ವರಕವಿ ಬೇಂದ್ರೆ 41ನೇ ಪುಣ್ಯಸ್ಮರಣೆ ಮತ್ತು ಸಾಹಿತಿ ರಾಮಣ್ಣ ಬ್ಯಾಟಿ ನುಡಿ ನಮನ ಕಾರ್ಯಕ್ರಮ.
‘ರಾಮಣ್ಣ ಬ್ಯಾಟಿ ಕವಿರತ್ನ ಕಾಳಿದಾಸನಿದ್ದಂತೆ’ – ಶಿವಶರಣೆ ಡಾ. ಅಸುಂಡಿ ನೀಲಮ್ಮತಾಯಿ.

ಆಶಯಕವಿತ್ವದ ವಾಸ್ತವಿಕ ವಿಶಿಷ್ಟ ಪ್ರತಿಭೆಯನ್ನು ಹೊಂದಿದ ರಾಮಣ್ಣ ಬ್ಯಾಟಿ ತಮ್ಮ ಪುರಾಣ ಕೃತಿ ರಚನೆಗಳ ಮೂಲಕ ವಿದ್ವಾಂಸರ ಸಾಲಿಗೆ ಸೇರುತ್ತಾರೆ. ಕಲಿತದ್ದು ಕೇವಲ 4ನೇ ತರಗತಿಯಾದರೂ ಭಾಮಿನಿ ಷಟ್ಪದಿಯಲ್ಲಿ ಒಬ್ಬ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಮೀರಿಸುವಂತಹ ವ್ಯಕ್ತಿತ್ವವನ್ನು ಹೊಂದಿದ್ದು, ಅವರ ಅಗಲಿಕೆ ಕನ್ನಡ ನಾಡು-ನುಡಿಗೆ ತುಂಬಲಾರದ ನಷ್ಟವಾಗಿದೆ. ಮೃಡಗಿರಿಯ ಅನ್ನದಾನೀಶ್ವರ ಶತಕ, ಕೋಡಿಕೊಪ್ಪದ ಹುಚ್ಚೀರೇಶ್ವರ ಶತಕ, ರಂಗಾವಧೂತರ ಚರಿತ್ರೆ, ಗೌರಿಶಂಕರ ಚರಿತ್ರೆ, ಗುಡ್ಡಾಪುರದ ದಾನಮ್ಮದೇವಿ ಪುರಾಣ, ಇಟಿಗಿ ಭೀಮಾಂಬಿಕೆ ಪುರಾಣ, ಶಿಶುನಾಳ ಶರೀಫ ಶಿವಯೋಗಿ ಶತಕ, ಅಂಬೇಡ್ಕರ ಪುರಾಣ, ಬಸವ ಪುರಾಣ, ಬುದ್ಧ ಪುರಾಣ, ಸಾವಿತ್ರಿಬಾಯಿ ಪುಲೆ ದಂಪತಿಗಳ ಪುರಾಣ, ಭ್ರಹ್ಮಶ್ರೀ ನಾರಾಯಣಗುರು ಪುರಾಣ, ಸಂತ ಸೇವಾಲಾಲ ಪುರಾಣ, ಹರ್ಲಾಪುರದ ಹಠಯೋಗಿ ಕೊಟ್ಟೂರೇಶ್ವರ ಪುರಾಣ ಹೀಗೆ ಪ್ರಬುದ್ಧ ಆಧ್ಯಾತ್ಮ ಸಾಹಿತ್ಯದ ವಿಶಿಷ್ಟ ಪುರಾಣ ಕರ್ತೃವಾಗಿದ್ದ ರಾಮಣ್ಣ ಬ್ಯಾಟಿ ಈ ನಾಡಿನ ನಿಜ ಶಕ್ತಿಯಾಗಿದ್ದರು ಎಂದು ಶರಣೆ ಡಾ. ಅಸುಂಡಿ ನೀಲಮ್ಮ ತಾಯಿ ಹೇಳಿದರು.

(ಆಶುಕವಿ, ರಾಜ್ಯೋತ್ಸವ ಪುರಸ್ಕೃತರು ರಾಮಣ್ಣ ಬ್ಯಾಟಿ)
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸಂಗಮೇಶ ತಮ್ಮನಗೌಡ್ರ ಮಾತನಾಡುತ್ತ ವರಕವಿ ಬೇಂದ್ರೆಯವರು 1981ರ ಅಕ್ಟೋಬರ್ 26 ರಂದು ಮುಂಬಯಿ ಹರಕಿಶನ್‍ದಾಸ ಆಸ್ಪತ್ರೆಯಲ್ಲಿ ತಮ್ಮ ಬದುಕಿಗೆ ವಿದಾಯ ಹೇಳಿ. ಕನ್ನಡ ಸಾಹಿತ್ಯಕ್ಕೆ ಶಾಶ್ವತ ಕೊಡುಗೆಯನ್ನು ಕೊಟ್ಟು ಹೋದರು. ಮೂಲತಃ ಮರಾಠಿಯವರಾದರೂ ಕನ್ನಡ ಭಾಷೆಗೆ ಅವರ ಕೊಡುಗೆ ದೊಡ್ಡದು. ಉತ್ತರಕರ್ನಾಟಕದ ಜವಾರಿ ಭಾಷೆಯಲ್ಲಿ ಭಾವಗೀತೆಗಳನ್ನು ರಚಿಸುವುದರ ಮೂಲಕ ಬಹುಜನರ ಹೃನ್ಮನ ಸೆಳೆದರು. ವರಕವಿ ಬೇಂದ್ರೆ ಈ ನಾಡಿನ ದಿವ್ಯಶಕ್ತಿ ಕವಿ ದೈಹಿಕವಾಗಿ ನಮ್ಮ ಮಧ್ಯದಲ್ಲಿ ಇರದಿದ್ದರೂ ಕೃತಿಗಳ ಮೂಲಕ ಸದಾ ಜೀವಂತವಾಗಿ ಇರುತ್ತಾರೆ. ಬೇಂದ್ರೆ ಕನ್ನಡ ಸಾಹಿತ್ಯ ಅಮರಶಕ್ತಿಯಾಗಿದ್ದಾರೆ. ವರಕವಿಗಳ ಮುಂದೆ ನರಕವಿಗಳ ಪಾಡೇನು ಎನ್ನುವಷ್ಟರ ಮಟ್ಟಿಗೆ ವರಕವಿಯಾಗಿಯೇ ಏಕೈಕ ವ್ಯಕ್ತಿಯಾಗಿ ಕನ್ನಡಸಾಹಿತ್ಯದಲ್ಲಿ ನೆಲೆನಿಂತಿದ್ದಾರೆ ಎಂದು ಹೇಳಿದರು. ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿಯ ವರಕವಿ ಡಾ, ದ.ರಾ.ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯು ಗದಗ ಬೆಟಗೇರಿಯ ಶರಣಬಸವೇಶ್ವರ ನಗರದ ದಿ. ರಾಮಣ್ಣ ಬ್ಯಾಟಿಯವರ ಮನೆಯಲ್ಲಿ ವರಕವಿಯ 41ನೇ ಪುಣ್ಯಸ್ಮರಣೆ ಹಾಗೂ ರಾಮಣ್ಣ ಬ್ಯಾಟಿಯವರ ಸಾಹಿತ್ಯ ಚಿಂತನದ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ರಾಮಣ್ಣ ಬ್ಯಾಟಿಯವರು ಅಮರ ವ್ಯಕ್ತಿತ್ವ ಕುರಿತು ಮಲ್ಲಿಕಾರ್ಜುನ ನಾರಾಯಣಪ್ಪ ಕಾಂಬಳೆ, ಶಂಕ್ರಪ್ಪ ಮುಳಗುಂದ, ರಾಜ್ಯಪ್ರಶಸ್ತಿ ಶಿಕ್ಷಕ ಪಂಚಯ್ಯ ರಾಚಯ್ಯ ಹಿರೇಮಠ, ಮಂಜುನಾಥ ಡೋಣಿ ಮುಂತಾದವರು ಮಾತನಾಡಿದರು. ಬೇಂದ್ರೆ ವೇದಿಕೆಯ ಕಾರ್ಯದರ್ಶಿ ಶಂಕ್ರಪ್ಪ ಶಿಳ್ಳಿನ, ಬಸವರಾಜ ಗದಗಿನ, ಶಂಭು ನೀರಲಗಿ, ಶಿವಲಿಂಗ ಮೋಪಗಾರ, ಮಹಾಲಿಂಗ ರಾಠೋಡ, ನಿಂಗಪ್ಪ ಕುರಣಿಂಗ, ಚಂದ್ರಪ್ಪ ಎಂ.ಬಿ., ಪ್ರೊ. ಶಿವಾನಂದ ಗೋಗೇರಿ, ರಾಮಣ್ಣ ಬ್ಯಾಟಿಯವರ ಧರ್ಮಪತ್ನಿ ಲಕ್ಷ್ಮವ್ವ ಬ್ಯಾಟಿ, ಚಿರಂಜೀವಿ ದಾನೇಶ ಬ್ಯಾಟಿ, ಶಿಕ್ಷಕ ಗಿರೀಶ ಕಂಕ್ರಿ, ಬಾಬು ಅಣ್ಣಿಗೇರಿ ಮುಂತಾದವರು ಉಪಸ್ಥಿತರಿದ್ದು, ರಾಮಣ್ಣ ಬ್ಯಾಟಿಯವರ ನುಡಿನಮನದ ನಿಜಗೌರವ ಸಲ್ಲಿಸಿದರು. ಆಚನೂರ ಮಠದ ಜೈ ಆಂಜನೇಯ ಸ್ವಾಮೀಜಿ ಸಾನಿಧ್ಯವಹಿಸಿ, ಆಶೀರ್ವಚನ ಮಾಡಿದರು. ಬೇಂದ್ರೆ
ವೇದಿಕೆಯ ಕಾರ್ಯದರ್ಶಿ ಶಂಕ್ರಪ್ಪ ಶಿಳ್ಳಿನ ವಂದಿಸಿದರು. ಪ್ರೊ. ಶಿವಾನಂದ ಗೋಗೇರಿ ನಿರೂಪಿಸಿ ವಂದಿಸಿದರು.
- ಆಕೃತಿಕನ್ನಡ ನ್ಯೂಸ್