ನಾಯಿ ಮರಿಗಳು ನೋಡಲು ಬಹಳವೇ ಮುದ್ದು. ಮೊದ ಮೊದಲು ಆಕರ್ಷಣೆಗೆ ಒಳಗಾಗಿ ತಂದು ಮುಂದೆ ಸಾಕಲಾಗದೆ ಬೀದಿಯಲ್ಲಿ ಬಿಟ್ಟು ಹೋಗುವವರನ್ನು ನೋಡಿದ್ದೇವೆ. ನಮ್ಮ ಮನೆಗೆ ಸುಗ್ಗಿ ಬಂದಾಗ ನನಗೆ ಇಷ್ಟವಿರಲಿಲ್ಲ, ಆದರೆ ಅದರ ಜವಾಬ್ದಾರಿಯಿಂದ ಹಿಂದೆ ಸರಿಯಲಿಲ್ಲ. ನಮ್ಮನೆಯಲ್ಲಿ ಎರಡು ನಾಯಿಗಳು ರಾಜಾ,ರಾಣಿಯಂತೆ ಇದ್ದಾರೆ. ಬೆಳ್ಳಿಗೆ ಈಗ ಹತ್ತು ವರ್ಷ, ಸುಗ್ಗಿಗೆ ೩ವರ್ಷ. ಮುಂದೆ ಓದಿ…
ಒಂದು ದಿನ ನನ್ನ ಮಕ್ಳು ಬೀದಿ ನಾಯಿಮರಿಗಳೆರಡನ್ನು ಎತ್ತಿಕೊಂಡು ‘ಅಮ್ಮ, ಇದರಲ್ಲಿ ಯಾವುದು ಚೆನ್ನಾಗಿ ಕಾಣ್ತಿದೆ?’ ಎಂದ್ರು. ಕೆಲಸ ಮಾಡುತ್ತಿದ್ದ ನಾನು, ಅವರ ಹತ್ತಿರ ನೋಡಿ…’ಯಾವುದು ಇಷ್ಟಾಗ್ತಿಲ್ಲ, ಹೋಗು’. ಎಂದಾಗ ಅವರ ಮುಖದಲ್ಲಿ ಸಂತಸ ಕಾಣಲಿಲ್ಲ, ಏನೋ ಹೋಗಲಿ ಎಂದು ಅವರನ್ನು ಖುಷಿ ಪಡಸೋಕೆ ‘ಬಿಳಿದು ಚೆನ್ನಾಗಿದೆ’ ಎಂದೆ. ”ನೋಡೋ, ಅಮ್ಮಗೆ ನಾನು ಹಿಡ್ಕೊಂಡಿದು ಇಷ್ಟಾಯಿತು, ನಿನ್ನ ನಾಯಿ ಮರಿ ಕಲರ್ ಚೆನ್ನಾಗಿಲ್ಲ. ಹೋಗಿ ಇಟ್ಟ ಬಾ…’ ಅಂದ ಸಕ್ಕರೆ.

ನನಗೆ ಒಮ್ಮೆ ಶಾಕ್ ‘ಯಾಕೆ! ಒಂದನ್ನಷ್ಟೇ ಇಡಬೇಕು,ಎರಡನ್ನು ಹೋಗಿ ಅದರ ಅಮ್ಮನ ಹತ್ತಿರ ಬಿಟ್ಟು ಬನ್ನಿ’ ಎಂದೇ. ‘ಇಲ್ಲಾ…ನನಗೆ ಬಿಳಿ ಮರಿ ಬೇಕು’ ಎಂದು ರಚ್ಛೆ ಹಿಡಿದ ಸಕ್ಕರೆ. ಮನೆಯಲ್ಲಿ ‘ಬೆಳ್ಳಿ ಇದೆಯಲ್ಲ, ಮತ್ಯಾಕೆ ಮತ್ತೊಂದು ನಾಯಿ?” ಎಂದೇ. ‘ಬೆಳ್ಳಿ. ಅಪ್ಪನ ಮಾತನಷ್ಟೇ ಕೇಳುತ್ತೆ, ನಮ್ಮ ಮಾತು ಕೇಳೋಲ್ಲ, ನಾವು ಇದನ್ನ ಟ್ರೈನ್ ಮಾಡಿ ನಮ್ಮ ಮಾತು ಕೇಳೋಹಾಗೆ ಮಾಡ್ತೀವಿ” ಎನ್ನುವ ಹಠ ಇಬ್ಬರದು. ಅವರ ತಾಳಕ್ಕೆ ನನ್ನ ಪತಿರಾಯ ಬೇರೆ. ಏನಾದ್ರು ಮಾಡ್ಕೊಳ್ರಿ ನನ್ನ ಹತ್ತಿರವಂತೂ ಬರಕೂಡದು ಎಂದು ತಾಕೀತು ಹಾಕಿದೆ. ಅದಕ್ಕೆ ಅಕ್ಕರೆ-ಸಕ್ಕರೆ ಇಬ್ಬರು ಖುಷಿಯಿಂದ ತಲೆ ಅಲ್ಲಾಡಿಸಿದರು.
ಅದಕ್ಕೆ ‘ಸುಗ್ಗಿ’ ಎಂದು ನಾಮಕರಣವೂ ಆಯಿತು. ಹೀಗೆ ದಿನ ಕಳೆಯಿತು.. ವಾರವಾಯಿತು…ತಿಂಗಳಾಯಿತು…ಹೊಸದರಲ್ಲಿ ಅದಕ್ಕೆ ಟ್ರೈನ್ ಮಾಡಿದ್ದೇನು? ಅದರ ಗಲೀಜು ತಗೆದಿದ್ದೇನು? ಊಟ ಹಾಕಿದ್ದೇನು? ಎಲ್ಲವೂ ಸಂಭ್ರಮವೋ ಸಂಭ್ರಮ. ನಾಲ್ಕು ತಿಂಗಳು ದಾಟುತ್ತಿದ್ದಂತೆ ಒಬ್ಬರಿಗಿಂತ ಒಬ್ಬರು ಮುದುಡಿ ಕೂರಲು ಶುರುಮಾಡಿದರು. ಹೋಗಿ ಸುಗ್ಗಿನ ನೋಡ್ಕೊಳ್ರಿ ಅಂದ್ರೆ ‘ನಾನು ಕಪ್ಪು ಇಷ್ಟ ಪಟ್ಟಿದ್ದೆ, ನೀನು ಬಿಳಿ ತಗೊಂಡೆ, ಇದು ಕಲರ ಚೆನ್ನಾಗಿಲ್ಲ’ ಅಂತ ಅಕ್ಕರೆ ನೆಪ. ಸಕ್ಕರೆಗೆ ಹೇಳಿದ್ರೆ ‘ನಾನು ತಂದಾಗ ಟಿವಿಯಲ್ಲಿ ADಬರುತ್ತಲ್ಲ… ಬಿಳಿ ಬಟ್ಟೆ ತರ ಕಾಣ್ತಿತ್ತು. ಈಗ ಅದರ ಬಣ್ಣ ಬ್ರೌನ್ ಆಗಿದೆ. ನನಗೆ ಇಷ್ಟಯಿಲ್ಲ..ನಾನು ಮುಟ್ಟಲ್ಲ’ ಅಂದ. ಸುಗ್ಗಿ ಬೆಳೆಯುತ್ತಾ ಹೋದಂತೆ ಅದರ ಮೇಲಿನ ಆಸಕ್ತಿಯು ಇಳಿಮುಖವಾಯಿತು.
ಸಿಟ್ಟು ನೆತ್ತಿಗೇರಿತು. ಇಬ್ಬರಿಗೂ ಒಂದೊಂದು ಕೊಟ್ಟೆ, ಅವರ ಬಾಯಿಗೆ ಅವರಪ್ಪ ಎದ್ದುಬಿದ್ದು ಓಡಿಬಂದ್ರು. ‘ಹೋಗ್ಲಿ ಬಿಡು, ಪಾಪ’ ಸಮಾಧಾನ ಮಾಡಲು ಶುರುಮಾಡಿದ್ರು. ಇದನ್ನ ನನಗೆ ಕಟ್ಟಿಹಾಕಿದ್ರೇ ನಾನು ನೋಡ್ಕೊಳಲ್ಲ. ಯಾರಾದ್ರೂ ಸಾಕೋರಿದ್ದರೇ ಕೊಟ್ಟಿಬಿಡಿ ಎಂದೆ. ‘ಸುಗ್ಗಿ, ಈಗ ದೊಡ್ಡದಾಗಿದೆ ಯಾರು ಸರಿಯಾಗಿ ನೋಡ್ಕೊಳಲ್ಲ. ಏನೋ ಒಂದು ಹೊತ್ತಿನ ಊಟ ತಾನೇ , ನಾನೆ ನೋಡ್ಕೋತ್ತೀನಿ ಬಿಡು’ ಎಂದು ಪಂಚಾಯತಿ ಮುಗಿಸಿದ್ರು.
ಬೆಳಗ್ಗೆ ತಿಂಡಿಗೆ ರೆಡಿ ಮಾಡುತ್ತಿದ್ದೆ ‘ನೋಡ್ರಿ…ಸುಗ್ಗಿ, ಗಲೀಜು ಮಾಡುತ್ತೆ ಬೇಗ ಹೊರಗೆ ಕರ್ಕೊಂಡು ಹೋಗ್ರಿ’ ಅಂತ ನನ್ನ ಪತಿರಾಯರಿಗೆ ಹೇಳಿದೆ, ‘ಪ್ಲೀಸ್… ಇವತ್ತೊಂದು ದಿನ ಕರ್ಕೊಂಡು ಹೋಗ್ಬಿಡು, ಆಫೀಸ್ urgent call ಇದೆ’ ಎಂದಾಗ ನನ್ನ ಕೈಯಲ್ಲಿ ಸೌಟ್ ನೋಡಿ, ‘ಕಾಲ್ ಮುಗಿದ ಮೇಲೆ ನಾನೆ ಕರ್ಕೊಂಡು ಹೋಗ್ತೀನಿ, ಕೂಲ್…’ ಅಂದ್ರು.

(ಬೆಳ್ಳಿ)
ಹೋಗ್ತಾ ಹೋಗ್ತಾ ನನ್ನ ಪತಿರಾಯರಿಗೆ ಆಫೀಸ್ ಕೆಲ್ಸದ ಮಧ್ಯೆ ಬೆಳ್ಳಿ,ಸುಗ್ಗಿ ಸೇವೆ heavy ಆಗತೊಡಗಿತು. ಸಿಟ್ಟು ಬಂದಾಗಲೆಲ್ಲ ಮಕ್ಕಳ ಮೇಲೆ ಹಲ್ಲು ಕಡಿದು ಬಯೋಕೆ ಶುರು. ಅದಕ್ಕೆ ಮಕ್ಳು ‘ನಾವೇನು ಮಾಡೋದು ನಮಗಿಂತ ಅದು ದೊಡ್ಡದಾದ್ರೆ ನಮ್ಮ ತಪ್ಪಾ? ಅಂತ ಅವರ ಪ್ರಶ್ನೆ.ಆಗ ನಾನು ‘ಪಾಪ ಹೋಗ್ಲಿ ಬಿಡು…’ ಎಂದು ಹೇಳಿ ಅವರ ಮಾತನ್ನು ವಾಪಸ್ ಕೊಟ್ಟು ನನ್ನ ಸಿಟ್ಟನ್ನು ತೀರಿಸಿಕೊಂಡೆ.
ಕೊನೆಗೂ ಅವರಪ್ಪನಿಗೆ ಎರಡು ನಾಯಿ ಸೇವೆ ಖಾಯಂ ಆಯಿತು. ನನ್ನ ಹುಡುಗ ನಾಯಿ ಪ್ರೇಮಿಯಾದ್ದರಿಂದ ಅದಕ್ಕೆ ಹೇಗೋ ಸಮಯ ಮಾಡೋಕೊಂಡು ಅದರ ಕೆಲಸ ಅಚ್ಚುಕಟ್ಟಾಗಿ ಹೋಗುತ್ತಿದೆ.

ಫೋಟೋ ಕೃಪೆ : wallpapercave
ಇದರ ಮಧ್ಯೆ ಮೊನ್ನೆ ನಟ ವಜ್ರಮುನಿ ಅವರ ಮನೆಗೆ ಹೋದಾಗ ಅವರ ಮನೆಯಲ್ಲಿದ್ದ ಪಿಟ್ ಬುಲ್ ಮರಿಗಳನ್ನ ನೋಡಿ…ನನ್ನ ಮಕ್ಕಳ ಕಣ್ಣು ಅರಳಿತು. ಅದಕ್ಕೆ ಸರಿಯಾಗಿ ವಜ್ರಮುನಿಯವರ ಮಗ ಜಗದೀಶ್ ಮರಿ ಬೇಕಾ? ಅಂದರು. ನನ್ನತ್ತ ನೋಡಿ ಕೇಳಲು ಧೈರ್ಯ ಬರದೆ ಸುಮ್ಮನಾದರು.
ಮನೆಗೆ ಬಂದ ಮೇಲೆ ಅಕ್ಕರೆ ‘ಅಮ್ಮ… ಸುಗ್ಗಿ ಯಾವ ಮಾತು ಕೇಳ್ತಿಲ್ಲ, ನಾವು ಪಿಟ್ ಬುಲ್ ಸಾಕಿ….ದ್ರೆ… ಹೇಗೆ ?’ ಅಂತ ರಾಗ ತಗೆದ. ನಾನು ಒಂದೇ ಲುಕ್ ಕೊಟ್ಟೆ, ಮತ್ತೆ ಕೇಳಿದ್ರೆ ಅಮ್ಮನೇ ಪಿಟ್ ಬುಲ್ ತರ ನಮ್ಮನ್ನೇ ಕಚ್ಚಕ್ತಾಳೆ ಅಂತ ಇಬ್ಬರು ದೂರ ಸರಿದು ಕೂತ್ರು.
ಈಗ ನಮ್ಮ ಸುಗ್ಗಿಗೆ ಮೂರುವರ್ಷ…
- ಶಾಲಿನಿ ಹೂಲಿ ಪ್ರದೀಪ್
