ಗಾಂಧಿನಗರದ ಆಫೀಸಿನಲ್ಲಿ ಕೂತು ಲೋಕಾಭಿರಾಮವಾಗಿ ಮಾತನಾಡುತ್ತಾ ಅಪ್ಪುವಿನ ಬಗ್ಗೆ ರಾಘವೇಂದ್ರ ರಾಜಕುಮಾರ್ ಹೇಳಿದ ಮಾತು, ಖ್ಯಾತ ಸಿನಿ ಪತ್ರಕರ್ತರು ಗಣೇಶ್ ಕಾಸರಗೋಡು ಅವರ ಲೇಖನಿಯಲ್ಲಿ ಅಪ್ಪುವಿನ ನೆನಪುಗಳು…
ಸಾಮಾನ್ಯವಾಗಿ ತಮ್ಮ ಮಕ್ಕಳು ಚೆನ್ನೈಗೋ, ಹೈದರಾಬಾದ್’ಗೋ ಹೋಗುವಾಗ #ರಾಜಕುಮಾರ್ ಒಂದು ಕಿವಿಮಾತು ಹೇಳುತ್ತಿದ್ದರಂತೆ : ‘ನೀವು ಎಷ್ಟೇ ಬಿಜಿ ಶೆಡ್ಯೂಲ್ ಹಾಕಿಕೊಂಡು ಆ ಎರಡು ಊರುಗಳಿಗೆ ಹೋದಾಗ ಅಲ್ಲಿನ ಹಿರಿಯ ಕಲಾವಿದರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಬನ್ನಿ, ಜತೆಗೆ ಅವರಿಗೆ ನನ್ನ ನಮಸ್ಕಾರ ತಿಳಿಸಲು ಮರೆಯಬೇಡಿ…’ ಒಮ್ಮೆ ಪುನೀತ್ ರಾಜಕುಮಾರ್ ಹೈದರಾಬಾದಿಗೆ ಹೋಗಿದ್ದರು. ಅಲ್ಲಿನ ತಮ್ಮ ಕೆಲಸ ಮುಗಿಸಿ ಹಿಂದಿರುಗುವಾಗ ಅಲ್ಲಿನ ಮೆಗಾಸ್ಟಾರ್ ಚಿರಂಜೀವಿ ನೆನಪಾದರಂತೆ. ತಕ್ಷಣವೇ ಚಿರಂಜೀವಿ ನಟಿಸುತ್ತಿದ್ದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸ್ಟುಡಿಯೋಗೆ ಹೊರಟರು ಪುನೀತ್. ಆದರೆ ಎಂಥಾ ದುರಂತ ನೋಡಿ, ಆ ಸ್ಟುಡಿಯೋದ ಸೆಕ್ಯೂರಿಟಿ ಗಾರ್ಡ್ ಪುನೀತನನ್ನು ಒಳಬಿಡಲಿಲ್ಲ. ಇದರಿಂದಾಗಿ ಒಂದು ಚೂರೂ ಟೆನ್ಷನ್ ಮಾಡಿಕೊಳ್ಳದ ಪುನೀತ್ ಸ್ಟುಡಿಯೋದ ಬೃಹತ್ ಗೇಟಿನಲ್ಲೇ ಹಾಕಿದ್ದ ಸೆಕ್ಯೂರಿಟಿ ಕುರ್ಚಿಯಲ್ಲಿ ಕೂತರಂತೆ! ಆ ಸೆಕ್ಯೂರಿಟಿಯವನಿಗೆ ಅಲ್ಲಿಗೆ ಬಂದಿದ್ದು ದಿ ಗ್ರೇಟ್ ರಾಜಕುಮಾರ್ ಪುತ್ರ ಪುನೀತ್ ಅಂತ ಗೊತ್ತಿರಲಿಲ್ಲವಂತೆ.
ಸುಮಾರು ಒಂದು ಗಂಟೆ ಕಾಲ #ಪುನೀತ್ ಆ ಕುರ್ಚಿಯಲ್ಲಿ ಕೂತೇ ಇದ್ದರಂತೆ. ಕೊನೆಗೆ ಯಾರೋ ಬಂದು ಚಿರಂಜೀವಿ ಬಳಿ ಪುನೀತ್ ಸ್ಟುಡಿಯೋ ಹೊರಗಡೆ ಕಾಯುತ್ತಿರುವ ವಿಷಯ ತಿಳಿಸಿದರಂತೆ. ಓಡೋಡಿ ಬಂದ ಚಿರಂಜೀವಿ ಪುನೀತ್ ಅವರ ಕ್ಷಮೆ ಕೇಳಿ ಒಳಗೆ ಕರೆದುಕೊಂಡು ಹೋದರಂತೆ.

ಫೋಟೋ ಕೃಪೆ : Twitter (ಗೋಕರ್ಣ ಬೀಚ್ ನಲ್ಲಿ ಅಪ್ಪು)
ಹೈದರಾಬಾದಿನಿಂದ ಹಿಂದಿರುಗಿದ ಪುನೀತ್ ತನ್ನ ತಂದೆ ಬಳಿ ನಡೆದುದನ್ನು ಹೇಳಿಕೊಂಡರಂತೆ. ಕೊನೆಗೆ ಅಪ್ಪನ ಬಳಿ ಒಂದು ಪ್ರಶ್ನೆ ಕೇಳಿದರಂತೆ : ‘ಅಪ್ಪಾಜಿ, ಆ ಸೆಕ್ಯೂರಿಟಿಯವನಿಂದಾಗಿ ನಾನು ಇಡೀ ಒಂದು ಗಂಟೆ ಚಿರಂಜೀವಿಯವರಿಗಾಗಿ ಕಾದಿದ್ದೇನೆ. ಆದ್ರೆ ಚಿರಂಜೀವಿ ಸರ್ ಆ ಸೆಕ್ಯೂರಿಟಿಯವನನ್ನು ಯಾವ ತರಾಟೆಗೂ ಅವಕಾಶ ಕೊಡದೇ ನನ್ನನ್ನು ಸ್ಟುಡಿಯೋ ಒಳಗೆ ಕರೆದುಕೊಂಡು ಹೋದರು. ನನ್ಗೆ ಆಶ್ಚರ್ಯವಾಯಿತು. ಆತ ನನ್ನನ್ನು ಕಾಯಿಸಿದ್ದರೂ ಚಿರಂಜೀವಿ ಸರ್ ಆತನಿಗೆ ಒಂದೂ ಮಾತು ಹೇಳಲಿಲ್ಲ ಯಾಕೆ ಅಪ್ಪಾಜಿ?’ – ಮಗನ ಮಾತು ಕೇಳಿ ನಸು ನಕ್ಕು ರಾಜಕುಮಾರ್ ಸಮಾಧಾನದಿಂದಲೇ ಉತ್ತರಿಸಿದರಂತೆ : ‘ಅದು ಕಣಪ್ಪಾ ಸಂಸ್ಕಾರ ಅಂದ್ರೆ. ಚಿರಂಜೀವಿ ಎಷ್ಟು ದೊಡ್ಡ ಸಂಸ್ಕಾರವಂತ ಎಂದು ಅವರ ವರ್ತನೆಯಿಂದಲೇ ಗೊತ್ತಾಗುತ್ತದೆ. ಆ ಸೆಕ್ಯೂರಿಟಿ ತನ್ನ ಡ್ಯೂಟಿ ಮಾಡಿದ್ದಾನೆ. ನೀನು ಯಾರೆಂದು ಅವನಿಗೆ ಗೊತ್ತಿಲ್ಲ. ನನ್ನ ಮಗನೆಂದೂ ಅವನಿಗೆ ಗೊತ್ತಿಲ್ಲ. ಬಡ ಸೆಕ್ಯೂರಿಟಿಯವನಿಗೆ ಪುನೀತ್ ಆದರೇನು, ಅವನಪ್ಪ ರಾಜಕುಮಾರ್ ಆದರೇನು? ಅವನಿಗೆ ಅವ್ನ ಡ್ಯೂಟಿ ಮುಖ್ಯ, ಅಷ್ಟೇ! ಆತ ಕರೆಕ್ಟಾಗಿದ್ದಾನೆ, ನೀನೂ ಕರೆಕ್ಟಾಗಿದ್ದಿ. ಆದ್ರೆ ಆ ಚಿರಂಜೀವಿ ಇನ್ನೂ ಹೆಚ್ಚು ಕರೆಕ್ಟಾಗಿದ್ದಾರೆ… ಹೋಗ್ಲಿ ಬಿಡು, ಹಿಂದಿರುಗುವಾಗ ಚಿರಂಜೀವಿಯವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದೀಯಲ್ಲಾ? ಅಷ್ಟೇ ಸಾಕು…’ – ಅಂದಾಗ ಪುನೀತ್ ಏನು ಹೇಳಿದ್ರು ಗೊತ್ತಾ? ‘ಅಪ್ಪಾಜಿ, ನಾನು ಚಿರಂಜೀವಿಯವರ ಕಾಲು ಮುಟ್ಟಿ ನಮಸ್ಕರಿಸಿ ಗೇಟು ದಾಟಿ ಹೊರಬರುವಾಗ ಆ ಸೆಕ್ಯೂರಿಟಿಯವನು ಓಡೋಡಿ ಬಂದು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಿದ…’ – ಅಪ್ಪು ಮಾತನ್ನು ಅರ್ಧಕ್ಕೇ ತುಂಡರಿಸಿ ರಾಜಕುಮಾರ್ ಹೇಳಿದರಂತೆ : ‘ಅದಕ್ಕೇ ನಾನು ಹೇಳಿದ್ದು, ಆ ಸೆಕ್ಯೂರಿಟಿ ಕೂಡಾ ದೊಡ್ಡ ಸಂಸ್ಕಾರವಂತ ಮನುಷ್ಯ ಅಂತ…’
– ಎಲ್ಲೂ ದಾಖಲೆಯಾಗದ ಈ ಘಟನೆಯನ್ನು ತಮ್ಮ ಗಾಂಧಿನಗರದ ಆಫೀಸಿನಲ್ಲಿ ಕೂತು ಲೋಕಾಭಿರಾಮವಾಗಿ ಮಾತನಾಡುತ್ತಾ ರಾಘವೇಂದ್ರ ರಾಜಕುಮಾರ್ ಹೇಳಿದ ನೆನಪು…
- ಗಣೇಶ್ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
