ಆಸಕ್ತಿಯ ಅಸ್ತಿತ್ವಕ್ಕೆ ಬೇಕಾದ ಸತ್ಯ ಹುಡುಕುವುದರಲ್ಲಿ ಜ್ಞಾನವಿದೆ. ಅದಕ್ಕೆ ಬೇಕಾದ ಮೂಲ “ನನಗೇನೂ ಗೊತ್ತಿಲ್ಲ… ಕಲಿಯಲು ಇನ್ನೂ ಇದೆ” ಎಂಬ ಹಸಿವು.
ಮೆದುಳಿಗೆ ಅಸ್ತಿತ್ವವಿದೆ. ಜ್ಞಾನೇಂದ್ರಿಯಗಳಿಗೂ ಅಸ್ತಿತ್ವವಿದೆ. ಆದರೆ ಎರಡಕ್ಕೂ ಸಂಪರ್ಕ (connection) ಇಲ್ಲದಿದ್ದರೆ? ಸಂಪರ್ಕವಿದ್ದರೆ ಆಸಕ್ತಿ ಮೂಡುತ್ತದೆ. ಆಸಕ್ತಿಯ ಮೇಲೆ ಕಾಯಕ ಸವಾರಿಯಾಗುತ್ತದೆ. ಆ ಸವಾರಿಯಲ್ಲಿ ಸಿಗುವುದು ಜ್ಞಾನವಾಗುತ್ತದೆ.
ಭಾಷೆಯೂ ಒಂದು ಜ್ಞಾನ , ಅದಕ್ಕೆ ಶಬ್ದಗಳ ಸಂಪರ್ಕವಿರುತ್ತದೆ. ಭಾಷೆ ಶಬ್ದದೊಂದಿಗೆ ಸೇರಿದಾಗ ಜ್ಞಾನವನ್ನು ಅದರೊಳಗೆ ಸೇರಿಸಿ ಇಡಬಹುದು.ಅದು ಜ್ಞಾನಾರ್ಥಿಗಳಿಗೆ ಹಾಗೂ ಮುಂದಿನ ಪೀಳಿಗೆಗೆ ಜ್ಞಾನಕೋಶವಾಗುತ್ತದೆ.
ಶಬ್ದಗಳಲ್ಲಿ ಸತ್ಯತೆಯನ್ನು ಪ್ರಯೋಗಿಸಿದರೆ ಭಾಷೆ ಪವಿತ್ರವಾಗಿರುವುದು. ಆದರೆ… ಶಬ್ದಗಳಲ್ಲಿ ಅಸತ್ಯತೆಯನ್ನು ಪ್ರಯೋಗಿಸಿದರೆ ಭಾಷೆ ಅಪವಿತ್ರವಾಗುತ್ತದೆ. ಅಂತೆಯೇ, ಆಸಕ್ತಿಗಳಿಗೆ ಸತ್ಯತೆ ಬೇಕು, ಇಲ್ಲದಿದ್ದಲ್ಲಿ ಅದಕ್ಕಾಗಿ ಮಾಡಿದ ಕಾಯಕವು ಅಪವಿತ್ರವಾಗುವುದು. ಅದರಿಂದ ಅಜ್ಞಾನದ ಕಡೆ ಹೋಗಬಹುದು.
ಕಾಯಕವು ಜ್ಞಾನಕ್ಕೂ ಉಪಯೋಗಿಸಬಹುದು, ಅಜ್ಞಾನಕ್ಕೂ ಉಪಯೋಗಿಸಬಹುದು. ಕಾಯಕದ ಅಮೂಲ್ಯತೆಯನ್ನು ಎಚ್ಚರದಿಂದ ಕಾಪಾಡಿದಾಗ ನಾವು ಸನ್ಮಾರ್ಗಿಗಳಾಗುತ್ತೇವೆ. ಒಂದು ಪಟ್ಟಣದಲ್ಲಿ ಹಲವು ಪೇಟೆಗಳಿಗೆ ಹೋಗುವ ಚೌರಾಹ/ಕೂಡುರಸ್ತೆ (junction) ಇತ್ತು. ಅಲ್ಲಿ ಆರೋಗ್ಯವಂತನಾದ ಒಬ್ಬ ಭಿಕ್ಷೆ ಬೇಡುತ್ತಿದ್ದ. ಅಂದೊಂದು ದಿನ, ಅಲ್ಲಿ ಸ್ವಂತ ಕುದುರೆಗಾಡಿಯಲ್ಲಿ ಒಬ್ಬ ಶ್ರೀಮಂತ ಬಂದು, ಗಾಡಿಯನ್ನು ಮರದ ನೆರಳಲ್ಲಿಟ್ಟು, ಕುದುರೆಯನ್ನು ಸವರುತ್ತಿದ್ದ. ಭಿಕ್ಷುಕ ಅವನಲ್ಲಿ ಭಿಕ್ಷೆ ಕೇಳಿದಾಗ, ” ನಿನಗೆ ಇಷ್ಟೊಂದು ಆರೋಗ್ಯವಿದೆ,…. ನನಗೆ ನಿನ್ನಲ್ಲಿರುವ ಏನಾದರು ಕೊಡು, ನನಗೆ ನೀರು ತಂದು ಕೊಡು, ನನ್ನ ಕುದುರೆಗೆ ಹುಲ್ಲು ತಂದು ಕೊಡು, ತಕ್ಕುದಾದ ದುಡ್ಡು ಕೊಡುತ್ತೇನೆ” ಎಂದ.
ಆದರೆ ಭಿಕ್ಷುಕ ಸಿಟ್ಟಿನಿಂದ ದೂರ ನಿಂತ. ಪ್ರಯಾಣ ಮುಂದುವರಿಸುವಾಗ ಶ್ರೀಮಂತನೆಂದ….. ” ನೀನು, ನಿನ್ನಿಂದ ಏನಾದರೂ ಕೊಡು, ಭಿಕ್ಷೆಗಿಂತ ಜಾಸ್ತಿ ಪಡೆಯುವೆ. ಆದರೆ ಕದಿಯಬೇಡ” ಎಂದ.
ಶ್ರೀಮಂತನ ಮಾತು ಭಿಕ್ಷುಕನಿಗೆ ನಿದ್ರೆಗೆಡಿಸಿತು. ಅವನು ಎರಡು ದಿನ ಭಿಕ್ಷೆ ಬೇಡಲು ಹೋಗದೆ ಚಡಪಡಿಸಿದನು.
ಮಾರನೇ ದಿನ ಕೂಡುರಸ್ತೆಯಲ್ಲಿ ನಿಂತು ತನಗೆ ಗೊತ್ತಿರುವ ನೀತಿ ಕಥೆಯೊಂದನ್ನು ಜೋರಾಗಿ ಹೇಳಿದ. ಆ ಕಥೆ ಕೇಳಿದವರು ಅವನಿಗೆ ದುಡ್ಡು ಕೊಟ್ಟು ಹೋದರು. ಅವನು ದಿನಾ ಯೋಚನೆ ಮಾಡಿ ಹೊಸ ಹೊಸ ಕಥೆಗಳನ್ನು ಪೋಣಿಸ ತೊಡಗಿದ.
ಹೀಗೆ ಕೆಲವು ದಿನವಾದಾಗ ” ನಾನು ಹೇಳುವ ಕಥೆಗಿಂತ ಜಾಸ್ತಿ ದುಡ್ಡು ಬರುತ್ತಿದೆಯಲ್ಲಾ?” ಎಂದು, ತಾನು ದಿನಾ ನೀರು ಕುಡಿಯುವ ಹೊಳೆಯ ಪಕ್ಕದ ಹೂಗಳನ್ನು ಶೇಖರಿಸಿ, ಕಥೆ ಕೇಳಿ , ದುಡ್ಡು ಕೊಡುವವರಿಗೆ ಹೂಗಳನ್ನು ಕೊಡ ತೊಡಗಿದ.
ಕಾಲ ವರುಷಗಳು ಕಳೆಯಿತು. ಶ್ರೀಮಂತ ಆ ಕೂಡು ರಸ್ತೆಗೆ ಬಂದಾಗ ಅವನು ಭಿಕ್ಷುಕನನ್ನು ಹುಡುಕಿದ. ಎಲ್ಲೂ ಕಾಣ ಸಿಗಲಿಲ್ಲ. ಪಕ್ಕದ ಅಂಗಡಿಯಲ್ಲಿ ಕೇಳಿದ ” ಹೋ…ಅವನಾ…. ಅವನು ಪಕ್ಕದ ಪೇಟೆಯಲ್ಲಿ ಹೂ ವ್ಯಾಪಾರಿಯಾಗಿದ್ದಾನೆ ಹಾಗೂ ಅವನು ಹೇಳಿದ ಕಥೆಗಳನ್ನು ಬರೆಸಿ, ಅದರ ಪುಸ್ತಕವನ್ನೂ ಮಾರಿ, ಅದರಿಂದಲೂ ಕಾಸು ಮಾಡುತ್ತಾನೆ. ತನ್ನಲ್ಲಿ ಜಾಸ್ತಿಯಾದ ದುಡ್ಡಿನಿಂದ ಬಡವರಿಗೆ ಉಚಿತ ಆಹಾರದ ಛತ್ರವನ್ನು ಇಟ್ಟು ಜೀವಿಸುತ್ತಿದ್ದಾನೆ”.
ನಮಗೆ ಜ್ಞಾನವು ಹಿರಿಯರಿಂದ, ಕಿರಿಯರಿಂದ, ಸಮಪ್ರಾಯದವರಿಂದ, ಮರ- ಗಿಡ- ಪ್ರಾಣಿ- ಪಕ್ಷಿ…ಸಕಲ ಚರಾಚರಗಳಿಂದ ಸಿಗುತ್ತದೆ. ಆದರೆ ಅದನ್ನು ಗೃಹಿಸಿ, ಅದರ ಪವಿತ್ರತೆಯನ್ನು ಅರಿತು ಆಸಕ್ತಿಯಿಂದ ಕೆಲಸ ಮಾಡಿದರೆ, ನಾವು ಸಮಾಜಕ್ಕೂ ಸಮಾಜ ನಮಗೂ ಒಳ್ಳೆಯದನ್ನೇ ಕೊಡುತ್ತದೆ.
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)
