ಮತ್ಸರವೆಂಬ ಮದ್ದಿಲ್ಲದ ಖಾಯಿಲೆ

ಮತ್ಸರವೆಂಬುದು ಎಂತಹ ಪರಮ ನೀಚ ಕೆಲಸವನ್ನಾದರೂ ಮಾಡಿಸಿ ಬಿಡುತ್ತೆ. ಪುರಾಣ ಕಾಲದಿಂದಲೂ ಈ ಮತ್ಸರವೆಂಬುದು ಮೆರೆಯುತ್ತಲೇ ಇದೆ. ಈ ಮತ್ಸರದಿಂದ ಕುಟುಂಬದ ಕಲಹಗಳು ಕೊಲೆಗಳೇ ನಡೆದುಹೋಗಿವೆ. ಮನುಷ್ಯನಲ್ಲಿನ ಮತ್ಸರದ ಕುರಿತು ಅಪರ್ಣಾದೇವಿ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳು ಅರಿ ಷಡ್ವರ್ಗವೆನಿಸಿವೆ. ಈ ಶತ್ರುಗಳು ನಮ್ಮೊಳಗೇ ವಾಸಿಸುತ್ತಾ, ಬಾಹ್ಯ ಪ್ರಪಂಚದಲ್ಲಿ ಹಲವಾರು ಜನ ಶತ್ರುಗಳನ್ನು ಸೃಷ್ಟಿಸಿ ನೆಮ್ಮದಿ ಸಂತೋಷ ಆರೋಗ್ಯ ಎಲ್ಲವನ್ನೂ ಕಸಿದುಕೊಂಡು ಅಪಾರ ಹಿಂಸೆ ಕೊಡುತ್ತವೆ. ಮಾನವ ಇವನ್ನೆಲ್ಲ ದೂರ ಮಾಡಿ ಜೀವಿಸಲು ಬಹಳ ಹೋರಾಟ ಮಾಡುತ್ತಾನೆ. ಆದರೆ ಜೀವಕ್ಕಂಟಿದ ಇವು ಬಿಟ್ಟೂಬಿಡದೆ ಕಾಡುತ್ತವೆ.

ಅದರಲ್ಲೂ ಮತ್ಸರವೆಂಬ ಮದ್ದಿಲ್ಲದ ಖಾಯಿಲೆ, ಮಾನವನ ಮರಣಶಯ್ಯೆಯವರೆಗೂ ಜೊತೆಗೆ ಬರುವುದು. ಉದಾಹರಣೆಗೆ ಪುರಾಣ ಕಾಲದ ನಿದರ್ಶನಗಳಿವೆ. ಮಂಥರೆ, ಕೈಕೇಯಿಯ ಮನದಲ್ಲಿ ಹೊತ್ತಿಸಿದ ಮಾತ್ಸರ್ಯದ ಬೆಂಕಿ, ದಶರಥನ ನೆಮ್ಮದಿ ಸುಟ್ಟ ಹಾಕಿ ಆತನ ಮರಣಕ್ಕೆ ಕಾರಣವಾಯ್ತು. ಶ್ರೀ ರಾಮನ ವನವಾಸಕ್ಕೆ ಮೂಲವಾಯ್ತು. ಸವತಿ ಮತ್ಸರವೆಂಬುದು ಸಂತೋಷದ ವಾತಾವರಣವನ್ನು ಹಾಳುಮಾಡಿತು. ರಾಮಾಯಣವನ್ನು ಸೃಷ್ಟಿಸಿತು ಇನ್ನು ಮಹಾಭಾರತದ ಕಥೆಯೂ ಹೀಗೇ ತಾನೆ.

ದಾಯಾದಿ ಮತ್ಸರವೆಂಬುದು ಕುರುಕ್ಷೇತ್ರ ಯದ್ಧವನ್ನೇ ಮಾಡಿಸಿತು. ಮತ್ಸರದಿಂದಲೇ ಜೂಜಾಡಿ, ಕಪಟತನ ತೋರಿ, ದ್ರೌಪದಿಯ ವಸ್ತ್ರಾಪಹರಣದಂತಹ ಮಾನಗೇಡಿ ಕೆಲಸ ಮಾಡಿಸಿತು. ಅರಗಿನ ಮನೆ ಸೃಷ್ಟಿಮಾಡಿ ಪರಾಕ್ರಮಿಗಳನ್ನು ಅಲ್ಲೇ ನಾಶಮಾಡುವ ಹುನ್ನಾರ ಹೂಡಿಸಿತು. ಮತ್ಸರವೆಂಬುದು ಎಂತಹ ಪರಮ ನೀಚ ಕೆಲಸವನ್ನಾದರೂ
ಮಾಡಿಸಿ ಬಿಡುತ್ತೆ. ಬಲಭೀಮನಿಗೆ ಮತ್ಸರದಿಂದಲೇ ಕೌರವರು ಚಿಕ್ಕವನಿರುವಾಗ ವಿಷದ ಉಂಡೆ ತಿನ್ನಿಸಿದ್ದು.ತಮಗಿಂತ ಬಲಶಾಲಿ ಅವನು ಇರಲೇಬಾರದೆಂದು. ಹೀಗೆ ಪುರಾಣ ಕಾಲದಿಂದಲೂ ಈ ಮತ್ಸರವೆಂಬುದು ಮೆರೆಯುತ್ತಲೇ ಇದೆ. ದೈವಬಲ, ಆತ್ಮಬಲವಿದ್ದವರು ಮತ್ಸರದ ದುಷ್ಪರಿಣಾಮದಿಂದ ಪಾರಾಗಿದ್ದಾರೆ. ಆದರೆ ದುರ್ಬಲರು,ಅಮಾಯಕರು ಇದರ ದೌರ್ಜನ್ಯಕ್ಕೆ ನಲುಗಿದ್ದಾರೆ. ನಿತ್ಯ ಜೀವನದಲ್ಲಿ ನೋಡುತ್ತಿರುತ್ತೇವೆ, ಕುಟುಂಬದ ಕಲಹಗಳು, ಆಸ್ತಿ ಪಾಸ್ತಿಗಾಗಿ ದಾಯಾದಿ ವ್ಯಾಜ್ಯಗಳು. ಎತ್ತರದ ಸ್ಥಾನಮಾನ, ಹಣಕಾಸಿನ ವಿಷಯದಲ್ಲಿ, ಮನ್ನಣೆ ಪಡೆಯುವುದರಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ತಮಗಿಂತ ಉನ್ನತ ಸ್ಥಿತಿಗೆ ತಮ್ಮ ದಾಯಾದಿಗಳು ಅಥವಾ ಬಂಧು ಬಾಂಧವರು ಹೋಗಲೇಬಾರದೆಂಬ ಮನೋಭಾವವಿರುವ ಜನರನ್ನು ಕಾಣುತ್ತೇವೆ.

ಫೋಟೋ ಕೃಪೆ : google

ಅಕಸ್ಮಾತ್ ಹಾಗೇನಾದರೂ ಆದರೆ ಇಲ್ಲ ಸಲ್ಲದ ಅವಹೇಳನ, ಆರೋಪಗಳನ್ನು ಹೊರಿಸಿ ಸಮಾಜದಲ್ಲಿ ಅವರ ಮಾನ ಹರಾಜಾಗುವಂತಹ ಸನ್ನಿವೇಶ ಸೃಷ್ಟಿಸಿ ಸುಳ್ಳು ಆಪಾದನೆ ಹೊರಿಸಿ ನೆಮ್ಮದಿ ಹಾಳುಮಾಡುತ್ತಾರೆ. ಇದಕ್ಕೆ ಮತ್ಸರವೇ ಮುಖ್ಯಕಾರಣ.

ಈ ಮತ್ಸರದಿಂದ ಕುಟುಂಬದ ಕಲಹಗಳು ಕೊಲೆಗಳೇ ನಡೆದುಹೋಗಿವೆ. ನಾವು ನಿತ್ಯ ಮಾಧ್ಯಮ ಗಳಲ್ಲಿ ಇವನ್ನು ನೋಡುತ್ತೇವೆ, ಪ್ರತ್ಯಕ್ಷವಾಗಿಯೂ ಕಾಣುತ್ತೇವೆ. ಮತ್ಸರ ಬರೀ ಹಣ, ಸಂಪತ್ತಿನ ವಿಷಯಕ್ಕಷ್ಟೇ ಸೀಮಿತವಲ್ಲ. ವಿದ್ಯೆ, ರೂಪ, ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ, ರಾಜಕಾರಣ ಎಲ್ಲಾ ಕಡೆಗೂ ತನ್ನ ಕಬಂದಬಾಹು ಚಾಚಿದೆ. ಯಾವುದೇ ರಂಗದಲ್ಲಿ ಒಬ್ಬ ವ್ಯಕ್ತಿ ತನ್ನ ಸ್ವಂತ ಪ್ರತಿಭೆಯಿಂದ ಮುಂದೆ ಬಂದರೂ ಮತ್ಸರಿಸುವ ಜನರು ಏನಾದರೂ ಮಾಡಿ ತೊಡರುಗಾಲು ಕೊಟ್ಟು ಕೆಡವಲು ನೋಡುತ್ತಾರೆ.

ಅವರಿಗೆ ಅವಕಾಶಗಳು ಸಿಗದ ಹಾಗೆ ಮಾಡುವುದು, ಅಪಪ್ರಚಾರ ನಿಂದನೆಗಳಿಂದ,ಕೀಳಿರಿಮೆ ಬೆಳೆಯುವಂತೆ ಮಾಡುತ್ತಾರೆ.ಅದೃಷ್ಟವಂತರು ಇಂತಹ ಮತ್ಸರದ ತೊಂದರೆಯಿಂದ ತಮ್ಮ ಪರಿಶ್ರಮದಿಂದ ಮುಂದೆ ಬರುವರು. ಇನ್ನು ದುರ್ಬಲ ಮನವಿದ್ದವರು ಮೂಲೆ ಗುಂಪಾಗುವರು. ಇವೆಲ್ಲ ಮತ್ಸರದಿಂದಾಗುವ ಪರಿಣಾಮಗಳು.

ಇನ್ನು ಮತ್ಸರ್ಯದ ಖಾಯಿಲೆಯಿಂದ ಬಳಲುವ ಜನರು ಬೇರೆಯವರ ಉನ್ನತಿ ನೋಡಿ ಉರಿದುರಿದು ಅದೇ ಚಿಂತೆಯಲ್ಲೇ ಚಿತೆಯವರೆಗೂ ಹೋಗುವರು. ಬಸವಣ್ಣನವರ ವಚನವೇ ಇದೆ, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ, ಅನ್ಯರ ಸುಡುವುದೆ ಎಂಬಂತೆ ಒಳಗಡೆ ಅಸೂಯೆ, ದ್ವೇಷ, ಮತ್ಸರದ ಕಿಚ್ಚಿದ್ದರೆ ಮನುಷ್ಯರ ನೆಮ್ಮದಿ ಕೆಡಿಸುವುದು, ತನ್ಮೂಲಕ ಆರೋಗ್ಯ ಸಂಪೂರ್ಣ ಹಾಳಾಗುವುದು.

ಫೋಟೋ ಕೃಪೆ : google

ಸಂತಸವನ್ನು ಕಸಿದುಕೊಳ್ಳುವುದು, ಮುಖದ ಮೇಲಿನ ಮತ್ಸರದ ಗಂಟುವ ಸೌಂದರ್ಯವನ್ನು ಹಾಳು ಮಾಡುವುದು. ಹೊಟ್ಟೆ ಕಿಚ್ಚು ನೆಮ್ಮದಿ ಕೆಡಿಸಿ ತಿಂದ ಆಹಾರ ಪಚನವಾಗಲು ಬಿಡದು. ಇದರಿಂದ ಆಸಿಡಿಟಿ ಮತ್ತೆ ಹೃದ್ರೋಗಗಳೂ ಉಂಟಾಗುವುವು.

ಅನ್ಯರ ಯಶಸ್ಸು ಕಂಡು ಕರುಬಿ,ಮತ್ಸರಿಸಿ ರಕ್ತ ದೊತ್ತಡವೂ ಬರುವುದು.ಹೀಗಾಗಿ ಮತ್ಸರ ಪಡುವುದರಿಂದ ಅವರೇ ಅನೇಕ ತೊಂದರೆ ಅನುಭವಿಸಬೇಕಾಗುವುದು.ಇಂತಹ
ದುಷ್ಪರಿಣಾಮ ಬೀರುವ ಮತ್ಸರಪಡುವುದಾದರೂ ಏಕೆ..ಮದ್ದಿಲ್ಲದ ಖಾಯಿಲೆ ತಂದುಕೊಳ್ಳಬೇಕೆ. ಬೇಡವೇ ಬೇಡ.ಇತರರೂ ಬೆಳೆಯಲಿ,ನಾವೂ ಮುನ್ನಡೆಯೋಣ.ಅಭಿವೃದ್ಧಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡದಿದ್ದರೂ ಮತ್ಸರದಿಂದ ಅಡ್ಡಿಯಾಗುವುದು ಬೇಡ.ಒಳಿತನ್ನು ಬಯಸಿದರೆ ಒಳಿತೇ ನಮ್ಮನ್ನು ಅರಸಿ ಬರುವುದು.ದಾಸರು ಹೇಳಿದ್ದಾರೆ ತಮ್ಮ ಗೀತೆಗಳಲ್ಲಿ ಧರ್ಮವೆ ಜಯವೆಂಬ ದಿವ್ಯ ಮಂತ್ರ ಎಂದು. ಮಾತ್ಸರ್ಯ ಬಿಟ್ಟು ನಮ್ಮ ಚಿಂತನೆ, ವಿಚಾರಗಳನ್ನು ವಿಶಾಲವಾಗಿಸಿ ಸರ್ವೇ ಜನಾ: ಸುಖಿನೋಭವಂತು ಎಂದು ಸದ್ಭಾವನೆ ಬೆಳೆಸಿಕೊಂಡರೆ ಜ್ಞಾನವೃದ್ಧಿ ಯಶೋವೃದ್ಧಿಗೆ ಭಗವಂತನೂ ತಥಾಸ್ತು ಎಂದು ಅನಗ್ರಹಿಸಿಯಾನು…ಅಲ್ಲವೆ..


  • ಅಪರ್ಣಾದೇವಿ – ನಿವೃತ್ತ ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು, ಈಗ ಸಾಹಿತ್ಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಕತೆ, ಕವನ, ಲೇಖನಗಳನ್ನು ಬರೆಯುವುದರ ಜೊತೆಗೆ “ಮನೋಲ್ಲಾಸಿನಿ” ಎನ್ನುವ ಕವನಸಂಕಲನವನ್ನು ಹೊರಗೆ ತಂದಿದ್ದಾರೆ. 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW