‘ನನ್ನನ್ನು ಆ ದೇವರು ಕೂಡ ಕ್ಷಮಿಸುವುದಿಲ್ಲ…ಸಂಪೂರ್ಣ ಪ್ರೀತಿಸಿ ದ್ವೇಷಿಸಿದ ಅಚ್ಚರಿಯದು!…ದೀಪಿಕಾ ಬಾಬು ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನನ್ನನ್ನು ಆ ದೇವರು ಕೂಡ ಕ್ಷಮಿಸುವುದಿಲ್ಲ
ಆ ನಿಜವದು ಗೊತ್ತು
ಕೇವಲ ನನ್ನಂತವಳನ್ನು ನೀವು
ನಿಮ್ಮ ಅರಿವಿಗೆ ದಕ್ಕಿದಂತೆ ಸಮರ್ಥಿಸಿಕೊಳ್ಳುತ್ತೀರಿ
ಅಂದರೆ,
ವಿಷಯ ಅದಲ್ಲ!
ಮತ್ತೇನು ಕೇಳುತ್ತೀರೇನು
ಅದೊಂದು ರೋಚಕ ಕಥೆ-ವ್ಯಥೆ
ಬದುಕಿನ ಕಥೆ, ಬದುಕಿದ ಕಥೆ
ಸಂಪೂರ್ಣ ಪ್ರೀತಿಸಿ ದ್ವೇಷಿಸಿದ
ಅಚ್ಚರಿಯದು!
ಏನಾಯಿತು? ಯಾಕಾಯಿತು?
ಸತ್ಯ ಸುಳ್ಳಗಳ ಪರಾಕಾಷ್ಠೆಗೆ ಒಳಪಟ್ಟ
ಹಗಲು ವೇಷಧಾರಿಗಳ ಕಂಡದ್ದು
ನಡುರಾತ್ರಿಯಲ್ಲಿ ನಿರ್ವಸ್ತ್ರವಾಗುವಾಗಲೇ
ಎಲ್ಲವೂ ಬೂಟಾಟಿಕೆ
ಅವರಿಗಿವರಾಗರು ಇವರಿಗವರಾಗರು
ಮೇಲ್ನೋಟಕ್ಕೆ ಆಹಾ
ಎಲ್ಲಾ ಕಳಚಿದ್ದು ಕಳೆದುಕೊಳ್ಳಲು
ಕೇವಲ ತನ್ನೊಳಗಿನ ಪುರುಷತ್ವವನ್ನು
ಮೂರ್ನಾಕು ನಿಮಿಷಗಳ ಆರ್ಭಟ
ಮುಗಿದದ್ದೆ ತಡ ಕಳ್ಳನಂತೆ
ಮುಸುಕೊದ್ದು ಸಾಗುವ
ಗರತಿಯರ ಹಿಡಿ ಹಿಡಿ ಶಾಪ
ಮತ್ತಷ್ಟು ಹೆಣ್ಣಾಗುವಂತೆ ಮಾಡಿತು
ತನ್ನೊಬ್ಬ ಪುರುಷನನ್ನೇ ಸುಖಿಸದವರ
ಕೂಗಿಗೆ! ಇಲ್ಲಿ ಬೆವರು ಘಮಗುಟ್ಟಿತು
ಬಂದು ಹೋಗುವವರ ಲೆಕ್ಕವಿಲ್ಲ
ಬಾರಿ ಸುಂಕವುಂಡು
ಅಮಲಿನೂಟವುಂಟು
ಸಾದ್ವಿಯರೇ ಈ ಹೊಸಿಲ ತುಳಿದಿರಿ ಜೋಕೆ
ಸಾವಿರ ಮುಳ್ಳುಗಳ ಹಾಸಿ ಹೊದ್ದು
ರಕ್ತದ ಮಡುವಲ್ಲಿ ನಗುವುದು
ನನಗಷ್ಟೇ ಸೀಮಿತವಾಗಲಿ…
ಇದು
ನಶೆಯೊತ್ತ ಪುರುಷರಿಗೆ ತೆರೆದ ಬಾಗಿಲು
ಹೆಗಲಿರುಳು ಕಾಮನೆಯ ರಂಗು ಚೆಲ್ವುದು//
ಪತಿವ್ರತ ನಾರಿಯರೇ
ನನ್ನನ್ನು ಆ ದೇವರು ಸಹ ಕ್ಷಮಿಸಲಾರ
ಹಿಂದೊಮ್ಮೆ ನಿಮ್ಮ ಆವಾಸ ನನ್ನದಾಗಿತ್ತು
ಇದೀಗ ದೇವರು ಕ್ಷಮಿಸಲಾರನಾದ!!
- ದೀಪಿಕಾ ಬಾಬು
