮಾರ್

ಬೇಂದ್ರೆಯವರಿಂದ ಮತ್ತೊಬ್ಬ ಕಲಾವಿದನಿಗೆ ಪ್ರೋತ್ಸಾಹ ಸಿಕ್ಕಿತು ಅದುವೇ ಬಾ ಹುಕ್ಕೇರಿ ಬಾಳಪ್ಪ. ಒಬ್ಬರು ಶಬ್ಧ ಗಾರುಡಿಗರಾದರೆ ಇನ್ನೊಬ್ಬರು ಜಾನಪದ ಗಾನ ಗಾರುಡಿಗ. ಬೇಂದ್ರೆಯವರ ಕುರಿತು ಇನ್ನಷ್ಟು ಸ್ವಾರಸ್ಯಕರ ವಿಷಯಗಳನ್ನು ಬಾಣಾವರ ಶಿವಕುಮಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕವಿ ಬೇಂದ್ರೆ ಉದಾರಿ.

ಬೇಂದ್ರೆಯವರು ಧಾರವಾಡದಲ್ಲಿ ‘ಗೆಳೆಯರ ಗುಂಪು’ ಎಂಬ ಒಂದು ಸಾಹಿತ್ಯಾಸಕ್ತರ ಗುಂಪನ್ನು ೧೯೨೨ ರಲ್ಲಿ ಕಟ್ಟಿದರು. ಎಲ್ಲ ಸಮಾನ ಮನಸ್ಕರೂ ಸೇರಿ ಈ ಗುಂಪನ್ನು ಮುನ್ನಡೆಸಿದರು. ಗೆಳೆಯರ ಗುಂಪಿನಲ್ಲಿದ್ದ ಪ್ರಸಿದ್ಧರೆಂದರೆ ರಂ.ಶ್ರೀ. ಮುಗಳಿ, ಅರವಿಂದರನ್ನು ಬೇಂದ್ರೆಯವರಿಗೆ ಪರಿಚಯಿಸಿದ ಶ್ರೀಧರ್ ಖಾನೋಳ್ಕರ್, ವಿ.ಕೃ. ಗೋಕಾಕ, ಪ್ರಹ್ಲಾದ ನರೇಗಲ್ಲ, ಶಂಭಾ ಜೋಷಿ ಚುಳಕಿ ಗೋವಿಂದರಾಯರು, ಮ. ಗೋವಿಂದರಾವ್, ರಾಮರಾವ್ ಅಭ್ಯಂಕರ, ಶೇ.ಗೋ. ಕುಲಕರ್ಣಿ, ಜಡಭರತ (ಜಿ.ಬಿ. ಜೋಷಿ) ಮುಂತಾದವರು. ಇವರೆಲ್ಲಾ ಸಾಹಿತ್ಯ ಚರ್ಚೆ ಮಾಡುತ್ತಿದ್ದ ಪರಿ ತುಂಬಾ ಆಸಕ್ತಿಯುತವಾಗಿತ್ತು. ಎಲ್ಲರೂ ಪ್ರತಿಭಾಶಾಲಿಗಳೇ. ಒಮ್ಮೆಯಂತೂ ಗೋಕಾಕರು ತಾವು ಬರೆದ ಇಂಗ್ಲಿಷ್ ಕವಿತೆಗಳನ್ನು ಬೇಂದ್ರೆಯವರ ಮುಂದೆ ಓದಿ ತೋರಿಸಿದರು ಅದು ಬೇಂದ್ರೆ – ಗೋಕಾಕರ ಮೊದಲ ಭೇಟಿ. ಬೇಂದ್ರೆಯವರು ಶಾಂತ ಚಿತ್ತದಿಂದ ಆಲಿಸಿದರು. ತಮ್ಮ ಅಭಿಪ್ರಾಯಗಳನ್ನು ತುಸು ದೀರ್ಘವಾಗಿಯೇ ತಿಳಿಸಿದರು. ಅನಂತರ ಗೋಕಾಕರು ಕನ್ನಡದಲ್ಲಿ ಬರೆಯಲು ಮನಸ್ಸು ಮಾಡಿದರು. ಬೇಂದ್ರೆಯವರ ಮನೆಯಿಂದ ಎದ್ದಾಗ ಅವರೊಬ್ಬ ಬೇರೆಯೇ ವ್ಯಕ್ತಿಯಾಗಿ ರೂಪುಗೊಂಡಿದ್ದರು. ಅವರೇ ಒಂದೆಡೆ ಹೇಳಿರುವಂತೆ ‘ಬೇಂದ್ರೆಯವರು ಇಲ್ಲದಿದ್ದರೆ ನನ್ನ ಕಾವ್ಯ ಇಂಡೋ – ಇಂಗ್ಲಿಷ್ ಮರುಭೂಮಿಯಲ್ಲಿ ನಶಿಸಿ ಹೋಗುತ್ತಿತ್ತು’.ಗೆಳೆಯರ ಗುಂಪು ನಾಡಹಬ್ಬ,ಪಂಪೋತ್ಸವ, ವಿದ್ಯಾರಣ್ಯೋತ್ಸವ, ರವೀಂದ್ರೋತ್ಸವ, ಹೀಗೆ ಕೆಲವು ಸಾಹಿತ್ಯ ಉತ್ಸವಗಳನ್ನು ಸಂಘಟಿಸಿ ಕಾವ್ಯ ಮಂಥನ ಮಾಡುತ್ತಿದ್ದರು.

ವರ್ತಮಾನ ಪತ್ರಿಕೆಯನ್ನು ನಡೆಸುವುದು, ಎಲ್ಲ ಸಾಹಿತಿಗಳೂ ಒಂದೆಡೆ ನೆಲೆಸುವಂತೆ ಕಾಲೋನಿಗಳನ್ನು ರಚಿಸುವುದು ಮುಂತಾದ ಕನಸುಗಳು ಅವರ ಮನಸಿಲ್ಲಿತ್ತು. ಆದರೆ ಅವ್ಯಾವೂ ಕಾರ್ಯರೂಪಕ್ಕೆ ಬರಲಿಲ್ಲ. ಮುಂದಿನ ಹತ್ತು ವರ್ಷಗಳಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಆ ಗುಂಪು ಚದುರಿ ಹೋಯಿತು.

ಗೆಳೆತನದ ಭಾವನೆಗೂ ವಾಸ್ತವ ವ್ಯವಹಾರಕ್ಕೂ ಅಜಗಜಾಂತರ ಇರುವುದು ಗೊತ್ತಾದದ್ದೇ ಆಗ. ಇದು ಬೇಂದ್ರೆಯವರ ಮನಸ್ಸಿಗೆ ಬೇಸರವಾಗಲು ಕಾರಣವಾಯಿತು. ಆಗ ಬರೆದದ್ದು “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ” ಎಂಬ ಭಾವಗೀತೆ (೧೯೩೩). ಅದು ಅತ್ಯಂತ ಪ್ರಸಿದ್ಧವಾಯಿತು. ಹೀಗೆ ಜೀವನದ ಒಂದೊಂದು ಅನುಭವವೂ ಉತ್ತಮ ಕಾವ್ಯ ರಚನೆಗೆ ಸ್ಪೂರ್ತಿಯಾಯಿತು. ಗೆಳೆಯರ ಗುಂಪಿನ ಬಗ್ಗೆ ಅಪಾರ ನಂಬಿಕೆ ಮತ್ತು ಆಶಯವನ್ನಿಟ್ಟುಕೊಂಡ ಕವಿ ಬೇಂದ್ರೆಯವರ ಆಶಯ, “ನನ್ನದೊಂದು ಹೂವಿನಂಥ ಕೋರಿಕೆ ನನ್ನ ಹಿಂದೆ ಹಲವು ಬೀಜಗಳನ್ನು ಬಿಟ್ಟು ಉದುರುವುದಾಗಿದೆ” ಎಂಬುದಾಗಿತ್ತು.

ದೇಶದ ಬಿಡಗಡೆಗಾಗಿ ಹೋರಾಟಕ್ಕೂ ಸಿದ್ಧ,
ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಸಿಕ್ಕಿಬಿದ್ದ.

೧೯೩೨ರಲ್ಲಿ ಬೇಂದ್ರೆಯವರ ‘ಗರಿ’ ಕವನಸಂಕಲನ ಬಿಡುಗಡೆಯಾಯ್ತು. ಪ್ರಥಮ ಕವನಸಂಕಲನ ಬಿಡುಗಡೆಯಾದ ಸಂಭ್ರಮ ಒಂದೆಡೆಯಾದರೆ ಅದರಲ್ಲಿ ಪ್ರಕಟವಾಗಿದ್ದ ‘ನರಬಲಿ’ ಕವನದಿಂದಾಗಿ ಅವರಿಗೆ ಸಾಕಷ್ಟು ತೊಂದರೆಯಾಯಿತು. ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಗೆ ಬೆಂಬಲಿಸಲೆಂದೇ ‘ನರಬಲಿ’ ಪದ್ಯವನ್ನು ಬರೆದರು. ಆಗ ಅವರು ಧಾರವಾಡದ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು.

“ನೀತಿಯ ಭೂತವೇ ಹೊರಡಿಲ್ಲಿಂದ” ಎಂದು ಗುಡುಗಿದ ಬೇಂದ್ರೆಯವರು ಕಟು ನುಡಿಗಳಿಂದ ಬ್ರಿಟಿಷರ ದಬ್ಬಾಳಿಕೆಯನ್ನು ಖಂಡಿಸಿ ಬರೆದ ಈ ಕವನ ಬಹುಬೇಗ ಇಂಗ್ಲಿಷರ ಕೆಂಗಣ್ಣಿಗೆ ಗುರಿಯಾಯಿತು. ಅದನ್ನು ಇಂಗ್ಲಿಷಿಗೆ ಅನುವಾದಿಸಿ ಕೇಳಿದ ಇಂಗ್ಲಿಷರು ಬೇಂದ್ರೆಯವರ ವಿರುದ್ಧ ರಾಜ ದ್ರೋಹದ ಆಪಾದನೆ ಹೊರಿಸಿ ಮೊಕದ್ದಮೆ ಹೂಡಿದರು. ನ್ಯಾಯಾಲಯ ಅವರಿಗೆ ಒಂದು ವರ್ಷ ಸೆರೆಮನೆಯ ವಾಸ ವಿಧಿಸಿತು. ಹಿಂಡಲಗಾ ಜೈಲಿನಲ್ಲಿದ್ದಾಗ ಮೂರು ತಿಂಗಳಾಗುತ್ತಲೇ ಅವರ ಆರೋಗ್ಯ ಹದಗೆಟ್ಟಿತು. ನಂತರ ಅವರನ್ನು ಮುಗುದದಲ್ಲಿ ನಜರ್ ಬಂದ್ (ಗೃಹ ಬಂಧನ) ನಲ್ಲಿಟ್ಟಿತು. ಈ ಕಠೋರ ಯಾತನೆಯ ಸಂದರ್ಭದಲ್ಲಿ ತಮ್ಮ ಮನಸ್ಥಿತಿಯನ್ನು ಕಳೆದುಕೊಳ್ಳಲಿಲ್ಲ. ಆದರೆ ತಮ್ಮ ನೋವನ್ನು ಕವನವೊಂದರಲ್ಲಿ ತೋಡಿಕೊಂಡರು.

ನಗು ಬರಬೇಕಾ ಮನಸ್ಸಿನಿಂದ
ಸಮ್ನೆ ನಗು ಅಂದ್ರ ಬರ್ಬೇಕು ಎಲ್ಲಿಂದ.

೧೯೮೧ರ ಒಂದು ದಿನ, ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕ ವಿಜಯ ಸಾಸನೂರು ಬೇಂದ್ರೆಯವರನ್ನು ಭೇಟಿಯಾಗಲು ಅವರ ಮನೆಗೆ ಆಗಮಿಸಿದರು. ಸಾಧನಕೇರಿಯ ‘ಶ್ರೀಮಾತಾ’ ದಲ್ಲಿ ಬೇಂದ್ರೆಯವರು ಕುಳಿತಿದ್ದರು. ಒಳಬಂದ ನಿರ್ದೇಶಕರು ಮತ್ತವರ ಸಿಬ್ಬಂದಿ ವರ್ಗದವರನ್ನು ಆಹ್ವಾನಿಸಿ ಸತ್ಕರಿಸಿದರು. ಅವರೊಡನೆ ಸಂಭಾಷಿಸುತ್ತಿರುವಾಗ ಅಲ್ಲಿಗೆ ಬಂದಿದ್ದ ಛಾಯಾಗ್ರಾಹಕರು ಬೇಂದ್ರೆಯವರ ಛಾಯಾಚಿತ್ರ ತೆಗೆಯಲು ಸಿದ್ಧತೆ ನಡೆಸಿದರು. ಅದನ್ನು ನೋಡಿ ಬೇಂದ್ರೆ ಒಂದರೆಕ್ಷಣ ಮಾತು ನಿಲ್ಲಿಸಿ ಸ್ತಬ್ಧರಾಗಿ ಕ್ಯಾಮೆರ ಕಡೆ ನೋಡತೊಡಗಿದರು. ಆಗ ಛಾಯಾಗ್ರಾಹಕರು, ‘ಪೋಸ್ ಕೊಡುವುದು ಬೇಡ, ತಮ್ಮ ಸಂಭಾಷಣೆ ಹಾಗೇ ಸಾಗುತ್ತಿರಲಿ. ನಾನು ಫೋಟೋ ತೆಗೆಯುತ್ತೇನೆ’ ಎಂದರು. ಅದಕ್ಕೆ ತಕ್ಷಣ ಬೇಂದ್ರೆಯವರು, ‘ಬೇಂದ್ರೆ ಎಂದೂ ಪೋಜ್ ಮಾಡಿಲ್ರೀ, ಬೇಂದ್ರೆ ಯಾವಾಗ್ಲೂ ಇದ್ದಾಂಗ’ ಎಂದು ಪ್ರತಿಕ್ರಿಯಿಸಿದರು. ಅವರ ಮಾತುಗಳು ಗುಂಡೇಟಿಗಿಂತಲೂ ತೀಕ್ಷ್ಣವಾಗಿದ್ದವು. ಆ ಮಾತುಗಳು ಅವರ ವ್ಯಕ್ತಿತ್ವದ ಪದರುಗಳನ್ನು ಬಿಚ್ಚಿ ತೋರಿಸುವ ಪ್ರಾಮಾಣಿಕ ಪ್ರಯತ್ನ ಮಾತ್ರ ಆಗಿತ್ತು. ಹೀಗೆ ಫೋಟೋ ತೆಗೆಯುವಾಗ ಕ್ಯಾಮೆರಾವನ್ನು ಕ್ಲಿಕ್ಕಿಸುತ್ತಿದ್ದ ಛಾಯಾಗ್ರಾಹಕ ದಾಸಪ್ಪ, ‘ತಾವು ಸ್ವಲ್ಪ ನಗಬೇಕ್ರೀ’ ಎಂದು ಬೇಂದ್ರೆಯವರಿಗೆ ಅಲವತ್ತುಕೊಂಡರು. ಅದನ್ನು ಕೇಳಿ, ‘ದಾಸಪ್ಪಾ, ನಾ ಸುಮ್ಮನೆ ನಗಂಗಿಲ್ರೀ, ಹಂಗ್ ನಕ್ಕರ ನೀವು ಏನಪಾ, ನನ್ನ ನೋಡಿ ನಗಾಕತ್ಯಾನಿವಾ, ನನ್ನೊಳಗೇನರ ಅದ ಏನು? ಅಂತ ತಪ್ಪು ತಿಳಕೋಬಾರದ ನೋಡ್ರಿ. ನೀ ನಗೂ ಅಂದರ ನಗತೇನಿ’ ಎಂದು ಮುಗುಳ್ನಕ್ಕರು. ಇದಾದ ಸ್ವಲ್ಪ ಕಾಲದ ಮೇಲೆ ಬೇಂದ್ರೆಯವರು ನಮ್ಮನ್ನಗಲಿ ಹೋದದ್ದು ಮಾತ್ರ ಮರೆಯಲಾಗದ ಘಟನೆಯೇ ಆಗಿ ಹೋಗಿತ್ತು. ಅವರ ಬದುಕು ಮತ್ತು ಸಾವು ಕುರಿತು ಅವರೇ ಬರೆದಿರುವ ಕವನದ ಸಾಲುಗಳು ಈ ಸಂದರ್ಭದಲ್ಲಿ ಅದೆಷ್ಟು ಆಪ್ಯಾಯಮಾನವಾಗಿವೆ!

“ಹುಸಿನಗುತ ಬಂದೇವ – ನಗು ನಗುತ ಬಾಳೋಣ
ತುಸು ನಗುತ ತೆರಳೋಣ
ಬಡ ನೂರು ವರುಷಾನ ಹರುಷಾದಿ ಕಳೆಯೋಣ
ಯಾಕಾರೆ ಕೆರಳೋಣ!”

ಬೆಳೆದರು ತಾಯಿಯ ಮಡಿಲಲ್ಲಿ, ತಾಯಿ ಪ್ರೀತಿಗೆ ಕೊನೆಯೆಲ್ಲಿ?

ಬೇಂದ್ರೆಯವರು ತಮ್ಮ ಅಜ್ಜಿ ಮತ್ತು ತಾಯಿಯ ಮಡಿಲಲ್ಲಿ ಬೆಳೆದವರು. ಕಿತ್ತು ತಿನ್ನುವ ಬಡತನದಲ್ಲಿಯೂ ಪ್ರೀತಿಗೆ ಕೊರತೆಯಿರಲಿಲ್ಲ. ಹೀಗಾಗಿ ಅವರು ಎಲ್ಲ ಹೆಣ್ಣಿನಲ್ಲಿಯೂ ತಾಯಿಯ ಪ್ರೀತಿಯನ್ನೂ, ಅಜ್ಜಿಯ ಮಮತೆಯನ್ನೂ ಕಾಣುತ್ತಿದ್ದರು. ಈ ಬಗ್ಗೆ ಅವರ ಸುಪುತ್ರರಾದ ವಾಮನ ಬೇಂದ್ರೆಯವರು ಹೇಳಿದಂತೆ, ಬೇಂದ್ರೆ ಕುಟುಂಬ ಕೇವಲ ಮನೆಗೆ ಸೀಮಿತವಾಗಿರದೆ, ಮನೆಯ ಹೊಸ್ತಿಲು ದಾಟಿ ಹೊರಗೆ, ಊರೂರಿಗೂ ವ್ಯಾಪಿಸಿತ್ತು. ಬೇಂದ್ರೆಯವರು ತಮ್ಮ ತಾಯಿಗೆ, ಮನೆಗೆ ಬಂದ ಹೆಣ್ಣು ಮಕ್ಕಳಿಗೆ, ತಮ್ಮನ್ನು ಕಾಣಲು ಬಂದ ವಿದ್ಯಾರ್ಥಿನಿಯರಿಗೆ ಯಾವುದೇ ಹಮ್ಮು – ಬಿಮ್ಮುಗಳಿಲ್ಲದೆ ಗ್ರಂಥಗಳನ್ನು ಓದಿ ಹೇಳುತ್ತಿದ್ದರು. ನಡುನಡುವೆ ತಮ್ಮ ಕವಿತೆಗಳ ಬಗ್ಗೆ ಕೇಳಿದರೆ ಅದನ್ನು ರಾಗವಾಗಿ ಹಾಡಿ ರಂಜಿಸುತ್ತಿದ್ದರು. ಧಾರವಾಡದ ವನಿತಾ ಸಮಾಜದ ಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿದ್ದಾಗ ಅಲ್ಲಿದ್ದ ಅನಾಥ ಮಹಿಳೆಯರಿಗೆ ಪ್ರಸಿದ್ಧರ ಕಥೆಯನ್ನು ಓದಿ ಹೇಳಿ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಮಹಿಳೆಯರು ಬೇಂದ್ರೆಯವರ ಬಗ್ಗೆ ಪೂಜ್ಯ ಭಾವನೆಯನ್ನೂ, ಬೇಂದ್ರೆಯವರು ಮಹಿಳೆಯರ ಬಗ್ಗೆ ಅಂತಃಕರಣವನ್ನೂ ಬೆಳೆಸಿಕೊಂಡಿದ್ದರು. ಅವರ ಪ್ರಕಾರ ‘ಹೆಣ್ಣೆಂದರೆ ಬೇರೆಯಲ್ಲ, ತಾಯಿ ಬೇರೆಯಲ್ಲ’. ಇದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಬೇಂದ್ರೆಯವರ ಬದುಕನ್ನು ರೂಪಿಸುವಲ್ಲಿ ಅಜ್ಜಿ ಗೋದೂಬಾಯಿ ಮತ್ತು ತಾಯಿ ಅಂಬಾಬಾಯಿಯವರ ಪಾತ್ರ ಬಲು ದೊಡ್ಡದು ಒಮ್ಮೆ ನಾಲ್ಕರ ಎಳೆವಯದಲ್ಲಿ ತಾಯಿಯ ಜೊತೆ ಹಾಲ್ಗೆರೆಗೆ ಹೋದಾಗ ಕಾಲುಜಾರಿ ಬಿದ್ದಾಗ ತನ್ನ ಜೀವದ ಹಂಗನ್ನು ತೊರೆದು ಮಗನನ್ನು ಉಳಿಸಿದ್ದಳು ಅವರ ತಾಯಿ. ಪುಣೆಯಲ್ಲಿ ಬಿಎ ವಿದ್ಯಾರ್ಥಿಯಾಗಿದ್ದಾಗ (೧೯೧೪-೧೮) ‘ಶಾರದಾ ಮಂಡಲ’ ಎಂಬ ಲೇಖಕ-ಓದುಗರ ಗುಂಪನ್ನು ಸಂಘಟಿಸಿ, ಮಂಡಲದ ಅಗತ್ಯಕ್ಕಾಗಿ ಒಂದು ಕನ್ನಡ ಪುಸ್ತಕ ಭಂಡಾರವೊಂದನ್ನು ಸ್ಥಾಪಿಸಲು ಹೊರಟಾಗ ತಾಯಿ ತನ್ನ ಕೈಯೊಳಗಿನ ಉಂಗುರವನ್ನೇ ನೀಡಿ ಪುಸ್ತಕ ಕೊಳ್ಳಲು ನೆರವಾದರು. ಹೀಗೆ ತನ್ನೆಲ್ಲಾ ಕಾರ್ಯಕ್ಕೂ ಬೆಂಗಾವಲಾಗಿದ್ದ ಮತ್ತು ಮರುಜನ್ಮ ಕೊಟ್ಟ ತಾಯಿಗೆ ಬೇಂದ್ರೆಯವರು ಅದೆಷ್ಟು ಕೃತಜ್ಞರಾಗಿದ್ದರೆಂದರೆ, ಅವರೇ ಒಂದೆಡೆ ಹೇಳುವಂತೆ, “ನೂರಿಂಥ ದೇಹ ಧರಿಸಿದರೂ ನಿನ್ನಂಥ ತಾಯಿ ದೊರೆತಾಳೇ?” ಎಂಬ ಮಾತು ಬೇಂದ್ರೆಯವರ ತಾಯಿಯ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಅದೇ ರೀತಿ ತಮ್ಮ ಅಜ್ಜಿಯ ಬಗ್ಗೆಯೂ ಅವರಿಗೆ ವಿಶೇಷ ಆದರ. ಅಜ್ಜಿ ಗೋದೂಬಾಯಿ ಜನ್ಮ ನೀಡಿದ ಹದಿನೇಳು ಮಕ್ಕಳಲ್ಲಿ ಒಂದೇ ಒಂದು ಗಂಡು, ಅದೂ ಚಿಕ್ಕ ವಯಸ್ಸಿನಲ್ಲಿಯೇ ಸತ್ತು ಹೋಯಿತು. ಹದಿನೇಳು ಮಕ್ಕಳಲ್ಲಿ ಉಳಿದದ್ದು ಒಂದೇ ಹೆಣ್ಣು ಮಗು. ಅವರೇ ಬೇಂದ್ರೆಯವರ ತಾಯಿ ಅಂಬಿಕೆ. ಅತ್ಯಂತ ಅಕ್ಕರೆಯಿಂದ ಕಾಪಿಟ್ಟ ಅಜ್ಜಿ ಬೇಂದ್ರೆಯವರಿಗೆ ಸ್ವಾಭಿಮಾನವನ್ನೂ ಆತ್ಮ ಸ್ಥೈರ್ಯವನ್ನೂ ಕಲಿಸಿದರು. ಇದೇ ಅವರಿಗೆ ಜಗತ್ತಿನ ಎಲ್ಲ ಮಹಿಳೆಯರ ಬಗ್ಗೆ ಗೌರವ ಮತ್ತು ಆದರಗಳನ್ನು ಹೊಂದಲು ನೆರವಾಯಿತು. ಅವರೇ ತಮ್ಮ ಒಂದು ಕವನದಲ್ಲಿ ತಮ್ಮ ಅಜ್ಜಿಯ ಹಿರಿಮೆಯನ್ನು ನೆನೆದಿದ್ದು ಹೀಗೆ:

“ಹದಿನೇಳು ಹಡೆದರೂ ಹೆಣ್ಣೊಂದೆ ಉಳಿದರೂ
ಜಗ್ಗದ ಕುಗ್ಗದ ಎದೆಯವಳು
ಹುಲಿ ಹಾಲ ಕುಡಿಸಿದಳು, ನಿಲಿಸಿದಳು
ವೃದ್ಧೆಯಾದರೂ ಅವಳು, ಶ್ರದ್ಧೆ ಎಂತಹದಿತ್ತು
ಕರ್ತವ್ಯ ಬದ್ಧಳು ಕೊನೆಯವರೆಗೂ”

ಹೃದಯದಿಂದ ಮತ್ತೊಬ್ಬ ಕಲಾವಿದನಿಗೆ ಪ್ರೋತ್ಸಾಹ ಸಿಕ್ಕಿತು ಬೇಂದ್ರೆಯವರಿಂದ!

ಒಮ್ಮೆ ಬೇಂದ್ರೆಯವರು ತಮ್ಮ ಮನೆಯ ಕಾಂಪೋಂಡ್ದಾಗ ಸುತ್ತಾಡ್ತಾ ಇದ್ದಾಗ ಒಬ್ಬ ಭೀಮಕಾಯ ವ್ಯಕ್ತಿ, ನೆಹರೂ ಅಂಗಿ, ಗಾಂಧಿ ಟೋಪಿ ಧರಿಸಿ ಬರುತ್ತಿರುವುದು ಕಂಡುಬಂತು. ಬಾಯಲ್ಲಿ ಏನೋ ಗುನುಗುತ್ತ ಬರುತ್ತಿದ್ದ ಆ ವ್ಯಕ್ತಿಯನ್ನು ನೋಡಿ ಬೇಂದ್ರೆಯವರ ಮುಖದಲ್ಲಿ ನಗೆ ಮಿಂಚು ಹಾರಿತು. “ಬಾ ಹುಕ್ಕೇರಿ ಬಾಳಪ್ಪ” ಎಂದು ಆತ್ಮೀಯವಾಗಿ ಸ್ವಾಗತಿಸಿದರು. “ಗುರುಗಳೇ ಅಡ್ಡಬಿದ್ದೆ” ಎಂದು ಬಾಳಪ್ಪನವರೂ ಗೌರವ ಸೂಚಿಸಿ, ಬೇಂದ್ರೆಯವರು ಸೂಚಿಸಿದ ಕುರ್ಚಿಯಲ್ಲಿ ಕುಳಿತರು. ಒಬ್ಬರು ಶಬ್ಧ ಗಾರುಡಿಗರಾದರೆ ಇನ್ನೊಬ್ಬರು ಜಾನಪದ ಗಾನ ಗಾರುಡಿಗ. ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಉತ್ತುಂಗಕ್ಕೇರಿದವರೇ. ಕೆಲಕಾಲ ಏಕೋ ಏನೋ ಇಬ್ಬರೂ ಮೌನಕ್ಕೆ ಶರಣಾದರು. ಒಬ್ಬರನ್ನೊಬ್ಬರು ನೋಡುತ್ತಾ ಕುಳಿತರು. ಆಗ ಬಾಳಪ್ಪನವರೇ ಮೌನ ಮುರಿದು, “ಗುರುಗಳೇ, ಈ ಹಾಡಿಗೆ ಹೀಂಗ ಧಾಟೀ ಹಚ್ಚೀನಿ ಕೇಳ್ರೀ” ಎಂದು ತಮ್ಮ ಎಂದಿನ ಸಹಜ ಹಾವಭಾವದೊಡನೆ ಹಾಡತೊಡಗಿದರು. ಬೇಂದ್ರೆಯವರು ಹಾಡಿಗೆ ತಕ್ಕ ಹಾಗೆ ತಾಳ ಹಾಕುತ್ತಾ ಹುರಿದುಂಬಿಸುತ್ತಿದ್ದರು. ನಡುನಡುವೆ “ಇದನ್ನ ಹೀಂಗ ಒತ್ತಿ ಹೇಳಬೇಕು”, “ಇಲ್ಲಿ ಜಾಸ್ತಿ ಎಳೀಬೇಡ” ಎಂಬ ಸೂಚನೆಗಳನ್ನೂ ಕೊಡುತ್ತಿದ್ದರು. ಹೀಗೆ ಬಾಳಪ್ಪನವರ ಹಾಡು – ಬೇಂದ್ರೆಯವರ ಸಲಹೆ ತಾಳ – ಮೇಳ ಒಂದರ್ಧ ಗಂಟೆ ನಡೆಯಿತು. ಅಲ್ಲಿದ್ದವರಿಗೆ ಒಂದು ರೀತಿಯ ಅಪೂರ್ವ ಅನುಭವ. ಇಂತಹ ವಾತಾವರಣವನ್ನೆಂದಿಗೂ ನೋಡಿರದ ಬಯಸದೇ ಬಂದ ಭಾಗ್ಯವಾಗಿತ್ತು. ಬಾಳಪ್ಪನವರು ತಮ್ಮ ಮೋರೆ ಒರೆಸಿಕೊಂಡು ಬೇಂದ್ರೆಯವರಿಗೆ ಮತ್ತೆ ನಮಸ್ಕರಿಸಿ, ತಮಗಿನ್ನು ತೆರಳಲು ಅನುಮತಿ ನೀಡಬೇಕೆಂದು ಕೇಳಿಕೊಂಡರು. ಕವಿಯ ಹೃದಯವಾಗಲೇ ಸಂತಸದಿಂದ ಕೂಡಿ, ಬಾಳಪ್ಪನವರನ್ನು ಬಾಯ್ತುಂಬ ಹರಸಿ ಹೇಳಿದರು, “ಹೋಗಿಬಾ ಬಾಳಪ್ಪ” ಎಂದು. ಅವರು ಕಾಂಪೌಂಡು ದಾಟುತ್ತಿದ್ದಂತೆ ಅಲ್ಲಿದ್ದವರನ್ನು ಕುರಿತು ಬಾಳಪ್ಪನವರ ಬಗ್ಗೆ ಹೇಳಿದ ಮಾತುಗಳು ಅವರ ಹಿರಿಮೆಯನ್ನು ಎತ್ತಿ ತೋರಿಸುತ್ತಾದ್ದವು. “ಬಾಳಪ್ಪ ಸಾಮಾನ್ಯನಲ್ಲ, ಅವನೊಬ್ಬ ಗಾನಯೋಗಿ.

ಇಂವ ಹಾಡತಿದ್ದರ ಹೋಗಿ ಕೇಳು, ಇಂವ ಹಾಡೋದೆಲ್ಲಾ ಹೃದಯದಿಂದ”. ಇದು ಕವಿ ಒಬ್ಬ ಕಲಾವಿದನ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು. ತಮಗೆ ಇಷ್ಟವಾಗದ್ದನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದಂತೆ, ತಮಗೆ ಇಷ್ಟವಾದುದನ್ನು ಹಾಗೆಯೇ ಮನದುಂಬಿ ಹೊಗಳುತ್ತಿದ್ದರು.


  • ಬಾಣಾವರ ಶಿವಕುಮಾರ್ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW