೧೯೫೮ ರಲ್ಲಿ ಸ್ಥಾಪಿಸಲಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಇಂದು ಸುಮಾರು 350 ಹಾಸಿಗೆಗಳ ಬೃಹತ್ ಆಸ್ಪತ್ರೆಯಾಗಿ ಬೆಳೆದಿದೆ. 2021 ರಲ್ಲಿ ಸೇರ್ಪಡೆಯಾದ ಹೊಸ ರತ್ನಶ್ರೀ ಅರೋಗ್ಯಧಾಮವಂತೂ ಯಾವುದೇ ಸ್ಟಾರ್ ಹೋಟೆಲ್ ಸೌಲಭ್ಯವಿರುವ ಆಸ್ಪತ್ರೆ ಅಥವಾ ಹೆಲ್ತ್ ರೆಸಾರ್ಟ್ ಗಿಂತಲೂ ಕಡಿಮೆಯಿಲ್ಲ- ರವೀಂದ್ರ ಕೆ. ಆರ್, ತಪ್ಪದೆ ಮುಂದೆ ಓದಿ…
ಅಜೀವ ಸದಸ್ಯತ್ವ ಕರುಣಿಸಿರುವ ನ್ಯೂರೋಪತಿಯು ಆಗಾಗ ಸರಿ ಕಂಡ ಚಿಕಿತ್ಸೆಗಳಿಗೆ ಪ್ರೇರೇಪಿಸುತ್ತಲೇ ಇರುತ್ತದೆ. ಹಾಗಾಗಿ ಕಳೆದವಾರ, ಉಡುಪಿ ಸಮೀಪದ ಉದ್ಯಾವರದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ರತ್ನಶ್ರೀ ಅರೋಗ್ಯಧಾಮದಲ್ಲಿ ಒಂದು ವಾರವಿದ್ದು ಚಿಕಿತ್ಸೆ ಮಾಡಿಸಿಕೊಂಡೆ.
ಮೂರು ವರ್ಷಗಳ ಹಿಂದೆ ಇಲ್ಲಿ ಒಮ್ಮೆ ಚಿಕಿತ್ಸೆ ಪಡೆದು ಬೆಂಡೆತ್ತಿಸಿಕೊಂಡಿದ್ದೆ ( ಆದರ ಬಗ್ಗೆ ಬರೆದಿದ್ದೆ ). ಆದರೆ ಈ ಬಾರಿ ನನ್ನ ಬಾಧೆಯ ಲಕ್ಷಣಗಳು ಸ್ವಲ್ಪ ಬದಲಾಗಿರುವ ಕಾರಣಕ್ಕೋ ಏನೋ, ತೀವ್ರತರ ದೇಹದ ಮಸಾಜ್ ಕೈಬಿಟ್ಟು, ನಿತ್ಯವೂ ಬೆಳಗಿನ ಔಷಧಿಯುಕ್ತ ಹರಳೆಣ್ಣೆ ಪಾನ ಹಾಗೂ ಬಿಸಿ ಬಿಸಿ ಕಷಾಯ ಸ್ನಾನಗಳ ಜೊತೆಗೆ ನನಗೆ ಹೊಸದಾದ ಹಾಗೂ ಸೋಜಿಗವೆನಿಸಿದ ಒಂದೆರಡು ಚಿಕಿತ್ಸೆಗಳನ್ನು ನೀಡಿದರು.

ನಾಡಿ ಸ್ವೇದನ :
ಪ್ರೆಷರ್ ಕುಕ್ಕರ್ ನಲ್ಲಿ ಕಷಾಯವನ್ನು ಕುದಿಸಿ, ಒಂದು ಪೈಪ್ ನಲ್ಲಿ ಆದರ ಹಬೆಯನ್ನು ದೇಹದ ಹಿಂಭಾಗಕ್ಕೆಲ್ಲಾ ಬಿಟ್ಟರು. ಮೈಯೆಲ್ಲಾ ಬೆವರು ಕಿತ್ತು ಬಂತು. ಬಯ್ಯದೇ ಬೆವರಿಳಿಸುವುದು ಎಂದರೆ ಇದೇ ಇರಬೇಕು…! ಅದೇನೇ ಇರಲಿ, ಬಿಗಿ ಹಿಡಿದ ನರನಾಡಿ ಸ್ನಾಯುಗಳೆಲ್ಲಾ ಸಡಿಲಾದಂತಾಗಿ ಒಂಥರಾ ಹಿತವೆನಿಸಿತು. ಆದರೂ ಈ ಚಿಕಿತ್ಸೆಯನ್ನು ತುಂಬಾ ಜಾಗರೂಕತೆಯಿಂದಲೇ ಮಾಡುತ್ತಾರೆ / ಮಾಡಬೇಕು. ನಾವು ಆಗಾಗ ಬಿಸಿ ಸಾಕೋ ಬೇಕೋ ಹೇಳುತ್ತಿರಬೇಕು. ಇಲ್ಲವಾದರೆ ಬಿಸಿ ಅತೀ ಹೆಚ್ಚಾಗಿ ಹಿಂಭಾಗ ಅಂಡು ಸುಟ್ಟ ಬೆಕ್ಕಿನoತಾಗಬಹುದು…!

ನಸ್ಯ ಕರ್ಮ :
ಇದನ್ನು ಕೇಳಿದೊಡನೇ ಇವರು ನಸ್ಯವನ್ನೇನಾದರೂ ಮೂಗಿಗೆ ಏರಿಸುವರೇ ಎಂದು ಮೂಡಿದ್ದ ಅನುಮಾನ ಚಿಕಿತ್ಸೆ ಆರಂಭಿಸಿದ ಮೇಲೆ ನಿವಾರಣೆಯಾಯ್ತು. ಔಷಧಿಯುಕ್ತ ಎಣ್ಣೆಯ ಐದೈದು ಡ್ರಾಪ್ಸ್ ಗಳನ್ನು ಮೂಗಿಗೆ ಬಿಟ್ಟು, ನಸ್ಯದಂತೆ ಒಳಗೆಳೆದುಕೊಳ್ಳಲು ಹೇಳಿದರು. ಔಷಧಿ ಒಳಗೆ ಹೋದಲ್ಲೆಲ್ಲಾ ಘಾಟು ಅಡರಿ ಗಂಟಲಿನಾಳಕ್ಕೆ ಇಳಿದು ನರನಾಡಿಗಳೆಲ್ಲಾ ಸಡಿಲಾದಂತೆ ಭಾಸವಾಯ್ತು.
ನಂತರ ಇದೇ ಚಿಕಿತ್ಸೆಯ ಮುಂದುವರೆದ ಭಾಗವಾಗಿ ಮುಖಕ್ಕೆ ಕೊಬ್ಬರಿ ಎಣ್ಣೆಯ ಮಸಾಜ್ ಮಾಡಿದರು. ಚಿಕಿತ್ಸೆ ಆರಂಭಿಸಿದ ಮೇಲೆಯೇ ಗೊತ್ತಾದದ್ದು, ಇದು ಹೆಣ್ಣು ಮಕ್ಕಳ ಸೌಂದರ್ಯವರ್ಧನೆಗೆ ಮಾಡುವ ಮಸಾಜ್ ನಂತಲ್ಲವೆಂದೂ, ಬದಲಿಗೆ ಮುಖ ಮರ್ಧನದ ಮೂಲಕ ಬಿಗಿ ಹಿಡಿದ ಕುತ್ತಿಗೆಯ ( Cervical ) ನರನಾಡಿಗಳನ್ನು ಸಡಿಲಗೊಳಿಸಿ, ಸಕ್ರಿಯಗೊಳಿಸುವ ಚಿಕಿತ್ಸೆ ಎಂದು. ಎಣ್ಣೆ ಮಸಾಜ್ ನಂತರ ಮುಖ ಮಿರಿ ಮಿರಿ ಮಿಂಚುವುದನ್ನು ಕಂಡು, ಮಸಾಜ್ ಮಾಡಿದ ಹುಡುಗ, ನೀವು ಈಗ ಸಖತ್ ಮಿಂಚಿಂಗ್ ಸರ್, ಎಂದ.

ಧೂಮಪಾನ ಚಿಕಿತ್ಸೆ – ಗುಡು ಗುಡಿ :
ಹುಕ್ಕಾ ಮತ್ತು ಹೊಗೆ ಸೇದುವ ಚಿಲುಮೆಯ ಹೈಬ್ರಿಡ್ ನoತಿರುವ, ಕುಡಿಕೆ ಮಾದರಿಯ ಗುಡುಗುಡಿಯಲ್ಲಿ ಕೆಳಗೆ ನೀರು ಹಾಗೂ ಮೇಲೆ ಔಷಧಿಯುಕ್ತ ಅರಿಶಿನ ಹಾಕಿ, ಬೆಂಕಿ ಹಚ್ಚಿ, ಹುಕ್ಕಾ ಸೇದುವಂತೆ ಸೇದಿಸಿದರು. ಜೊತೆಗೆ ಒಳಗೆಳೆದುಕೊಂಡ ಹೊಗೆಯನ್ನು ಆದಷ್ಟು ಒಳಗೇ ಹಿಡಿದುಕೊಂಡು ನಿಧಾನವಾಗಿ ಹೊರಬಿಡುವಂತೆಯೂ ಹೇಳಿದರು. ಈ ಮುಂಚೆ ಸಿಗರೇಟ್ ಸೇದಿದ್ದರೆ ಸುಲಭವಾಗುತ್ತಿತ್ತೇನೋ…! ಗುಡು ಗುಡು ಗುಡು ಸದ್ದು ಮಾಡುತ್ತ ಹೊಗೆಯನ್ನು ಒಳಗೆ ಎಳೆದದ್ದೇ ತಡ, ಔಷಧೀಯ ಹೊಗೆ ಒಮ್ಮೆಲೇ ಗಂಟಲಿಗಡರಿ, ತಲೆ ಧಿಮ್ಮೆನಿಸಿ, ಕೆಮ್ಮು ಬಂತು. ಆದರೂ ಕ್ರಮೇಣ ಅಭ್ಯಾಸವಾಗಿ ಸಿಗರೇಟ್ ಸೇದುವವರoತೆ ಸರಾಗವಾಗಿ ಒಳಗೆಳೆದುಕೊಂಡು ಹೊಗೆ ಬಿಡುವುದನ್ನು ಕಲಿತೆ…! ಅಂತೂ ಇದುವರೆಗೂ ಧೂಮಪಾನ ಮಾಡದ ನಾನು, ಇಲ್ಲಿ ಧೂಮಪಾನಿಯಾದೆ. ಶಿಶುನಾಳ ಶರೀಫರ ಗೀತೆ ನೆನಪಾಯ್ತು –
ಒಡಲೊಳಗಿನಾ ರೋಗ ತೆಗೆದು ಇಡಡೊ
ಗುಡು ಗುಡಿಯ ಸೇದಿ ನೋಡೋ….
ಅಂತೂ ಈ ಬಾರಿ ಎಣ್ಣೆ, ನಸ್ಯ ಹಾಗೂ ಧೂಮಪಾನ ಎಲ್ಲವನ್ನೂ ಮಾಡಿದಂತಾಯ್ತು. ಈ ಚಿಕಿತ್ಸೆಗಳನ್ನು ಸಮಾ ನಸ್ಯ ಏರಿಸುತ್ತಿದ್ದ ಹಾಗೂ ಭಂಗಿ ಸೇದುತ್ತಿದ್ದ ಆಯುರ್ವೇದ ಪಂಡಿತರು ಕಿಕ್ಕೇರಿದ ಸಮಯದಲ್ಲಿ ಆವಿಷ್ಕರಿಸಿರಬಹುದು ಎಂಬ ಶಂಕೆಯೂ ಮೂಡಿತು…! ಈ ಬಾರಿಯ ಚಿಕಿತ್ಸೆ ಸುಮಾರು 15 ದಿನಗಳಲ್ಲಿ ಉತ್ತಮ ಫಲಿತಾಂಶ ನೀಡುವುದಾಗಿ ಇಲ್ಲಿ ಹೇಳಿದ್ದಾರೆ. ನನಗೂ ಅದೇ ಭರವಸೆಯಿದೆ.
ಇನ್ನು ಈ ಆಸ್ಪತ್ರೆಯ ಬಗ್ಗೆ ಹೇಳಲೇ ಬೇಕು. 1958 ರಲ್ಲಿ ಸ್ಥಾಪಿಸಲಾದ ಈ ಆಸ್ಪತ್ರೆ ಇಂದು ಸುಮಾರು 350 ಹಾಸಿಗೆಗಳ ಬೃಹತ್ ಆಸ್ಪತ್ರೆಯಾಗಿ ಬೆಳೆದಿದೆ. 2021 ರಲ್ಲಿ ಸೇರ್ಪಡೆಯಾದ ಹೊಸ ರತ್ನಶ್ರೀ ಅರೋಗ್ಯಧಾಮವಂತೂ ಯಾವುದೇ ಸ್ಟಾರ್ ಹೋಟೆಲ್ ಸೌಲಭ್ಯವಿರುವ ಆಸ್ಪತ್ರೆ ಅಥವಾ ಹೆಲ್ತ್ ರೆಸಾರ್ಟ್ ಗಿಂತಲೂ ಕಡಿಮೆಯಿಲ್ಲ. ಆದರೆ ಹೋಲಿಕೆಯಲ್ಲಿ ಬೆಲೆ ಮಾತ್ರಾ ಕಡಿಮೆಯಿದೆ.

ಇಲ್ಲಿ ಎದ್ದು ಕಾಣುವುದು, ಆಸ್ಪತ್ರೆಯ ಮೇಲಧಿಕಾರಿಗಳಿಂದ ಹಿಡಿದು ಎಲ್ಲಾ ವೈದ್ಯರ ಹಾಗೂ ಸಿಬ್ಬಂದಿವರ್ಗದವರ ಶ್ರದ್ದೆ, ಶಿಸ್ತು, ಸಂಯಮ ಹಾಗೂ ವಿನಯದ ಸೇವೆ. ಜನರಲ್ ವಾರ್ಡ್ ಇರಲಿ, ಸ್ಪೆಷಲ್ ವಾರ್ಡ್ ಇರಲಿ, ಚಿಕಿತ್ಸೆ ಮಾಡುವಾಗ ಎಲ್ಲಾ ರೋಗಿಗಳನ್ನು ಇವರು ಸಮಾನ ಕಾಳಜಿಯಿಂದ ನೋಡುವ ಪರಿ ಮಾತ್ರಾ ನನಗೆ ತುಂಬಾ ಮೆಚ್ಚುಗೆಯಾಯ್ತು. ಹಾಗೆಯೇ ಇವರು ಸ್ವಚ್ಛತೆಗೆ ನೀಡಿರುವ ಆದ್ಯತೆ ಹಾಗೂ ಅದರ ಪರಿಪಾಲನೆ. ಆಯುರ್ವೇದ ಚಿಕಿತ್ಸೆ ಬಯಸುವವರಿಗೆ ಈ ಆಸ್ಪತ್ರೆ ಖಂಡಿತಾ ಒಂದು ಉತ್ತಮ ಆಯ್ಕೆಯಾದೀತು.
ಚಿತ್ರಗಳು : ನಾನು ಸೇದಿದ ಗುಡು ಗುಡಿ, ಆಸ್ಪತ್ರೆ, ಆಯುರ್ವೇದ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಕ್ಯಾಂಪಸ್ಸಿನ, ಒಂದು ಬೆಳಗಿನ ದೃಶ್ಯಗಳು. ಜೊತೆಗೆ ಮನಸೆಳೆದ, ಆಗಷ್ಟೇ ಎಲೆ ಉದುರಿಸಿ, ಹೂ ಅರಳಿಸಿ ನಿಂತ ಅಪರೂಪದ ನಾಗಲಿಂಗ ಪುಷ್ಪದ ಮರ ಹಾಗೂ ಸುಂದರ ಹೂಗಳು.
- ರವೀಂದ್ರ ಕೆ. ಆರ್.
