ಹರ್ಷಿಯಾ ಬಾನು ಅವರು ಪ್ರತಿಭಾನ್ವಿತ ಲೇಖಕಿ, ಶಿಕ್ಷಕಿ. ಅಂಧರಾದರೂ ಅವರ ಸಾಧನೆಗೆ ಎಂದು ಕೂಡಾ ಅಡ್ಡಿ ಮಾಡಲಿಲ್ಲ. ಪ್ರತಿನಿತ್ಯ ಇನ್ನೂರು ಕಿಮೀ ಕ್ರಮಿಸಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಜೀವವದು. ಇತ್ತೀಚಿಗೆ ತಾವು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಬಸ್ಸಿನ ನಿರ್ವಾಹಕರು ಆಡಿದ ಬೇಜವಾಬ್ದಾರಿ ಮಾತುಗಳು, ಸಹ ಪ್ರಯಾಣಿಕರು ನಡೆದುಕೊಂಡ ರೀತಿ ಅವರನ್ನು ಘಾಸಿಕೊಳಿಸಿತು. ಅದರ ಬಗ್ಗೆ ಅವರು ಬರೆದುಕೊಂಡಂತಹ ಲೇಖನ. ನಿಮ್ಮ ಅಭಿಪ್ರಾಯ ತಪ್ಪದೆ ಹಂಚಿಕೊಳ್ಳಿ…
ನಾನು ಪ್ರತಿನಿತ್ಯ ಹತ್ತಿರ ಹತ್ತಿರ ಇನ್ನೂರು ಕಿ.ಮೀ ಪ್ರಯಾಣಿಸುವುದು. ಮೊನ್ನೆಯ ಘಟನೆ ಬಹಳಷ್ಟು ಬೇಸರ ತರಿಸಿತು. ಇಷ್ಟು ಬೇಸರ ಯಾವತ್ತೂ ಆಗಿರಲಿಲ್ಲ.
ಜುಟ್ಟನಹಳ್ಳಿಯಿಂದ ಹಿರೀಸಾವೆಗೆ ಆಟೋದಲ್ಲಿ ಬಂದಿಳಿದು ನಂತರ ಹಿರೀಸಾವೆಯಿಂದ ಚನ್ನರಾಯಪಟ್ಟಣಕ್ಕೆ ಬಂದು ಅರಸೀಕೆರೆಯ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಬಸ್ ಬಂತು, ಸಹ ಪ್ರಯಾಣಿಕರಿಗೆ ಈ ಬಸ್ ಅರಸೀಕೆರೆಯತ್ತ ಹೋಗುತ್ತದೆಯೇ ಎಂದು ವಿಚಾರಿಸಿದೆ. ಅವರು ಹೌದು ಎಂದ ಕೂಡಲೆ ಸೀಟಿಗಾಗಿ ಬ್ಯಾಗು ಇಡಲು ಮುಂದೆ ಹೋದೆ. ತಕ್ಷಣವೇ ಬಸ್ಸಿನಿಂದ ಇಳಿದ ಕಂಡಕ್ಟರ್ ಬೈಯಲು ಶುರುವಿಟ್ಟರು. “ಏನಮ್ಮ ನಿನಗ್ ತಲೆಯಿಲ್ವ? ಮುಂದೆ ಟೈಯರಿದೆ ಏನಾದರೂ ಹೆಚ್ಚು ಕಮ್ಮಿಯಾದರೆ ನಮ್ ತಲೆಗೆ ತರ್ತಿರಾ, ಸೀಟು ಅಷ್ಟು ಇಂಪಾರ್ಟೆಂಟಾ ನಿಮಗೆ?…” ಎಂದು ಬಾಯಿಗೆ ಬಂದ ಹಾಗೆ ಬೈದ. ಅವನ ಮಾತಿಂದ ಮನಸ್ಸಿಗೆ ನೋವಾಯಿತು. ನಾನುಸೀಟು ಹಿಡಿಯದೇ ಸುಮ್ನಾದೆ.

ಫೋಟೋ ಕೃಪೆ : Times Of India
ನಂತರ ಯಾವುದೋ ಒಂದ್ ಸೀಟು ಸಿಕ್ತು, ಬಂದು ಕುಳಿತೆ. “ನಮಗೂ ಜವಾಬ್ದಾರಿ ಅಥವಾ ಹೊಣೆಗಾರಿಕೆ ಇರುತ್ತೆ ಸರ್. ಮನೆಯಲ್ಲಿ ನಮ್ಮ ಕುಟುಂಬ ವರ್ಗ ಮಗಳು ಅಥವಾ ಅಕ್ಕ ಯಾವಾಗ ಮನೆ ಸೇರ್ತಾಳೆ ಅನ್ನೋ ಆತಂಕದಲ್ಲೆ ನನ್ನ ದಾರಿ ಕಾಯುತ್ತಿರುತ್ತಾರೆ. ನಾನು ಟೈರ್ ಗೆ ಅಷ್ಟು ಕ್ಲೋಸಾಗ್ ನಿಂತಿರಲಿಲ್ಲ. ಅಂತರದಲ್ಲೇ ಇದ್ದೆ. ಬಸ್ಸಿನ ನಿರ್ವಾಹಕರುಗಳು ಅಂಗವಿಕಲರು ಹಾಗೂ ಅಂಧರಿಗಾಗಿ ಎಂದು ಮೀಸಲಿರಿಸಿರುವ ಆಸನಗಳನ್ನು ನಮಗೆ ಬಿಡಿಸಿ ಕೊಟ್ಟರೆ ನಾವ್ಯಾಕ್ ಸರ್… ಸೀಟಿಗಾಗಿ ಹೋರಾಟ ಮಾಡ್ತೀವಿ. ಬಿಡಿಸ್ಕೊಡಿ ಸರ್ ಅಂದರೆ ನಾವೇನ್ಮಾಡಲಿ ಮೇಡಮ್? ಅವರೇ ಅರ್ಥ ಮಾಡ್ಕೊಂಡು ಬಿಟ್ಕೊಡಬೇಕು ಎಂದು ಕೈ ಚೆಲ್ಲಿ ಬಿಟ್ರು. ಪ್ರಾರಂಭದಲ್ಲಿಅಷ್ಟೂ ಕಿಮೀ ನಿಂತು ನಿಂತು ಪ್ರಯಾಣ ಮಾಡಿ ಆರೋಗ್ಯ ಎಲ್ಲ ಹದಗೆಡಿಸಿಕೊಂಡಿದ್ದೀನಿ. ಅದಕ್ಕೆ ಸರ್… ನಾವು ಸೀಟ್ ಹಿಡಿಯೋಕೆ ಸಾಹಸ ಮಾಡೋದು. ಹಾಳದ ಜನ್ಮ ಇದು. ಹುಟ್ಟಿಸುವುದಾದರೆ ಈ ರೀತಿ ಹುಟ್ಟಿಸಲೇಬಾರದು ದೇವರು.” ಎಂದೆಲ್ಲ ನಿರ್ವಾಹಕರು ಟಿಕೆಟ್ ಕೇಳಲು ಬಂದಾಗ ಉತ್ತರ ಕೊಡೋಣ ಎಂದಿದ್ದೆ. ಆದರೆ ನಿರ್ವಾಹಕರು ಯಾರೋ ಅತೀಬುದ್ದಿವಂತರೇ. ಪಾಸೂ ಕೂಡ ಚೆಕ್ ಮಾಡದೆ ಮುಂದಿನ ಸಾಲಿಗೆ ಹೋದರು.
ಕೆ ಎಸ್ ಆರ್ ಟಿ ಸಿ ಆಡಳಿತ ಮಂಡಳಿ,ಸಹ ಪ್ರಯಾಣಿಕರಲ್ಲಿ ನನ್ನದೊಂದು ಮನವಿಯಿದ್ದು ಕಾಲು, ಕೈ ಸಮಸ್ಯೆಯಿರೋರು ಹೇಗೋ ಫಲಕ ನೋಡಿ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಕಣ್ಣಿನ ಸಮಸ್ಯೆಯಿರೋರು ಹೇಗೆ ತಮಗಾಗಿರುವ ಆಸನಗಳನ್ನು ಗುರುತಿಸಿ ಕುಳಿತುಕೊಳ್ಳುವುದು? ನಿರ್ವಾಹಕರ ಸೀಟಿನ ಮುಂದಿನ ಸೀಟೇ???… ಎಂದು ಹೇಳಿದ್ರಿಂದ ನಾನೂ ಪ್ರಾರಂಭದಲ್ಲಿ ಕೇಳುತ್ತಿದ್ದಾಗ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದವು.
ಸಹ ಪ್ರಯಾಣಿಕರೇ…ದಯವಿಟ್ಟು ಅಂಗವಿಕಲರಿಗಾಗಿ ಕಾಯ್ದಿಟ್ಟ ಆಸನಗಳನ್ನು ಅವರಿಗೆ ಬಿಟ್ಟುಕೊಡಿ, ಒಂದು ವೇಳೆ ಬೇರೆಯವರು ಕೂತಾಗ ನಿರ್ವಾಹಕರು ಜವಾಬ್ದಾರಿ ತಗೆದುಕೊಂಡು ಸೀಟು ಬಿಡಿಸಿಕೊಡಿ ಮಾನ್ಯರೆ. ಇದ್ಯಾವುದು ಆಗದಿದ್ದರೆ ಬಸ್ ನಲ್ಲಿ ಹೆಸರಿಗೆ ಮಾತ್ರ ‘ಅಂಗವಿಕಲರಿಗೆ ಮೀಸಲಾದ ಸೀಟು’ ಎನ್ನುವ ಕಪ್ಪು ಬರಹ ತಗೆದುಬಿಡಿ. ಅಂಧರ ಮನುಷ್ಯರೇ, ಸ್ವಾವಲಂಬಿಯಾಗಿ ಬದುಕುತ್ತಿದ್ದೇವೆ. ಅವರ ಆತ್ಮವಿಶ್ವಾಸ ಕುಗ್ಗುವಂತೆ ಮಾಡಬೇಡಿ. ನಿರಾಯಾಸವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟರೆ ನೆಮ್ಮದಿಯ ನಿಟ್ಟುಸಿರು ಬಿಡುತ್ತೇವೆ.
ಹರ್ಷಿಕಾ ಬಾನು ಅವರು ಕಷ್ಟವಾದರೂ ಬಸ್ ನಲ್ಲಿ ಖುಷಿ ಖುಷಿಯಾಗಿ ಪ್ರಯಾಣಿಸುತ್ತಿದ್ದರು. ಅಂದು ಬಸ್ ನಿರ್ವಾಹಕ ಮಾತಾಡಿದ ರೀತಿ ಅನುಭವಿಸಿದ ನೋವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೊಂದು ದಿನ ನಿಮ್ಮ ಕುಟುಂಬದವರೇ ಈ ರೀತಿ ಕಣ್ಣೀರು ಹಾಕುವ ಪರಿಸ್ಥಿತಿ ತರುವುದು ಬೇಡ. ಬಸ್ ನಲ್ಲಿ ಅಂಗವಿಕಲರು, ಗರ್ಭಿಣಿಯರು, ವಯಸ್ಸಾದವರು ಇದ್ದರೇ ದಯವಿಟ್ಟು ಆಸನಗಳನ್ನು ಬಿಟ್ಟು ಕೊಡಿ. ಎಲ್ಲರಲ್ಲೂ ಸಾಮಾಜಿಕ ಪ್ರಜ್ಞೆ ಇರಲಿ.
- ಹರ್ಷಿಯಾ ಭಾನು (ಲೇಖಕರು,ಶಿಕ್ಷಕರು)
