ಡಾ.ಬಿ. ರೇವತಿ ನಂದನ್ ಅವರು ವಿಜ್ಞಾನ ಸಾಹಿತಿಯಾಗಿದ್ದು, ಅವರಿಗೆ ರಾಜ್ಯ ಸರ್ಕಾರವು “ಉತ್ತಮ ಉಪನ್ಯಾಸಕ ಪ್ರಶಸ್ತಿ “ಯನ್ನು ನೀಡಿ ಗೌರವಿಸಿದೆ, ಡಾ.ಬಿ. ರೇವತಿ ನಂದನ್ ಅವರ ಸಾಧನೆ ಕುರಿತು ಬಾಲು ದೇರಾಜೆ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಎಡಮಂಗಲ-ದೋಳ್ಪಾಡಿಯ ದಿ. ಶ್ರೀ ತಿಮ್ಮಪ್ಪ ಪಿ ಹಾಗೂ ದಿ. ಶ್ರೀಮತಿ ನೀಲಮ್ಮ ಬಿ. ದಂಪತಿ ಗಳಿಗೆ ಮೂರೂ ಜನ ಹೆಣ್ಣು ಮಕ್ಕಳಲ್ಲಿ ತೃತೀಯರಾದ ಕುಮಾರಿ ರೇವತಿ ದೋಳ್ಪಾಡಿ ಮತ್ತು ಎಡಮಂಗಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ, ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ, ಪುತ್ತೂರಿನ ವಿವೇಕಾನಂದ ಕಾಲೇಜು ಇಲ್ಲಿ ಬಿ ಎಸ್ಸಿ ಪದವಿ ಹಾಗೂ ಮೈಸೂರಿನ ಮಾನಸ ಗಂಗೋತ್ರಿ ಯಲ್ಲಿ ಸ್ನಾತಕೋತ್ತರ (ಜೀವಶಾಸ್ತ್ರದಲ್ಲಿ) ಪದವಿಯನ್ನು ಗಳಿಸುವುದರ ಜೊತೆಗೆ ಖ್ಯಾತ ಪರಿಸರ ವಿಜ್ಞಾನಿಯಾದ ಡಾ.ಎನ್.ಎ. ಮಧ್ಯಸ್ಥರ ಮಾರ್ಗದರ್ಶನದಲ್ಲಿ ” ಪಶ್ಚಿಮ ಘಟ್ಟದ ಇರುವೆಗಳ ವೈವಿಧ್ಯ ಮತ್ತು ಬದುಕು” ಎಂಬ ವಿಷಯದಲ್ಲಿ 1998ನೇ ಇಸವಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಬರೆದು ಪ್ರಥಮ ಮಹಾ ಪ್ರಬಂಧವನ್ನು ಸಾದರಪಡಿಸಿ ಪಿ ಎಚ್ ಡಿ ಪದವಿಯನ್ನುಗಳಿಸಿದ್ದರು.
ನಂತರ ಡಾ. ಬಿ. ರೇವತಿಯವರು ಸರಕಾರಿ ಪದವಿ ಪೂರ್ವ ಕಾಲೇಜುಗಳಾದ ಪ್ರಥಮ ಬಾರಿಗೆ ಉಡುಪಿಯಲ್ಲಿ 2 ವರ್ಷ, ಪುತ್ತೂರಿನಲ್ಲಿ 5 ವರ್ಷ ಉಪನ್ಯಾಸಕಿಯಾಗಿದ್ದು, ಬಳಿಕ ಸುಳ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಭಡ್ತಿಗೊಂಡು ಪ್ರಾಂಶುಪಾಲರಾಗಿ ಇಸವಿ 2015 ರಲ್ಲಿ ತಮ್ಮ 30 ವರ್ಷಗಳ ಸೇವಾ ವೃತ್ತಿಯಿಂದ ನಿವೃತ್ತಿಗೊಂಡಿದ್ದರು. ಅಲ್ಲದೆ ಹೆಸರಾಂತ ನ್ಯಾಯವಾದಿಗಳಾದ ಶ್ರೀ ಎ.ಸಿ.ನಂದನ್ ರ ಪತ್ನಿ, ಹಾಗೂ 2 ಹೆಣ್ಣು ಮಕ್ಕಳ ತಾಯಿಯಾಗಿ ” ಡಾ.ಬಿ.ರೇವತಿ ನಂದನ್” ರಾಗಿ ಸುಳ್ಯದ ಅಂಬೆತಡ್ಕ ಪ್ರದೇಶದಲ್ಲಿ ” ಸ್ವಾತಿ ” ಎಂಬ ಹೆಸರಿನ ನಿವಾಸದಲ್ಲಿ ವಾಸಿಸುತ್ತಿದ್ದಾರೆ.
ಡಾ.ಬಿ.ರೇವತಿ ನಂದನ್ ವಿಜ್ಞಾನ ಸಾಹಿತ್ಯದಲ್ಲಿ ತೊಡಗಿದ್ದು, ಕಾಲೇಜಿನಲ್ಲಿರುವಾಗಲೇ ಹವ್ಯಾಸವಾಗಿ ವಿಜ್ಞಾನ ಲೇಖನ ಬರವಣಿಗೆಯಲ್ಲಿ ಮುಂದುವರಿಯುತ್ತಾ ಬಂದವರು. ಆಸಕ್ತಿಯಾಗಿ ಅಲಂಕಾರಿಕ ಸಸ್ಯ, ಹೂವಿನ ಗಿಡಗಳು ಅಲ್ಲದೆ ತರಕಾರಿ ಗಿಡ – ಬಳ್ಳಿಗಳನ್ನು ಬೆಳೆಸುವಲ್ಲಿ ನಿರತರಾಗಿದ್ದು, ಮನೆಯ ಮುಂಭಾಗ, ಅಕ್ಕಪಕ್ಕದಲ್ಲಿ ಬಣ್ಣ ಬಣ್ಣಗಳಿಂದ ಹಾಗೂ ಕೃತಕ ನೀರಿನ ಜಲಧಾರೆಯಿಂದ ಕೂಡಿದ ಸುಂದರ ಪುಷ್ಪೋದ್ಯಾನವನ ಕಂಡುಬರುತದೆ.
ಇವರು ಪಿ.ಯು.ಸಿ.ಜೀವಶಾಸ್ತ್ರ ಪಠ್ಯಪುಸ್ತಕ ರಚನೆ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ದಿಂದ ಪ್ರಕಟವಾದ ವಿಜ್ಞಾನ ವಿಶ್ವಕೋಶ ಪುಸ್ತಕ ಸಮಿತಿಗಳಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಸದಸ್ಯೆಯಾಗಿದ್ದವರು. 2004 ನೇ ಇಸವಿಯಲ್ಲಿ ಸುಳ್ಯ ರೋಟರಿ ಸಂಸ್ಥೆಯ ಅಧ್ಯಕ್ಷೆ, ಪ್ರಸ್ತುತ ಶ್ರೀ ಶಾರದಾ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ದ.ಕ. ಗೌಡ ವಿದ್ಯಾಸಂಘದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸರಕಾರದ ಜೀವ ವೈವಿಧ್ಯ ಮಂಡಳಿಯ ನಿರ್ವಹಣಾ ಸಮಿತಿ, ಸುಳ್ಯ ಇದರ ಸದಸ್ಯೆ, ಕರ್ನಾಟಕ ರಾಜ್ಯ ಪರಿಷತ್ತು ಇದರ ನಿರ್ದೇಶಕಿ ಗಳಾಗಿ ಸಾಮಾಜಿಕವಾಗಿ ಗುರುತಿಸಲ್ಪಟ್ಟವರು.
2012 ನೇ ಇಸವಿಯಲ್ಲಿ ಇವರು ಪ್ರಾಂಶುಪಾಲರಾಗಿದ್ದಾಗ ರಾಜ್ಯ ಸರ್ಕಾರವು ” ಉತ್ತಮ ಉಪನ್ಯಾಸಕ ಪ್ರಶಸ್ತಿ ” ಯನ್ನು ನೀಡಿ, ಸ್ವೀಕರಿಸಿದ್ದುದಲ್ಲದೆ 2020-21 ನೇ ಇಸವಿಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇಲಾಖೆ ಕರ್ನಾಟಕ ಸರ್ಕಾರ ” ತೋಟದ ಲೋಕದ ಪಾಠಗಳು ” ಎಂಬ ಪುಸ್ತಕಕ್ಕೆ “ಶ್ರೇಷ್ಠ ಪುಸ್ತಕ” ಎಂದು ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ, ವಿಶೇಷವಾಗಿ ಗೌರವಕ್ಕೆ ಪಾತ್ರರಾದವರು.
ಸುಳ್ಯದ ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು , ಸುಳ್ಯ ಹಬ್ಬ , ಗೌಡ ಯುವ ಸೇವಾ ಸಂಘ, ರೋಟರಿ ಕ್ಲಬ್, ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರ ಸಂಘ ಗಳಲ್ಲದೆ, ರೋಟರಿ ಕ್ಲಬ್ ಬೆಳ್ಳಾರೆ, ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಮಂಗಲ, ದ.ಕನ್ನಡದ ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘ ಸಂಸ್ಥೆಗಳಿಂದ ಸನ್ಮಾನಿಸಿಗೊಂಡ ಡಾ.ಬಿ. ರೇವತಿ ನಂದನ್ ವಿಜ್ಞಾನ ಸಾಹಿತಿಯಾಗಿ ನಮ್ಮ ತಾಲೂಕು ಸುಳ್ಯದವರೇ ಆಗಿರವುದೊಂದು ಹೆಮ್ಮೆಯ ವಿಷಯ.
- ಬಾಲು ದೇರಾಜೆ, ಸುಳ್ಯ
