ಮಕ್ಕಳನ್ನು ಹೆತ್ತು ಅವುಗಳ ಲಾಲನೆ ಪಾಲನೆ ಮಾಡುವುದರಲ್ಲಿಯೇ ಆಕೆ ತನ್ನ ಇಡೀ ಜೀವಮಾನವನ್ನು ಕಳೆಯುತ್ತಿದ್ದಾಳೆ. ಬೇರೆ ಕೆಲಸಗಳಿಗೆ ಆಕೆಗೆ ಸಮಯವೇ ಇಲ್ಲದಂತಾಗಿದೆ ಎಂದರಿತ ಅವರು 1938 ರಷ್ಟು ಹಿಂದೆಯೇ ಕುಟುಂಬ ಯೋಜನೆಯ ಬಗ್ಗೆ ಚಿಂತಿಸಿದವರು ಡಾ. ಬಿ.ಆರ್. ಅಂಬೇಡ್ಕರ್ ಅವರು, ಉಪನ್ಯಾಸಕರಾದ ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ..
ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದ ಆಚರಣೆಗೊಂಡ ದಿನವೂ ಅಲ್ಲ. ನ್ಯೂಯಾರ್ಕ್‍ನಲ್ಲಿ ಕ್ಲಾರಾ ಜೆಟ್‍ಕಿನ್ ಎಂಬ ಮಹಿಳಾ ಕಾರ್ಮಿಕೆ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ಹುಟ್ಟಿನಿಂದ ಸಾಯುವವರೆಗೂ ದಿನ ನಿತ್ಯ ಒಂದಿಲ್ಲೊಂದು ಸಂಘರ್ಷದಲ್ಲಿ ಬಿದ್ದು ಸಾಧಿಸಲು ಪ್ರಯತ್ನ ಪಡುತ್ತಿರುವ, ಸಂಘರ್ಷದಿಂದ ಸಾಧಿಸಿದ ದಿನದ ಒಂದು ಸ್ಮರಣೆಯ ದಿನ ಮಾತ್ರ.

ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು “ವಿಶ್ವ ಮಹಿಳಾ ದಿನ” ಎಂದು ಘೋಷಿಸಿತು. ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಮಹಿಳಾ ದಿನ” ಆಚರಿಸಲಾಗುತ್ತದೆ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.
ಈ ಸಂದರ್ಭದಲ್ಲಿ ಬಾಬಾ ಸಾಹೇಬ್ ರ ಮಹಿಳಾ ನಿಲುವುಗಳು,ಚಿಂತನೆಗಳು, ಗಮನಿಸೋಣ :
ಡಾ.ಬಿ.ಆರ್.ಅಂಬೇಡ್ಕರವರು ಮಹಿಳಾ ಮೀಸಲಾತಿಯ ಪರವಾಗಿ,ಅವಳ ಉಜ್ವಲ ಭವಿಷ್ಯವನ್ನು ಕುರಿತು ಸಾಂವಿಧಾನಿಕವಾಗಿ ಚಿಂತಿಸಿದರು. ಅವರು ಚುನಾಯಿತ ಸದಸ್ಯರಾಗಿ ಪಾರ್ಲಿಮೆಂಟಿನಲ್ಲಿ ಹಿಂದು ಕೋಡ್ ಬಿಲ್ ನ್ನು ಮಂಡಿಸುವುದರ ಮೂಲಕ, ಸ್ವತಂತ್ರ ಭಾರತದ ನಾರಿಯ ಬಂಧನವನ್ನು ಮುಕ್ತ ಮಾಡಲು ಪ್ರಯತ್ನಿಸಿದರು. ಭಾರತದಲ್ಲಿ ಹೆಣ್ಣುಮಕ್ಕಳಿಗೆ ಒಂದು ಕಡೆಯಿಂದ ಪೂಜ್ಯ ಸ್ಥಾನವನ್ನು ನೀಡಿ ಮತ್ತೊಂದು ಕಡೆಯಲ್ಲಿ ಅವಳನ್ನು ಕಟ್ಟಿ ಹಾಕುವ ಮೂಲಕ ಗುಲಾಮಳಂತೆ ನಡೆಸಿಕೊಳ್ಳುತ್ತಿದೆ. ಅವಳನ್ನು ಕೇವಲ ಅಡುಗೆ ಮನೆಗೆ ಸೀಮಿತಗೊಳಿಸಿ ಹಡೆಯುವ ಯಂತ್ರವಾಗಿಸಿ ಬಿಟ್ಟಿದ್ದಾರೆ. ಅವಳಿಗೆ ಯಾವುದೇ ರೀತಿಯ ಸ್ವಾತಂತ್ರವನ್ನು ಕೊಟ್ಟಿರುವುದಿಲ್ಲ, ಎಂಬ ಸತ್ಯದ ಅರಿವು ಅಂಬೇಡ್ಕರ್ ಅವರಿಗಿತ್ತು. ಅಂತೆಯೇ ಅವರು ಆ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗಾಗಿ ಮತ್ತವರ ಹಕ್ಕುಗಳಿಗಾಗಿ ತುಂಬಾ ಶ್ರಮಿಸಿದರು.
ಮಹಿಳಾ ಪರ ವಿಚಾರಗಳನ್ನು ಮಂಡಿಸುವುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಲವಾದ ಆಧಾರಗಳಿದ್ದವು. ಮಹಿಳಾ ಮೀಸಲಾತಿಯ ಕುರಿತು ಗೌತಮ ಬುದ್ಧ, ಜ್ಯೋತಿಬಾಫುಲೆ ಮುಂತಾದ ಮಹಾತ್ಮರು, ಜೊತೆಗೆ ಬೇರೆ ಬೇರೆ ದೇಶಗಳಲ್ಲಿಯ ಸಮಾಜ ಮುಖಿ ಮಹಿಳಾ ಮುಖಿ ಚಿಂತನೆಗಳನ್ನು ಅಧ್ಯಯನ ಮಾಡಿದ ಡಾ.ಬಾಬಾಸಾಹೇಬರು ಭಾರತದ ಮಹಿಳೆಯ ಹಕ್ಕು ಬಾಧ್ಯತೆಗಳನ್ನು ಕುರಿತು ಮಹತ್ವಪೂರ್ಣ ವಿಚಾರವನ್ನು ವ್ಯಕ್ತಪಡಿಸಿದರು.
ಕಾನೂನಿನ ಚೌಕಟ್ಟಿನಲ್ಲಿ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಮೊದಲ ನಾಯಕರೆಂದರೆ ಡಾ. ಬಿ.ಆರ್ ಅಂಬೇಡ್ಕರ್. ಅವರು ಸಂವಿಧಾನದಲ್ಲಿ ಬರೆದಿಟ್ಟ ಮಹಿಳಾ ಪರ ಚಿಂತನೆಗಳು ಪ್ರಸ್ತುತ ಸಂದರ್ಭದಲ್ಲಿ ಕ್ರಮೇಣ ಜಾರಿಗೆ ಬರುತ್ತಿರುವುದು ಭಾರತೀಯರು ಸಂವಿಧಾನಕ್ಕೆ ಕೊಟ್ಟಿರುವ ಗೌರವವಾಗಿದೆ.
ವಿದೇಶಿ ವಿದ್ಯಾಬ್ಯಾಸ ಮುಗಿಸಿ ಬಂದ ಅಂಬೇಡ್ಕರ್ ಅವರಿಗೆ ಜರ್ಮನಿಯ ಬಾನ್ ನಲ್ಲಿ ಕಳೆದ ದಿನಗಳ ಪ್ರಭಾವದಿಂದ ಅವರು ಸ್ತ್ರೀವಾದ ಚಿಂತನೆ ಮಾಡುವಂತಾಗಿತ್ತು. 1918ರ ವೇಳೆಗೆ ಬ್ರಿಟನ್‍ನಲ್ಲಿ ಮತ್ತು 1920 ವೇಳೆಗೆ ಅಮೇರಿಕಾದಲ್ಲಿ ಮಹಿಳೆಯರಿಗೆ ಮತದಾನ ಹಕ್ಕನ್ನು ನೀಡಲಾಯಿತು.
ಹೀಗೆ ಆಗುವುದಕ್ಕೆ ಮಹಿಳಾ ಚಳುವಳಿಯಿಂದ ಸಾಧ್ಯವಾಗಿತ್ತು. ಆಗ ಅಲ್ಲೆಲ್ಲ ಸಮಾನ ವೇತನ ಸಮಾನ ಆಸ್ತಿಯ ಹಕ್ಕು ಈ ವಿಷಯಗಳು ಬಹು ಚರ್ಚಿತ ವಿಷಯಗಳಾಗಿದ್ದವು. ಮುಕ್ತವಾದ ಚಿಂತನೆಯನ್ನು ಮಾಡುವ ಅಂಬೇಡ್ಕರ್ ಅವರು ಈ ಚಿಂತನೆಗಳಿಂದ ಆಕರ್ಷಿತರಾಗಿದ್ದರು ಅಂದುಕೊಂಡಿದ್ದನೆಲ್ಲ ಸಾಧಿಸಬೇಕಾದರೆ ರಾಜಕೀಯ ಬಲವಿಲ್ಲದೆ ಸಾಧ್ಯವಿಲ್ಲ ಎಂಬುದು ಮನಗಂಡಿದ್ದರು.
ಹೆಣ್ಣು ಮಕ್ಕಳಿಗೆ ಪುರುಷರ ಸರಿಸಮಾನವಾದ ಶಿಕ್ಷಣ ಸಿಗಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಪುರುಷನಷ್ಟೇ ಎತ್ತರಕ್ಕೆ ಹೋಗಬೇಕಾದರೆ ಅವಳಿಗೆ –ಅವನಿಗೆ ಸಿಕ್ಕಂತೆ ಶಿಕ್ಷಣ ಸಿಗಬೇಕು ಎಂಬುದು ಡಾ. ಅಂಬೇಡ್ಕರ್ ಅವರ ಹಿರಿದಾದ ಆಸೆಯಾಗಿತ್ತು. ತಾವು ಕಂಡ ಸಮಾನತೆಯ ಸಮಾಜ ಕಟ್ಟಬೇಕಾದರೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಮಾನತೆ ಎಂಬ ಕನಸಿನ ಕೂಸು ಹುಟ್ಟಿ ಬೆಳೆದು ನಿಲ್ಲುವ ತನಕ ಅಂಬೇಡ್ಕರ್ ಅವರು ಅವಮಾನ ಅಪಮಾನಗಳನ್ನು ಸಹಿಸಬೇಕಾಯಿತು. ಎಷ್ಟೋ ಸಲ ಅವರು ಒಂಟಿಯಾಗಿ ನಿಲ್ಲಬೇಕಾಯಿತು. ಬದ್ಧತೆಗಾಗಿ ರಾಜಿನಾಮೆ ಕೊಡುವ ಸಂಧರ್ಭಗಳು ಕೂಡ ಬಂದೊದಗಿದವು. ಹೆಣ್ಣೊಬ್ಬಳು ಇವತ್ತು ಸ್ವತಂತ್ರವಾದ ಬದುಕು ನಡೆಸುತ್ತಿದ್ದಾಳೆಂದರೆ ಯಾವುದೇ ಪವಾಡದಿಂದಾಗಲಿ ಮಂದಿರ-ಮಸೀದಿ-ಚರ್ಚನ ಪ್ರಭಾವದಿಂದಾಗಲಿ ಅಲ್ಲ ಅದು ಕೇವಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶ್ರಮದಿಂದ ಮಾತ್ರ. ಅವರು ಪಟ್ಟ ಶ್ರಮಕ್ಕೆ ಬೆಲೆ ಕಟ್ಟಲಾದೀತೆ? ಅಂಬೇಡ್ಕರ್ ಅವರು ಬಹುಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಒಂದು ಮಾತನ್ನು ಹೇಳುತ್ತಿದ್ದರು. 1927ರಲ್ಲಿ ನಡೆದ ಡಿಪ್ರೆಸ್ಡ ಕ್ಲಾಸ್ ವುಮೆನ್ ಅಸೋಷೊಯೇಷನ್ ನ ಸಮಾವೇಶ ಒಂದರಲ್ಲಿ ಆ ಮಾತನ್ನು ಹೇಳಿದ್ದರು.

“ನಿಮ್ಮ ಬಟ್ಟೆ ಹರಿದು ಹರಿದು ತೇಪೆ ಹಾಕಿಕೊಂಡಿರಬಹುದು ಆದರೇನಾಯಿತು? ಆ ಹರಿದ ಬಟ್ಟೆಗಳನ್ನು ಸ್ಚಚ್ಛವಾಗಿಟ್ಟುಕೊಳ್ಳಿ. ನಾವು ಮುಟ್ಟಿಸಿಕೊಳ್ಳದವರು ಎಂಬ ಮನಸ್ಥಿತಿಯಿಂದ ಹೊರಬನ್ನಿ ಯಾವತ್ತೂ ಹಾಗೆ ಭಾವಿಸಬೇಡಿ ನಿಮ್ಮ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಿ ಮಕ್ಕಳಲ್ಲಿರುವ ಕೀಳರಿಮೆಯನ್ನು ಕಿತ್ತೆಸೆಯಿರಿ ಅವರಲ್ಲಿ ಆತ್ಮವಿಶ್ವಾಸ ತುಂಬಿ. “ನೀವು ಮಹಾನ್ ವ್ಯಕ್ತಿಗಳಾಗಲೆಂದೇ ಹುಟ್ಟಿದ್ದೀರಿ” ಎಂದು ಅವರಿಗೆ ಹೇಳಿರಿ, ಎಂದು ಈ ಸಮಾವೇಷದಲ್ಲಿ ಹೇಳಿದ್ದರು.
ಈ ಮಾತನ್ನು ಹೇಳಿದ ಸಂದರ್ಭದಲ್ಲಿ 3000 ಹಿಂದುಳಿದ ಮಹಿಳೆಯರು ಭಾಗವಹಿಸಿದ್ದರು. ಅದೇ ರೀತಿಯಾಗಿ ಮಹಾಡ್ ಸತ್ಯಗ್ರಹದ ಮೆರವಣಿಗೆಯಲ್ಲಿ 500ಜನ ಮಹಿಳೆಯರಿದ್ದರು. ಮಹಿಳೆಯರು ಹೊರಗೆ ಬರಬೇಕು. ಜಗತ್ತನ್ನು ಅರಿಯಬೇಕು, ಅವರೂ ಹೋರಾಟಗಳಲ್ಲಿ ಭಾಗವಹಿಸಬೇಕು., ತಮ್ಮ ಹಕ್ಕುಗಳಿಗೆ ಅವರು ದ್ವನಿ ಎತ್ತಬೇಕು ಎಂದು ಅಂಬೇಡ್ಕರ್ ಅವರು ಬಯಸುತ್ತಿದ್ದರು. ಆ ಕಾರಣಕ್ಕಾಗಿಯೇ ಮೂಕನಾಯಕ, ಬಹಿಷ್ಕøತ ಭಾರತ, ಎಂಬ ಪತ್ರಿಕೆಗಳನ್ನು ಹೊರ ತಂದರು. ಆ ಪತ್ರಿಕೆಗಳಲ್ಲಿ ಮಹಿಳೆಯರ ಸಮಸ್ಯೆಗಳ ಕುರಿತು ಚರ್ಚೆಯಾಗುತ್ತಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂಘಟನೆಯ ಬಲ ಮತ್ತು ತಾತ್ವಿಕವಾದ ಬೆಂಬಲದೊಂದಿಗೆ ಮಹಿಳಾ ಜಾಗೃತಿಯ ಹೊಸ ಅಧ್ಯಾಯವೇ ಪ್ರಾರಂಭವಾಯಿತು.
ಅಂದುಕೊಂಡು ಸುಮ್ಮನಿರುವವರಲ್ಲ ಅವರು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತಿದ್ದರು. ಅಂತೆಯೇ ಮಹಿಳೆಯರಿಗೆ ಹಾಸ್ಟೆಲ್ಗಳನ್ನು ಶಾಲೆಗಳನ್ನು ತೆರೆದರು.ಹೆಣ್ಣು ಮಕ್ಕಳಿಗಾಗಿ ಹೆಣ್ಣು ಮಕ್ಕಳ ಆತ್ಮಕಥೆ ಮತ್ತು ನಾಟಕಗಳನ್ನು ಬರೆದರು.
ಮಹಿಳೆಯರು ಎದುರಿಸುತ್ತಿರುವ ಸಮಸ್ಯಗಳಾವುವು? ಅವರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಹೇಗೆ ನಿಭಾಯಿಸಬೇಕು? ಮಹಿಳೆಗಿರುವ ಜವಾಬ್ದಾರಿಗಳಾವುವು? ಎಂಬಿತ್ಯಾದಿ ವಿಷಯಗಳ ಕುರಿತು ಮಾತನಾಡಿದ್ದಲ್ಲದೆ ಅವುಗಳ ಪರಿಹಾರವೇನೆಂಬುದನ್ನು ಕಂಡುಕೊಂಡರು.
ಮಕ್ಕಳನ್ನು ಹೆತ್ತು ಅವುಗಳ ಲಾಲನೆ ಪಾಲನೆ ಮಾಡುವುದರಲ್ಲಿಯೇ ಆಕೆ ತನ್ನ ಇಡೀ ಜೀವಮಾನವನ್ನು ಕಳೆಯುತ್ತಿದ್ದಾಳೆ. ಬೇರೆ ಕೆಲಸಗಳಿಗೆ ಆಕೆಗೆ ಸಮಯವೇ ಇಲ್ಲದಂತಾಗಿದೆ ಎಂದರಿತ ಅವರು 1938 ರಷ್ಟು ಹಿಂದೆಯೇ ಕುಟುಂಬ ಯೋಜನೆಯ ಬಗ್ಗೆ ಚಿಂತಿಸಿದರು. ಅದಕ್ಕಾಗಿ ಅವರು ಮುಂಬಯಿನ ಶಾಸನ ಸಭೆಯಲ್ಲಿ ಈ ಯೋಜನೆಯನ್ನು ಜನಪ್ರಿಯಗೊಳಿಸಬೇಕೆಂದು ವಾದಿಸಿದರು. ಮತ್ತು ಮಹಿಳಾ ಶಕ್ತಿಯು ಕೇವಲ ಮಕ್ಕಳನ್ನು ಹೇರುವುದರಲ್ಲಿಯೇ ಪೋಲಾಗುತ್ತಿದೆ. ನಮ್ಮ ದೇಶವನ್ನು ಬಲಿಷ್ಠಗೊಳಿಸಬೇಕಾದರೆ ಮಹಿಳಾ ಶಕ್ತಿಯ ಅವಶ್ಯಕತೆ ಇದೆ. ಆಕೆಗೆ ಸ್ವಂತಕ್ಕಾಗಿ ಅಂದರೆ ಓದಲು ಬರೆಯಲು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಕುಟುಂಬ ಯೋಜನೆಯ ಅವಶ್ಯಕತೆ ತುಂಬಾ ಇದೆ ಎಂದರು.
ಅದೇ ರೀತಿಯಲ್ಲಿ 1942ರಲ್ಲಿ ಅವರು ದೆಹಲಿ ಸರ್ಕಾರದ ಕಾರ್ಮಿಕ ಸಚಿವರಾಗಿದ್ದಾಗ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ಭತ್ಯೆ ಮತ್ತು ರಜೆಯನ್ನು ಕೊಡಬೇಕು ಎಂಬ ಪ್ರಸ್ತಾಪವನ್ನಿಟ್ಟರು. ಆಗ ಅನೇಕರಿಂದ ವಿರೋಧ ಮತ್ತು ಯಾಕೆ ಕೊಡಬೇಕು ? ಎಂಬ ಪ್ರಶ್ನೆಗಳು ಎದುರಾದವು.ಅದಕ್ಕೆ ಅಂಬೇಡ್ಕರ್ ಅವರು ಹೇಳುತ್ತಾರೆ. “ಹೆರಿಗೆ ಭತ್ಯೆ ಮತ್ತು ರಜೆ ಸಹಿತ ಸಂಬಳ ನೀಡುವುದು ಸರ್ಕಾರಕ್ಕೆ ಹೊರೆ ಆಗಬಹುದು. ಆದರೆ ನಮ್ಮನ್ನೆಲ್ಲ ಹೆತ್ತು ಹೊತ್ತು,ಸಾಕಿದ ಆ ತಾಯಿಗೆ ನಾವು ಕೊಡುವ ಕನಿಷ್ಠ ಗೌರವವಿದು. ಎಂದರಲ್ಲದೆ ಆಕೆಯ ಬಾಣಂತನಕ್ಕೆ ಅವಶ್ಯವಿರುವಷ್ಟು ದಿವಸ ರಜೆಯನ್ನು ಕೊಡಬೇಕು. ಅದಕ್ಕಾಗಿ ಸರಕಾರವು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಅದಕ್ಕಾಗಿಯೇ ಅವರನ್ನು ನಾನು ಪದೇ ಪದೇ ತಾಯಿ ಹೃದಯದ ತಂದೆ ಎಂದು ಕರೆಯುತ್ತೇನೆ. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವವಿತ್ತು ಮತ್ತು ಅವರ ಏಳಿಗೆಗಾಗಿ ಏನೆಲ್ಲ ಮಾಡಬಹುದೆಂದು ಯೋಚಿಸಿ ಕಾರ್ಯಪ್ರವೃತ್ತರಾಗುತ್ತಿದ್ದರು.
ಅವರೊಂದು ಸಭೆಯಲ್ಲಿ ಮಾತನಾಡುವಾಗ ಮದುವೆಯ ಬಗ್ಗೆ ಒಂದು ಮಾತನ್ನು ಹೇಳಿದರು. ಮದುವೆ ಅನ್ನುವುದು ಒಂದು ಬಂಧನ ಎಲ್ಲಿಯವರೆಗೆ ತಮ್ಮ ಕುಟುಂಬವನ್ನು ತಾವೇ ನಿರ್ವಹಣೆ ಮಾಡುವ ಶಕ್ತಿ ನಿಮಗಿರುವುದಿಲ್ಲವೋ ಅಲ್ಲಿಯ ವರೆಗೆ ಮದುವೆ ಯಾಗಬೇಡಿ. ಮದುವೆಯಾಗುವ ಹೆಣ್ಣು ಮಕ್ಕಳು ಕೂಡ. ಗಂಡನ ಪಕ್ಕದಲ್ಲಿ ಸರಿಸಮಾನರಾಗಿ ನಿಲ್ಲಬೇಕು. ಅವಳು ಆ ಮನೆಯ ದಾಸಿಯಾಗಿ ಅಥವಾ ಆಳಿನ ರೂಪದಲ್ಲಿ ದುಡಿಯುವ ಯಂತ್ರವಾಗಿ ಹೋಗಬಾರದು. ಹೆಣ್ಣು ಮಕ್ಕಳ ಮದುವೆಗೆ ಯಾವತ್ತೂ ಯಾವ ಕಾರಣಕ್ಕೂ ಅವಸರ ಮಾಡಬಾರದು. ಎನ್ನುತ್ತಿದ್ದರು. ಹೆಚ್ಚು ಮಕ್ಕಳನ್ನು ಹೆತ್ತು ಹೈರಾಣಾಗಿ ಬಡತನದ ಬೇಗೆಯಲ್ಲಿ ಬೇಯುವುದಕ್ಕಿಂತ ಕಡಿಮೆ ಮಕ್ಕಳನ್ನು ಹೆತ್ತು ನಿಮ್ಮ ತಂದೆ ತಾಯಿಗಳು ನಿಮಗೆ ಕೊಟ್ಟ ದ್ದಕ್ಕಿಂತ ಹೆಚ್ಚು ಅನೂಕೂಲತೆಗಳನ್ನು ಅವಕಾಶಗಳನ್ನು ಕಲ್ಪಿಸಿ ಎಂದು ಅಂತಃಕರಣದಿಂದ ಹೇಳುತ್ತಿದ್ದರು.
ಮಹಿಳೆಯರ ಹಕ್ಕುಗಳಿಗೆಗಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ ಅವರು ಭಾರತೀಯ ಮಹಿಳೆ ಮತ್ತು ಹಿಂದೂಕೋಡ್ ಬಿಲ್ ತಿರಸ್ಕೃತವಾದಾಗ ಅತಿಯಾಗಿ ನೊಂದುಕೊಂಡಿದ್ದರು. ಅವರೆಷ್ಟು ನೊಂದುಕೊಂಡಿದ್ದರು ಎಂದರೆ ತಮ್ಮ ಕಾನೂನು ಮಂತ್ರಿಯ ಪದವಿಗೆ ರಾಜಿನಾಮೆ ಕೊಟ್ಟಿದ್ದರು. ಯಾವುದೇ ವಿಷಯವಿರಲಿ ತುಂಬಾ ಬದ್ಧತೆ ಇತ್ತವರಿಗೆ . ಈ ಹಿಂದೂಕೋಡ್ ಬಿಲ್ ಏಕೆ ತಿಸ್ಕೃತವಾಯಿತು.? ಅದರೊಳಗೇನಿತ್ತು ಅದನ್ನೇಕೆ ಉಳಿದವರು ಒಪ್ಪಲಿಲ್ಲ. ಅದನ್ನು ಒಮ್ಮೆ ಮಹಿಳೆಯರೆಲ್ಲರೂ ತಿಳಿದುಕೊಳ್ಳಲೇ ಬೇಕು. ಆಗ ಮಾತ್ರ ಅಂಬೇಡ್ಕರ್ ಅವರು ಮಹಿಳೆಯರ ಪಾಲಿಗೆ ಏನಾಗಿದ್ದರು ಎಂಬುದು ಅರ್ಥವಾಗುತ್ತದೆ.
1944ರ ಹಿಂದೂ ಕೋಡ್‍ಬಿಲ್‍ನ ಪರಿಷ್ಕರಣೆಗಾಗಿ ಡಾ ಬಿ,ಆರ್ ಅಂಬೇಡ್ಕರ್ ರವರು ಕಾನೂನು ಮಂತ್ರಿಯಾಗಿದ್ದರು. ಅಂಬೇಡ್ಕರ್ ಅವರು ಪರಿಷ್ಕರಣಾ ಸಮೀತಿಯ ಅಧ್ಯಕ್ಷರಾಗಿದ್ದರು. ಸಮಾಜದಲ್ಲಿ ಯಾವುದೇ ಬದಲಾವಣೆಯನ್ನು ತರಬೇಕು ಅಂತ ಅಂದುಕೊಂಡರೆ ಅದಕ್ಕೆ ಕಾನೂನಿನ ಚೌಕಟ್ಟು ಕೊಡಬೇಕು ಎಂಬುದು ಅವರ ನಿಲುವಾಗಿತ್ತು. ಆ ಕಾರಣ ಅವರು ತುಂಬಾ ಶ್ರಮ ಪಟ್ಟರು ಮತ್ತು ಪುರುಷರಿಗಿರುವ ಎಲ್ಲ ಹಕ್ಕುಗಳನ್ನು ಸಂವಿಧಾನಾತ್ಮಕವಾಗಿ ಮಹಿಳೆಯರಿಗೆ ನೀಡಿದರು.
ಹಿಂದೂ ಕೋಡ್‍ಬಿಲ್: ಹಿಂಧೂ ಧರ್ಮದಲ್ಲಿ ಪ್ರಚಲಿತವಿದ್ದ ವಿವಿಧ ರೀತಿಯ ಮದುವೆ ಪದ್ಧತಿಗಳನ್ನು ರದ್ದುಗೊಳಿಸಿ ಒಂದೇ ವಿಧಧ ಮದುವೆ ಪದ್ಧತಿಯನ್ನು ಜಾರಿಗೊಳಿಸುವುದು.
ಮಹಿಳೆಗೆ ಆಸ್ತಿಯ ಹಕ್ಕು ಮತ್ತು ದತ್ತು ಪಡೆಯುವ ಹಕ್ಕನ್ನು ನೀಡುವುದು.
ಮಹಿಳೆಗೆ ವಿಚ್ಛೇದನೆಯನ್ನು ಪಡೆಯುವ ಹಕ್ಕನ್ನು ನೀಡುವುದು.
ವಿಧವೆಗೆ ಗಂಡನ ಆಸ್ತಿಯ ಪೂರಾ ಹಕ್ಕು ನೀಡುವುದು.
ಮದುವೆಯಾದ ಹೆಣ್ಣು ಮಕ್ಕಳಿಗೆ ತವರಿನ ಆಸ್ತಿಯಲ್ಲಿ ಹಕ್ಕನ್ನು ನೀಡುವುದು.
ದತ್ತು ಸ್ವೀಕಾರ/ಪೋಷಕತ್ವ/ಅವಿಭಕ್ತ ಕುಟುಂಬ/ ಆಸ್ತಿ ಕಾನೂನು
ಯಾರು ಹಿಂದೂ/ ಹೆಣ್ಣು ಮಕ್ಕಳ ಆಸ್ತಿಯ ಹಕ್ಕುವಾರಸುದಾರಿಕೆ ಹಾಗೂ ಜೀವನಾಂಶಗಳ ಕುರಿತು ಕಾನೂನುಗಳನ್ನು ಅದರಲ್ಲಿ ರೂಪಿಸಲಾಗಿತ್ತು.
ಈ ರೀತಿಯಾದ ಈ ಬಿಲ್‍ನಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕನ್ನು ಕೊಡುವುದು ಮತ್ತು ಎಲ್ಲ ಹೆಣ್ಣು ಮಕ್ಕಳ ಪರವಾದ ಹಕ್ಕುಗಳಿರುವುದು ಹಾಗೂ ಯಾರು ಹಿಂದೂ ಎಂದು ವಿವರಿಸುವಾಗ ಎಲ್ಲ ಜಾತಿಯ ಏಕರೂಪತೆ ಸಂಹಿತೆಗೆ ಒಳ ಪಡುತ್ತಿರುವುದರಿಂದ ಮತ್ತು ಮಹಿಳೆಯರಿಗೆ ಸಮಾನತೆಯ ಹಕ್ಕುಗಳು ಸಿಗುತ್ತಿರುವುದರಿಂದ ಮೂರ್ನಾಲ್ಕು ವರ್ಷ ಸಂಸದಿನಲ್ಲಿ ಹಿಂದೂ ಕೋಡ್ ಬಿಲ್ ವಾದ ವಿವಾದಕ್ಕೆ ಒಳಗಾಯಿತು. ಕೊನೆಗೆ ಮತ ಹಾಕಿಸಲಾಯಿತು.ಆಗ 28/23 ಅಂತರದಲ್ಲಿ ಈ ಬಿಲ್ ತಿರಸ್ಕೃತವಾಯಿತು.
ಇದರಿಂದ ಅತಿಯಾಗಿ ನೊಂದುಕೊಂಡ ಅಂಬೇಡ್ಕರ್ ಅವರು “ಅಳುವವರಿಲ್ಲದೇ ಶೋಕಿಸುವವರಿಲ್ಲದೇ ಹಿಂದೂ ಕೋಡ್ ಬಿಲ್ ಕೊಲೆಯಾಗಿ ಹೋಯಿತು ಎಂದು ಪ್ರತಿಕ್ರಿಯಿಸಿದ ಧೀಮಂತ ನಾಯಕ ಕಾನೂನು ಮಂತ್ರಿ ಪದವಿಗೆ ರಾಜಿನಾಮೆ ಸಲ್ಲಿಸಿದರು. ಬದ್ಧತೆ ಅಂದರೆ ಇದು ಹೌದು ಮಹಿಳೆಯರಿಗಾಗಿ ದುಡಿದ, ಮಹಿಳೆಯರ ಹಕ್ಕುಗಳಿಗಾಗಿ ಜೀವನ ಪರ್ಯಂತ ಹೋರಾಡಿದ ಮಹಾ ನಾಯಕ ಡಾ. ಬಿ. ಆರ್ . ಅಂಬೇಡ್ಕರ್ ಅವರು.
ಉದಾರೀಕರಣ, ಡಿಜಿಟಲೀಕರಣ ತಂತ್ರಜ್ಞಾನದ ಈ ಯುಗದಲ್ಲಿ ಮಹಿಳೆಯರು ಅನುಕೂಲತೆ ಪಡೆದಿದ್ದರೂ, ಜಗತ್ತಿನಾದ್ಯಂತ ಸಾಧನೆ ತೋರಿದರೂ
ಶೋಷಣೆಯಿಂದ ಮುಕ್ತವಾಗಿಲ್ಲ. 2011ರ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 914 ಹೆಣ್ಣುಮಕ್ಕಳಿದ್ದಾರೆ.ಹುಟ್ಟಿದ 12 ಮಿಲಿಯನ್ ಹೆಣ್ಣು ಮಕ್ಕಳಲ್ಲಿ, 3 ಮಿಲಿಯನ್ ಮಕ್ಕಳು ತಮ್ಮ 15 ನೆಯ ಹುಟ್ಟು ಹಬ್ಬವನ್ನು ಕಾಣುವುದಿಲ್ಲ. 1 ಮಿಲಿಯನ್ ಹೆಣ್ಣು ಮಕ್ಕಳು ಹುಟ್ಟಿದ ಮೊದಲ ವರ್ಷದೊಳಗೇ ಕಾಣೆಯಾಗುತ್ತಾರೆ. ಪ್ರತಿ 6 ನೇ ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಣ್ಣಿಗೆ ಈಗಲೂ ರಕ್ಷಣೆಯಿಲ್ಲ.
ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ,ಅವಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಹಕ್ಕುಗಳ ಅರಿವಿರ ಬೇಕಾಗುತ್ತದೆ. ಈ ಅರಿವು ಮೂಡಿಸುವ ಜವಾಬ್ದಾರಿ ಪೋಷಕರದ್ದು.ಮಾನವ ಸಂಪನ್ಮೂಲದಲ್ಲಿ ಸುಮಾರು ಅರ್ಧ ಪಾಲು ಹೆಣ್ಣುಗಳದ್ದು.ಆದರೆ,ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ. ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿ ಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಹೆಣ್ಣು ಮಕ್ಕಳೆಲ್ಲ ಶಿಕ್ಷಿತರಾದಾಗ ಮಾತ್ರ, ಸಂವಿಧಾನದ ಕಲ್ಪನೆಯ ಭಾರತವನ್ನು ನಾವು ತಲುಪಲು ಸಾಧ್ಯ.
ಕಳೆದ ವರ್ಷ ಕೋವಿಡ್ ಯಿಂದಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿತ್ತು ಅದರಲ್ಲಿ ದುಡಿಯುವ, ಸಾಂಸಾರಿಕ ಜವಾಬ್ದಾರಿ ಹೊತ್ತಿದ್ದ ಮಹಿಳೆಯರು ತಮ್ಮ ಮನೆ ಸಂಸಾರವನ್ನು ಅತ್ಯಂತ ಸಮರ್ಪಕವಾಗಿ ನಡೆಸಿದರು, ಜೊತೆಗೆ ಇದೆ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಮಾನಸಿಕ, ದೈಹಿಕ ದೌರ್ಜನ್ಯಗಳು, ಬಾಲ್ಯ ವಿವಾಹದಂತಹ ಶತಮಾನಗಳ ಹಿಂದೆ ನೂಕುವ ಅನೇಕ ಪ್ರಕರಣಗಳು ಅತಿ ಹೆಚ್ಚಾಗಿಯೇ ಕಂಡು ಬಂದಾವು,ಇವೆಲ್ಲವುಗಳನ್ನು ಮೀರಿ ಬದುಕು ಕಟ್ಟಿಕೊಳ್ಳವ ಅಕೆಯ ಮನಸ್ಥಿತಿಗೆ ಸಾವಿರ ಕೋಟಿ ನಮನಗಳು.
ಜಗತ್ತಿನ ಎಲ್ಲ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
- ಡಾ.ಗುರುಪ್ರಸಾದ ರಾವ್ ಹವಲ್ದಾರ್ –ಲೇಖಕರು ಮತ್ತು ಉಪನ್ಯಾಸಕರು
