‘ನಾಗಿಣಿ’ ನಿರ್ದೇಶಕ ಹಯವದನ ಅವರ ಕನಸು

ಮೂಡಲಮನೆಯ ಸೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ, ಇಂದು ಕಿರುತೆರೆಯಲ್ಲಿ ಬಹುಬೇಡಿಕೆಯ ನಿರ್ದೇಶಕರಾಗಿದ್ದಾರೆ, ಅದುವೇ ಹಯವದನ ಅವರು. ಸರಳ, ಸಜ್ಜನಿಕೆ, ಉತ್ಸಾಹಿ ನಿರ್ದೇಶಕನ ಜೊತೆ ಆಕೃತಿಕನ್ನಡ ಒಂದಷ್ಟು ಹರಟೆ ಹೊಡೆದಾಗ ಬಣ್ಣದ ಬದುಕಿನ ವಾಸ್ತವಗಳ ಚಿತ್ರಣ, ತಪ್ಪದೆ ಮುಂದೆ ಓದಿ..

ಕ್ಯಾಮೆರಾ, ರೋಲಿಂಗ್, ಆಕ್ಷನ್… ಈ ಮೂರು ಪದಗಳನ್ನು ಕೇಳುವಾಗ ರೋಮಾಂಚನವೆನ್ನಿಸದೆಯಿರದು. ಸಿನಿಮಾ ಅಂದರೆ ಅದೊಂದು ಸುಂದರ ಕಲ್ಪನಾ ಲೋಕ. ಚಿತ್ರಮಂದಿರದಲ್ಲಿ ಮೂರು ತಾಸು ಕೂತು ನೋಡಬೇಕೆಂದರೆ ಪ್ರೇಕ್ಷಕನ ಭಾವನೆಗಳನ್ನು ಹಿಡಿದಿಡುವ ಸಾಮರ್ಥ್ಯ ನಿರ್ದೇಶಕನಿಗೆ ಇರಬೇಕು. ಕೋಟ್ಯಂತರ ಜನರ ಭಾವನೆಗಳನ್ನು ಹಿಡಿದಿಟ್ಟು ಒಳ್ಳೆ ಸಿನಿಮಾ ಕೊಡಬೇಕು ಅಂದರೆ ಅದು ನಿರ್ದೇಶಕನಿಗೆ ದೊಡ್ಡ ಸವಾಲು. ಕ್ಯಾಮೆರಾ ಮುಂದೆ ನಿಂತು ಆಕ್ಷನ್ …ಕಟ್ … ಎನ್ನುವಾಗ ನಿರ್ದೇಶಕನ ತಲೆಯಲ್ಲಿ ಸಾಕಷ್ಟು ಆಸೆಗಳು, ಆಕಾಂಕ್ಷೆಗಳು ತುಂಬಿರುತ್ತದೆ. ತಾನು ನಿರ್ದೇಶಿಸುವ ಸಿನಿಮಾ ಕೋಟ್ಯಂತರ ಜನರ ಮೆಚ್ಚುಗೆ ಸಿಗಲಿ ಎನ್ನುವ ಬೆಟ್ಟದಷ್ಟು ಆಸೆಗಳು ಇರುತ್ತದೆ. ಗೆದ್ದಾಗ ಹಿಗ್ಗುತ್ತಾನೆ ಮುನ್ನುಗುತ್ತಾನೆ, ಅದೇ ಸೋತಾಗ ಯಾರಿಗೂ ಗೊತ್ತಿಲ್ಲದಂತೆ ಒಳಒಳಗೆ ದುಃಖಿಸುತ್ತಾನೆ. ಅಂತಹ ನಿರ್ದೇಶಕನ ಮನಸ್ಥಿತಿಯನ್ನು ತಿಳಿಯುವ ಸಣ್ಣ ಪ್ರಯತ್ನ.

ನಿರ್ದೇಶಕ ಹಯವದನ ಅವರ ಭಾವನಾ ಲೋಕದಲ್ಲಿ ಆಕೃತಿ ಕನ್ನಡ ಪ್ರವೇಶಿಸಿದಾಗ ಸಾಕಷ್ಟು ವಿಷಯಗಳು ಸಿಕ್ಕವು. ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಯಶಸ್ವಿ ನಿರ್ದೇಶಕರಲ್ಲಿ ಹಯವದನ ಅವರು ಕೂಡಾ ಬಬ್ಬರು. ಮನೆ- ಮನ ಗೆದ್ದ ‘ನಾಗಿಣಿ’, ‘ಅಗ್ನಿಸಾಕ್ಷಿ’ ಗಳಂತಹ ಯಶಸ್ವಿ ಧಾರವಾಹಿಗಳಿಗೆ ಆಕ್ಷನ್, ಕಟ್ ಹೇಳಿದವರು. ಈಗ ಅವರ ನಿರ್ದೇಶನದ ಚೊಚ್ಚಲ ಚಿತ್ರ “ಎಲ್ಲೋ ಜೋಗಪ್ಪ ನಿನ್ನ ಅರಮನೆ ” ದೊಡ್ಡ ಪರದೆ ಬರಲು ಸಿದ್ದವಾಗಿದೆ.

ಹಯವದನ ಅವರು ಹುಟ್ಟಿ ಬೆಳೆದದ್ದು ಪುಟ್ಟದಾದ ಹಳ್ಳಿಯಲ್ಲಿ, ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಾಗ ಇಲ್ಲಿ ಎಲ್ಲರೂ ಅಪರಿಚಿತರು. ಆ ಸಂದರ್ಭದಲ್ಲಿ ಉಮೇಶ್ ನಾಯಕ ಅವರ  “ಕರ್ನಾಟಕ ಚಲನಚಿತ್ರ ತಾಂತ್ರಿಕ ಕೇಂದ್ರ” ದಲ್ಲಿ ಸ್ವಲ್ಪ ತಿಂಗಳು ತರಬೇತಿಯನ್ನು ಪಡೆದರು. ಅಲ್ಲಿ ಅವರಿಗೆ ಸ್ವಲ್ಪ ಮಟ್ಟಿಗೆ ತೆರೆಯ ಹಿಂದಿನ ಬದುಕು ಅರ್ಥವಾಯಿತು. ಬಣ್ಣದಲೋಕದಲ್ಲಿ ಸಾಧಿಸಬೇಕು ಎಂದು ಆಸೆ ಹೊತ್ತು ಬಂದಾಗ ಹಯವದನವರಿಗೆ ಸಿಕ್ಕದಾರಿಗಳು ಹಲವಾರು. ಕಿರುತೆರೆಯ ಸೆಟ್ ಗಳಲ್ಲಿ ಇಂತದ್ದೇ ಕೆಲಸ ಎನ್ನದೆ ಎಲ್ಲವನ್ನು ಕಲಿಯ ತೊಡಗಿದರು. ‘ಮೂಡಲ ಮನೆ’ ಧಾರವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲ ಕಡೆ, ಎಲ್ಲರ ಬಾಯಲ್ಲಿಯೂ ಹಯವದನ ಅವರೇ ಇರುತ್ತಿದ್ದರು. ಅಷ್ಟು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮುಂದೆ ಅವರ ಶ್ರದ್ದೆ ಮತ್ತು ಶ್ರಮದ ಫಲವಾಗಿ ‘ಶುಭಮಂಗಳ’, ‘ನಾಗಿಣಿ’, ‘ಅಗ್ನಿ ಸಾಕ್ಷಿ’ಯಂತಹ ಯಶಸ್ವಿ ಧಾರವಾಹಿಗಳಿಗೆ ಆಕ್ಷನ್, ಕಟ್ ಹೇಳಿದರು. ಪ್ರೇಕ್ಷಕರು ಮನಸ್ಸಿಂದ ಹಯವದನ ಅವರ ಕೆಲಸಕ್ಕೆ ಭೇಷ್ ಎಂದರು. ಅಲ್ಲಿಂದ ಶುರುವಾದ ಅವರ ಕಿರುತೆರೆ ಪಯಣ ಮುಂದೆ ಅವರು ಹಿಂದೆ ತಿರುಗಿಯೂ ನೋಡದಷ್ಟು ಬ್ಯುಸಿಯಾದರು.

ಕಿರುತೆರೆಯಲ್ಲಿ ಯಶಸ್ವಿಯಾದ ಮೇಲೆ ಅವರು ಕೈ ಹಾಕಿದ್ದು  ಸಿನಿಮಾದತ್ತ, ಅವರ ಚೊಚ್ಚಲ ನಿರ್ದೇಶನದ “ಎಲ್ಲೋ ಜೋಗಪ್ಪ ನಿನ್ನ ಅರಮನೆ”ಸಿದ್ಧವಾಗಿದೆ. ಹಯವದನ ಅವರ ಕನಸಿನ ಕೂಸು ಇದು. ಆದಿ ಎನ್ನುವ ಯೂ ಟ್ಯುಬೆರ್ ಕತೆಯಿದು. ಅವನ  ಪ್ರಯಾಣದಲ್ಲಿ ನಡೆಯುವ ಸಿಹಿ ಕಹಿ ಘಟನೆಗಳ ಕಥಾ ಹಂದರ. ಈ ಸಿನಿಮಾವನ್ನು ಒಂದೇ ಜಾಗದಲ್ಲಿ ಚಿತ್ರೀಕರಿಸಿಲ್ಲ. ದೇಶದ ಎಲ್ಲ ಪ್ರಾಂತ್ಯದಲ್ಲಿ ಚಿತ್ರೀಕರಿಸಲಾಗಿದ್ದು ಈ ಸಿನಿಮಾದಲ್ಲಿ  ಬರುವ ಎಲ್ಲ ಪಾತ್ರಗಳ ಸೃಷ್ಠಿ, ಸನ್ನಿವೇಶಗಳು ಸಾಕಷ್ಟು ಜನರ ಬದುಕಿನಲ್ಲಿ ನಡೆದ ಘಟನೆಗಳಿಗೆ ಹತ್ತಿರವಾಗಿರುವುದರಿಂದ ಈ ಸಿನಿಮಾ ಪ್ರೇಕ್ಷಕರಿಗೆ  ಆಪ್ತವಾಗುತ್ತದೆ. ಇದನ್ನೆಲ್ಲಾ ಹೊರತು ಪಡಿಸಿ  ಬಣ್ಣದ ಬದುಕಿನ ಕುರಿತು ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಹೇಳುತ್ತಾ ಹೋದರು.

This slideshow requires JavaScript.

  • ಸಿನಿಮಾ ನಿರ್ದೇಶನ, ಕ್ಯಾಮೆರಾ ಕುರಿತಂತೆ ಹಲವಾರು ಸಂಸ್ಥೆಗಳಿವೆ. ಅವು ನಿಜಕ್ಕೂ ಕಲಿಕೆಗೆ ಸಹಾಯವಾಗುತ್ತದಯೇ?

ನಿಜ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಸ್ಕ್ರಿಪ್ಟ್, ನಿರ್ದೇಶನ, ತಾಂತ್ರಿಕತೆ ಬಗ್ಗೆ ಹೇಳಿ ಕೊಡುವ ಸಂಸ್ಥೆಗಳು ಸಾಕಷ್ಟಿವೆ. ಆದರೆ ಅಲ್ಲಿಂದ ಕಲಿಯುವಂತದ್ದು ವಿರಳ. ಈ ಬಣ್ಣದ ಬದುಕಿನಲ್ಲಿ  ವೈದ್ಯರು, ವಕೀಲರಂತೆ ಅಖಾಡಕ್ಕೆ ಇಳಿದೇ ಅನುಭವ ಪಡೆಯಬೇಕು.

  • ಪ್ಯಾನ್ ಇಂಡಿಯಾ ಬಂದ ಮೇಲೆ ಸಣ್ಣ ಬಜೆಟ್ ಸಿನಿಮಾಕ್ಕೆ ಹೊಡೆತ ಬಿತ್ತಾ?

“ಹಾ…ಹಾ…ಖಂಡಿತ ಇಲ್ಲಾ. ಕಾರಣವಿಷ್ಟೇ 200 ಕೋಟಿ ಹಾಕಿ ಸಿನಿಮಾ ನಿರ್ಮಿಸಿದವರಿಗೆ 200 ಕೋಟಿ ಭಯ ಇರುತ್ತದೆ. 5 ಕೋಟಿ ಹಾಕಿ ಸಿನಿಮಾ ನಿರ್ಮಿಸಿದವರಿಗೂ 5 ಕೋಟಿ ಭಯ ಇರುತ್ತೆ. ಹಾಗಾಗಿ ಇಲ್ಲಿ ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಇದ್ದೇ ಇರುತ್ತೆ. ದೊಡ್ಡ ಸಿನಿಮಾ ಅಥವಾ ಸಣ್ಣ ಸಿನಿಮಾ ಎನ್ನುವ ಭಯ ಬರೋಲ್ಲ. ಪ್ರತಿವರ್ಷ ಕನ್ನಡದಲ್ಲಿ 400 ಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತವೆ. ಬಿಡುಗಡೆಗೊಳ್ಳುವ ಚಿತ್ರಗಳು 200 ರಿಂದ 300 ಸಿನಿಮಾಗಳು ಮಾತ್ರ. ಗೆಲ್ಲುವುದು ಬೆರಳಿಕೆಯಷ್ಟು ಸಿನಿಮಾಗಳು ಮಾತ್ರ. ಪ್ರೇಕ್ಷಕರು ಬಯಸುವುದು ಒಳ್ಳೆ ಕತೆಯನ್ನಾಧಾರಿತ ಸಿನಿಮಾಗಳು. ನಿರ್ದೇಶಕನ ಕೆಲಸ ಪ್ರೇಕ್ಷಕರಿಗೆ ಒಳ್ಳೆ ಕತೆಯಾಧರಿತ ಸಿನಿಮಾಗಳನ್ನು ಕೊಡುವುದು, ಅಂತಹ ಸಿನಿಮಾ ಬಂದಾಗ ಪ್ರೇಕ್ಷಕ ಖಂಡಿತ ಗೆಲ್ಲಿಸುತ್ತಾರೆ. ಇಲ್ಲಿ ಪ್ಯಾನ್ ಇಂಡಿಯಾ ಸಿನಿಮಾ, ಸಣ್ಣ ಬಜೆಟ್ ಸಿನಿಮಾ ಅಂತ ಪ್ರಶ್ನೆ ಬರೋಲ್ಲ ಎನ್ನುವ ಆತ್ಮವಿಶ್ವಾಸದ ಮಾತನ್ನು ಹಯವದನ ಅವರು ವ್ಯಕ್ತ ಪಡಿಸುತ್ತಾರೆ.

  • ರೀಲ್ಸ್ ಬಂದ್ಮೇಲೆ ರಾತ್ರೋರಾತ್ರಿ ಸೆಲೆಬ್ರೆಟಿಗಳಾಗುತ್ತಿದ್ದಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕಿರುತೆರೆ ಅಥವಾ ಸಿನಿಮಾ ಜಗತ್ತಿನಲ್ಲಿ ರಾತ್ರೋರಾತ್ರಿ ಬೆಳೆಯಲು ಸಾಧ್ಯವಿಲ್ಲ. ಈಗಿರುವ ಘಟಾನುಗಟಿಗಳು ತೆವಳುತ್ತಾ ಅಂಬೆಗಾಲನ್ನು ಇಡುತ್ತಲೇ ಸೂಪರ್ ಸ್ಟಾರ್ ಗಳಾಗಿದ್ದಾರೆ. ಇನ್ನೂ ಸೋಷಿಯಲ್ ಮೀಡಿಯಾ ,ರೀಲ್ಸ್ ನಿಂದ ರಾತ್ರೋರಾತ್ರಿ ಹೆಸರು ಮಾಡಿದವರು ಈ ಬಣ್ಣದ ಪ್ರಪಂಚದಲ್ಲಿ ಬಹುಕಾಲ ಉಳಿಯಲು ಸಾಧ್ಯವಿಲ್ಲ. ಇಲ್ಲಿ ಕಲಿಕೆ, ಶ್ರದ್ದೆ, ಶ್ರಮ ಪ್ರತಿನಿತ್ಯ ಇರಬೇಕು. ನಾನು ಈಗಲೂ ಪ್ರತಿದಿನ ಕಲಾವಿದರಿಂದ, ತಂತ್ರಜ್ಞರಿಂದ, ಲೇಖಕರಿಂದ ಕಲಿಯುತ್ತಲೇ ಇದ್ದೇನೆ ಎಂದು ಹೇಳುವುದರ ಮೂಲಕ ಮುಗುಳ್ನಗೆ ಬಿರುತ್ತಾರೆ.

  • ಸಿನಿಮಾ ಹಾಗೂ ಕಿರುತೆರೆ ಪ್ರಪಂಚಕ್ಕೂ ಎಷ್ಟು ಅಂತರವಿದೆ?

ಅಜಗಜಾಂತರ ಅಂತರವಿದೆ. ಕಿರುತೆರೆಯಲ್ಲಿ ಪ್ರತಿದಿನ ಒಂದು ಕತೆಯನ್ನ ೨೦ ನಿಮಿಷ ಒಂದು ವರ್ಷದವರೆಗೂ ಹೇಳ್ತಾ ಹೋಗ್ತಿವಿ. ಆದರೆ ಸಿನಿಮಾದಲ್ಲಿ ಹಾಗಲ್ಲ, ಪೂರ್ತಿ ಕತೆಯನ್ನ ಮೂರೂ ತಾಸಿನಲ್ಲಿ ಹೇಳಿ ಮುಗಿಸಬೇಕು. ಆ ಮೂರೂ ತಾಸು ಪ್ರೇಕ್ಷಕನಿಗೆ ಹೇಳುವಾಗ ಅವರ ಸಂಪೂರ್ಣ ಲಕ್ಷವನ್ನು ಪರದೆಮೇಲೆ ಹಿಡಿದಿಡಬೇಕು.

ಹಯವದನ ಅವರ ಜೊತೆಗೆ ಮಾತಾಡುತ್ತಾ ಹೋದಾಗ ಒಬ್ಬ ನಿರ್ದೇಶಕನಿಗೆ ಸಾಕಷ್ಟು ಸವಾಲುಗಳಿರುತ್ತವೆ ಎನ್ನುವುದು ಅರ್ಥವಾಯಿತು. ಪ್ರಬುದ್ಧತೆಯ ಮಾತು, ವಾಸ್ತವಕ್ಕೆ ಹತ್ತಿರವಾದ ಮಾತುಗಳ ನೈಪುಣ್ಯತೆ ಯಶಸ್ವೀ ನಿರ್ದೇಶಕನಿಗೆ ಇರಬೇಕಾದ ಅರ್ಹತೆಗಳು. ಅದನ್ನು ಹಯವದನವರಲ್ಲಿ ಕಾಣಬಹುದು. ಅವರ ಕನಸ್ಸು ನನಸಾಗುವ ಸಮಯ ಹತ್ತಿರ ಬಂದಿದೆ. ಅವರ ಸಿನಿಮಾ “ಎಲ್ಲೋ ಜೋಗಪ್ಪ ನಿನ್ನ ಅರಮನೆ ” ಜನರ ಮನಗೆದ್ದರೇ ಹಯವದನ ಅವರಂತಹ ಕನಸುಗಾರನ ಶ್ರಮ ಗೆಲ್ಲಿಸಿದಂತಾಗುವುದು. ಅವರ ಹೊಸ ಚಿತ್ರಕ್ಕೆ ಆಕೃತಿ ಕನ್ನಡ ಶುಭಕೋರುತ್ತದೆ.


  • ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಮುಖ್ಯ ಸಂಪಾದಕಿ.WWW.AAKRUTIKANNADA.COM

4 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW