ಖ್ಯಾತ ಮನೋವೈದ್ಯ ಡಾ.ಅಶೋಕ್ ಪೈ ಅವರ ನೆನಪು



ಡಾ.ಅಶೋಕ್ ಪೈ ಅವರು ಖ್ಯಾತ ಮನೋವೈದ್ಯರಾಗಿ, ಬರಹಗಾರರಾಗಿ, ಉತ್ತಮ ಚಲನಚಿತ್ರಗಳನ್ನು ನಿರ್ಮಿಸಿದವರಾಗಿ ಮತ್ತು ಸಮಾಜದ ಹಿತಚಿಂತಕರಾಗಿ ಜನಮಾನ್ಯರಾಗಿದ್ದವರು. ಅಶೋಕ್ ಪೈ ಅವರ ಸಂಸ್ಮರಣಾ ಸಂದರ್ಭವಿದು. ಲೇಖಕರಾದ ಶಿವಕುಮಾರ್ ಬಾಣಾವರ ಅವರ ಲೇಖನಿಯಲೊಂದು ಅಶೋಕ್ ಪೈ ಸಾಧನೆಯ ಪುಟ್ಟ ಲೇಖನ.ಮುಂದೆ ಓದಿ …

೨೦೧೬ ರ ಸೆಪ್ಟೆಂಬರ್ ೨೯ ರಂದು ದಿನ ಪೈ ಅವರು ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲೆಂದು ಪತ್ನಿ ರಜನಿ ಪೈ ಅವರ ಜತೆಗೆ ಸ್ಕಾಟ್ಲೆಂಡಿನಲ್ಲಿದ್ದಾಗ ಅವರ ೭೦ ವರ್ಷಗಳ ಸಾಧಕ ಬದುಕಿನ ಅನಿರೀಕ್ಷಿತ ಅಂತ್ಯ ಸಂಭವಿಸಿತ್ತು.

ಅಶೋಕ್ ಪೈ ಅವರು ೧೯೪೬ ರ ಡಿಸೆಂಬರ್ ೩೦ ರಂದು ವಕೀಲರಾದ ಕಟೀಲು ಅಪ್ಪು ಪೈ ಮತ್ತು ವಿನೋದಿನಿ ಪೈ ದಂಪತಿಗಳ ಸುಪುತ್ರರಾಗಿ ಜನಿಸಿದರು.

ಶಿವಮೊಗ್ಗದಲ್ಲಿ ಮನೋರೋಗಿಗಳ ಶುಶ್ರೂಷೆಗೆ ಪ್ರಸಿದ್ಧ ಹೆಸರಾದ ಮಾನಸ ನರ್ಸಿಂಗ್ ಹೋಮ್ ಹಾಗೂ ಮಾನಸ ಎಜುಕೇಶನ್ ಫೌಂಡೇಶನ್ ಸಂಸ್ಥೆಗಳನ್ನು ತಮ್ಮ ಪತ್ನಿ ಡಾ. ರಜನಿ ಪೈ ಅವರೊಂದಿಗೆ ನಡೆಸುತ್ತಿದ್ದ ಡಾ. ಅಶೋಕ್ ಪೈ ಅವರು ಮಾನವನ ಮನಸ್ಸಿನ ವಿವಿಧ ಮುಖಗಳನ್ನು ಪರಿಚಯಿಸುವ ಮನಃಶಾಸ್ತ್ರದ ಆಳ ಸ್ಪರ್ಶವುಳ್ಳ ತಮ್ಮದೇ ಕತೆಗಳನ್ನು ಆಧರಿಸಿದ ಉಷಾಕಿರಣ, ಆಘಾತ, ಮನ ಮಂಥನ ಮೊದಲಾದ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಇವರು ನಿರ್ಮಿಸಿದ ನಾ. ಡಿಸೋಜ ಕಾದಂಬರಿ ಆಧಾರಿತ ‘ಕಾಡಿನ ಬೆಂಕಿ’ ಚಿತ್ರ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗಳಿಸಿತ್ತು. ಉಷಾಕಿರಣ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಹಾಗೂ ಆಘಾತ ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಂದಿತ್ತು. ಪ್ರಖ್ಯಾತ ಜನಸಮೂಹ ಮಾಧ್ಯಮವಾದ ಚಿಲನಚಿತ್ರಗಳ ಮೂಲಕ ಮನಃಶಾಸ್ತ್ರದ ಪರಿಚಯವನ್ನು ಹೆಚ್ಚು ಜನರಿಗೆ ತಲುಪುವುದು ಡಾ. ಅಶೋಕ್ ಪೈ ಅವರ ಸದುದ್ದೇಶವಾಗಿತ್ತು. ‘ಅಂತರಾಳ’ ಎಂಬ ಕಿರುತೆರೆಯ ಧಾರಾವಾಹಿಯನ್ನು ಕೂಡಾ ಅವರು ನಿರ್ಮಿಸಿದ್ದರು.
ಹಾಗೆ ನೋಡಿದರೆ ವೈದ್ಯರಾಗಿ ಪೈ ಅವರಿಗಿದ್ದ ಅಪಾರ ಅನುಭವ ಹಾಗೂ ಜನಪ್ರಿಯತೆಯ ಹಿನ್ನೆಲೆಯಲ್ಲಿ, ಪ್ರಖ್ಯಾತ ನಗರಗಳಲ್ಲಿದ್ದು ಅವರಿಗೆ ಆಪಾರವಾದ ಶ್ರೀಮಂತಿಕೆ ಗಳಿಸುವ ಅವಕಾಶಗಳಿದ್ದರೂ ಸಹಾ, ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ಸಾಮಾನ್ಯ ಹಾಗೂ ಬಡಜನರಿಗೆ ಅನುಕೂಲವಾಗುವ ಹಾಗೆ ತಮ್ಮ ಶಿವಮೊಗ್ಗವನ್ನೇ ಕೇಂದ್ರವಾಗಿಸಿಕೊಂಡು ಸುತ್ತ ಮುತ್ತಲಿನ ಸಮುದಾಯಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿರಿಸಿಕೊಂಡರು.

ಮನೋವೈದ್ಯಕೀಯ ಕ್ಷೇತ್ರವನ್ನು ವಿಸ್ತೃತವಾಗಿ ಪರಿಗಣಿಸಿದ ಡಾ. ಅಶೋಕ್ ಪೈ ಅವರು, ಮಲೆನಾಡು ಪ್ರದೇಶಗಳಲ್ಲಿನ ಧಾರ್ಮಿಕ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಕರು ಮುಂತಾದ ಸಾಮಾನ್ಯ ಜನತೆಯ ಮೇಲೆ ಮಾನಸಿಕ ಪ್ರಭಾವ ಬೀರಬಲ್ಲ ಎಲ್ಲರೊಂದಿಗೆ ಐಕ್ಯತೆ ಸಾಧಿಸಿ ತಮ್ಮ ಸುತ್ತಮುತ್ತಲಿನ ಸಮುದಾಯದಲ್ಲಿನ ಮಾನಸಿಕ ರೋಗಿಗಳ ಆಶಾಕಿರಣವಾಗಿದ್ದರು. ಈ ಎಲ್ಲ ವರ್ಗೀಯ ಮಹನೀಯರೂ ತಮ್ಮ ಪ್ರದೇಶದಲ್ಲಿ ಕಂಡು ಬಂದ ರೋಗಿಗಳನ್ನೆಲ್ಲಾ ಡಾ. ಅಶೋಕ್ ಪೈ ಅವರ ಮಾರ್ಗದರ್ಶನಕ್ಕೆ ಹೋಗುವಂತೆ ಪ್ರೇರೇಪಿಸಿ, ಈ ಮೂಲಕ ಮನೋರೋಗಿಗಳು ಮಂತ್ರವಾದಿಗಳು ಮತ್ತು ಕಪಟ ವೈದ್ಯರುಗಳ ಕೈಗೆ ಸಿಲುಕುವ ಅಪಾಯವನ್ನು ತಪ್ಪಿಸುವ ಒಂದು ಸ್ವಯಂಚಾಲಿತ ಸಮುದಾಯವೇ ಮಲೆನಾಡು ಪ್ರದೇಶದಲ್ಲಿ ಸೃಷ್ಟಿಗೊಂಡಿತ್ತು. ಡಾ. ಪೈ ಅವರು ತಮ್ಮ ಪ್ರದೇಶದಲ್ಲಿದ್ದ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ಮೌಲ್ವಿಗಳು, ವಿವಿಧ ರೀತಿಯ ವೈದ್ಯಕೀಯ ಪದ್ಧತಿಗಳ ಪರಿಣತರು ಹಾಗೂ ಗ್ರಾಮೀಣ ವೈದ್ಯರು ಮುಂತಾದ ಎಲ್ಲರ ಗೌರವವನ್ನು ಸಂಪಾದಿಸಿದ್ದರು.



ಪೈ ಅವರು ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆಯ ಮುಖ್ಯಸ್ಥರಾಗಿದ್ದರು. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೇಲ್ಕಂಡ ಚಲನಚತ್ರವಾಗಿರುವ ಕತೆಗಳೇ ಅಲ್ಲದೆ ಇನ್ನೂ ಅನೇಕ ಪುಸ್ತಕಗಳು, ಮನೋವೈಜ್ಞಾನಿಕ ಲೇಖನಗಳನ್ನೂ #ಡಾ_ಅಶೋಕ್_ಪೈ ಬರೆದಿದ್ದರು.

ಕರ್ನಾಟಕ ಮಾನಸಿಕ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಪೈ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧವಾದ ಡಾ. ಬಿ.ಸಿ. ರಾಯ್ ಪ್ರಶಸ್ತಿ, ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಸಂದಿದ್ದವು. ಈ ಮಹಾನ್ ಚೀತನಕ್ಕೆ ನಮ್ಮ ನಮನಗಳು.


  • ಶಿವಕುಮಾರ್ ಬಾಣಾವರ  (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು )

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW