ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿ ಲಿಂಗೈಕ್ಯ



ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಮಾರ್ಕಂಡೇಯ ದೇಶಿಕೇಂದ್ರ ಸ್ವಾಮೀಜಿಯವರು ಇಂದು ಜಂಬೂಶಾಂತಿ ಹೊಂದಿರುತ್ತಾರೆ.ಮುಂದೆ ಓದಿ…

ಆದಿಜಾಂಬವ ಮಾತಂಗ ಪರಂಪರೆಯಲ್ಲಿ ಪ್ರಾಚೀನ ಕಾಲದಿಂದಲೂ ಮಠ ಪರಂಪರೆಯಿದ್ದು, ಶ್ರೀ ಮಠದ ಸಂರಕ್ಷಿತ ದಾಖಲೆಗಳ ಪ್ರಕಾರ ಆಂಧ್ರಪ್ರದೇಶ ಕಡಪ ಮೂಲದ ಶ್ರೀ ಚಂದಾಯಮುನಿ ಅವರಿಂದ ಶ್ರೀಮನೃಪ ಶಾಲಿವಾಹನ ಶಕೆ 1061 ರಲ್ಲಿ ಅಂದರೆ ಕ್ರಿ.ಶ 1139 ನೇ ಇಸವಿಯಲ್ಲಿ ಸ್ಥಾಪಿತವಾದ ಮಠ ಇದು. ಇಂತಹ ಪುರಾತನ ಗುರು ಪರಂಪರೆಯ ಮಠಕ್ಕೆ ಮುಸ್ಲಿಂ ನವಾಬರು, ಟಿಪ್ಪೂ ಸುಲ್ತಾನ್ ಹಾಗೂ ಮೈಸೂರು ಅರಸರು ಅಧಿಕಾರ ಮುದ್ರೆಯುಂಗುರ, ಬಿಲ್ಲೆ ಜವಾನರ ಸರ್ಕೀಟು ಸೇವೆ, ಬಿಕ್ಕಲಂ ಲೆಕ್ಕಣಿಗರು, ಭೂ ಇನಾಮು, ಕುದುರೆ, ತುರಾಯಿ ಟೊಪ್ಪಿಗೆ, ಡವಾಲಿ, ಬಿಳಿಜರಿಯ ಕೆಂಪು ಅಡ್ಡಶಲ್ಯ, ನಿಶಾನಿ ಲಾಂಛನಗಳನ್ನು ಒದಗಿಸಿರುವ ದಾಖಲೆಗಳಿವೆ.

ಈಗಿನ ಸೀಮಾಂಧ್ರದಲ್ಲಿರುವ ಕಡಪ ಪಟ್ಟಣವು ಟಿಪ್ಪು ಸುಲ್ತಾನನ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಸೇರಿತ್ತು. ಕ್ರಿಶ.1784 ರಲ್ಲಿ ಮಾದಿಗರ ಸಾಂಸ್ಕೃತಿಕ ರಾಜಧಾನಿ ಎನ್ನಿಸಿದ್ದ ಕಡಪ ಪಟ್ಟಣದ ಆದಿಜಾಂಬವ ಮಾತಂಗ ಮಹಾ ಸಂಸ್ಥಾನದ ಅಭಿವೃದ್ಧಿಗಾಗಿ ದತ್ತಿಮಾನ್ಯಗಳನ್ನು ಒದಗಿಸಿದ್ದ ಟಿಪ್ಪು ಸುಲ್ತಾನ್, ದಲಿತರ ಧಾರ್ಮಿಕ ಘನತೆಯನ್ನು ಎತ್ತರಿಸಿದ್ದನು. ಆಗಿನ ಕಡಪ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಜಾಂಬವಗುರು ಚಂದಾಯಮುನಿಯವರಿಗೆ ತನ್ನ ರಾಜಮರ್ಯಾದೆಗಳ ಭಾಗವಾಗಿ ಪಲ್ಲಕಿ ಮೆರವಣಿಗೆ, ಕೆಂಪು ಛತ್ರಿ, ಕೆಂಪು ನಿಶಾನಿ (ಗಿಣಿವಸ್ತ್ರ, ಗರುಡ ನಿಶಾನಿ), ಅಫ್ತಾಗಿರಿ ರಕ್ಷಣೆ, ಚಾಮರ ಸೇವೆ, ತುರಾಯಿ ಪಾಗು ಮುಂತಾದ ಸೌಲಭ್ಯಗಳನ್ನು ಒದಗಿಸಿದ್ದನು. ಕಡಪ ಆದಿಜಾಂಬವ ಮಾತಂಗ ರಾಜಸಿಂಹಾನ ಮಠದ ಅಧೀನದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನವು ಇತ್ತು.

ಆಂಧ್ರಪ್ರದೇಶದ ಕಡಪ ಮಠದ ಶಾಖಾ ಮಠವಾಗಿದ್ದ ಕೋಡಿಹಳ್ಳಿಯ ಆದಿಜಾಂಬವ ಮಠಕ್ಕೆ ಕ್ರಿ.ಶ.1893 ರಲ್ಲಿ ಮೈಸೂರು ದಿವಾನರು ಕಂಚಿನ ಬಿಲ್ಲೆ ಜವಾನರ ಸೇವೆ ಒದಗಿಸಿದ್ದು ಆಗಿನ ಕಾಲದ ಆದಿಜಾಂಬವ ಗುರುಗಳಿಗೆ ಬೇರಾವುದೇ ಜಾತಿಯ ಮಠಾಧೀಶರಿಗೆ ನೀಡದ ಬಿರುದು ಮರ್ಯಾದೆ ಹಕ್ಕು ಸೌಲಭ್ಯಗಳನ್ನು ಒದಗಿಸಿ ಅನುಭವಿಸಿರುವುದು ತಿಳಿದುಬರುತ್ತದೆ.

ತಮ್ಮ ಹೆಸರುಗಳ ಕೊನೆಯಲ್ಲಿ ಮುನಿ ಎಂಬ ಪ್ರತ್ಯಯವನ್ನು ಸೇರಿಸಿಕೊಳ್ಳುವ ರೂಢಿ ಇವರಲ್ಲಿದೆ. ಜಾಂಬವ ಮುನಿ, ಮಾತಂಗ ಮುನಿ, ಬಕಾಲ ಮುನಿ, ಯುಗಮುನಿ, ಹೆಪ್ಪುಮುನಿ, ರುದ್ರಾಕ್ಷಿ ಮುನಿ, ಓಂಕಾರಮುನಿ, ನೀಲಮುನಿ, ಮಾರ್ಕಾಂಡಮುನಿ, ಷಡಕ್ಷರ ಮುನಿ ಹೀಗೆ ಋಷಿ ಎಂಬುದರ ಬದಲಾಗಿ ಮುನಿ ಎಂದೇ ಕರೆಯಲಾಗುತ್ತದೆ.

ಲಿಂಗ ಭಸಿತ ರುದ್ರಾಕ್ಷಿ ಗುರುಮಣಿ ಧರಿಸುವ ಶೈವಾರಾಧಕರಾದ ಇವರು ಲಿಂಗಾಯತ ವಿರಕ್ತ ಪರಂಪರೆಯ ಸಂಪ್ರದಾಯಕ್ಕೆ ಹೊರತಾದ ಸಾಂಸಾರಿಕ ಜೀವನ ಪದ್ದತಿಯನ್ನು ಅನುಸರಿಸುತ್ತಾರೆ. ಲಿಂಗಾಯತ ಆಚರಣೆಗಳ ಪ್ರಕಾರವೇ ಲಿಂಗದೀಕ್ಷೆ ಪಡೆದು ಗುರುಸ್ಥಾನ ಅಲಂಕರಿಸುವ ಆದಿಜಾಂಬವರು ಲಿಂಗಾಯತವು ಮೂಲದಲ್ಲಿ ಮಾದಿಗರದ್ದು ಎಂದು ಕ್ಲೇಮು ಮಾಡುತ್ತಾರೆ.

ಮಠದ ಹೆಣ್ಣುಮಕ್ಕಳನ್ನು ಗುರುಮಗಳು- ಗುರುಪತ್ನಿ- ಗುರುತಾಯಿ – ಜಾಂಬವತಿ ಎಂಬ ಪದವಿಶೇಷಣಗಳಿಂದ ಕರೆಯಲಾಗುತ್ತದೆ. ಗಂಡುಮಕ್ಕಳನ್ನು ಜಾಂಬವ ಗುರುವಿನಯ್ಯನೋರು, ಗುರುತಂದೆ, ಗುರುಮಗ ಎಂದು ಸಂಬೋಧಿಸಲಾಗುತ್ತದೆ.



ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ನುಲಿಯ ಚಂದಯ್ಯ, ನುಲಿಯ ಸಂಗಯ್ಯ, ಸಮಗಾರ ಹರಳಯ್ಯನ ಪುಣ್ಯಸ್ತ್ರೀ ಕಲ್ಯಾಣಮ್ಮ ಮುಂತಾದ ಶರಣರು ಆದಿಜಾಂಬವ ಪರಂಪರೆಯ ಕವಿಪ್ರತಿಭೆ ವಚನಕಾರರಾಗಿ ಗುರುತಿಸಿಕೊಂಡಿದ್ದಾರೆ.

ಇಂತಹ ಆದಿಮ ಪರಂಪರೆಯಲ್ಲಿ ಶ್ರೀಶೈಲ ಮಠ, ಪೆನಗೊಂಡೆ ಮಠ, ಕಡಪ ಮಠ, ಬೆಜವಾಡ ಮಠ, ಕೊಂಕಲ್ ಮಠ, ನೆಲಮಂಗಲ ಮಠ, ರಾವಂದೂರು ಮಾದಾರ ಚೆನ್ನಯ್ಯ ಗುರುಪೀಠ, ಹಿರೇಸಿಂಧೋಗಿ ಮಾದಾರ ಮರುಳಸಿದ್ಧ ಪೀಠ ಮುಂತಾದ ಅನೇಕ ಮಠಪೀಠಗಳಿಗೆ ಮಕುಟಮಣಿಯಂತಿದ್ದ ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿಯವರು ಜಂಬೂಶಾಂತಿ ಹೊಂದಿದ್ದಾರೆ.

ಗೇಲ್ ಓಂವೆಡ್ತ್ ಅವರು ಬುದ್ಧಪೂರ್ವ ಯುಗದಲ್ಲಿ ಜೀವಿಸಿದ್ದ, ಬೌದ್ಧಧರ್ಮವನ್ನು ಮೊದಲಿಗೆ ಪ್ರತಿಪಾದಿಸುವ ಮೂಲಕ ಆದಿಬುದ್ಧ ಎನ್ನಿಸಿದ ಕಸ್ಸಪ ಮಾತಂಗನನ್ನು ಕುರಿತು, The Dalit ಎಂಬ ಇಂಗ್ಲಿಷ್ ಮ್ಯಾಗಜೀನ್ ನಲ್ಲಿ ಪ್ರಕಟಿಸಿದ್ದ Reclaiming Matanga ಎಂಬ ಸಂಶೋಧನಾ ಲೇಖನವನ್ನು ನಾನು ಕನ್ನಡಕ್ಕೆ ಅನುವಾದಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತೇನೆ. ಕನ್ನಡ ವಿಶ್ವವಿದ್ಯಾಲಯ ಹಂಪಿ ಯಲ್ಲಿ ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ನಾನು ರೂಪಿಸಿದ “ಕರ್ನಾಟಕದ ಆದಿಜಾಂಬವ ಮಾತಂಗ ಪರಂಪರೆ” ಎಂಬ ನನ್ನ ಪಿಎಚ್.ಡಿ ಮಹಾಪ್ರಬಂಧದಲ್ಲಿಯೂ ಓಂವೆಡ್ತ್ ಅವರ ಚಿಂತನೆಗಳನ್ನು ದಾಖಲಿಸಿರುತ್ತೇನೆ.

ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪ್ರಯಾಣದ ಭಾಗವಾಗಿ ಶ್ರೀಗಳೊಂದಿಗೆ ಹಾಗೂ ಮಠದೊಂದಿಗೆ ಅನೇಕ ವರ್ಷಗಳಿಂದ ಉತ್ತಮವಾದ ಬಾಂಧವ್ಯ ಹೊಂದಿದ್ದ ನನಗೆ ಅವರ ಅಗಲಿಕೆ ನನಗೆ ತುಂಬಾ ನೋವು ತಂದಿದೆ.


  • ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW