ಎಸ್. ದಿವಾಕರ್ ಅವರಿಗೆ ಕೂಡ ಹೊಸ ತಲೆಮಾರಿನ ಬಗ್ಗೆ ವಿಶೇಷ ಆಸ್ಥೆ. ಈ ಒಡನಾಟವನ್ನು ಹೊಸ ತಲೆಮಾರಿನ ಬಗ್ಗೆ ಅವರಿಗಿರುವ ನಂಬಿಕೆ, ಅಪೇಕ್ಷೆಗಳ ರೂಪದಲ್ಲಿ ನೋಡಬಹುದು. ಬಾಣಾವರ ಶಿವಕುಮಾರ್ ಅವರು ಎಸ್. ದಿವಾಕರ್ ಅವರ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಎಸ್. ದಿವಾಕರ್ ನಿಜವಾದ ಅರ್ಥದಲ್ಲಿ ‘ಸಂಪಾದಕ’. ಬರೆಸಿದ್ದು ಮಾತ್ರವಲ್ಲ, ಬರೆಸಿದ್ದನ್ನು ಒಪ್ಪಗೊಳಿಸುವುದು ಸಂಪಾದಕನೊಬ್ಬನ ಕರ್ತವ್ಯ. ಆ ಹೊಣೆಗಾರಿಕೆಯನ್ನು ದಿವಾಕರ್ ಅವರಷ್ಟು ಸೊಗಸಾಗಿ, ಪರಿಣಾಮಕಾರಿಯಾಗಿ ಮಾಡಿದ ಸಂಪಾದಕರು ಯಾವ ಕಾಲದಲ್ಲೂ ದುರ್ಲಭವೇ. ಕಥೆ, ಕವಿತೆಗಳನ್ನು ಮಾತ್ರವಲ್ಲ ಕಾದಂಬರಿಗಳಂಥಹ ದೀರ್ಘ ಬರಹಗಳನ್ನೂ ತಿದ್ದಿದ, ಪರಿಷ್ಕರಿಸಿದ ಸಂಪಾದಕತ್ವ ಅವರದು.
ಒಂದು ಕಾಲದಲ್ಲಿ ಪತ್ರಿಕೆಗಳಲ್ಲಿ ತಾರೆಗಳಾಗಿ ಮೆರೆದ ಬರಹಗಾರರ ಕೃತಿಗಳ ಹೊಳಪಿನ ಹಿಂದೆ ದಿವಾಕರ್ ಅವರ ಕೈವಾಡ ಇದ್ದುದನ್ನು ಗಮನಿಸಬೇಕು. ಯಶವಂತ ಚಿತ್ತಾಲರ ”ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಮಾಲಿಕೆ ಹಾಗೂ ‘ಲಯಬದ್ಧ ಸಾಲುಗಳು’ (ಲಬಸಾ), ಗಿರಡ್ಡಿ ಗೋವಿಂದರಾಜರ ‘ಮರೆಯಬಾರದ ಹಳೆಯ ಕಥೆಗಳು’ – ಈ ಪ್ರಯೋಗಗಳ ಹಿಂದೆ ಸಂಪಾದಕ ದಿವಾಕರ್ ಅವರ ಒತ್ತಾಸೆಯಿದೆ. ವೈದೇಹಿ ಅವರು ಬರವಣಿಗೆ ಆರಂಭಿಸಿದ ಹೊಸದರಲ್ಲಿ, ‘ಜಾನಕಿ’ ಎನ್ನುವ ತಮ್ಮ ಮೂಲ ಹೆಸರಿನಲ್ಲಿ ಬರೆಯಲು ಹಿಂಜರಿದಾಗ ಅವರಿಗೆ ವೈದೇಹಿ ಎನ್ನುವ ಹೆಸರನ್ನು ಅಂದಿನ ಸುಧಾ ವಾರ ಪತ್ರಿಕೆಯ ಸಂಪಾದಕೀಯ ವಿಭಾಗದ ಮುಖ್ಯಸ್ಥರಾಗಿದ್ದ ಎಂ.ಬಿ. ಸಿಂಗ್ ಅವರಿಗೆ ಸೂಚಿಸಿದ್ದು ದಿವಾಕರ್ ಅವರೇ. ಕಾರ್ಟೂನ್ – ಕ್ಯಾರಿಕೇಚರ್’ಗಳ ರಚನೆ, ಪುಸ್ತಕಗಳ ಮುಖಪುಟ ವಿನ್ಯಾಸ, ಭಾವಗೀತೆಗಳ ರಚನೆಯನ್ನೂ ದಿವಾಕರ್ ಅವರ ಪ್ರಯೋಗಶೀಲತೆಯ ರೂಪದಲ್ಲಿ ಗಮನಿಸಬೇಕು.

ಗೋಪಾಲಕೃಷ್ಣ ಅಡಿಗರು ಹೊಸ ತಲೆಮಾರಿನ ಬಗ್ಗೆ ಹೊಂದಿದ್ದ ಅಕ್ಕರೆಯ ಬಗ್ಗೆ ದಿವಾಕರ್ ಮಾತನಾಡುವುದನ್ನು ಕೇಳುವುದೇ ಒಂದು ಸೊಗಸು. ದಿವಾಕರ್ ಅವರಿಗೆ ಕೂಡ ಹೊಸ ತಲೆಮಾರಿನ ಬಗ್ಗೆ ವಿಶೇಷ ಆಸ್ಥೆ. ಈ ಒಡನಾಟವನ್ನು ಹೊಸ ತಲೆಮಾರಿನ ಬಗ್ಗೆ ಅವರಿಗಿರುವ ನಂಬಿಕೆ, ಅಪೇಕ್ಷೆಗಳ ರೂಪದಲ್ಲಿ ನೋಡಬಹುದು. ದಿವಾಕರ್ ಅವರೊಂದಿಗಿನ ಒಡನಾಟದಿಂದ ಯುವ ಬರಹಗಾರರಿಗೆ ದೊರೆತ ಲಾಭ ಹಲವು ರೂಪದ್ದು. ದಿವಾಕರ್ ಅವರೊಂದಿಗಿನ ಒಡನಾಟವೆಂದರೆ, ಅದು ಡಿವಿಜಿ, ಮಾಸ್ತಿ, ಅಡಿಗ, ಬಿಜಿಎಲ್. ಸ್ವಾಮಿ, ನಿಸಾರ್, ಸುಮತೀಂದ್ರ ನಾಡಿಗ, ರಾಮಾನುಜನ್, ರಾಮಚಂದ್ರ ಶರ್ಮ, ಗಿರೀಶ ಕಾರ್ನಾಡ ಮುಂತಾದ ಅತಿರಥ ಮಹಾರಥರೊಂದಿಗೆ ಒಡನಾಡುವ ಅಪೂರ್ವ ಅನುಭವವೂ ಹೌದು. ದಿವಾಕರ್ ಅವರೊಂದಿಗಿನ ಮಾತು – ಕಥೆ ಬರಹಗಾರರಿಗೆ ವಿಶ್ವ ಸಾಹಿತ್ಯದ ಬೆಳಕಿಂಡಿಯಾಗಿ ಒದಗಿ ರುವಂತೆ, ಬರವಣಿಗೆಯ ಸಾಧ್ಯತೆಗಳನ್ನು ತೋರಿಸಿಕೊಡುವ ಕಮ್ಮಟವೂ ಹೌದು. ಪಠ್ಯದ ಪರಿಷ್ಕರಣೆಗೆ ಸಂಬಂಧಿಸಿದಂತೆ, ಪದವಿಟ್ಟಳುಪದಗ್ಗಳಿಕೆಯ ಗರ್ವವನ್ನು ಭಂಗಿಸುವುದಕ್ಕೆ ದಿವಾಕರ್ ಒಡನಾಟಕ್ಕಿಂತ ಮಿಗಿಲಾದ ಪ್ರಯೋಗ ಶಾಲೆಯಿಲ್ಲ.

ದಿವಾಕರ್ ಅವರ ನೆರವಿನಿಂದ, ಅವರ ಪರಿಚಯದ ಲಾಭದಿಂದ ಪುಸ್ತಕ ಪ್ರಕಟಿಸಿದ ಲೇಖಕರಿದ್ದಾರೆ. ದಿವಾಕರ್ ಅವರ ಟಿಪ್ಪಣಿ – ಅಭಿಪ್ರಾಯಗಳ ಲಾಭ ಪಡೆದು ತಮ್ಮ ಕೃತಿಗಳ ಚೆಲುವು ಹೆಚ್ಚಿಸಿಕೊಂಡವರಿದ್ದಾರೆ. ಎಲ್ಲಿಯಾದರೂ ಒಂದು ಒಳ್ಳೆಯ ಪುಸ್ತಕ ಕಂಡರೆ, ಅದರ ಬಗ್ಗೆ ಬರೆಯುವ ಮಾತನಾಡುವ ಹುಮ್ಮಸ್ಸು ಅವರದು. ಈ ಗುಣ ಪರೀಕ್ಷೆ ಕೂಡ ವಿವೇಕವನ್ನು ತಿದ್ದುವ, ಅಭಿರುಚಿಯನ್ನು ರೂಪಿಸುವ ಪ್ರಕ್ರಿಯೆಯೇ.
ದಿವಾಕರ್ ಅವರ ಸಾಹಿತ್ಯ ಪ್ರೀತಿ ಹಾಗೂ ಪ್ರಯೋಗಶೀಲತೆಯ ರೂಪದಲ್ಲಿ ಅವರು ರೂಪಿಸಿದ ‘ನಾದಲೀಲೆ’, ‘ಗುಲ್ಮೊಹರ್’, ಹಾಗೂ ‘ಚೈತ್ರೋದಯ’ ಕಾರ್ಯಕ್ರಮಗಳನ್ನು ನೋಡಬೇಕು. ವಿವಿಧ ಕ್ಷೇತ್ರಗಳ ಪ್ರಸಿದ್ಧರಿಂದ ದ.ರಾ. ಬೇಂದ್ರೆ, ಕೆ.ಎಸ್. ನಿಸಾರ್ ಅಹಮದ್, ಹಾಗೂ ಜಿ.ಎಸ್. ಶಿವರುದ್ರಪ್ಪ ಅವರ ಕವಿತೆಗಳನ್ನು ಓದಿಸುವ ಈ ಕಾರ್ಯಕ್ರಮಗಳು ಕನ್ನಡ ಸಾಹಿತ್ಯ ಲೋಕಕ್ಕೆ ಹೊಸದಷ್ಟೇ ಅಲ್ಲ, ಕಾವ್ಯವನ್ನು ಸಾರ್ವಜನಿಕವಾಗಿ ಸಂಭ್ರಮಿಸುವ ಹಬ್ಬಗಳೂ ಹೌದು. ‘ಕವಿಯಾಗಿ ನನಗೆ ಸಂದ ಬಹು ದೊಡ್ಡ ಗೌರವ’ ಎಂದು ಜಿ.ಎಸ್.ಎಸ್. ಉದ್ಗರಿಸಿದ್ದು ‘ಚೈತ್ರೋದಯ’ ಕಾರ್ಯಕ್ರಮದ ಅನನ್ಯತೆಗೆ ಸಾಕ್ಷಿಯಂತಿದೆ. (ಇನ್ನೂ ಇದೆ)
- ಬಾಣಾವರ ಶಿವಕುಮಾರ್
