ವೈದ್ಯ ಅಭಯ ಬಾಂಗ್ ಮತ್ತು ಅವರ ಪತ್ನಿ ರಾಣಿ ಬಾಂಗ್ ದಂಪತಿಗಳು ಮಧ್ಯಭಾರತದ ಬುಡಕಟ್ಟು ಜನಾಂಗ ಜನಸಂಖ್ಯಾ ಬಾಹುಳ್ಯವಿರುವ ಗಡಚಿರೋಲಿ ಜಿಲ್ಲೆಯಲ್ಲಿ ದಶಕಗಳಿಂದ ಆರೋಗ್ಯ, ಸಾಮಾಜಿಕ ಸುಧಾರಣೆ, ಹಳ್ಳಿಗಳ ವಿಕಾಸದ ಕುರಿತು ಕೆಲಸ ಮಾಡುತ್ತಿದ್ದಾರೆ. ಅವರ ಸಾಧನೆಯ ಕುರಿತು ಖ್ಯಾತ ಬರಹಗಾರ ಕೇಶವ ಮಳಗಿ ಅವರ ಬರಹದಲ್ಲಿ, ಮುಂದೆ ಓದಿ…
(ವೈದ್ಯ ಅಭಯ ಬಾಂಗ್ ಮತ್ತು ಅವರ ಪತ್ನಿ ರಾಣಿ ಬಾಂಗ್ ಭಾರತದ ಸಮುದಾಯ ಆರೋಗ್ಯ ಸೇವೆ ಕ್ಷೇತ್ರದಲ್ಲಿ ವಿಶ್ವಮಾನ್ಯ ಹೆಸರು. ಅಭಯ ಬಾಂಗ್, ವೈದ್ಯಕೀಯ ಮತ್ತು ಸಾಮಾಜಿಕ ಆರೋಗ್ಯದ ಕ್ಷೇತ್ರದಲ್ಲಿನ ತಮ್ಮ ಕೆಲಸಕ್ಕಾಗಿ ಅಸಂಖ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜಮ್ನಾಲಾಲ್ ಬಜಾಜ್ ಮತ್ತು ಪದ್ಮಶ್ರೀ ಪುರಸ್ಕಾರ ಅವುಗಳಲ್ಲಿ ಎರಡು. ಅವರ ಸಂಶೋಧನಾ ಸಂಸ್ಥೆ ‘#ಸರ್ಚ್’ ತನ್ನ ಅದ್ವಿತೀಯ ಅಧ್ಯಯನ ವಿಧಾನಗಳಿಂದ ವಿಶ್ವಮಾನ್ಯತೆ ಗಳಿಸಿದೆ.

(ವೈದ್ಯ ಅಭಯ ಬಾಂಗ್ ಮತ್ತು ಅವರ ಪತ್ನಿ ಡಾ. ರಾಣಿ ಬಾಂಗ್ ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ಕ್ಷಣ)
ಅಭಯ ದಂಪತಿಗಳು ಮಧ್ಯಭಾರತದ ಬುಡಕಟ್ಟು ಜನಾಂಗ ಜನಸಂಖ್ಯಾ ಬಾಹುಳ್ಯವಿರುವ ಗಡಚಿರೋಲಿ ಜಿಲ್ಲೆಯಲ್ಲಿ ದಶಕಗಳಿಂದ ಆರೋಗ್ಯ, ಸಾಮಾಜಿಕ ಸುಧಾರಣೆ, ಹಳ್ಳಿಗಳ ವಿಕಾಸದ ಕುರಿತು ಕೆಲಸ ಮಾಡುತ್ತಿದ್ದಾರೆ. ಅಭಯ ಅವರ ತಂದೆ-ತಾಯಿಗಳು ಸರ್ವೋದಯ ಆಂದೋಲನದ ಮುಂಚೂಣಿ ಜೋಡಿಯಾಗಿದ್ದರು. ಅವರ ತಂದೆ ಠಾಕೂರದಾಸ ಬಾಂಗ್ ಪ್ರಸಿದ್ಧ ಗಾಂಧಿ ಆರ್ಥಿಕ ತಜ್ಞ ಮತ್ತು ಗ್ರಾಮವಿಕಾಸ ಪರಿಕಲ್ಪನೆಯ ಆರಂಭಿಕ ರೂವಾರಿ. ಮುಂದಿನ ತಲೆಮಾರು ಕೂಡ ಸಾಮಾಜಿಕ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವುದು ಈ ಕುಟುಂಬದ ನಿಜವಾದ ಹೆಗ್ಗಳಿಕೆ.
ಈ ಸಾಧನೆಯನ್ನು ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯ `ಜನಪದ ಸೇವಾ ಟ್ರಸ್ಟ್’ನ ರೂವಾರಿಗಳಿಗೂ ಅನ್ವಯಿಸಬಹುದು. ಗಾಂಧಿವಾದಿ ಸುರೇಂದ್ರ ಕೌಲಗಿ ಆರಂಭಿಸಿದ ಈ ಭಾರತ ಬದಲಾವಣೆ ಕನಸನ್ನು ತಮ್ಮ ನೆಲೆಯಲ್ಲಿ ಅವರ ಮಗ ಸಂತೋಷ ಕೌಲಗಿ ಮತ್ತು ಅವರ ಮಕ್ಕಳು ಮುಂದುವರೆಸಿರುವುದು ನಿಜವಾದ ಗಾಂಧಿನಡೆಯಾಗಿದೆ. ಜನಪದ ಸೇವಾ ಟ್ರಸ್ಟ್‌ನ ಇತ್ತೀಚಿನ ಖಾದಿ ಮರು ವಿನ್ಯಾಸ ಹಾಗೂ ಶ್ರಮವನ್ನು ಒಳಗೊಂಡ ಪರಿಸರ ಪ್ರವಾಸ ಗಮನಾರ್ಹವಾಗಿವೆ.)
ರಕ್ತದಂತೆ ಹರಿಯುವ ಒಳಗಿನ ಪ್ರಜ್ಞೆ :
ಅಭಯ್ ಬಾಂಗ್
ನಾನು ಹುಟ್ಟುವುದಕ್ಕೂ ಮೊದಲೇ ಅವರು ಅಸು ನೀಗಿದ್ದರು. ನಾನೆಂದೂ ಅವರನ್ನು ಭೇಟಿಯಾಗಿಲ್ಲ. ಆದರೂ ಬದುಕಿನ ಅನೇಕ ಪ್ರಸಂಗಗಳಲಿ ನಾನವರನ್ನು ಮುಖಾಮುಖಿಯಾಗಿದ್ದೇನೆ. ಅವರು ನಮ್ಮ ರಕ್ತಸಂಬಂಧಿಯಲ್ಲ. ಆದರೂ ಥೇಟು ಪೊದೆ ಮೀಸೆಗಳ ನನ್ನಜ್ಜನಂತೆಯೇ ನನ್ನ ರಕ್ತದಲ್ಲಿ ಹರಿಯುತ್ತಿದ್ದಾರೆ.

(ವೈದ್ಯ ಅಭಯ ಬಾಂಗ್)
ನಾನು ಜನಿಸುವ ಮೊದಲೇ ಅವರ ಪ್ರಭಾವವು ನನ್ನ ಬದುಕಿನ ಮೇಲೆ ಆಗಿತ್ತು! ನನ್ನ ಅಪ್ಪ ಠಾಕೂರದಾಸ್ ಬಾಂಗ್ ಮಹಾತ್ಮರ ಅನುಯಾಯಿಗಳೊಬ್ಬರು ಆರಂಭಿಸಿದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.
ಅಪ್ಪನ ವಾಸ ಸ್ಥಾನ ವಾರ್ಧಾ ಎಂಬ ಪುಟ್ಟ ಪಟ್ಟಣ. ಅದಾದರೂ, ಗಾಂಧಿ ತಮ್ಮ ಸಾರ್ವಜನಿಕ ಮತ್ತು ಖಾಸಗಿ ಬದುಕಿನಲ್ಲಿ ಕೈಗೊಂಡ ಪ್ರಯೋಗಗಳ ಮತ್ತು ರಾಷ್ಟ್ರೀಯ ಆಂದೋಲನದ ಉಪಕ್ರಮಗಳನ್ನು ರೂಪಿಸುತ್ತಿದ್ದ ಮೂಲಸ್ಥಳವಾಗಿದ್ದ ‘ಸೇವಾಗ್ರಾಮ’ದಿಂದ ಕೆಲವೇ ಮೈಲು ಅಂತರದಲ್ಲಿತ್ತು. ಅಪ್ಪನೂ ನಾಡ ಬಿಡುಗಡೆ ಆಂದೋಲನದಲ್ಲಿ ಭಾಗಿಯಾಗಿ ಸೆರೆವಾಸಿಯಾಗಿದ್ದರು. ಎರಡನೆಯ ಮಹಾಯುದ್ಧದ ಬಳಿಕ ಈ ಜೈಲುವಾಸಿಗಳನ್ನು ಬಿಡುಗಡೆ ಮಾಡಲಾಯಿತು. ಇನ್ನೇನು ದೇಶಕ್ಕೆ ಬಿಡುಗಡೆ ದೊರಕಲಿದೆ ಎಂಬ ಉತ್ಸಾಹದಲ್ಲಿ ನನ್ನ ತಂದೆ ಉನ್ನತ ಶಿಕ್ಷಣ ಪಡೆಯುವ ಯೋಚನೆ ಮಾಡಿದರು. ಅಮೆರಿಕದ ಓಹಿಯೋ ವಿಶ್ವವಿದ್ಯಾಲಯದಲ್ಲಿ ಆರ್ಥಿಕ ವಿಷಯದಲ್ಲಿ ಉನ್ನತ ಅಧ್ಯಯನ ನಡೆಸಬಯಸಿದ್ದರು. ಸರಿ, ಗಾಂಧಿಯವರ ಆಶೀರ್ವಾದ ಪಡೆಯೋಣವೆಂದು ಸೇವಾಗ್ರಾಮಕ್ಕೆ ತೆರಳಿದರು.
ಹುಲ್ಲು ಚಾಪೆಯ ಮೇಲೆ ಕುಳಿತಿದ್ದ ಗಾಂಧಿ ಬರವಣಿಗೆಯಲ್ಲಿ ಲೀನವಾಗಿದ್ದರು. ನನ್ನ ಅಪ್ಪ:
“ಬಾಪು, ನಾನೀಗ ಜೈಲಿನಿಂದ ಬಿಡುಗಡೆಯಾಗಿದ್ದೇನೆ. ಆರ್ಥಿಕ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕಕ್ಕೆ ತೆರಳಬೇಕೆಂದಿದ್ದೇನೆ”, ಎಂದು ಹೇಳಿದರು.

ಫೋಟೋ ಕೃಪೆ : kannada.nativeplanet
ಗಂಭೀರ ಮುಖಭಾವದಲ್ಲಿ ಗಾಂಧಿ ಹೇಳಿದ್ದು ಒಂದೇ ಸಾಲಂತೆ:
“ನೀನು ಆರ್ಥಿಕ ವಿಷಯದಲ್ಲಿ ಅಧ್ಯಯನ ಕೈಗೊಳ್ಳುವುದಾದರೆ ಅಮೆರಿಕಕ್ಕೆ ಹೋಗಬೇಡ. ಭಾರತದ ಹಳ್ಳಿಗಳಿಗೆ ಹೋಗು!”
‘ಬಾಪು ಕುಟೀರ’ದಿಂದ ಮೌನವಾಗಿ ಹೊರಬಂದ ಅಪ್ಪನ ಬದುಕು ಆ ಒಂದು ವಾಕ್ಯದಿಂದ ಸಂಪೂರ್ಣ ಬದಲಾಗಲಿತ್ತು! ಆಮೇಲೆ ಅಪ್ಪ ಭೂದಾನ-ಗ್ರಾಮದಾನ ಆಂದೋಲನದಲ್ಲಿ ಪಾಲ್ಗೊಳ್ಳುತ್ತ, ಸಮುದಾಯ ಮತ್ತು ಗ್ರಾಮೀಣ ವಿಕಾಸಕ್ಕಾಗಿ ದುಡಿಯತೊಡಗಿದರು.
“ಗಾಂಧಿಯಲ್ಲಿ ಅಂಥ ಗಾರುಡಿ ಏನಿತ್ತು?” ನಾನೊಮ್ಮೆ ಅಪ್ಪನನ್ನು ಕೇಳಿದ್ದೆ. ಅಪ್ಪ, ಇದೇ ಬಗೆಯ ಪ್ರಶ್ನೆಯನ್ನು ಕೇಳಿದ್ದ ರಾಮ ಮನೋಹರ ಲೋಹಿಯಾರ ಪ್ರಸಂಗವೊಂದನ್ನು ಹೇಳಿದರು. ಏಕತಾನತೆಯಿಂದ ಕೂಡಿದ, ಕೆಳದನಿಯಲ್ಲಿ ಹಲವೊಮ್ಮೆ ಕೇಳಿಸುವುದೇ ಇಲ್ಲ ಎಂಬಂತೆ ಮಾತಾಡುತ್ತಿದ್ದ, ಆದರೆ, ಬೆಂಕಿಯುಗುಳಿದ ಪ್ರಭಾವವನ್ನು ಬೀರುತ್ತಿದ್ದ ಗಾಂಧಿ ನುಡಿಗಳು! ತರುಣ.

ಫೋಟೋ ಕೃಪೆ : google
ಲೋಹಿಯಾರ ಪ್ರಶ್ನೆಗೆ ಗಾಂಧಿ ಉತ್ತರಿಸಿದ್ದು ಹೀಗಂತೆ:
“ನನಗೂ ಸರಿಯಾಗಿ ಗೊತ್ತಿಲ್ಲ. ಆದರೆ, ನಾನು ವೈಯಕ್ತಿಯ ಬದುಕಿನಲ್ಲಿ ಆಚರಿಸಲು ಸಾಧ್ಯವಿಲ್ಲದ ಯಾವುದನ್ನೂ ಮಾಡಿ ಎಂದು ನಾನು ಜನರನ್ನು ಕೇಳುವುದಿಲ್ಲ. ಭಾರತದ ಜನ ಕೂಡ ಈ ವ್ಯತ್ಯಾಸವನ್ನು ಗುರುತಿಸಿದ್ದಾರೆ ಅನ್ನಿಸುತ್ತದೆ.”
ನಾನು ಆರಂಭಿಕ ಶಿಕ್ಷಣವನ್ನು ಪಡೆದಿದ್ದು ಗಾಂಧಿ ಆರಂಭಿಸಿದ ‘ನಯಿ ತಾಲೀಮ್’ (ನವಶಿಕ್ಷಣ) ಶಾಲೆಯಲ್ಲಿ. ಪರಿಫೂರ್ಣ ಮನುಷ್ಯರಾಗಲು ಇಲ್ಲಿನ ಮಕ್ಕಳು ದೇಹದ ಸಮಸ್ತವನ್ನೂ- ಬುದ್ಧಿ, ಭಾವ ಮತ್ತು ಕೈಗಳು- ಬಳಸುವುದು ಇಲ್ಲಿನ ಮೊದಲ ನಿಯಮವಾಗಿತ್ತು. ಮಾಡು ಮತ್ತು ಕಲಿ ಎಂಬುದು ಇಲ್ಲಿನ ಎರಡನೆಯ ನಿಯಮವಾಗಿತ್ತು. ಪ್ರತಿ ವಿದ್ಯಾರ್ಥಿಯು ದೈಹಿಕ ಪರಿಶ್ರಮದಲ್ಲಿ ತೊಡಗಿ ಸಮುದಾಯಿಕ ಒಳಿತಿನ ಕೆಲಸದಲ್ಲಿ ಭಾಗಿಯಾಗಬೇಕಾಗುತ್ತಿತ್ತು. ಮಾಹಿತಿ ಉರು ಹೊಡೆಯುವುದಕ್ಕಿಂತ ನೈತಿಕತೆ ಮತ್ತು ನುಡಿಯರಿತ ನಡೆಗೆ ಮಹತ್ವವಿತ್ತು. ಹಾಗೆ ನೋಡಿದರೆ, ಮುಂದೆ ನಾನು ಪೌಷ್ಟಿಕತೆಯ ಕುರಿತು ವೈದ್ಯಕೀಯ ಶಿಕ್ಷಣದಲ್ಲಿ ಪಡೆದುದಕ್ಕಿಂತ ಹೆಚ್ಚಿನ ತಿಳಿವಳಿಕೆಯನ್ನು ನವಶಿಕ್ಷಣದ ಅಡುಗೆಮನೆಯಲ್ಲಿ ಕಲಿತಿದ್ದೆ. ಸಾಮಾಜಿಕ ವಿಷಯಗಳನ್ನು ಹಳ್ಳಿಗಳ ಭೇಟಿ ಮತ್ತು ಮಾತುಕತೆಯ ಮೂಲಕ ಸಾಧಿಸಲಾಗುತ್ತಿತ್ತು. ಅದೊಂದು ಸಂಚಾರಿ ವಿಶ್ವವಿದ್ಯಾಲಯದಂತಿತ್ತು!

ಫೋಟೋ ಕೃಪೆ : google
ಇದೀಗ ನಾನು ಮತ್ತು ನನ್ನ ಸೋದರ ಬದುಕಿನಲ್ಲಿ ಏನು ಸಾಧಿಸಬೇಕು? ಎಂದು ನಿರ್ಧರಿಸುವ ಗಳಿಗೆ. ಭಾರತದ ಹಳ್ಳಿಗಾಡಿನ ಜೀವನಕ್ಕೆ ನಾವೇನು ಮಾಡಬಲ್ಲೆವು? ಎಂದು ಯೋಚಿಸುವ ಸಮಯ. ನಾವು ಆಹಾರ ಮತ್ತು ವೈದ್ಯಕೀಯವನ್ನು ನಮ್ಮ ಅಯ್ಕೆಯನ್ನಾಗಿ ಮಾಡಿಕೊಂಡೆವು. ರೈತಾಪಿ ಸಮುದಾಯಕ್ಕೆ ಪ್ರಯೋಜನವಾಗುವಂತೆ ನನ್ನ ಸೋದರ ಕೃಷಿಕ್ಷೇತ್ರವನ್ನು ಆಯ್ದರೆ, ನಾನು ಅನಾರೋಗ್ಯದಿಂದ ನರಳುವ ಬಡವರನ್ನು ಶುಶ್ರೂಷೆ ಮಾಡಲು ವೈದ್ಯಕೀಯವನ್ನು ಆರಿಸಿಕೊಂಡೆ.
ವೈದ್ಯಕೀಯ ಶಿಕ್ಷಣವನ್ನು ಸೇರಿದ ಮೇಲೆ ಸಂಪೂರ್ಣ ಬೌದ್ಧಿಕ ಕಲಿಕೆಯಲ್ಲಿ ತೊಡಗಿಕೊಂಡ ಮೇಲೆ ಗಾಂಧಿ ಎಲ್ಲೋ ಮರೆಗೆ ಸರಿದರು. ನಾನೋ ಅತ್ಯಂತ ಯಶಸ್ವಿ ವೈದ್ಯನಾಗ ಬಯಸಿದೆ! ಅತ್ಯಂತ ಪ್ರಸಿದ್ಧ ಕಾಲೇಜುಗಳಲ್ಲಿ ಕಲಿಯತೊಡಗಿದೆ. ಆದರೆ, ಒಳಗೇ ತೀವ್ರ ಅಸಮಾಧಾನ! ನಾನೇಕೆ ಸುಖಿಯಾಗಿಲ್ಲ? ಈ ಅಸ್ವಸ್ಥತೆ ಯಾಕೆ? ಈ ಅತ್ಯಾಧುನಿಕ ಶಿಕ್ಷಣ ಪಡೆದಾದ ಮೇಲೆ ಅದನ್ನು ಆಚರಣೆಗೆ ತರಲು ನನ್ನ ಮುಂದಿದ್ದ ದಾರಿ ಅಮೆರಿಕ ಆಗಿತ್ತು! ಆ ಕಾಲದ ಎಲ್ಲರಿಗೂ ಅದೇ ಆಯ್ಕೆಯಾಗಿತ್ತು. ನೀನು ಅಮೆರಿಕದಲ್ಲಿರುತ್ತೀಯ? ಹಾಗಿದ್ದರೆ ಭಾರತದ ಹಳ್ಳಿಗರ ಪಾಡೇನು? ಇಂಥ ಸಂಕಟ ನನ್ನನ್ನು ನಿದ್ರಿಸಗೊಡುತ್ತಿರಲಿಲ್ಲ. ಬರಿಯ ಗೊಂದಲ, ದ್ವಂದ್ವ. ನಾನು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೆ. ನಾನು ದೃಢ ಮನಸ್ಸಿನಿಂದ ನಿರ್ಧರಿಸಿದೆ.

ಡಾ. ರಾಣಿ ಬಾಂಗ್ ಬರೆದ ಪುಸ್ತಕ
ಆಘಾತಗೊಂಡಿದ್ದ ನಿರ್ದೇಶಕರಿಗೆ ನಾನು ಹೇಳಿದೆ:
“ನಾನು ಸಂಸ್ಥೆ ಬಿಡುತ್ತಿದ್ದೇನೆ. ಸಾರ್ಥಕತೆ ಕಂಡುಕೊಳ್ಳಲು ನಾನು ಬುಡಕಟ್ಟು ಜನ ವಾಸಿಸುವ ಪ್ರದೇಶಕ್ಕೆ ಹೋಗುತ್ತಿದ್ದೇನೆ!” ಹೀಗೆ ಹೇಳಿದಾಗ ಮಹಾತ್ಮ ತೀರಿಕೊಂಡು ಇಪ್ಪತ್ತು ವರ್ಷಗಳಾಗಿದ್ದವು. ಆದರೆ, ಅವರು ನನ್ನ ಒಳದನಿಯಾಗಿರಲಿಲ್ಲವೆ?
ವರ್ಷಗಳು ಉರುಳಿವೆ. ನಾನು, ವೈದ್ಯ ಪತ್ನಿ ರಾಣಿ ಸಮುದಾಯ ಆರೋಗ್ಯ ಮತ್ತು ಸಂಶೋಧನಾ ಕೇಂದ್ರವನ್ನು ಆರಂಭಿಸಿದೆವು. ಮಧ್ಯಭಾರತದ ಬುಡಕಟ್ಟು ಜನಬಾಹುಳ್ಯವಿರುವ ಗಡಚಿರೋಲಿ ಜಿಲ್ಲೆ ನಮ್ಮ ಆಯ್ಕೆಯಾಯಿತು. ನೂರು ಹಳ್ಳಿಗಳಲ್ಲಿನ ಆರೋಗ್ಯ ಸಮಸ್ಯೆಯನ್ನು ಅಧ್ಯಯನ ನಡೆಸಿ ಗ್ರಾಮ ನಿರ್ದಿಷ್ಟ ಚಿಕಿತ್ಸೆಯನ್ನು ನೀಡತೊಡಗಿದೆವು. ಆರೋಗ್ಯ ಆರೈಕೆಯಲ್ಲಿ ಜನ ಸ್ವಾವಲಂಬಿಗಳಾಗಲು ಹಳ್ಳಿಗರಿಗೆ ತರಬೇತಿಗಳನ್ನು ನೀಡತೊಡಗಿದೆವು. ಇಲ್ಲಿ ಮಹಿಳೆಯರ ಕಾಯಿಲೆಗಳ ಸ್ವರೂಪಗಳು ಸಂಶೋಧನಾ ಪತ್ರಿಕೆಗಳಲ್ಲಿ ಬೆಳಕು ಕಂಡವು.
ಗಡಚಿರೋಲಿ ಜಿಲ್ಲೆಯ ಬುಡಕಟ್ಟು ವಾಸಿ ಪುರುಷರಲ್ಲಿ ಮದ್ಯವ್ಯಸನ ಅತಿದೊಡ್ಡ ಸಮಸ್ಯೆಯಾಗಿತ್ತು. ನಾವು ಮಹಿಳೆಯರನ್ನು ವೈಯಕ್ತಿಕವಾಗಿ, ಗುಂಪಾಗಿ, ಹಳ್ಳಿಗಳ ನೆಲೆಯಲ್ಲಿ ಮಾತನಾಡಿಸತೊಡಗಿದೆವು. ಗಂಡಸರಿಗೆ ತಮ್ಮ ದೇಹದ ಮೇಲೆ ನಿಯಂತ್ರಣವಿಲ್ಲ. ಸರ್ಕಾರವಾದರೂ ತನ್ನ ದೊಡ್ಡ ಆದಾಯ ಮೂಲವಾದ ಮದ್ಯ ಮಾರಾಟ ಉತ್ತೇಜಿಸುತ್ತಿದೆ. ಇದಕ್ಕೆ ಪರಿಹಾರವೇನು? ನಾನು ಅಸಹಾಯಕನಂತೆ ಒದ್ದಾಡಿದೆ. ನನ್ನ ವೈದ್ಯಕೀಯ ಶಿಕ್ಷಣದಲ್ಲಿ ಇಂತಹ ಸಮಸ್ಯೆಗಳ ಕುರಿತು ಏನನ್ನೂ ಕಲಿಸಿರಲಿಲ್ಲ. ನಾನು ಮತ್ತೆ ಗಾಂಧಿಯತ್ತ ಮರಳಲು ನಿರ್ಧರಿಸಿದೆ. ಮದ್ಯವ್ಯಸನದ ಕುರಿತು ಬಾಪು ಬರೆದಿರುವುದನ್ನೆಲ್ಲ ಓದಿದೆ. ಅವರು ಸೂಚಿಸಿದ ಪ್ರಕ್ರಿಯೆಗಳನ್ನು ಮನನ ಮಾಡಿಕೊಂಡೆ. ಪಿಕೆಟಿಂಗ್, ನಾಗರಿಕ ಅಸಹಕಾರಗಳ ಆಧಾರದ ಮೇಲೆ ಗಡಚಿರೋಲಿ ಜಿಲ್ಲೆಯ ನೂರೈವತ್ತು ಹಳ್ಳಿಗಳಲ್ಲಿ ಮದ್ಯ ನಿಷೇಧ ಹೋರಾಟವನ್ನು ಆರಂಭಿಸಿದೆವು. ನೂರಾರು ಸಾಮಾಜಿಕ ಸಂಘಟನೆಗಳು ಭಾಗವಹಿಸಿದವು. ಆರುನೂರು ಗ್ರಾಮಗಳು ನಿಷೇಧ ಒತ್ತಾಯಿಸಿ ಹಕ್ಕೊತ್ತಾಯ ಮಂಡಿಸಿದವು.

ಫೋಟೋ ಕೃಪೆ : Drs. Abhay and Rani Bang with their sons Anand and Amrut.
೧೯೫ರ ಒಂದು ಬೆಳಗಿನ ವಿಹಾರದಲ್ಲಿ ನನಗೆ ಇದ್ದಕ್ಕಿದ್ದಂತೆ ಎದೆನೋವು ಆರಂಭವಾಯಿತು. ನನಗಾಗ ನಲ್ವತ್ತನಾಲ್ಕು ವರ್ಷ. ನಾನು ಹೃದಯ ಕಾಯಿಲೆಯಿರುವ ವ್ಯಕ್ತಿಯಾಗಿದ್ದೆ! ಆದರೆ, ಸಾವನ್ನು ಎದುರಿಸಲು ನಾನು ಸಿದ್ಧನಾಗಿರಲಿಲ್ಲ. ನನ್ನ ನಿಜವಾದ ಬದುಕು ಈಗಷ್ಟೇ ಆರಂಭವಾಗಿತ್ತು. ಈವರೆಗೆ ನನ್ನ ಆರೋಗ್ಯದ ಕಾಳಜಿಯೇ ತೆಗೆದುಕೊಳ್ಳದ ನಾನು ಅಸಹಾಯಕನಾಗಿ ಮರಣ ಹಾಸಿಗೆಯ ಮೇಲೆ ಮಲಗಿದ್ದೆ. ನಾನು ಮರಳಿ ಗಾಂಧಿ ಆಶ್ರಮದ ಜೀವನ ಪದ್ಧತಿಗೆ ಮರಳಬೇಕಿತ್ತು. ಆಶ್ರಮದಲ್ಲಿ ಸರಳ ಆಚರಣೆಯಲ್ಲಿದ್ದ ಕೊಬ್ಬು ರಹಿತ ಸಸ್ಯಹಾರ ಪದ್ಧತಿ. ನಾನು ಇಪ್ಪತ್ತೈದು ವರ್ಷಗಳಿಂದ ಅದನ್ನು ನಿರ್ಲಕ್ಷಿಸಿದ್ದೆ! ನನ್ನ ಜೀವನ ಪದ್ಧತಿಯ ದುಬಾರಿ ಶುಲ್ಕವನ್ನು ನಲ್ವತ್ತನಾಲ್ಕನೆಯ ವಯಸ್ಸಿಗೇ ಪಾವತಿಸುತ್ತಿದ್ದೆ.
ಗಾಂಧಿ “ಸತ್ಯವೇ ದೇವರು” ಎಂದು ಅರುಹಿದ್ದರು. ಸತ್ಯದ ನಿಯಮವೇ ದೇವರು ಎಂದಾದಲ್ಲಿ ಅದನ್ನು ನಾವು ಹುಡುಕಿ, ಅನುಭವಿಸಲು ಮತ್ತು ಸಾಕ್ಷಾತ್ಕಾರಗೊಳಿಸಲು ಸಾಧ್ಯವಿರಲೇಬೇಕು! ಸತ್ಯವು ಎಲ್ಲೆಡೆ ಮನೆ ಮಾಡಿದೆ. ಹಾಗಿದ್ದರೆ ದೈವವು ಸರ್ವವ್ಯಾಪಿ! ವೈದ್ಯಕೀಯ ಓದು, ಭೌತ ಮತ್ತು ರಾಸಾಯನಿಕಶಾಸ್ತ್ರಗಳ ಅರಿವು ನನ್ನನ್ನು ವಿಜ್ಞಾನ-ಆಧ್ಯಾತ್ಮಿಕ ಅರಿವುಗಳ ಸಂಯೋಗ ಸಾಧ್ಯತೆಯನ್ನು ತಿಳಿಸಿಕೊಟ್ಟವು.

ಫೋಟೋ ಕೃಪೆ : idronline
ಆಸ್ಪತ್ರೆಯಿಂದ ಮರಳಿದ್ದೆ ನಾನು ಮೊದಲು ಮಾಡಿದ ಕೆಲಸ ಸೇವಾಗ್ರಾಮದ ಆಶ್ರಮಕ್ಕೆ ಭೇಟಿ ನೀಡಿದ್ದು. ನಾನು ಬಾಪು ಕುಟೀರಕ್ಕೆ ತೆರಳಿ, ಧಾನ್ಯಸ್ಥ ಸ್ಥಿತಿಯಲ್ಲಿ ಕುಳಿತೆ. ಕಣ್ಣು ಮುಚ್ಚಿದೆ. ಅವರು ನೆಲದ ಮೇಲೆ ಕುಳಿತು ಚರಕದ ರಾಟೆಯನ್ನು ತಿರುಗಿಸುತ್ತಿರುವುದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ನಾನು ಕೇಳಿದೆ: “ಈಗೇನು ಮಾಡಲಿ?”
“ನೀನು ಸತ್ಯಕ್ಕೆ ಸಂಪೂರ್ಣವಾಗಿ ಶರಣಾಗು” ಅವರು ಉತ್ತರಿಸಿದ್ದರು. ಬಳಿಕ ತಾವು ಚರಕ ನೂಲುವುದನ್ನು ಮುಂದುವರೆಸಿದರು.

ಫೋಟೋ ಕೃಪೆ : google
ಆ ಭೇಟಿಯ ಕುರಿತು ಇಂದು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ. ನಾನು ನೋಡಿದ್ದು, ಕೇಳಿದ್ದು ಏನು? ನನ್ನೊಡನೆ ಮಾತಾಡಿದ್ದು ಯಾರು? ಎಷ್ಟೋ ವರ್ಷಗಳ ಬಳಿಕ ನನ್ನೊಂದಿಗೆ ಮಾತಾಡಲು ಅವರು ಬಂದಿದ್ದು ಹೇಗೆ? ಇಲ್ಲ. ಅವರೆಂದೂ ಹೋಗಿಯೇ ಇರಲಿಲ್ಲ. ನನ್ನ ಎಲುಬು, ನರಮಂಡಲದಲ್ಲಿ ನೆತ್ತರಾಗಿ ಹರಿಯುತ್ತಿದ್ದರು ಎಂದು ಅರಿತೆ. ಆಳದಲ್ಲಿ ಪ್ರಜ್ಞೆಯಂತೆ ನಮ್ಮೆಲ್ಲರ ’ನಾನು’ ಎಂಬುದು ಮನೆ ಮಾಡಿದೆ. ನನ್ನ ಪ್ರಜ್ಞೆ, ನಿಮ್ಮ ಪ್ರಜ್ಞೆ, ಗಾಂಧಿಯ ಪ್ರಜ್ಞೆ ಮತ್ತು ವಿಶ್ವಾತ್ಮಕ ಪ್ರಜ್ಞೆ ಎಲ್ಲವೂ ಸಂಯೋಗಗೊಂಡಿವೆ.
ಹೀಗಾಗಿಯೇ, ನಾನು ಮತ್ತೆ ಮತ್ತೆ ಅವರನ್ನು ಭೇಟಿಯಾಗುವುದು ನನಗೇನೂ ಅಚ್ಚರಿ ತರದು.
(ಈ ಲೇಖನ ಮೊದಲು ಪ್ರಕಟವಾದುದು: http://www.resurgence.org)
ಅಭಯ ಅವರ ಪರಿಚಯ:
Click to access Bang_Profile.pdf
- ಕೇಶವ ಮಳಗಿ (ಖ್ಯಾತ ಕತೆಗಾರರು, ಲೇಖಕರು, ಕವಿಗಳು)
